ಅಂಕಣ

ಕನ್ನಡತಿಯರೆ ಪ್ರಾರಂಭ ಮಾಡಿದ ಭಾರತದ ಮೊದಲ ಆನ್-ಲೈನ್ ಮಾರುಕಟ್ಟೆತಾಣ ಇವಿಭಾ.ಕಾಂ

ಇಂದು ವಿಶ್ವ ಒಂದು ಗ್ರಾಮ ಅನ್ನುವ ಹಂತಕ್ಕೆ ಬಂದು ನಿಂತಿದೆ. ಅಂಗೈಯಲ್ಲಿಯ ಒಂದು ಪುಟ್ಟ ಮೊಬೈಲ್ ಮೂಲಕ ನಾವು ವಿಶ್ವದ ಬಗ್ಗೆ ತಿಳಿದುಕೊಳ್ಳಬಹುದು ಹಾಗೆ ವಿಶ್ವಕ್ಕೆ ನಮ್ಮ ಬಗ್ಗೆ ತಿಳಿಸಿಯೂಕೊಡಬಹುದು. ಇಂದಿನ ವ್ಯಾಪಾರ  ಉದ್ದಿಮೆಗಳು ಆನ್-ಲೈನ್ ಮಾರುಕಟ್ಟೆತಾಣಗಳಿಂದ ವಿಶ್ವವ್ಯಾಪಿ ಆಗುತ್ತಿವೆ. ಇದುವೆರೆಗೂ ಪುರುಷ ಪ್ರಧಾನವಾಗಿ ಕಂಡು ಬರುತ್ತಿದ್ದ ಆನ್-ಲೈನ್ ಮಾರುಕಟ್ಟೆತಾಣಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದರೇ ಹೊರತು ಮಹಿಳೆಯರೆ ಸೇರಿ ಯಾವುದೆ ಇಂತಹ ಪ್ರಯತ್ನ ಮಾಡಿರಲಿಲ್ಲ.

ಆದರೆ ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳಾ ಉದ್ಯಮಿಗಳಿಂದ ಅಭಿವೃದ್ಧಿಪಡಿಸಲ್ಪಟ್ಟ ಉತ್ಪಾದನೆಗಳು/ ಸೇವೆಗಳು ಮತ್ತು ಮಾರಾಟವನ್ನು ಪ್ರದರ್ಶಿಸುವ ವ್ಯವಸ್ಥೆಯುಳ್ಳ ಭಾರತದಲ್ಲಿರುವ ಏಕಮಾತ್ರ ಆನ್-ಲೈನ್ ಮಾರುಕಟ್ಟೆ ತಾಣವಾಗಿದೆ ಇವಿಭಾ.ಕಾಂ. ಇದನ್ನು ಪ್ರಾರಂಭಿಸಿದ್ದು ನಮ್ಮ ಬೆಂಗಳೂರಿನ  ಅಪ್ಪಟ  ಕನ್ನಡತಿಯರೆಂಬುದು ಹೆಮ್ಮೆಯ ವಿಷಯ. 2005ರಲ್ಲಿ  ಪ್ರಾರಂಭವಾದ ಈ ಆನ್-ಲೈನ್ ಮಾರುಕಟ್ಟೆ ತಾಣವು ಮಹಿಳೆಯರ ಮಾಲೀಕತ್ವದ ವ್ಯಾಪಾರ  ಅಥವಾ ಸೇವೆಗಳನ್ನು ಒದಗಿಸುವ ಏಕೈಕ  ಇ-ವಾಣಿಜ್ಯ ವೇದಿಕೆಯಾಗಿದೆ.

ಇವಿಭಾದ ಗುರಿ

ಮಹಿಳಾ ಮಾಲೀಕತ್ವವಿರುವ ಎಲ್ಲಾ ವ್ಯವಹಾರಗಳಿಗೂ ಆನ್ಲೈನ್ ವಾಣಿಜ್ಯ ಸಂಗಾತಿಯಾಗಿ ಕೆಲಸ ಮಾಡುವುದು.

ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆ, ಕೌಶಲಗಳನ್ನು  ಅಭಿವೃದ್ಧಿಪಡಿಸಿ  ಅವರು ಆರ್ಥಿಕವಾಗಿ  ಸ್ವತಂತ್ರರಾಗುವಂತೆ  ಮಾಡಿ, ಸದುಪಯೋಗ ಪಡಿಸಿಕೊಳ್ಳುವುದು. ತಮ್ಮ ವೈಯಕ್ತಿಕ ಆಯ್ಕೆ, ಆಯತೆಗಳನ್ನು ಬಲ್ಲ ಸದಸ್ಯರ ನಡುವೆ ಪರಸ್ಪರ ವ್ಯಾಪಾರ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಏರ್ಪಡಿಸುವುದೆ ಇ ವಿಭಾದ ಗುರಿಯಾಗಿದೆ.

ನಿರ್ವಹಣಾ ತಂಡ

ಇವಿಭಾದ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾದಿಕಾರಿಯಾದ  ಜಯಂತಿ ಕೆ. ರಾವ್ ಅವರಿಗೆ ವಾಣಿಜ್ಯೋದ್ಯಮಾಭಿವೃದ್ಧಿ ಮತ್ತು ತಂತ್ರಜ್ಞಾನಗಳ ಸೂಕ್ಷ್ಮ ಪರಿಚಯ ಮತ್ತು ಪರಿಣತಿಯಿದ್ದು, ಅವರು ಸುಪ್ರಸಿದ್ಧ ಮತ್ತು ಮುಂಚೂಣಿಯಲ್ಲಿರುವ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವವಿದೆ. ಅವರು ತಮ್ಮ ಆಳವಾದ ಪರಿಣತಿ ಮತ್ತು ಅನುಭವ ಹಾಗೂ ಕೌಶಲವನ್ನು ಇಲ್ಲಿ ಅಳವಡಿಸಿಕೊಂಡಿದ್ದು,  ಮಹಿಳಾ ಮಾಲೀಕತ್ವದ ಉದ್ಯಮಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿ ವಾಣಿಜ್ಯ ವೇದಿಕೆಯೊಂದನ್ನು ರೂಪಿಸಿದ್ದು, ಅವರು ತಮ್ಮ ಉತ್ಪಾದನೆಗಳು/ಸೇವೆಗಳನ್ನು ಯಶಸ್ವಿಯಾಗಿ ಡಿಜಿಟಲ್ ಜಗತ್ತಿನಲ್ಲಿ ಬಿಂಬಿಸಲು ಯೋಜಿಸಿದ್ದಾರೆ

ವಿಭಾದ ಸಹ ಸಂಸ್ಥಾಪಕರೂ ನಿರ್ದೇಶಕಿಯೂ ಆದ ಆರತಿ ಶಣೈ ಅವರು ಕಳೆದ ೧೫ ವರ್ಷಗಳಿಂದಲೂ ವಾಣಿಜ್ಯ ಸಂಸ್ಥೆ ಆಡಳಿತ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಅವರು ತಮ್ಮ ಕುಟುಂಬಸ್ವಾಮ್ಯದ ಉದ್ಯಮದಲ್ಲಿ ಅತ್ಯಂತ ಕ್ರಿಯಾಶೀಲ, ಚುರುಕು ಸ್ವಭಾವದ ಆಡಳಿತ ಪಾಲುದಾರರಾಗಿ ದುಡಿಯುತ್ತಿದ್ದಾರೆ. ಅವರು ಹಲವಾರು ಸರ್ಕಾರೀ ಆಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿರುವುದೇ ಅಲ್ಲದೆ,  ಉದ್ಯಮಿಗಳ ನಡುವೆ ಸಂಪರ್ಕ ಜಾಲವನ್ನು ಸೃಷ್ಟಿಸಬಲ್ಲ ಕೌಶಲವುಳ್ಳ ಮೇಧಾವೀ ಮಹಿಳೆಯಾಗಿದ್ದಾರೆ. ಇತ್ತೀಚೆಗೆ ನಮಗೆ ತಿಳಿದಿರುವಂತೆ ವಾಣಿಜ್ಯೋದ್ಯಮವು ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಪರಿಪಕ್ವ ಸ್ಥಿತಿಯಲ್ಲಿದೆ. ಆಕೆ ಹೊಸ ಬಗೆಯ ಅನ್ವೇಷಣೆ, ಹೊಸ ಆಯ್ಕೆ ಮಾಡುವ ರೀತಿ, ಮೆಚ್ಚುಗೆ ಗಳಿಸುವ ಕೊಡುಗೆ ನೀಡುವ ಮಿತಿಮೀರಿ ಕಾರ್ಯ ನಿರ್ವಹಿಸುವ ಪ್ರವೃತ್ತಿ ಹೊಂದಿದ್ದಾರೆ.

ಧ್ಯೇಯ:

ಮಹಿಳಾ ಉದ್ಯಮಿಗಳನ್ನು ವಾಣಿಜ್ಯಲೋಕದ ಯಾವುದೇ ರೀತಿಯ ಕಾರ್ಯಗಳನ್ನಾಗಲೀ, ಕಠಿಣ  ಸವಾಲುಗಳನ್ನಾಗಲೀ ಎದುರಿಸಲು ಸಬಲೀಕರಣಗೊಳಿಸಿ, ಸದೃಢ ವೇದಿಕೆಯೊಂದನ್ನು ಸೃಷ್ಟಿಸುವುದಾಗಿದೆ.

ದೃಷ್ಟಿಕೋನ:

ಮಹಿಳಾ ಉದ್ಯಮಿಗಳು ಇಂದು ಬಹುತೇಕ ತಂತ್ರಜ್ಞಾನಚಾಲಿತ  ಮಾರುಕಟ್ಟೆ ವ್ಯವಹಾರದ ವಾತಾವರಣದಲ್ಲಿ ಹೊಸ ಬಗೆಯ ಅತ್ಯುತ್ತಮ ವಾಣಿಜ್ಯ ಮಾದರಿಯನ್ನು ದೀರ್ಘಕಾಲದ ತಾಳಿಕೆ ಹಾಗೂ  ಯಶಸ್ವಿಯಾಗಿ ಇರುವಂತೆ  ರೂಪಿಸಲು ನೆರವಾಗುವುದಾಗಿದೆ.

ಮೌಲ್ಯ:

ಎಲ್ಲಾ ಭಾಗೀದಾರರಿಗೂ, ಗ್ರಾಹಕರಿಗೂ, ಸದಸ್ಯರಿಗೂ, ಸದಾ ಜಯಶೀಲವಾದ ಪ್ರಸ್ತಾವನೆಗಳನ್ನು ಮುಂದಿಡುವುದಾಗಿದೆ.

ಉದ್ದೇಶಿತ ವಲಯ

  • ಉತ್ಪಾದನೆಗಳ ವರ್ಗಗಳು
  • ಈಗಾಗಲೇ ವ್ಯಾಪಾರದಲ್ಲಿ ತೊಡಗಿರುವ ಅಭಿವೃದ್ಧಿಪಡಿಸಿರುವ  / ಮಾರಾಟ ಮಾಡಲಾರಂಭಿಸಿರುವ   ಉತ್ಪಾದನೆಗಳನ್ನು ಹೊಂದಿರುವ ಮಹಿಳೆಯರು
  • ಸೇವಾ ವರ್ಗಗಳಿಗೆ  ಸೇರಿದವು

ಉದ್ಯೋಗದಲ್ಲಿ ತೊಡಗಿರುವ ಎಲ್ಲಾ ಮಹಿಳೆಯರು ಕೌಶಲ, ಪ್ರತಿಭೆ ಮತ್ತು ಸಾಹಸೀ ಪ್ರವೃತ್ತಿಯಿರುವ  ೧೮ ವರ್ಷ ವಯೋಮಿತಿ ಮೀರಿರುವ ಯಾವುದೇ ಮಹಿಳೆಯು ನಮ್ಮ ಉದ್ದೇಶಿತ ವಿಧ್ಯಾರ್ಥಿ/ ಗೃಹಿಣಿ/ ಉದ್ಯೋಗದಸ್ಥ ಮಹಿಳೆ/ ಉದ್ಯಮಿಗಳಾಗಿರಬಹುದು ಎನ್ನುತ್ತಾರೆ ಇ ವಿಭಾದ ಸಹ ಸಂಸ್ಥಾಪಕರೂ ನಿರ್ದೇಶಕಿಯೂ ಆದ ಆರತಿ ಶಣೈ.

ಇಲ್ಲಿ ಒದಗಿಸಲಾಗುವ ಸೇವೆಗಳು

ಉದ್ಯಮಿ,ವ್ಯಾಪಾರಸ್ಥರಾದ,  ಉತ್ಪಾದನೆಯನ್ನು ತಯಾರಿಸುವ ಅಬಿವೃದ್ಧಿಪಡಿಸುವ  ಯಾವ ಮಹಿಳೆಯಾಗಲಿ, ನಮ್ಮಲ್ಲಿ ರಿಜಿಸ್ಟರ್ ಮಾಡಿಸಿದಾಗ  ಆನ್’ಲೈನ್ ಮೂಲಕ  ತಮ್ಮ ಉತ್ಪಾದನೆಗಳ ಮಾರಾಟ ಸಾಧ್ಯತೆಯಿರುವ ಗ್ರಾಹಕರನ್ನು ಕೂಡಲೇ  ತಲಪಬಹುದಾಗಿದೆ  ಎನ್ನುತ್ತಾರೆ ಇವಿಭಾದ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ  ಜಯಂತಿ ಕೆ. ರಾವ್.

ಬ್ಯಾನರ್/ಜಾಹಿರಾತುಗಳು: ವಿಶ್ವಾದ್ಯಂತ ಪ್ರಚಾರ ಮಾಡಬಹುದಾದ ಜಾಲತಾಣಗಳಲ್ಲಿ ಜಾಹಿರಾತು ಪ್ರದರ್ಶಿಸುವ ವೆಬ್ ಬ್ಯಾನರ್  ಅಥವಾ ವೆಬ್ ಜಾಹಿರಾತುಗಳು ನಿಮಗೆ ತಿಳಿದಿರಬಹುದು. ಈ ರೀತಿಯ ಜಾಹಿರಾತುಗಳಲ್ಲಿ ವೆಬ್ ಪುಟದಲ್ಲಿ ಆನ್’ಲೈನ್ ಜಾಹಿರಾತನ್ನು ಅಳವಡಿಸಲು ಅರ್ಹತೆ ಒದಗಿಸುತ್ತದೆ. ಹೀಗೆ ಮಾಡುವುದರಿಂದಾಗಿ, ಇತರೆ ಜಾಹಿರಾತುದಾರರ ಜಾಲತಾಣದೊಡನೆ ಕೊಂಡಿ ಕಲ್ಪಿಸಿ, ವೆಬ್ ಅಸ್ತಿತ್ವವನ್ನು ಉತ್ತಮಪಡಿಸಿ ಹೆಚ್ಚು ಗ್ರಾಹಕರನ್ನು ತಲಪುವಂತಾಗುತ್ತದೆ ಎನ್ನುತ್ತಾರೆ ಇ ವಿಭಾದ ಸಹ ಸಂಸ್ಥಾಪಕರೂ ನಿರ್ದೇಶಕಿಯೂ ಆದ ಆರತಿ ಶಣೈ.

ಮೌಲ್ಯಾಧಾರಿತ  ಹೆಚ್ಚುವರಿ ಸೇವೆಗಳು,ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದು, ಗ್ರಾಹಕರಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಅವಕಾಶಗಳು, ಅತ್ಯಾಧುನಿಕ ತಂತ್ರಜ್ಞಾನ ತರಬೇತಿ ಅವಕಾಶಗಳು, ಸದಸ್ಯರಿಗೆ ಹೊಸ ವ್ಯಾಪಾರ ವಿಧಾನದ ಸಕಾಲಿಕ ಮಾಹಿತಿ ಒದಗಿಸುವ ಸೇವೆ.ಯಾವುದೋ ಕುಗ್ರಾಮವೊಂದರ ಮಹಿಳೆ ಉತ್ಪಾದನೆ ಮಾಡಿ, ಅಭಿವೃದ್ಧಿಪಡಿಸಿರುವ ಉತ್ಪಾದನೆಗಳಿಗೆ ಸೂಕ್ತ ಪ್ರದರ್ಶನಾವಕಾಶ ನೀಡುವ ಉದ್ದೇಶದಿಂದ  ಮಹಾನಗರಗಳಲ್ಲಿ ಆರಂಭವಾಗಲಿರುವ ಇ-ವಿಭಾ ಮೆಟ್ರೋ ಮಳಿಗೆ ಸೌಲಭ್ಯ ಸೇವೆಗಳು ಲಭ್ಯವಾಗಲಿವೆ ಎನ್ನುತ್ತಾರೆ ಆರತಿ ಶಣೈ.

ಆನ್’ಲೈನ್ ಮಾರಾಟ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಉತ್ಪಾದನೆಗಳು:  ಹಣಪಾವತಿಯನ್ನೊಳಗೊಂಡ ಆನ್’ಲೈನ್ ಮಾರಾಟ

ಮಾರಾಟಗಾರರು ತಮ್ಮ ಉತ್ಪಾದನೆಗಳ  ವಿವರ,  ಮತ್ತು ಬೆಲೆಗಳ ಬಗ್ಗೆ ನಮ್ಮ ಪೋರ್ಟಲ್ ಗೆ ಉಚಿತವಾಗಿ ಅಪ್ಲೋಡ್ ಮಾಡುತ್ತಾರೆ. ನಾವು ಅವರ ಉತ್ಪಾದನೆಯು ಮಾರಾಟವಾದ ನಂತರ ಹೆಸರಿಗೆ ಮಾತ್ರ ಎಂದರೆ ಅಲ್ಪ ಕಮಿಶನ್ ಶುಲ್ಕವನ್ನು ಅದರ ಬೆಲೆಗಳಲ್ಲಿ ಕಡಿತ ಮಾಡಿಕೊಂಡು ಉಳಿಕೆ ಹಣವನ್ನು  ಎರಡು ವಾರದೊಳಗೆ ಅವರ ಸೆಲ್ಲರ್ ಖಾತೆಗೆ ಸಂದಾಯ ಮಾಡುತ್ತೇವೆ.

ಖರೀದಿ ಮಾಡುವವರು ತಮ್ಮ ಆರ್ಡರ್ ಸಲ್ಲಿಸಿ, ಇ-ವಿಭಾಗೆ  ನಿರ್ದಿಷ್ಟವಾದ ಎಂದರೆ ತಮಗೆ ಅಗತ್ಯವಾದ ಉತ್ಪಾದನೆಗೆ ಪಾವತಿ ಮಾಡಿದಾಗ  ಈ  ಆರ್ಡರಿನ ಪ್ರತಿಯು ಮೊದಲು ಮಾರಾಟಗಾರರಿಗೆ, ಬಳಿಕ ಸಂಚಾಲನಾದಾರ ಪಾಲುದಾರರಿಗೆ ತಲಪುತ್ತದೆ. ಖರೀದಿದಾರರಿಗೆ ಎಸ್ ಎಂಎಸ್ ಅಥವಾ ಇ-ಮೇಲ್ ಮೂಲಕ ಪಾವತಿ ಖಾತರಿ ಸಂದೇಶವನ್ನು ರವಾನಿಸಲಾಗುವುದು.  ಇ-ವಿಭಾ ಸಂಸ್ಥೆಯು  ಖರೀದಿದಾರರಿಗೆ ನೀಡುವ ಇನ್ ವಾಯ್ಸ್ ಇರಿಸಿ, ಪಾರ್ಸೆಲಿನ ಜೊತೆಯಲ್ಲಿ ರವಾನೆ ಮಾಡಲಾಗುವುದು  ಎನ್ನುತ್ತಾರೆ ಇ ವಿಭಾದ ಸಹ ಸಂಸ್ಥಾಪಕರೂ ನಿರ್ದೇಶಕಿಯೂ ಆದ ಆರತಿ ಶಣೈ.

ಸಂಚಾಲನಾ ವಿಭಾಗದವರು ಮಾರಾಟಗಾರರಿಗೆ ಕರೆ ಮಾಡಿ ಪಾರ್ಸೆಲನ್ನು ಸಿದ್ಧಪಡಿಸುವಂತೆ ಸೂಚನೆ ನೀಡುತ್ತಾರೆ. ನಂತರ ಅದನ್ನು ಅವರಿಂದ ಒಯ್ದು ಖರೀದಿದಾರರಿಗೆ ಮುಟ್ಟಿಸುತ್ತಾರೆ.

ನಮ್ಮ ಕಮಿಶನ್ ದರ ಬೇರೆ ಬೇರೆ ವರ್ಗದ ಉತ್ಪನ್ನಗಳಿಗೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಕ್ಲೋಥಿಂಗ್ ಅಕ್ಸೆಸರೀಸ್ ಮತ್ತು ಕರಕುಶಲ ವಸ್ತುಗಳಿಗೆ ಈ ದರವು ಬೇರೆಯಾಗಿಯೇ ಇರುತ್ತದೆ.

ನಾವು ಸೇವಾ ತೆರಿಗೆ ಹಾಗೂ  ಕುರಿಯರ್ ಖರ್ಚನ್ನೂ ಇದರಲ್ಲಿ ಸೇರಿಸುತ್ತೇವೆ.  ಇದನ್ನು ಮಾರಾಟಗಾರರಿಂದ ಪಡೆದು, ಉಳಿದ ಮೊತ್ತವನ್ನು  ಅವರಿಗೇ ತಲಪಿಸುತ್ತೇವೆ.

ಖರೀದಿದಾರರಿಗೆ ಕೊಂಡ ಸರಕನ್ನು ಹಿಂದಿರುಗಿಸಲು ಮೂರು ದಿವಸ ಕಾಲ ಮಿತಿ ಇರುತ್ತದೆ. ಈ ಮೊತ್ತವನ್ನು ಅವರಿಗೆ  ಎರಡು ವಾರಗಳೊಳಗೆ ಹಿಂದಿರುಗಿಸಲಾಗುತ್ತದೆ.

ಈ ಬಗ್ಗೆ ವಿವರವಾದ ನಿಯಮ ನಿಬಂಧನೆಗಳಿಗಾಗಿ ದಯವಿಟ್ಟು ಮೂಲ ಪುಟದಲ್ಲಿರುವ ಲಿಂಕ್ ಮೂಲಕ ತಿಳಿದುಕೊಳ್ಳಬಹುದು ಎನ್ನತ್ತಾರೆ  ಇವಿಭಾದ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾದಿಕಾರಿಯಾದ  ಜಯಂತಿ ಕೆ. ರಾವ್.

ವಿಸ್ತರಣೆ ಮತ್ತು ವಾಣಿಜ್ಯ ಯೋಜನೆಗಳು

ವಿಭಾ ಸಂಸ್ಥೆಯು ಎಲ್ಲಾ ಮೆಟ್ರೋ ಮಹಾನಗರಗಳಲ್ಲಿ 2018 ರ ವೇಳೆಗೆ ತನ್ನ ಸ್ವಂತ ಶಾಖೆಗಳನ್ನು  ಭಾರತಾದ್ಯಂತ ಇರುವ  ಮಹಿಳಾ ಉದ್ಯಮಿಗಳಿಗಾಗಿ ಆರಂಭಿಸಲಿದೆ. ಇವಿಭಾ ಮಳಿಗೆಗಳನ್ನು ಸ್ಥಾಪಿಸಿ  ಗ್ರಾಮೀಣ ಮಾರುಕಟ್ಟೆ ತಲಪುವಂತೆ  ಎಲ್ಲಾ ಮುಖ್ಯ ಜಿಲ್ಲೆಗಳಲ್ಲೂ ವಿಸ್ತರಿಸಲಾಗುವುದು. ಇದೇ ಅಲ್ಲದೆ, ನಮ್ಮ ಅಧಿಕಾರಿಗಳು ಸ್ಥಳೀಯ ಉತ್ಪಾದನಾ ಪಟ್ಟಿ, ವಿವರ ಇತ್ಯಾದಿಗಳನ್ನು ಸಂಗ್ರಹಿಸಿ,  ಇವಿಭಾ.ಕಾಂ ಗೆ ಆದಷ್ಟು ಬೇಗ ಅಪ್ಲೋಡ್ ಮಾಡಲಿದ್ದಾರೆ.

ಇ-ವಿಭಾ  ವೆಂಚರ್ ಕ್ಯಾಪಿಟಲ್ ಫಂಡನ್ನು ರೂಪಿಸಿ, ಮಹಿಳೆಯರಿಗಾಗಿ ಅವರಲ್ಲಿರುವ ಅರಳು ಪ್ರತಿಭೆ, ಅನ್ವೇಷಣಾ ಸಾಮರ್ಥ್ಯವನ್ನು ಪ್ರೋತ್ಸಾಹಿಸಲು ಧನ ಸಹಾಯ ಮಾಡವ ಯೋಜನೆಯನ್ನು ಹೊಂದಿದೆ.

ವಿದೇಶೀ ಮಾರುಕಟ್ಟೆಯಲ್ಲಿ ಭಾರತೀಯ ಮಹಿಳೆಯರು ಸಿದ್ದಪಡಿಸಿರುವ  ಸ್ವದೇಶಿ ವಸ್ತುಗಳಿಗೆ ಪ್ರವೇಶಗಳಿಸುವುದಾಗಿದೆಯೆನ್ನುತ್ತಾರೆ ಆರತಿ ಶಣೈ.

ಇ ವಿಭಾದ ಅಗತ್ಯ

ಇಂದಿನ ಡಿಜಿಟಲ್ ಯುಗದಲ್ಲಿ ಭಾರತದಾದ್ಯಂತ ನೆಲೆಸಿರುವ  ಉದ್ಯಮಶೀಲ ಹಾಗು ಸ್ವ ಉದ್ಯಮವುಳ್ಳ ಮಹಿಳೆಯರನ್ನು ಒಂದೇ ವೇದಿಕೆಯ ಮೇಲೆ ತಂದು, ಅವರು ಭದ್ರವಾಗಿ ನೆಲೆ ನಿಂತು ಬೆಳೆಯುವಂತೆ ಅವಕಾಶ ಕಲ್ಪಿಸಬೇಕಿದೆ. ಭಾರತದಾದ್ಯಂತ ನೆಲೆಸಿರುವ  ಮಹಿಳೆಯರು ತಮ್ಮ ವ್ಯಾಪಾರವನ್ನು ಆನ್  ಲೈನ್  ಆಗಿ ಸ್ಥಾಪಿಸಿಕೊಳ್ಳಲು  ಕೂಡಲೇ ನಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚಿನ ತಂತ್ರಜ್ಞಾನದ ಪರಿಚಯ ಹಾಗೂ ಹೂಡಿಕೆಯ ತಿಳಿವಳಿಕೆಯ ಅಗತ್ಯವಿರುವುದಿಲ್ಲ ಎನ್ನುತ್ತಾರೆ ಆರತಿ ಶಣೈ.

ಭಾರತದಾದ್ಯಂತ ನೆಲೆಸಿರುವ  ಮಹಿಳಾ ಉದ್ಯಮಿಗಳ ವಿಶಾಲ ಶ್ರೇಣಿಯ ಸಂಪರ್ಕಜಾಲ  ಇಲ್ಲಿ ಲಭ್ಯವಿರುತ್ತದೆ. ನಾವು ಪ್ರಾರಂಭಿಕ ಹಂತದ  ಮತ್ತು ಯುವ ಉದ್ಯಮಶೀಲ ಮಹಿಳೆಯರಿಗೆ ಸೂಕ್ತ ಶಿಕ್ಷಣ-ತರಬೇತಿ ನೀಡಿ, ಅವರಿಗೆ ವ್ಯಾಪಾರ ಮಾರ್ಗದರ್ಶನವನ್ನು ಪರಿಚಯದ ಮೂಲಕ  ನೀಡುವುದು, ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿ ವಾಣಿಜ್ಯ ಸಲಹೆಯನ್ನೂ ಒದಗಿಸುತ್ತೇವೆ. ಮಹಿಳೆಯರನ್ನು ಅವರ ಪ್ರಾದೇಶಿಕ ಮಟ್ಟದ ಆರ್ಥಿಕ ಚೌಕಟ್ಟಿನಲ್ಲಿ ಸಬಲೀಕರಣಗೊಳಿಸಿ,  ಸಣ್ಣ ಉದ್ಯಮದಿಂದ ಮಧ್ಯಮ ಸ್ತರದ ಉದ್ಯಮದ ಮಟ್ಟಕ್ಕೆ ಏರಲು ಸಹಕರಿಸುತ್ತೇವೆ. ಉದ್ಯಮಶೀಲತೆಯ ಮೂಲಕ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಗಳನ್ನು ಉತ್ತಮಪಡಿಸುವುದು ನಮ್ಮ ಆಶಯವಾಗಿದೆ ಎನ್ನುತ್ತಾರೆ  ಜಯಂತಿ ರಾವ್.

ನಮ್ಮ ಸಂಸ್ಥೆಯು ಭಾರತದಾದ್ಯಂತ ಇರುವ  ಮಹಿಳೆಯರೇ ಪಾಲ್ಗೊಳ್ಳುವ ಏಕಮಾತ್ರ ಆನ್’ಲೈನ್ ಮಾರಾಟ ಸಂಸ್ಥೆಯಾಗಿದ್ದು,  ಈ ಮೂಲಕ ಮಹಿಳೆಯು ತನ್ನ ಮನೆಯಿಂದಲೇ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡಿ ಆರ್ಥಿಕ ಸ್ವಾವಲಂಬನೆ ಪಡೆಯುವಂತಾಗುತ್ತದೆ. ನಾವು ಆಯೋಜಿಸುವ ವಸ್ತು ಪ್ರದರ್ಶನಗಳು/ ಪ್ರೋತ್ಸಾಹೀ ಮಾರಾಟ, ಸಂಪರ್ಕಜಾಲ ಏರ್ಪಡಿಸುವ ಸಮಾರಂಭಗಳ ಮೂಲಕ ನಿಮ್ಮ ಉತ್ಪನ್ನ/ಸೇವೆಗಳನ್ನು ಮಾರಾಟ ಮಾಡಲು ಸೂಕ್ತ ಪ್ರೋತ್ಸಾಹ ಲಭ್ಯವಿದೆ. ಗ್ರಾಮೀಣ ಪ್ರದೇಶಗಳ ಮಹಿಳಾ ಉದ್ಯಮಿಗಳು ಬೆಂಗಳೂರು ಮತ್ತು ಭಾರತದ ಇತರ ಮಹಾನಗರಗಳಲ್ಲಿನ ಇ- ವಿಭಾ ಮಳಿಗೆಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು.ಇ-ವಿಭಾ ಸಂಸ್ಥೆಯು ತಮ್ಮ ಸೇವೆಗಳನ್ನು ಆನ್’ಲೈನ್ ಮೂಲಕ ಪ್ರದರ್ಶಿಸುವ ಅವಕಾಶವನ್ನು ವಿಶೇಷವಾಗಿ ಮಹಿಳೆಯರಿಗೇ ನೀಡಿದ್ದು ಅವರು ತಮ್ಮ ಲಭ್ಯ ಗ್ರಾಹಕರನ್ನು ಹೆಚ್ಚು ಸಮಯ, ಹಣದ ವ್ಯಯವಿಲ್ಲದೆ ಶೀಘ್ರವಾಗಿ ತಲಪಲು ಸಾಧ್ಯವಾಗುತ್ತದೆ. ನಾವು ನಮ್ಮ ಸಂಪರ್ಕಜಾಲತಾಣಗಳ ಮೂಲಕ ನಮ್ಮ ನೋಂದಾಯಿತ ಸದಸ್ಯರಿಗೆ ನೆಟ್ವರ್ಕಿಂಗ್ ಇತ್ಯಾದಿ ಹಾಗೂ ಸಂಪರ್ಕಗಳನ್ನು ಒದಗಿಸಿ ಕೊಡುತ್ತೇವೆ ಎನ್ನುತ್ತಾರೆ ಆರತಿ ಶಣೈ.

ಎಸ್ ಡಬ್ಲ್ಯುಒಟಿ ವಿಶ್ಲೇಷಣೆ

  • ಸಬಲತೆ:  ಈ ಸಂಸ್ಥೆಯ ಸಂಸ್ಥಾಪಕರು ಇ-ವಾಣಿಜ್ಯ ಉದ್ಯಮ  ಮತ್ತು ವಾಣಿಜ್ಯ ಅಭಿವೃದ್ಧಿಯ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಮಹಿಳೆಯಾಗಿದ್ದಾರೆ.
  • ದೌರ್ಬಲ್ಯಗಳು: ಇಲ್ಲಿ ಉದ್ಯಮಿಗಳು ಮಹಿಳೆಯರೇ ಆಗಿರುವ ಕಾರಣ, ಅವರು ತಮ್ಮ ಉತ್ಪನ್ನಗಳು/ ಸೇವೆಗಳನ್ನು ನೋಂದಾಯಿಸುವುದು/ ಪೋಸ್ಟ್ ಮಾಡುವುದು ಸ್ವಲ್ಪ ಕಷ್ಟವೆನ್ನಬಹುದು. ಕಾರಣ ಅವರೆಲ್ಲಾ ನೆಟ್ ಸ್ನೇಹಿಯಾಗಿರುವುದಿಲ್ಲ  ಮತ್ತು ಆಫ್ ಲೈನ್ ಮಾರಾಟವೂ ಅವರಿಗೆ ಸಾಕಷ್ಟು ಸುಲಭವಾಗಿ ತೋರುವುದಿಲ್ಲ.

ಅವಕಾಶಗಳು:  ಇಲ್ಲಿ ನಡೆಯುವುದೆಲ್ಲಾ ಮಹಿಳಾ ಮಾಲೀಕತ್ವದ ವ್ಯಾಪಾರಗಳೇ  ಆಗಿರುತ್ತದೆ.

ಆತಂಕಗಳು: ಇಲ್ಲಿ ಯಾವ ಭಯ, ಆತಂಕಗಳಾಗಲೀ ಇರುವುದಿಲ್ಲ (ಇದು ಏಕಮಾತ್ರ ಸಂಸ್ಥೆಯಾದ ಕಾರಣ)

ನಮ್ಮ ಕನ್ನಡತಿಯರು ಪ್ರಾರಂಭ ಮಾಡಿರುವ ಆನ್ಲೈನ್ ಮಾರುಕಟ್ಟೆ ತಾಣ ಮಹಿಳೆಯರನ್ನು ಸಬಲಗೊಳಿಸುವುದರ ಜೊತೆಯಾಗಿ ಸಾಧನೆಯ  ಉತ್ತುಂಗ ತಲುಪಲಿ ಅಂತ ಹಾರೈಸೋಣ….

ಡಾ.ಗೀತಾ ತೆಕ್ಕೆವಾರಿ

geetatekkewari01@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!