ಮೊದಲ ಭಾಗವನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಬಾಂಬ್, ಕ್ಷಿಪಣಿಗಳ ಯುಗದಲ್ಲಿ ಭಾರತದಲ್ಲೊಂದು “ಬುಲೆಟ್ ಟ್ರೈನ್” – 1
ಏಷ್ಯಾದಲ್ಲಿ ಚೀನಾವನ್ನು ಮಣಿಸಲು ಜಪಾನ್ ಮತ್ತು ಭಾರತ ಜೊತೆಯಾಗುತ್ತಿವೆಯೇ? ದಕ್ಷಿಣ ಚೀನಾ ಸಾಗರದಂತೆಯೇ, ಚೀನಾ ಹಿಂದೂ ಮಹಾಸಾಗರದಲ್ಲಿಯೂ ತನ್ನ ಪ್ರಾಬಲ್ಯವನ್ನು ತೀವ್ರವಾಗಿ ವಿಸ್ತರಿಸುತ್ತಿದೆ. ಇಂಡೋ-ಫೆಸಿಫಿಕ್ ಪ್ರಾಂತ್ಯದ ಸಾಗರ ವಲಯದ ಸುರಕ್ಷತೆಗಾಗಿ ಹಿಂದೂ ಮಹಾಸಾಗರದಲ್ಲಿ ಸಾಗರದಲ್ಲಿ ಭಾರತ-ಜಪಾನ್-ಅಮೆರಿಕ ಜಂಟಿಯಾಗಿನಡೆಸುವ ನಡೆಯುವ “ಮಲಬಾರ್ ಎಕ್ಸರಸೈಸ್(ತಾಲೀಮು)” ನೇರವಾಗಿ ಚೀನಾ ಪ್ರಾಬಲ್ಯವನ್ನು ಎದುರಿಸುವ ಸಾಮಥ್ರ್ಯದ ಅನಾವರಣ. ಇಂತಹ ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಂದಾಗುತ್ತಿರುವ ಭಾರತ-ಜಪಾನ್ ದೇಶಗಳು ದಕ್ಷಿಣ ಏಷ್ಯಾದಲ್ಲೊಂದು ಪ್ರಬಲ ಒಕ್ಕೂಟವಾಗಿ ಬೆಳೆಯುತ್ತಿವೆ.
ಇತ್ತೀಚಿನ “ಜೈ ಜಪಾನ್, ಜೈ ಭಾರತ್” ಎಂಬ ಜಪಾನ್ ಪ್ರಧಾನಿ ಶಿಂಜೋ ಅಬೆ ಹೇಳಿಕೆ. ಪರೋಕ್ಷವಾಗಿ ಚೀನಾವನ್ನು ಉದ್ದೇಶಿಸಿದ್ದ ಉಭಯ ದೇಶಗಳ ಜಂಟಿ ಹೇಳಿಕೆ ಇದಕ್ಕೆ ಇಂಬು ನೀಡುವಂತಿದೆ. “ಉತ್ತರ ಕೊರಿಯಾ ಭಾರತ ಹಾಗೂ ಜಪಾನ್ ದೇಶಗಳಿಗೆ ಜಂಟಿಯಾಗಿ ತಲೆದೋರಿರುವ ಸಮಸ್ಯೆ, ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರ, ಕ್ಷಿಪಣಿಗಳ ತಾಲೀಮಿಗೆ ಹಿನ್ನಲೆಯಿಂದ ಆಸರೆ ನೀಡುತ್ತಿರುವ ಶಕ್ತಿಗಳನ್ನು ಹೊಣೆಗಾರರಾಗಿಸಬೇಕು” ಎಂಬ ಹೇಳಿಕೆ ಚೀನಾವನ್ನು ಉದ್ದೇಶಿಸಿದ್ದು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಿಲ್ಲ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸಬೇಕೆಂಬ ಜಂಟಿ ಹೇಳಿಕೆ, ಜೈಶ್-ಎ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‍ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರದಂತೆ ನೋಡಿಕೊಳ್ಳುತ್ತಿರುವ ಚೀನಾವನ್ನೇ ಉದ್ದೇಶಿಸಿದ್ದು. ಕೊನೆಯಲ್ಲಿ “ಮುಕ್ತ, ಸ್ವತಂತ್ರ, ಸ್ವಾಯತ್ತ ಮತ್ತು ಸಂಪದ್ಭರಿತ ಭಾರತ-ಫೆಸಿಪಿಕ್ ಪ್ರಾಂತ್ಯದ ಗುರಿ” ಎಂಬ ಮಾತು ಚೀನಾದ, ದಕ್ಷಿಣ ಚೀನಾ ಸಾಗರ ಹಾಗೂ ಹಿಂದೂ ಮಹಾಸಾಗರದಲ್ಲಿ ಸ್ಥಾಪಿಸಲು ಹೊರಟ ಸಾಮ್ರಾಜ್ಯಶಾಹಿ ವಿಸ್ತರಣೆಯನ್ನು ಸೂಕ್ಷ್ಮವಾಗಿ ಪ್ರತಿಭಟಿಸುವಂತದ್ದು.
ಚೀನಾ ಹಾಗೂ ಜಪಾನ್‍ನ ಪ್ರಮುಖ ಮಾಧ್ಯಮಗಳಲ್ಲಿ, “ಎರಡೂ ದೇಶಗಳ ಹೊಸ ಮೈತ್ರಿ: ಚೀನಾದ ಪ್ರಾಬಲ್ಯವನ್ನು ತಡೆಯುವ ಅಸ್ತ್ರ” ಎಂಬರ್ಥದ ಸಂಪಾದಕೀಯಗಳನ್ನು ಪ್ರಕಟಿಸಲಾಗಿದೆ. ಅಮೆರಿಕ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ತನ್ನ ನೇರ ಪಾಲ್ಗೊಳ್ಳುವಿಕೆಯಿಂದ ನಿಧಾನವಾಗಿ ಹಿಂದೆ ಸರಿಯುತ್ತಿದೆ. ದೂರಗಾಮಿಯಾಗಿ ಈ ಮೈತ್ರಿ ಭಾರತಕ್ಕೆ ಅನುಕೂಲಕರವಾದರೂ, ತಕ್ಷಣಕ್ಕೆ ಇದು ಜಪಾನಿಗೆ ಅನಿವಾರ್ಯ. ರಾಜಕೀಯವಾಗಿಯೂ ಬುಲೆಟ್ ರೈಲಿನ ಘೋಷಣೆ ಮಾಡಿದ, ಚೀನಾ ಸಾಮ್ರಾಜ್ಯಶೀಲತೆಯನ್ನು ಆರ್ಥಿಕವಾಗಿ ಮಣಿಸಬೇಕಾದ ಈ ಹೊತ್ತಿನಲ್ಲಿ ನರೇಂದ್ರ ಮೋದಿ ಸರಕಾರಕ್ಕೂ “ಶಿಂಕಾನ್ಸೆನ್” ಅನಿವಾರ್ಯ.
ಅಹಮದಾಬಾದ್‍ನಲ್ಲಿ ಮೋದಿ-ಅಬೆ ಭೇಟಿಯಾದಾಗ ಸಾಗರ ಸುರಕ್ಷತೆ, ಭಯೋತ್ಪಾದನೆ ನಿಗ್ರಹ, ಪರಮಾಣು ಶಕ್ತಿ, ವ್ಯಾಪಾರ ವಹಿವಾಟಿನ ವೃದ್ಧಿ ಮೊದಲಾದ ಸಂಗತಿಗಳು ದ್ವಿಪಕ್ಷೀಯ ಒಪ್ಪಂದದ ಭಾಗವಾಗಿದ್ದರೂ ಕೇಂದ್ರಸ್ಥಾನದಲ್ಲಿದ್ದದ್ದು ಜಪಾನ್ ಸಹಯೋಗದಲ್ಲಿ ಸಿದ್ಧಗೊಳ್ಳಲಿರುವ ಬುಲೆಟ್ ರೈಲು ಯೋಜನೆ. ಈ ಯೋಜನೆಯ ಒಟ್ಟು ವೆಚ್ಚ 1.10 ಟ್ರಿಲಿಯನ್ ಡಾಲರ್‍ಗಳು(1.10 ಲಕ್ಷ ಕೋಟಿ). ಇದರಲ್ಲಿ 88,000 ಸಾವಿರ ಕೋಟಿ(81%) ಸಾಲವನ್ನು ಜಪಾನ್ ನೀಡಲಿದೆ. ಅದೂ 0.01% ಬಡ್ಡಿದರದಲ್ಲಿ! ಇದನ್ನು ಭಾರತ ಮುಂದಿನ ಐವತ್ತು ವರ್ಷಗಳಲ್ಲಿ ಮರುಪಾವತಿಸಬೇಕು. ಇದನ್ನು ಗಮನಿಸಿದರೆ ಜಪಾನ್‍ಗೆ ಏಷ್ಯಾದಲ್ಲಿ ಭಾರತ ಎಷ್ಟು ಮುಖ್ಯವಾದ ಸಹವರ್ತಿ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಆಳದಲ್ಲಿ ಇದರ ಹಿಂದಿರುವುದು ಸಾಮ್ರಾಜ್ಯಶಾಹಿ, ನೆರೆಹೊರೆಯವರನ್ನು ಸದಾ ಕುಟುಕುವ ಚೀನಾವನ್ನು ಜೊತೆಯಾಗಿ ಎದುರಿಸುವ ಯೋಜನೆ. ಈ ಯೋಜನೆ ಚೀನಾದ ಮಹತ್ವಾಕಾಂಕ್ಷಿ ವಾಣಿಜ್ಯ ಕೇಂದ್ರಗಳನ್ನು ನೆಲ ಹಾಗೂ ಜಲಮಾರ್ಗದಿಂದ ಬೆಸೆಯಲು ಹೊರಟ “ಒಂದು ರಸ್ತೆ ಒಂದು ಬೆಲ್ಟ್” ಯೋಜನೆಗೆ ಪ್ರತಿಯಾದ ಭಾರತದ ಆಂತರಿಕ ಪರ್ಯಾಯ ವ್ಯವಸ್ಥೆ.
ಆದರೆ ಜಪಾನ್ ಮಟ್ಟಿಗೆ ಇದು ತನ್ನ ಉಳಿವಿನ ಪ್ರಶ್ನೆ. “ಶಿಂಕಾನ್ಸೆನ್” ತಂತ್ರಜ್ಞಾನವನ್ನು ಮೊದಲು ಪರಿಚಯಿಸಿದ್ದು ಜಪಾನ್ ದೇಶವಾದರೂ, 2015ರಲ್ಲಿ ಅದು ಚೀನಾದ ತೀವ್ರತರ ಪೈಪೋಟಿಯಿಂದ ಸೋತು ಎರಡನೆ ಸ್ಥಾನಕ್ಕೆ ಜಾರಿತು. ಇಂದು ಬುಲೆಟ್ ತಂತ್ರಜ್ಞಾನವನ್ನು ತನ್ನ ಆರ್ಥಿಕ ಬೆಳವಣಿಗೆಯ, ತಾಂತ್ರಿಕ ರಫ್ತಿನ ಶಕ್ತಿಯಾಗಿಸಿಕೊಂಡಿರುವುದು, ಸೂಪರ್ ಫಾಸ್ಟ್ ರೈಲುಗಳ ಅಧಿಪತಿಯಂತೆ ಅವುಗಳ ವ್ಯಾಪಾರದಲ್ಲಿಯೂ ಮೊದಲ ಸ್ಥಾನವನ್ನು ಅಲಂಕರಿಸಿರುವುದು ಚೀನಾ. ತಂತ್ರಜ್ಞಾನದ ವಿಶ್ವಸನಿಯತೆಯಲ್ಲಿ ಅತ್ಯುತ್ತಮ ಹಿನ್ನೆಲೆಯನ್ನು ಹೊಂದಿದ್ದರೂ ಜಪಾನ್ ಈ ತಂತ್ರಜ್ಞಾನವನ್ನು ವಿದೇಶಗಳಲ್ಲಿ ಮಾರುವಲ್ಲಿ ವಿಫಲವಾಗಿದೆ. ಇಂದು ಭಾರತ ಬಿಟ್ಟರೆ ಶಿಂಕಾನ್ಸೆನ್ ತಂತ್ರಜ್ಞಾನವನ್ನು ಜಪಾನ್ ಮಾರಿರುವುದು ಕೇವಲ ತೈವಾನ್ ಎಂಬ ಪುಟ್ಟ ದೇಶಕ್ಕೆ ಮಾತ್ರ. ಅದೂ ಹತ್ತು ವರ್ಷಗಳ ಹಿಂದೆ. ಆದರೆ ಅಲ್ಲಿಯೂ ಅದು ಗಣನೀಯ ಪ್ರಮಾಣದ ನಷ್ಟವನ್ನು ಎದುರಿಸುತ್ತಿದೆ. ಉಳಿದೆಡೆ, ಅದು ಚೀನಾದ ಬೆದರಿಕೆಯ ಕಾರಣದಿಂದಲೋ ಅಥವಾ ಸ್ಥಳೀಯ ಚೀನಾ ಒಲವಿನ ಕಾರಣದಿಂದಲೋ ಅಥವಾ ಕಡಿಮೆ ವೆಚ್ಚದ ಕಾರಣದಿಂದಲೋ ಚೀನಾ ದೇಶವೇ ಜಪಾನ್ ಬಯಸಿದ್ದ ದೇಶಗಳಲ್ಲಿ ಬುಲೆಟ್ ಯೋಜನೆಗಳನ್ನು ಗೆದ್ದಿದೆ. ಹಾಗಾಗಿ ಜಪಾನ್‍ಗಿಂದು ಈ ತಂತ್ರಜ್ಞಾನವನ್ನು ಭಾರತದಂತಹ ಬೃಹತ್ ದೇಶಕ್ಕೆ ಮಾರುವುದು ಅನಿವಾರ್ಯವಾಗಿದೆ.
ಚೀನಾದೇಶ ಜಪಾನ್ ಹಾಗೂ ಭಾರತದ ಪ್ರಬಲ ಪ್ರತಿಸ್ಪರ್ಧಿ. ಭಾರತಕ್ಕೆ ಅರುಣಾಚಲ ಪ್ರದೇಶ, ಡೊಕ್ಲಂ, ಸಿಯಾಚಿನ್‍ನ ಗಡಿ ಪ್ರದೇಶಗಳಲ್ಲಿ ತನ್ನ ಸಾರ್ವಭೌಮತೆಯ ತಕರಾರು. ದ್ವಿಪಕ್ಷೀಯ ವಾಣಿಜ್ಯ ವ್ಯವಹಾರದಲ್ಲಿಯೂ ಎದುರಾಗಿರುವ ನಷ್ಟ. ಭಾರತದ ವಿರುದ್ಧವಾಗಿ ಭಯೋತ್ಪಾದನೆಯ ತವರು ಪಾಕಿಸ್ತಾನವನ್ನು ಎಲ್ಲ ರೀತಿಯಿಂದ ಸಾಕಿ, ಸಲಹಿ ಪೋಷಿಸುತ್ತಿರುವ ರೀತಿಯನ್ನು ಗಮನಿಸಿ. ಅದೇ ರೀತಿ ಜಪಾನ್‍ಗೆ ಚೀನಾ. ದಕ್ಷಿಣ ಚೀನಾ ಸಾಗರದಲ್ಲಿ ಚೀನಾ ತನ್ನ ಸಾರ್ವಭೌಮತೆ ಹೆಸರಿನಲ್ಲಿ ಉಂಟುಮಾಡುತ್ತಿರುವ ಉತ್ಪಾತ. ಅಲ್ಲಿಯೇ ಜಪಾನ್‍ಗೆ ಸೇರಿದ “ಶಿಂಕಾಕು ದ್ವೀಪ”ವನ್ನು ತನ್ನದೆಂದು ಪ್ರತಿಪಾದಿಸುತ್ತಿರುವ ಸಾಮ್ರಾಜ್ಯಶಾಹಿ ಆಕ್ರಮಣಶೀಲತೆ. ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ದೇಶಗಳ ವಿರುದ್ಧವಾಗಿ ಪರಮಾಣು ಶಕ್ತಿಯ ಅಶಿಸ್ತಿನ ಉತ್ತರ ಕೊರಿಯಾವನ್ನು ಪೋಷಿಸುತ್ತಿರುವ ರೀತಿಯಲ್ಲಿ ಸಾಮ್ಯತೆಯಿದೆ. ಈ ಬಗೆಯ ಸಾಮ್ಯತೆ ಚೀನಾದ ಎಲ್ಲ ನೆರೆಯ ರಾಷ್ಟ್ರಗಳೊಂದಿಗೂ ಕಾಣಬಹುದು. ಇಂತಹ ಕಾರಣಗಳಿಂದಲೇ ಭಾರತ-ಜಪಾನ್ ಮತ್ತಷ್ಟು ಹತ್ತಿರಕ್ಕೆ ಬಂದಿವೆ. ಮೇಲಾಗಿ ಎರಡೂ ದೇಶಗಳು ಪ್ರಜಾಪ್ರಭುತ್ವವನ್ನು ನೆಚ್ಚಿರುವ ಅಮೆರಿಕದ ಮಿತ್ರರು. ಮತ್ತೊಂದು ಕುತೂಹಲದ ಸಂಗತಿಯೆಂದರೆ ನರೇಂದ್ರ ಮೋದಿ ಹಾಗೂ ಶಿಂಜೊ ಅಬೆಯವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಪರಸ್ಪರರ ದೇಶಗಳಲ್ಲಿಯೂ ಬಲಪಂಥೀಯ ಪಕ್ಷಗಳಾಗಿವೆ.
ಕಳೆದ ಒಂದು ದಶಕದಲ್ಲಿ ಚೀನಾ 22,000 ಕಿಲೋಮೀಟರ್‍ಗಳ ಅತೀ ವೇಗದಲ್ಲಿ ಸಂಚರಿಸುವ ರೈಲ್ವೆ ಜಾಲವನ್ನು(High Speed Railway Network) ನಿರ್ಮಿಸಿದೆ. ಜಗತ್ತಿನ ಅತೀ ವೇಗದ ರೈಲನ್ನೂ ಹೊಂದಿರುವ ಕೀರ್ತಿ ಅದರದ್ದು. ಅಗ್ಗದ ತಂತ್ರಜ್ಞಾನ ಹಾಗೂ ಯಾವುದೇ ಸಂಪನ್ಮೂಲದ ಮೇಲಾಧಾರಾದ ಹೊರತಾಗಿಯೂ ಸಾಲ ಒದಗಿಸುವ ಬಾಹ್ಯ ವ್ಯವಸ್ಥೆಯ ಕಾರಣದಿಂದ ಚೀನಾ, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ಅಚ್ಚುಮೆಚ್ಚಿನ ತಂತ್ರಜ್ಞಾನ ರಫ್ತಿನ ದೇಶವಾಗಿದೆ. 2015ರಲ್ಲಿ ಇಂಡೋನೇಷಿಯಾದ ಹೈ ಸ್ಪೀಡ್ ರೈಲ್ವೆ ಜಾಲದ ಗುತ್ತಿಗೆಯನ್ನು ಪಡೆಯುವ ಮೂಲಕ, ಈ ತಂತ್ರಜ್ಞಾನ ರಫ್ತಿನಲ್ಲಿ ಚೀನಾ ಜಪಾನ್ ದೇಶವನ್ನು ಎರಡನೇ ಸ್ಥಾನಕ್ಕೆ ಹಿಮ್ಮೆಟಿಸಿತು. ತದನಂತರ ಥೈಲ್ಯಾಂಡ್‍ನ ಬುಲೆಟ್ ಯೋಜನೆ ಕೂಡ ಜಪಾನ್ ಕೈ ತಪ್ಪಿ ಚೀನಾ ವಶವಾಯಿತು. ಹಾಗಾಗಿ ಜಪಾನ್‍ಗೆ ಭಾರತ ಅತ್ಯನಿವಾರ್ಯ. ಅದಕ್ಕೆಂದೇ ಇಷ್ಟು ಕನಿಷ್ಟ ದರದಲ್ಲಿ ಸಾಲ ನೀಡುವುದಕ್ಕೆ ಜಪಾನ್ ಒಪ್ಪಿರುವುದು. ಈ ಪರಿಸ್ಥಿಯಿಂದ ಪ್ರಾಥಮಿಕವಾಗಿ ಭಾರತ ಗೆದ್ದಿರುವುದು.
ಹೀಗೆ ಏಷ್ಯಾದ ಬಹುತೇಕ ಬೆಳೆಯುತ್ತಿರುವ ದೇಶಗಳ ಮೇಲೆ ಚೀನಾ ಒಂದಿಲ್ಲೊಂದು ರೀತಿಯಲ್ಲಿ ಹಿಡಿತ ಸಾಧಿಸಿದೆ. ಜಗತ್ತಿನ ವರ್ತಮಾನ, ಬೆಳವಣಿಗೆಯ ವೇಗವನ್ನು ಗಮನಿಸಿದಾಗ ಭವಿಷ್ಯದ ಶಕ್ತಿ ಏಷ್ಯಾ ಎಂಬುದು ಜಪಾನ್‍ನಂತಹ ಅವಕಾಶವನ್ನು ಅರಸುವ ದೇಶಕ್ಕೆ ಚೆನ್ನಾಗಿ ಅರಿವಿದೆ. ಭಾರತವಿಲ್ಲದೆ ಏಷ್ಯಾ ಅಪೂರ್ಣ ಎಂಬುದು ಅಮೆರಿಕದಿಂದ ಯುರೋಪ್ ಮೊದಲಾಗಿ ರಷ್ಯಾವರೆಗಿನ ಎಲ್ಲಾ ದೇಶಗಳ ಅಭಿಮತ. ಜನಸಂಖ್ಯೆ, ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಮಾರುಕಟ್ಟೆ ಜಪಾನ್ ಬೆಳವಣಿಗೆಗೆ ಚಿನ್ನದ ಮೊಟ್ಟೆಯಿದ್ದಂತೆ. ತನ್ನ ಸುತ್ತಮುತ್ತಲೂ ಅತಿಯಾದ ಪ್ರಾಬಲ್ಯ ಮೆರೆಯುತ್ತಿರುವ ಚೀನಾ ದೇಶಕ್ಕೆ ಬೆಳ್ಳಿಯ ಬಾಣವಿದ್ದಂತೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಜಪಾನ್‍ಗೆ ಇದು ಕೇವಲ ಜಪಾನ್-ಭಾರತ ವ್ಯಾಪಾರ, ವಹಿವಾಟಿನ ವೃದ್ಧಿಯ ಸೇತುವೆ ಮಾತ್ರವಲ್ಲ. ಮೋದಿ-ಅಬೆ Geostrategic (ಈ ಪದಕ್ಕೆ ಸಮಾನಾಂತರವಾಗಿ ಪ್ರಾದೇಶಿಕ ವ್ಯೂಹ ಎನ್ನಬಹುದೇನೋ)ರಾಜತಾಂತ್ರಿಕತೆಯ ಅನೂಹ್ಯ ಸಾಧನೆ.
ಜಪಾನ್ ಭಾರತದ ಅತೀ ದೊಡ್ಡ ವಂತಿಗೆದಾರ ದೇಶ. ಭಾರತದ ವಿದೇಶಿ ನೇರ ಹೂಡಿಕೆಯಲ್ಲಿ ಅದು ಮೂರನೇ ಸ್ಥಾನದಲ್ಲಿದೆ. ಆದರೆ 2013ರಿಂದ ಈಚೆಗೆ ದ್ವಿಪಕ್ಷೀಯ ವ್ಯಾಪಾರ-ವಹಿವಾಟು ಗಣನೀಯವಾಗಿ ಇಳಿಮುಖವಾಗುತ್ತಿದೆ. 2014-15ನೇ ಸಾಲಿನಲ್ಲಿ ವಾರ್ಷಿಕ 14.41 ಬಿಲಿಯನ್ ಡಾಲರ್ ಇದ್ದ ವಹಿವಾಟು, 2015-16ನೇ ಸಾಲಿನಲ್ಲಿ 13.61 ಡಾಲರ್‍ಗಳಿಗೆ ಇಳಿದಿದೆ. ಅದೇ ಹೊತ್ತಿಗೆ ಇದಕ್ಕೆ ವ್ಯತಿರಿಕ್ತವಾದ ಚಿತ್ರಣ ಭಾರತ-ಚೀನಾ ಹಾಗೂ ಚೀನಾ-ಜಪಾನ್ ದ್ವಿಪಕ್ಷೀಯ ವಹಿವಾಟಿನಲ್ಲಿ ಗೋಚರಿಸುತ್ತದೆ. ಭಾರತ-ಚೀನಾ ವಾರ್ಷಿಕ 71 ಬಿಲಿಯನ್ ಡಾಲರ್‍ಗಳ ವಾರ್ಷಿಕ ವಹಿವಾಟು ನಡೆಸುತ್ತವೆ. ಅದೇ ರೀತಿ ಜಪಾನ್ ಹಾಗೂ ಚೀನಾ ದೇಶಗಳ ನಡುವೆ ವಾರ್ಷಿಕ 279 ಬಿಲಿಯನ್ ಡಾಲರ್‍ಗಳ ವಹಿವಾಟು ನಡೆಯುತ್ತದೆ. ಅದೆಷ್ಟೇ “Ease of Doing Business” ಅಂದರೂ, ಎಂತಹ ಕೆಂಪು ಹಾಸು ಹಾಸುತ್ತಿದ್ದರೂ, ದ್ವಿಪಕ್ಷೀಯ ವ್ಯಾಪಾರ, ವಹಿವಾಟಿನಲ್ಲಿ ಭಾರತ ಮತ್ತು ಜಪಾನ್ ಎಷ್ಟು ಹಿಂದೆ ಉಳಿದಿವೆ ಹಾಗೂ ಸಾಗಬೇಕಾದ ಹಾದಿ ಎಷ್ಟಿದೆ ಎಂಬುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗಿರುವ ಮೂಲಭೂತ ತೊಡಕುಗಳು ಇನ್ನೂ ದೂರವಾದಂತಿಲ್ಲ. ಬುಲೆಟ್ ರೈಲಿನ ಜೊತೆಯಲ್ಲಿ, ಜಪಾನ್ ಭಾರತದಲ್ಲಿ ನಾಲ್ಕು ಕಡೆಗಳಲ್ಲಿ ನಿರ್ಮಿಸಲು ಹೊರಟಿರುವ “ವಿಶೇಷ ಜಪಾನಿ ಕೈಗಾರಿಕಾ ಟೌನ್ಶಿಪ್‍ಗಳು” ಪರಸ್ಪರ ವ್ಯಾಪಾರ-ವಹಿವಾಟಿನ ಪುನರ್ ವೃದ್ಧಿಯ ದೆಸೆಯಲ್ಲಿ ಪ್ರಥಮ ಹೆಜ್ಜೆಯಾಗಬೇಕು.
ಮುಂದುವರಿಯುವುದು….
ನಾಳೆ: ಭಾರತಕ್ಕೆ ಬುಲೆಟ್ ಬೇಕೆ?