ಅಂಕಣ

ಪಶ್ಚಿಮದಲ್ಲಿ ವಿಜ್ಞಾನದ ಸೂರ್ಯೋದಯ

ಭಾರತದಲ್ಲಿ ಗಣಿತದ ಜೊತೆಜೊತೆಯಲ್ಲೇ ಖಗೋಲಶಾಸ್ತ್ರ, ಖಭೌತಶಾಸ್ತ್ರವೂ ವಿಕಾಸ ಕಂಡಿತು. ಪ್ರಾಚೀನ ಜ್ಞಾನರಾಶಿಯಾದ ವೇದಗಳಲ್ಲೇ ಖಗೋಲಶಾಸ್ತ್ರದ ಹುಟ್ಟನ್ನು ಕಾಣಬಹುದು. ಲಗಧ ಮಹರ್ಷಿಯಿಂದ ಕಂಡುಕೊಳ್ಳಲ್ಪಟ್ಟ ವೇದಾಂಗ ಜ್ಯೋತಿಷದಲ್ಲಿ ಖಗೋಲದ ವಿಸ್ತಾರವಾದ ವಿವರಣೆಯಿದೆ. ಹಗಲು ರಾತ್ರಿಗಳ ಪ್ರಮಾಣ, ಸೂರ್ಯನ ಸ್ಥಾನ, ನಕ್ಷತ್ರಗಳು ಹಾಗೂ ಗ್ರಹಗಳು, ಗ್ರಹಣಗಳು, ಕ್ರಾಂತಿವೃತ್ತ ಮತ್ತು ವಿಷುವಗಳು ಇತ್ಯಾದಿಗಳ ಕಲ್ಪನೆಯನ್ನು ವೇದಾಂಗ ಜ್ಯೋತಿಷ ಕಟ್ಟಿಕೊಡುತ್ತದೆ. ವೇದೋತ್ತರ ಕಾಲದಲ್ಲಿ ಆರ್ಯಭಟ, ಬ್ರಹ್ಮಗುಪ್ತ, ವರಾಹಮಿಹಿರ, ಭಾಸ್ಕರ, ಭಾಸ್ಕರಾಚಾರ್ಯ, ಮಂಜುಲಾಚಾರ್ಯರೇ ಮೊದಲಾದವರು ಖಗೋಲಶಾಸ್ತ್ರವನ್ನು ಇನ್ನಷ್ಟು ಬೆಳೆಸಿದರು. ಕ್ರಿ.ಶ. ಐದನೇ ಶತಮಾನದ ಸುಮಾರಿಗೆ ಜೀವಿಸಿದ್ದ ಆರ್ಯಭಟ ಭೂಮಿಯ ಗೋಲಾಕಾರದ ಬಗೆಗೆ, ಭೂಮಿಕ ದೈನಿಕ ಪರಿಭ್ರಮಣೆಯ ಬಗೆಗೆ ಹಾಗೂ ಸೂರ್ಯ ಮತ್ತು ಭೂಮಿಯ ನಡುವಿನ ಸಾಪೇಕ್ಷ ಚಲನೆಯಿಂದಾಗಿ ಹಗಲು-ರಾತ್ರಿ ಉಂಟಾಗುವುದರ ಬಗೆಗೆ ಸೇರಿದಂತೆ ಹತ್ತು ಹಲವು ಖಭೌತ ವಿಚಾರಗಳನ್ನು ತನ್ನ ಆರ್ಯಭಟೀಯಂ ಕೃತಿಯಲ್ಲಿ ಚರ್ಚಿಸಿದ್ದಾನೆ. ನಂತರ ದೇಶ ಪರಕೀಯರ ಆಕ್ರಮಣಕ್ಕೊಳಗಾಗಿ ಜ್ಞಾನಸಂಪತ್ತಿನ ಅಪಾರವಾದ ನಷ್ಟವಾದರೂ ಕೂಡ ಖಗೋಲಶಾಸ್ತ್ರ ಉಳಿದು ಬೆಳೆದುಕೊಂಡು ಬಂದಿತಷ್ಟೇ ಅಲ್ಲದೆ ಈ ವಿಚಾರಗಳು ಪಶ್ಚಿಮದೆಡೆಯೂ ಸಾಗಿದವು. ಬ್ರಹ್ಮಗುಪ್ತನ ಬ್ರಹ್ಮಸ್ಫುಟ ಸಿದ್ಧಾಂತ ಹಾಗೂ ಖಂಡಖಾದ್ಯಕ ಅರಬ್ಗೆ ಅನುವಾದವಾಗಿ ಜನಪ್ರಿಯವಾಗಿದ್ದವು ಎಂದು ಅಲ್ ಬೆರೂನಿ ಉಲ್ಲೇಖಿಸುತ್ತಾನೆ. ಆರ್ಯಭಟನ ಮೇಲ್ಪಂಕ್ತಿಯ ಪರಂಪರೆ ಹದಿನೈದನೇ ಶತಮಾನದ  ಕೇರಳದ ಖಗೋಲಜ್ಞ ಪರಮೇಶ್ವರನವರೆಗೂ ಮುಂದುವರೆದು ಬಂದುದನ್ನು ಕಾಣಬಹುದು. ಆತನ ಶಿಷ್ಯ ನೀಲಕಂಠ ಸೋಮಯಾಜಿ ನೀಡಿದ ಸೌರವ್ಯೂಹ ಮಾದರಿ ಬಹುಪಾಲು ಆಧುನಿಕ ಮಾದರಿಯನ್ನೇ ಹೋಲುತ್ತದೆ.

ಇತ್ತ ಭಾರತದಲ್ಲಿ ನವನವಾನ್ವೇಷಣೆಗಳಾಗುತ್ತಿದ್ದರೆ ಅತ್ತ ಪಾಶ್ಚಾತ್ಯ ಜಗತ್ತು ಅಂಧಕಾರ ಯುಗವನ್ನು ಸವೆಸುತ್ತಿತ್ತು. ಮೂಢನಂಬಿಕೆಗಳ ಆಗರವಾಗಿದ್ದ ಯುರೋಪ್ನಲ್ಲಿ ವಿಜ್ಞಾನದ ಬೆಳಕು ಮೂಡಿದ್ದು ಕೋಪರ್ನಿಕಸ್ನ ರೂಪದಲ್ಲಿ, ಸರಿಸುಮಾರು ಆರ್ಯಭಟನ ಸಾವಿರ ವರ್ಷಗಳ ನಂತರ!

   

ಅದು ಹದಿನೈದನೇ ಶತಮಾನ. ಚಲನೆಯ ಬಗೆಗೆ ಅರಿಸ್ಟಾಟಲ್ ಹೇಳಿದ ಮಾತುಗಳನ್ನೇ ಇಡೀ ಯುರೋಪ್ ನಂಬಿಕೊಂಡು ಕುಳಿತ ಕಾಲವದು. ಹಾಗಾಗಿ ಭೂಮಿ ವಿಶ್ವದ ಕೇಂದ್ರ ಎಂಬುದು ಅಂದಿನ ಸಹಜ ನಂಬಿಕೆಯಾಗಿತ್ತು. ಭೂಮಿ ಸ್ಥಿರವಾಗಿದೆ ಹಾಗೂ ಭೂಮಿಯ ಸುತ್ತ ಸೂರ್ಯ ಹಾಗೂ ಗ್ರಹಗಳು ಸುತ್ತುತ್ತವೆ ಎಂದು ವಿದ್ಯಾಲಯಗಳಲ್ಲೂ, ಚರ್ಚಗಳಲ್ಲೂ ಬೋಧಿಸಲಾಗುತ್ತಿತ್ತು. ಅಂತಹ ಕಾಲದಲ್ಲಿ ಬದುಕಿದ ಖಗೋಲಜ್ಞ ನಿಕೋಲಸ್ ಕೋಪರ್ನಿಕಸ್. ಪೋಲೆಂಡ್ ರಾಜ್ಯದ ರಾಯಲ್ ಪ್ರಶಿಯಾದಲ್ಲಿ ಓರ್ವ ವ್ಯಾಪಾರಿಯ ಮಗನಾಗಿ 1473ರಲ್ಲಿ ಈತ ಜನಿಸಿದ. ಆತನ ವಿದ್ಯಾಭ್ಯಾಸ ನಡೆದದ್ದು ಕ್ರಾಕೋವ್ ಆಸ್ಟ್ರಾನಾಮಿಕಲ್ ಮ್ಯಾಥಮ್ಯಾಟಿಕಲ್ ಸ್ಕೂಲ್ ಎಂಬಲ್ಲಿ. ಆತನ ಗುರು ಆಲ್ಬರ್ಟ ಬ್ರುಡ್ಜೆವಸ್ಕಿ ಎಂಬಾತನು ಅರಿಸ್ಟಾಟಲ್ ಫಿಲಾಸಫಿಯ ಬೋಧಕನಾಗಿದ್ದರೂ ತರಗತಿಯ ಹೊರಗಡೆ ಖಗೋಲವನ್ನೂ ಬೋಧಿಸುವ ಖಯಾಲಿ ಇಟ್ಟುಕೊಂಡಿದ್ದನಂತೆ. ಹಾಗಾಗಿ ನಿಕೋಲಸ್ ನಿಗೆ ಅರಿಸ್ಟಾಟಲ್ ಪ್ರಣೀತ ಸಿದ್ಧಾಂತಗಳು ಹಾಗೂ ಖಗೋಲವೆರಡನ್ನೂ ಚೆನ್ನಾಗಿ ತಿಳಿಯಲು ಅನುಕೂಲವಾಯಿತು. ನಿಕೋಲಸ್ನಿಗೆ ಅರಿಸ್ಟಾಟಲ್ ಹಾಗೂ ಟಾಲೆಮಿಯ ಸಿದ್ಧಾಂತಗಳು ಅಷ್ಟಾಗಿ ಸರಿಗಾಣಲಿಲ್ಲ. ಆತನ ಹಲವು ಸಂದೇಹಗಳನ್ನು ಪರಿಹರಿಸುವಲ್ಲಿ ಭೂಕೇಂದ್ರವಾದ ವಿಫಲವಾಯಿತು. ಹಾಗಾಗಿ ಭೂಕೇಂದ್ರ ಸಿದ್ಧಾಂತದಲ್ಲೇ ತಪ್ಪಿದೆ ಎಂದು ನಿಕೋಲಸ್ ಗ್ರಹಿಸಿದ. ಇದು ತನ್ನದೇ ಆದ ಹೊಸ ಸಿದ್ಧಾಂತವನ್ನು ರೂಪಿಸುವಂತೆ ನಿಕೋಲಸ್ನನ್ನು ಪ್ರೇರೇಪಿಸಿತು.

           

ಭೂಮಿಯು ವಿಶ್ವದ ಕೇಂದ್ರವಲ್ಲ, ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ, ಬದಲಿಗೆ ಭೂಮಿ ಮತ್ತು ಗ್ರಹಗಳೇ ಸೂರ್ಯನ ಸುತ್ತ ಸುತ್ತುತ್ತಿವೆ. ಹಾಗಾಗಿ ಸೂರ್ಯನೇ ವಿಶ್ವದ ಕೇಂದ್ರ ಎಂಬುದು ಆತನ ವಿಚಾರ. ಆದರೆ ಆತ ತನ್ನ ಸಿದ್ಧಾಂತವನ್ನು ಸಾರ್ವಜನಿಕಗೊಳಿಸುವ ಸಾಹಸ ಮಾಡಲಿಲ್ಲ. ಆತನಿಗೇ ತನ್ನ ಸಿದ್ಧಾಂತದ ಮೇಲಿದ್ದ ಸ್ವಲ್ಪಮಟ್ಟಿನ ಅಪನಂಬಿಕೆ ಇದಕ್ಕೆ ಒಂದು ಕಾರಣ. ಇದಕ್ಕಿಂತ ಪ್ರಮುಖ ಕಾರಣವೆಂದರೆ ಪಾರಂಪರಿಕವಾಗಿ ಬಂದಿದ್ದ ನಂಬಿಕೆಯನ್ನು ವಿರೋಧಿಸಿದರೆ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಳ್ಳಬೇಕಾಗುವುದೆಂಬ ಭಯ. ಕೊನೆಗೂ ಸ್ನೇಹಿತರ ಒತ್ತಾಸೆಯ ಮೇರೆಗೆ 1543ರಲ್ಲಿ ಆತನ ಸೌರಕೇಂದ್ರ ಸಿದ್ಧಾಂತವನ್ನು ಹೊಂದಿದ್ದ ಪುಸ್ತಕ ಆನ್ ದ ರೆವಲೂಶನ್ಸ್ ಆಫ್ ಸೆಲೆಸ್ಟಿಯಲ್ ಸ್ಪಿಯರ್ಸ್ ಮುದ್ರಣ ಕಂಡಿತು. ಅಷ್ಟರಲ್ಲಾಗಲೇ ಕಾಯಿಲೆಯಿಂದ ಬಳಲುತ್ತಿದ್ದ ಕೋಪರ್ನಿಕಸ್ ಇಹಲೋಕ ಯಾತ್ರೆ ಮುಗಿಸಿಯಾಗಿತ್ತು. ತನ್ನ ಪುಸ್ತಕದ ಮುದ್ರಿತ ಪ್ರತಿಯನ್ನು ನೋಡಿ ಕಣ್ತುಂಬಿಕೊಂಡೇ ಪ್ರಾಣಬಿಟ್ಟ ಎಂದೂ ಹೇಳಲಾಗುತ್ತದೆ.

ಕೋಪರ್ನಿಕಸ್ ಸಾಯುವಾಗ ತನ್ನ ವೈಚಾರಿಕತೆಗಲನ್ನೆಲ್ಲಾ ಪುಸ್ತಕದಲ್ಲಿ ತುಂಬಿಸಿ ಹೋದನಿರಬೇಕು, ಆ ಪುಸ್ತಕ ಆಧುನಿಕ ವಿಜ್ಞಾನದ ಬೆಳವಣಿಗೆಗೆ ಆಧಾರವಾಯಿತು. ಹಳೆಯ ಪಾರಂಪರಿಕ ಭೂಕೇಂದ್ರ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು, ಹೊಸ ಚಿಂತನೆಯ ಕಿಡಿ ಹಚ್ಚಿದ ಕೋಪರ್ನಿಕಸ್ ಮುಂದೆ ಘಟಿಸಲಿಕ್ಕಿದ್ದ ವಿಜ್ಞಾನದ ಕ್ರಾಂತಿಗಳಿಗೆ ನಾಂದಿ ಹಾಡಿದ.

ಭೂಮಿ ತಿರುಗುತ್ತದೆ ಎಂಬುದನ್ನು ಸಂಪ್ರದಾಯವಾದಿಗಳು ಹೇಗೂ ಒಪ್ಪಲು ಸಿದ್ಧರಿರಲಿಲ್ಲ. ಆದರೆ ಇದನ್ನು ಒಪ್ಪದಿರಲು ಮತೀಯ ಕಾರಣಗಳ ಹೊರತಾಗಿ ಕೆಲ ತಾರ್ಕಿಕ ಕಾರಣಗಳೂ ಇದ್ದವು. ಒಂದು ಉದಾಹರಣೆ ಗಮನಿಸೋಣ. ನಾನು ಚೀನಾದಲ್ಲಿದ್ದೇನೆ, ಇಲ್ಲಿಂದ ಯುರೋಪ್ಗೆ ಹೋಗಬೇಕು. ಆಗ ನಾನು ಆಗ ಯಾವ ವಿಮಾನವನ್ನೂ ಹುಡುಕ ಹೋಗುವುದಿಲ್ಲ. ಬದಲಿಗೆ ಒಂದು ಪ್ಯಾರಾಚೂಟ್ ಇಟ್ಟುಕೊಂಡು ಸ್ವಲ್ಪ ಮೇಲೆ ಹಾರಾಡುತ್ತಿರುತ್ತೇನೆ. ಭೂಮಿ ತಿರುಗುವ ಕಾರಣ ಕೆಳಗೆ ಯುರೋಪ್ ಬರುತ್ತೆ ತಾನೇ? ಇಳಿದುಕೊಂಡರಾಯಿತು. ಸರಿಯಲ್ಲ! ಈ ಸಮಸ್ಯೆಗೆ ಉತ್ತರಿಸಲು ಕೋಪರ್ನಿಕಸ್ನ ಸಿದ್ಧಾಂತ ಸಮರ್ಥವಾಗಿರಲಿಲ್ಲ. ಉತ್ತರಗಳು ಮುಂದೆ ದೊರೆಯಲಿಕ್ಕಿದ್ದವು.

ಬ್ರುನೋ ಬಲಿದಾನ: ವೈಜ್ಞಾನಿಕ ಜಗತ್ತು ಚಿರಕಾಲ ನೆನಪಿಟ್ಟುಕೊಳ್ಳಬೇಕಾದ ವ್ಯಕ್ತಿ ಜಿಯೋರ್ಡಾನೋ ಬ್ರುನೋ. ತನ್ನ ವೈಜ್ಞಾನಿಕ ಹಾಗೂ ಸೃಜನಶೀಲ ವಿಚಾರಗಳಿಗಾಗಿ ಆತ್ಮಾರ್ಪಣೆ ಮಾಡಿಕೊಂಡವ ಆತ. ಅವನು ಕೋಪರ್ನಿಕಸ್ ಹಚ್ಚಿದ ಕಿಡಿಯನ್ನು ಜ್ವಲಿಸುವ ಬೆಂಕಿಯಾಗಿಸಿದ.

   

ಮತಶ್ರದ್ಧೆಗೆ ವ್ಯತಿರಿಕ್ತವಾಗಿದ್ದ ಕೋಪರ್ನಿಕಸ್ನ ಚಿಂತನೆಗಳಿಗೆ ಮತೀಯವಾದಿಗಳಿಂದ ಅಷ್ಟೇನೂ ವಿರೋಧ ಬಂದಿರಲಿಲ್ಲ. ಸ್ಥಳೀಯ ಚರ್ಚನ ಮ್ಯಾಜಿಸ್ಟೇಟರ್ ಆಗಿದ್ದ ಸ್ಪಿನೊ, ತೊಲೊಸಾನಿ ಮತ್ತಿತರರು ಕೋಪರ್ನಿಕಸ್ ನ ಪುಸ್ತಕವನ್ನು ವಿರೋಧಿಸಿದರಾದರೂ ಹೆಚ್ಚಿನ ಕ್ಯಾಥೋಲಿಕ್ ಚರ್ಚಗಳು ಅವನ್ನು ಉಪೇಕ್ಷಿಸಿದವು. ಆತನ ಪುಸ್ತಕ ಪ್ರಚಾರ ಪಡೆಯುವ ಮೊದಲೇ ಆತ ಮರಣ ಹೊಂದಿದ್ದೂ ಇದಕ್ಕೆ ಕಾರಣವಿರಬಹುದೇನೋ. ಕೋಪರ್ನಿಕಸ್ನ ಸೌರಕೇಂದ್ರವಾದ ಯಾವೂದೇ ಜನಮನ್ನಣೆ ಪಡೆಯಲಕ್ಕಿಲ್ಲ ಎಂಬುದೂ ಅವರ ಭಾವನೆಯಾಗಿತ್ತು. ಆದರೆ ಅದಾಗಿ ಐವತ್ತು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಗೆಲಿಲಿಯೋ, ಕೆಪ್ಲರ್, ಬ್ರುನೋ ಮತ್ತಿತರೇ ಖಗೋಲಜ್ಞರೆಲ್ಲಾ ಸೌರಕೇಂದ್ರವಾದದ ಸಮರ್ಥಕರಾದರು. ಬ್ರುನೋ ಒಂದು ಹೆಜ್ಜೆ ಮುಂದೆ ಹೋಗಿ ದೂರದ ನಕ್ಷತ್ರಗಳೂ ಅವರ ಗ್ರಹಪರಿವಾದೊಂದಿಗೆ ತಮ್ಮಷ್ಟಕ್ಕೆ ತಾವೇ ಸುತ್ತುತ್ತಿರುತ್ತವೆ. ಈ ವಿಶ್ವವು ಅನಂತವಾಗಿದೆ ಹಾಗೂ ಇದಕ್ಕೆ ಕೇಂದ್ರವೆಂಬುದೇ ಇಲ್ಲ ಎಂದು ಪ್ರತಿಪಾದಿಸಿದ. ಆತನ ವಾದ ಸಂಪ್ರದಾಯವಾದಿಗಳನ್ನು ಕೆರಳಿಸಿತಷ್ಟೇ ಅಲ್ಲದೆ ತಮ್ಮ ಸೈದ್ಧಾಂತಿಕ ನೆಲೆಯೇ ಅಲ್ಲಾಡಬಹುದೆಂಬ ಹೆದರಿಕೆಯೂ ಕಾಡತೊಡಗಿತು. ಬ್ರುನೋನ ಸಿದ್ಧಾಂತದ ಮೇಲೆ ನಿರ್ಬಂಧ ಹೇರಲಾಯಿತು. 1593ರಂದ 1600ರ ತನಕ ನಡೆದ ಸುದೀರ್ಘ ವಿಚಾರಣೆಯ ವೇಳೆಯಲ್ಲಿ ಆತ ತನ್ನ ಅನಂತ ವಿಶ್ವದ ಕಲ್ಪನೆಯನ್ನು ಬದಲಾಯಿಸಿಕೊಳ್ಳುವಂತೆ ಒತ್ತಡ ಹೇರಲಾಯಿತು. ಅದನ್ನು ಆತ ಖಡಾಖಂಡಿತವಾಗಿ ನಿರಾಕರಿಸಿದ. ಕೊನೆಗೆ ಆತನನ್ನು ಸಂಪ್ರದಾಯವಿರೋಧಿ ಎಂದು ಘೋಷಿಸಿ ಮರಣದಂಡನೆ ಘೋಷಿಸಲಾಯಿತು.ಶಿಕ್ಷೆ ತೆಗೆದುಕೊಳ್ಳಲು ನನಗೆ ಆಗುತ್ತಿರುವ ಭಯಕ್ಕಿಂತ ಹೆಚ್ಚಿನ ಭಯ ಶಿಕ್ಷೆ ಕೊಡುವ ನಿಮಗೇ ಆಗಿದೆ ಎಂದು ನ್ಯಾಯಾಧೀಶರ ಬಳಿ ಹೇಳಿದನಂತೆ ಬ್ರುನೋ. ಆತನನ್ನು ತಲೆಕೆಳಗು ಮಾಡಿ ಬೆತ್ತಲೆಯಾಗಿ ನೇತುಹಾಕಲಾಯಿತು. ನಂತರ ಸಾರ್ವಜನಿಕವಾಗಿ ಬೆಂಕಿ ಹಚ್ಚಿ  ಸುಡಲಾಯಿತು. ಬ್ರುನೋನೊಂದಿಗೇ ಆತನ ವೈಜ್ಞಾನಿಕ ಚಿಂತನೆಗಳೂ ಉರಿದು ಹೋಗಬಹುದೆಂದು ಚರ್ಚೆ ಭಾವಿಸಿತು. ಆದರೆ ಆತನನ್ನು ಸುಡುತ್ತಿದ್ದ ಬೆಂಕಿಯ ಬೆಳಕಿನಲ್ಲಿ ವೈಜ್ಞಾನಿಕ ಸತ್ಯಗಳು ಇನ್ನಷ್ಟು ಸ್ಪಷ್ಟವಾಗಿ ಹೊಳೆಯತೊಡಗಿದವು.

Sumukha S

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!