ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ
ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ!
ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ
ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ
ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ
ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ
ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ
ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ!
ಸತ್ಯ ಚರಿತ್ರೆಯ ಪುಟಗಳಿಗೆ ಮಸಿ ಸುರಿದು
ಎದೆಗಳೊಳಗೆ ವಿಷಾದಗಳ ಮಡುಗಟ್ಟಿಸಿದ್ದೆ
ಅಯ್ಯೊ…ಎಲ್ಲಿಂದ ಬಂದನಿವ ದೇಶವೆನ್ನುವವ
ಕೆಂಪು ಕ್ರಾಂತಿಯ ಮೆಟ್ಟಿ ಭಯ ಊರಿಬಿಟ್ಟ
ವಧೆಯ ವಿಧಿಮಾತು ಅಳಿಸುವ ಹಂಬಲದವ
ಅಯೋಮಯವ ನನ್ನೊಳಗೆ ಉಗ್ಗುತ್ತಿರುವ!
ತಲೆ ಕಡಿದು ರಫ್ತು ಮಾಡುವ ಮಂದಿಗೆ
ಶಾಂತಿ ಪಾಠವ ಪಠಿಸದೆ ತಪ್ಪು ಹೆಜ್ಜೆಗಳನಿಟ್ಟವ!
ಕೆಂಪು ಆಹಾರಕ್ಕೆ ಮುಳುವಾಗುವ ಇವನು
ಮದಿರೆಯ ನಿಷೆ ಇಳಿಸಲು ಎಳಸನೇನು?
ಹೊಟ್ಟೆಗಾಗಿಯೆ ಹುಟ್ಟಿದ ನಮಗೆಲ್ಲ
ಸ್ವಾಭಿಮಾನದ ಸಿದ್ಧಾಂತ ಗಾಳಿ ಉಣಿಸನೇನು?
ಏಕ ಮುಖ ದೃಷ್ಟಿ ಚಿತ್ತಗಳ ನನಗೆ
ಉಳಿದ ಆಯಾಮಗಳ ಬಲೆಗೆ ಬೀಳಿಸನೇನು!
’ಭಕ್ತ’ ವಿಡಂಬನೆ ಸರಿಸಿ ಹಾತೆಗಳಾಗುವ ಮಂದಿ
ನನ್ನ ಕವಿತೆಯ ದಾರಿ ತಪ್ಪಿಸರೇನು!
ಬೆಳಕಿಗೆ ಹಾತೊರೆದು ಸುಟ್ಟುಕೊಳ್ಳುವ ಭಯ
ಸುಡದ ಬೆಳಕೆಂದರೂ ಬಿಡದೇಕೆ ಸಂಶಯ!?
ಎಡವುತ್ತಲೆ ದಾರಿ ಸವೆಸಿ ಇಲ್ಲಿವರೆಗೂ ಬಂದು
ಹೆಜ್ಜೆ ಪಳಗಿಸುವ ದರ್ದು ನನಗಿಲ್ಲ ಇಂದು!
-ಅನಂತ ರಮೇಶ್
anantharamesha@gmail.com