ಅಂಕಣ

ಛೇ, ಇಂತಹ ಶಿಕ್ಷಕರೇ ದೇಶದ ತುಂಬಾ ಇದ್ದಿದ್ದರೆ!

ಆ ಅನುಭವವೇ ಒಂದು ರೋಮಾಂಚನ. ಕಾಲೇಜ್‍ನಲ್ಲಿ ಶಿಕ್ಷಕರ ದಿನಾಚರಣೆ ಕುರಿತು ಮಾತಾಡಬೇಕಿದ್ದ ಕಾರಣ ಏನನ್ನಾದರು ಹೊಸದನ್ನು ಹುಡುಕುತಿದ್ದೆ. ಆಗ ನೆನಪಾದದ್ದು ರಾಧಾಕೃಷ್ಣನ್ ಮತ್ತು ಸ್ಟಾಲಿನ್ ಭೇಟಿ. ನೀವು ಒಮ್ಮೆ ಓದಿ ನೋಡಬೇಕು. ರಷ್ಯಾದಲ್ಲಿ ಸ್ಟಾಲಿನ್ ಹೆಗಲ ಮೇಲೆ ಕೈ ಹಾಕಿ ಬೀಳ್ಕೊಂಡ ರಾಧಾಕೃಷ್ಣನ್ ಕಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದಕ್ಕೂ ಮುನ್ನ ಅವರಿಬ್ಬರ ನಡುವೆ ನಡೆದ ಅರ್ಧ ಗಂಟೆಯ ಸಂಭಾಷಣೆಯನ್ನು ಒಮ್ಮೆ ಓದಿ ನೋಡಿ. ಕೇವಲ ಮೈ ನವಿರೇಳುವುದಿಲ್ಲ, ಅದಕ್ಕಿಂತ ಮಿಗಿಲಾದ ಅನುಭವ ನಿಮ್ಮದಾಗುತ್ತದೆ. ಶಿಕ್ಷಕನೊಬ್ಬ ಕೇವಲ ಶಿಕ್ಷಕನಾಗದೆ ಸಾಮಾಜಿಕ ಚಿಂತಕ, ರಾಷ್ಟ್ರ ಚಿಂತಕ, ಭಾಷಾ ಚಿಂತಕ, ರಾಜಕೀಯ ಮುತ್ಸದ್ಧಿ, ಎಲ್ಲಕ್ಕಿಂತ ಹೆಚ್ಚಾಗಿ ಅತ್ಯುತ್ತಮ ದೇಶಪ್ರೇಮಿ ಹೇಗಾಗಬಹುದು ಎಂದು ಅರ್ಧಗಂಟೆಯ ಮಾತುಗಳಲ್ಲಿ ರಾಧಾಕೃಷ್ಣನ್ ಮೇಷ್ಟ್ರು ತೋರಿಸಿಕೊಟ್ಟಿದ್ದಾರೆ.

ರಾಧಾಕೃಷ್ಣನ್ ರಷ್ಯಾದಲ್ಲಿ ರಾಯಭಾರಿಯಾಗಿದ್ದ ಕೊನೆಯ ದಿನಗಳವು. 1952ರ ಎಪ್ರಿಲ್ 5ರಂದು, ಅರ್ಧಗಂಟೆಯ ಕಾಲ ಅವರು ಸ್ಟಾಲಿನ್‍ನೊಂದಿಗೆ ಮಾತಾಡುತ್ತಾರೆ. ಹೆಚ್ಚುಕಡಿಮೆ ಅದು ಅವರ ಕಡೆ ಭೇಟಿ. ಪ್ರಾಯಶಃ ಆ ಅರ್ಧಗಂಟೆಗಳ ಭೇಟಿ ರಾಧಾಕೃಷ್ಣನ್ ಅವರಿಗಿದ್ದ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಭಾಷಾ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಬಗ್ಗೆ ಇದ್ದ ನಿಖರ ಮಾಹಿತಿ ಹಾಗೂ ಚಿಂತನೆಗಳನ್ನ ತೋರಿಸಿಬಿಡುತ್ತದೆ. ಮಾಸ್ಕೋದ ಇಂಡೋ ಎಂಬೆಸ್ಸಿ ಈ ಘಟನೆಯ ಬಗ್ಗೆ ವರದಿ ಮಾಡುತ್ತದೆ.

ಇಡಿಯ ಅರ್ಧಗಂಟೆಯ ಮಾತುಗಳ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೆಯಾಗುತ್ತದೇನೋ. ತಮ್ಮನ್ನು ರಷ್ಯಾದಲ್ಲಿ ಅತ್ಯಾದರದಿಂದ ನೋಡಿಕೊಂಡಿದಕ್ಕೆ ವಂದಿಸಿದ ರಾಧಾಕೃಷ್ಣನ್ ಅಪ್ಪಟ ಡಿಪ್ಲಮೇಟ್‍ನಂತೆ ಮುಂದೆ ಮಾತಾಡುತ್ತಾರೆ. ಪ್ರಾಯಶಃ “ಶಿಕ್ಷಕ ರಾಷ್ಟ್ರಪತಿ”ಯಾಗಿದ್ದ ರಾಧಾಕೃಷ್ಣನ್‍ಗೆ ದೇಶದ ಬಗ್ಗೆ ಇದ್ದ ಆತ್ಮಾಭಿಮಾನ ತೋರಿಸುವುದಕ್ಕೆ ಈ ಒಂದು ನಿದರ್ಶನ ಸಾಕೇನೋ?

ಆ ಕಾಲಕ್ಕೆ ಭಾರತದಲ್ಲಿ ರಷ್ಯಾ ರಾಯಾಭಾರಿಯಾಗಿದದ್ದು ಬೋರ್ಜ್ಯಾಂಕೊ. ಭಾರತದಲ್ಲಿ ಆತನ ಕಾರ್ಯವೈಖರಿಗಳ ಕುರಿತು ಸಾಕಷ್ಟು ಅಪವಾದಗಳಿರುತ್ತದೆ. ದೇಶದ ಸರ್ಕಾರದ ಕುರಿತು ಸಾಕಷ್ಟು ಟೀಕಿಸುವಂತಹ ಬರಹಗಳನ್ನು ಬರೆದಿರುತ್ತಾನೆ. ಸ್ಟಾಲಿನ್ ಗಮನಕ್ಕೆ ಕೂಡ ಈ ಪ್ರಕರಣ ಬಂದಿರುತ್ತದೆ. ಪ್ರಧಾನಿ ನೆಹರೂ ಕೂಡ ಇದರ ಬಗ್ಗೆ ಮಾತಾಡಿರುತ್ತಾರೆ ಅಷ್ಟೇ ಅಲ್ಲದೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿರುತ್ತಾರೆ ಕೂಡ. ಆದರು ಆತನನ್ನು ವಾಪಾಸ್ ಕಳಿಸಲು ಸಾಧ್ಯವಾಗಿರುವುದಿಲ್ಲ. ಸ್ಟಾಲಿನ್‍ನಲ್ಲಿ ಮಾತಾಡುತ್ತಾ ರಾಧಾಕೃಷ್ಣನ್ “ನನ್ನಲ್ಲಿ ನಿಮ್ಮದೇನಾದರು ಪ್ರಶ್ನೆಗಳಿವೆಯಾ?” ಎಂದು ಕೇಳುತ್ತಾರೆ. ಕೂಡಲೇ ಸ್ಟಾಲಿನ ಬೋರ್ಜ್ಯಾಂಕೊ ಬಗ್ಗೆ ಕೇಳುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿಯೇ ಇದ್ದ ಸಲಹೆಗಾರ ವೈಶಿಸ್ಕಿಯಲ್ಲಿ ಪ್ರಕರಣದ ಬಗ್ಗೆ ಮತ್ತೊಮ್ಮೆ ಕೇಳಿ ಕೂಡಲೇ ಆತನನ್ನು ವಾಪಾಸ್ ಕರೆಸಲು ಆದೇಶಿಸುತ್ತಾರೆ. ಮತ್ತೊಮ್ಮೆ ರಾಧಾಕೃಷ್ಣನ್ ಅವರಲ್ಲಿ ನೇರವಾಗಿ ರಾಯಭಾರಿಗಳದ್ದೇನಾದರು ಸಮಸ್ಯೆ ಇದ್ದರೆ ತಿಳಿಸಲು ಹೇಳುತ್ತಾರೆ. ಈ ಮಾತನ್ನು ಹೇಳುವಾಗ ಸ್ಟಾಲಿನ್‍ನಲ್ಲಿ ಸರ್ವಾಧಿಕಾರಿ ಧೋರಣೆಯಿಲ್ಲದೆ ಅತ್ಯಂತ ಸಾವಧಾನದಿಂದ ಹೇಳುತ್ತಾನೆ ಎಂದು ವರದಿ ಒತ್ತಿ ಹೇಳುತ್ತದೆ. ಆದರೆ ಈ ಪ್ರಶ್ನೆಗೆ ರಾಧಾಕೃಷ್ಣನ್ ನೀಡಿದ ಉತ್ತರ ಜಗತ್ತಿನ ಮೊಂಡ ಸರ್ವಾಧಿಕಾರಿ ಮುಂದಿದ್ದ ಅವರ ಛಾತಿಯನ್ನು ತೋರಿಸುತ್ತದೆ. “ನಮ್ಮ ಮಧ್ಯೆ ಇಲ್ಲಿ ಒಡಮೂಡಿರುವ ಸ್ನೇಹ-ಸಂಬಂಧ, ನಮ್ಮ ದೇಶದಲ್ಲಿರುವ ನಿಮ್ಮ ರಾಯಭಾರಿಗಳಿಂದ ಹಾಳಾಗಬಾರದು” ಎಂದು ಬಿಡುತ್ತಾರೆ. ಒಮ್ಮೆ ಯೋಚಿಸಿ ನೋಡಿ. ಆಗ ಭಾರತ ಜಗತ್ತಿನಲ್ಲಿ ಇನ್ನೇನು ಕಣ್ಣಬಿಡುತ್ತಿರುವ ಕೂಸು, ರಷ್ಯಾ ಆಗಲೇ ಮಹಾಯುದ್ಧದಲ್ಲಿ ಜಗತ್ತಿಗೆ ತನ್ನ ಸಾಮರ್ಥ್ಯ ತೋರಿಸಿದ್ದ ದಿಗ್ವಜಯೀ ರಾಷ್ಟ್ರ.

ಇಂತಹ ಮಾತನ್ನು ಹೇಳಬೇಕಾದರೆ ದೇಶದ ಸಾರ್ವಭೌಮತೆ ಹಾಗೂ ಜಾಗತಿಕ ಮಟ್ಟದಲ್ಲಿ ದೇಶದ ಗೌರವದ ಕುರಿತು ಅದೆಂತಹ ಕಾಳಜಿ ಅವರಿಗಿದ್ದಿರಬಹುದು. ಅರ್ಧಗಂಟೆಯ ಮಾತುಕತೆಯಲ್ಲಿ ಹೆಚ್ಚೂ ಕಡಿಮೆ ಆಗ ತಾನೇ ನಡೆದ ಭಾರತದ ಸಾರ್ವತ್ರಿಕ ಚುನಾವಣೆ, ದೇಶದ ಆಂತರಿಕ ಸಮಸ್ಯೆಗಳು, ಮುಂದುವರಿದ ದೇಶಗಳಿಂದ ಭಾರತದ ಮೇಲಾಗುತ್ತಿರುವ ದೌರ್ಜನ್ಯ, ಥರ್ಡ್‍ವರ್ಡ್ ರಾಷ್ಟ್ರಗಳ ಸಮಸ್ಯೆಗಳು, ಏಶಿಯಾ ಮೇಲಾಗುತ್ತಿರವ ಅವಮಾನಗಳು ಎಲ್ಲದರ ಕುರಿತು ಅಪ್ಪಟ ರಾಜಕೀಯ ಚತುರನಂತೆ ಮಾತಾಡುತ್ತಾರೆ. ಸ್ಟಾಲಿನ್ ಬಾಯಲ್ಲಿ “ಏಶಿಯಾದ ಜನರಿಗಾಗಿ ನಾವೆಲ್ಲ ಒಟ್ಟಾಗಬೇಕು” ಎಂದು ಹೇಳಿಸುತ್ತಾರೆ. ಅಷ್ಟೇ ಪ್ರಬಲವಾಗಿ ಭಾರತದ ಅಲಿಪ್ತ ನೀತಿ ಮತ್ತು ಚಳುವಳಿಯನ್ನು ಸಮರ್ಥಿಸಿಕೊಳ್ಳುತ್ತಾರೆ, ವಿಶ್ವಸಂಸ್ಥೆಯಲ್ಲಿ ಯೂರೋಪಿನ ಹಿಡಿತ, ಸಮಾಜವಾದ ಎಲ್ಲದರ ಕುರಿತು ಮಾತಾಡುತ್ತಾರೆ. ವರದಿಯ ಪ್ರಕಾರ ಸ್ಟಾಲಿನ್ ಮಾತುಕತೆಯ ಮಧ್ಯದಲ್ಲಿ ಹಸನ್ಮುಖಿಯಾಗಿದ್ದ ಎಂಬುದು ವಿಶೇಷ. ಇಷ್ಟೆಲ್ಲ ಆದಮೇಲೆ ಅವರು ಸ್ಟಾಲಿನ್ ಹೆಗಲ ಮೇಲೆ ಕೈ ಹಾಕುವುದು. ಇದೊಂದು ಭೇಟಿಯಿಂದ ಈಗಲೂ ಭಾರತ-ರಷ್ಯಾ ಸಂಬಂಧ ಸದಾ ಹಸಿರಾಗಿರುವುದೆನೋ ಎಂದು ಎನಿಸುತ್ತದೆ.

ರಾಷ್ಟ್ರಪತಿಯಾಗಿದ್ದ ಸಂದರ್ಭ ಅವರು ಆಡಿದ ಕೆಲವು ಮಾತುಗಳು ಪ್ರಾಯಶಃ ಅಂದಿನ ಭಾರತಕ್ಕೆ ತಪರಾಕಿ ಬಾರಿಸಿದಂತೆಯೇ ಏನೋ? ಎಲ್ಲದಕ್ಕೂ ಬ್ರಿಟಿಷ್ ಆಳ್ವಿಕೆಯನ್ನು ದೂರುತ್ತಿದ್ದವರಿಗೆ “ಸ್ವಾತಂತ್ರ್ಯಗೊಂಡ ನಂತರ ಭಾರತದ ಸಮಸ್ಯೆಗಳಿಗೆ ಬ್ರಿಟಿಷ್‍ರ ಕಡೆ ಬೆರಳು ಮಾಡುವುದು ಅವಿವೇಕತನ” ಎನ್ನುತ್ತಾರೆ. ಸಂಸದರನ್ನುದ್ಧೇಶಿಸಿ ಮಾತಾಡುತ್ತಾ “ವೈಯಕ್ತಿಕ ಹಿತದ ಬಗ್ಗೆ ಚಿಂತಿಸುವವರು ಜನಪ್ರತಿನಿಧಿಗಳಾಗುವುದಕ್ಕೆ ಅಯೋಗ್ಯರು” ಎಂಬ ಮಾತು ಈಗಲೂ ಪ್ರಸ್ತುತ. ಅವರು ರಾಷ್ಟ್ರಪತಿಯಾದ ದಿನ ಅವರಿಗೆ ಶುಭಾಷಯ ಕೋರುವಾಗ ಬ್ರಿಟಿಷ್ ತತ್ವಶಾಸ್ತ್ರಜ್ಞ ಮತ್ತು ಗಣಿತಜ್ಞ ಬೆರ್ಟ್ರೆಂಡ್ ರೆಸೆಲ್ ಇದು “ತತ್ವಶಾಸ್ತ್ರಕ್ಕೆ ಸಂದ ಗೌರವ” ಎನ್ನುತ್ತಾನೆ, ಮುಂದುವರಿದು “ಪ್ಲಾಟೋ ಫಿಲಾಸಫರ್ ಕಿಂಗ್‍ಗಳನ್ನು ಬಯಸಿದ್ದ, ಇಂದು ಭಾರತ ಅದನ್ನು ಕಂಡಿದೆ” ಎಂದು ಮನತುಂಬಿ ಹೊಗಳುತ್ತಾನೆ.

ಇಂದು ವಿದ್ಯಾರ್ಥಿಗಳಿಗೆ ದೇಶವನ್ನೊಡೆಯುವ, ದೇಶದ ಐಕ್ಯತೆಗೆ, ಸಾರ್ವಭೌಮತೆಗೆ ಧಕ್ಕೆ ತರುವ, “ಭಾರತ್ ತೇರೆ ಟುಕ್ಡೆ ಕರೇಂಗೆ” ಎಂದು ಮಕ್ಕಳ ಬಾಯಲ್ಲಿ ಹೇಳಸಿ ಯಾರದ್ದೋ ಮಕ್ಕಳನ್ನು ಹೊಂಡಕ್ಕೆ ತಳ್ಳಿ ತಮ್ಮ ಪಾಡಿಗೆ ತಾವು ಬೆಚ್ಚಗೆ ಹೊದ್ದು ಮಲಗುವ, ವಿಶ್ವವಿದ್ಯಾಲಯಗಳನ್ನೇ ಭಯೋತ್ಪಾದನಾ ಉತ್ಪಾದನಾ ಕೇಂದ್ರವಾಗಿರಿಸಿಕೊಂಡ, ರಾಜಕೀಯವನ್ನು ಕ್ಯಾಂಪಸ್‍ಗೆ ತಂದು ಹೊಲಸೆಬ್ಬಿಸುವ, ಪ್ರೊಫೆಸರ್’ಗಳ ಮಧ್ಯೆ ರಾಧಾಕೃಷ್ಣನ್ ಏಕೋ ಮಾಯವಾದರೇನೋ ಎನಿಸಿಬಿಡುತ್ತಿದೆ. ಶಿಕ್ಷಕರ ದಿನಾಚರಣೆ ಬಂದ ಕೂಡಲೇ ಪ್ರಶಸ್ತಿಗಳನ್ನು ಬಾಚಲು ಅರ್ಜಿಹಾಕಿಕೊಂಡು ರಾಜಕಾರಣಿಗಳ ಹಿಂದೆ ನಿಂತು ಹಲ್ಲು ಗಿಂಜುವ ಶಿಕ್ಷಕರನ್ನು ಕಂಡಾಗ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ನೆನಪಾಗುತ್ತಾರೆ. ಶಿಕ್ಷಣ ಸಂಸ್ಥೆಗಳನ್ನು ದುಡ್ಡಿಗಾಗಿಯೇ ನಾಯಿಕೊಡೆಗಳಂತೆ ತಲೆಯೆಬ್ಬಿಸುವವರನ್ನು ನೋಡಿದಾಗ ಎಲ್ಲಿ ಹೋದರು ಎಚ್ ನರಸಿಂಹಯ್ಯ ಎನಿಸುತ್ತದೆ. ಶಿಕ್ಷಣ ಕ್ಷೇತ್ರದ ಹಗರಣ, ಬೂಟಾಟಿಕ ರಂಪಾಟ ಎಲ್ಲಾ ನೋಡಿದಾಗ ಮತ್ತೆ ಮತ್ತೆ ಇವರೆಲ್ಲಾ ನೆನಪಾಗುತ್ತಾರೆ.

ಛೇ, ಇಂತಹ ಶಿಕ್ಷಕರೇ ದೇಶದ ತುಂಬಾ ಇದ್ದಿದ್ದರೆ! ಎನಿಸಿಬಿಡುತ್ತಿದೆ.

-ರೋಹಿತ್ ಬಾಸ್ರಿ

ತೃತೀಯ ಬಿ ಎ, ಪತ್ರಿಕೋದ್ಯಮ ವಿಭಾಗ

ಎಸ್ ಡಿ ಎಮ್ ಕಾಲೇಜು, ಉಜಿರೆ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!