ಅಂಕಣ

ಪ್ರೈವಸಿ- ಖಾಸಗಿತನ ಕೊನೆಗೂ ನಮ್ಮ ಮೂಲಭೂತ ಹಕ್ಕಾಯಿತು!

ಪ್ರಾಚೀನ ಕಾಲದ ಒಂದು ವಿಚಾರದಂತೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಮನೆಯಲ್ಲಿ ತಾನು ರಾಜನಂತಿರುತ್ತಾನೆ. ತನ್ನ ಮನೆಯಲ್ಲಿ ಆತನ ಅಧಿಕಾರ/ಕಾರುಬಾರು/ದರ್ಬಾರು ರಾಜನಂತಿರುತ್ತದೆ.  ಅರ್ಥಾತ್ ಯಾವುದೇ ವ್ಯಕ್ತಿ ತನ್ನ ಮನೆಯಲ್ಲಿ ಏನು ಮಾಡುತ್ತಾನೆ,ಹೇಗಿರುತ್ತಾನೆ?ಯಾವ ವಸ್ತುಗಳನ್ನು ಇಷ್ಟಪಡುತ್ತಾನೆ?ಅವನ ಜೀವನ ಶೈಲಿ/ ಬದುಕುವ ರೀತಿ ಹೇಗಿದೆ? ಇವೆಲ್ಲವೂ ಆತನ ವೈಯಕ್ತಿಕ ಅಧಿಕಾರದ ವ್ಯಾಪ್ತಿಗೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿವೆ. ಒಬ್ಬ ವ್ಯಕ್ತಿಗೆ ಖಾಸಗಿಯಾಗಿರುವ ಸಂಗತಿ ಅಥವಾ ವಿಚಾರ ಅಂತರ್ಗತವಾಗಿ, ವಿಶೇಷ ಅಥವಾ ಸೂಕ್ಷ್ಮವಾಗಿದೆ ಎಂದು ಅರ್ಥ. ವ್ಯಕ್ತಿಗತವಾದ ವಿಚಾರಗಳನ್ನು ಇಷ್ಟ ಕಷ್ಟಗಳನ್ನು ಯಾರೊಂದಿಗಾದರು ಹಂಚಿಕೊಳ್ಳುವದು ಬಿಡುವದು ವ್ಯಕ್ತಿಯ ಸ್ವ-ಇಚ್ಛೆಗೆ ಬಿಟ್ಟದ್ದು. ಇವೆಲ್ಲವುಗಳ  ಕೇಂದ್ರ ಬಿಂದು ಗೌಪ್ಯತೆ/ಖಾಸಗಿತನ- ಪ್ರೈವಸಿಯ ಅಧಿಕಾರ. ನಮ್ಮ  ದೇಶದ ಪ್ರಾಚೀನ ಪರಂಪರೆಯಲ್ಲೂ ಪ್ರೈವಸಿಯ ಕುರಿತು ಚರ್ಚೆಗಳಾಗುತ್ತಿದ್ದವು…ಈಗಲೂ ನಡೆಯುತ್ತಿವೆ.  ಗೌಪ್ಯತೆ/ಪ್ರೈವಸಿ ನಮ್ಮ ದೇಶದ ನಾಗರಿಕರ ಮೂಲಭೂತ ಹಕ್ಕುಗಳಲ್ಲೊಂದಾ ಅಥವಾ ಅಲ್ಲವೋ? ಎಂಬುದರ ಕುರಿತು ಸುಪ್ರೀಮ್ ಕೋರ್ಟ್’ನಲ್ಲಿ (ಪರ್ಯಾಲೋಚನೆಯಾಗಿ ಪರಾಮರ್ಶಿಸಲ್ಪಟ್ಟು) ವಿಚಾರಣೆ ನಡೆದು ಮೊನ್ನೆ ತಾನೇ ತೀರ್ಪು ಹೊರಬಿದ್ದಿದೆ.

ನಮ್ಮ ದೇಶದಲ್ಲಿ ಭಾರತ ಪಾಕಿಸ್ತಾನ ಸ೦ಬಂಧದ ಕುರಿತು ಬಿಸಿ ಬಿಸಿ  ಚರ್ಚೆಗಳು, ದಿನ ಬೆಳಗಾದರೆ ಜನರ ಜಾತಿ ಧರ್ಮದ ಕುರಿತು ವಾದ ವಿವಾದಗಳು ನಡೆಯುತ್ತವೆ, ಬೀಫ್ ಮತ್ತು ಗುಂಪು ಹಿಂಸಾಚಾರದ ಕುರಿತು ಆಂದೋಲನಗಳೇ ನಡೆಯುತ್ತವೆ. ಇಂತಹ ಸಂದರ್ಭಗಳನ್ನು  ಕೆಲ ಜನ ಹುರುಳಿಲ್ಲದ, ತರ್ಕಹೀನ, ಅಸಂಬದ್ಧ ವಿತಂಡವಾದವನ್ನು ಮಂಡಿಸಿ ದೇಶಕ್ಕೆ ಮಾರಕವಾದ ಅಜೆ೦ಡಾ ನಡೆಸಲು ಬಳಸಿಕೊಳ್ಳುತ್ತಾರೆ. ಆದರೆ ನಾವು ಗೌಪ್ಯತೆ/ಪ್ರೈವಸಿಯ ಅಧಿಕಾರದ ಕುರಿತು ಕಿಂಚಿತ್ತೂ ಜಾಗರುಕರಾಗಿಲ್ಲ. ನಮ್ಮ ವೈಯಯಕ್ತಿಕ ಮಾಹಿತಿಗಳನ್ನು ಅಂತರ್ಜಾಲದಲ್ಲಿ,  ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್,ಟ್ವೀಟರ್, ಗೂಗಲ್ ಆನ್ ಲೈನ್ ವ್ಯಾಪಾರ ವಹಿವಾಟಿನ ಜಾಲತಾಣಗಳಾದ ಫ್ಲಿಪ್ ಕಾರ್ಟ್, ಅಮೆಜಾನ್-ಗಳಲ್ಲಿ ನಿರ್ಭಿಡೆಯಿಂದ, ನಿರ್ಭೀತಿಯಿಂದ ಮೊದಲೇ ಹಂಚಿಕೊಂಡಿದ್ದೇವೆ.  ನಮ್ಮ  ದೇಶದಲ್ಲಿ ಜನರ ಮಾನಸಿಕತೆ ಹೇಗಿದೆಯಂದರೆ ಏನಾದರು  ಪುಕ್ಕಟೆಯಾಗಿ ದೊರೆಯುವುದೆಂದರೆ, ಸಾಧಕ ಬಾಧಕಗಳ ಕುರಿತು ವಿಚಾರಿಸದೇ ಧಾರಾಳವಾಗಿ  ಅದಕ್ಕಾಗಿ ತಮ್ಮೆಲ್ಲ ಮಾಹಿತಿಯನ್ನು ಹಂಚಿಕೊಂಡು ಬಿಡುತ್ತಾರೆ. ನಮಗೆ ನಮ್ಮ  ವೈಯಕ್ತಿಕ ಮಾಹಿತಿಯ ಮಹತ್ವದ ಅರಿವಾಗಲಿ ಅಥವಾ  ಇದರಿಂದ ನಮ್ಮ ಜೀವನದ ಮೇಲೆ ಆಗಬಹುದಾದ ಪರಿಣಾಮಗಳ  ಅರಿವಾಗಲಿ  ಕಿಂಚಿತ್ತೂ ಇಲ್ಲ. ೨೧ನೇ ಶತಮಾನದಲ್ಲಿ  ನಮ್ಮ ವೈಯಕ್ತಿಕ /ಗೌಪ್ಯ /ಪ್ರೈವೇಟ್ ಎನ್ನಬಹುದಾದ ಮಾಹಿತಿಯ  ಬೆಲೆ ನಮ್ಮ ಊಹೆಗೂ ಮೀರಿದ್ದು.

ದೇಶದ ೧೩೦ ಕೋಟಿ ಜನತೆಯ ವೈಯಕ್ತಿಕ ಮಾಹಿತಿಯ ಮಹತ್ವವೇನು? ಇದರ ರಕ್ಷಣೆಯ ಅವಶ್ಯಕತೆ ಎಷ್ಟಿದೆ? ಎಂಬ ವಿಷಯಗಳ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ  ಚರ್ಚೆಯಾಯಿತು. ಈ ಚರ್ಚೆಯ ಮೂಲ ಉದ್ದೇಶ ಏನು? ಕೆಲ ಸಮಯದಿಂದ ಆಧಾರ ಕಾರ್ಡ್-ನ  ಸ೦ವಿಧಾನಿಕ  ಸಿಂಧುತ್ವವನ್ನು/ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್-ನಲ್ಲಿ ೨೦ ಕ್ಕೂ ಹೆಚ್ಚು ಅಹವಾಲುಗಳು ದಾಖಲಾಗಿದ್ದವು. ಈ ಅಹವಾಲುದಾರರು ಹೇಳುವಂತೆ ಆಧಾರ ಕಾರ್ಡ್ ಮಾಡಿಸುವಾಗ ತೆಗೆದುಕೊಂಡ ಫಿಂಗರ್ ಪ್ರಿಂಟ್ಸ್  ಮತ್ತು ಕಣ್ಣಿನ ಐರಿಸ್ ಸ್ಕ್ಯಾನ್ಗಳು ಜನರ ಸಂವೇದನಶೀಲ ಮತ್ತು ವೈಯಕ್ತಿಕ ಮಾಹಿತಿಯಾಗಿದ್ದು  ಇದರಿಂದ  ಜನರ ಗೌಪ್ಯತೆಯ/ಖಾಸಗಿತನದ ಉಲ್ಲಂಘನೆಯಾಗುತ್ತದೆ. ಪ್ರೈವಸಿ/ಗೌಪ್ಯತೆ ಒಂದು ಮೂಲಭೂತ ಹಕ್ಕು,ಯಾವುದೇ ಕಾರಣಕ್ಕೂ ಇದರ ಉಲ್ಲಂಘನೆಯಗಬಾರದೆಂಬುದು ಅಹವಾಲುದಾರರ ವಾದ. ಈ ವಿಷಯದ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ೯ ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ನೇಮಿಸಿತ್ತು. ಪ್ರೈವಸಿ ಅಥವಾ ಗೌಪ್ಯತೆಯ ಅಧಿಕಾರದ ಕುರಿತು ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಆದರೆ ಜೀವನದ(ಬದುಕುವ) ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು ಸಮಯದ ಕೂಗಿಗೆ ಓಗೊಟ್ಟು  ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳ ಶ್ರೇಣಿಗೆ ಸೇರಿಸಿದೆ, ಅದರಂತೆ ಗೌಪ್ಯತೆಯೂ ಮೂಲಭೂತ ಹಕ್ಕಾಗಬೇಕಾ? ಸಂವಿಧಾನಬದ್ಧವಾದ  ಸ್ವಾತಂತ್ರ್ಯದ ಅಧಿಕಾರವನ್ನು ಗೌಪ್ಯತೆ/ಪ್ರೈವಸಿಯ ಹಕ್ಕಿಲ್ಲದೆ ಅನುಭವಿಸಬಹುದಾ?ಇಂತಹ ಸ್ವಾತಂತ್ರ್ಯ ಪರಿಪೂರ್ಣವಾಗಿರುತ್ತದೆಯಾ? ಎಂಬೆಲ್ಲಾ ಪ್ರಶ್ನೆಗಳನ್ನು  ಅಹವಾಲುದಾರರು ಸುಪ್ರೀಮ್ ಕೋರ್ಟ್ನ ಮುಂದಿಟ್ಟಿದ್ದರು.

ಸುಪ್ರೀಮ್ ಕೋರ್ಟ್-ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಡಿ. ವಾಯ್. ಚಂದನಚೂಡ್’ರು ಟಿಪ್ಪಣಿ ಮಾಡುತ್ತಾ “ ನೀವು ಬೆಡ್ ರೂಮ್’ನಲ್ಲಿ ಏನು ಮಾಡುತ್ತೀರಿ ಎಂಬುದು   ನಿಮ್ಮ  ಖಾಸಗಿತನಕ್ಕೆ ಸಂಬಧಿಸಿದ್ದು ಆದರೆ ಪ್ರೈವಸಿ ಎಂಬುದು ಪ್ರತಿಯೊಂದು ಪ್ರಸಂಗ ಮತ್ತು ಪ್ರಕರಣಗಳಲ್ಲಿ ವಿಭಿನ್ನವಾಗಿರುತ್ತದೆ. ನೀವು ನಿಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ನಿಮಗಿದೆ. ಆದರೆ ಮಗು ಶಾಲೆಗೆ ಹೋಗಬೇಕೋ ಬೇಡವೋ ಎಂಬುದನ್ನೂ ಸರ್ಕಾರ ನಿರ್ಧರಿಸುವದು.”  ವಿಪರ್ಯಾಸವೆಂದರೆ ನಮ್ಮ  ದೇಶದಲ್ಲಿ ಕೇವಲ ೫೦೦ಎಂ.ಬಿ. ಡಾಟಾ ಉಚಿತವಾಗಿ ದೊರೆಯುವುದೆಂದರೆ ನಾವು ನಮ್ಮ ಸಕಲ ಖಾಸಗಿ ಮಾಹಿತಿಯನ್ನು ನಿಸ್ಸಂಕೋಚವಾಗಿ ಹಂಚಿಕೊಳ್ಳುತ್ತೇವೆ. ಕಳೆದ ವರ್ಷ ಉಚಿತ ಡಾಟಾ ಹಾಗೂ (ಜಿಯೋ) ಸಿಮ್’ಗಾಗಿ ಗಂಟೆಗಟ್ಟಲೆ ಬಿಸಿಲು/ಮಳೆಯನ್ನು ಲೆಕ್ಕಿಸದೇ ಕೋಟಿಗಟ್ಟಲೆ ಜನ ಉದ್ದವಾದ  ಸರದಿಯಲ್ಲಿ ನಿಂತು ಚಕಾರವೆತ್ತದೇ ಆಧಾರ ಕಾರ್ಡ್’ನ ವಿವರಗಳನ್ನು ಸಲ್ಲಿಸುವಾಗ  ಯಾವುದೇ ಪ್ರೈವಸಿಯ ಉಲ್ಲಂಘನೆಯೆನಿಸಲಿಲ್ಲ! ಆಗ ಯಾರಿಗೂ ಸುಪ್ರೀಮ್ ಕೋರ್ಟ್’ನಲ್ಲಿ ಅಹವಾಲು ಸಲ್ಲಿಸಬೇಕಿನಿಸಲಿಲ್ಲ!!   ಯಾವಾಗ ಸರಕಾರ ಸದುದ್ದೇಶಕ್ಕಾಗಿ, ಸರಕಾರಿ ಹಣ ಪೊಲಾಗುವದನ್ನು ತಪ್ಪಿಸಲು,ಕಪ್ಪು ಹಣವನ್ನು ಪತ್ತೆ ಹಚ್ಚಲು,ಬೇನಾಮಿ ಸಂಪತ್ತಿಗೆ ಕಡಿವಾಣ ಹಾಕಲು ಹಾಗೂ ನಕಲಿ ಪಾನ್ ಕಾರ್ಡ್ ಪತ್ತೆ ಹಚ್ಚಿ ರದ್ದುಗೊಳಿಸಲು ಹಾಗೂ   ವಿವಿಧ ಯೋಜನೆಗಳಿಗೆ ಆಧಾರ ಕಾರ್ಡ್’ನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತೋ ಕೆಲವರಿಗೆ ಖಾಸಗಿತನ ಹಾಗೂ ಗೌಪ್ಯತೆಯ ಕುರಿತು ಹಠಾತ್ ಜಾಗೃತಿ ಮೂಡಿತು!!  ಈ  ಚರ್ಚೆ ಇಂದು ನಿನ್ನೆಯದಲ್ಲ, ಸ್ವಾತಂತ್ರ್ಯ ಪೂರ್ವದಲ್ಲಿಯೂ ಪ್ರೈವಸಿಯ ಕುರಿತು ಅನೇಕ ವಿಚಾರ ವಿಮರ್ಶೆಗಳು ನಡೆದಿದ್ದವು. 1895ರ ಭಾರತೀಯ ಸಂವಿಧಾನದ ಬಿಲ್’ನಲ್ಲಿಯೂ ಗೌಪ್ಯತೆಯ ಅಧಿಕಾರದ ಕುರಿತು ಒತ್ತಿ ಹೇಳಲಾಗಿದೆ. ಈ ಬಿಲ್’ನ ಅನುಸಾರ ಪ್ರತಿಯೊಬ್ಬ ವ್ಯಕ್ತಿಯ ಮನೆ ಆತನ ಆಶ್ರಯ ತಾಣವಾಗಿದೆ.  ಸರಕಾರ ಯಾವುದೇ ಧೃಡವಾದ ಕಾರಣವಿಲ್ಲದೇ ಕಾನೂನಿನ  ಅನುಮತಿಯಿಲ್ಲದೇ ಅದರಲ್ಲಿ ಬೇಕೆಂದಾಗ ನುಗ್ಗುವಂತಿಲ್ಲ. ತದನಂತರ  ೧೯೨೫ರ ಮಹಾತ್ಮ ಗಾಂಧೀಜಿಯವರು ಸದಸ್ಯರಾಗಿದ್ದ ಸಮಿತಿಯು ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್‘ನಲ್ಲೂ ಗೌಪ್ಯತೆಯ ಉಲ್ಲೇಖವಿತ್ತು. ಈ ವಿಷಯದ ಕುರಿತು ನಮ್ಮ ದೇಶದ ಜನತೆಯಲ್ಲಿ ಜಾಗೃತಿ ಮತ್ತು ಅರಿವು ಅಷ್ಟಕಷ್ಟೆ.

ವಿಶ್ವದ ಅತ್ಯಂತ ಪುರಾತನ ಪ್ರಜಾಪ್ರಭುತ್ವವಾದ ಅಮೆರಿಕದಲ್ಲಿ ಸ೦ವಿಧಾನದಲ್ಲಿ ಲಿಖಿತವಾಗಿರದಿದ್ದರೂ ಪ್ರೈವಸಿಯ ಅಧಿಕಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲಿಯ ಸರ್ವೋಚ್ಚ ನ್ಯಾಯಾಲಯ ಅನೇಕ ತಿದ್ದುಪಡಿಗಳ ನಂತರ ‘ರೈಟ್ ಟು ಪ್ರೈವಸಿ’ಯ ಅಸ್ತಿತ್ವವನ್ನು ಸಿಂಧುಗೊಳಿಸಿತು.ಅಮೆರಿಕದಲ್ಲಿಯೂ ಆಧಾರ ಕಾರ್ಡ್’ನಂತೆಯೇ ಪ್ರತಿಯೊಬ್ಬರಿಗೂ   ಸೋಶಿಯಲ್ ಸೆಕ್ಯೂರಿಟಿ ನಂಬರ್ ಇದೆ. ಆದರೆ ಗೌಪ್ಯತೆಯ ಕಾರಣದಿಂದ ಅದನ್ನು ಗುರುತಿನ ಚೀಟಿಗಾಗಿ  ಅನಿವಾರ್ಯವಾಗಿಸಿಲ್ಲ. ಆದರೆ ಯಾವುದೇ ಸರಕಾರಿ ಯೋಜನೆಗಳ/ಸೌಲಭ್ಯಗಳ ಲಾಭ ಪಡೆಯಲು  ಸೋಶಿಯಲ್ ಸೆಕ್ಯೂರಿಟಿ ನಂಬರ್’ನ್ನು ಕಡ್ಡಾಯವಾಗಿ ನಮೂದಿಸಲೇ ಬೇಕು. ಇದೇ ರೀತಿ ಜಪಾನ್’ನಲ್ಲಿ ಪ್ರೈವಸಿ ಮೂಲಭೂತ ಹಕ್ಕಾಗಿಲ್ಲ ಆದರೆ ಜನರ ಗೌಪ್ಯ ಮಾಹಿತಿ ಮತ್ತು ಪ್ರೈವಸಿಯ ರಕ್ಷಣೆಗಾಗಿ ‘Act on the protection of personal information’ ಎಂಬ ಕಾನೂನು ಇದೆ. ಈ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸುವ ಮುನ್ನ ಆ ವ್ಯಕ್ತಿಗೆ ಮಾಹಿತಿ ನೀಡುವದು ಮತ್ತು ಅನುಮತಿ ಪಡೆಯುವದು ಅನಿವಾರ್ಯ. ತನ್ನ ನಾಗರಿಕರಿಗೆ ಐಡೆಂಟಿಟಿ ಕಾರ್ಡ್ ನೀಡಿದ ಜಗತ್ತಿನ  ಮೊಟ್ಟ ಮೊದಲ ರಾಷ್ಟ್ರ ಸ್ವೀಡನ್. ಸ್ವೀಡನ್’ನಲ್ಲಿ ಪ್ರತಿಯೊಂದು ಮಗುವಿಗೂ ಕೂಡ ತನ್ನ ಐಡಿ ನಂಬರ್ ಕಂಠಪಾಠವಾಗಿರುತ್ತದೆಯಂತೆ! ಪ್ರತಿಯೊಂದು ಸರಕಾರಿ ಸೌಲಭ್ಯ ಪಡೆಯಲು ಈ ಐಡಿ ನುಂಬರ್ ಅನಿವಾರ್ಯ, ಈ ಐಡಿ ನ೦ಬರ್ ಸಾರ್ವಜನಿಕವಾಗಿದ್ದರೂ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು  ಬಳಸುವ ಮುನ್ನ ಆ ವ್ಯಕ್ತಿಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು.

ಆಧಾರ್ ಕಾರ್ಡ್’ನಿಂದ ನಮ್ಮ ನಾಗರಿಕರನ್ನು ಗುರುತಿಸಲು, ಸರಕಾರಿ ಹಣ ಪೋಲಾಗುವುದನ್ನು ತಪ್ಪಿಸಿ ಸರಕಾರಿ ಯೋಜನೆಗಳ  ಸೌಲಭ್ಯವನ್ನು  ಕೇವಲ ಅರ್ಹರಿಗೆ(ಬಡತನ ರೇಖೆಗಿಂತ ಕೆಳಗಿರುವ ಜನರಿಗೆ) ಮಾತ್ರ ತಲುಪಿಸಲು, ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವದು. ಒಂದೇ ಕಡೆ ಲಭ್ಯವಾಗುವ ಅಂಕಿ ಅಂಶಗಳು ಹಾಗೂ ಮಾಹಿತಿಯಿಂದ  ಅಪರಾಧಿಗಳನ್ನು/ದೇಶದ್ರೋಹಿಗಳನ್ನು/ಉಗ್ರವಾದಿಗಳ ಬೆಂಬಲಿಗರನ್ನು/ಆರ್ಥಿಕ ಅಪರಾಧಗಳನ್ನು  ಪತ್ತೆ ಹಚ್ಚುವಲ್ಲಿಯೂ ಆಧಾರ ಕಾರ್ಡ್ ನಿರ್ಣಾಯಕ ಪಾತ್ರ ವಹಿಸಲಿದೆ. ಆಧಾರ ಕಾರ್ಡ’ನಿಂದ ಸಾರ್ವಜನಿಕ ವಿತರಣಾ ಪ್ರಣಾಳಿಯನ್ನು (ಪಿ.ಡಿ.ಎಸ್.-ರೇಶನ್) ಹೇಗೆ ಸುಧಾರಿಸಬಹುದೆಂಬುದಕ್ಕೆ ಕರ್ನಾಟಕವೇ ಒಂದು ನಿದರ್ಶನ.ಆಧಾರ ಲಿಂಕ್ ಮಾಡಿ ಲಕ್ಷಗಟ್ಟಲೇ ನಕಲಿ ಬಿ.ಪಿ.ಎಲ್. ಕಾರ್ಡ್’ಗಳನ್ನು ಪತ್ತೆ ಹಚ್ಚಿ ರದ್ದು ಪಡಿಸಿ ಸರಕಾರಿ ಹಣದ ದುರುಪಯೋಗವನ್ನು ತಡೆಯಲಾಗಿದೆ.

ಆಧಾರ್-ಕಾರ್ಡ್’ನ ಮಾಹಿತಿ ಸುರಕ್ಷತೆಗಾಗಿ, ಸೈಬರ್ ಅಪರಾಧಗಳಿಂದ, ಹ್ಯಾಕರ್’ಗಳಿಂದ ಸಾರ್ವಜನಿಕರ ಗೌಪ್ಯ ಮತ್ತು ವ್ಯಕ್ತಿಗತ ಮಾಹಿತಿಯನ್ನು ರಕ್ಷಿಸಲು   ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ನಾಗರಿಕರಾದ ನಾವು ಕೂಡ ಜಾಗೃತರಾಗಿ ಸಾಮಾಜಿಕ  ಜಾಲತಾಣಗಳಲ್ಲಿ ನಾವಾಗಿಯೇ ನಮಗರಿವಿಲ್ಲದೇ ಬೇಜವಾಬ್ದಾರಿಯಿಂದ ಮಾಹಿತಿ ನೀಡುವ ಮುನ್ನ ಯೋಚಿಸಬೇಕು. ನಮ್ಮ ಫೋನ್ ನಂಬರ್,ಹುಟ್ಟಿದ ವರ್ಷ ದಿನಾಂಕ, ವಿಳಾಸ, ತೀರಾ ಖಾಸಗಿ ಎನ್ನಬಹುದಾದ ಫೋಟೋಗಳು, ಕ್ಷಣ ಕ್ಷಣಕ್ಕೂ ನಾವಿರುವ,ತಲುಪುವ,ಭಾಗವಹಿಸುವ ಕಾರ್ಯಕ್ರಮದ/ಲೋಕೇಶನ್ ಕುರಿತಾದ ಮಾಹಿತಿಗಳನ್ನು ಬೇಕಾಬಿಟ್ಟಿಯಾಗಿ ಶೇರ್ ಮಾಡುವ ಮುನ್ನ ಒಮ್ಮೆ ವಿಚಾರಿಸಬೇಕು. ಯಾವುದೇ ಅಶ್ಲೀಲ , ದ್ವೇಷಮಯ ಅಥವಾ ನಿಂದನೀಯ ಪೋಸ್ಟಗಳನ್ನು ಲೈಕ ಅಥವಾ ಶೇರ್ ಮಾಡದೇ ಇರುವದು ಹೆಚ್ಚು ಸೂಕ್ತ. ಇಂತಹ ಪೋಸ್ಟಗಳನ್ನು ಶೇರ್ ಮಾಡುವುದರಿಂದ ಆಗಬಹುದಾದ ಅನಾಹುತಗಳಲ್ಲಿ ಅನವಶ್ಯಕವಾಗಿ ಸಿಲುಕಿಕೊಳ್ಳುವದರಿಂದ ತಪ್ಪಿಸಿಕೊಳ್ಳಬಹುದು. ಯಾವ ವ್ಯಕ್ತಿಯನ್ನು ನಾವು ವೈಯಕ್ತಿವಾಗಿ ಅರಿಯದೆ ಕೇವಲ ಜಾಲತಾಣಗಳ ಮುಖಾಂತರ ಅರಿತು ಅಂಥವರೊಂದಿಗೆ ಗೆಳೆತನ ಬೆಳೆಸುವದೂ ಸೂಕ್ತವಲ್ಲ, ಇಂಥ ಜನರ ಫ್ರೆಂಡ್ ರಿಕ್ವೆಸ್ಟ್’ಗಳನ್ನು ಮುಲಾಜಿಲ್ಲದೇ ಡೀಲೀಟ್ ಮಾಡುವದು ಒಳಿತು. ಯಾವುದೇ ಕಾರಣಕ್ಕೂ  ಜನ್ಮ ದಿನಾಂಕವನ್ನು (ತಿಂಗಳು– ವರ್ಷಗಳ ಸಮೇತ)/ ಮೊಬೈಲ್ ನಂಬರ್-ನ್ನು, ಮಿಂಚ೦ಚೆಯನ್ನು ಅನವಶ್ಯವಾಗಿ  ಸೋಶಿಯಲ್  ಮೀಡಿಯಾದಲ್ಲಾಗಲಿ ಅಥವಾ ಅಪರಿಚಿತರೊಂದಿಗಾಗಲಿ/ದುಡ್ಡಿನ/ಲಾಟರಿ ಆಸೆ ತೋರಿಸಿ ಮೇಲ್ ಕಳಿಸುವ  ನಯವಂಚಕರೊಂದಿಗಾಗಲಿ  ಹಂಚಿಕೊಳ್ಳುವದು ಅಪಾಯಕಾರಿ. ಇದರಿಂದ ನಮ್ಮ ಕೆಲ ಗೌಪ್ಯ ಪಾಸ್’ವರ್ಡ್’ಗಳನ್ನು ಭೇದಿಸಲು  ಹ್ಯಾಕರ್’ಗಳಿಗೆ ಸಹಕಾರಿಯಾಗುತ್ತದೆ. 

ಇ೦ದಿನ ಯಾಂತ್ರಿಕ ಯುಗದಲ್ಲಿ  ಡೇಟಾದ್ದೇ (ಮಾಹಿತಿಯದ್ದೇ) ಕಾರುಬಾರು, ಡೇಟಾ-ನೇ ಕನಸಿನ ಭವಿಷ್ಯದ ಸಂಪತ್ತು!! ಆದರೆ ಗೌಪ್ಯತೆಯ ಮೂಲಭೂತ ಹಕ್ಕು ಆಹಾರ, ಬಟ್ಟೆ, ಸೂರು,ಉದ್ಯೋಗ ಮತ್ತು ಸುರಕ್ಷತೆಯ ಅಧಿಕಾರಗಳ ನಂತರವಷ್ಟೆ. ನಮ್ಮ ಸಂವಿಧಾನ ನಮಗೆ ಸಮಾನತೆಯ,ಸ್ವಾತಂತ್ರದ, ಶೋಷಣೆಯ ವಿರುದ್ಧ ಧ್ವನಿ ಎತ್ತುವ,ಧಾರ್ಮಿಕ ಸ್ವಾತಂತ್ರದ, ಸಂಸ್ಕೃತಿ ಮತ್ತು ಶಿಕ್ಷಣದ ಸಂಬಂಧಪಟ್ಟ ಅನೇಕ ಅಧಿಕಾರಗಳನ್ನು ನೀಡಿದೆ. ಸಂವಿಧಾನದಲ್ಲಿಯ ಸಕಲ ಮೂಲಭೂತ ಹಕ್ಕುಗಳು ಸ್ವಾತಂತ್ರದ ೭೦ ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ದೊರೆತಿವೆಯೇ?ಇಂದಿಗೂ ನಾವು ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೊರಡುತ್ತಿದ್ದೇವೆ.ಯಾವಾಗ ಜನರಿಗೆ ಹೊಟ್ಟೆ ತುಂಬ ಎರಡು ಹೊತ್ತು ಊಟ, ಮೈ ಮುಚ್ಚಿಕೊಳ್ಳಲು  ಬಟ್ಟೆ, ವಾಸಿಸಲು ಮನೆ, ಸಂಸಾರ ಸಾಗಿಸಲು ಉದ್ಯೋಗ, ಸಕಲ ಸಂಪನ್ಮೂಲಗಳು  ದೊರೆತಾಗ ಮಾತ್ರ ಪ್ರೈವಸಿಯ ಹಕ್ಕಿಗೆ  ಅರ್ಥ ಮತ್ತು ಮಹತ್ವ ಬರುತ್ತದೆ. ಬಡತನದಿಂದ ಬಳಲುತ್ತಿರುವ, ನಿರುದ್ಯೋಗಿಯಾದ, ಒಂದು ಹೊತ್ತು ಊಟಕ್ಕೂ ಗತಿಯಿಲ್ಲದ, ಕುಡಿಯಲು ಶುದ್ಧ ನೀರಿಗೂ ಪರದಾಡುವ, ಶೈಕ್ಷಣಿಕವಾಗಿ ಹಿಂದುಳಿದ ವ್ಯಕ್ತಿಗೆ ಗೌಪ್ಯತೆಯ/ಪ್ರೈವಸಿಯ ಅಧಿಕಾರ ಯಾವ ಪುರಷಾರ್ಥಕ್ಕಾಗಿ? ನಮ್ಮ ದೇಶದಲ್ಲಿ ನಾವು ನಿಜವಾಗಿ ಚರ್ಚಿಸಬೇಕಾದ ವಿಷಯಗಳ ಕುರಿತು ನಾವು ಚರ್ಚಿಸುವದೇ ಇಲ್ಲ!! ರೈಲಿನಲ್ಲಿ ಸೀಟಿಗಾಗಿ ಆದ ಜಗಳ ಬೀಫ್’ನ ತಿರುವು ಪಡೆದು ಒಬ್ಬ ವ್ಯಕ್ತಿಯ ಹತ್ಯೆಯಾಗುತ್ತದೆ. ಆದರೆ ನಾವು ಬೀಫ್ ಕುರಿತು ವಿವಾದ ಎಬ್ಬಿಸಿ  ಚರ್ಚಿಸಲು ಪ್ರಾರಂಭಿಸುತ್ತೇವೆ. ವಿಪರ್ಯಾಸವೆಂದರೆ ನಾವು ಎಂದಿಗೂ ರೈಲಿನಲ್ಲಿ ಎಲ್ಲಾ ಪ್ರಯಾಣಿಕರಿಗೆ ಸೀಟು ದೊರೆಯಬೇಕೆಂಬುದರ ಕುರಿತು ಚರ್ಚಿಸುವದೇ ಇಲ್ಲ.೭೦ ವರ್ಷದ ನ೦ತರವೂ ಪ್ರತಿ ಪ್ರಯಾಣಿಕನಿಗೆ ಏಕಿಲ್ಲ ಸೀಟಿನ ಅಧಿಕಾರ? ಪ್ರೈವಸಿಯು ನಮಗೆ ಖಂಡಿತವಾಗಿ ಬೇಕು. ಆದರೆ ದೇಶದ ಹಿತಕ್ಕಾಗಿ ಜನತೆಯ ಕಲ್ಯಾಣಕ್ಕಾಗಿ ಸರಕಾರದೊಂದಿಗೆ   ನಾಗರಿಕರು ಕೈ ಜೋಡಿಸಿದಾಗ ಮಾತ್ರ ಇದು ಸಾಧ್ಯ. ದೇಶದ ಸರ್ವೋಚ್ಚ ನ್ಯಾಯಾಲಯ ಪ್ರೈವಾಸಿ/ಖಾಸಗಿತನ ಒಂದು ಮೂಲಭೂತ ಹಕ್ಕೆಂದು ಮೊನ್ನೆ ತಾನೇ ತೀರ್ಪು ನೀಡಿದೆ. ಸಂವಿಧಾನ ನಾಗರಿಕರಿಗೆ ನೀಡಿದ ಸ್ವಾಂತ್ರ್ಯದ ಹಕ್ಕನ್ನು ಅನುಭವಿಸಲು ಪ್ರೈವಸಿ/ಖಾಸಗಿತನ/ಗೌಪ್ಯತೆ ಮೂಲಭೂತ ಹಕ್ಕಾದಾಗ ಮಾತ್ರ ಸಾಧ್ಯ ಎಂದು ತೀರ್ಪಿತ್ತದ್ದದ್ದು ಸ್ವಾಗತಾರ್ಹ. ಯಾವುದೇ ಕಾರಣಕ್ಕೂ ವೈಯಕ್ತಿಕ ಗೌಪ್ಯತೆಯ ಹರಣ ಸಲ್ಲ, ಇನ್ನಾದರೂ ಸರಕಾರ ನಾಗರಿಕರ ಹಕ್ಕುಗಳ ರಕ್ಷಣೆಗೆ ಸಮರ್ಪಕ  ಕ್ರಮಗಳನ್ನು ಕೈಗೊಂಡು ನಿಜ ಅರ್ಥದಲ್ಲಿ ರಾಮರಾಜ್ಯವನ್ನು ಸ್ಥಾಪಿಸುತ್ತದೆಯೆಂದು ಆಶಿಸೋಣ.

 

 

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!