ಅಂಕಣ

ವಿಶ್ವ ಪರಿಸರ ದಿನಕ್ಕಾಗಿ ಮುಂದೆ ನಾವೇನು ಮಾಡಬಹುದು?

ಜೂನ್ 5, ವಿಶ್ವ ಪರಿಸರ ದಿನವೆಂದು 1972ರಲ್ಲಿ ವಿಶ್ವ ಸಂಸ್ಥೆ ಘೋಷಿಸಿತು.  ಈ ದಿನ ಈಗಂತೂ ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುವ ಹಾಗೂ ಈ ಕಾಳಜಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಉಳಿಸುವ ಒಂದು ಆಂದೋಲನವೆ ನಡೆಯಬೇಕಾದ್ದು ಅವಶ್ಯಕತೆ ಎದ್ದು ಕಾಣುತ್ತಿದೆ.  ಕಾರಣ ಏರುತ್ತಿರುವ ತಾಪ ಮಾನ, ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನೇ ಬದಲಾವಣೆ ಮಾಡಲು ಹೊರಟಿದ್ದಾನೆ.  ನಶಿಸುವತ್ತ ಕಾಡಿನ ಪಯಣ, ಹಸಿವ ನೀಗಲಾಗದೆ ಹಠಕ್ಕೆ ಬಿದ್ದ ಕಾಡು ಪ್ರಾಣಿಗಳು ಕಾಡ ಬಿಟ್ಟು ಊರ ಕಡೆ ಮುಖ ಮಾಡುತ್ತಿರುವುದೆಲ್ಲ ನೋಡಿದರೆ ವಿಶ್ವ ಪರಿಸರ ದಿನದ ನೆಪದಲ್ಲಾದರೂ ಒಂದಷ್ಟು ಪರಿಸರ ಕಾಳಜಿ ಮನುಷ್ಯ ತನ್ನಲ್ಲಿ ಬೆಳೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ದಂಡವನ್ನೇ ಎದುರಿಸಬೇಕಾಗುವ ಸಂದರ್ಭ ಬರುವುದು ನಿಶ್ಚಿತ.

ಈಗಾಗಲೇ ಬಿಬಿಎಂಪಿಯವರು, ಅನೇಕ ಸಂಘ ಸಂಸ್ಥೆಗಳು ಕೋಟಿ ಗಿಡ ನೆಡುವತ್ತ ತಮ್ಮ ಕೈಕಂರ್ಯ ಹಮ್ಮಿಕೊಂಡಿರುತ್ತಾರೆ.  ನಿಜಕ್ಕೂ ಸಂತೋಷದ ವಿಷಯ.  ಈ ಹಿಂದೆಯೂ ಸಾಕಷ್ಟು ಬಾರಿ ಕಂಡಿದ್ದೇವೆ.  ಆದರೆ ಈ ಸಸಿ ನೆಡುವ, ಬೀದಿ ಬೀದಿಗಳಲ್ಲಿ ಮರ ಬೆಳೆಸುವ ಕಾರ್ಯ ಅದೆಷ್ಟು ಮಟ್ಟಿಗೆ ಜಯ ಕಂಡಿದೆ, ಇದು ಮಾತ್ರ ಅನುಮಾನ.  ಕಾರಣ ಈ ದಿನದಿಂದ ನೆಡಲು ಹೊರಟ ಗಿಡಗಳ ಗತಿ ಮುಂದೇನಾಯಿತು ಎಂದು ನೋಡುವ ರೂಢಿಯಿಲ್ಲ.  ಗಿಡ ನೆಡುವಾಗಲೆ ಶಹರದ ಬೀದಿಗಳಲ್ಲಿ ಹಲವರ ವಿರೋಧ.  “ನಮ್ಮನೆ ಮುಂದೆ ಬೇಡಪ್ಪಾ.  ಅದು ದೊಡ್ಡ ಮರವಾಗುತ್ತದೆ.  ಮನೆ ಮುಂದೆ ಕಸ ಬೀಳುತ್ತದೆ, ಗುಡಿಸುವವರು ಯಾರು?  ಇಲ್ಲಪ್ಪಾ ನಮ್ಮ ಕಾರು, ಗಾಡಿಗಳನ್ನು ನಿಲ್ಲಿಸೋಕೆ ಜಾಗ ಸಾಕಾಗೋಲ್ಲ “ಇತ್ಯಾದಿ. ಆಸಕ್ತಿ ಇರುವವರಿಗೆ ಅಕ್ಕ ಪಕ್ಕದವರ ಕಾಟ.  “ನೀವೇನೊ ಇರಲಿ ನೆಡಿ ಅಂತೀರಾ. ಆಮೇಲೆ ಕಸ ಬಿದ್ದಾಗ ನೀವು ಬಂದು ಗುಡಿಸ್ತೀರಾ?”  ಇದೊಳ್ಳೆ ಕಥೆಯಾಯಿತು” ಅಂತ!

ಆದರೆ ಇದಕ್ಕೂ ಒಂದು ಕಾರಣ ಹೇಳುತ್ತಾರೆ ಜನ ; ಬಿಬಿಎಂಪಿಯವರು ಆಮೇಲೆ ಗಿಡ ದೊಡ್ಡ ಮರವಾದಾಗ ಅದನ್ನು ತೆಗೆಸಿ ಅಥವಾ ರೆಂಬೆ ಕಡಿರಿ ಅಂದರೆ ಅದಕ್ಕೂ ನಾವೆ ಹಣ ಸಂದಾಯ ಮಾಡಬೇಕು, ಬಿಬಿಎಂಪಿಗೆ ಆರು ತಿಂಗಳುಗಟ್ಟಲೆ ಅಲಿಬೇಕು ಗೊತ್ತಾ?  ಅವರುಗಳು ಹೇಳುವುದೂ ಸರಿಯಾಗಿಯೇ ಇದೆ.  ಈ ಧೋರಣೆ ಬದಲಾಗಬೇಕು.  ಆಗಲಾದರೂ ಗಿಡ ನೆಡಲು ಬೆಳೆಸಲು ಜನ ಸಹಕಾರ ಕೊಡಬಹುದು. ಇನ್ನು ಗಿಡ ಒತ್ತಾಯ ಪೂರ್ವಕವಾಗಿ ನೆಟ್ಟರು ಅನ್ನಿ ಒಂದು ವಾರನೊ ಎರಡು ವಾರನೊ ಅದಕೆ ಉಳಿವು ನಂತರದ ದಿನಗಳಲ್ಲಿ ನಿಧಾನವಾಗಿ ಅದರ ಅಂತ್ಯ ಕಾಣಿಸುವವರು ಹಲವು ಮುಂದಿ.  ಇನ್ನು ಬಿಬಿಎಂಪಿಯವರು ಉತ್ತಮವಾದ ಕಬ್ಬಿಣದ ಸ್ಪೆನ್ಸಗೆ ಹಸಿರು ಬಣ್ಣ ಬಳಿದು ಗಿಡ ನೆಡಿ ಪರಿಸರ ಉಳಿಸಿ ಅಥವಾ ಇನ್ನೇನೊ ಪರಿಸರದ ಸ್ಲೋಗನ್ ಬರೆದು ನೆಟ್ಟ ಗಿಡಕ್ಕೆ ರಕ್ಷಣೆಯನ್ನೂ ಹಾಕಿರುತ್ತಾರೆ.  ಆದರೆ ಗಿಡ ನಾಶ ಮಾಡಿದ ಮೇಲೆ ಅದನ್ನು ಬಿಡುತ್ತಾರೆಯೆ?  ಅದೂ ಮಂಗ ಮಾಯ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತಾಗುತ್ತಿದೆ.  ಅಬ್ಬಾ! ಅಂತೂ ನಮ್ಮ ಬೀದಿ ನಮ್ಮ ಏರಿಯಾ ಹಸಿರು ಗಿಡ ಮರಗಳ ತೌರು ಆಗುತ್ತದಲ್ಲ ಅಂತ ನನ್ನಂಥವರ ಖುಷಿಗೆ ತಣ್ಣೀರು ಎರಚಿದ್ದು ಮಾತ್ರ ಸತ್ಯ.  

ಹಿಂದೆಲ್ಲ ಕಾರು, ಟೂ ವೀಲರ್ ತಗೋಬೇಕಂದರೆ ಎರಡೆರಡು ಬಾರಿ ಯೋಚನೆ ಮಾಡುತ್ತಿದ್ದರು.  ತಂದರೆ ಎಲ್ಲಿ ನಿಲ್ಲಿಸುವುದು?  ಈಗ ಹಾಗಲ್ಲ ದುಡ್ಡಿನ ಬಗ್ಗೆ ಯೋಚನೆ ಮಾಡಬಹುದು ಗಾಡಿ ಇಡುವ ಬಗ್ಗೆ ಅಲ್ಲ. ಬೀದಿ ಬದಿ ನಿಲ್ಲಿಸಬಹುದಲ್ಲ!  ಇದಕ್ಕೆ ಯಾರೂ ಅಡ್ಡಿ ಪಡಿಸುತ್ತಿಲ್ಲ.  ಯಾವ ಕಾಯಿದೆ ಕಾನೂನು ಇದೆಯೊ ನನಗಂತೂ ಗೊತ್ತಿಲ್ಲ.   ಇನ್ನು ಈಗ ನಿಯಾನ್ ದೀಪಗಳು ಪ್ರಕರವಾಗಿ ರಸ್ತೆಯ ಉದ್ದಗಲಕ್ಕೂ ಬಿಂಬಿಸುತ್ತಿವೆ.  ಆಯಾ ಏರಿಯಾದವರು,ಅಥವಾ ಸರಕಾರದವರು, ಇಲ್ಲಾ ಸ್ವಂತ ಮನೆ ಕಟ್ಟಿಕೊಂಡವರ ರಕ್ಷಣೆಗಾಗಿ ಸಿಸಿ ಟೀವಿ ಕಣ್ಗಾವಲಾಗಿ ನಿಂತಿವೆ.  ಕಳ್ಳ ಕಾಕರ ಭಯ ಅಷ್ಟಿಲ್ಲ.  ಗಿಡ ಬೆಳೆಯಲು ಜಾಗವಿಲ್ಲ.  ಮೈ ಬಗ್ಗಿ ಗುಡಿಸುವ ಮನಸ್ಸು, ಶಕ್ತಿ ಮೊದಲೇ ಇಲ್ಲ.  ಇನ್ನು ನೆಟ್ಟ ಗಿಡದ ಗತಿ?

ನಮ್ಮಲ್ಲಿ ಶಂಖದಿಂದ ಬಂದರೇ ತೀರ್ಥ ಅನ್ನುವ ಹಾಗೆ ಇದಕ್ಕೆಲ್ಲ ಕಟ್ಟು ನಿಟ್ಟಿನ ಕಾನೂನು ಕ್ರಮ ಬರಲೇ ಬೇಕು. ಆಗ ಒಂದಷ್ಟು ವಾಹನಗಳ ಭರಾಟೆ ಕಡಿಮೆ ಆಗಿ ವಾಯು ಮಾಲಿನ್ಯ ಕಡಿಮೆ ಆಗಬಹುದು.  ಗಿಡಗಳನ್ನು ನೆಡಲು ಅಡ್ಡಿ ಪಡಿಸುವವರ ಸಂಖ್ಯೆ ಕಡಿಮೆ ಆಗಬಹುದು.   ಪಾರ್ಕಿಂಗ್ ಜಾಗವಿದ್ದವರು ಅಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ರಸ್ತೆ ಬದಿ ನಿಲ್ಲಿಸುವುದು ತಪ್ಪಬಹುದು.   ಎಲ್ಲೆಲ್ಲಿ ಗಿಡ ನೆಡಬೇಕೆನ್ನುವ ತೀರ್ಮಾನ ನೆಡಲು ಹೊರಟಿರುವವರೆ ವಹಿಸಿಕೊಂಡು, ಅದಕ್ಕೆ ಯಾರೂ ಅಡ್ಡಿ ಪಡಿಸದಂತೆ ಮತ್ತು ಆಯಾ ಏರಿಯಾ ಮನೆಯವರಿಗೆ ಗಿಡಕ್ಕೆ ನೀರುಣಿಸುವ ಬೆಳೆಸುವತ್ತ ಜವಾಬ್ದಾರಿ ವಹಿಸುವ ಅಗತ್ಯ ಕೂಡಾ ಇದೆ.   ಹಾಗೆ ಒಂದಷ್ಟು ಪರಿಸರ ಕಾಳಜಿ ಇರುವವರನ್ನು ಗುರುತಿಸಿ ಇದರ ನಿರ್ವಹಣೆಯ ಬಗ್ಗೆ ನಿಗಾ ಇಡುವ ಜವಾಬ್ದಾರಿ ವಹಿಸುವುದು ಉತ್ತಮ.  ಏಕೆಂದರೆ ಜನರ ಸಹಕಾರ ಅತೀ ಮುಖ್ಯ ಇಲ್ಲಿ.  ಜನರ ಮನವೊಲಿಸುವ ಕಾರ್ಯ ಗಿಡ ನೆಡುವಾಗಲೂ ಒಟ್ಟಾದಲ್ಲಿ ನೆಟ್ಟ ಗಿಡಗಳಲ್ಲಿ ಒಂದಷ್ಟು ಗಿಡಗಳಾದರೂ ಬದುಕಿಯಾವು!!

ಪರಿ ಅಂದರೆ ಪದೆ ಪದೆ,ಹಲವು,ವಿಧ ವಿಧ ,ಆಗಾಗ,ಹೀಗೆ ಹಲವಾರು ಅರ್ಥ ಕೊಡುವ ಶಬ್ದ.  ಸರ ಅಂದರೆ ಹಾರ, ಮಾಲೆ, ಒಂದು ಬೊಂತೆ, ಹಲವಾರು ಸೇರಿದರೆ ಇತ್ಯಾದಿ ಅಂತ ನಾನಂತೂ ನನ್ನಷ್ಟಕ್ಕೇ ಹೀಗೆ ಅರ್ಥೈಸಿಕೊಂಡಿದ್ದೇನೆ.  ಆಗೆಲ್ಲ ಈ “ಪರಿಸರ” ಅದೆಷ್ಟು ಅರ್ಥಗಳನ್ನು ಒಳಗೊಂಡಿದೆ.  ಯಾರಿಟ್ಟರು ಈ ಹೆಸರು?  ಎಷ್ಟು ಚಂದ ಚಂದ.  ಹೆಸರಿಗೆ ತಕ್ಕಂತೆ ಸುತ್ತ ಮುತ್ತಲಿನ ವಾತಾವರಣ ಇದ್ದರೆ ಅದೆಷ್ಟು ಚೆನ್ನ.  ಹೀಗಂದುಕೊಂಡೆ ಪರಿಸರದ ಬಗ್ಗೆ ಕಾಳಜಿ ಮೊದಲಿನಿಂದಲೂ ನನ್ನಲ್ಲಿ ಮಿಳಿತವಾಗಿದೆ.

ಮಲೆನಾಡಿನ ಇಕ್ಕೆಲಗಳಲ್ಲಿ ಎಲ್ಲಂದರಲ್ಲಿ ಕಾಡು ಮೇಡುಗಳ ತವರು ನನ್ನೂರು.  ಇಲ್ಲಿ ಒಂದಷ್ಟು ಕೊರತೆ ನಾನು ಊರಿಗೆ ಹೋದಾಗಲೆಲ್ಲ ಅನುಭವಿಸುತ್ತೇನೆ.  ಅಲ್ಲಿಯ ಮೂಲ ಕಸುಬು ಅಡಿಕೆ ತೋಟ, ಭತ್ತದ ಗದ್ದೆಯಲ್ಲಿ ವ್ಯವಸಾಯ.  ಊರ ಹೊರಗೆ ತೋಟದ ಕೆಲಸಕ್ಕೆ ಬರುವ ಆಳುಗಳ ಸಣ್ಣ ಸಣ್ಣ ಬಿಡಾರ.  ಇವಿಷ್ಟೆ ಹಳ್ಳಿ ಅಂದರೆ ಆಗ.  ಈಗ ಪರಿಸ್ಥಿತಿ ಹೀಗಿಲ್ಲ.  ಮೊದಲು ತಲೆ ಎತ್ತಿದ್ದು. ಊರಿಂದ ಸ್ವಲ್ಪ ದೂರದಲ್ಲಿ ಸರಕಾರ ಅವರಿಗೆಲ್ಲ “ಜನತಾ ಮನೆ”ಗಳನ್ನು ನಿರ್ಮಾಣ ಮಾಡಿ ಅವರವರಿಗೆ ಹಕ್ಕು ಪತ್ರ ಕೊಟ್ಟು ವಾಸಕ್ಕೆ ಅನುವು ಮಾಡಿಕೊಟ್ಟಿತು.  ಜನತಾ ದೀಪ, ಸಾರ್ವಜನಿಕ ನಲ್ಲಿ ನೀರು ಬೀದಿ ಬದಿಯಲ್ಲಿ. ಎಲ್ಲಾ ಸೌಕರ್ಯ ಮಾಡಿಕೊಟ್ಟಿದೆ.  ಆದರೆ ಇಲ್ಲಿರುವ ಜನರು ತಮ್ಮ ಮನೆಯ ಸುತ್ತ ಮುತ್ತ ಒಂದಷ್ಟು ಜಾಗ ವಡಾಯಿಸಿ ಬೇಲಿ ಹಾಕಲು ಶುರು ಮಾಡಿದರು.  ತರಕಾರಿ, ಹಣ್ಣು ಹಂಪಲು ಗಿಡ,ಕಟ್ಟಿಗೆ ಕೂಡಿ ಹಾಕಲೊಂದು ಸೂರು,ಬಚ್ಚಲು ಮನೆ ಹೀಗೆ ಒಂದೊಂದು ಮನೆಗೆ ಅರ್ಧ ಒಂದು ಎಕರೆ ಜಾಗ ಮಾಯವಾಯಿತು.  ನಿಜವಾಗಿಯೂ ಮೊದಲು ಈ ಜಾಗವನ್ನು ಸರಕಾರ ಗೋಮಾಳ ಜಾಗ (ಹಸುಗಳಿಗೆ ಮೇಯಲು)ವೆಂದು ಆಯಾಯಾ ಊರಿಗೆ ಮೀಸಲಾಗಿಟ್ಟಿತ್ತು.  ಆದರೆ ಈಗ ಎಲ್ಲೆಂದರಲ್ಲಿ ಹೆಂಚಿನ ಮನೆಗಳು ಆವರಿಸಿಕೊಳ್ಳುತ್ತಿವೆ.  ಹಸುಗಳಿಗೆ ಮೇಯಲು ಜಾಗವಿಲ್ಲ, ಅಲ್ಲೊಂದಷ್ಟು ಇದ್ದ ಮರ ಗಿಡಗಳೂ ಮಾಯವಾಗಿವೆ.

ಬೆಂಗಳೂರಿನಂತೆ ಹಳ್ಳಿಯ ದಾರಿಗಳ ಅಕ್ಕ ಪಕ್ಕದ ಗಿಡಗಳು ಅವನತಿ ಹೊಂದಿ ಬಿಸಿಲ ಬೇಗೆಯಲಿ ನೆರಳನ್ನೂ ಹುಡುಕಲಾಗದಷ್ಟು ಗತಿಗೆಟ್ಟು ಮನೆ ತಲುಪಿದಾಗ ಸಾಕಪ್ಪಾ ಈ ಬಿಸಿಲು ಉಸ್! ಅನ್ನುವಂತಾಗಿದೆ.  ಮೊದಲಾದರೆ ನೆರಳಿನ ರಕ್ಷಣೆ ಬಿಸಿಲಿಗೆ ಮಳೆಯ ನೀರಿಗೆ ಕೊಡೆಗಳಾಗಿದ್ದವು ಅಕಸ್ಮಾತ್ ಮಳೆ ಬಂದಾಗ.  ಟಾರ್ ರಸ್ತೆ, ಇಕ್ಕೆಲಗಳ ಬೀದಿ ದೀಪ , ಕಾರು ಬಾರು ನೋಡಿದರೆ ಸಣ್ಣ ಸಿಟಿಗೆ ಬಂದೆನೆ ಎನ್ನುವಂತಾಗಿದೆ.  ಆದರೆ ಅಲ್ಲಿಯೂ ಒಂದಷ್ಟು ಪರಿಸರವಾದಿಗಳು ಇದ್ದಾರೆ.  ವನಮಹೋತ್ಸವ ಆಚರಣೆ ಮೊದಲಿನಂತೆ ಈಗಲೂ ಜೀವಂತವಾಗಿದೆ.  ಆದರೆ ಮೊದಲಿನ ಸೌಂದರ್ಯ ಈಗಿಲ್ಲ.  ಆಳು ಕಾಳುಗಳ ಕೊರತೆ ಅಪಾರ.  ಜನ ಅಗತ್ಯ ತೋಟದ ಕೆಲಸಕ್ಕೂ ಆಳುಗಳು ಸಿಗದೆ ಹೈರಾಣಾಗುತ್ತಿದ್ದಾರೆ.  ಇಲ್ಲಿ ಸಿಟಿಯಲ್ಲಿ ಸರಕಾರ ಸಂಘ ಸಂಸ್ಥೆಗಳ ವತಿಯಿಂದ ಗಿಡ ನೆಡುವ ಪೋಷಿಸುವ ಕಾರ್ಯವಾದರೂ ನಡೆಯುತ್ತದೆ.  ಆದರೆ ಹಳ್ಳಿಗಳಲ್ಲಿ ಹಾಗಲ್ಲ.  ಎಲ್ಲಾ ಹಳ್ಳಿಗಳ ಜನರೇ ನಿರ್ವಹಿಸಬೇಕು.  ಸಾಕಷ್ಟು ನೀರಿನ ಕೊರತೆ ಇತ್ತೀಚೆಗೆ ಕಾಡುತ್ತಿದೆ.  ಜಲ ಸಂರಕ್ಷಣೆ ಅಲ್ಲಿಯ ಜನರೇ ಮಾಡುತ್ತಿರುವುದಾಗಿ ಹಾಗೂ ಇತ್ತೀಚೆಗೆ ಚಿತ್ರ ನಟ ಯಶ್ ರವರು ಜಲಸಂರಕ್ಷಣೆ ಕಾರ್ಯ ಸಿರ್ಸಿಯಲ್ಲಿ ಉದ್ಗಾಟಿಸಿ ಶ್ಲಾಗಿಸಿದರೆಂಬ ವರದಿ ಓದಿ ನಮ್ಮೂರ ಬಗ್ಗೆ ಹೆಮ್ಮೆ ಸಂತೋಷವಾಯಿತು.  

ಇನ್ನು ಪರಿಸರಕ್ಕೆ ಮಾರಕ ಎಲ್ಲೆಂದರಲ್ಲಿ ಕಸ ಬಿಸಾಕುವುದು,ಪ್ಲಾಸ್ಟಿಕ್ ತಿಂದ ಹಸುಗಳ ಅವಸ್ಥೆ ಇವೆಲ್ಲ ಕೊನೆಯಾಗುವುದೆಂತೊ!  ಬೆಂಗಳೂರು ವಿಶ್ವ ವಿದ್ಯಾಲಯದ ಸುತ್ತ ಮುತ್ತ ಒಂದಷ್ಟು ಗಿಡಮರಗಳ ತಾಣ ಕಾಣಬಹುದು.  ಬೆಳಗಿನ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ತಾಣ.  ಈಗ ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಆಗಿನ ಸ್ವಚ್ಛ ಪರಿಸರ ಈ ಅ-ಪರಿಸರವಾದಿಗಳಿಂದ ಕೊಚ್ಚೆಯ ತಾಣವಾಗುತ್ತಿದೆ.  ಇದರ ತಡೆಗಾಗಿ ಬಿತ್ತಿ ಪತ್ರ ಹಂಚಿ ಎಷ್ಟೋ ಕಾಳಜಿ ತೋರಿಸುವ ನವ ಯುವಕರ ಧ್ವನಿ ಇಂತಹ ಜನರಿಗೆ ಇನ್ನೂ ನಾಟಿಲ್ಲ.  ಮನೆಯ ಕಸ ಅಲ್ಲಿಯ ತಗ್ಗು ಪ್ರದೇಶ ಗಿಡ ಮರಗಳ ಬುಡ ಬೀದಿ ಬದಿಯ ಇಕ್ಕೆಲಗಳಲ್ಲಿ ಕಾಣಬಹುದು.  ಬೆಳ್ಳಂಬೆಳಿಗ್ಗೆ ಅಥವಾ ರಾತ್ರಿಯ ನಿರವತೆ ಕಸ ಬಿಸಾಕುವ ಸಮಯವಿರಬೇಕು.  ಎತ್ತು ಏರಿಗೆ ಎಳೀತು ಅಂದರೆ ಕೋಣ ನೀರಿಗೆ ಎಳೆದಂತಾಗುತ್ತಿದೆ ಇಂತಹ ಜನರಿಂದ.  ಎಲ್ಲಾ ಅವರವರೆ ತಿಳಿದು ನಡೆಯಬೇಕಷ್ಟೆ!  

ಒಟ್ಟಿನಲ್ಲಿ ಇಂದಿನ ಈ ದಿನದ ಕುರಿತು ಬರೆಯುತ್ತ ಹೋದಂತೆ ಮನಸ್ಸು ಹತಾಷೆಯ ಅಂಚಿಗೆ ಬಂದು ನಿಂತಿರುವುದು ದಿಟ.  ಇನ್ನಾದರೂ ಜನ ಎಚ್ಚೆತ್ತುಕೊಂಡು ಸರಕಾರ, ಸಂಘ ಸಂಸ್ಥೆಗಳು, ಪರಿಸರವಾದಿಗಳ ಶ್ರಮಕ್ಕೆ ಬೆಲೆ ಕೊಟ್ಟು ಎಲ್ಲರೂ ಕೈ ಜೋಡಿಸುವಂತಾಗಲಿ.  ನಮ್ಮ ಪರಿಸರ,ನಮ್ಮ ನಾಡು,ನಮ್ಮ ದೇಶ ,ನಮ್ಮ ಜಗತ್ತು ಇದು ನಮ್ಮದು ಅನ್ನುವ ಭಾವನೆ ಬೆಳೆದು ದೇಶದ ಉದ್ದಗಲಕ್ಕೂ ಹಸಿರು ವನಗಳ ತಾಯ್ನಾಡಾಗಲಿ.  ಈ ತೀರ್ಮಾನ ಈ ದಿನವೊಂದಕ್ಕೇ ಮುಗಿಯದೇ ಪ್ರತೀ ದಿನವೂ ನಮ್ಮಲ್ಲಿ ಎಚ್ಚೆತ್ತು ನಮ್ಮ ಕೈಲಾದಷ್ಟು ಪರಿಸರದ ಸೇವೆ ಮಾಡುವಂತಾಗಲಿ.  ನಿರ್ಮಲ ಪರಿಸರ ನಿರ್ಮಾಣ ಮಾಡುವತ್ತ ಎಲ್ಲರ ಚಿತ್ತವಿರಲೆಂದು ನನ್ನ ಕಳಕಳಿಯ ಆಶಯ!!

-ಗೀತಾ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!