Featured ಅಂಕಣ

ಸರಳತೆ, ಸಾಧನೆ, ಸಾಮರಸ್ಯ ಭಾಷಾ ಪ್ರೇಮಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ಕನ್ನಡದ ಪೂಜಾರಿ

ಝೀ ಕನ್ನಡದ “ವೀಕೆಂಡ್ ವಿಥ್ ರಮೇಶ್” ಒಂದು ಕುಟುಂಬದವರೆಲ್ಲ ಕುಳಿತು ನೋಡುವ ಕಾರ್ಯಕ್ರಮ ಆದಷ್ಟು ಪ್ರಸಿದ್ಧವಾಗಲು ಕಾರಣವೇನು? ಎಂಬುದನ್ನು ಮತ್ತೊಂದು ಲೇಖನ ಬರೆದು ಈ ಸೀಸನ್ ಮುಗಿದ ನಂತರ ಹೇಳಬೇಕೆಂದಿರುವೆ. ಆದರೆ ಸರಳ ಸಜ್ಜನಿಕೆಯ ಪ್ರತೀಕವಾದ “ಹಿರೆಮಗಳೂರು ಕಣ್ಣನ್” ಅವರು ಆ ಸಾಧಕರ ಪೀಠದ ಮೇಲೆ ಕೂತ ಮೇಲೆ ನನಗೆ ಅವರೊಬ್ಬರ ಬಗ್ಗೆಯೇ ಬರೆಯೋಕೆ ಒಂದು ಲೇಖನದಷ್ಟು ಹರವು ಬೇಕು ಅಂತನಿಸಿತು. ಕಾಡಸುಮವಾಗಿ ತನ್ನ ಪಾಡಿಗೆ ತಾನರಳಿ ಅಲ್ಲಿಂದಲೇ ಪರಿಮಳ ಚೆಲ್ಲಿ ಮರೆಯಾಗಿ ಹೋಗಬೇಕಿದ್ದ ದೈತ್ಯ ಪ್ರತಿಭೆಯೊಂದನ್ನು ಜನರಿಗೆ ಪರಿಚಯಿಸಿದ ಹರಟೆ ವೇದಿಕೆಗೆ ಕನ್ನಡಿಗರೆಲ್ಲರೂ ಋಣಿಯಾಗಲೇಬೇಕು. ಸರಳತೆ, ಪ್ರಾಮಾಣಿಕತೆ , ಕನ್ನಡಪರ ಪ್ರೇಮ, ಸಾಮರಸ್ಯ, ಧಾರ್ಮಿಕ ಆಚಾರ ವಿಚಾರಗಳು, ಸಾಧನೆ ಇತ್ಯಾದಿಗಳಿಗೆ ನಾವು ಸದ್ಯದ ಪರಿಸ್ಥಿತಿಯಲ್ಲಿ ಕೊಡುತ್ತಿರುವ ವ್ಯಾಖ್ಯಾನಗಳೇ ಬೇರೆ. ಹೀಗಾಗಿ ಅವರ ಆ ಎಪಿಸೋಡ್’ನ್ನು ಬಳಸಿಕೊಂಡು ಸದ್ಯದ ಪರಿಸ್ಥಿತಿಗೆ ತೌಲನಿಕವಾಗಿ ತೂಗುತ್ತಾ ಈ ಲೇಖನ ಸಾಗುತ್ತದೆ.

ಮೊದಲಿಗೆ ಅವರು ಹೇಳಿದ್ದು “ಅಂಬಲಿ ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲಾ ಜಾಸ್ತಿ ಅಂತ.” ಬಡತನವನ್ನು ಒಬ್ಬ ಮನುಷ್ಯ ದಾರಿದ್ರ್ಯವಾಗಿ, ಕಷ್ಟವಾಗಿ, ಅನುಕಂಪದ ಸಾಧನವಾಗಿ ಬಳಸುವುದು ವಾಡಿಕೆ. ನಮ್ಮ ಹತ್ತಿರ ದುಡ್ಡಿರಲಿಲ್ಲ ಮನೆ ಮಠ ಇರಲಿಲ್ಲ ಎಂಬುದು ಅವರ ಬಾಯಿಂದ ಬರಲಿಲ್ಲ. ಅಕಸ್ಮಾತ್ ಆಗಿ ಬಂದಿದ್ದರೆ ಅದು ತೋರಿಕೆಯ ಪ್ರಾಮಾಣಿಕತೆಯೋ ಮತ್ತೊಂದೋ ಆಗುತ್ತಿತ್ತು. ಬದಲಾಗಿ ಅವೆಲ್ಲ ತಮಗೆ ಬೇಡಾ ಎಂಬ ನಿರ್ಲಿಪ್ತ ಭಾವ ಅವರದ್ದಾಗಿತ್ತು. ಮನುಷ್ಯ ಈ ಮಟ್ಟಿಗೆ ಐಹಿಕ ಭೋಗದ ವಸ್ತುಗಳಿಗೆ ಬೆನ್ನು ಮಾಡುವುದಕ್ಕೆ ಅದೆಷ್ಟು ಮನೋನಿಗ್ರಹ ಶಕ್ತಿ ಸಿದ್ಧಿಸಿಕೊಂಡಿರಬೇಕು ಎಂಬುದು ಅನೂಹ್ಯ ಸಂಗತಿ. ಇಂಥವರು ಉಲಿದ ಮಾತುಗಳಲ್ಲಿ ಶುದ್ಧ ಪ್ರಾಮಾಣಿಕತೆಯೂ ಬರೆದ ಬರಹಗಳಲ್ಲಿ ಸತ್ವ ಸಮೃದ್ಧಿಯ ಜೊತೆಜೊತೆಗೆ ಯಾವುದೇ ವಾದವನ್ನು ಮಂಡಿಸಿದಾಗ ತಾರ್ಕಿಕವಾಗಿರುತ್ತದೆಯೇ ಹೊರತು ಒಣಸಿದ್ಧಾಂತಗಳಿಗೆ ಒಳಗಾಗಿರುವುದಿಲ್ಲ. ಒಬ್ಬ ನಿಸ್ವಾರ್ಥ ವ್ಯಕ್ತಿಗೆ ಯಾರೊಬ್ಬರನ್ನು ಓಲೈಸುವ ಅವಶ್ಯಕತೆ ಇರುವುದಿಲ್ಲ. ಇಷ್ಟಪಟ್ಟು ಬಡವರಾಗುಳಿದ ಅವರು ಅದರಿಂದ ಹೊರಬರುವ ಗೋಜಿಗೆ ಹೋಗುವುದಿಲ್ಲ. ಇದು ಅವರ ಸರಳತೆ ಪ್ರಾಮಾಣಿಕತೆಯ ವಿಚಾರ.

ಕನ್ನಡಪರತೆಯ ಬಗ್ಗೆ ಮಾತಾಡಲೇಬೇಕು. ಇತ್ತೀಚೆಗೆ ಕನ್ನಡಾಭಿಮಾನ ಎಂಬುದರ ವ್ಯಾಖ್ಯಾನವೇ ಬದಲಾಗಿದೆ. ಕನ್ನಡ ಉಳಿಯಬೇಕಾದರೆ ಬೇರೆ ಭಾಷೆಯನ್ನು ತಡೆ ಹಿಡಿಯುವುದೊಂದೆ ಮಾರ್ಗವಲ್ಲ. ಯಾವುದೇ ಭಾಷೆ ಉಳಿಯಬೇಕೆಂದರೆ ಅದನ್ನು ಬಳಸಬೇಕು. ಬೇರೆ ಭಾಷೆಯ ಸತ್ವಯುತ ಅಂಶಗಳು ಅವು ಸಾಹಿತ್ಯ ಕೃತಿಗಳಾಗಲಿ ಸಿನಿಮಾ ಇನ್ನಿತರೆಗಳಾಗಿರಲಿ. ಒಳ್ಳೆಯದಾಗಿದ್ದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಅದನ್ನು ತರ್ಜುಮೆ ಮಾಡಿ ಬೇರೆ ಭಾಷೆಯ ಅರಿಯದ ಕನ್ನಡಿಗರಿಗೆ ಸುಲಭವಾಗಿ ತಲುಪುವ ಹಾಗೆ ಮಾಡಬೇಕು. ಬರೀ ಒಂದು ಸಿನಿಮಾವನ್ನೇ ದೊಡ್ಡ ವಿವಾದವಾಗಿಸುವ ಕಾಲದಲ್ಲಿ ಸಂಸ್ಕೃತದಲ್ಲಿನ ಕ್ಲಿಷ್ಟಕರ ಮಂತ್ರ ಶ್ಲೋಕಗಳನ್ನೇ ಕನ್ನಡೀಕರಿಸುವ ಕೆಲಸಕ್ಕೆ ಕೈ ಹಾಕಿ ಯಶಸ್ಸುಗೊಂಡು ದೇವಸ್ಥಾನವೊಂದರಲ್ಲಿ ಅದನ್ನು ಬಳಸಿ ಕನ್ನಡದ ಪೂಜಾರಿ ಎಂಬ ಹೆಸರು ಪಡೆದಿದ್ದು ನಿಜಕ್ಕೂ ಕನ್ನಡ ಸೇವೆ. ಇವತ್ತಿನ ಕೆಲವು(ಎಲ್ಲವೂ ಅಲ್ಲ) ಕನ್ನಡಪರ ಸಂಘಟನೆಗಳಲ್ಲಿನ ಮುಖ್ಯಸ್ಥರಿಗೆ ಕುವೆಂಪು ಬೇಂದ್ರೆ ಮಾಸ್ತಿ ಯಾರಂತೂ ಗೊತ್ತಿಲ್ಲ. ಕನ್ನಡವನ್ನು ಸುಸ್ಪಷ್ಟವಾಗಿ ಮಾತಾಡಲೂ ಗೊತ್ತಿಲ್ಲ. ಅವರ ಕನ್ನಡಪರ ಧೋರಣೆಗಳ ಹಿಂದೆ ಒಂದು ರಾಜಕಾರಣದ ಛಾಯೆಯೂ ಮಂದವಾಗಿ ಕಾಣುತ್ತದೆ.  ಇಡೀಯ ರಾಮಾಯಣವನ್ನು ನಾಲಿಗೆ ತುದಿಯಲ್ಲಿ ನಲಿದಾಡಿಸುವ ಕಣ್ಣನ್ ಅವರಿಗೆ ಕಲಿಯುವುದರೆಡೆಗಿನ ತಪೋಶ್ರದ್ಧೆ ಎಂತದ್ದಿರಬೇಕು. ಇಲ್ಲಿ ಹಲವು ಸೂಕ್ಷ್ಮಗಳಿವೆ. ಕನ್ನಡಪರತೆ ಎಂದರೆ ಮೊದಲು ಕನ್ನಡ ಸಾಹಿತ್ಯವನ್ನು ಓದಬೇಕು. ನಂತರ ಅದನ್ನು ನಾಲ್ಕು ಜನರಿಗೆ ತಿಳಿಹೇಳಬೇಕು. ಬೇರೆ ಭಾಷೆಯದ್ದನ್ನು ಕನ್ನಡಕ್ಕೆ ಅನುವಾದಗೊಳಿಸಬೇಕು. ಇಚ್ಛಾಪೂರ್ವಕವಾಗಿ ಕಲಿಯಲು ಬಂದವರಿಗೆ ಕಲಿಸುವ ಕಾರ್ಯ ನಡೆಯಬೇಕು. ಅದಕ್ಕೂ ಮೊದಲೇ ನಾವು ಆ ಭಾಷೆಯನ್ನು ಬಳಸಬೇಕು. ಇದಿಷ್ಟು ಮಾಡದ ಹೊರತು ಯಾವುದೇ ಭಾಷೆಗೆ ಉಳಿಗಾಲವೇ ಇಲ್ಲ.

ಸಾಮರಸ್ಯದ ಮತ್ತು ಧಾರ್ಮಿಕ ಆಚಾರ ವಿಚಾರಗಳ ವಿಷಯಕ್ಕೆ ಬರುವುದಾದರೆ ಕಣ್ಣನ್ ಮಾಮಾ ಒಂದು ಸಲ ಎಲ್ಲೋ ಒಂದು ಕಡೆ ಕೋಮುಗಲಭೆಯಾದಾಗ ಸಾಮರಸ್ಯ ಮೂಡಿಸಲು ಶಾಯರಿ ಬರಹಗಾರ ಅಸಾದುಲ್ಲಾ ಅವರ ಜೊತೆ ಒಂದು ಕಾರ್ಯಕ್ರಮ ಮಾಡಿದರು. ಆದರೆ ಯಾವ ಸರ್ಕಾರಗಳು ಇಂಥ ಕಾರ್ಯ ಮಾಡಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕೋ ಅವುಗಳೆ ಪರೋಕ್ಷವಾಗಿ ಒಡಕಿಗೆ ಮಣೆ ಹಾಕುತ್ತಿವೆ. ಎಲ್ಲಿ ಸಮಸ್ಯೆ ಬಗೆಹರಿದರೆ ತಮ್ಮ ರಾಜಕೀಯ ಬೇಳೆ ಬೇಯುವುದಿಲ್ಲ ಎಂದರಿತು. ದೊಡ್ಡ ಧಂಗೆಗಳಾದಾಗ ಶಾಂತಿ ಸುವ್ಯವಸ್ಥೆಯ ಮಾತಾಡಿ, ಎಲ್ಲವೂ ಸರಿಯಿದ್ದಾಗ ಹಳೆಯ ಬೆಂಕಿಗೆ ಹವಿಸ್ಸು ಹಾಕುವ ಕೆಲಸಗಳು ನಡೆಯುತ್ತಿವೆ. ಮತ್ತೊಂದೆಡೆ ಕೆಲವು ಕಾವಿ ತೊಟ್ಟ ಸನ್ಯಾಸಿಗಳು ಧರ್ಮ ಸಾಮರಸ್ಯ ಒಂದು ಕಡೆಯಿರಲಿ ಒಂದೇ ಧರ್ಮದ ಜಾತಿಗಳ ಮಧ್ಯೆ ಒಡಕು ತರುತ್ತಿರುವುದು ನಿಜಕ್ಕೂ ದುರಂತ.ಇಂಥ ಒಂದು ಸನ್ನಿವೇಶವನ್ನು ಬುದ್ಧಿಜೀವಿಗಳು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯಾವ ಪ್ರಚಾರದ ಹಂಗು ಇಲ್ಲದೇ ತನ್ನ ವ್ಯಾಪ್ತಿಯಲ್ಲಿ ತನ್ನ ಇತಿಮಿತಿಯಲ್ಲಿ ಸಾಮರಸ್ಯವನ್ನು ಸಮಾರಂಭ ಕಾರ್ಯಕ್ರಮಗಳ ರೂಪಕ್ಕೆ ಸರಳೀಕರಿಸಿ ಸದೃಢ ಸಮಾಜದ ಸಂಕಲ್ಪ ಸಿದ್ಧಿಗೊಳಿಸಿಕೊಳ್ಳುತ್ತಿರುವ ಕಣ್ಣನ್ ಅವರ ಕಾರ್ಯ ಶ್ಲಾಘನೀಯ. ದಲಿತರನ್ನು ಮೇಲ್ವರ್ಗದವರಿಂದ ದೂರವುಳಿಸುವ ವ್ಯವಸ್ಥಿತ ಸಂಚಿನ ನಡುವೆ ದಲಿತರ ಕೈಲಿ ಪೂಜೆ ಮಾಡಿಸಿ ಮಾನವತೆಗಿಂತ ದೊಡ್ಡ ಧರ್ಮವಿಲ್ಲ ಎಂದು ಸಾರಿದವರು ಕಣ್ಣನ್ ಮಾಮಾ. ಇಲ್ಲಿ ಮತ್ತೊಮ್ಮೆ ಭಾಷೆಯಂತೆಯೇ ನಮ್ಮ ಧರ್ಮದ ಅಸ್ಮಿತೆಯನ್ನು ಉಳಿಸಿಕೊಂಡು ಮತ್ತೊಬ್ಬರನ್ನೂ ಗೌರವಯುತವಾಗಿ ಜೊತೆಗೆ ಕರೆದುಕೊಂಡು ಹೋಗುವುದು ಸಮಾಜದಲ್ಲಿ ಸ್ವಾಸ್ಥ್ಯ ವಾತಾವರಣದ ಸೃಷ್ಟಿಗೆ ದಾರಿಯಾಗುತ್ತದೆ. ಯಾವಾಗ ಮನುಷ್ಯನೊಬ್ಬ ತನ್ನ ಧರ್ಮವೇ, ಜಾತಿಯೇ ಶ್ರೇಷ್ಟ ಮಿಕ್ಕಿದ್ದೆಲ್ಲವೂ ಮಿಥ್ಯ ಅನ್ನುತ್ತಾನೋ ಸಂಕುಚಿತತೆಗೆ ಒಳಗಾಗುತ್ತಾನೆ. ಅಂಥ ಗಳಿಗೆಯಲ್ಲಿ ಅವನಿಗೆ ತಾನೊಬ್ಬ ಮಾನವ ಎಂಬುದಕ್ಕಿಂತ ತಾನು ಇಂಥ ಜಾತಿಗೆ ಸೇರಿದವನೆಂಬುದೇ ಹೆಚ್ಚುಗಾರಿಕೆಯಾಗುತ್ತೆ. ಮಾನವೀಯತೆ ಮರೆತು ದಾನವ ಪ್ರವೃತ್ತಿ ರೂಢಿಸಿಕೊಂಡು ಬಿಡುತ್ತಾನೆ. ಅಂಥವನ ಮನಸ್ಸಲ್ಲಿ ವಿಶ್ವಮಾನವನಿಗಿರಬೇಕಾದ ಹರವು ಸಿಗಲು ಸಾಧ್ಯವಿಲ್ಲ ಸಮಾಜದ ಬಿರುಕಿಗೆ ಇದೇ ಕಾರಣ. ಆ ಬಿರುಕಿಗೆ ಬೆಸುಗೆ ಹಾಕಬೇಕಾದ ಸಾಮಾಜಿಕ ಕಳಕಳಿ ಕೆಲವರಲ್ಲಾದರೂ ಇರಬೇಕು ಅಂತ ಕಾರ್ಯದಲ್ಲಿ ಕಣ್ಣನ್ ಅವರು ತೊಡಗಿಸಿಕೊಂಡಿರುವುದು ಅವರ ಮನೋವಿಶಾಲತೆಯನ್ನು ತೋರಿಸುತ್ತದೆ.

ಇನ್ನು ಸಾಧನೆಯ ವಿಚಾರಕ್ಕೆ ಬರುವುದಾದರೆ ಒಬ್ಬೊಬ್ಬರದು ಒಂದೊಂದು ವಾದ. ಇದ್ದು ಇಲ್ಲದಂಗಿದ್ದು ಮಾಡಿಯೂ ಮಾಡದಂತಿರುವ ಸಾಧನೆ ಕಣ್ಣನ್ ಅವರದು.  ಕನ್ನಡದ ಪರ ಹೋರಾಟಕ್ಕಾಗಲಿ, ಧರ್ಮ ಸಾಮರಸ್ಯಕ್ಕಾಗಲೀ ಮತ್ತೊಂದಕ್ಕಾಗಲಿ ಅವರು ಈ ಮೇಲೆ ಹೇಳಿದಂತೆ ತಮ್ಮದೇ ದಾರಿ ಕಂಡುಕೊಂಡರು. ಪ್ರಚಾರ ಪ್ರೀಯತೆ ಇಲ್ಲದೆ “ಕರ್ಮಣ್ಯೇ ವಾಧಿಕಾರಸ್ತೆ” ಎಂಬ ಮಾತಿನಂತೆ ತಮ್ಮ ಕೆಲಸವನ್ನು ಮಾಡಿ ಫಲಾಫಲಗಳನ್ನು ದೇವರಿಗೆ ಬಿಟ್ಟವರು. ಬದುಕಿನ ಮೂಲ ಅವಶ್ಯಕತೆಯಾದ ಹಣದ ಆಸೆಯೇ ಇಲ್ಲದ ಮೇಲೆ ಪ್ರಶಸ್ತಿ ಪುರಸ್ಕಾರಗಳ ಆಸೆ ಇದ್ದೀತೇ? ತನ್ನತ್ತಲೇ ಅರಸಿ ಬಂದ ಪ್ರಶಸ್ತಿಗಳನ್ನು ಮುಗುಳು ನಗುತ್ತಾ ಸ್ವೀಕರಿಸಿ ಆ ಪ್ರಶಸ್ತಿಗೇ ಗೌರವ ತಂದವರು.  ಹಾಗೇ ದೇವರಿಂದ ವಿಧಿಯಾಗಿ ಬಂದ ಕಷ್ಟಕೋಟಲೆಗಳನ್ನು ಕೊಡುಗೆಯಂತೆ ಸ್ವೀಕರಿಸಿದ್ದು ಇವರ ಹೆಚ್ಚುಗಾರಿಕೆ. ಒಂದು ಕಾರ್ಯಕ್ರಮದಲ್ಲಿ ನಿರತರಾದಾಗ ಪತ್ನಿ ತೀರಿಹೋದರೆ ಅದರ ಒಂದೇ ಒಂದು ದುಃಖದ ಎಳೆಯನ್ನೂ ಹೊರಗೆ ತೋರದೆ ಬಂದವರಿಗೆ ಸಾಹಿತ್ಯ ಸಂಪ್ರೋಕ್ಷಣೆ ಮಾಡಿದ ಕನ್ನಡದ ಪೂಜಾರಿಯವರು. ಸೀಟಿನ ಮೇಲೆ ಕಣ್ಣೀರಿಟ್ಟರೆ ಕೃತಕತೆ ಎಣಿಸುವುದೋ ಎಂದು ಹೇಳುವುದನ್ನೆಲ್ಲ ನಗುನಗುತಲೇ ಹೇಳಿ ವೀಕ್ಷಕರ ಕಣ್ಣಲ್ಲಿ ಹನಿ ಮೂಡುವಂತೆ ಮಾಡಿದವರು. “ಎನ್ನ ಪಾಡು ಎನಗಿರಲಿ ಅದರ ಹಾಡನ್ನಷ್ಟೇ ನೀಡುವೆ ರಸಿಕ ನಿನಗೆ” ಎಂಬ ಬೇಂದ್ರೆಯವರ ಮಾತಿನ ಮೂರ್ತರೂಪವೇ ಕಣ್ಣನ್ ಮಾಮಾ. ಅವರು ನಡೆಸಿಕೊಟ್ಟ ಕಾರ್ಯಕ್ರಮಗಳು, ಬಂದ ಪ್ರಶಸ್ತಿಗಳು, ಬರೆದ ಪುಸ್ತಕಗಳು ಅಂಕಿಅಂಶಗಳಿಗೆ ಎಟಕಬಹುದಾದ ಸಾಧನೆಯಾದರೆ, ಅವರ ಸಮುದ್ರ ಸಮಾನ ವ್ಯಕ್ತಿತ್ವ ಮಾತಿನಲ್ಲಿ ಲೇಖನದಲ್ಲಿ ಹಿಡಿದಿಡಲಾಗದ ಸಾಧನೆ. ನನ್ನ ಲೇಖನ ಅದನ್ನು ಕಟ್ಟಿಕೊಡುವ ಹಠಕ್ಕೆ ಬಿದ್ದು ಸೋತುಹೋಗಿದೆ ಎಂದು ಹೇಳಿಕೊಳ್ಳುವುದೇ ಸೂಕ್ತ ಮತ್ತು ಅದೇ ನನ್ನ ಗೆಲುವು. ಝೀ ಕನ್ನಡಕ್ಕೆ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!