Featured ಅಂಕಣ

ಬಾಂಬ್, ಕ್ಷಿಪಣಿಗಳ ಯುಗದಲ್ಲಿ ಭಾರತದಲ್ಲೊಂದು “ಬುಲೆಟ್ ಟ್ರೈನ್” -1 : “ಬುಲೆಟ್” ಎಂಬ ಪ್ರಗತಿಯ ಪಟರಿ (Track)

ವಿಶ್ವದ ಬಹುತೇಕ ರಾಷ್ಟ್ರಗಳು, ಪ್ರದೇಶಗಳು ಒಂದಿಲ್ಲೊಂದು ಕಾರಣದಿಂದ ಬುಲೆಟ್, ಬಾಂಬ್, ಕ್ಷಿಪಣಿಗಳನ್ನು ಹಿಡಿದು ನಿಂತಿವೆ. ಕೆಲವು ಸಾಮ್ರಾಜ್ಯ ವಿಸ್ತರಣೆಗೆ ಅವನ್ನು ಹಿಡಿಯುತ್ತಿದ್ದರೆ ಮತ್ತೆ ಕೆಲವರು ಅವರನ್ನು ತಡೆಯುವುದಕ್ಕಾಗಿಯೋ, ಅಥವಾ ತಮ್ಮ ಅಸ್ಮಿತೆಯ ರಕ್ಷಣೆಗಾಗಿಯೋ ಅಥವಾ ತಮ್ಮನ್ನು ನೆಚ್ಚಿದವರನ್ನು ಕಾಪಾಡಲೋ ಹೀಗೆ ಕಾರಣಗಳು ಹಲವಿದ್ದರೂ ಕೈಯಲ್ಲಿರುವುದು ವಿನಾಶಕಾರಿ ಆಯುಧಗಳು. ಸಿರಿಯಾ, ವೆನೆಜುವೆಲಾದಂತಹ ಕಡೆ ನಾಗರಿಕ ಯುದ್ಧವಾಗುತ್ತಿದ್ದರೆ; ಉತ್ತರ ಕೊರಿಯಾ, ಚೀನಾದಂತಹ ದೇಶಗಳು ಆಕ್ರಮಣಕ್ಕಾಗಿ ಸದಾ ಸಿದ್ಧವಾಗಿವೆ. ಭಯೋತ್ಪಾದನೆ, ಮತಾಂಧತೆಯಿಂದ ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾದ ಪರಿಸ್ಥಿತಿ ರಕ್ತದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ. ಹೀಗೆ ಒಂದಿಲ್ಲೊಂದು ಕಾರಣಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯ ಬದಲಿಗೆ ಅಧಿಕಾರ ಕೇಂದ್ರಿತ “ಹಿಂಸೆ” ಶಕ್ತಿ ರಾಜಕಾರಣದ ಪ್ರಬಲ ಅಸ್ತ್ರವಾಗಿದೆ.

ಇಂತಹ ಸಂಕೀರ್ಣ ಸಂದರ್ಭವೇ ವಿಶ್ವದ ಸುತ್ತಲೂ ಆವರಿಸಿರುವಾಗ ಭಾರತವೂ ಅಭಿವೃದ್ಧಿಯ ಬುಲೆಟ್ ಒಂದನ್ನು ನೆಚ್ಚಿದೆ. ಆದರೆ ಇಲ್ಲಿನ ಬುಲೆಟ್ ಬಂದೂಕಿನ ನಳಿಕೆಯಿಂದ ಚಿಮ್ಮುವಂತದ್ದಲ್ಲ. ಪ್ರತೀ ಘಂಟೆಗೆ 350 ಕಿಲೋ ಮೀಟರ್‍ವೇಗದಲ್ಲಿ (ಭಾರತದಲ್ಲಿ ಘಂಟೆಗೆ ಸರಾಸರಿ 320 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಧ್ಯತೆಯಿದೆ. ಶಿಂಕಾನ್ಸೆನ್ ಬುಲೆಟ್ ರೈಲುಗಳ ಗರಿಷ್ಟ ವೇಗ ಘಂಟೆಗೆ 350 ಕಿ.ಮೀ.) ದೂರವನ್ನು ಕ್ರಮಿಸಬಲ್ಲ ಸಂಚಾರ ಕ್ರಾಂತಿಯ ಬತ್ತಳಿಕೆಯದ್ದು. ಅದುವೇ ಮುಂಬಯಿ-ಅಹಮದಾಬಾದ್ ಹೈ ಸ್ಪೀಡ್ ರೈಲು (Mumbai-Ahmedabad High Speed Rail) ಯೋಜನೆ. ಈ ಯೋಜನೆಯಿಂದ ಎರಡೂ ನಗರಗಳ ಅಂತರ ಮಾತ್ರವಲ್ಲದೆ ಸಂಚಾರದ ಸಮಯವೂ ಅರ್ಧದಷ್ಟು ಕಡಿಮೆಯಾಗಲಿದೆ. ಅಂದರೆ ಪ್ರಸ್ತುತ ಏಳು ಘಂಟೆಗಳ ಪ್ರಯಾಣದ ಸಮಯವನ್ನು ಮೂರು ಘಂಟೆಗಳಿಗೂ ಕಡಿಮೆ ಸಮಯಕ್ಕಿಳಿಸುವ ಅದ್ಭುತ ಸಂಚಾರಿ ವ್ಯವಸ್ಥೆಯಿದು. ಬುಲೆಟ್ ವೇಗದಲ್ಲಿ ಚಲಿಸುತ್ತದೆ ಎಂಬ ಅನ್ವರ್ಥಕ್ಕನುಗುಣವಾದ, ಸರಳವಾಗಿ ಹೇಳುವುದಾದರೆ ಭಾರತದ ಮೊದಲ “ಬುಲೆಟ್ ರೈಲು” ಯೋಜನೆ ಅಥವಾ ವೇಗ, ಸುರಕ್ಷತೆ, ಆಧುನಿಕ ತಂತ್ರಜ್ಞಾನದ ವೈಜ್ಞಾನಿಕ ಸಂರಚನೆಯೇ ಜಪಾನಿ ಭಾಷೆಯಲ್ಲಿ “ಶಿಂಕಾನ್ಸೆನ್”.

ರೈಲ್ವೆ ತಂತ್ರಜ್ಞಾನದಲ್ಲಿ ಅಗ್ರಸ್ಥಾನದಲ್ಲಿರುವ ಎರಡು ದೇಶಗಳೆಂದರೆ ಜಪಾನ್ ಮತ್ತು ಚೀನಾ. ಆ ಎರಡೂ ದೇಶಗಳು ಇಂದು ರೈಲ್ವೆ ತಂತ್ರಜ್ಞಾನದ ಕೌಶಲ್ಯದಿಂದ ವಿಶ್ವದ ಬಹುಮುಖ್ಯ ಆರ್ಥಿಕ ಶಕ್ತಿಗಳಾಗಿ ಬೆಳೆದಿವೆ. 1964ರಲ್ಲಿ ಜಪಾನ್‍ನಲ್ಲಿ ಮೊದಲ ಬುಲೆಟ್ ರೈಲು ಸಂಚಾರ ವ್ಯವಸ್ಥೆ ಜಾರಿಗೆ ಬಂದಾಗ ಎರಡನೇ ವಿಶ್ವಯುದ್ಧದಿಂದ ಜರ್ಜರಿತವಾಗಿದ್ದ ಜಪಾನ್ ಆರ್ಥಿಕವಾಗಿ ಬಡ ರಾಷ್ಟ್ರವಾಗಿತ್ತು. ಆದರೆ ಸುಸಜ್ಜಿತ ಸಂಪರ್ಕ ವ್ಯವಸ್ಥೆ ಆರ್ಥಿಕ ಚೈತನ್ಯದ ಮೂಲವೆಂಬಂತೆ ಈ ತಂತ್ರಜ್ಞಾನವೇ ಇಂದು ಜಪಾನ್ ಅಭಿವೃದ್ಧಿಗೆ ಕಾರಣವಾಗಿದ್ದು ಅತಿಶಯೋಕ್ತಿಯಲ್ಲ. ಈ ತಂತ್ರಜ್ಞಾನವನ್ನೇ ಜಪಾನ್ ದೇಶ ತನ್ನ ಇಂಜಿನಿಯರಿಂಗ್ ತಂತ್ರಜ್ಞಾನದ ರಫ್ತಿಗೆ ಬಂಡವಾಳವನ್ನಾಗಿಸಿಕೊಂಡಿದ್ದು ಈಗ ಇತಿಹಾಸ.

ಹಿಮಚ್ಚಾದಿತ ಫಿಜಿ ಪರ್ವತ ಸಾಲಿನ ಮಧ್ಯದಿಂದ ಸಾಗುವ ರಾಜಧಾನಿ ಟೊಕಿಯೊ ಮತ್ತು ವಾಣಿಜ್ಯ ಪಟ್ಟಣ ಒಸಾಕೊ ಮಾರ್ಗದಲ್ಲಿ ಜಪಾನ್ ಮೊದಲ ಶಿಂಕಾನ್ಸೆನ್ ರೈಲನ್ನು ಪ್ರಾರಂಭಿಸಿತು. ಜಪಾನ್‍ನ ಅರ್ಧದಷ್ಟು ಜನಸಂಖ್ಯೆಯಿರುವ ಈ ಪ್ರದೇಶದಲ್ಲಿ, 1964ರಲ್ಲಿ 552 ಕಿಮೀ ದೂರವನ್ನು ಕೇವಲ ನಾಲ್ಕು ಘಂಟೆಗಳಲ್ಲಿ ಪೂರೈಸಿ ಹೊಸ ದಾಖಲೆಯನ್ನು ನಿರ್ಮಿಸಿತು. ಪ್ರಸ್ತುತ ಆ ದೂರವನ್ನೀಗ ಕೇವಲ 2 ಘಂಟೆ 20 ನಿಮಿಷಗಳಲ್ಲಿಯೇ ಪೂರೈಸುತ್ತಿದೆ. ದಿನವೊಂದಕ್ಕೆ 350 ಬುಲೆಟ್ ರೈಲುಗಳ ಸಾಗುವ ಈ ದಾರಿ ವರ್ಷಕ್ಕೆ 163 ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದೆ. ಭಾರತದಲ್ಲಿಯೂ, ಅಹಮದಾಬಾದ್‍ನಿಂದ ಮುಂಬಯಿಗೆ ಪ್ರಸ್ತುತ 7 ಘಂಟೆಗಳ ರೈಲು ದಾರಿಯ ಸಮಯವನ್ನು “ಬುಲೆಟ್” ಕೇವಲ 3 ಘಂಟೆಗೂ ಕಡಿಮೆ ಅವಧಿಯಲ್ಲಿ ಕೊಂಡೊಯ್ಯಲಿದೆ. 2022ರಲ್ಲಿ ಅ-ಮು ದಾರಿಯಲ್ಲಿ ವರ್ಷಕ್ಕೆ 1.6 ಕೋಟಿ ಜನರು ಪ್ರಯಾಣಿಸುವ ನಿರೀಕ್ಷೆಯಿದೆ. 2050ರ ಹೊತ್ತಿಗೆ ಈ ಮಾರ್ಗದಲ್ಲಿ ದಿನನಿತ್ಯ 1.6 ಲಕ್ಷ ಜನರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬೆಳೆದಂತೆ ಪ್ರಾದೇಶಿಕ ಅಂತರ ಕಡಿಮೆಯಾಗುತ್ತದೆ. ಹೆಚ್ಚು ಸಮಯ ಉಳಿಯುತ್ತದೆ. ಹೀಗೆ ತಾಂತ್ರಿಕವಾಗಿ, ಭೌಗೋಳಿಕವಾಗಿ ಹತ್ತಿರವಾಗುತ್ತಿದ್ದರೂ ಮನುಷ್ಯ ಭಾವನೆ, ಸಂಬಂಧಗಳು ದೂರವಾಗುತ್ತಿರುವುದು ಮಾತ್ರ ವಿಪರ್ಯಾಸ. ಇದು ತಂತ್ರಜ್ಞಾನ ವಿಕಸನದ ಮಿತಿಯಲ್ಲ. ಖಂಡಿತವಾಗಿಯೂ ಮನುಷ್ಯ ಆಲೋಚನೆಯ ಮಿತಿ.

ಜಪಾನ್ ಪ್ರಧಾನಿ ಶಿಂಜೊ ಆಬೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದ ಬಹು ನಿರೀಕ್ಷಿತ ಅಹಮದಾಬಾದ್-ಮುಂಬಯಿ ಬುಲೆಟ್ ರೈಲಿಗೆ ಅಹಮದಾಬಾದ್‍ನಲ್ಲಿ ಕೆಂಪು ಹಾಸು ಹಾಸಿದ್ದಾರೆ. 2022ರ ಆಗಸ್ಟ್ 15ರಂದು, ಜಪಾನ್ ತಂತ್ರಜ್ಞಾನದ ಸಹಾಯ, ಸಾಲ ಮತ್ತು ಸಹಯೋಗದಿಂದ ಭಾರತ ತನ್ನ ಮೊದಲ ಬುಲೆಟ್ ಟ್ರೈನ್ ಪಡೆಯಲಿದೆ. ಭಾರತದ ಮೊದಲ ರೈಲು ಬಾಂಬೆ-ಥಾನೆ ಮಾರ್ಗದಲ್ಲಿ 16 ಏಪ್ರಿಲ್ 1853ರಲ್ಲಿ ಪ್ರಥಮ ಸಂಚಾರ ಪ್ರಾರಂಭಿಸಿತ್ತು. ಸುಮಾರು 33 ಕಿ.ಮೀ ದೂರವನ್ನು ಸಂಚರಿಸಲು 45 ನಿಮಿಷಗಳು ಹಿಡಿದಿತ್ತು. ಅಂದಿನಿಂದ ಇಂದಿನವರೆಗೂ ಜಗತ್ತಿನಲ್ಲೇ ಅತೀ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಭಾರತೀಯ ರೈಲ್ವೆ ಸೇವೆಯಲ್ಲಿ ಮಹತ್ವದ ಬೆಳವಣಿಗೆಗಳು, ಬದಲಾವಣೆಗಳಾಗಿವೆ. ಅನಿವಾರ್ಯ ಸಂಪನ್ಮೂಲ ಕೊರತೆ, ಲಭ್ಯವಿರುವ ಸಂಪನ್ಮೂಲಗಳ ಸದ್ಭಳಕೆ, ಸುರಕ್ಷತೆ, ವೇಗ, ಹಳಿಗಳ ಸುಧಾರಣೆ, ಖಾಸಗೀಕರಣ ಇಂತಹ ಇನ್ನಿತರ ಸವಾಲುಗಳೂ ಇಲಾಖೆಯನ್ನು ಕಾಡುತ್ತಿವೆ. ಹೊಸ ಸ್ವರೂಪದ ಮೋನೊ, ಮೆಟ್ರೋ ರೈಲುಗಳು ನಗರ ಸಂಚಾರ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕದ ಚಹರೆಯನ್ನೇ ಬದಲಾಯಿಸಿವೆ. ಇದೀಗ ಅತೀ ಕಡಿಮೆ ಕಡಿಮೆ ಸಮಯದಲ್ಲಿ, ಭಾರತದ ಮಟ್ಟಿಗೆ ಅತೀ ವೇಗದಲ್ಲಿ ಸಂಚಲಿಸಲಿರುವ ಬುಲೆಟ್ ಟ್ರೈನ್, ಸಾರ್ವಜನಿಕ ರೈಲ್ವೇ ಸೇವೆಯಲ್ಲಿಯೇ ಆಧುನಿಕ ಹಾಗೂ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ.

ವಿಶ್ವದಲ್ಲಿ ಅತ್ಯಂತ ವೇಗವಾಗಿ ಸಂಚರಿಸುವ ರೈಲು “ಶಾಂಘೈ ಮ್ಯಾಗ್-ಲೆವ್”. ಇದು ಘಂಟೆಗೆ 267.8 ಮೈಲುಗಳ ವೇಗದಲ್ಲಿ ಅಥವಾ 429 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಚೀನಾ ದೇಶ ಮ್ಯಾಗ್‍ಲೆವ್(Magnetic Levitation /ಅಯಸ್ಕಾಂತೀಯ ತೇಲುವಿಕೆ) ರೈಲುಗಳ ಮೂಲಕ ಕೇವಲ ಆಯಸ್ಕಾಂತದ ಸೆಳೆಯುವಿಕೆಯ ಶಕ್ತಿಯಿಂದ ಘರ್ಷಣೆಯಿಲ್ಲದ ಅತೀ ವೇಗವಾಗಿ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಜಗತ್ತಿಗೆ ಮರುಬಳಸಬಹುದಾದ ರಾಕೆಟ್‍ಗಳನ್ನು ಕೊಡುಗೆಯಾಗಿ ನೀಡಿದ ಸ್ಪೆಸ್-ಎಕ್ಸ್ ಯೋಜನೆ, ನಂತರ ಪ್ರಸ್ತುತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಳಸುತ್ತಿರುವ ‘ಫಾಲ್ಕಾನ್’ ತಂತ್ರಜ್ಞಾನದ ರುವಾರಿ ಅಮೆರಿಕಾದ “ಟೆಸ್ಲಾ” ಕಂಪೆನಿಯ ಇಲಾನ್ ಮಸ್ಕ್. ‘ಹೈಪರ್‍ಲೂಪ್ ಅಲ್ಟ್ರಾ ಹೈ ಸ್ಪೀಡ್’ “ಟ್ಯೂಬ್ ಸಂಚಾರ” ವ್ಯವಸ್ಥೆಯ ಮೂಲಕ ಶಬ್ಧದ ವೇಗಕ್ಕಿಂತಲೂ ವೇಗವಾಗಿ, ಯಾವುದೇ ಬಗೆಯ ಅಪಘಾತಕ್ಕೂ ಆಸ್ಪದವಿಲ್ಲದಂತೆ ಸುರಕ್ಷಿತವಾಗಿ ಪ್ರಯಾಣಿಕರನ್ನು ಕೊಂಡೊಯ್ಯಬಲ್ಲ ತಂತ್ರಜ್ಞಾನದ ಮೂಲಕ ಸಂಚಾರ ವ್ಯವಸ್ಥೆಯಲ್ಲಿಯೇ ಕ್ರಾಂತಿ ಮಾಡುವ ಹಾದಿಯಲ್ಲಿದ್ದಾರೆ.

ಈ ಬಗೆಯ ಅನೇಕ ಆವಿಷ್ಕಾರ ಸಾಧ್ಯತೆಗಳ ಬಲದಿಂದ ಜಗತ್ತು ಈ ವೇಗದಲ್ಲಿ ಯೋಚಿಸುತ್ತಿರುವಾಗ, ಭಾರತ ಮಾತ್ರ ಇಂತಹ ಯೋಜನೆಗಳಿಂದ ಹಿಂದೆ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇಷ್ಟು ತಡವಾಗಿಯಾದರೂ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತಿದೆ. ಅಂದರೆ “ಶಿಂಕಾನ್ಸೆನ್” ತಂತ್ರಜ್ಞಾನ ಜಪಾನ್‍ನಲ್ಲಿ ಕ್ರಾಂತಿ ಮಾಡಿದ ಅರ್ಧ ಶತಮಾನದ ನಂತರ ಭಾರತ ಈ ತಂತ್ರಜ್ಞಾನದ ಕಾಮಗಾರಿಗೆ ಕೈ ಹಾಕಿದೆ. ಭೂಮಿಯ ಖರೀದಿ ಮೊದಲಾದ ಕಾರಣಗಳಿಂದ ಯೋಜನೆ ಇನ್ನಷ್ಟು ತಡವಾಗಬಾರದೆಂದು ಒಟ್ಟಾರೆ 508 ಕಿ.ಮೀ ಮಾರ್ಗದ ಶೇಕಡ 92% ಭಾಗವನ್ನು ನೆಲದಿಂದ ಎತ್ತರಕ್ಕೆ ಸೇತುವೆಯ ರೀತಿಯಲ್ಲಿ (ಮೆಟ್ರೋ ಮಾರ್ಗದಂತೆ) ನಿರ್ಮಿಸಲಾಗುತ್ತದೆ. ಯೋಜನೆಯ 6% ಭಾಗವನ್ನು ಅಂದರೆ 21 ಕಿ.ಮೀ ಮಾರ್ಗವನ್ನು ಸುರಂಗದ ಮೂಲಕ ನಿರ್ಮಿಸಲಾಗುತ್ತದೆ. ಇದು ದೇಶದ ಅತೀ ದೊಡ್ಡ ಸುರಂಗಮಾರ್ಗವಾಗಲಿದೆ ಇದರಲ್ಲಿ 7 ಕಿ.ಮೀ ದೂರವನ್ನು ಮಹಾರಾಷ್ಟ್ರದ ಬೊಯ್ಸಾರ್ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವಿನ ಸಮುದ್ರದಡಿಯಿಂದ ಸಾಗಲಿರುವ ಸುರಂಗಮಾರ್ಗದ ಮೂಲಕ ಪೂರೈಸಲಾಗುತ್ತದೆ. ಕೇವಲ 2% ಅಂದರೆ 825 ಹೆಕ್ಟೇರ್ ವಿಸ್ತೀರ್ಣದ ಹಳಿಯನ್ನು ಭೂಮಟ್ಟದಲ್ಲಿ ನಿರ್ಮಿಸಲಾಗುತ್ತದೆ. ಹೀಗೆ ಈ ರೈಲು ನೆಲ, ಜಲ ಹಾಗೂ ಎತ್ತರದಲ್ಲಿ ಸಾಗುವ ವಿಶಿಷ್ಟ ಸಾರಿಗೆಯಾಗಲಿದೆ.

ಮೇಲಾಗಿ 1964ರಿಂದ ಇಂದಿನ ವರೆಗೂ ಬುಲೆಟ್ ರೈಲು ಒಂದೇ ಒಂದು ಅಪಘಾತಕ್ಕಿಡಾಗಿಲ್ಲ. ಇದು ಅಪಘಾತಗಳನ್ನು ನಿಯಂತ್ರಿಸಲಾಗದ ಭಾರತೀಯ ರೈಲ್ವೆಗೂ ಪಾಠವಾಗಲಿದೆ. ಬುಲೆಟ್ ರೈಲು ನಿಖರ ಸಮಯ ಬದ್ಧತೆಗೆ ಹೆಸರುವಾಸಿ. ಸರಾಸರಿ ಒಂದು ನಿಮಿಷಕ್ಕಿಂತ ಹೆಚ್ಚವರಿ ಸೆಕೆಂಡನ್ನೂ ಇದು ಪಡೆದ ಉದಾಹರಣೆಯಿಲ್ಲ. ಭಾರತದ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ ಎಂಬ ಆರೋಪ ಬುಲೆಟ್‍ನಿಂದ ದೂರವಾಗಬಹುದು. ಮೇಲಾಗಿ ಆಂತರಿಕವಾದ ಭೂಕಂಪನ ಗುರುತಿಸುವಿಕೆಯ ತಂತ್ರಜ್ಞಾನವೂ ಸೇರಿದಂತೆ ಇನ್ನಿತರ ಅನೇಕ ಕಾರಣಗಳಿಂದ ಇದೊಂದು ಸುರಕ್ಷಿತ ಸಂಚಾರ ವ್ಯವಸ್ಥೆಯಾಗಲಿದೆ.

ಮುಂದುವರಿಯುವುದು…

ನಾಳೆ: ಬುಲೆಟ್ ರೈಲನ್ನು ಭಾರತಕ್ಕೆ ಈಗಿನ ಬೆಲೆಯಲ್ಲಿ ಮಾರಲು ಜಪಾನಿಗಿರುವ ಅನಿವಾರ್ಯತೆ

-ಶ್ರೇಯಾಂಕ ಎಸ್ ರಾನಡೆ.

 

 

 

Facebook ಕಾಮೆಂಟ್ಸ್

ಲೇಖಕರ ಕುರಿತು

Shreyanka S Ranade

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!