ಅಂಕಣ

ಸರಿಗಮಪ – ಇದು ಸಂಗೀತಗಳ ಬೆಸೆಯುವ ಸಂಬಂಧ – ಅನುಬಂಧ

ಕಿರುತೆರೆ ಲೋಕದಲ್ಲಿ ಅತ್ಯಂತ ಮನರಂಜನಾ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ವೀಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿರುವ ಜೀ ಕನ್ನಡ ತುಂಬಾ ಜನಪ್ರಿಯ ವಾಹಿನಿಯಾಗಿ ಹೊರಹೊಮ್ಮಿದೆ. ಸಾಧಕರ ಪರಿಚಯಕ್ಕೆ ವೀಕೆಂಡ್  ವಿತ್ ರಮೇಶ್, ನೃತ್ಯಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ನಾಟಕ,ಅಭಿನಯಕ್ಕೆ ಡ್ರಾಮಾ ಜೂನಿಯರ್ಸ, ಹಾಸ್ಯ ಪ್ರತಿಭೆಗಳ ಅನಾವರಣಕ್ಕೆ ಕಾಮಿಡಿ ಕಿಲಾಡಿಗಳು ಮತ್ತು ಸಂಗೀತ,ಹಾಡುಗಾರಿಕೆಗೆ ಸರಿಗಮಪ, ಹೀಗೆ ಹತ್ತು ಹಲವಾರು ರಿಯಾಲಿಟಿ ಷೋಗಳ ಮೂಲಕ ಜೀ ವಾಹಿನಿಯು ಸಾರಸ್ವತ ಲೋಕದಲ್ಲಿ ಹೊಸ ಭಾಷ್ಯ ಬರೆದಿದೆ.

ಅದರಲ್ಲೂ ಸರಿಗಮಪ ಕಾರ್ಯಕ್ರಮವು ಇಂದು ಜನರ ಅತೀ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿದೆ. ಬರೀ ಕರ್ನಾಟಕ ಮಾತ್ರವಲ್ಲದೇ, ದೇಶ ವಿದೇಶಗಳಲ್ಲಿ ತನ್ನ ಹವಾ ಎಬ್ಬಿಸಿದೆ. ದೇಶದ ಮೂಲೆ ಮೂಲೆಗಳಿಂದ ಬರುವ ಸಂಗೀತ ಪ್ರತಿಭೆಗಳಿಗೆ ತಮ್ಮ ಕಲೆಯ ಅನಾವರಣ ಮಾಡಲು ಇದೊಂದು ಮುಕ್ತ  ವೇದಿಕೆಯಾಗಿದೆ. ಎಷ್ಟೋ ಎಲೆಮರೆಯ ಕಾಯಿಗಳಿಗೆ, ಈ ವೇದಿಕೆ ಸಮಾಜದ ಮುಖ್ಯ ಪುಟಕ್ಕೆ ತರುವಲ್ಲಿ ಯಶಸ್ವಿಯಾಗಿ 13 ಆವೃತ್ತಿಗಳನ್ನು ಪೂರೈಸಿದೆ.

ಪ್ರತಿ ವರ್ಷದಿಂದ ವರ್ಷಕ್ಕೆ ಸರಿಗಮಪ ವೇದಿಕೆಯು ನವ ನವೀನ ಪ್ರತಿಭೆಗಳನ್ನು ಹುಡುಕುತ್ತಾ,ಒಮ್ಮೆ ಕಿರಿಯರಿಗಾಗಿ (ಜ್ಯೂನಿಯರ್), ಹಿರಿಯರಿಗಾಗಿ (ಸೀನಿಯರ್)ಆವೃತ್ತಿಗಳನ್ನು ಆಯೋಜಿಸುತ್ತಾ ಎಲ್ಲ ರಾಜ್ಯದ ಪ್ರತಿಭೆಗಳಿಗೆ ಜೀ ಕನ್ನಡ ವಾಹಿನಿ ಈ ವೇದಿಕೆಯನ್ನು ಸಜ್ಜುಮಾಡಿಕೊಡುತ್ತಿದೆ. ಅದೇ ರೀತಿ ವೈಶಿಷ್ಟ್ಯಮಯ ಎಪಿಸೋಡ್’ಗಳ ರೂಪಿಸಿ ರಾಜ್ಯದ ಜನತೆಯ ಫೆವರೆಟ್ ಷೋ ಆಗಿ, ಕನ್ನಡ ಪ್ರಸಾರಾಂಗದ ನಂಬರ್ ಒನ್ ಕಾರ್ಯಕ್ರಮವಾಗಿ ಇಂದು ಸರಿಗಮಪ ಬೆಳೆದು ನಿಂತಿದೆ. ಪ್ರತಿ ಸೀಜನ್ ಇಂದ ಸೀಜನ್’ಗೆ ಹೊಸ ಹೊಸ ಮುಖಗಳನ್ನು ಪರಿಚಯಿಸುತ್ತಾ ಸಂಗೀತ ಕ್ಷೇತ್ರಕ್ಕೆ ಪ್ರತಿಭೆಗಳನ್ನು ನೀಡುತ್ತಿರುವುದಷ್ಟೇ ಅಲ್ಲದೇ ಅವರಿಗೆ ಒಂದು ಜೀವನದ ದಿಶೆ ನೀಡುವಲ್ಲಿ ಈ ಕಾರ್ಯಕ್ರಮ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಸರಿಗಮಪ ಸೀಜನ್-13ರ ಆವೃತ್ತಿಗಾಗಿ, ಜೀ ಕನ್ನಡ ವಾಹಿನಿಯು ಸಂಗೀತ ಪ್ರತಿಭೆಗಳನ್ನು ಹುಡುಕುತ್ತಾ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ನಾಲ್ಕೈದು ಜಿಲ್ಲಾ ಕೇಂದ್ರಗಳಲ್ಲಿ ಆಡಿಷನ್ ಮಾಡಿ, ಸಾವಿರಾರು ಸ್ಪರ್ಧಿಗಳ ನಡುವೆ ಪೈಪೋಟಿಯ ನಂತರ 30 ಪ್ರತಿಭಾನ್ವಿತ ಸ್ಪರ್ಧಿಗಳನ್ನು ಆಯ್ಕೆಮಾಡಿ, ಮೆಗಾಆಡಿಷನ್‍ಗೆ ಕರೆ ತರಲಾಗಿತ್ತು. ಅಲ್ಲಿ ಸರಿಗಮಪದ ತೀರ್ಪುಗಾರರ ಮುಂದೆ ತಮ್ಮ ಗಾಯನದ ಮೂಲಕ ಅವರ ಬ್ಲೈಂಡ್ ಫೋಲ್ಡ್ (ಕಣ್ಣ ಪಟ್ಟಿ)ನ್ನು ಬಿಚ್ಚಿಸುವುದರ ಮೂಲಕ, 17 ಜನ ಸ್ಪರ್ಧಿಗಳ ಆಯ್ಕೆ ಮಾಡಲಾಗಿ, ಅಲ್ಲಿಂದ ಶುರುವಾಯಿತು ಸಂಗೀತದ ಸುಗ್ಗಿ.

ಸರಿಗಮಪ ಸುಗ್ಗಿಗೆ ಅದ್ದೂರಿ ವೇದಿಕೆಯಲ್ಲಿ ಅಪಾರ ಜನಪ್ರಿಯತೆ ಮತ್ತು ಆಶಯಗಳೊಂದಿಗೆ ಮುನ್ನುಡಿ ಬರೆಯಿತು, 17 ಜನ ಸ್ಪರ್ಧಿಗಳು ಒಂದೊಂದು ಬಗೆಯ ಪ್ರಾವೀಣ್ಯತೆ, ವಿಶೇಷ ರೀತಿಯ ನೈಪುಣ್ಯ , ಅವರ ಹಾಡುಗಾರಿಕೆಯಂತೂ ಅಬ್ಬಬ್ಬಾ! ಕರ್ಣಾನಂದವಷ್ಟೆ ಅಲ್ಲ, ಹೃದಯವು ತುಂಬಿ ಬರುತ್ತದೆ. ಸರಿಗಮಪ ಎಂಬ ಪಾಠಶಾಲೆಯಲ್ಲಿ, ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್’ರಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಸರಿಗಮಪದ ಸ್ಪರ್ಧಿಗಳು ಅವರ ಸಂಗೀತ ಪ್ರಯಾಣ ಪ್ರಾರಂಭವಾಯಿತು, ದಿನದಿಂದ ದಿನಕ್ಕೆ ಅವರ ಹಾಡುಗಾರಿಕೆಯಲ್ಲಿ ಭಾವ,ರಾಗ,ತಾಳ,ಸ್ವರಗಳ ವಿಕಾಸ ಹೊಂದಿತ್ತಾ ಸಾಗಿತು. ಪ್ರಾರಂಭದ ದಿನಗಳಲ್ಲಿ ನಮಗೆ ಕಾಣ ಸಿಗುವ ಸಂಗೀತಗಾರ ಬರುಬರುತ್ತ ಸಂಗೀತದಲ್ಲಿ ಪ್ರಬುದ್ಧತೆಯನ್ನು ಸಾಧಿಸಿ ಮೇರು ಗಾಯಕರಾಗಿ ಹೊರಹೊಮ್ಮಿದ ಕ್ಷಣಗಳನ್ನು ನೋಡಿದಾಗ, ಆ ಪ್ರತಿಭೆಗಳ ಹಿಂದಿನ ಸತತ ಅಭ್ಯಾಸ ಮತ್ತು ಶ್ರಮ ಎದ್ದು ಕಾಣುತ್ತದೆ. ಒಟ್ಟಾರೆ ಮನೆಯಲ್ಲಿ ಕುಳಿತು ವೀಕ್ಷಸಿಸುವ ಸಂಗೀತದ ಮೈ  ಮನಸ್ಸುಗಳಿಗೆ ಪುಲ್ ಮೀಲ್ಸ್ ಸಿಕ್ಕಷ್ಟೇ ಖುಷಿ.

ಸರಿಗಮಪ ಸೀಜನ್-13 ಅಂತೂ ತುಂಬಾ ವಿಶೇಷವಾಗಿತ್ತು. ಪ್ರತೀ ಸ್ಪರ್ಧಾಳುಗಳ ಪ್ರತಿಭೆಗೆ ಅವರೇ ಸಾಟಿ. ಅವರ ಹಾಡುಗಾರಿಕೆಗೆ ಎಂಥವರೂ ಕೂಡಾ ತಲೆಬಾಗುತ್ತಿದ್ದರು, ಪ್ರಶಂಸೆ ಮಾಡುತ್ತಿದ್ದರು.

ಈ ಬಾರಿಯ ಆವೃತ್ತಿ ಯಲ್ಲಿ ಒಂದಿಷ್ಟು ಸ್ಪರ್ಧಿಗಳು ತಮ್ಮದೇ ಆದ ಛಾಪು ಮೂಡಿಸಿ ಮೋಡಿ ಮಾಡಿದ್ದಾರೆ. ಅವರ ಕಿರು ಝಲಕ್ ಇಲ್ಲಿದೆ.  

ಸಾಮಾನ್ಯವಾದ ಹಾಡನ್ನು, ವಿಶಿಷ್ಟ ರೀತಿಯಲ್ಲಿ,ವೆಸ್ಟರ್ನ್ ಮಾದರಿಯಲ್ಲಿ ಪ್ರಸ್ತುತ ಪಡಿಸಿ ಜನರ ಮನಸ್ಸಿನಲ್ಲಿ ಅಚ್ಚು ಮೂಡಿಸಿದ ಯುವ ಪ್ರತಿಭೆ ನಮ್ಮ ಸಂಚಿತ್ ಹೆಗ್ಡೆ, ಪ್ರತಿ ಬಾರಿಯೂ ತಾನು ಪ್ರಸ್ತುತ ಪಡಿಸುವಲ್ಲಿ, ತನ್ನನ್ನು ತಾನು  ಸಂಪೂರ್ಣವಾಗಿ ತೊಡಗಿಸಿಕೊಂಡು ಮೋಡಿ ಮಾಡುತ್ತಿದ್ದ ಸಂಚಿತ್, “ಮೈಕ್ ಟೈಸನ್” ಎಂದೇ ಖ್ಯಾತಿ ಪಡೆದು ಕೊಂಡಿದ್ದರು. ಸಂಗೀತ ಲೋಕಕ್ಕೆ ನವ ಕೊಡುಗೆ ಬಯಸಿದ ಈ ಪ್ರತಿಭೆ, ಈಗಾಗಲೇ ಕೆಲವೊಂದು ಚಲನಚಿತ್ರಕ್ಕೆ ಹಿನ್ನಲೆ ಧ್ವನಿಯನ್ನು ನೀಡಿ ಉದಯೋನ್ಮುಖರ ಸಾಲಿಗೆ ಸೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರದೇ ಆದ ಫ್ಯಾನ್ ಫಾಲೋವಿಂಗ್ ಇವರ ಪಾಲಿಗಿದೆ.

ಅದರಂತೆಯೇ, ಇವರೊಬ್ಬ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ,ನೋಡೋಕೆ ಥೇಟ್ ಸಿಂಗಂ ಚಿತ್ರದ ನಾಯಕ ನಟ, ಹಾಡಿಗೂ ಸೈ, ನಟನೆಗೂ ಸೈ, ಇವರು ಹಾಡು ಹಾಡಲು ಕೈಯಲ್ಲಿ ಮೈಕ್ ಹಿಡಿದ್ರೇ ಇವರ ಸಂಗೀತಕ್ಕೆ ಎಲ್ಲರೂ ಫಿದಾ, ಹೌದು, ಅವರೇ ನಮ್ಮ ಅಚ್ಚುಮೆಚ್ಚಿನ ಮೈಸೂರಿನ ಮಹಾರಾಜ ಶ್ರೀಹರ್ಷ. ಶ್ರೀಹರ್ಷ ಓರ್ವ ಪ್ರತಿಭಾವಂತ ಸಂಗೀತಗಾರ, ಪ್ರಸ್ತುತ ಮೈಸೂರಿನ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್ ಆಗಿರುವ ಇವರು ಸಂಗೀತದಲ್ಲಿ ಮೊದಲಿನಂದಲೂ ಆಸಕ್ತಿ ಉಳ್ಳವರಾಗಿದ್ದರು, ಸದ್ಯದ ಸೀಜನ್’ಗೆ ಶ್ರೀಹರ್ಷ ಭರವಸೆಯ ಹಾಡುಗಾರ ಮತ್ತು ಕಠಿಣ ಪ್ರತಿಸ್ಪರ್ಧಿಯಾಗಿದ್ದರು. ಇವರು ಕೂಡ ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ, ಅದೆಷ್ಟೋ ಜನರಿಗೆ ಇವರೆಂದರೇ ಎಲ್ಲಿಲ್ಲದ ಪ್ರೀತಿ, ವಿಶ್ವಾಸ. ಅದರಲ್ಲೂ ಹಲವಾರು  ವಿದ್ಯಾರ್ಥಿಗಳಿಗೆ ನಮಗೂ ಇಂತಹ ಪ್ರಾಧ್ಯಾಪಕರು ಸಿಗಲಿ ಎನ್ನುವ ಹಂಬಲವನ್ನು ತೋರ್ಪಡಿಸುತ್ತಿದ್ದಾರೆ.

ಇನ್ನು ನಮ್ಮ ಕನ್ನಡದ ಕಂಪನ್ನು ಪಸರಿಸಲು ಪಂಜಾಬಿನ ಚಂದನ್ ತುಂಬಾ ಕ್ರಿಯಾಶೀಲತೆಯಿಂದ ಭಾಗವಹಿಸಿದ್ದು ಇಲ್ಲಿ ನೆನೆಯಬಹುದು, ಈ ಸೀಜನಲ್ಲಿ ಒಂದಿಷ್ಟು ಸಂಚಿಕೆಗಳಲ್ಲಿ ಮಾತ್ರ ನಮ್ಮ ಚಂದನ್ ಭಾಗಿಯಾಗಿದ್ದರೂ ಅವರ ಕನ್ನಡ ಮೇಲಿನ ಪ್ರೀತಿ,ಅಭಿಮಾನ ಹೊಗಳಿಕೆಗೆ ಪಾತ್ರರು, ಭಾಷೆ ಬರದಿದ್ದರೂ, ತಮ್ಮ ಅಭ್ಯಾಸ ಬಲದಿಂದ, ಸಂಗೀತಕ್ಕೆ ಯಾವ ಭಾಷೆಯೂ ಇಲ್ಲ ಎಂಬಂತೆ ಅತೀ ಅಚ್ಚುಕಟ್ಟಾಗಿ ಪ್ರದರ್ಶನ ನೀಡಿ ಜನರ ಪ್ರೀತಿ ಗಳಿಸಿದ್ದರು.ಹಾಗೆಯೇ ಇನ್ನುಳಿದ ಪ್ರತಿಭಾವಂತ ಗಾಯಕರಾದ ಇಂಪನಾ, ಮೈತ್ರಿ ತಮ್ಮದೇ ಆದ ಶೈಲಿಯಲ್ಲಿ ಹಾಡಿ ಜನರನ್ನು ರಂಜಿಸಿದ್ದಾರೆ.

ಜೀ ಕನ್ನಡ ವಾಹಿನಿಯು ನಮ್ನನ್ನು ಗುರುತಿಸಿ ಇಲ್ಲಿ ಇಂತಹ ಅವಕಾಶ ನೀಡಿದ್ದಕ್ಕೆ ನಾನು ಆಭಾರಿ, ಇದೊಂದು ನನ್ನ ಸಂಗೀತದ ಪ್ರಯಾಣಕ್ಕೆ ಮೈಲಿಗಲ್ಲು, ಇದಕ್ಕಾಗಿ ನಿಮಗೆ ನನ್ನ ಅಭಿವಂದನೆಗಳು ಮತ್ತು ಜೀ ವಾಹಿನಿಗೆ ಸದಾ ಕೃತಜ್ಞ ಎಂದು ಹೇಳಿ ಸ್ಪರ್ಧಿಗಳು ಅಲ್ಲಿಂದ ಹೊರಡುವ ಮುನ್ನ ಈ ಅಂತರ್ಗತವನ್ನು ವ್ಯಕ್ತಪಡಿಸುವುದನ್ನು ಸೂಕ್ಷ್ಮವಾಗಿ ಗಮನಿಸಿದರೇ ಆ ವೇದಿಕೆಯ ಮಹತ್ವ ಎಷ್ಟು ದೊಡ್ಡದು ಎಂದು ತೋರುತ್ತದೆ.

ಮಿಂಚಿದ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಗಳು :

ನಮ್ಮ ಉತ್ತರ ಕರ್ನಾಟಕದ ಸಾಮಾನ್ಯ, ಗ್ರಾಮೀಣ ಪ್ರತಿಭೆಗಳು ಈ ಬಾರಿಯ ಸೀಜನಲ್ಲಿ ಗುಲ್ಲು ಎಬ್ಬಿಸಿದ್ದು ಅತ್ಯಂತ ಖುಷಿ ವಿಷಯ. ಪ್ರತೀ ಬಾರಿಯೂ ಈ ಭಾಗದ ಜನತೆಯು ಇಂತಹ ಕಾರ್ಯಕ್ರಮಗಳನ್ನು ಬರೀ ವೀಕ್ಷಿಸುತ್ತಿದ್ದರು, ಆದರೇ ಈ ಬಾರಿ ನಾವು ಕೂಡಾ ಯಾರಿಗಿಂತ ಕಮ್ಮಿ ಇಲ್ಲ ಎಂಬಂತೆ ನಮ್ಮ ಉತ್ತರ ಕರ್ನಾಟಕದ ಮೂರು ರತ್ನಗಳಾದ ಯಶು ಬಸಪ್ಪ, ಮೆಹಬೂಬ್ ಸಾಬ್ ಮತ್ತು ಸುನೀಲ್ ಗುಂಜಗುಂಡ, ತಮ್ಮ ಪ್ರತಿಭೆಯಿಂದ ಬಯಲುಸೀಮೆಯ ಕಂಪನ್ನು ಇಡೀ ರಾಜ್ಯವ್ಯಾಪಿ ಪಸರಿಸಿದ್ದಾರೆ.

ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ತಾಳಿಕೋಟಿಯ 46 ವರ್ಷದ ಹೆಮ್ಮೆಯ ರೈತ, ಗ್ರಾಮೀಣ ಪ್ರತಿಭೆ ಯಶು ಬಸಪ್ಪ ಅವರು ಓರ್ವ ಮಾದರಿ ವ್ಯಕ್ತಿ. ಈ ಪ್ರಗತಿ ಪರ ರೈತ ಯಶು ಬಸಪ್ಪರವರು, ಸಂಗೀತಕ್ಕೆ ಮನಸೋತು, ಯಾವ ಗುರುವಿಲ್ಲದೇ, ತಮ್ಮ ಬಿಡುವಿನ ಸಮಯದಲ್ಲಿ ರೇಡಿಯೋ, ಮೊಬೈಲ್ ವಾಹಿನಿಗಳ ಮೂಲಕ ಸಂಗೀತ ಕೇಳಿ, ಕಲಿತು, ಈ ಬಾರಿ ಸರಿಗಮಪ ಸೀಜನಲ್ಲಿ ಸ್ಪರ್ಧಿಸಿದ್ದು ತುಂಬಾ ಮನೋರಂಜನಾಕಾರಿ ಆಗಿತ್ತು. ತಮ್ಮ ಸಂಪಾದನೆಯಲ್ಲಿ ಕೂಡಿಟ್ಟ ಹಣದಲ್ಲಿ,ಸಾಲ ಸೂಲ ಮಾಡಿ, ತಮ್ಮ ಹತ್ತಿರದ ಸಂಬಂಧಿಕರಲ್ಲಿ ಹಣ ಪಡೆದು ಸರಿಗಮಪದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದೇನೆ ಎಂಬ ಮಾತುಗಳು ಅವರ ಬಾಯಿಂದ ಬಂದಾಗ ಎಲ್ಲರಲ್ಲೂ ಒಂದು ರೀತಿಯ ಮೌನ ಆವರಿಸಿತ್ತು. ಅಷ್ಟರಲ್ಲಿ ಕರ್ನಾಟಕಕ್ಕೆ ಅವರ ವ್ಯಕ್ತಿತ್ವದ ಪರಿಚಯವಾಗಿತ್ತು. ಯಶು ಬಸಪ್ಪನವರು, ಯಾವ ಸಂಗೀತ ಕಲಿತ ಸ್ಪರ್ಧಿಗಳಿಗಿಂತ ಏನು ಕಮ್ಮಿ ಇರಲಿಲ್ಲ, ತುಂಬಾ ಸೊಗಸಾಗಿ ಹಾಡುತ್ತಿದ್ದರು. ಅವರ ಹಾಡುಗಾರಿಕೆ, ನಟನೆ,ಭಾವ ಮನದಲ್ಲಿ ಮೂಡುವಂತೆ ಮಾಡುತ್ತಿತ್ತು. ಅವರ ಈ ಛಲದ ಹಿಂದೆ ಅವರ ಮಡದಿ ಮತ್ತು ಮುದ್ದು ಮಕ್ಕಳು ಆಧಾರವಾಗಿದ್ದರು. ಇವರು ಗದಗಿನ ಪಂಚಾಕ್ಷರಿ ಗವಾಯಿಗಳ ಸಂಗೀತ ಪರಂಪರೆಯ ಶಿಷ್ಯಂದಿರು, ಸಂಗೀತಕ್ಕೆ ದಾಸರಾಗಿ, ಕಡು ಬಡತನದಲ್ಲಿಯೂ, ಸತತ ಪರಿಶ್ರಮದಿಂದ, ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಛಲದಂಕರರು ಈ  ಗ್ರಾಮೀಣ ಪ್ರತಿಭೆಗಳು. ಅದರಲ್ಲಂತೂ ಓರ್ವ ಅಂಧ. ಜಗತ್ತನ್ನೇ ಕತ್ತಲಾಗಿ ಕಾಣುವ ಇವರು ತಮ್ಮ ಸಂಗೀತದಿಂದ ಎಷ್ಟೋ ಜನರ ಬಾಳಲ್ಲಿ ಬೆಳಕು ಚೆಲ್ಲಿರುವ ಗಾಯಕ. ಸದಾ ನೊಸಲಿಗೆ ವಿಭೂತಿ ಧರಿಸಿ, ಜಾತಿ – ಮತಗಳನ್ನು ಲೆಕ್ಕಿಸದೇ, ಸದಾ ವಿನಮ್ರವಾಗಿ ವರ್ತಿಸುವ ಸೌಜನ್ಯಶೀಲ ವ್ಯಕ್ತಿ ನಮ್ಮ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ಕುಂದಗೋಳದ ಮೆಹಬೂಬ್ ಸಾಬ್. ಇವರು ಸರಿಗಮಪದ ಅತ್ಯಂತ ಹೆಮ್ಮೆಯ ಸ್ಪರ್ಧಿ, ತಮ್ಮ ಗಾನದ ಮುಖೇನ, ಅದರಲ್ಲೂ ತಮಗಿರುವ ನ್ಯುನ್ಯತೆಯನ್ನೂ ಮರೆತು ಸಂಗೀತಕ್ಕೆ ಮನ ಸೋತು, ಎಲ್ಲ ನಮ್ಮ ಗುರುಗಳ ಆಶಿರ್ವಾದ ಎಂದು ಹೇಳುತ್ತಾ ಅವರ ವಿನಯತೆಯಿಂದ ಈ ಪ್ರತಿಭೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.

ಇವನೊಬ್ಬ ರಾಕಿಂಗ್ ಸ್ಟಾರ್, ಯುವ ಪ್ರತಿಭಾನ್ವಿತ, ಮಗ್ದ ಮಾತುಗಳಿಂದ “ಸತ್ಯವಾನ್ ಸಾವಿತ್ರಪ್ಪ” ಎಂಬ ಹೆಸರಿನಿಂದ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಗಾಯಕ. ಇವನೇನು ಒಂದಿಷ್ಟು ಸಂಚಿಕೆಗಳಲ್ಲಿ ಭಾಗವಹಿಸಿ ಎಲಿಮೆನೇಟ್ ಆಗುತ್ತಾನೆ ಎಂಬುದು ಅಧಿಕರ ಊಹೆ ಆಗಿತ್ತು. ಆದರೇ ಅದು ಅವರ ಊಹೆ, ಊಹೆಯಾಗಿ ಉಳಿಯಿತು. ಎಲ್ಲರೂ ನಿಬ್ಬೆರಗಾಗುವಂತೆ ಮಾಡಿ ಫಿನಾಲೆ ಹಂತ ತಲುಪಿದ ನಮ್ಮ ಕಲಬುರಗಿ ಜಿಲ್ಲೆಯ ಜೇವರ್ಗಿಯ ಭೀಮಾ ತೀರದ ಹೈದ ಸುನೀಲ್ ಗುಜಗುಂಡ. ಹೌದು, ಸುನೀಲ್ ಈಗ ತುಂಬಾ ಬದಲಾಗಿದ್ದಾನೆ, ಈ ಬದಲಾವಣೆಗಳು ತಕ್ಷಣಕ್ಕೆ ಬಂದಿರುವುದಲ್ಲ, ಇದರ ಹಿಂದೆ ಅವನ ಅವಿರತ ಶ್ರಮ ಮತ್ತು ಶ್ರದ್ಧೆ ಇದೆ. ವೇದಿಕೆಯ ಮೇಲೆ ಹಾಡನ್ನು ಕಲಿತು, ಹಾಡಿ ಪ್ರಸ್ತುತ ಪಡಿಸುವಲ್ಲಿ ಸುನೀಲ್ ನಿಸ್ಸೀಮ, ಹೀಗೆ ದಿನದಿಂದ ದಿನಕ್ಕೆ ಪ್ರಬುದ್ಧತೆಯ ಹಿಡಿತ ಸಾಧಿಸಿ  ಇಂದು ಅಪಾರ ಜನಪ್ರಿಯತೆ ಗಳಿಸಿದ್ದಾನೆ. ಕೊಪ್ಪಳದಲ್ಲಿ ನಡೆದ ಸರಿಗಮಪ ಕಾರ್ಯಕ್ರಮವನ್ನು ಒಮ್ಮೆ ನೋಡಿದರೆ ನಮಗೆ ಅರ್ಥವಾಗುತ್ತದೆ. ಇಂದು ನಮ್ಮ  ಪ್ರತಿಭೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿರುವದನ್ನು ನೋಡಿದರೆ ನಮಗೆ ಅತೀವ ಹೆಮ್ಮ ಮತ್ತು ಸಂತಸವಾಗುತ್ತದೆ.

ಸರಿಗಮಪದ ದಿಟ್ಟ ಯುವತಿ – ಸುಹಾನ ಸಯ್ಯದ್ :

ಸರಿಗಮಪ ಸೀಜನ್-13ರ ಮೆಗಾ ಆಡಿಷನ್ ನಡೆಯುತ್ತಿತ್ತು. ಸ್ಪರ್ಧಿ ಸಂಖ್ಯೆ 21 ಎಂದು ನಿರೂಪಕಿ ಅನುಶ್ರೀ ಕರೆದಾಕ್ಷಣ, ಒಂದು ಸುಂದರ ಕಂಠದಿಂದ ಶ್ರೀಕಾರನೇ, ಶ್ರೀನಿವಾಸನೇ ಎಂಬ ಒಂದು ಅದ್ಭುತ ಗೀತೆ ಹೊರಹೊಮ್ಮತ್ತಲೇ, ತೀರ್ಪುಗಾರರು ಆ ಇಂಪಾದ ಧ್ವನಿಗೆ ತಲೆಬಾಗಿ, ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ತೆರದು, ಹಸಿರು ಬಝರ್ ಒತ್ತಿ, ನೀವು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದೀರಿ ಎಂದು ಹೇಳುವಷ್ಟರಲ್ಲಿ, ಅವರಿಗೆ ಅಲ್ಲಿ ಕಾದಿದ್ದು ಒಂದು ಅಚ್ಚರಿ. ಕಪ್ಪು ಬುರ್ಖಾ ಧರಿಸಿ, ತಲೆಗೆ ಒಂದು ಸ್ಕಾರ್ಫ್ ಹಾಕಿಕೊಂಡು, ಸುಂದರ ಮೊಗದ ಯುವತಿಯೋರ್ವಳು ಈ ಹಿಂದೂ ಭಕ್ತಿಗೀತೆಯನ್ನು ಹಾಡುವುದರಲ್ಲಿ ತಲ್ಲೀನಳಾಗಿದ್ದಳು, ನಂತರ ವಿಚಾರಿಸಿದರೆ ಬೆಳಕಿಗೆ ಬಂದದ್ದು ಅವಳು ಮುಸ್ಲಿಂ ಸಮುದಾಯದ ಯುವತಿ ಸಾಗರದ ಸುಹಾನ ಸಯ್ಯದ್.

ಸುಂದರ ಹಾಡುಗಾರಿಕೆ ಮತ್ತು ಅವಳ ನಿಜವಾದ ಪ್ರತಿಭೆಯ ನೆರವಿನಿಂದ ಸರಿಗಮಪ ಸೀಜನ್-13ಕ್ಕೆ ಆಯ್ಕೆಯಾಗಿ ಖುಷಿ ಪಟ್ಟು ಹೊರಬಂದಾಗ ಅವಳಿಗೆ ವ್ಯಾಪಕ ಟೀಕೆ ಎಡೆಮಾಡಿಕೊಟ್ಟಿತು. ಅವಳು ಹಾಡಿದ ಹಾಡು ಕೆಲವೊಂದಿಷ್ಟು ಮುಸ್ಲಿಂ ಬಾಂಧವರ ಕೆಂಗಣ್ಣಿಗೆ ಗುರಿಯಾಗಿತ್ತು. ಅದರಲ್ಲೂ ಒಂದಿಷ್ಟು ತಂಟೆಕೋರರು, ಸಂಗೀತದ ಲವ ಲೇಷವು ಅರಿಯದ ಜನರು ಅವರ ವೈಯಕ್ತಿಕ ಭಾವನೆಗಳಿಗೆ ಸುಹಾನ ಎಂಬ ಬಣ್ಣ ಹಚ್ಚಿ ಪುಂಡಾಟಿಕೆ ಮೆರೆದು ಅಧಿಕ ಪ್ರಸಂಗತನ ಮಾಡಿದ್ದರು. ಎಲ್ಲ ಪತ್ರಿಕಾ ಮತ್ತು ದೃಶ್ಯ ಮಾದ್ಯಮಗಳಲ್ಲಿ ಈ ಕುರಿತಂತೆ ಪರ – ವಿರೋಧದ ಚರ್ಚೆಗಳು ಆಗಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ #IamWithSuhana ಎಂಬ ಹ್ಯಾಷ್ ಟ್ಯಾಗ್ ಮಾಡುವ ಮೂಲಕ ಸುಹಾನಳಿಗೆ ಅಪಾರ ಬೆಂಬಲ ಸೂಚಿಸಿತ್ತು. ಎಲ್ಲ ಧರ್ಮದ ಧುರೀಣರು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಸಂಸ್ಥೆಗಳು ಸುಹಾನಳ ಬೆಂಬಲಕ್ಕೆ ನಿಂತು ನೀವು ಮುಂದೆ ಹೋಗಿ ಎಂಬ ಸಂದೇಶ ರವಾನೆ ಮಾಡಿದ್ದವು. ಒಟ್ಟಾರೇ, ಈ ವಿಷಯ ಇಡೀ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಇಷ್ಟೆಲ್ಲಾ ಆದರೂ ಆ ಧೀರ ಯುವತಿ ಎದೆ ಗುಂದಲಿಲ್ಲ. ಮುಂದಿನ ಸಂಚಿಕೆಯಲ್ಲಿ “ನೀನೆ ರಾಮ, ನೀನೇ ಶ್ಯಾಮ, ನೀನೇ ಅಲ್ಲಾ, ನೀನೇ ಏಸು” ಎಂಬ ಒಂದು ಸುಂದರ ಹಾಡನ್ನು ಹಾಡಿ ಅದೇ ವೇದಿಕೆಯಲ್ಲಿ ಎಲ್ಲರ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ನೀಡಿದಳು. ಸಂಗೀತಕ್ಕೆ ಯಾವುದೇ ಧರ್ಮವಿಲ್ಲ ಎಂಬುವುದು ಅವಳ ನಿಲುವಾಗಿತ್ತು, ಇಡೀ ಸಂಗೀತ ಸಮುದಾಯವೇ ಇವಳಿಗೆ ಬೆನ್ನಲುಬಾಗಿ ನಿಂತಿತ್ತು.ಆ ಸಮಯದಲ್ಲಿ ವೇದಿಕೆಯ ಮೇಲಿನಿಂದ ಸುಹಾನಳ ಅಂತರಾಳದಿಂದ ಬಂದ ಆ ಮಾತುಗಳು ತುಂಬಾ ಅರ್ಥಪೂರ್ಣವಾಗಿದ್ದವು, ನನ್ನನ್ನು ಒಬ್ಬ ಸಂಗೀತಗಾರಳಾಗಿ ನೋಡಿ, ನನ್ನನ್ನು ಒಬ್ಬ ಭಾರತೀಯಳಾಗಿ ನೋಡಿ, ನನ್ನನ್ನು ಒಬ್ಬ ಮನುಷ್ಯಳಾಗಿ ನೋಡಿ ಎಂದು ಗದ್ಗದಿತ ಧ್ವನಿಯಲ್ಲಿ ಹೇಳಿದಾಗ ಮನಸ್ಸಿನಲ್ಲಿ ಸುಹಾನಳ ಕುರಿತು ಅತ್ಯಂತ ಪೂಜ್ಯನೀಯ ಭಾವ ಬರುವುದಂತೂ ಸತ್ಯ. ಹೆಣ್ಣು ಅಂತ ಇದ್ದರೇ ಹೀಗೆ ಇರಬೇಕು, ಯಾವುದಕ್ಕೂ ಅಂಜದೇ,ಅಳುಕದೇ ನಮ್ಮ ಗುರಿಸಾಧನೆಗೆ ಮಹತ್ವ ನೀಡಬೇಕು ಎಂಬುವುದು ಅವಳ ಮಾತಿನ ತಾತ್ಪರ್ಯವಾಗಿತ್ತು.

ಅದ್ಭುತ ತೀರ್ಪುಗಾರಿಕೆ :

ಸರಿಗಮಪ ಕಾರ್ಯಕ್ರಮಕ್ಕೆ ಒಂದು ಮೆರಗು ಮತ್ತು ಕಾರ್ಯಕ್ರಮದ ಕಣ್ಮಣಿಗಳೆಂದರೇ, ಆ ತ್ರಿವಳಿ ತೀರ್ಪುಗಾರರು, ನಮ್ಮ ನಾಡು ಕಂಡಂತಹ ಹೆಮ್ಮೆಯ ಸಂಗೀತ ದಿಗ್ಗಜರಾದ ಜೈ ಹೋ ಖ್ಯಾತಿಯ ಗಾಯಕ, ಎನರ್ಜಿ ಬೂಸ್ಟರ್ ಶ್ರೀ. ವಿಜಯ ಪ್ರಕಾಶ್, ಮ್ಯಾಜಿಕಲ್ ಕಂಪೋಸರ್, ಸಂಗೀತ ನಿರ್ದೇಶಕ, ಕರ್ನಾಟಕದ ಪ್ರೀತಿಯ ಡಾರ್ಲಿಂಗ್ ಶ್ರೀ. ಅರ್ಜುನ್ ಜನ್ಯ ಮತ್ತು ಕನ್ನಡ ನಾಡಿನ ಹಿರಿಯ ಹಿನ್ನಲೆ ಗಾಯಕ, ಸುಮಧುರ ಕಂಠದ ಮಹಾಗುರು ಶ್ರೀ. ರಾಜೇಶ್ ಕೃಷ್ಣನ್ ರವರು ಸ್ಪರ್ಧಿಗಳಿಗೆ ನೀಡುವ ತೀರ್ಪು ಅನ್ನೋದಕ್ಕಿಂತ ಸಲಹೆ ಕೇಳಲೇ ಒಂದು ರೀತಿಯ ಮುದವನ್ನು ನೀಡುತ್ತದೆ. ಅವರು ನೀಡುವ ಸಣ್ಣಪುಟ್ಟ ಸೂಚನೆಗಳು ಸಂಗೀತಗಾರನಲ್ಲಿ ಬಹು ದೊಡ್ಡ ವ್ಯತ್ಯಾಸವನ್ನು ಹೊರತರುತ್ತವೆ. ಅದರಲ್ಲೂ ವಿಜಯ ಪ್ರಕಾಶ್ ಅವರು ಸ್ಪರ್ಧಿಗಳನ್ನು ಹುರಿದುಂಬಿಸುವ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಶೈಲಿಯಂತೂ ಗಾಯಕನ ಮನಕ್ಕೆ ಒಂದು ನವ ಭಾವವನ್ನು ಹರಿಸುತ್ತದೆ. ಅವರು ಆಗಾಗ ಓ,,,ಓಹೋ,,,ವಾವ್,,, ಎಂದು ಉದ್ಗರಿಸುವ ಪದಗಳು ಮತ್ತು ಮದ್ಯದಲ್ಲಿ ಪಂಚಿಂಗ್ ಡೈಲಾಗ್’ಗಳು,ಸಂಗೀತದ ಸಾಲುಗಳು ಇನ್ನೂ ಹೆಚ್ಚಿನ ಖುಷಿಯನ್ನು ನೀಡುತ್ತದೆ.

ಇವರಷ್ಟೇ ಅಲ್ಲದೇ, ಇವರ ಜೊತೆ ಜೊತೆಗೆ ಈ ರಾಜ್ಯ  ಕಂಡಂತಹ ಹಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಸೇರಿದಂತೆ 15 ಜನ ದಿಗ್ಗಜರ “ಜ್ಯೂರಿ” ತೀರ್ಪುಗಾರಿಕೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಸ್ಪರ್ಧಿಗಳಿಗೆ ಈ ಜ್ಯೂರಿ ಸದಸ್ಯರಿಂದ 100ಕ್ಕೆ 100 ಅಂಕ ಪಡೆಯಲು ಹಾತೊರೆಯುತ್ತಿದ್ದರು ಮತ್ತು ಅಷ್ಟು ಅಂಕ ಪಡೆದರೆ ಅವರಿಗೆ ಎಲ್ಲಿಲ್ಲದ ಆನಂದ. ಜ್ಯೂರಿ ಸದಸ್ಯರು ನೀಡುವ ಅಂಕಗಳು ತುಂಬಾ ಅವಶ್ಯಕ ಮತ್ತು ಮಾನ್ಯತೆಗೆ ಬರುತ್ತಿದ್ದವು. ಇವುಗಳು ಆಧಾರದ ಮೇಲೆ ಸ್ಪರ್ಧಿಯ ಮುಂದಿನ ಹಂತ ನಿರ್ಧಾರವಾಗುತ್ತಿತ್ತು.

ಈ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕಿ ಅನುಶ್ರೀಯವರ ಆ ಚಂದದ ನಿರೂಪಣೆಯು ಅತ್ಯಂತ ಅದ್ಭುತವಾಗಿ ಮೂಡಿಬರುತ್ತಿದೆ. ಆಗಾಗ ಅನುಶ್ರೀ ಮತ್ತು ಅರ್ಜುನ್ ಜನ್ಯರ ಲವ್ ಜುಗಲ್’ಬಂದಿ ಅಂತೂ ವೀಕ್ಷಕನಿಗೆ ಮಜಾ ನೀಡೋದರಲ್ಲಿ ಎರಡು ಮಾತಿಲ್ಲ.

ಮೊಟ್ಟಮೊದಲ ಬಾರಿಗೆ ಲೈವಲ್ಲಿ ಪ್ರಸಾರವಾದ ಸರಿಗಮಪ ಫಿನಾಲೆ :

ಮೊಟ್ಟ ಮೊದಲ ಬಾರಿಗೆ ಈ ಬಾರಿಯ ಸೀಜನ್-13ವು 7 ಕೋಟಿ ಕನ್ನಡಿಗರ ಮುಂದೆ ಲೈವಲ್ಲಿ ಪ್ರಸಾರ ಮಾಡಿರುವುದು ಅತ್ಯಂತ  ವಿಶೇಷವಾಗಿತ್ತು. ಮೈಸೂರಿನ ಶ್ರೀಹರ್ಷ, ಉಡುಪಿಯ ಕು.ದೀಕ್ಷಾ ರಾಮಕೃಷ್ಣ, ಧಾರವಾಡದ ಮೆಹಬೂಬ್ ಸಾಬ್, ಮಂಡ್ಯದ ಧನುಷ್, ಬೆಂಗಳೂರಿನ ಅರವಿಂದ್ ಮತ್ತು ಜೇವರ್ಗಿಯ ಸುನೀಲ್ ಗುಜಗುಂಡ ಸೇರಿದಂತೆ 6 ಜನ ಟಾಪ್ ಸ್ಪರ್ಧಿಗಳು ಫಿನಾಲೆಗೆ ಆಯ್ಕೆಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾದಬ್ರಹ್ಮ ಹಂಸಲೇಖ ಅವರು ಆಗಮಿಸಿದ್ದರು.ಫಿನಾಲೆಯು ಎರಡು ಹಂತದಲ್ಲಿ ಪ್ರದರ್ಶನಗೊಂಡಿತು, ಎಲ್ಲ ಸ್ಪರ್ಧಿಗಳು ಅತ್ಯಂತ ಒಳ್ಳೆಯ ರೀತಿಯಲ್ಲಿ ತಮ್ಮ ವಿದ್ವತ್ತ ಪ್ರದರ್ಶನ ಮಾಡಿದರು. ಈ ಬಾರಿ ವಿಜೇತನನ್ನು ಆಯ್ಕೆಮಾಡುವ ಸಂಪೂರ್ಣ ಅಧಿಕಾರವನ್ನು ವೀಕ್ಷಕರಿಗೆ ನೀಡಿದ್ದು ವಿಶೇಷವಾಗಿತ್ತು. ಜನತಾ ಜನಾರ್ದನರ ತೀರ್ಪಿಗೆ ತಲೆಬಾಗಿದ ಜೀ ಕನ್ನಡ ವಾಹಿನಿಯು ವಿಜೇತರನ್ನು ಘೋಷಣೆ ಮಾಡಿತು. ಪ್ರಥಮ ವಿಜೇತರಾಗಿ ಸುನೀಲ್ ಗುಜಗುಂಡ, 5 ಲಕ್ಷ ರೂ ನಗದು ಮತ್ತು ಬಹುಮಾನ ಪಡೆದುಕೊಂಡರು. ಹಾಗೆಯೇ ದ್ವಿತೀಯ ವಿಜೇತರಾಗಿ ಮೆಹಬೂಬ್ ಸಾಬ್, 3 ಲಕ್ಷ ರೂ ನಗದು ಮತ್ತು ಬಹುಮಾನ. ಇದನ್ನು ಮುಗುಳು ನಗೆ ಚಿತ್ರ ತಂಡವು ನೀಡಿತು. ತೃತೀಯ ವಿಜೇತರಾಗಿ ಶ್ರೀ ಹರ್ಷಗೆ 1 ಲಕ್ಷ ರೂ ನಗದು ಮತ್ತು ನಾಲ್ಕನೆ ವಿಜೇತರಾಗಿ ಧನುಷ್ ಅವರು ಹೊರಹೊಮ್ಮಿದರು.

ತೀರ್ಪಿನ ವಿರುದ್ದ ತಿರುಗಿ ಬಿದ್ದ ಜನ :

ಸರಿಗಮಪ ಸೀಜನ್-13ರ ಅಂತಿಮ ತೀರ್ಪು ಹಲವರಿಗೆ ಅರಗಿಸಿಕೊಳ್ಳದ ತುತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಸುಮಾರು ಜನ ಅಪಸ್ವರ ಎತ್ತಿದ್ದಾರೆ, ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಆಗಿರೋದು ಜನತೆಯ ಓಟಿಂಗ್ ಆಧಾರದ ಮೇಲೆಯೇ ಎಂಬುದು ನಾವು ಇಲ್ಲಿ ಅರಿಯಬೇಕಾಗಿದೆ. ಈ ಫಲಿತಾಂಶದ ಬಗ್ಗೆ ಹಲವರಲ್ಲಿ ಬೇಸರವಿದೆ. ಒಬ್ಬ ಪ್ರತಿಭಾವಂತ ಹಲವು ಕಾರಣಳಿಂದ ವಿಫಲನಾಗುತ್ತಾನೆ. ದಕ್ಷಿಣ ಆಫ್ರಿಕಾ ಕ್ರಿಕೇಟ್ ತಂಡದ ಉದಾಹರಣೆ ತೆಗೆದುಕೊಂಡರೆ ಎಷ್ಟೋ ಸಲ ಆಫ್ರಿಕಾ ಮಿಕ್ಕೆಲ್ಲಾ ತಂಡಗಳಿಗಿಂತ ಬಲಿಷ್ಟವಾಗಿದ್ದರೂ, ಯಾವ ಸಮಯಕ್ಕೆ ಅವರ ನೈಜ ಪ್ರತಿಭೆ ಪ್ರಕಟವಾಗಬೇಕಿತ್ತು, ಆ ಸಮಯದಲ್ಲಿ ದುರ್ಬಲ ಆಟವಾಡಿ ಹಲವಾರು ಟ್ರೋಫಿಗಳಿಂದ ವಂಚಿತವಾಗಿದೆ, ಅದೇ ರೀತಿ ಇನ್ನೊಂದು ಉದಾಹರಣೆ ಕೊಡಬೇಕೆಂದರೆ ಓಟಿಂಗ್ ದಿನದಂದು ಓಟ್ ಮಾಡದೆ ಇವನು ಆಡಳಿತ ಸರಿ ಮಾಡಲಿಲ್ಲಾ, ಅವನು ಸರಿಯಲ್ಲ ಎಂದು ದೂರಿದ ರೀತಿಯಲ್ಲಿ ಈಗ ದೂರಲು ಶುರು ಮಾಡಿದ್ದಾರೆ. ಈ ಫಲಿತಾಂಶ ಅನುಕಂಪದ ಆಧಾರದ ಫಲವಲ್ಲ ಅನುಕಂಪ ಅಂತ ತೆಗೆದುಕೊಂಡಿದ್ದರೆ ಮೆಹಬೂಬಸಾಬ ಪ್ರಥಮ ವಿಜೇತನಾಗಬೇಕಿತ್ತು. ಈ ಬಾರಿ ಎಲ್ಲ ಘಟಿಸಿದ್ದು ಪೂರ್ಣ ಓಟಿಂಗ್ ಆಧಾರದ ಮೇಲೆಯೇ.

ಈ ಹಿಂದೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಷೋನಲ್ಲಿ ಮಯೂರಿಯವರು ಹೇಳಿದ್ದು ಇದನ್ನೇ ಜಡ್ಜಗಳಿಗೆ ಹೆಚ್ಚಿನ ಹಕ್ಕು ಕೊಡಬೇಕು ಅಂತ. ಓಟಿಂಗ್ ಅಳವಡಿಕೆಗೂ ಅದರದ್ದೇ ಆದ ಕಾರಣಗಳವೆ. ಪ್ರತಿಯೋರ್ವ ಸ್ಪರ್ಧಿಗೂ ತನ್ನದೇ ಆದ ಅಭಿಮಾನಿ ಮತ್ತು ಪ್ರೇಕ್ಷಕರ ವರ್ಗ ಇರತ್ತೆ. ವೀಕ್ಷಕರ ಅಭಿಪ್ರಾಯ ಮಂಡನೆಯ ಮೇರೆಗೆ ತೀರ್ಪು ನಿರ್ಧಾರವಾಗಲಿ ಎಂಬುವದು ಇದರ ಉದ್ದೇಶ. ಓಟಿಂಗ್ ಪದ್ಧತಿಯ ನ್ಯೂನತೆ ಏನೆಂದರೇ ಮೊದಲನೆಯದ್ದು ಓಟ್ ಮಾಡುವವನಿಗೆ ಸಂಗೀತ ಬಗೆಗೆ ಪೂರ್ಣ ಜ್ಞಾನವಿರುವುದಿಲ್ಲ ಎರಡನೇಯದು ಸ್ಪರ್ಧಿಯು ಗಳಿಸಿದ ಓಟ್‍ಗಳನ್ನು ಜನರಿಗೆ ತೋರಿಸುವುದಿಲ್ಲ. ಸ್ಪರ್ಧಿಯು ಎಷ್ಟೇ ಪ್ರತಿಭಾವಂತ ಮತ್ತು  ಪ್ರಾಮಾಣಿಕವಾಗಿದ್ದರೂ ಜನತೆಯು ಪಾರದರ್ಶಕತೆಯನ್ನು ನಿರೀಕ್ಷಿಸಿತ್ತಾರೆ. ಪ್ರತಿಬಾರಿಯು ರಿಯಾಲಿಟಿ ಷೋ ಮುಗಿದಾಗ ಇಂತಹ ಪರ ವಿರೋಧದ ಚರ್ಚೆಗಳು ಇದ್ದದ್ದೇ. ಬಿಗ್‍ಬಾಸ್ ಷೋನಲ್ಲಿ ಅರುಣ ಸಾಗರ್, ಸೃಜನ್ ಲೋಕೇಶ್, ಮಾಸ್ಟರ್ ಆನಂದ, ಕಿರಿಕ್ ಕೀರ್ತಿ ಗೆಲ್ಲಲಿಲ್ಲ. ಗೆದ್ದ ವಿಜಯ ರಾಘವೇಂದ್ರ, ಅಕುಲ್ ಬಾಲಾಜಿ, ಶೃತಿ, ಪ್ರಥಮ್ ಕೂಡಾ ಸಾಮಾನ್ಯರೇನಲ್ಲ. ಇವತ್ತಿಗು ಅಕುಲ್ ಪರವಾಗಿ ಬಂದ ಫಲಿತಾಂಶ ಇದೊಂದು ಫಿಕ್ಸಿಂಗ್ ಎಂದು ಬಿಂಬಿತವಾಗುತ್ತದೆ. ಕಾರಣ ಸೃಜನ ಲೊಕೇಶ್ ಆ ರೀತಿಯಾಗಿ ಜನರಲ್ಲಿ ಹಾಸು ಹೊಕ್ಕಾಗಿದ್ದರು. ಹಾಗೇಯೆ ತಾವು ಅಂದುಕೊಂಡವರು ಗೆಲ್ಲಲಿಲ್ಲ ಎಂದಾಗ ಜನರು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ನಾದಬ್ರಹ್ಮ ಹಂಸಲೇಖ ಇನ್ನಿತರ ತೀರ್ಪೂಗಾರರು ಮತ್ತು ಜೀ ವಾಹಿನಿಯನ್ನು ನಿಂದಿಸಿವುದು ಸೂಕ್ತವಲ್ಲ, ಹಂಸಲೇಖ ಅವರಂತೂ ಫಲಿತಾಂಶ ಪ್ರಕಟ ಮಾಡಿದ್ದಾರಷ್ಡೇ, ಅವರನ್ನು ಬೈದರೆ ನೋಟಿಸಿಗೆ ಸಹಿಮಾಡಿದ ಪ್ರಿನ್ಸಿಪಾಲರನ್ನು ಬಿಟ್ಟು ಬೋರ್ಡಿಗೆ ಲಗತ್ತಿಸಿದ ಪ್ಯೂನಿಗೆ ಜೋರು ಮಾಡಿದಂತೆ. ಇಲ್ಲಿ ಪ್ರಿನ್ಸಿಪಾಲರು ನಾವುಗಳೇ, ಕನ್ನಡದ ಕಟ್ಟಾಳುಗಳು. ಬೇರೆಯವರಿಗೆ ಬೈಯ್ಯುವ ಬದಲು ಒಂದಿಷ್ಟು ಉದಾರವಾಗಿ ನಿಮ್ಮ ಇಷ್ಟದ ಸ್ಪರ್ಧಿಗೆ ಓಟ್ ಮಾಡಿದ್ದರೆ ಅವರೇ ವಿಜಯಶಾಲಿಗಳಾಗಿತ್ತಿದ್ದರು.

ಒಟ್ಟಾರೆ, ಈ ಬಾರಿಯ ಸರಿಗಮಪ ಕಾರ್ಯಕ್ರಮವು ತುಂಬಾ ವಿಜೃಂಭಣೆಯಿಂದ ಮೂಡಿಬಂದಿದ್ದು. ಎಲ್ಲರ ಮನಮನಗಳಲ್ಲಿ ಅಚ್ಚಳಿಯದೇ ಉಳಿದಿದೆ ಎಂಬುದು ಒಂದೆಡೆ ಆದರೆ ಈ ಸೀಜನ್ ಮುಗಿಯಿತು ಎಂಬ ಬೇಸರ ಇನ್ನೊಂದು ಕಡೆ. ತುಂಬಾ ಜನ ಈ ಕಾರ್ಯಕ್ರಮವನ್ನು ಮಿಸ್ಸ್ ಮಾಡ್ಕೋಳ್ಳೊದು ಗ್ಯಾರಂಟಿ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಇನ್ನೂ ಎತ್ತರಕ್ಕೆ ಬೆಳೆದು ಸಂಗೀತ ಲೋಕಕ್ಕೆ ಹೊಸ ಹೊಸ ಪ್ರತಿಭೆಗಳನ್ನು ನೀಡುವ ಜೀ ಕನ್ನಡದ ಪ್ರಯಾಣ ಹೀಗೆಯೇ ಮುಂದುವರೆಯಲಿ ಎಂಬುವುದು ನಮ್ಮ ಶುಭ ಆಶಯ.

ಗಿರೀಶ ವಿ.  ಬಡಿಗೇರ

ಬೆಳಗಾವಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!