1968-69ಕ್ಕೂ ಮುನ್ನ ಹಿಂದುಗಳಲ್ಲಿ ಸಾಮರಸ್ಯ ಭಾವನೆ ಬಹಳ ಕಡಿಮೆ ಇರುವಂತೆ ಒಂದು ವ್ಯವಸ್ಥಿತವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣ ಏನೇ ಇರಬಹುದು. ಅದರಲ್ಲಿ ನಮ್ಮಲ್ಲಿನ ವಿಚಾರಶೀಲತೆಯ ಪ್ರಮಾಣ ಕಡಿಮೆ ಇರುವುದಂತೂ ಜಗಜ್ಜಾಹೀರಾದ ವಿಷಯ. ಅದೇನೇ ಇರಲಿ, ಆದರೆ ಇಂತಹ ಸಮಯದಲ್ಲಿ ಈ ಹಿಂದು ಜನಾಂಗಕ್ಕೆ ಒಂದು ಬಲವಾದ ಶಕ್ತಿಯ ಅವಶ್ಯಕತೆ ಬೇಕೆನ್ನುವ ಹೆಬ್ಬಯಕೆ ಹಲವರ ಮನದಾಳದ ಮಾತಾಗಿತ್ತು. ಅಂತಹ ಸಮಯದಲ್ಲಿ ಸಾಮೂಹಿಕವಾಗಿ ಎಲ್ಲ ಜಾತಿ,ಜನಾಂಗದ ಸಂತರೆಲ್ಲಾ ಒಂದಾಗಿ “ಹಿಂದವಃ ಸೋದರಾಃ ಸರ್ವೇ” ಎಂದು ಇಡಿ ವಿಶ್ವಕ್ಕೆ ಒಂದು ದಿವ್ಯ ಸಂದೇಶವನ್ನು ನೀಡಿದರು. ನನಗೆ ತಿಳಿದಿರುವಂತೆ ಇದರಲ್ಲಿ ಪೇಜಾವರ ಶ್ರೀಗಳ ತೊಡಗಿಸಿಕೊಳ್ಳುವಿಕೆ ಹೆಚ್ಚಿತ್ತು. ಇಂದಿನ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದಾಗ ಬಹುಷಃ ಸಾಮರಸ್ಯದ ವಿಷಯದಲ್ಲಿ ಅಂದಿನ ಆ ದಿವ್ಯ ಸಂದೇಶ ಅಕ್ಷರಶಃ ಕಾರ್ಯ ನಿರ್ವಹಿಸಿತ್ತು. ನಿರ್ವಹಿಸುತ್ತಲೂ ಇದೆ.
ಕಳೆದೊಂದು ವರ್ಷದಲ್ಲಾದ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮೆಲ್ಲರ ಮನಸ್ಸನ್ನು ಕದಡಿದ ವಿಷಯವೆಂದರೆ, ಹಿಂದು ದೇವತೆ, ಭಗವದ್ಗೀತೆ, ರಾಮಾಯಣ ಸೇರಿದಂತೆ ಇವೇ ಮೊದಲಾದ ವಿಷಯದಲ್ಲಿ, ಬುದ್ಧಿಜೀವಿಗಳು ದಿನಕ್ಕೊಂದು ಹೇಳಿಕೆ ನೀಡುವುದರ ಜೊತೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರ ಹಂತ ಹಂತವಾಗಿ ನಡೆದಿತ್ತು. ಭಗವದ್ಗೀತೆಯ ವಿಚಾರದಲ್ಲಂತೂ ಅದು ಮಿತಿ ಮೀರಿ ಹೋಗಿತ್ತೆಂದರೆ ತಪ್ಪಾಗಲಾರದು. ಭಗವಾನ ಎಂಬ ಬುದ್ಧಿಜೀವಿಯೊಬ್ಬರು ಸಾರ್ವಜನಿಕ ಚರ್ಚೆಗೆ ಸವಾಲೆಸೆದಾಗ, ಅದಕ್ಕೆ ಸ್ಪಷ್ಟ ಉತ್ತರವನ್ನು ಮಾಧ್ಯಮೆದೆದುರೇ ಸ್ವತಃ ಶ್ರೀಗಳು ನಿಂತು ಸವಾಲೆಸೆದವರನ್ನೇ ಕಕ್ಕಾಬಿಕ್ಕಿಯನ್ನಾಗಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಾಂಗಿದೆ. ಇದೆಲ್ಲ ಕೇವಲ ಸಣ್ಣ ಸಣ್ಣ ಉದಾಹರಣೆಗಳಷ್ಟೆ. ಹೀಗೆ ಇತಿಹಾಸದ ಪುಟಗಳನ್ನೆಲ್ಲಾ ಒಂದು ಬಾರಿ ತಿರುಚಿದಾಗ ಪೇಜಾವರ ಶ್ರೀಗಳ ಕಾರ್ಯ ಪ್ರಶ್ನಾತೀತ.
ಈಗ ನಮ್ಮೆಲ್ಲರ ಎದುರಿಗಿರುವ ವಿಷಯ ಏನೇಂದರೆ, ಉಡುಪಿ ಶ್ರೀಕೃಷ್ಣನ ಮಠದಲ್ಲಿ ಪರಮ ಪೂಜನೀಯ ಪೇಜಾವರ ಶ್ರೀಗಳಿಂದ “ಮುಸ್ಲಿಂ” ಮತದವರಿಗಾಗಿ ‘ಇಪ್ತಾರ್ ಕೂಟ’ ಏರ್ಪಡಿಸಲ್ಪಟ್ಟಿದೆ ಎನ್ನುವುದು. ಬಹತೇಕ ಈ ವರೆಗೆ ಪೇಜಾವರ ಶ್ರೀಗಳು ಮಾಡಿರತಕ್ಕಂತ ಕಾರ್ಯಗಳಲ್ಲಿ ಇದು ವಿಭಿನ್ನವಾಗಿದೆ. ಖಂಡಿತವಾಗಿಯೂ.. ಸಾಮಾನ್ಯವಾಗಿ ಶ್ರೀಗಳಿಂದ ಇಂತಹ ಕಾರ್ಯವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಂತೂ ಎಲ್ಲಿ ನೋಡಿದರೂ ಇದೇ ವಿಷಯದ ಕುರಿತಾಗಿ ಪರ-ವಿರೋಧಗಳ ಚರ್ಚೆ. ನಮ್ಮ ಸಮಾಜದಲ್ಲಿ ಯಾರೂ ಪ್ರಶ್ನಾತೀತರಲ್ಲ. ಹಾಗಾಗಿ ಯಾವುದೇ ವಿಷಯದ ಕುರಿತಾಗಿಯೂ ಆರೋಗ್ಯಯುತ ಚರ್ಚೆ ಸ್ವಾಗತಾರ್ಹ. ಆದರೆ ಅದು ಮಿತಿ ಮೀರಬಾರದಷ್ಟೆ.
ಪರಮ ಪೂಜನೀಯ ಪೇಜಾವರ ಶ್ರೀಗಳ ಕಾರ್ಯವನ್ನು ಪ್ರಶ್ನಿಸುವ ಅಥವಾ ಅದರ ಕುರಿತು ವಿಶ್ಲೇಷಣೆ ನಡೆಸುವಷ್ಟು ಜ್ಞಾನಿ ನಾನಲ್ಲ. ಅಷ್ಟು ಯೋಗ್ಯತೆಯೂ ನನಗಿಲ್ಲ. ಆದರೆ ಹಿಂದುಗಳ ಪ್ರತಿಯೊಂದು ಮಠ, ಮಠಾಧಿಪತಿಗಳನ್ನು ಗೌರವ ಭಾವನೆಯಿಂದ, ಶ್ರದ್ಧೆಯಿಂದ ಕಾಣುವ ನಾವು ಯಾವುದೋ ಒಂದು ಕಾರಣಕ್ಕೆ ಸಾರಾಸಗಟಾಗಿ ವಿರೋಧಿಸಬಾರದು ಎಂಬುದು ನನ್ನ ಅಭಿಪ್ರಾಯ. ಶ್ರೀಗಳೇ ಒಂದು ಹೆಜ್ಜೆ ಮುಂದಿಟ್ಟು ಇಂತಹ ಕಾರ್ಯವನ್ನು ಮಾಡಿದ್ದಾರೆಂದರೆ, ಅದರ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಹೇಗೆ ಮೂಡಬಹುದು ಎಂಬುದನ್ನೊಮ್ಮೆ ವಿಚಾರ ಮಾಡದೇ ಇರಲಾರರು. ಒಂದು ವೇಳೆ ಅದನ್ನೆಲ್ಲವನ್ನೂ ಪರಾಮರ್ಶಿಸಿಯೇ ಈ ಕಾರ್ಯ ನಡೆದಿದೆ ಎಂದಾಗ ಭಕ್ತರಿಗೆ ಶ್ರೀಗಳು ತಮ್ಮ ನಿಲುವನ್ನು ಸಾರ್ವಜನಿಕವಾಗಿ ಖಂಡಿತವಾಗಿಯೂ ಪ್ರಕಟಿಸುತ್ತಾರೆ ಮತ್ತು ಅತ್ಯಗತ್ಯವಾಗಿ ಪ್ರಕಟಿಸಬೇಕು ಎಂಬುದು ನಮ್ಮ ಅಭಿಲಾಷೆ. ನಾವೂ ಸಹ ಈ ವಿಚಾರದಲ್ಲಿ ಹಾಗಾಗಿ ಸ್ವಲ್ಪ ಸಮಯ ಕಾಯುವಿಕೆಯಲ್ಲಿ ಅರ್ಥವಿದೆ ಎಂಬುದು ನನ್ನ ಅನಿಸಿಕೆ.
ಕೃಷ್ಣನು ತೋರಿಸಿದ ಹಾದಿಯಲ್ಲಿ ನಡೆಯುವುದೇ ತಮ್ಮ ಕಾಯಕವನ್ನಾಗಿಸಿಕೊಂಡ ಶ್ರೀಗಳು ಯಾವ ಕಾರಣಕ್ಕೋಸ್ಕರ ಈ ಇಪ್ತಾರ್ ಕೂಟವನ್ನು ಎರ್ಪಡಿಸಿದ್ದಾರೆ ಎಂಬುದು ಅರಿಯದ ವಿಚಾರ. ಅದಕ್ಕೆ ಕಾರಣ ಏನೇ ಇರಬಹುದು. ಒಂದು ವೇಳೆ ಸೌಹಾರ್ದತೆಯ ವಿಚಾರದಲ್ಲಿ ಈ ಕೂಟವನ್ನು ಏರ್ಪಡಿಸಿದ್ದರೆ, ಬಹುತೇಕ ರಾಷ್ಟ್ರವಾದಿಗಳು ಇದನ್ನು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ರಾಷ್ಟ್ರದ ಉನ್ನತಿಯ ಕಾರ್ಯದಲ್ಲಿ ಕೈ ಜೋಡಿಸುವ ತಾಯಿ ಭಾರತಿಯ ಪ್ರತಿ ಮಕ್ಕಳೂ ನಮ್ಮವರೇ ಎಂದು ಭಾವಿಸಿ ಅದರಂತೆ ನಡೆದುಕೊಳ್ಳುತ್ತಿರುವವರು ನಾವು. ಆ ನಿಟ್ಟಿನಲ್ಲಿ ರಾಷ್ಟ್ರದ ನಿರ್ಮಾಣದ ಹಾದಿಯಲ್ಲಿ ನಾವೂ ನಡೆಯೋಣ. ಜೊತೆಗೆ ಬರುವವರನ್ನೂ ಕೈಹಿಡಿದು ನಡೆಸೋಣ. ಆದರೆ ರಾಷ್ಟ್ರವಿರೋಧಿಗಳನ್ನು ಮಾತ್ರ ಖಡಾಖಂಡಿತವಾಗಿ ಯಾವುದೇ ಹಿಂಜರಿಕೆಯಿಲ್ಲದೇ ವಿರೋಧಿಸೋಣ.. ಏನಂತೀರಾ..?