Featured ಅಂಕಣ

ಇಬ್ಬಂದಿತನದಲ್ಲಿ ತಮ್ಮತನವನ್ನು ಕಳೆದುಕೊಂಡ ಬುದ್ಧಿ(?)ಜೀವಿಗಳು..

ಬರಗೂರು ರಾಮಚಂದ್ರಪ್ಪನವರ ಒಂದು ಲೇಖನ ವಿಶ್ವ ವಿದ್ಯಾಲಯದ ಪಠ್ಯ ಒಂದರಲ್ಲಿ ಸೇರ್ಪಡೆಯಾದ ಕುರಿತು ವಿವಾದ ಎದ್ದಿತ್ತು. ಆ ಕುರಿತು ಬರಗೂರ ರಾಮಚಂದ್ರಪ್ಪನವರು “ನನ್ನ ಸ್ನೇಹಿತರು ಹೇಳಿದ್ದನ್ನು ಉಲ್ಲೇಖಿಸಿದ್ದೇನೆ” ಎಂಬ ಉತ್ತರ ನೀಡಿ “ಸೈನಿಕರಿಗೆ ನೋವಾಗಿದ್ದರೆ(?) ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.  ಸ್ನೇಹಿತರು ಹೇಳಿದ್ದರ ಬಗ್ಗೆ ಶ್ರೀಯುತರು ಉಲ್ಲೇಖಿಸಿದ್ದು ದಿಟವಾದರೆ ಅದನ್ನವರು ಅನುಮೋದಿಸಿದಂತಲ್ಲವೇ ಅಥವಾ ಸ್ನೇಹಿತರ ಮಾತು ಅವರಿಗೆ ಒಪ್ಪಿತವೆಂದರ್ಥ ಅಲ್ಲವೇ? ವಿಶ್ವವಿದ್ಯಾಲಯದಲ್ಲಿ ಈ ಪಠ್ಯ ಪ್ರಕಟವಾಗಿದ್ದು ತಮಗೆ ಗೊತ್ತೇ ಇಲ್ಲ. ಮೌಖಿಕ ಒಪ್ಪಿಗೆಯನ್ನು ಮಾತ್ರ ಪಡೆದಿದ್ದಾರೆ ಎಂದರೆ ಒಪ್ಪಲು ಸಾಧ್ಯವೇ? ಬರೆದದ್ದೇ ನಿಜವೆಂದ ಮೇಲೆ ಆ ಬರವಣಿಗೆಯ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಅಲ್ಲವೇ? ಯಾರೋ ಹೇಳಿದ್ದು , ಎಲ್ಲಿಯೋ ಓದಿದ್ದು, ಎಲ್ಲಿಯೋ ನೋಡಿದ್ದು, ಈ ತರಹದ ಪದಪುಂಜಗಳನ್ನು ಬಳಸುವ ಲೇಖಕರ ಬರಹಗಳು ವಸ್ತುನಿಷ್ಟತೆ ಇಲ್ಲದೇ ತಮ್ಮದೊಂದು ನಿಲುವನ್ನು ಅನಾಮಿಕನ ಹೆಸರ ಮೇಲೆ ಉಲ್ಲೇಖಿಸಿರುತ್ತಾರಷ್ಟೆ. ಹಲವು ಜನರ ವಿರೋಧದ ಮೇರೆಗೆ ಆ ಪಾಠವನ್ನು ವಿಶ್ವವಿದ್ಯಾಲಯದವರು ಕೈಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಪಾಠವೊಂದನ್ನು ಸೇರಿಸುವ ಮೊದಲೇ ಈ ಕುರಿತು ವಿಶ್ವವಿದ್ಯಾಲಯ ಜಾಗೃತಿ ವಹಿಸಬೇಕಿತ್ತಲ್ಲವೇ?

ಲೇಖನದಲ್ಲಿ ಹಲವಾರು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಜನ್ನನ “ಯಶೋಧರ ಚರಿತೆ”ಯ ಉದಾಹರಣೆ ಕೊಟ್ಟು ಯಶೋಧರ ಯುದ್ಧಕ್ಕೆ ಹೋದ ಕಾರಣ ಅಮೃತಮತಿ ಅಷ್ಟಾವಕ್ರನನ್ನು ವರಿಸಿದಳು ಎಂಬ ಮಾತನ್ನು ಹೇಳಿದ್ದೀರಿ. ಮೂಲತಃ ಆ ಕಥೆಯ ತಾತ್ಪರ್ಯ ಕಥೆಯ ಅಂತ್ಯದಲ್ಲಿದೆ. ಹಿಟ್ಟಿನ ಕೋಳಿಯನ್ನು ಬಲಿ ಕೊಡುವ ಸಂದರ್ಭ ಅದರಲ್ಲೊಂದು ಆತ್ಮ ಹೊಕ್ಕು ಕಿಟಾರನೆ ಕಿರುಚುತ್ತೆ. ಅದರರ್ಥ ಎಲ್ಲ ಹಿಂಸೆಗಿಂತ ಸಂಕಲ್ಪ ಹಿಂಸೆ (ಕೋಳಿಯನ್ನು ಕಡಿಯುತ್ತಿದ್ದೇನೆ ಎಂದು ಮನಸ್ಸಲ್ಲಿ ಅಂದುಕೊಂಡು ಸಂಕಲ್ಪಿಸಿ ಹಿಟ್ಟಿನ ಕೋಳಿ ಕಡಿದರೂ ತಪ್ಪೆ) ಮಹಾಪಾಪ ಎಂಬುದು ಕಥೆಯ ತಾತ್ಪರ್ಯ. ಸಂಕಲ್ಪ ಹಿಂಸೆಯ ಕಾರಣಕ್ಕೆ ಏಳು ಜನ್ಮಗಳವರೆಗೆ ಯಶೋಧರ ಮತ್ತು ಅವನ ತಾಯಿ(ಹಿಟ್ಟಿನ ಕೋಳಿಯ ಬಲಿ ಕೊಡಲು ಸಲಹೆ ಇತ್ತಿದ್ದಕ್ಕೆ) ಪ್ರಾಣಿಗಳಾಗಿ ಹುಟ್ಟಿ ನಂತರ ಮನುಷ್ಯರಾಗಿ ಜನ್ಮ ತಾಳುತ್ತಾರೆ. ಅದನ್ನು ಬಿಟ್ಟು ತಾವು ಗಂಡ ಯುದ್ಧಕ್ಕೆ ಹೋದರೆ ಹೆಂಡತಿ ಕಾಮನೆಗಳನ್ನು ಸಹಿಸದೆ ವಿವಾಹೇತರ ಸಂಬಂಧವಿರಿಸಿಕೊಳ್ಳುತ್ತಾಳೆ ಎಂಬಂತೆ ಉಲ್ಲೇಖಿಸಿದ್ದೀರಿ. ಜೈನ ಧರ್ಮದ ಸೂಕ್ಷ್ಮವಾದ ಸಂಕಲ್ಪ ಹಿಂಸೆಯ ಬಗ್ಗೆ ಹೇಳುವ ಕಥೆಯ ಪೋಸ್ಟ್ ಮಾರ್ಟಮ್ ಮಾಡಿ ತಮಗೆ ಬೇಕಾದ ಭಾಗ ತೆಗೆದುಕೊಂಡು ತಮ್ಮ ಸಂದರ್ಭಕ್ಕೆ ಬೇಕಾದ ಹಾಗೆ ಬಳಸೋದು ಎಷ್ಟು ಸೂಕ್ತ. ಅದರ ಮೇಲೆ ಜಗತ್ತಿನೆಲ್ಲೆಡೆ ಯುದ್ಧ ಬಿಟ್ಟು ಶಾಂತಿ ನೆಲೆಸಲಿ ಎಂಬ ಧಾಟಿಯಲ್ಲಿ ನಾನು ಲೇಖನ ಬರೆದಿದ್ದೇನೆ ಎಂಬ ಸ್ಪಷ್ಟೀಕರಣ ಕೊಟ್ಟಿದ್ದೀರಿ. ಆದರೆ ಅಹಿಂಸೆ ಹಿಂಸೆಗಳ ಮಧ್ಯದ ಸೂಕ್ಷ್ಮಗಳನ್ನು ಎತ್ತಿ ತೋರಿಸುವ ಯಶೋಧರ ಚರಿತೆಯನ್ನೇ ತಪ್ಪಾಗಿ ಅರ್ಥೈಸಿದ್ದೀರಿ. ಆಕಾಸ್ಮಾತ್ ಯಶೋಧರ ಚರಿತೆಯಲ್ಲಿ ಯುದ್ಧವನ್ನು ಬೇಡ ಎಂದಿದ್ದರೆ ವಿಸ್ತರಣಾವಾದ ಸಲ್ಲದು ಎಂಬ ರೀತಿಯಲ್ಲಿರುತ್ತದೆ. ಭಾರತ ಯಾವತ್ತಿಗೂ ವಿಸ್ತರಣಾವಾದವನ್ನು ನೆಚ್ಚಿಕೊಂಡಿಲ್ಲ ಬದಲಾಗಿ ಕಾಲು ಕೆರೆದುಕೊಂಡು ಬಂದವರನ್ನು  ಬಗ್ಗು ಬಡಿದಿದೆ ಅಷ್ಟೆ.

“ಯುದ್ಧ ಒಂದು ಉದ್ಯಮ” ಎಂದು ಹೇಳುವ ತಾವು ಯಾವತ್ತಾದರೂ ಸೈನಿಕರ ಪರವಾಗಿ ಮಾತಾಡಿದ್ದೀರಾ? ಕಾಶ್ಮೀರದಲ್ಲಿ ಕಲ್ಲು ತೂರಾಟದಲ್ಲಿ ಭಾಗಿಯಾದವರ ಕುರಿತು ಕಾಳಜಿ ತೋರುತ್ತೀರಿ. “ಭಾರತ್ ತೇರೆ ತುಕಡೆ ಹೋಂಗೆ” ಎಂದು ಬೊಬ್ಬಿರಿವ ಆಜಾದಿ ಗ್ಯಾಂಗ್’ನವರ ಬಿಡುಗಡೆಗೆ ಪ್ರತಿಭಟಿಸುವ ನೀವು ಅದೇ ಭಾರತದ ಸಾರ್ವಭೌಮತ್ವದ ಸಲುವಾಗಿ ಹೋರಾಡೋ ಸೈನಿಕರಿಂದ ಗಡಿಗಳಲ್ಲಿ ಅತ್ಯಾಚಾರಗಳು ನಡೆಯುತ್ತವೆ ಎಂದು ಹೇಳುತ್ತೀರಿ. ಇದರಿಂದ ಯೋಧರ ಆತ್ಮಸ್ಥೈರ್ಯ ಕುಸಿಯುವುದಿಲ್ಲವೇ?

ನಿಮ್ಮಂಥ ಬುದ್ಧಿಜೀವಿಗಳು ಇಬ್ಬಂಧಿತನದ ಮಧ್ಯೆ ನಿಮ್ಮತನವನ್ನೇ ಜೀತಕ್ಕಿಟ್ಟು ಬದುಕುತ್ತಿದ್ದೀರಿ. ಬಸವಣ್ಣನವರ ಆದರ್ಶಗಳು ವಚನಗಳ ಉಲ್ಲೇಖ ಮಾಡುತ್ತೀರಿ. ಅದೇ ಬಸವಣ್ಣನವರು “ದಯವಿರಲಿ ಸಕಲ ಜೀವರಾಶಿಗಳಲ್ಲಿ” ಎಂಬುದನ್ನು ಮರೆತು ಕ್ಯಾಮರಾ ಕಣ್ಣಿಗೆ ಕುಕ್ಕುವ ಹಾಗೆ ದನದ ಮಾಂಸವನ್ನು ತಿಂದು ಬಿಡುತ್ತೀರಿ. ವಾಲ್ಮೀಕಿ, ವ್ಯಾಸ ಮಹರ್ಷಿಗಳು ಬೇಕು ಆದರೆ ರಾಮಾಯಣ, ಮಹಾಭಾರತಗಳೆಲ್ಲ ಮನುವಾದಿಗಳ ಕಟ್ಟುಕಥೆ ಎಂದು ಜರಿಯುತ್ತೀರಿ. ದಲಿತರ ಪರವಾಗಿ ಪುಂಖಾನುಪುಂಖವಾಗಿ ಮಾತಾಡುವ ನೀವು ಅಂಬೇಡ್ಕರ್ ಅವರು ವಿರೋಧಿಸಿದ ಕಮ್ಯುನಿಸಂನ್ನು ಕಣ್ಮುಚ್ಚಿ ಅಪ್ಪಿಕೊಳ್ಳುತ್ತೀರಿ. ಹಾಗಾದರೆ ನಿಮ್ಮ ವಾದಗಳಿಗೆ ಒಂದು ಅರ್ಥವಾದರೂ ಇದೆಯೇ? ಸಮಾನತೆ ಪ್ರಜಾಪ್ರಭುತ್ವ ಇತ್ಯಾದಿ ಕ್ಲೀಷೆಗಳೆ ನಿಮ್ಮ ಭಾಷಣದಲ್ಲಿ ಬಳಕೆಯಾಗುವ ಪದಪುಂಜಗಳು. ಗುಜರಾತಿನ ಯಾವುದೋ ಸಾಮಾನ್ಯಾತಿಸಾಮನ್ಯ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಬಡವನು ರಾಷ್ಟ್ರದ ಪ್ರಧಾನಿಯಾಗುವುದು ಸಮಾನತೆ ಮತ್ತು   ಪ್ರಜಾಪ್ರಭುತ್ವದ ಗೆಲುವಾಗಿ ನಿಮಗೆ ಕಾಣುವುದೇ ಇಲ್ಲ. ಒಂದೇ ಕುಟುಂಬದವರು ನಡೆಸಿದ ವಂಶಪಾರಂಪರ್ಯ ಆಡಳಿತ ನಿಮಗೆ ದಾಸ್ಯವಾಗಿಯೂ ಕಾಣುವುದಿಲ್ಲ.

ಎಲ್ಲ ಶಿಕ್ಷಣ ತಜ್ಞರನ್ನು ಮೂಲೆಗೊತ್ತಿ ಬೇಡದ ಸಮಯದಲ್ಲಿ ಪಠ್ಯಪುಸ್ತಕದ ಸರ್ಜರಿಗೆ ಮುಂದಾದಿರಿ. ಇವತ್ತಿಗೂ ಸುಮಾರು ಬೆರಳಚ್ಚು ದೋಷಗಳಾದಿಯಾಗಿ ತಪ್ಪು ಮಾಹಿತಿಗಳು ಪ್ರಕಟವಾಗಿವೆ. ರಾಜ್ಯದ ಕೆಲವು ಹಳ್ಳಿಗಳಿಗೆ ಇನ್ನು ಪಠ್ಯಪುಸ್ತಕ ಲಭಿಸಿಲ್ಲ. ಖಾಸಗಿ ವಾಹಿನಿಯವರು ನಡೆಸಿದ ಒಂದು ಚರ್ಚೆಯಲ್ಲಿ ರೋಹಿತ್ ಚಕ್ರತೀರ್ಥ, ವೃಷಾಂಕ್ ಭಟ್, ರಾಕೇಶ್ ಅವರು ಕೇಳಿದ ಯಾವ ಪ್ರಶ್ನೆಗೂ ತಾವು ಸ್ಪಂದಿಸಲಿಲ್ಲ.  ಅದೇ ಶಿಕ್ಷಣ ಸಚಿವರು ಸ್ಪಂದಿಸಿದರು. ಅವರ ಸಂದಿಗ್ಧವನ್ನು ನಾವು ಮಾತಿನಲ್ಲೇ ಅಳೆದು ತೂಗಿದರೆ ಅವರೂ ಕೂಡಾ ಒಲ್ಲದ ಮನಸ್ಸಿನಿಂದ ಪರಿಷ್ಕರಣೆಗೆ ಅಸ್ತು ಎಂದಂತಿದೆ. ಅಂತಿಮ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಎಲ್ಲವೂ ವಿಳಂಬವಾಗಿ ಶಿಕ್ಷಣ ಇಲಾಖೆಯೇ ಪೇಚಿಗೆ ಸಿಕ್ಕಿಕೊಂಡಿದೆ. ಹಲವಾರು ಪಾಠಗಳು ಒಂದು ಪ್ಯಾರಾ ಮತ್ತೊಂದು ಪ್ಯಾರಾದ ಮಧ್ಯೆ ಸಂಬಂಧಗಳೇ ಇಲ್ಲ. ಎಲ್ಲ ಕಡೆಯೂ ತಮ್ಮ ಸಿದ್ಧಾಂತಗಳನ್ನು  ತುರುಕುವ ಕೆಲಸವಾಗಿದೆಯೇ ಹೊರತು ವೈಚಾರಿಕ ನೆಲೆಗಟ್ಟಿನ ಬದಲಾವಣೆಗಳು ಇಲ್ಲವೇ ಇಲ್ಲ.

ಕೇಸರೀಕರಣವಿದೆ ಎಂಬ ಕಾರಣ ಕೊಟ್ಟು ಹಲವು ಪಾಠಗಳನ್ನು  ತೆಗೆದು ಹಾಕಿ ಬೇರೆ ಪಾಠಗಳನ್ನು ಭರ್ತಿ ಮಾಡಿದ್ದೀರಿ. ಅಂಥ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಅಬ್ದುಲ್ ಹಮೀದ್ ಎಂಬ ವೀರ ಸೇನಾನಿಯೊಬ್ಬನ ಕಥೆ ಹೇಳುವ “ಸಾಹಸಸಿಂಹ ಅಬ್ದುಲ್ ಹಮೀದ್” ಎಂಬ ಪಾಠ ೫ನೇಯ ತರಗತಿಯ ಆಂಗ್ಲ ಮಾಧ್ಯಮದ ಪಠ್ಯಪುಸ್ತಕದಲ್ಲಿತ್ತು. ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ವೀರಮರಣ ಹೊಂದಿದವನ ಬಗ್ಗೆ ಪತ್ರಿಕಾ ವರದಿಯನ್ನು ಆಧರಿಸಿದ ಪಾಠವದು.ನಾಲ್ಕೈದು ಟ್ಯಾಂಕರ್’ಗಳನ್ನು ನಾಶಗೈದು ವಿರೋಧಿಗಳ ಬಲ ಜಾಸ್ತಿಯಾದಾಗ ಧರೆಗುರುಳಿ ಉಸಿರು ಚೆಲ್ಲಿದವನ ಕಥೆಯದು. ಭಾರತ ಸರ್ಕಾರ ಮರಣೋತ್ತರವಾಗಿ ಅವನಿಗೆ “ಪರಮವೀರ ಚಕ್ರ”ವು ಕೊಟ್ಟಿತ್ತು. ಪರಿಷ್ಕೃತ ಮುದ್ರಣದಲ್ಲಿ ಅದು ಕಾಣುತ್ತಿಲ್ಲ. ಕೇಸರಿಕರಣವೆಂದರೆ ನೀವು ಕೊಡುವ ವ್ಯಾಖ್ಯಾನವಾದರೂ ಏನು? ಅಬ್ದುಲ್ ಹಮೀದ್ ಹಿಂದು ಅಲ್ಲ. ಭಾರತೀಯನಾಗಿ ಅವನ ಕೊಡುಗೆ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬಿತ್ತುವುದೇ ನಿಮ್ಮ ಸಮಸ್ಯೆ ಅನಿಸುತ್ತದೆ. ಕೇಸರಿಕರಣದ ನೆಪದಲ್ಲಿ ಮಾಡಿದ ಪರಿಷ್ಕರಣೆಯಲ್ಲಿ ರಾಷ್ಟ್ರೀಯತೆಯನ್ನು  ಬಗ್ಗುಬಡಿಯುವ ಕೆಲಸ ನಡೆದಿದೆ. ಇದು ಬರೀ ಒಂದು ಉದಾಹರಣೆ  ಇಂಥ ಹಲವು ಕಡೆ ವೈದಿಕ ಧರ್ಮವನ್ನು ಕಡೆಗಣಿಸಿದ್ದೀರಿ. ನಿಮ್ಮ ರಾಜಕೀಯ ಹಿತಾಸಕ್ತಿಗೆ ತರಾತುರಿಯ ನಿರ್ಧಾರ ತೆಗೆದುಕೊಂಡು ನಿರ್ವಹಿಸಲಾಗದೇ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದೀರಿ ಅಷ್ಟೆ.

ಬ್ರಾಹ್ಮಣ, ವೈದಿಕ, ಗೀತೆ, ಮಹಾಭಾರತ, ರಾಮಯಾಣ, ಹಿಂದುತ್ವ,  ಆರೆಸ್ಸೆಸ್, ರಾಷ್ಟ್ರೀಯತೆ, ಭೈರಪ್ಪನವರ ಕೃತಿಗಳು,ಇತ್ತೀಚೆಗಿನ ಮೋದಿ ಸರ್ಕಾರವನ್ನು ತೆಗಳುವುದನ್ನು ಬಿಟ್ಟು ನೀವು ಯಾವುದನ್ನೂ ಹೊಸತಾಗಿ ವಿಭಿನ್ನವಾಗಿ ಬರೆದೇ ಇಲ್ಲ.ಒಳ್ಳೆಯ ಸಂಸ್ಕಾರ ಮತ್ತು ದೇಶಾಭಿಮಾನವಿರುವ ಮಕ್ಕಳು ಹುಟ್ಟದೇ ಕನ್ನಯ್ಯಾ ಕುಮಾರ್’ನಂತಹ ಸಂತಾನಗಳು ಹುಟ್ಟಬೇಕು. ದೇಶ ತುಕಡಿಯಾಗಬೇಕು. ಎಲ್ಲೆಡೆ ಕಮ್ಯುನಿಸ್ಟ್ ತತ್ವ ಹಬ್ಬಬೇಕು. ಅದಕ್ಕೆ ನೀವು ನಿಮ್ಮತನವನ್ನು ಕಳೆದುಕೊಳ್ಳುವುದಕ್ಕೂ ಸಿದ್ಧರು. ಸಾಹಿತಿ ಎಂಬ ಹೆಸರಿನ ಕಾರಣಕ್ಕಾದರೂ ಒಂದೆರಡು ಒಳ್ಳೆಯ ಕೃತಿಗಳನ್ನು ರಚಿಸಿ ಇಲ್ಲವಾದರೆ ನಿಮ್ಮನ್ನು ತೆರೆಮರೆಯ ರಾಜಕಾರಣಿಗಳು ಎಂದು ಕರೆಯುವ ದಿನಗಳು ದೂರವಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!