ಅಂಕಣ

ಕಬಡ್ಡಿ ಅಂಗಣದ “ಪ್ರಶಾಂತ” ತಾರೆ…   

  ಕ್ರೀಡೆಯೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಪ್ರಾದೇಶಿಕ ಕ್ರೀಡೆಗಳಾದ ಕಬಡ್ಡಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ ಹೀಗೆ ಹಲವಾರು  ಕ್ರೀಡೆಗಳು ಇಂದಿಗೂ ಅಚ್ಚುಮೆಚ್ಚು. ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿ ಪ್ರಸಿದ್ಧಿ ಪಡೆದಿದ್ದ ಕಬಡ್ಡಿಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದುಕೊಳ್ಳುವಂತಾಗಿದೆ. ಈ ವಿಚಾರವು ನಿಜಕ್ಕೂ ಶ್ಲಾಘನೀಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳ ಮುಖಾಂತರ ಬೆಂಬಲ ಸೂಚಿಸುತ್ತಾರೆ.

ಇಂದಿನ ದಿನದಲ್ಲಿ ಯುವಕರು ಕ್ರೀಡೆಯ ವಿಷಯ ಬಂದಾಗ ಕ್ರಿಕೆಟ್, ವಾಲಿಬಾಲ್, ಹಾಕಿ, ಇನ್ನಿತರ ವಿಷಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಸ್ವಲ್ಪ ಮಟ್ಟಿಗೆ ಇಂದು ಕಾಲ ಬದಲಾಗಿ ಹೋಗಿದೆ. ಕಾರಣ ಕ್ರೀಡೆಗೆ ಇರುವ ಜನರ ಬೆಂಬಲ, ಮುಖ್ಯವಾಗಿ ಗ್ರಾಮೀಣ ಕ್ರೀಡೆಗಿರುವ ಪ್ರಾಶಸ್ಯ. ಹಾಗಾಗಿ ಈಗಾಗಲೇ ಕಬಡ್ಡಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಓರ್ವ ಗ್ರಾಮೀಣ ಪ್ರದೇಶದ ಕ್ರೀಡಾಪಟು ಕರ್ನಾಟಕ ರಾಜ್ಯದ ವಿಜಯ ಬ್ಯಾಂಕ್ ಕಬಡ್ಡಿ ತಂಡದ ನಾಯಕ ಹಾಗೂ ಪ್ರೊ-ಕಬಡ್ಡಿ ಲೀಗ್‍ನ ದಬಾಂಗ್ ದಿಲ್ಲಿ ತಂಡದ ಆಟಗಾರ ಪ್ರಶಾಂತ್ ರೈ ಕೈಕಾರ ಇವರ ಸಂದರ್ಶನ ಮಾಡಿದಾಗ ಅವರು ತಮ್ಮ ಅನುಭವವನ್ನು ಹಂಚಿಕೊಂಡ ಒಂದು ತುಣುಕು ಇಲ್ಲಿದೆ.

ಪ್ರಶಾಂತ್ ರೈಯವರು ಹುಟ್ಟಿದ್ದು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ. ಪ್ರೈಮರಿ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ ಮುಂದೆ ಹೈಸ್ಕೂಲ್, ಪಿ.ಯು.ಸಿ, ಹಾಗೂ ಡಿಗ್ರಿ ಶಿಕ್ಷಣವನ್ನು ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು.  ಓದು ಮುಗಿದ ಬಳಿಕ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿ ತನ್ನ ವೃತ್ತಿ ಬದುಕನ್ನು ಆರಂಭಿಸಿದರು. ಓರ್ವ ಬ್ಯಾಂಕ್ ಉದ್ಯೋಗಿಯಾಗಿ ಕಬಡ್ಡಿ ಆಟದ ಮೇಲೆ ನಿಮ್ಮ ಒಲವು ಮೂಡಲು ಕಾರಣವೇನೆಂದು ಕೇಳಿದಾಗ, “ಹುಟ್ಟಿ ಬೆಳೆದಿದ್ದು ಗ್ರಾಮೀಣ ಪ್ರದೇಶದಲ್ಲಿ, ಆದ್ದರಿಂದಲೇ ಕಬಡ್ಡಿ ಕ್ರೀಡೆಯ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಹಾಗೆಯೇ ಮುಂದೆ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಧ್ಯಕ್ಷ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿಯವರ ಪ್ರಮುಖ ಪ್ರೇರಣೆ ನನಗಿತ್ತು, ಆದ್ದರಿಂದಲೇ ನನ್ನ ಹೆಚ್ಚು ಗಮನ ಕಬಡ್ಡಿ ಕ್ಷೇತ್ರದ ಕಡೆಗೆ ಹರಿಯಿತು” ಎಂದರು.

ಪ್ರೊ-ಕಬಡ್ಡಿ ತಂಡದ ಆಯ್ಕೆಯ ಕುರಿತು ಮಾತನಾಡಿದ ಅವರು, “ಪ್ರೊ ಲೀಗ್‍ಗೆ ಪಾಕಿಸ್ತಾನದ ಕಬಡ್ಡಿ ಆಟಗಾರರ ಆಯ್ಕೆಯ ಸಂದರ್ಭದಲ್ಲಿ ಕೆಲವು ತೊಂದರೆಗಳು ಉಂಟಾಗಿದ್ದವು. ಅದ್ದರಿಂದ ಅವರಿಗೆ ಲೀಗ್ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕದೆ ಹೋಯಿತು. ಆದರೆ ಆ ಅವಕಾಶ ನನ್ನ ಪಾಲಿಗೆ ಮುಕ್ತವಾಗಿ ಲೀಗ್‍ಗೆ ನಾನು ಆಯ್ಕೆಯಾದೆ.  ಮತ್ತೆ ನೆರೆಯ ರಾಷ್ಟ್ರದ ಆಟಗಾರರು ತಂಡವನ್ನು ಸೇರಿಕೊಂಡರು. ಆದರೆ ಇದು ನನ್ನ ಅಸ್ಥಿತ್ವಕ್ಕೆ ಮುಳುವಾಗಲಿಲ್ಲ. ಇದು ನನ್ನ ಕ್ರೀಡಾ ಬದುಕಿನ ಒಂದು ಮಹತ್ತರವಾದ ತಿರುವು ಎಂದೇ ಹೇಳಬಹುದು ಹಾಗೆಯೇ ಅದು ಒಂದು ಶ್ರೇಷ್ಠ ಘಳಿಗೆಯಾಗಿತ್ತು. ಇವೆಲ್ಲಕ್ಕೂ ಮುಖ್ಯ ಕಾರಣ ನಾನು ಮಾಡಿದಂಥಹ ಕಠಿಣ ಶ್ರಮ” ಎಂದು ಅಭಿಪ್ರಾಯಪಟ್ಟರು.

ಮುಂದೆ ಪ್ರೊ-ಕಬಡ್ಡಿಯಲ್ಲಿ ಆಟವಾಡಿದ ಅನುಭವವನ್ನು ಹಂಚಿಕೊಳ್ಳುತ್ತಾ, “ಓರ್ವ ರೈಡರ್ ಆಗಿ ಲೀಗ್  ನನಗೆ ಅತ್ಯಂತ ಖುಷಿ ತಂದು ಕೊಟ್ಟಿದೆ. ಪ್ರತಿಯೊಂದು ಮ್ಯಾಚ್ ಕೂಡ ಪೈಪೋಟಿಯಿಂದ ಕೂಡಿತ್ತು. ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಆಟಗಾರರ ಜೊತೆಗೆ ಆಡಿದ ಅನುಭವ ಅನನ್ಯವಾದುದು. ಪ್ರತಿಯೊಂದು ಪಂದ್ಯದಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಒಂದು ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಸಿದ್ಧವಾಗಿತ್ತಿದ್ದೆ. ಪಂದ್ಯದಿಂದ ಪಂದ್ಯಕ್ಕೆ ಹೊಸ ತಂತ್ರದೊಂದಿಗೆ ಕಣಕ್ಕೆ ಇಳಿಯುತ್ತದ್ದೆ” ಎಂದರು.

ಪ್ರಶಾಂತ್ ರೈ ಕೈಕಾರರವರು, ಕರ್ನಾಟಕ ರಾಜ್ಯ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿಜಯ ಬ್ಯಾಂಕ್ ಕಬಡ್ಡಿ ತಂಡದ ನಾಯಕನಾಗಿಯೂ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. 2015ರಲ್ಲಿ ಕೇರಳದಲ್ಲಿ ನಡೆದ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡ ಹಿರಿಮೆ ಇವರದ್ದು. ಹಾಗೆಯೇ ವೈಯಕ್ತಿಕವಾಗಿಯೂ ಹಲವಾರು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರೊ ಕಬಡ್ಡಿ ಲೀಗ್‍ನಲ್ಲಿ ತೆಲುಗು ಟೈಟಾನ್ಸ್ ತಂಡದಲ್ಲೂ ಆಟವಾಡಿ ಹಲವಾರು ವೈಯಕ್ತಿಕ ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಾಂತ್‍ರವರು ತಮ್ಮ ಸಾಧನೆಯನ್ನು ಮೆಲುಕು ಹಾಕುತ್ತಾ, ಈ ಎಲ್ಲಾ ಸಾಧನೆಗಳಿಗೆ ನನ್ನ ತಂದೆ ತಾಯಿಯ ಆಶೀರ್ವಾದ, ಅಭಿಮಾನಿಗಳ ಪ್ರೋತ್ಸಾಹ ಕಾರಣ. ಆಶ್ಚರ್ಯವೆಂದರೆ ಈ ನನ್ನ ಬೆಳವಣಿಗೆಯನ್ನು ಸ್ವತಃ ನಾನೇ ನಿರೀಕ್ಷಿಸಿರಲಿಲ್ಲ. ಆದರೆ ಈಗ ಕಬಡ್ಡಿ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದೇನೆ. ಅಷ್ಟೇ ಅಲ್ಲದೆ, ಹಿಂದೆಲ್ಲಾ ನಾನು ಬೇರೆ ಪ್ರಮುಖ ವ್ಯಕ್ತಿಗಳ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಕಾಯುತ್ತಿದ್ದೆ. ಆದರೆ ಈಗ ನನ್ನ ಜೊತೆ ಸೆಲ್ಫಿ ತೆಗೆಯಲು ಜನ ಕಾತರದಿಂದ ಕಾಯುತ್ತಾರೆ. ನಾನು ಜನ ಬೆಂಬಲ ಗಳಿಸಿದ್ದೇನೆ ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ. ಎಂದು ಹೇಳಿದರು.

“ಸ್ವಚ್ಛ ಪುತ್ತೂರು” ಇದರ ಅಂಬಾಸಿಡರ್ ಆಗಿ ಆಯ್ಕೆಗೊಡಿರುವ ಪ್ರಶಾಂತ್‍ರವರು ತನ್ನ ಕನಸಿನ ಪುತ್ತೂರನ್ನು ಸ್ವಚ್ಛ ತಾಲೂಕುಗಳಲ್ಲಿ ಒಂದಾಗಿ ಮಾಡಬೇಕು ಎಂಬ ಉದ್ದೇಶದಿಂದ ಯೋಜನೆಯನ್ನು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ. ಓರ್ವ ಗ್ರಾಮೀಣ ಪ್ರದೇಶದ ಯುವಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ತನ್ನ ಸಾಧನೆಯಿಂದ ಇತರರಿಗೆ ಮಾದರಿಯಾಗಿದ್ದಾರೆ.

 -ಭವಿಷ್ಯ ಕೆ. ಯಶೋಧರ್

bhavishyashetty13@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!