ಅಂಕಣ

ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ.

“177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ ಹೊತ್ತಿನಲ್ಲಿ ಮರೆಯಬಾರದ ಸಂಗತಿ, “ಪುಷ್ಕರಮೇಕೆಂಬೇಯೇನ್ ಉಳಿಸುವುದಕೆ ಮರ್ತು” ಮತ್ತು “ಗಂಗೇಚ ಯಮುನೆಚೈವ” ಎಂಬ ಜಾಗೃತ ಪ್ರಜ್ಞೆಯ ಅನಿವಾರ್ಯತೆ.

ಮಹಾಪುಷ್ಕರ ಪುಣ್ಯಸ್ನಾನದಿ ಮಿಂದೇಳುವ ಮುನ್ನ:

ನಿರಂತರ ಚಲನೆಯಲ್ಲಿರುವ ಗ್ರಹಗಳು ಕಾಲದಿಂದ ಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತಿರುತ್ತವೆ. ಗುರು ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸಿದಾಗ ಸಂಬಂಧಪಟ್ಟ ರಾಶಿಯು ಯಾವ ನದಿಗೆ ಅನ್ವಯವಾಗುವುದೋ ಆ ನದಿಯಲ್ಲಿ ಪ್ರತಿವರ್ಷ ಪುಷ್ಕರ ನಡೆಯುತ್ತದೆ. ಉದಾಹರಣೆಗೆ ಧನು ರಾಶಿಗೆ ಸಿಂಧೂ ನದಿ, ಮೇಷ ರಾಶಿಗೆ ಗಂಗೆ, ವೃಷಭ ರಾಶಿಗೆ ಯುಮನೆ, ತುಲಾ ರಾಶಿಗೆ ಕಾವೇರಿ. ಈ ವರ್ಷ ಗುರು ಮೇಷ ರಾಶಿಯತ್ತ ಸ್ಥಾನ ಪಲ್ಲಟತೆಯನ್ನು ಮಾಡಿರುವುದರಿಂದ ಐತಿಹಾಸಿಕ ಮಹಾಪುಷ್ಕರ ಕಾವೇರಿ ನದಿಯಲ್ಲಿ ನಡೆಯಲಿದೆ.

ಸೃಷ್ಟಿಕರ್ತ ಬ್ರಹ್ಮನ ಕಮಂಡಲದಲ್ಲಿ ‘ಪುಷ್ಕರ’ವೆಂಬ ವಿಷ್ಣುರೂಪದ ತೀರ್ಥವಿತ್ತು. ಅದನ್ನು ಪಡೆಯಬೇಕೆಂದು ಗುರು ತಪ್ಪಸ್ಸು ಮಾಡಿದಾಗ, ಆತನ ಬಳಿ ತೆರಳುವುದಕ್ಕೆ ಪುಷ್ಕರ ಒಪ್ಪುವುದಿಲ್ಲ. ಆಗ ಬ್ರಹ್ಮ, ಪ್ರತೀ ವರ್ಷ ಗುರು ತನ್ನ ಸ್ಥಾನ ಬದಲಿಸಿದಾಗ ಹೊಸ ರಾಶಿಗೆ ಸಂಬಂಧಿಸಿದ ನದಿಯಲ್ಲಿ ನಡೆಯುವ ಪುಷ್ಕರದ ಮುಖೇನ 12 ದಿನಗಳ ಪುಷ್ಕರ ಗುರುವನ್ನು ಸೇರಲಿ ಎಂದು ಇಬ್ಬರಿಗೂ ಒಪ್ಪುವ ವರ ನೀಡುತ್ತಾರೆ ಎಂಬ ಉಲ್ಲೇಖವಿದೆ. ಈ ಹನ್ನೆರಡು ದಿನಗಳ ತರುವಾಯ ಪುಷ್ಕರ ಮರಳಿ ಬ್ರಹ್ಮನ ಕಮಂಡಲವನ್ನು ಸೇರುತ್ತದೆ ಎಂಬ ನಂಬಿಕೆಯಿದೆ. ತ್ರಿಮೂರ್ತಿಗಳು ಒಂದೆಡೆ ಸೇರುವ ಈ ಸಂದರ್ಭದಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಕೈಗೊಂಡರೆ ಪಿತೃದೇವತೆಗಳ ಹಾಗೂ ಆ ನದಿಯ ಅನುಗ್ರಹ ಶ್ರೇಷ್ಠವೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ನದಿಗೆ ಸಂಬಂಧಿಸಿದಂತೆ ವಿಶೇಷವಾಗಿ, ಪ್ರಾಚೀನ ಕೃತಿ ‘ಕಾವೇರಿ ಮಹಾತ್ಮೆ’ಯಲ್ಲೂ ಇದನ್ನು ಸವಿವರವಾಗಿ ಹೇಳಲಾಗಿದೆ.

ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕಾವೇರಿ ಪುಷ್ಕರ ನಡೆಯುತ್ತದೆ. ಆದರೆ ದಕ್ಷಿಣ ಗಂಗೆ ಎಂದೇ ಪ್ರಚಲಿತವಾಗಿರುವ ಈ ಬಾರಿಯ ಪುಷ್ಕರ, ಗ್ರಹಗಳು ಹಾಗೂ ರಾಶಿಗಳ ಸ್ಥಾನಗಳ ದೃಷ್ಟಿಯಿಂದ ಇತಿಹಾಸದ ಮರುಕಳಿಕೆಯಾಗಿದೆ. 177 ವರ್ಷಗಳ ಹಿಂದೆ ಅಂದರೆ 8 ಸೆಪ್ಟೆಂಬರ್ 1840ರಲ್ಲಿ ನಡೆದಿದ್ದ ಕಾವೇರಿಯ ಮಹಾಪುಷ್ಕರದ ನಕಲುಪ್ರತಿಯಂತಹ ಮರುಕಳಿಕೆಯಾಗಿದೆ. ಅಂದಿನ ಗ್ರಹ ಹಾಗೂ ನಕ್ಷತ್ರಗಳ ಹೊಂದಾಣಿಕೆ ಈ ಬಾರಿಯ ಪುಷ್ಕರದಲ್ಲೂ ಪುನರಾವರ್ತನೆಯಾಗಿವೆ. ಉದಾಹರಣೆಗೆ: ಸೂರ್ಯ, ಬುಧ, ಶುಕ್ರ ಗ್ರಹಗಳು ಕನ್ಯಾ ರಾಶಿಯಲ್ಲಿವೆ. ಶನಿ ವೃಶ್ಚಿಕದಲ್ಲಿದೆ. ಮಂಗಳ ಕಟಕ ರಾಶಿಯ ಮನೆಯಲ್ಲಿದೆ ಮತ್ತು ಗುರು ತುಳಾ ರಾಶಿಯಲ್ಲಿದೆ.

ದಕ್ಷಿಣದ ಭಾಗೀರಥಿ ಎಂದೇ ಖ್ಯಾತಿ ಪಡೆದ ಕಾವೇರಿ ನದಿಯ ಕುರಿತು, ತಮಿಳಿನ ಐದು ಮಹಾಕಾವ್ಯಗಳಲ್ಲಿ ಒಂದಾದ, 6ನೇ ಶತಮಾನದಲ್ಲಿ ಚಥನಾರ್ ಕವಿ ಬರೆದಿರುವ “ಮಣಿಮೇಕಲೈ” ಮಹಾಕಾವ್ಯದ ಪೀಠಿಕೆಯಲ್ಲಿ ಹೇಳಲಾಗಿದೆ. “ಬರದಿಂದ ಬಳಲುತ್ತಿದ್ದ ಚೋಳ ರಾಜ್ಯವನ್ನು ರಕ್ಷಿಸುವುದಕ್ಕಾಗಿ ಕಂಟಮಾನ್ ರಾಜನ ತಪಸ್ಸಿನಿಂದ ಪ್ರಸನ್ನಗೊಂಡ ಅಗಸ್ತ್ಯ ಮುನಿ ತಮ್ಮ ಕಮಂಡಲದಲ್ಲಿದ್ದ ನೀರನ್ನು ಭೂಮಿಗೆ ಬಿಡಲಾಗಿ, ಅದೇ ಕಾವೇರಿ ನದಿಯಾಗಿ ಹರಿದು ನೀರಿಗಾಗಿ ಹಪಹಪಿಸುತ್ತಿದ್ದ ಚೋಳ ರಾಜ್ಯವನ್ನು ಸುಭೀಕ್ಷಗೊಳಿಸಿತು. ಜೀವಜಲವನ್ನು ಒದಗಿಸಿ ಜೀವರಕ್ಷಣೆಗೆ ಕಾರಣವಾದ ನದಿಯನ್ನು ಜೀವನದಿಯೆನ್ನಲಾಯಿತು.” ಕಾವೇರಿ ನದಿಯ ಉಗಮದ ಕುರಿತು ಇಂತಹ ಕೆಲವಾರು ದಂತಕತೆಗಳು ಪ್ರದೇಶದಿಮದ ಪ್ರದೇಶಕ್ಕೆ ಭಿನ್ನ ಸ್ವರೂಪದಲ್ಲಿ ಚಾಲ್ತಿಯಲ್ಲಿವೆ. (ನೋಡಿ: ಸಂಗಮ ಕಾಲದ ಮಣಿಮೇಕಲೈ ಇಂಗ್ಲೀಷ್ ಅನುವಾದ. 1989)

ಮತ್ತೊಂದು ಕಥೆಯ ಪ್ರಕಾರ, ಪ್ರತಿಯೊಬ್ಬ ಮನುಷ್ಯರ ಪಾಪಗಳನ್ನು ಶುದ್ಧಗೊಳಿಸುತ್ತಿದ್ದ ಗಂಗೆ ಹಾಗೂ ಯಮುನೆಯರೂ ಕಾಲಕ್ರಮೇಣ ಮಲಿನಗೊಳ್ಳತೊಡಗಿದರು. ಆಗ ಅವರೂ ಕಾವೇರಿಯಲ್ಲಿ ಮಿಂದೆದ್ದರೆ ತಮಗಂಟಿದ ಪಾಪಗಳೆಲ್ಲ ವಿನಾಶವಾಗುತ್ತವೆಂಬ ನಂಬಿಕೆಯಿಂದ ಅಗಸ್ತ್ಯ ಮುನಿಗಳು ಎರಡೂ ನದಿಗಳ ನೀರನ್ನು ತಮ್ಮ ಕಮಂಡಲದಲ್ಲಿ ಹೊತ್ತು ದಕ್ಷಿಣಕ್ಕೆ ಬರುತ್ತಾರೆ. ದಕ್ಷಣದತ್ತ ಆಗಮಿಸಿದಾಗ ತಮ್ಮ ಪೂಜಾ ಕೈಕಂಕರ್ಯಕ್ಕೆಂದು ಕಮಂಡಲವನ್ನು ಭೂಮಿಯ ಮೇಲಿಡುತ್ತಾರೆ. ಆಗ ದೂರದಿಂದ ಬಂದ ಕಾಗೆ (ಗಣಪತಿ) ಆ ಕಮಂಡಲವನ್ನು ಬೀಳಿಸುತ್ತದೆ. ಹಾಗೆ ಬಿದ್ದ ಕಮಂಡಲದ ನೀರು ನದಿಯಂತೆ ಹರಿಯುತ್ತದೆ. ಅದನ್ನು ಅಗಸ್ತ್ಯರು ದೈವೇಚ್ಛೆ ಎಂದು ಭಾವಿಸಿ ಸುಮ್ಮನಾಗುತ್ತಾರೆ.  ಹೀಗೆ ಕಾವೇರಿಗೆ   ಕಾಗೆಯಿಂದ ಚೆಲ್ಲಲ್ಪಟ್ಟ ವಿಸ್ತøತ ನೀರು ಅಂದರೆ ಕಾ+ವೀರಿ(ವೈಶಾಲ್ಯ)= ಕಾವೇರಿ ಎಂಬ ಹೆಸರನ್ನು ಪಡೆಯಿತು ಎಂಬ ಪ್ರತೀತಿಯಿದೆ.

ಈ ಎಲ್ಲಾ ಕಥೆಗಳಲ್ಲೂ ಕಾಣಸಿಗುವ ಒಂದು ಮುಖ್ಯ ಸಂಗತಿಯೆಂದರೆ, ಕಾವೇರಿ ನದಿ ಗಂಗೆ-ಯಮುನೆಯರಿಗಿಂತ ಶುದ್ಧ ಎಂಬ ಭಾವನೆ. ಎರಡನೆಯದಾಗಿ ಎಲ್ಲಾ ಕಥೆಗಳಲ್ಲೂ ಬರುವ ಅಗಸ್ತ್ಯ ಮುನಿ. ಇವು ಕಾವೇರಿಯ ಪಾರಂಪರಿಕತೆ ಹಾಗೂ ಪುಷ್ಕರದ ಪೌರಾಣಿಕತೆ ಮತ್ತು ಪುಷ್ಕರದಲ್ಲಿ ಮಿಂದೇಳುವ ಆಚರಣೆಯನ್ನು ಸ್ಥಾಯಿಗೊಳಿಸುತ್ತದೆ.

“ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ”.

ಜೀವನದಿಯಾಗಿ ಕಾವೇರಿ:

ಕಾವೇರಿ ದಕ್ಷಿಣ ಭಾರತದ ಜೀವನದಿ. ಮೂಲತಃ, ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯಿಂದ ಪುಷ್ಕಳಗೊಳ್ಳುವ ದಕ್ಷಿಣ ಭಾರತದ ಏಕೈಕ ನಿತ್ಯಹರಿದ್ವರ್ಣ ಅಥವಾ ವರ್ಷಪೂರ್ತಿ ಹರಿಯುವ ನದಿ. ತನ್ನ ಹುಟ್ಟಿನಿಂದಲೂ ದಕ್ಷಿಣ ಭಾರತದ ಬದುಕು, ಕೃಷಿ, ಕೈಗಾರಿಕೆ, ವಿದ್ಯುತ್ ಶಕ್ತಿ, ಭಕ್ತಿ, ಆಧ್ಯಾತ್ಮ, ಅಂತರಾತ್ಮ, ಕಲೆ, ಸಂಸ್ಕøತಿ, ಸಾಹಿತ್ಯ, ಸಮಾಜವನ್ನು ಪೊರೆಯುತ್ತಿದೆ. ಪಶ್ಚಿಮ ಘಟ್ಟದ ಸೊಬಗಿನ ನಾಡು ಕರ್ನಾಟಕ ರಾಜ್ಯದ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳಲ್ಲಿ ಹರಿಯುವ, ಹಸಿರುಸಿವ ಪುಣ್ಯ ನದಿ. 765 ಕಿ,ಮೀ ಯ ಸುದೀರ್ಗ ಓಟದಲ್ಲಿ ಕೊಡಗಿನಿಂದ ದಕ್ಷಿಣಕ್ಕೆ ಹಾಗೂ ಪೂರ್ವಕ್ಕೆ ಹರಿದು ತಮಿಳುನಾಡಿನ ಕಾವೇರಿಪೂಂಪಟ್ಟಣಂ(ಪುಹಾರ್) ತಲುಪಿ ನಂತರ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ಈ ಹಾದಿಯಲ್ಲಿ, ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಹಾಗೂ ಶಿವನಸಮುದ್ರದಲ್ಲಿ ಎರಡು ಸುಂದರ ದ್ವೀಪಗಳನ್ನು ನಿರ್ಮಿಸುತ್ತದೆ. 98 ಮೀಟರ್ ಎತ್ತರದಿಂದ ನೆಲಕ್ಕೆ ಧುಮುಕುವ ಶಿವನಸಮುದ್ರ ಜಲಪಾತ ಹಾಗೂ ವಿಶ್ವೇಶ್ವರಯ್ಯನವರ ಕನಸಿನ ಕೂಸು, ಇಂದಿಗೂ ಚಾಲ್ತಿಯಲ್ಲಿರುವ ಏಷ್ಯಾದ ಮೊತ್ತ ಮೊದಲ ಜಲವಿದ್ಯುತ್ ಯೋಜನೆಗೆ ಕಾರಣವಾಗಿ ಹೊಗೆನಕಲ್‍ನಲ್ಲಿ ತಮಿಳುನಾಡನ್ನು ಸೇರುತ್ತದೆ. ಕಾವೇರಿ ಕೇಂದ್ರಿತ ಪ್ರದೇಶದಲ್ಲಿಯೇ ಶೈವ, ವೈಷ್ಣವ ಭಕ್ತಿ ಚಳುವಳಿ ರೂಪುಗೊಂಡಿದ್ದು. ಕಾವೇರಿಯ ತಟದಲ್ಲಿಯೇ ಆದಿ ರಂಗ(ಶ್ರೀರಂಗಪಟ್ಟಣ), ಮಧ್ಯ ರಂಗ(ಶಿವನಸಮುದ್ರ) ಮತ್ತು ಅಂತ್ಯ ರಂಗ (ಶ್ರೀರಂಗ, ತಮಿಳುನಾಡು) ಮಂದಿರಗಳಿರುವುದು. ವೈಷ್ಣವ ಭಕ್ತಿ ಕವಿಗಳಾದ ಅಜ್ವಾರರು ವಿಷ್ಣು ಹಾಗೂ ಶ್ರೀರಂಗವನ್ನು ಹೊಗಳಿ ಬರೆದು ಸ್ತುತಿಸಿ ಭಕ್ತಿ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾವೇರಿ ಹರಿದು ಹಸನಾಗಿಸುವ ಕರ್ನಾಟಕ-ತಮಿಳುನಾಡು-ಕೇರಳಗಳು ಒಂದಾಗುವ ಈ ತ್ರಿವಳಿ ಪ್ರದೇಶದಿಂದಲೇ ಜಗತ್ತಿಗೇ ವಿಶಿಷ್ಟವಾದ ಕರ್ನಾಟಿಕ್ ಪ್ರದೇಶದಲ್ಲಿ ತ್ಯಾಗರಾಜ, ಶ್ಯಾಮಶಾಸ್ತ್ರಿ ಮತ್ತು ಮುತ್ತುಸ್ವಾಮಿ ದೀಕ್ಷಿತರ್ ಎಂಬ ತ್ರಿವಳಿಗಳಿಂದ ಮುನ್ನಲೆಗೆ ಬಂದ “ಕರ್ನಾಟಕ(ಕರ್ನಾಟಿಕ್) ಶಾಸ್ತ್ರೀಯ ಸಂಗೀತ” ಉಗಮಗೊಂಡಿರುವುದು.

ಆರಂಭದಿಂದಲೂ ಬದುಕು, ಆರ್ಥಿಕತೆಯನ್ನು ಪೋಷಿಸುತ್ತಾ ಬಂದಿರುವ ಕಾವೇರಿಗುಂಟದ ಇತಿಹಾಸಕ್ಕೆ ಪುರಾಣ ಮೂಲವಿದೆ. ಕಾವೇರಿ ನದಿಯು ಇತಿಹಾಸವನ್ನು ಪೋಷಿಸುತ್ತಾ, ಇತಿಹಾಸವನ್ನು ನಿರ್ಮಿಸುತ್ತಾ, ಇತಿಹಾಸದ ಭಾಗವಾದ ಕಥೆಯಿದೆ. ನಮ್ಮ ಕಲ್ಪನೆ, ಕಲೆ, ಸಂಗೀತ, ಸಾಹಿತ್ಯ, ತಂತ್ರಜ್ಞಾನ ಸಾಧ್ಯತೆ, ತ್ಯಾಗ, ಬಲಿದಾನ, ಆಧ್ಯಾತ್ಮ, ಆಸ್ಥೆಗಳ ಛಾಯೆ ಮತ್ತು ಚರ್ಯೆಯಿದೆ. ಕಾವೇರಿ ನದಿಯ, ಉಪನದಿಗಳ ಹಾದಿಯಲ್ಲಿ ಸಂಚರಿಸುವುದೇ ಒಂದು ರೋಮಾಂಚನಾಕಾರಿ, ಆಸಕ್ತಿದಾಯಕ ಅನುಭವ.

ಬಾಲ್ಯದಲ್ಲಿ ಮೈಸೂರಿನಲ್ಲಿ ವಾಸಿಸುತ್ತಿದ್ದ ದಿನಗಳಲ್ಲಿ ತಲಕಾವೇರಿಯಿಂದ ಶಿವನಸಮುದ್ರ, ರಂಗನತಿಟ್ಟು, ಮೇಕೆದಾಟು, ಮುತ್ತತ್ತಿ, ಬಲಮುರಿ, ಎಡಮುರಿ, ಕೃಷ್ಣರಾಜ ಸಾಗರ ಅಣೆಕಟ್ಟು ಮೊದಲಾದ ಎಲ್ಲಾ ಕಾವೇರಿ ಕೇಂದ್ರಿತ ತಾಣಗಳಲ್ಲಿ ವಿಹರಿಸಿ ರೋಮಾಂಚನಗೊಂಡ ಅನುಭವ ಇನ್ನೂ ಹಸನಾಗಿದೆ. ಆಗೆಲ್ಲ ಅದರ ವಿಸ್ತಾರ, ಹರಿವು, ಭೋರ್ಗರೆತದ ಅಸಾಮಾನ್ಯ ಚಿತ್ರಣ ಮನದಲ್ಲಿ ಭಯ ಮೂಡಿಸುತ್ತಿದ್ದದ್ದು ಸುಳ್ಳಲ್ಲ. ನಂತರ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ‘ದೂರಸರಿದರು’ ಸೇರಿದಂತೆ ಅವರ ಇತರ ಕಾದಂಬರಿಗಳಲ್ಲಿ ಬಂದಿರುವ ಕಾವೇರಿಗುಂಟದ ಬದುಕು, ಪರಿಸರ, ದಟ್ಟತೆ ಇತರ ವಿಚಾರಗಳು. ಬಿಜಿಎಲ್ ಸ್ವಾಮಿಯವರ ತಮಿಳು ಅನುವಾದ ಕೃತಿ ‘ನಡೆದಿಹೆ ಬಾಳೌ ಕಾವೇರಿ’ಯಲ್ಲಿ ಚಿತ್ರಿತವಾಗಿರುವ ಕಾವೇರಿ ಸಂಸ್ಕೃತಿ. ಕಾವೇರಿಯ ಪೌರಾಣಿಕ, ಆದ್ಯಂತಿಕ, ಆಧ್ಯಾತ್ಮಿಕ ಹಾಗೂ ಅನಂತ ಸಾದೃಶ್ಯತೆಯನ್ನು ತೆರೆದಿಡುವ, ಬ್ರಾಹ್ಮಣನೊಬ್ಬ ಕಾವೇರಿ ನದಿಯ ಅಷ್ಟೂ ದೂರವನ್ನು ಕಾಲ್ನಡಿಗೆಯಲ್ಲಿಯೇ ಪೂರ್ತಿಗೊಳಿಸುವ ಹಾಗೂ ಕಾವೇರಿಯ ಹುಟ್ಟು, ಪ್ರಾಮುಖ್ಯತೆ, ಯಾವ ರೀತಿ ಕಾವೇರಿ ನದಿ ಗಂಗೆ-ಯಮುನೆಯರನ್ನೇ ಶುದ್ಧಗೊಳಿಸುವ ಅತೀ ಪವಿತ್ರ ನದಿಯೆಂದು ವಿವರಿಸಲಾಗಿರುವ ಸಂಕಥನದ ಕೃತಿಯೇ ‘ಕಾವೇರಿ ಮಹಾತ್ಮೆ’. ಇಂಗ್ಲೀಷಿನಲ್ಲೂ ‘ಇಟ್ ಆಲ್ ಹ್ಯಾಪಂನ್ಡ್ ಎಲಾಂಗ್ ಕಾವೇರಿ’ ಈ ನದಿಯನ್ನು ಇನ್ನಷ್ಟು ಆಳವಾಗಿ ಬಗೆದು ನೋಡಲು ಪ್ರೇರೇಪಿಸುವ ಕೃತಿ. ಇದೂ ಒಳಗೊಂಡಂತೆ ಅನೇಕ ಕೃತಿಗಳು ಕಾವೇರಿ ನದಿಯ ಸುತ್ತವೇ ರಚಿತವಾಗಿವೆ. ಇವೆಲ್ಲ ಕಾವೇರಿಯನ್ನು ಕೇವಲ ನೀರಾಗಿ ಹರಿಯುವ ನದಿಯಂತೆ ಚಿತ್ರಿಸದೆ ಜೀವಂತ ಪಾತ್ರವಾಗಿ, ಜೀವಂತಿಕೆಯ ಅಸ್ಮಿತೆಯ ಭಾಗವಾಗಿ ಕಾಣುವಂತೆ ಪ್ರೇರೇಪಿಸುತ್ತವೆ.

ನಾನು ಕಾವೇರಿಯ ಕುರಿತು ರೋಮಾಂಚನವಾಗುವುದಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ. ಅದು ತಲಕಾಡು. ತಲಕಾಡು ಎಂದರೆ ಕರ್ನಾಟಕ ಇತಿಹಾಸದಲ್ಲಿ ತಲಕಾಡಿನ ಗಂಗರು ನೆನಪಾಗುತ್ತಾರೆ. ಆದರೆ ಅಲ್ಲಿಗೆ ತೆರಳಿದಾಗ ಅದೆಷ್ಟು ತೆರವುಗೊಳಿಸಿದರೂ ಮತ್ತೆ ಮತ್ತೆ ಆವೃತ್ತಗೊಳ್ಳುವ ಈ ಮರಳಿನ ಕಾಡು ತಲಕಾಡಿನ ಆಚೆಗೆ ಕಾಣಿಸುವುದಿಲ್ಲ. ಈ ಪ್ರದೇಶದಲ್ಲಿ ಇಲ್ಲಿಗಷ್ಟೇ ಸೀಮಿತವಾದ ಈ ನಿಗೂಢ ಪ್ರಕೃತಿಯ ಕೃತಿಯ ವಿಸ್ಮಯವನ್ನು ಕಂಡು ಬೆರಗಾಗಿದ್ದು ಸುಳ್ಳಲ್ಲ. ‘ಅಲಮೇಲಮ್ಮ’ಳಿಗಾಗಿ ತನ್ನ ಪಥ ಬದಲಿಸಿದ ಕಾವೇರಿ ಮಾಲಂಗಿಯಲ್ಲಿ ಮಡು(ಸುಳಿ) ಸೃಷ್ಟಿಸಿದಳೆ? ಗಂಡನ ರಕ್ಷಣೆಗಾಗಿ ನಿಂತ ಅಲಮೇಲಮ್ಮಳ ಶಾಪದಿಂದಲೇ ತಲಕಾಡು ಮರುಳಾಯಿತೆ? ಹಾಗೂ ಮೈಸೂರು ಮಹಾರಾಜರಿಗೆ ಮಕ್ಕಳಾಗಲಿಲ್ಲವೆ? ಇದರಲ್ಲಿ ಸತ್ಯ ಯಾವುದು? ಮಿಥ್ ಯಾವುದು? ಇತಿಹಾಸ ಯಾವುದು? ಕಥೆಯಾವುದು? ಐತಿಹ್ಯ ಯಾವುದು? ವಾಸ್ತವ ಯಾವುದು? ಯಾವುದಕ್ಕೂ ಸ್ಪಷ್ಟ ಉತ್ತರ ದೊರಕದ ಆದರೆ ನಮ್ಮ ಮುಂದೆ ಗೋಚರಿಸುತ್ತಿರುವ ಈ ಚಿತ್ರಣವನ್ನು, ಬದಲಾದ ಇತಿಹಾಸವನ್ನು ನಂಬದೇ ಇರುವುದು ಹೇಗೆ? ತಲಕಾಡಿನ ಈ ಕಗ್ಗಂಟಿನ ಪ್ರಸಂಗ ಆಗೆಲ್ಲ ನನಗೆ ಕಾವೇರಿ ಮಹಾತ್ಮೆಯಂತೆಯೇ ತೋರಿತ್ತು.

“ಪುಷ್ಕರಮೇಕೆಂಬೇಯೇನ್ ಉಳಿಸುವುದಕೆ ಮರ್ತು.” / “ಗಂಗೇಚ ಯಮುನೆಚೈವ” ಪ್ರಜ್ಞೆಯನ್ನೀಗ ಜಾಗೃತಗೊಳಿಸಬೇಕಿದೆ.

ಭಾರತ ಪುಣ್ಯ ನದಿಗಳ ನಾಡು. ನಮ್ಮಿಂದ ಒಂದೇ ಒಂದು ಹೊಸ ನದಿಯನ್ನೂ ಸೃಷ್ಟಿಸಲೂ ಸಾಧ್ಯವಿಲ್ಲ. ಇರುವುದನ್ನೇ ಉಳಿಸಿಕೊಳ್ಳಬೇಕು. ಇಂತಹ ಪುಷ್ಕರಗಳು ಅಂತಹ ಮಾನಸಿಕತೆಯನ್ನು ಜಾಗೃತಗೊಳಿಸುವ ವೇದಿಕೆಗಳಾಗಬೇಕು. ನದಿ ನೀರಿಗೆ ಸ್ವಯಂ ಶುದ್ಧೀಕರಣಗೊಳ್ಳುವ ಗುಣವಿದೆ. ತಾರ್ಕಿಕವಾಗಿಯೂ ನೈಸರ್ಗಿಕವಾದ ಆ ಪರಿಸ್ಥಿತಿಗೆ ಅದರಲ್ಲಿ ಸೇರುವ ಪ್ರತಿಯೊಬ್ಬರ ಕಲ್ಮಶಗಳನ್ನೂ, ಪಾಪಗಳನ್ನೂ ನಿವಾರಿಸುವ ಶಕ್ತಿಯಿರುತ್ತದೆ. ಆದರೆ ಅದನ್ನು ಬಿಟ್ಟು ತನ್ನ ಉಳಿವಿಗೇ ಪರದಾಡುತ್ತಿರುವ ಭಾರತದ ಪುಣ್ಯ ನದಿಗಳು ಐಸಾಕ್ ನ್ಯೂಟನ್‍ನ ಮೂರನೇ ನಿಯಮದಂತೆ ಮುನಷ್ಯ ಕ್ರಿಯೆಗಳ ನಿರಂತರ ಶೋಷಣೆಗೆ ಒಳಗಾಗಿ ಪ್ರತಿಕ್ರಿಯಾತ್ಮಕವಾದ ಪ್ರತಿಕೂಲ ಪರಿಸ್ಥಿತಿಯನ್ನೇ ನಿರ್ಮಿಸುತ್ತವೆ.

ಲೇಖಕರಾದ ಪೂರ್ಣಚಂದ್ರ ತೇಜಸ್ವಿ ತಮ್ಮ ಮನೆಯ ಬಳಿ ಬರುತ್ತಿದ್ದ ನೀರಿನ ಸಣ್ಣ ಧಾರೆಯನ್ನು ಹುಡುಕುತ್ತಾ ಅದನ್ನು ವಿಶಾಲವಾಗಿ ಬಿಡಿಸಲು ಹೋಗುತ್ತಾರೆ. ಆಗ ಇನ್ನೂ ದೊಡ್ಡದಾದ ಧಾರೆ ಬಂದು ನೀರು ಯತೇಚ್ಛವಾಗಿ ಬರಬಹುದೆಂದು ಅವರ ನಂಬಿಕೆಯಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇದ್ದ ಧಾರೆಯೂ ಕಮರಿಹೋಯಿತು ಎಂಬುದನ್ನು ಬರೆಯುತ್ತಾರೆ. ಪರಿಸರದೊಂದಿಗಿನ ಈ ಅನುಭವ ನಮಗೆ ಪಾಠ. ನದಿ ಮೂಲಗಳನ್ನು, ಹರಿಯುವಿಕೆಯ ಸಹಜ ಪಾತ್ರಗಳನ್ನು ಹಾಗೂ ನೀರು ಇಳಿದು ಹೋಗುವುದಕ್ಕೆ ಇರುವ ಮಾರ್ಗಗಳನ್ನೇ ನಾಶಗೊಳಿಸುತ್ತಿರುವ ಮನುಷ್ಯರ ಮುಂದೆ ಕೇವಲ ವಿಕೋಪ, ವಿನಾಶಗಳಷ್ಟೇ ಎದುರಾಗಲಿದೆ. ಇದು ಬೆಂಗಳೂರಿನವರಿಗೆ ಅರ್ಕಾವತಿಯೆಂಬುದು ನದಿಯಾಗಿ ಎಂದೋ ಸತ್ತುಹೋಗಿದೆ. ಅವರಿಗೆ ನೆನಪಿಗೆ ಬರುವುದು ಅರ್ಕಾವತಿ ಎಂಬ ನೀರುತ್ಪಾದಿಸಲಾಗದ ಕೃತಕ ಬಡಾವಣೆ ಹಾಗೂ ಡಿನೋಟಿಫಿಕೇಶನ್ ಹಗರಣ.

“ಗಂಗೇಚ ಯಮುನೆಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂದು ನಾವು ಪ್ರತಿನಿತ್ಯ ನಮ್ಮ ಬೊಗಸೆಯಲ್ಲಿರುವ ನೀರನ್ನೇ ಆ ಎಲ್ಲಾ ನದಿಗಳ ಪಾಪನಾಶಿ, ಪರಿಶುದ್ಧ ನೀರೆಂದು ಪ್ರಾರ್ಥಿಸಿ ನಮ್ಮ ಬಾಹ್ಯ ಮತ್ತು ಆಂತರ್ಯವನ್ನು ಶುದ್ಧಗೊಳಿಸಲು ಬಳಸುತ್ತೇವೆ. ಈಗ ನಮ್ಮಿಂದ ಕಲುಶಿತಗೊಂಡ ಆ ಎಲ್ಲಾ ನದಿಗಳ ನೀರನ್ನು ಶುದ್ದೀಕರಣಗೊಳಿಸಬೇಕಾದ ಸಮಯ ಭಾರತದ ಮುಂದಿದೆ. ರಾಜ್ಯಗಳ, ಪ್ರದೇಶಗಳ, ದೇಶಗಳ ನಡುವಿನ ನದಿ ವಿಭಜನೆಗಳ ಕಾಲದಿಂದ ಮುಂದುವರೆಯುತ್ತಿರುವ ಭಾರತವೀಗ ನದಿ ಜೋಡಣೆಗಳ ಪರ್ವಕಾಲದಲ್ಲಿದೆ. ಮುನುಷ್ಯ, ಧಾರ್ಮಿಕ ಬದುಕಿನೊಂದಿಗೆ ಪ್ರಕೃತಿಯ ಜೀವಂತಿಕೆಯನ್ನು ಮೇಳೈಸುವ ನದಿಗಳ ಸೃಷ್ಟಿಯ, ಹರಿಯುವಿಕೆಯ ಪುಣ್ಯ ಪೌರಾಣಿಕ ಕಥನಗಳು, ನಂಬಿಕೆಗಳು ಭಾರತದ ಜನಮಾನಸದ ಆಂತರ್ಯದಲ್ಲಿ ಜತನವಾಗಿ ಹುದುಗಿಹೋಗಿದೆ. ಆ ಪ್ರಜ್ಞೆಯನ್ನೀಗ ಅಗತ್ಯವಾಗಿ ಜಾಗೃತಗೊಳಿಸಬೇಕಿದೆ. ಉತ್ತಮ ಪ್ರಜ್ಞೆಯಿಂದ ಅತ್ಯುತ್ತಮ ಪರಿಸರ ರೂಪುಗೊಳ್ಳುತ್ತದೆ.

ಹೀಗೆ ವರ್ಷಪೂರ್ತಿ ಹರಿಯುತ್ತಿದ್ದ ನದಿಯಿಂದು ಮನುಷ್ಯರು ನಿರ್ಮಿಸುತ್ತಿರುವ ಅನೇಕ ರೀತಿಯ ಅಡಚಣೆಗಳಿಂದಾಗಿ ಬಂಗಾಳ ಕೊಲ್ಲಿಗೆ ಸೇರುವ ಮುನ್ನವೇ ಬರಿದಾಗಿ ಹೋಗುತ್ತಿದೆ. 177 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಪುಷ್ಕರ ಕಾವೇರಿಯ ಭವಿಷ್ಯ, ಹಾಗೂ ಕಾವೇರಿಯನ್ನೇ ನೆಚ್ಚಿರುವ ಜನರ ಬದುಕನ್ನು ಬದಲಾಯಿಸಲು ಸಂಧಿಕಾಲವಾಗಲಿ. ಜನರ ಮನಸ್ಥಿತಿ ಹಾಗೂ ಸರಕಾರಗಳ ಆಸ್ಥೆಯಲ್ಲಿ ಬದಲಾವಣೆ ಬರುವಂತಾದರೆ ಅದೇ ಕಾವೇರಿಗೆ ಸಲ್ಲಿಸಬಹುದಾದ ನಿಜವಾದ ಪುಷ್ಕರ. ಹಾಗಿಲ್ಲವಾದರೆ ಅದು “ಪುಷ್ಕರಮೇಕೆಂಬೇಯೇನ್ ಉಳಿಸುವುದಕೆ ಮರ್ತು” ಎಂಬಂತಾಗುತ್ತದೆ. ಭಕ್ತಿಯ ಮೀಯುವಿಕೆಯ ಜೊತೆ ಶ್ರದ್ಧೆಯ ಪೊರೆಯುವಿಕೆಯಿಂದ ಕಾವೇರಿಯ ಜೀವಂತಿಕೆ, ನಿತ್ಯ ಹರಿದ್ವರ್ಣಿಕೆ, ಹಾಗೂ ಪಾವಿತ್ರ್ಯತೆ ಉಳಿಯಲು ಸಾಧ್ಯ. ಕಾವೇರಿಯಂತಹ ದೇಶದ ಪ್ರತಿಯೊಂದು ನದಿ ಉಳಿದಾಗ ಮಾತ್ರ ಮನುಷ್ಯರ ಬದುಕು, ವಿಕಸನ ಸಾಧ್ಯ. ಅನಗತ್ಯ ಮನುಷ್ಯ ತೊಡಕುಗಳನ್ನು ಕಡಿತಗೊಳಿಸಿ ನದಿಯನ್ನು ಅದರ ಪಾಡಿಗೆ ಬಿಟ್ಟಾಗ ಮಾತ್ರ ಅದರ ಜೀವಂತಿಕೆ ಹಾಗೂ ಪರಿಸರದ ಜೀವಂತಿಕೆ ಉಳಿಯುತ್ತದೆ.

ಈ ಬಾರಿಯ ಕಾವೇರಿ ಪುಷ್ಕರದಲ್ಲಿ, ನದಿಯೂ ಒಳಗೊಂಡಂತೆ ಯಾರಿಗೂ ಯಾವುದೇ ರೀತಿಯ ಹಾನಿಯಾಗದಿರಲಿ.

ಕೊನೆಯಲ್ಲಿ:  ಕಾವೇರಿಗುಂಟದ ಸಮಸ್ಯೆ ಎದುರಾದಾಗಲೆಲ್ಲ, ಕಾವೇರಿ ಯಾವ ಸಂಧಿ? ಅದು ಯಾರಿಗೆ ಆಗಮ? ಯಾರಿಗೆ ಆದೇಶ ಮತ್ತು ಯಾರಿಗೆ ಲೋಪ? ಎಂಬ ಮನುಷ್ಯ ರಾಜಕಾರಣದ ತತ್ಕಾಲೀನ ಪರಿಸ್ಥಿತಿಯನ್ನು ಹೊರತುಪಡಿಸಿ ನೋಡಿದಾಗ, ಭವಿಷ್ಯದಲ್ಲದು ಎಲ್ಲರಿಗೂ ಲೋಪವಾಗುವ ಅಪಾಯವೇ ಎದ್ದು ಕಾಣುತ್ತಿದೆ. ಸಮುದ್ರದ ನೀರನ್ನು ಶುದ್ಧವಾಗಿ ಪರಿವರ್ತಿಸಿ ಬಳಸಿಕೊಳ್ಳುವ, ಹಿಂಗಾರಿನ ಮಳೆಯನ್ನು ಸಮಗ್ರವಾಗಿ ಬಳಸಿಕೊಳ್ಳುವ ಮೂಲಕ ಹಾಗೂ ತೀವ್ರ ನೀರಿನ ಅವಶ್ಯಕತೆಯಿರುವ ಕೃಷಿ ಬೆಳೆಗಳ ಪದ್ಧತಿ ಹಾಗೂ ಕೈಗಾರಿಕೆಗಳನ್ನು ಕಾವೇರಿಯ ‘ಉಗಮ ಸಂಧಿ’ ಕರ್ನಾಟಕ ಹಾಗೂ ತಮಿಳುನಾಡಿನ ‘ಅವಕಾಶ ಸಂಧಿ’ಗಳು ಒಟ್ಟಾಗಿ ಭವಿಷ್ಯಕ್ಕೆ ಭದ್ರವಾದ ಜಲಸಂಧಿಯನ್ನು ಕಾಯ್ದಿಡುವುದಕ್ಕೆ ಈ ಬಾರಿಯ ಕಾವೇರಿ ಪುಷ್ಕರದಿಂದ ಸಾಧ್ಯವಾಗಲಿ.

–ಶ್ರೇಯಾಂಕ ಎಸ್ ರಾನಡೆ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!