ಅಂಕಣ

ಅಪ್ಪ ಎಂಬ ಅಂತರ್ಮುಖಿಯ ಅಂತರಾಳ

ಪ್ರೀತಿಗೆ ಪರ್ಯಾಯ ಹೆಸರೇ ತಾಯಿ, ತಾಯಿಯ ಪ್ರೀತಿಯು ತುಲನೆಗೂ ಮೀರಿದ್ದು. ಹಾಗೆಯೇ  ಜಗತ್ತಿನಲ್ಲಿ  ಅತ್ಯಂತ ಅವ್ಯಕ್ತ ಪ್ರೀತಿಯೆಂದರೆ ಅದು ತಂದೆಯದು. ಅಪ್ಪ ಎಂಬ ಜೀವಿ ಬಹುತೇಕ ಅಂತರ್ಮುಖಿ, ಆತನ ಅಂತರಾಳವನ್ನು ಅರಿಯುವದು ಅಷ್ಟು ಸುಲಭವಲ್ಲ. ಮೇಲ್ನೋಟಕ್ಕೆ  ನಿಷ್ಠುರನಾಗಿ ಮನದಲ್ಲಿ ಹುದುಗಿದ  ಭಾವನೆಗಳನ್ನೂ  ಮುಕ್ತವಾಗಿ ಸಾರ್ವಜನಿಕವಾಗಿ  ವ್ಯಕ್ತಪಡಿಸುವ ಜೀವಿಯಲ್ಲದಿದ್ದರೂ, ಅಪ್ಪ ವಾತ್ಸಲ್ಯರಹಿತ, ಅಕ್ಕರೆಯಿಲ್ಲದ ನಿರ್ಲಿಪ್ತಜೀವಿಯಂತೂ ಖಂಡಿತ ಅಲ್ಲ. ಮನದಾಳದ ಪ್ರೀತಿ/ಪ್ರೇಮವನ್ನು ವ್ಯಕ್ತ ಪಡಿಸದಿದ್ದರೆ ಆ ಪ್ರೀತಿಗೆ ಬೆಲೆಯೇ ಇಲ್ಲ ಎಂದು ಕೆಲವರು ಹೇಳುವುದಂಟು. ಆದರೆ ಅಪ್ಪನ ಅವ್ಯಕ್ತ ಪ್ರೀತಿ ಇದಕ್ಕೆ ಅಪವಾದ! ಮಹಾಭಾರತದಲ್ಲಿ ಯುಧಿಷ್ಟಿರ ಯಕ್ಷನ ಪ್ರಶ್ನೆಗೆ ಉತ್ತರಿಸುವಾಗ  ತಾಯಿಯನ್ನು ಪೃಥ್ವಿಗಿಂತಲು ಉಚ್ಚ ಸ್ಥಾನಕ್ಕೆ ಮತ್ತು ತಂದೆಯನ್ನು ಆಕಾಶಕ್ಕಿಂತಲೂ ಎತ್ತರದ ಸ್ಥಾನಕ್ಕೆ ಹೋಲಿಸಿದ್ದಾನೆ.  

ಮದುವೆಯಾಗಿ ಹೊಸತರಲ್ಲಿ ಮಗುವಿಗಾಗಿ ಹಾತೊರೆದು, ಹೊಸ ಅತಿಥಿಯ ಬರುವಿಕೆಯ ನಿರೀಕ್ಷೆಯಲ್ಲಿ ತನ್ನ ಸರ್ವಸ್ವವನ್ನು  ಧಾರೆ ಎರೆದು….ಮುದ್ದು ಕಂದನನ್ನು ಮುದ್ದಾಡುವ ಒಲುಮೆಯ ಮೂರ್ತಿ ಅಪ್ಪ. ಮಗು ಬೆಳೆದಂತೆ ತಂದೆಯ ಪ್ರೀತಿ ಕಡಿಮೆಯಾಗುತ್ತಾ? ಖಂಡಿತವಾಗಿಯೂ ಇಲ್ಲ. ಬಾಳನೌಕೆಯ ಹುಟ್ಟುಹಾಕುತ್ತ, ಮುಳುಗದಂತೆ ನೋಡಿಕೊಳ್ಳುವ  ಜವಾಬ್ದಾರಿಹೊತ್ತ ನಾವಿಕನ ಪಾತ್ರ ತಂದೆಯದು. ಮಗು ಬೆಳೆದಂತೆ ಚೆಲ್ಲಾಟ, ಚೇಷ್ಟೆಗಳು ಹೆಚ್ಚಾದಂತೆ ತಂದೆಯ ಸಹನೆಯ ಪರೀಕ್ಷೆ ಪ್ರಾರಂಭವಾಗುತ್ತದೆ. ಕೆಲಸದ ಒತ್ತಡ, ಸಂಸಾರದ ಜವಾಬ್ದಾರಿ ಒಮ್ಮೊಮ್ಮೆ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತದೆ.  ಮಕ್ಕಳ  ಸಂತೋಷಕ್ಕೋಸ್ಕರ ಯಾವ ತ್ಯಾಗಕ್ಕೂ ಸಿದ್ಧನಾಗುವ ತಂದೆಯು, ಸಿನೆಮಾದಲ್ಲಿ ತೋರಿಸಿದಂತೆ ‘ಐ ಲವ್ ಯು ಮೈ ಸನ್’’ ಎಂದು ಹೇಳಲಾರ, ತಾಯಿಯಂತೆ ಮಕ್ಕಳ ತಪ್ಪುಗಳನ್ನು ಮನ್ನಿಸಿ-ಮುಚ್ಚಿಟ್ಟು ಸರಳವಾಗಿ ಇರಲಾರ. ಮಗು ಓದದಿದ್ದಾಗ ರೇಗಿ, ಕೆಲಮ್ಮೊಮ್ಮೆ ಕಾರಣವಿಲ್ಲದೆ ಸಿಟ್ಟಾಗಿ ನಾಲ್ಕು ಏಟು ಹಾಕಿ ಮಗು ಮಲಗಿದ ಮೇಲೆ ಅದರ ತಲೆಮೇಲೆ ಕೈ ಇತ್ತು, ಕೂದಲನ್ನು ನೇವರಿಸಿ, ಹಣೆಗೆ ಮುತ್ತಿಕ್ಕಿ ಮನಸಲ್ಲಿಯೇ ರೋದಿಸಿ, ಪ್ರೀತಿಸಿ ಪಶ್ಚಾತಾಪಿಸುವದುಂಟು. ಮಕ್ಕಳ ಮತ್ತು ತನ್ನ ಸಂಸಾರದ ಸುಖ ಶಾಂತಿಗೋಸ್ಕರ ವಿಷಮ ಪರಿಸ್ಥಿತಿಯಲ್ಲೂ ತನ್ನ ಕಣ್ಣೀರನ್ನು ಹೃದಯದ ಕನ್ನ೦ಬಾಡೆಯಲ್ಲೇ ತಡೆದು ಕೆಲಬಾರಿ ಮಂದಹಾಸಬೀರುವ ಅಂತರ್ಮುಖಿ ಅಪ್ಪ!  ಆದರೆ ಅಪ್ಪನ ಅಂತ:ಕರಣವನ್ನು ಕೇವಲ ಅದಕ್ಕೆ ಸಾಕ್ಷಿಯಾದ ತಾಯಿ ಹಾಗೂ ಇನ್ನೊಬ್ಬ ತಂದೆ ಮಾತ್ರ  ಊಹಿಸಬಲ್ಲರು. ಮಕ್ಕಳು ದೊಡ್ಡವರಾಗಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಹೆಮ್ಮೆ ಪಟ್ಟು ಮನಸಲ್ಲೆ ‘ನನ್ನ ಮಗ(ಳು)’ ಎಂದು ಬೀಗಿ ಸಂಭ್ರಮಿಸುವ ತಂದೆ, ಸದಾ ಮಕ್ಕಳ ಒಳಿತನ್ನೆ ಬಯಸುತ್ತಾನೆ. ಸಂಸ್ಕೃತದ ಒಂದು ಉಕ್ತಿಯಂತೆ “ಪಿತಾ ಧರ್ಮಹಃ, ಪಿತಾ ಸ್ವರ್ಗಹಃ ,ಪಿತಾಹೀ ಪರಮ ತಪಹಃ. ಪಿತರಿ ಪ್ರೀತಿಮಾಪನ್ನೆ ಪ್ರೀಯಂತೆ ಸರ್ವ ದೇವತಹಃ” (पिता धर्मः पिता स्वर्गः पिता हि परमं तपः। पितरि प्रीतिमापन्ने प्रीयन्ते सर्वदेवताः॥) ಅಂದರೆ ತಂದೆಯೇ ಧರ್ಮ, ತಂದೆಯೇ ಸ್ವರ್ಗ, ತಂದೆಯೇ ಸರ್ವೋಚ್ಚ ತ್ಯಾಗ. ಸಕಲ ದೇವತೆಗಳ ಒಟ್ಟಾದ ಪೀಠಕ್ಕಿಂತಲೂ ಉನ್ನತವಾದಾದ್ದು ತಂದೆಯ ಸ್ಥಾನ. ಹಾಗೆಂದು ನಾನು ಪುರುಷ ಪ್ರಧಾನ ಸಮಾಜದ ಪ್ರತಿಪಾದಕನಲ್ಲ, ಆದರೆ ಅಪ್ಪನ  ಹೃದಯದ  ಮೃದುತ್ವ ಮಾತಿನಲ್ಲಿ ವ್ಯಕ್ತವಾಗುವದು ಬಲು ಅಪರೂಪ. ತಂದೆ ಕಲ್ಲು ಮನಸ್ಸಿನವನೆಂಬ ಭಾವನೆ ಸರ್ವಥಾ ತಪ್ಪು.

ಅಪ್ಪನ ಪ್ರೀತಿಗೆ ಕನ್ನಡಿ ಹಿಡಿಯುವ ಒಂದು ಉದಾಹರಣೆಗಳು:

೧೯೯೨ರ ಬಾರ್ಸಿಲೋನಾ ಓಲಂಪಿಕ್ ಕ್ರೀಡಾಕೂಟದ ೪೦೦ಮೀಟರ್ ಓಟದ ಸಮಯದಲ್ಲಿ ನಡೆದ ಒಂದು ಘಟನೆ ಅಲ್ಲಿದ್ದವರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು.  ಪದಕ ಗೆಲ್ಲುವ ಫೆವರೇಟ್ ಆಗಿದ್ದ ಡೆರಿಕ್ ರೆಡ್ಮ೦ಡ್ ಓಟ ಪ್ರಾರಂಭವಾದ ಮೇಲೆ ಕೇವಲ ೧೫ ಸೆಕೆಂಡನಲ್ಲಿ ಶರವೇಗದಲ್ಲಿ ೧೫೦ಮೀಟರ್ ಕ್ರಮಿಸಿದಾಗ ಕಾಲಲ್ಲಿ  ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತಕ್ಕೊಳಗಾಗಿ (ಹ್ಯಾಮ್ಸ್ಟ್ರಿಂಗ್)  ಅಸಹನೀಯ ನೋವಿನಿಂದ  ನೆಲಕ್ಕೆ ಉರುಳುತ್ತಾರೆ. ಆದರೆ ಛಲ ಬಿಡದ ಜಗದೇಕಮಲ್ಲನ೦ತೆ ಓಟವನ್ನು ಅರ್ಧಕ್ಕೆ ನಿಲ್ಲಿಸಲು ಸಿದ್ಧರಾಗದೆ, ಕುಂಟುತ್ತಾ  ಉಳಿದ ಅಂತರವನ್ನು ಪೂರ್ಣಗೊಳಿಸಲು ಪ್ರಯತ್ನಿಸುವಾಗ, ಒಬ್ಬ ವ್ಯಕ್ತಿ ಭದ್ರತೆಯ ಕವಚವನ್ನು ಭೇದಿಸಿ ಮೈದಾನದಲ್ಲಿ ನುಗ್ಗಿ ಬಂದು ಡೆರಿಕ್‘ಗೆ ಆಸರೆಯಾಗಿ  ಸಾಂತ್ವನ ಹೇಳುತ್ತಾ “ನೀನು  ಹೀಗೆ ಮಾಡುವ ಅವಶ್ಯಕತೆ ಇಲ್ಲ…..” . ಆಗ ಡೆರಿಕ್ ಕಣ್ಣೀರಿಕ್ಕುತ್ತಾ  “ನಾನು ಈ ಓಟವನ್ನು ಮುಗಿಸಲೇಬೇಕು …” ಎಂದ.  ಆ ವ್ಯಕ್ತಿ “ಹಾಗಿದ್ದರೆ ಬಾ ಇಬ್ಬರು ಒಟ್ಟಿಗೆ ಓಡೋಣ..” ಎಂದು, ಕೊರಳಲ್ಲಿ ಕೈ ಹಾಕಿ ಕುಂಟುವ ಡೆರಿಕ್‘ಗೆ ದೈಹಿಕ ಹಾಗೂ ಮಾನಸಿಕವಾಗಿ ಆಸರೆಯಾಗಿ ಫಿನಿಷ್ ಲೈನ್‘ನ ಕೆಲವೇ ಗಜಗಳ ದೂರದಲ್ಲಿ ಡೆರಿಕ್‘ನನ್ನು ಓಟ ಪೂರ್ಣಗೊಳಿಸಲು  ಬಿಡ್ತಾರೆ. ಮೈದಾನದಲ್ಲಿ ನೆರೆದಿದ್ದ ೬೫೦೦೦  ಜನರ ಕರತಾಡನ ಮುಗಿಲು ಮುಟ್ಟಿತು. ಪದಕದ ನಿರೀಕ್ಷೆಯಲ್ಲಿದ್ದ ಡೆರಿಕ್‘ರ ನೋವು ಮತ್ತು  ಛಲವನ್ನು ನೋಡಿ ಮನದ ತಳಮಳ ತಡೆಯಲಾರದೇ ಮೈದಾನಕ್ಕೆ ನುಗ್ಗಿದ ಆ ವ್ಯಕ್ತಿ ಬೇರೆ ಯಾರು ಅಲ್ಲ….. ಡೆರಿಕ್‘ನ ತಂದೆಯಾಗಿದ್ದರು. ಸಾಮಾನ್ಯವಾಗಿ ಯಾರ ಕಣ್ಣಿಗೂ ಕಾಣದ ತಂದೆಯ ಪ್ರೀತಿಯ ಯಾವ ಸಮಯದಲ್ಲಿ ಉಕ್ಕಿ ಹೊರಹೊಮ್ಮುವದೆಂದು ಹೇಳುವುದು ಕಠಿಣ.

ರಿಕಿ ಹೊಯ್ಟ್, ದೈಹಿಕ ಹಾಗೂ ಮಾನಸಿಕ ಸ್ಥಿಮಿತವಿಲ್ಲದ,  ಹುಟ್ಟಿನಿಂದಲೇ ಮೆದುಳಿನ ನರಗಳ ಕಾಯಂ ಹಾನಿಗೊಳಗಾಗಿ ಇಡೀ ದೇಹದ ಸ್ನಾಯು ಮತ್ತು ನರಗಳ ಸಮತೋಲನ ಕಳೆದುಹೋಗುವ  ಸೆರೆಬ್ರಲ್ ಪಲ್ಸಿ  ಎಂಬ ರೋಗದಿಂದ ಬಳಲುತ್ತಿದ್ದ  ವ್ಯಕ್ತಿ. ಆತನಿಗೆ ಮ್ಯಾರಥಾನ್ ಓಟವೊಂದರಲ್ಲಿ  ಭಾಗವಹಿಸುವ ಉತ್ಕಟ ಇಚ್ಛೆ. ಮಧ್ಯವಯಸ್ಸಿನ ಮಗನ  ಮನದಿಚ್ಛೆಯನ್ನು ಪೂರೈಸಲು ತಂದೆಯಾದ ಡಿಕ್ ಹೊಯ್ಟ್ ತಾವಿದ್ದ ಸ್ಥಳದಿಂದ  ವಿಶೇಷವಾದ  ನಾವಿನಲ್ಲಿ ಪಯಣಿಸಿ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಆಸನದಲ್ಲಿ ತನ್ನ ಸೈಕಲ್ ಮೇಲೆ  ಕೂರಿಸಿಕೊಂಡು ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ಸವಿಸುತ್ತಾ, ಸ್ವಚ್ಛಂದ ಆಕಾಶದ ಹೊದಿಕೆಯಡಿಯಲ್ಲಿ ಮಗನ ಖುಷಿಗೆ ಸಾಕ್ಷಿಯಾಗಿ 5ಮೈಲುಗಳ ದೂರ ಸಾಗಿ, ಕೊನೆಗೆ ರಿಕಿಗಾಗಿಯಂದೇ ತಯಾರಿಸಿದ ಗಾಲಿ ಕುರ್ಚಿಯಲ್ಲಿ ತಳ್ಳುತ್ತಾ  ಮಗನೊಂದಿಗೆ ಒಟ್ಟಾಗಿ ಫಿನಿಶ್ ಲೈನ್’ನ್ನು ದಾಟಿದಾಗ ನೆರೆದ ಜನರ ಕರತಾಡನ ಮುಗಿಲಮುಟ್ಟಿತ್ತು.  ರಿಕಿಯ ಆನಂದಕ್ಕೆ …ಅದಕ್ಕಿಂತಲೂ ಮಿಗಿಲಾಗಿ ಮಗನ ಸಂತೋಷಕ್ಕೋಸ್ಕರ ಹರಸಹಾಸಪಟ್ಟ ಡಿಕ್ ಕಣ್ಣಲ್ಲಿಯ ಆನಂದ ಭಾಷ್ಪ ಉದುರಿದ್ದವು. ತಂದೆಯ ಅವ್ಯಕ್ತ ಪ್ರೇಮ  ಇಡೀ ಜಗತ್ತಿಗೆ ಗೋಚರಿಸಿತ್ತು.  

ತಂದೆಯಾಗಿ ಮಕ್ಕಳನ್ನು ಸಂಭಾಳಿಸುವದು/ನಿಭಾಯಿಸುವದು ಪ್ರೀತಿಸುವದು ಎಷ್ಟು ಕಷ್ಟ ಎಂಬುದಕ್ಕೆ ಒಂದು ಚಿಕ್ಕ ಕಥೆ ಇದೆ. ಒಂದೂರಲ್ಲಿ ಒಬ್ಬ ರಾಜನಿದ್ದ,ಆತನಿಗೆ ಮಕ್ಕಳಿರಲಿಲ್ಲ. ಆ ರಾಜನ ಆಸ್ಥಾನದಲ್ಲಿ ಅತ್ಯಂತ ಗೌರವಾನ್ವಿತ, ಬುದ್ಧಿವಂತ ಮಂತ್ರಿಯೋರ್ವನಿದ್ದ. ಆದರೆ ಮಂತ್ರಿಯೂ ಅರಸನ ಒಡ್ಡೋಲಗಕ್ಕೆ ದಿನಾಲು ನಿಗದಿತ ಸಮಯಕ್ಕಿಂತ ಕೊಂಚ  ತಡವಾಗಿ ಬರಲಾರಂಭಿಸಿದ. ಕೆಲ ದಿನ ಸುಮ್ಮನಿದ್ದ ರಾಜ ಒಂದು ದಿನ ರಾಜನ ಆಸ್ಥಾನದ ಮುಖ್ಯ ಸಭೆಯೊಂದಕ್ಕೆ ಕೊಂಚ ವಿಳಂಬವಾಗಿ ಬಂದ ಮಂತ್ರಿಯ ಕುರಿತು ರೇಗಿದ. ಆಗ ಮಂತ್ರಿಯು “ಮಹಾರಾಜ ನಾನು  ಸಭೆಗೆ ವಿಳಂಬವಾಗಿ ಬ೦ದಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ನನ್ನ ೬ವರ್ಷದ ಮಗನಿಗೆ ಸಮಜಾಯಿಷಿ, ಆತನ ಪ್ರಶ್ನೆಗಳಿಗೆ ಉತ್ತರಿಸಿ,ಸಮಾಧಾನಪಡಿಸಿ ಬರಲು ಸ್ವಲ್ಪ ತಡವಾಯಿತು.” ರಾಜ ಮಂತ್ರಿಯ ಕುರಿತು “ಓಹೋ ತಂದೆಯಾಗಿರುವದು ಅಷ್ಟು ಕಷ್ಟವೋ? ನನಗೆ ಮಕ್ಕಳಿಲ್ಲದ ಕಾರಣ ಹಾಗೆ ಹೆಳ್ಳುತ್ತಿರುವಿರಾ??ನಾನು ಇದನ್ನು ನಂಬುವದಿಲ್ಲ. ನೀವು ನನಗೆ ವಿಸ್ತಾರವಾಗಿ  ಮನವರಿಕೆಮಾಡಿಕೊಡಿ” ಎಂದ. ಮಂತ್ರಿಯು “ ಆಗಲಿ ಮಹಾರಾಜ, ಈಗ ನಾನು ಮಗುವಿನಂತೆ ನಟಿಸುವೆ, ನೀವು ನನ್ನ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಸಂತೈಸುವ ತಂದೆಯಾಗಿ.” ಎಂದ. ಈ ಸವಾಲಿಗೆ  ರಾಜ  ಒಪ್ಪಿದ, ಮಂತ್ರಿಯು ಮಗುವಿನಂತೆ ನಟಿಸುತ್ತ ನೆಲಕ್ಕೆ ಉರುಳಿ ಅಳುತ್ತಾ “ಅಪ್ಪ ನನಗೆ ಸಿಹಿಯಾದ ಕಬ್ಬು ಬೇಕು….” ಎಂದು ಹಟ ಹಿಡಿದ. ರಾಜ ತಂದೆಯಾಗಿ, ತನ್ನ ಸಿಬ್ಬಂದಿಯಿಂದ ಕಬ್ಬನ್ನು ತರಿಸಿ ಮಗನಂತೆ ನಟಿಸುತ್ತಿರುವ ಮಂತ್ರಿಗೆ ನೀಡಿದ. ಮಂತ್ರಿ ಕಬ್ಬನ್ನು ತೆಗೆದುಕೊಂಡು ಇನ್ನಷ್ಟು ಜೋರಾಗಿ ಕಿರುಚಿದ “ ಇದರ ಮೇಲೆ ಇರುವೆ ಇದೆ… ನನ್ನನ್ನು ಕಚ್ಚುತ್ತಿದೆ….” ಆಗ ರಾಜ “ಓಹೋ! ಹಾಗಾ ಎಲ್ಲಿ ಆ ಇರುವೆ…ನೋಡೋಣ..” ಎನ್ನುತ್ತಾ ಇರುವೆಯನ್ನು ಕಾಲಿನಿಂದ ಹೊಸಕಿ ಸಾಯಿಸಿದ. ಮಂತ್ರಿ ಮತ್ತೆ ತಗಾದೆ ತೆಗೆಯುತ್ತಾ “ನೀವು ಇರುವೆಯನ್ನು ಸಾಯಿಸಿಸಿದಿರಿ…ಅಮ್ಮ ಯಾರನ್ನು ಹಿಂಸಿಸಬಾರದೆಂದು ಹೇಳಿದ್ದಾಳೆ.” ಎಂದಾಗ ಇಡೀ ಸಭೆ ನಗೆಗಡಲಲ್ಲಿ ಮುಳುಗಿತು. ಮಂತ್ರಿ ಮತ್ತೆ “ಈ ಕಬ್ಬನ್ನು ಹೇಗೆ ತಿನ್ನುವದು? ಕತ್ತರಿಸಿಲ್ಲ..” ಮತ್ತೆ ರಾಗ ಆಲಾಪಿಸಿದ. ರಾಜ ತನ್ನ ಸೇವಕರಿಂದ ಕಬ್ಬನ್ನು ಚಿಕ್ಕ ತುಂಡುಗಳನ್ನಾಗಿ ತುಂಡರಿಸಿ ಕೊಟ್ಟ. ಆಗ ಮಗನ ಪಾತ್ರಧಾರಿಯಾದ  ಮಂತ್ರಿ “ಅಪ್ಪ ನನಗೆ ಈಗ ಕಬ್ಬನ್ನು ತಿನ್ನುವ ಮನಸ್ಸಿಲ್ಲ ,ಈಗ ತುಂಡರಿಸಿದ ಕಬ್ಬನ್ನು ಮೊದಲಿನಂತೆ ಜೋಡಿಸಿ ಕೊಡಿ…ನಾಳೆ ತಿನ್ನುತ್ತೇನೆ.” ಎಂದ. ರಾಜ “ಇದು ಅಸಾಧ್ಯ! ನೀವು ವಿಚಿತ್ರ ಮಗುವಿನಂತೆ ಆಡುತ್ತಿದ್ದೀರಿ…” ಎಂದಾಗ ಮಂತ್ರಿ ಮತ್ತೆ ಅಳಲಾರಂಭಿಸಿದ. ಇಡೀ ಅಭೇ ಮತ್ತೊಮ್ಮೆ ಹಾಸ್ಯದ ಹೊನಲಿನಲ್ಲಿ ತೇಲಿತು. ಈಗ ರಾಜನಿಗೆ ಒಬ್ಬ ತಂದೆಯ ಕಷ್ಟದ ಸ್ಪಷ್ಟ ಅರಿವಾಗಿತ್ತು,ಮಂತ್ರಿಗಾಗಿ ಮುಂದೆ  ಕೆಲ ವಿಶೇಷ ಸವಲತ್ತುಗಳನ್ನು ನೀಡಿದನು. ಈ ಕಥೆಯ ತಾತ್ಪರ್ಯ ಇಷ್ಟೇ ಒಬ್ಬ ತಂದೆಯಾಗಿ ಸಹನೆಯಿಂದ  ಮಕ್ಕಳ  ಸಕಲ ಇಷ್ಟಾರ್ಥಗಳನ್ನು ಪೂರ್ತಿಗೊಳಿಸುವದು ಸುಲಭವಲ್ಲ. ಇಂತಹ ಸಂದರ್ಭಗಳಲ್ಲೂ ತಾಳ್ಮೆ ಕಳೆದುಕೊಳ್ಳದೆ ವಿವೇಚನೆಯಿಂದ  ವರ್ತಿಸುವುದು  ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವದು ಅಂತರ್ಮುಖಿಯಾದ ಅಪ್ಪನಿಗೆ ತುಸು ಕಷ್ಟವೇ ಸರಿ.

ಅಂತರ್ಮುಖಿಯಾದ ತಂದೆ, ‘ದಿಲ್ ವಾಲೆ ದುಲ್ಹನಿಯಾ’ದ ಅನುಪಮ್ ಖೇರ್’ರಂತೆ ಮಗನಾದ ರಾಜ್’ನೊಂದಿಗೆ ಚೀಯರ್ಸ್ ಅಂತ ಹೇಳಿ  ಬೀಯರ್ ಕುಡಿದು  ಮನದಾಳದ ಪ್ರೀತಿಯನ್ನು “ಐ ಲವ್ ಯು ಮೈ ಸನ್” ಎಂದು ಮುಕ್ತವಾಗಿ ವ್ಯಕ್ತಪಡಿಸಲಾರ. ಅಂತರ್ಮುಖಿ ಅಪ್ಪನ ಹೃದಯದಲ್ಲಿ ಹುದುಗಿರುವ ಪ್ರೀತಿ ಯಾವ ಸಮಯದಲ್ಲಿ ಗೋಚರವಾಗುವದೆಂಬುದಕ್ಕೆ ವರಕವಿ ದ.ರಾ.ಬೇಂದ್ರೆ ತಮ್ಮ ಮಗನ ಮೃತ್ಯುವಿನ ಸಮಯದಲ್ಲಿ ಬರೆದ “ನೀ ಹಿ೦ಗ ನೋಡಬ್ಯಾಡ ನನ್ನ..ನೀ ಹಿ೦ಗ ನೋಡಿದರ ನನ್ನ .. ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ..” ಎಂಬ  ಭಾವಪೂರ್ಣ ಕವನವೇ ಸಾಕ್ಷಿ.

                                                 

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!