ನೋಡ ನೋಡುತ್ತಿದ್ದಂತೆ ೨ ವರ್ಷಗಳು ಉರುಳಿ ಹೋದವು. ಆದರೆ ನೆನಪುಗಳು ಮಾತ್ರ ಶಾಶ್ವತ. ಕೆಲವು ನೆನಪುಗಳು ಮರೆಯಲು ಅಸಾಧ್ಯ. ಇನ್ನು ಕೆಲವು ನೆನಪುಗಳನ್ನು ಮರೆಯಲೇಬಾರದು. ಅಂತಹುದೇ ಒಂದು ಸುಂದರ ನೆನಪು ನನ್ನ ಸ್ನೇಹಿತರುಗಳೊಂದಿಗೆ… ಮರೆಯುವ ಮುನ್ನ ಅದ್ಭುತವಾದ ನೆನಪುಗಳನ್ನು ಮೆಲುಕು ಹಾಕಿದರೆ ಹೇಗೆ? ನೀವು ನಿಮ್ಮ ನೆನಪಿನ ಬುತ್ತಿಯನ್ನು ತೆರೆದು ಒಮ್ಮೆ ನೋಡಿ… ನನ್ನ ನೆನಪುಗಳನ್ನು ಒಮ್ಮೆ ಓದಿ…
ಇಂಜಿನಿಯರಿಂಗ್ ಕಾಲೇಜ್ ಮುಗಿಯುವ ಕೊನೆಯ ಹಂತದ ದಿನಗಳು .ಅದೇ ಕಾಲೇಜ್, ಅದೇ ಬೆಂಚ್- ಡೆಸ್ಕ್, ಅದೇ ಲೆಕ್ಚರರ್ಸ್-ಸ್ನೇಹಿತರು… ತುಂಬಾ ಬೋರ್ ಅಂತ ಅನಿಸ್ತಿತ್ತು. ಇದರ ಮಧ್ಯೆ ಏನೋ ಚೇಂಜ್ ಇರಬೇಕಲ್ವಾ??… ಕ್ಲಾಸ್ ಬಂಕ್ ಮಾಡಿ ಪಿಕ್ನಿಕ್ ಹೋಗುವಾಸೆ…ಆದರೆ… ಎಲ್ಲಿ? ಹೇಗೆ? ಯಾರೆಲ್ಲ? ಯಾವಾಗ? ಎಂಬ ಪ್ರಶ್ನೆಗಳು ಮೂಡುತ್ತಿದ್ದವು. ಆಗಲೇ ಶುರುವಾಯ್ತು ನೋಡಿ ವಾಟ್ಸಪ್ನಲ್ಲಿ ಮೆಸೇಜ್ಗಳ ಮೇಲೆ ಮೆಸೇಜುಗಳು, ಚರ್ಚೆಗಳ ಮೇಲೆ ಚರ್ಚೆಗಳು, ಯಾವುದು ಓದೋದು? ಯಾವುದು ಬಿಡೋದು? ಯಾವುದು ಡಿಲೀಟ್ ಮಾಡೋದು? ಉಫ್ ಸುಸ್ತಾಗೋಯ್ತು!!!.. ಹೀಗೆ ಒಂದು ವಾರ ಬೇಕಾಯ್ತೇನೋ… ಕೊನೆಗೂ ಒಂದು ಪ್ರವಾಸಿ ತಾಣ ಸಿಕ್ತು. ಅದುವೇ “ಕುಡ್ಲು ತೀರ್ಥ” ಜಲಪಾತ. ಹೋಗಲು ಬೇಕಾದ ಸ್ಥಳವೇನೋ ಸಿಕ್ಕಿತು, ಆದರೆ ಯಾರೆಲ್ಲ ಮತ್ತು ಯಾವಾಗ ಎಂಬ ಪ್ರಶ್ನೆಗಳು ಉಳಿದುಕೊಂಡವು. ನಮ್ಮ ಕ್ಲಾಸಲ್ಲಿ ಇದ್ದದ್ದು ೫೨ ಜನ ಸಹಪಾಠಿಗಳು. ಇವರಲ್ಲಿ ಬರುವವರಾರು? ಬರದೆ ಇರುವವರಾರು? ಮತ್ತು ಕೊನೆಯಲ್ಲಿ ಕೈ-ಕೊಡುವವರಾರು? ಎನ್ನುವುದು ಎಲ್ಲವೂ ನಿಗೂಢ… ಕೆಲವರು ಹಿಂದೆ-ಮುಂದೆ ಯೋಚಿಸದೆ ನಾನು ಬರುತ್ತೇನೆ ಎಂದರು, ಇದರಲ್ಲಿ ನಾನೂ ಒಬ್ಬಳು, ಇನ್ನು ಕೆಲವರು ಖಡಾಖಂಡಿತವಾಗಿಯೂ ಬರುವುದೇ ಇಲ್ಲ ಎಂದರು. ಉಳಿದವರು ಕಾಲಾವಕಾಶ ತೆಗೆದುಕೊಂಡು ತಮ್ಮ ನಿರ್ಧಾರವನ್ನು ತಿಳಿಸಿದರು. ಅಂತೂ ಇಂತೂ ಕೊನೆಗೆ ೨೩ ಜನ ಹೋಗುವುದೆಂದು ನಿರ್ಧರಿಸಿದೆವು. ಇನ್ನು ಹೊರಡುವುದು ಯಾವಾಗ ಎಂಬ ಆಲೋಚನೆ!!!…
ಹೇಗೂ ಫೈನಲ್ ಇಯರ್ ಅಲ್ವ, ಒಂದಿಲ್ಲೊಂದು ಕಂಪನಿ ಕ್ಯಾಂಪಸ್ ಇಂಟರ್ವ್ಯೂಗೆ ಬರುವುದು ಸಹಜ. ಹಾಗೆಯೇ ಯಾವುದೋ ಒಂದು ಕಂಪೆನಿ ನಮ್ಮ ಕಾಲೇಜಿಗೆ ಬಂದಿತ್ತು. ಯಾವ ಕಂಪನಿ ಎಂದು ನೆನಪೂ ಇಲ್ಲ, ನೆನಪಿಗೆ ಬಂದರೆ ಬರೆಯುವುದೂ ಇಲ್ಲ. ಯಾಕೆಂದರೆ ನಾನು ಬರೆಯಲು ಹೊರಟಿರುವುದು ಕಂಪನಿ ಬಗ್ಗೆ ಅಲ್ವಲ್ಲ. ಆದ್ರೆ ನಾನು ಹೇಳಹೊರಟಿರುವುದು… ನಮಗ್ಯಾರಿಗೂ ಆ ಕಂಪನಿಯ ಇಂಟರ್ವ್ಯೂ ಅಂಟೆಂಡ್ ಮಾಡಲು ಇಷ್ಟ ಇರಲಿಲ್ಲ. ಹಾಗಾಗಿ ಇದಕ್ಕಿಂತ ಸೂಪರ್ ದಿನ ಪಿಕ್ನಿಕ್ ಹೋಗಲು ಇಲ್ಲ ಎಂದುಕೊಂಡೆವು. ಅದುವೇ ಫೆಬ್ರವರಿ ೨೩ ಶುಭ ಸೋಮವಾರದ ಶುಭ್ರ ಮುಂಜಾನೆ. ಇದೆಲ್ಲದರ ಜವಾಬ್ದಾರಿಯನ್ನು ನಮ್ಮ ಕ್ಲಾಸಿನ “ಲೊಯಲ್ ಡಿಸೋಜ” ವಹಿಸಿಕೊಂಡನು.
ಸಾಧಾರಣ ಬೆಳ್ಳಿಗ್ಗೆ ೮ ಗಂಟೆಗೆ ಪಾಂಬೂರಿಂದ ( ಉಡುಪಿ ಜಿಲ್ಲೆ) “ಕೀರ್ತಿ” ಬಸ್ಸಲ್ಲಿ ವೆಜ್ ಬಿರಿಯಾನಿ ಮತ್ತು ಬೇಕಾದ ಪಾನೀಯಗಳನ್ನು ತೆಗೆದುಕೊಂಡು ಹೊರಟೆವು. ಹೊಟ್ಟೆಗೆ ಏನಾದ್ರೂ ಬೇಕಲ್ವಾ???… ಹೋಗುವಾಗ ಉಡುಪಿ, ಮಣಿಪಾಲ… ಹೀಗೆ ದಾರಿಯಲ್ಲಿ ಎಲ್ಲಾ ಫ್ರೆಂಡ್ಸ್’ಗಳನ್ನು ಪಿಕಪ್ ಮಾಡ್ತಾ ಹೋದ್ವಿ. ಕೀರ್ತಿ ಬಸ್ ಫುಲ್ ಆಯ್ತು, ಬೆಳಿಗ್ಗೆ ಎಲ್ಲರೂ ಎನರ್ಜಿ ತುಂಬಿಸಿಕೊಂಡು ಬಂದಿದ್ದ್ರು. ಹೋಗುವಾಗ ಹಾಡು, ಹರಟೆ, ಮೋಜು, ಮಸ್ತಿ, ಡ್ಯಾನ್ಸ್, ಇತ್ಯಾದಿ ಇತ್ಯಾದಿ… ಎಲ್ಲವೂ ಇತ್ತು. ಉಡುಪಿಯಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ. ಕುಡ್ಲು ತೀರ್ಥ ಇರುವುದು ಹೆಬ್ರಿಯಲ್ಲಿ. ಹೋಗುವಾಗ ಪೆರ್ಡೂರಿನ ಶ್ರೀ ಅನಂತಪದ್ಮನಾಭನ ದರ್ಶನ ಪಡೆದು ಹೋದ್ವಿ. ದೇವರ ಆಶೀರ್ವಾದ ಇಲ್ಲದೆ ಏನೂ ಆಗಲ್ಲ ಅಲ್ವಾ? ಹಾಗೆಯೇ ಸ್ವಲ್ಪ ಮುಂದೆ ಪ್ರಕೃತಿಯ ಮಡಿಲಲ್ಲಿ ಸ್ವಚ್ಚಂದವಾದ ನದಿ ತನ್ನಷ್ಟಕ್ಕೆ ಹರಿದು ಹೋಗ್ತಾ ಇತ್ತು. ಏನೋ ಆಸೆ… ನದಿಗೆ ಇಳಿದು, ದೊಡ್ಡ ದೊಡ್ಡ ಮೀನುಗಳಿಗೆ ಹಾಯ್ ಹೇಳಿ, ಸ್ವಲ್ಪ ಫೋಟೋ ತೆಗೆದು ಹೋದ್ವಿ. ಮುಂದೆ ಕಾಡಿನ ದಾರಿಯಲ್ಲಿ ಪ್ರಯಾಣ ಶುರುವಾಯ್ತು, ಕಾಲ್ ಮಾಡುವವರು ಈಗಲೇ ಮಾಡಿ ಇನ್ನು ಮೊಬೈಲ್ಗೆ ಸಿಗ್ನಲ್ ಇರಲ್ಲ ಎಂದ ಲೊಯಲ್. ಅವನು ಆವಾಗಲೇ ಸುಮಾರು ಬಾರಿ ಕುಡ್ಲು ತೀರ್ಥಕ್ಕೆ ಹೋಗಿ ಬಂದಿದ್ದ, ಹಾಗಾಗಿ ಅವನಿಗೆ ಗೊತ್ತಿತ್ತು. ಹೀಗೆ ದಾರಿ ಸಾಗ್ತಾ ಇತ್ತು. ಕೊನೆಗೆ ಕಾಡಿನ ಮಧ್ಯದಲ್ಲಿ ಬಸ್ ನಿಂತಿತು, ಇನ್ನು ಉಳಿದಿರೊದು ಕಾಲು ದಾರಿ ಮಾತ್ರ… ನಡೆದುಕೊಂಡೇ ಹೋಗಬೇಕು…!!! ಅದಕ್ಕೆ ಹೊತ್ತುಕೊಂಡು ಬಂದಿದ್ದ ಬಿರಿಯಾನಿ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ಬಿರಿಯಾನಿ ಅಂದಾಕ್ಷಣ ನಿಮ್ಮ ಬಾಯಲ್ಲಿ ನೀರು ಬರ್ತಿದೆಯಾ??? ನುಂಗ್ಬಿಡಿ ಅಷ್ಟೆ…
ನಡೆಯಲು ಶುರುಮಾಡಿದೆವು.. ಕೆಲವರು ಮುಂದೆ, ಇನ್ನು ಕೆಲವರು ಹಿಂದೆ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳುತ್ತ ದಾರಿಯಲ್ಲಿ ಸಾಗುತ್ತಿದ್ದೆವು. ಕಾಡಿನ ದಾರಿ ಸುಮಾರು ೩೦ ನಿಮಿಷ ಇರಬಹುದೇನೊ… ಆ ದಾರಿಯಲ್ಲಿ ನಡೆಯುವುದೆ ಒಂದು ಮಜ ಕಣ್ರೀ!!! ಹೇಗೋ ದಾರಿ ಸಾಗ್ತಾ ಇತ್ತು. ಕೊನೆಗೂ ನಾವು ಕಾಯುತ್ತಿದ್ದ ಜಲಪಾತ ಬಂದೇ ಬಿಡ್ತು… ನಡೆದುಕೊಂಡು ಬರುವಾಗ ಇದ್ದ ಸುಸ್ತು, ಆಯಾಸ ಎಲ್ಲವೂ ಜಲಪಾತ ನೋಡುವಾಗ ಮಂಗಮಾಯ… ವಾಹ್ ಏನ್ ಅದ್ಭುತ ಪ್ರವಾಸಿ ತಾಣ… ಅದೆಷ್ಟು ಎತ್ತರದಿಂದ ಧುಮುಕುವ ಜಲಪಾತ!!!… ನೀರಿಗಿಳಿದ ಮೇಲೆ ಕೇಳಬೇಕೆ? ಎಲ್ಲರೂ ಸಣ್ಣ ಮಕ್ಕಳ ತರಹ ನೀರಿನಲ್ಲಿ ಆಟ ಆಡಿದ್ದು ಮಾರ್ರೆ!!!… ಇದರ ಜೊತೆಗೆ ತುಂಬಾನೆ ಫೋಟೋ ಸಹ ತಗೆದ್ವಿ… ಏನ್ ಅದ್ಭುತ ಕ್ಷಣಗಳು… ನೀರಿನಿಂದ ಹೊರಕ್ಕೆ ಬಂದು ಕೀರ್ತಿ ಗಾಡಿ ಹತ್ತುವಾಗ ಸೂರ್ಯ ಮುಳುಗುವ ಹೊತ್ತು. ಅದ್ ಹೇಗ್ ಸಮಯ ಹೋಯ್ತೋ ಗೊತ್ತೇ ಆಗ್ಲಿಲ್ಲ. ಮತ್ತೆ ಗಾಡಿ ಹತ್ತಿ ಹೊರಟದ್ದು ಮಲ್ಪೆ ಬೀಚ್ ಕಡೆಗೆ, ಸೂರ್ಯ ಮುಳುಗುವ ಕ್ಷಣ. ಕಣ್ಣುಗಳು ಸುಂದರ ದೃಶ್ಯಗಳನ್ನು ಸೆರೆಹಿಡಿದವು. ಬೀಚಿನ ಮೋಜನ್ನು ಮುಗಿಸಿ, ಅಂತರಾಳದಲ್ಲಿ ನೆನಪನ್ನು ತುಂಬಿಕೊಂಡು ಕೊನೆಗೆ ಮನೆಯ ದಾರಿಕಡೆ ಹೊರಟೆವು. ಮನೆಗೆ ಬಂದು ತಲುಪಿದಾಗ ರಾತ್ರಿ ೮ ಗಂಟೆ.
ಒಂದು ಮಾತಂತು ಸತ್ಯ… ಯಾರೆಲ್ಲ ಬಂದಿಲ್ವೊ ನೀವು ತುಂಬ ಮಿಸ್ ಮಾಡ್ಕೊಂಡ್ರಿ ಅಷ್ಟೇ!!! ಇನ್ನೊಂದು ಬಾರಿ ನಿಮ್ಮೊಂದಿಗೆ ಸುಂದರ ದಿನವನ್ನು ಕಳೆಯಲು ಮನಸ್ಸು ಬಯಸುತ್ತಿದೆ… ಬರ್ತೀರ ಅಲ್ವಾ???