ದಿನಾ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಮೊದಲ ಕೆಲಸವೆಂದರೆ, ಹಲ್ಲುಜ್ಜುವುದು. ನಂತರ ಉಳಿದ ಕೆಲಸ-ಕಾರ್ಯಗಳು. ಕೊನೆಗೆ ದಿನದ ಮುಕ್ತಾಯದ ಸಮಯದಲ್ಲಿ, ಅಂದರೆ ರಾತ್ರಿ ಮಲಗುವ ಮೊದಲು ಮತ್ತೆ ಹಲ್ಲುಜ್ಜುತ್ತೇವೆ. ಇದೇನು ಹಲ್ಲುಜ್ಜುವ ಕಾರ್ಯವನ್ನು ವಿಶೇಷ ಎಂಬಂತೆ, ಲೇಖನದ ಪ್ರಾರಂಭದಲ್ಲಿ ಹೇಳುತ್ತಿದ್ದಾರಲ್ಲಾ, ಎಂದು ಆಶ್ಚರ್ಯವಾಗಬೇಡಿ. ಇದನ್ನು ಹೇಳುವುದಕ್ಕೂ ಬಲವಾದ ಕಾರಣವಿದೆ. ಇಂದು ಎಲ್ಲರೂ ಹಲ್ಲುಜ್ಜಲು, ವಿವಿಧ ರೀತಿಯ, ಬೇರೆ-ಬೇರೆ ಕಂಪನಿಗಳ ಟೂತ್‍ಬ್ರಶ್‍ಗಳನ್ನು ಬಳಸುತ್ತಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಎಲ್ಲಾ ತರಹದ ಟೂತ್‍ಬ್ರಶ್‍ಗಳು ಪ್ಲಾಸ್ಟಿಕ್‍ನಿಂದ ಮಾಡಲ್ಪಟ್ಟವುಗಳೇ ಆಗಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ನಿಜವಾದ ಸಮಸ್ಯೆ ಇರುವುದೇ ಇಲ್ಲಿ. ಇಂದು ಪ್ಲಾಸ್ಟಿಕ್ ಪರಿಸರಕ್ಕೆ ಹಾಗೂ ಮನುಷ್ಯನ ಆರೋಗ್ಯಕ್ಕೆ ಮಾರಕ ಎಂದು ತಿಳಿದು, ಬಹುತೇಕ ಕಡೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳನ್ನು ನಿಷೇಧಿಸಿದ್ದಾರೆ. ಅಂಗಡಿಗಳಲ್ಲೂ ಇಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳನ್ನು ಕೊಡುವುದು ನಿಲ್ಲಿಸಿದ್ದಾರೆ. ಆದರೂ ಸಂಪೂರ್ಣವಾಗಿ ನಿಂತಿಲ್ಲ ಅದು ಬೇರೆ ವಿಚಾರ. ಇದೆಲ್ಲಾ ಸರಿ. ಇಂದು ನಾವು ಪ್ಲಾಸ್ಟಿಕ್ ನಿಷೇಧ, ಎಂದು ಹೇಳಿ ಪ್ಲಾಸ್ಟಿಕ್ ಕವರ್‍ಗಳನ್ನು ಹಾಗೂ ಇತರ ಪ್ಲಾಸ್ಟಿಕ ಉತ್ಪನ್ನಗಳನ್ನು ನಿಷೇಧ ಮಾಡುವತ್ತ ಗಮನ ಹರಿಸುತ್ತಾ, ನಾವು ದಿನ ನಿತ್ಯ ಉಪಯೋಗಿಸುವ ಪ್ಲಾಸ್ಟಿಕ್ ಟೂತ್‍ಬ್ರಶ್ ಇದೆಲ್ಲಕ್ಕಿಂತ ಎಷ್ಟು ಮಾರಕ ಎಂಬುದನ್ನೇ ಮರೆತು ಬಿಟ್ಟಿದ್ದೇವೆ. ಬೇರೆ-ಬೇರೆ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ಮಾರಕತೆಯ ಬಗ್ಗೆ ಸಾಕಷ್ಟು ಜಾಗೃತಿಗಳನ್ನು ಮೂಡಿಸುತ್ತಿರುವ ಸರ್ಕಾರ ಹಾಗೂ ಮಾದ್ಯಮದವರು, ನಾವು ದಿನ ನಿತ್ಯ ಬಳಸುವ ಈ ಪ್ಲಾಸ್ಟಿಕ ಟೂತ್‍ಬ್ರಶ್ ನ ಮಾರಕತೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಂತೆ ಅನಿಸುತ್ತಿಲ್ಲ. ಯಾಕೆಂದರೆ ಇದರ ಕುರಿತು ಜಾಗೃತಿ ಮೂಡಿಸಿದರೂ ನಿಷೇಧ ಮಾಡುವುದು ಸ್ವಲ್ಪ ಕಷ್ಟವೇ. ಅಷ್ಟರ ಮಟ್ಟಿಗೆ ಇಂದು ನಾವು ಟೂತ್‍ಬ್ರಶ್ ಗೆ ಹೊಂದಿಕೊಂಡಿದ್ದೇವೆ. ಅದು ನಮ್ಮ ದಿನ ನಿತ್ಯದ ಇಂದು ಭಾಗವೇ ಆಗಿದೆ. ಈ ಪ್ಲಾಸ್ಟಿಕ್ ಟೂತ್ ಬ್ರಶ್ ಪರಿಸರಕ್ಕೆ ಹಾಗೂ ನಮ್ಮ ಆರೋಗ್ಯದ ಮೇಲೆ ಅತೀ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆಯೇ? ನಾವು ಹಲ್ಲುಜ್ಜಲು ಬಳಸುವ ಪೇಸ್ಟ ಹೆಚ್ಚಿನ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ, ಹಾಗೆಯೇ ಇದರ ಜೊತೆ ನಮ್ಮ ಪ್ಲಾಸ್ಟಿಕ್ ಬ್ರಶ್ ಇವೆರಡೂ ಸೇರಿದರೆ ನಮ್ಮ ಹಲ್ಲು ಮತ್ತು ಬಾಯಿಯ ಗತಿ ಏನಾಗಬೇಡ? ನಿಮಗೆ ಗೊತ್ತೆ ನಾವು ಉಪಯೋಗಿಸುವ ಬ್ರಶ್ ನ ಪ್ಲಾಸ್ಟಿಕ್ ಕಚ್ಚಾ ತೈಲದಿಂದ ಮಾಡಲ್ಪಟ್ಟಿದ್ದು. ಅದೇ ರೀತಿ ಅದರ ಮೇಲಿರುವ ರಬ್ಬರ್ ಹಿಡಿಕೆಯೂ ಸಹ ಪೊಟ್ರೋಲಿಯಂ ಮತ್ತು ಕಚ್ಚಾ ತೈಲವನ್ನು ಉಪಯೋಗಿಸಿಯೇ ತಯಾರು ಮಾಡುವುದು. ಇವೆಲ್ಲಾ ನಿಧಾನಗತಿಯ ವಿಷವಿದ್ದಂತೆ. ಇವು ನಮ್ಮ ಮೇಲೆ ಬೀರುವ ಅಥವಾ ಬೀರುತ್ತಿರುವ ಪರಿಣಾಮ ನಮಗೆ ಅರಿವೇ ಆಗುವುದಿಲ್ಲ. ಇಂದು ಚಿಕ್ಕ ಮಕ್ಕಳಿಗೆ ತಿಳುವಳಿಕೆ ಬಂದಾಗಿನಿಂದ, ಅವರಿಗೆ ಟೂತ್ ಬ್ರಶ್ ಕೊಡಿಸಿ ಹಲ್ಲುಜ್ಜಲು ಕಲಿಸುತ್ತೇವೆ, ಅದೂ ದಿನಕ್ಕೆರಡು ಬಾರಿ. ಆದರೂ ಇಷ್ಟು ಬ್ರಶ್ ಮಾಡಿದರೂ, ಇಂದು ಬಹುತೇಕ ಮಕ್ಕಳಲ್ಲಿ ಹಲ್ಲಿನ ಸಮಸ್ಯೆಯಂತೂ ಇದ್ದೇ ಇದೆ. ಹಳೆಯ ಕಾಲದ ಜನರು ಬೇವಿನ ಕಡ್ಡಿಯಿಂದ, ಮಸಿ-ಕೆಂಡದಿಂದ ಹಲ್ಲುಜ್ಜುತ್ತಿದ್ದರು. ಅವಾಗ ಈ ಟೂತ್ ಬ್ರಶ್, ಟೂತ್ ಪೇಸ್ಟಗಳು ಇರಲಿಲ್ಲ. ಮುದುಕರಾದ ಮೇಲೂ ಆಗಿನವರ ಹಲ್ಲುಗಳು ಗಟ್ಟಿ-ಮುಟ್ಟಾಗಿರುತ್ತಿದ್ದವು. ಅಂದ ಮೇಲೆ ನೀವೆ ವಿಚರ ಮಾಡಿ ಸಮಸ್ಯೆಯಿರುವುದು ಯವುದರಲ್ಲೆಂದು..
ವೈದ್ಯರು ಹೇಳುವ ಪ್ರಕಾರ ಒಂದು ಟೂತ್ ಬ್ರಶ್‍ನ್ನು ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಉಪಯೋಗಿಸುವಂತಿಲ್ಲ. ಅಂದ ಮೇಲೆ ಪ್ರತೀ ಎರಡು ಅಥವಾ ಮೂರು ತಿಂಗಳಿಗೆ ನಮ್ಮ ಬ್ರಶ್ ಬದಲಾಯಿಸಬೇಕಾಗುತ್ತದೆ. ಅಂದರೆ ವರ್ಷಕ್ಕೆ ಕನಿಷ್ಠ 6 ಬ್ರಶ್‍ಗಳನ್ನು ಒಬ್ಬ ವ್ಯಕ್ತಿ ಬದಲಿಸುತ್ತಾನೆ. ಒಂದು ಮನೆಯಲ್ಲಿ ಸಾಮಾನ್ಯ 4 ಜನರಿದ್ದರೆ, ವರ್ಷಕ್ಕೆ 24 ಬ್ರಶ್‍ಗಳಾಯಿತು. ಇಡೀ ದೇಶದ ಜನ ಸಂಖ್ಯೆಯನ್ನು ತೆಗೆದುಕೊಂಡರೆ ಲೆಕ್ಕವಿಲ್ಲದಷ್ಟು ಟೂತ್ ಬ್ರಶ್‍ಗಳ ನಿರುಪಯುಕ್ತ ಹುಟ್ಟಿಕೊಳ್ಳುತ್ತದೆ. ಹೀಗೆ ಉಪಯೋಗಿಸಿ ಬಿಟ್ಟ ಬ್ರಶ್‍ಗಳನ್ನು ನಾವು ಮುಲಾಜಿಲ್ಲದೆ, ಉಳಿದ ಕಸದ ಜೊತೆ ಹೊರಗಡೆ ಎಸೆಯುತ್ತೇವೆ. ಹೀಗೆ ಇಡೀ ದೇಶದಿಂದ ಅದೆಷ್ಟೋ ನಿರುಪಯುಕ್ತ ಪ್ಲಾಸ್ಟಿಕ ಬ್ರಶ್‍ಗಳು ಮಣ್ಣು ಸೇರಿ, ಮಣ್ಣಿನಲ್ಲಿ ಕರಗದೇ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ. ಕಡಿಮೆ ಜನಸಂಖ್ಯೆಯಿರುವ ಅಮೇರಿಕಾದಲ್ಲೇ ವರ್ಷವೊಂದಕ್ಕೆ 1 ಬಿಲಿಯನ್ ನಷ್ಟು ಟೂತ್ ಬ್ರಶ್‍ಗಳು ನಿರುಪಯುಕ್ತವಾಗುತ್ತಿವೆ ಅಂದ ಮೇಲೆ, 120 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಭಾರತ ದೇಶದಲ್ಲಿ ಎಷ್ಟಾಗಬೇಡ? ಈ ಟೂತ್ ಬ್ರಶ್‍ಗಳನ್ನು ಕಸದ ಜೊತೆ ಸುಟ್ಟು ಹಾಕಿದರೆ, ಅದರಲ್ಲಿರುವ ರಾಸಾಯನಿಕಗಳು ವಾತಾವರಣದಲ್ಲಿರುವ ನಾವು ಉಸಿರಾಡುವ ಗಾಳಿಯಲ್ಲಿ ಸೇರಿ, ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ ಇದರ ಅಪಾಯವನ್ನು ಅರಿತು, ಇಂದು ಈ ಟೂತ್ ಬ್ರಶ್‍ಗಳನ್ನು ಮರುಬಳಕೆ ಮಡುವ ಬಗ್ಗೆ ಚಿಂತಿಸುತ್ತಿದ್ದಾರೆ. ಒಂದೆಡೆ ಇದರ ಮರುಬಳಕೆಯ ಕುರಿತು ಚಿಂತಿಸುತ್ತಿದ್ದರೆ, ಇನ್ನೊಂದೆಡೆ ಈ ಪ್ಲಾಸ್ಟಿಕ್ ಟೂತ್ ಬ್ರಶ್’ಗಳ ಬದಲಾಗಿ ಪರಿಸರ ಸ್ನೇಹಿ ಬಿದಿರನ್ನು ಬಳಸಿ ಟೂತ್ ಬ್ರಶ್ ತಯಾರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಒಂದು ಲೆಕ್ಕದಲ್ಲಿ ನೋಡಿದರೆ, ಇಷ್ಟೊಂದು ಅಪಾಯಕಾರಿಯಾಗಿರುವ ಪ್ಲಾಸ್ಟಿಕ್ ಟೂತ್ ಬ್ರಶ್‍ಗಳನ್ನು ಉಪಯೋಗಿಸುವುದಕ್ಕಿಂತ, ಪರಿಸರ ಸ್ನೇಹಿ ಬಿದಿರಿನಿಂದ ಮಾಡಿದ ಟೂತ್ ಬ್ರಶ್ ಉಪಯೋಗಿಸುವುದು ಉತ್ತಮ ಎಂಬುದು ನನ್ನ ಅನಿಸಿಕೆ. ನೀವೆನೆನ್ನುತ್ತೀರಿ?