ಮಳೆಯೆಂದರೆ ಬರೀ ನೀರಲ್ಲ… ಇನ್ನೇನು? ಮಳೆ ಬರುವಾಗ ನೀರು ಬರುತ್ತದಲ್ಲ … ಹೌದು. ಮಳೆ ಬಂದರೆ ನೀರಾಗುತ್ತದೆ, ಹಾಗೆಯೇ ಮಳೆ ಬರದಿದ್ದರೆ ನೀರಿಲ್ಲ ಅಲ್ವಾ? ಮೇ ಅಥವಾ ಜೂನಲ್ಲಿ ಮೊದಲ ಮಳೆ ಬಂದಾಗ ಅದರ ಜೊತೆಗೆ ಒಂದಿಷ್ಟು ಬಾಲ್ಯದ ನೆನಪುಗಳು ಸಹ ಬರುತ್ತವೆ… ನೆನಪುಗಳು ನೆನಪಿಗೆ ಬಂದಾಗ ಈ ಬಾಲ್ಯ ಮತ್ತೆ ಬರಬಾರದೇ ಎಂದು ಅನಿಸುವುದು ಸಹಜ… ಮಳೆ ಬರುವಾಗ, ಮಳೆಯಲ್ಲಿ ಕಳೆದ ದಿನಗಳು ನೆನಪಿಗೆ ಬರುವುದುಂಟು. ನೆನಪಿಗೆ ಬಂದ ಕೆಲವೊಂದು ಬಾಲ್ಯದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ಕೆಲವರಿಗೆ ಜನವರಿ ಹೊಸ ವರ್ಷವಾದರೆ, ಇನ್ನೂ ಕೆಲವರಿಗೆ ಯುಗಾದಿಯೆ ಹೊಸ ವರ್ಷ. ಶಾಲಾ ಮಕ್ಕಳಿಗೆ ಮಾತ್ರ ಜೂನ್ ಹೊಸ ವರ್ಷ ಎಂದರೆ ತಪ್ಪಾಗಲಾರದು. ಆಗಲೇ ಶುರುವಾಗುವ ಶಾಲಾ-ಕಾಲೇಜುಗಳು… ಕೆಲವರು ಹೋದ ಶಾಲೆಗೆ ಮತ್ತೆ ಹೋದರೆ, ಇನ್ನೂ ಕೆಲವರು ಬೇರೆ ಶಾಲೆಗೆ ಹೀಗೆ …. ಮೊದಲ ದಿನ ಹೊಸ ಬಟ್ಟೆ, ಹೊಸ ಕೊಡೆ, ಹೊಸ ಬ್ಯಾಗ್, ಹೊಸ ಶೂ, ಹೊಸ ಪುಸ್ತಕಗಳು.. ಹೀಗೆ ಎಲ್ಲಾ ಹೊಸತನ್ನು ಧರಿಸಿ ಅಕ್ಕ ಪಕ್ಕಪಕ್ಕದ ಮನೆಯ ಮಕ್ಕಳೆಲ್ಲ ಕೈ ಕೈ ಹಿಡಿದುಕೊಂಡು ಹೋಗುವ ದಿನಗಳಿದ್ದವು ಆಗ… ಅದರ ಮಜಾನೆ ಬೇರೆ. ಎಷ್ಟು ಒಳ್ಳೆಯ ಬಾಲ್ಯ ಅಲ್ವಾ? ಅನುಭವಿಸಿದವರಿಗಷ್ಟೇ ಗೊತ್ತು ಬಾಲ್ಯದ ಮಜಾ…
ಮಳೆ ಎಂದರೆ ಎಲ್ಲರಿಗೂ ಖುಷಿ ಅಲ್ವಾ? ಮಳೆಯಲ್ಲಿ ನೆನೆಯುವುದೆಂದರೆ ಅದೇನೋ ತುಂಬಾ ಖುಷಿ. ಆದರೆ ಮಳೆ ಬರುವಾಗ ಮನೆಯಿಂದ ಹೊರಗೆ ಹೋಗಲು ಬಿಡಬೇಕಲ್ಲ… ಮಳೆಯಲ್ಲಿ ನೆನೆದರೆ ಶೀತ ಆಗುತ್ತದೆ, ಜ್ವರ ಬರುತ್ತದೆ ಎಂಬ ಹಲವಾರು ಕಾರಣಗಳು. ಆದರೂ ಸಹ ದೊಡ್ಡವರ ಕಣ್ಣು ತಪ್ಪಿಸಿ ಅಥವಾ ಬೇಕೆಂದೇ ಕೊಡೆ ಬಿಟ್ಟು ಹೋಗಿ ಮಳೆಯಲ್ಲಿ ನೆನೆದದ್ದು ಇದೆ. ಮೈಯಲ್ಲಾ ಪೂರ್ತಿ ಒದ್ದೆಯಾದರೂ ಇನ್ನೂ ಮಳೆಯಲ್ಲಿ ನೆನೆಯಬೇಕೆಂಬ ಆಸೆ… ಮನೆಯೊಳಗಡೆ ಬರಲು ಮಳೆ ನಿಲ್ಲಲೇಬೇಕು, ಇಲ್ಲವಾದರೆ ಮಕ್ಕಳೆಲ್ಲ ಮನೆಯ ಹೊರಗಡೆ ಮಳೆಯಲ್ಲಿ ಆಟವಾಡುತ್ತಿರುತ್ತವೆ!!.
ಜೋರು ಮಳೆ ಬಂದಾಗ, ಹರಿಯುವ ನೀರಿನಲ್ಲಿ ಕಾಗದದ ದೋಣಿಯನ್ನು ತೇಲಿ ಬಿಡುತ್ತಿದ್ದೆವು. ಈಗ ಆ ದೋಣಿಯನ್ನು ಮಾಡುವುದು ಹೇಗೆ ಎಂದಾದರೂ ನೆನಪಿದೆಯಾ? ಒಮ್ಮೆ ನಿಮ್ಮ ನೆನಪಿನ ಶಕ್ತಿಯನ್ನು ಚೆಕ್ ಮಾಡ್ಕೊಳ್ಳಿ…ಇನ್ನು ಪುಸ್ತಕದ ಮಧ್ಯದಲ್ಲಿ ನವಿಲುಗರಿಯನ್ನು ಇಟ್ಟು, ಅದು ಯಾವಾಗ ಮರಿ ಹಾಕುತ್ತದೆ ಎಂದು ಕಾಯುವ ಕಾಲವೊಂದಿತ್ತು. ಬೇಗ ಮರಿ ಹಾಕಲೆಂದು ಸ್ವಲ್ಪ ಪೌಡರನ್ನು ಕೂಡ ಹಾಕಿ ಇಡುತ್ತಿದ್ದೆವು. ನಿಮಗೂ ನೆನಪಿದೆಯಾ? ಮತ್ತೆ… ಕಾಡಿನಲ್ಲಿ ಬೆಳೆಯುವ ಗಿಡ ಅದರ ಹೆಸರು ಕಾಡುಬಸಳೆ ಇರಬಹುದೇನೊ, ಸರಿಯಾಗಿ ಗೊತ್ತಿಲ್ಲ… ಆ ಗಿಡದ ಎಲೆಗಳನ್ನು ತಂದು ಪುಸ್ತಕದ ಮಧ್ಯದಲ್ಲಿ ಇಟ್ಟು, ಅದಕ್ಕೆ ಬೇರು ಬರುತ್ತದೆ, ಮತ್ತು ಅದರಿಂದ ಇನ್ನೊಂದು ಎಲೆ ಬೆಳೆಯುತ್ತದೆ ಎನ್ನುವ ನಂಬಿಕೆ. ಹೇಳಿದ ಹಾಗೆ ಬೇರು ಬರುತ್ತಿದ್ದದ್ದು ನೆನಪಿದೆ.
ಸ್ಲೇಟಲ್ಲಿ ಎರಡು ಬದಿ ಬರೆದುಕೊಂಡು ಹೋದರೆ, ಹೋಗುವಾಗ ಜೋರು ಮಳೆ ಬಂದು ಬರೆದದ್ದೆಲ್ಲಾ ಅಳಿಸಿ ಹೋಗುತ್ತಿತ್ತು. ಹೀಗಾಗಿ ಶಾಲೆಯಲ್ಲಿ ಟೀಚರ್ಗಳ ಬೈಗುಳ…, ಸ್ಲೇಟಲ್ಲಿ ಬರೆಯದೆ ಬಂದವರಿಗೆ ಮಳೆ ಒಂದು ವರದಾನ. ಬರೆದೇ ತರುವುದಿಲ್ಲ, ಇನ್ನು ಕ್ಲಾಸಲ್ಲಿ ಟೀಚರ್ ಕೇಳಿದರೆ ಬರವಾಗ ಮಳೆ ಬಂತು ಹಾಗಾಗಿ ಬರೆದದ್ದು ಅಳಿಸಿ ಹೋಯಿತು ಎಂದು ಹೇಳುತಿದ್ದದ್ದು ಇನ್ನೂ ನೆನಪಿದೆ. ಮಳೆಗೆ ಅದೇನೊ ಶಾಲಾ ಮಕ್ಕಳ ಮೇಲೆ ತುಂಬಾ ಪ್ರೀತಿ. ಯಾವಾಗ ಗೇಮ್ಸ್ ಕ್ಲಾಸ್ ಇದೆ, ಅದೇ ಸಮಯಕ್ಕೆ ಸರಿಯಾಗಿ ಮಳೆ ಬರುತ್ತಿತ್ತು. ಶಾಲೆಗೆ ಹೋಗುವ ಸಮಯ ಮತ್ತು ಶಾಲೆಯಿಂದ ಮನೆಗೆ ಬರುವ ಸಮಯಕ್ಕೆ ಸರಿಯಾಗಿ ಜೋರು ಮಳೆ ಬರುತ್ತಿತ್ತು. ಇಡೀ ದಿನ ಇಲ್ಲದ ಮಳೆ ಅದೇ ಸಮಯದಲ್ಲಿ ಬರುವುದೆಂದರೆ ಶಾಲಾ ಮಕ್ಕಳ ಮೇಲೆ ಇರುವ ಪ್ರೀತಿ ಅಲ್ಲದೆ ಇನ್ನೇನು? ಜೋರು ಗಾಳಿ ಮಳೆ ಬಂದಾಗ ಕೆಲವರ ಕೊಡೆಗಳು ಹಾರಿ ಹೋಗುತ್ತಿದ್ದವು. ತಮ್ಮ ಕೊಡೆಯನ್ನು ಹಿಡಿದು ತರಲು ಹರಸಾಹಸ ಪಡುತ್ತಿದ್ದದ್ದು ಈಗ ನೆನಪಿಸಿಕೊಂಡರೆ ನಗು ಬರ್ತಿದೆ. ಇನ್ನು ಕೆಲವರ ಕೊಡೆ ಗಾಳಿಗೆ ತಾವರೆ ಆಗುತ್ತಿತ್ತು, ಅಂದರೆ ಆಕಾಶಕ್ಕೆ ಮುಖ ಮಾಡಿರುತ್ತಿತ್ತು. ಅದನ್ನು ಸರಿಮಾಡಲು ಒಂದಷ್ಟು ಸಮಯ ಬೇಕಾಗುತ್ತಿತ್ತು. ಕೊಡೆ ಸರಿಯಾಗುವ ಸಮಯಕ್ಕೆ ನಾವು ಪೂರ್ತಿ ಒದ್ದೆಯಾಗುತ್ತಿದ್ದೆವು. ರೈನ್ಕೋಟ್ ಹಾಕಿದವರಿಗೆ ಅದನ್ನು ಹಾಕುವುದು ಮತ್ತು ತೆಗೆಯುವುದೇ ದೊಡ್ಡ ಸಾಹಸವಾಗುತ್ತಿತ್ತು. ಅವರಿಗೆ ರೈನ್ಕೋಟ್ ಒಂದೇ ಸಾಕಾಗುತ್ತಿರಲಿಲ್ಲ, ಅದರ ಜೊತೆಗೆ ಒಂದು ಕೊಡೆ ಇದ್ದೇ ಇರುತ್ತಿತ್ತು.
ಇತ್ತೀಚಿಗೆ ಒಮ್ಮೆ ನಾನು ಜೋರು ಗಾಳಿ-ಮಳೆಯಲ್ಲಿ ಸಿಕ್ಕಿಹಾಕಿಕೊಂಡಾಗ ಎಲ್ಲಾ ಹಳೆಯ ನೆನಪುಗಳು ಒಟ್ಟೊಟ್ಟಿಗೆ ಬಂದವು… ನೀವು ನಿಮ್ಮ ಕನಸಿನ ಲೋಕಕ್ಕೆ ಹೋಗಿದ್ದರೆ… ಕನಸು ಕಂಡಿದ್ದು ಸಾಕು ಮಾರ್ರೆ… ವಾಪಸ್ ಬನ್ನಿ ವಾಸ್ತವಕ್ಕೆ…