ಹೋಗುವುದೆಂದರೆ ಊರಿಗೆ
ಸ್ವರ್ಗವನ್ನೇ ಇಣುಕಿ ಬಂದಂತೆ.
ಗಡಿಬಿಡಿಯಲಿ ಬಟ್ಟೆ ಬರಿಯನು ತುರುಕಿ
ಬ್ಯಾಗಿನ ಹೊಟ್ಟೆ ಒಡೆಯುವಂತೆ.
ಐದಾರು ಗಂಟೆ ಪಯಣ ಸಾಗುವುದು ಅರಿವಿಲ್ಲದೆ.
ಪ್ರತಿಗೇಟು ಕಂಬದ ಸದ್ದಿಗೆ ನನ್ನ ಬರುವಿಕೆ ನೋಡುವ ನನ್ನ ನಾಯಿ
“ಬಂದ್ನಾ” ಎಂದು ರಸ್ತೆಯಿಂದ ಕೇಳುವ ಬಾಲ್ಯದ ಚಡ್ಡಿಗಳು
ಯಾವ ಬಸ್ಸಿಗೆ ಬರಬಹುದು ಎಂದು ಲೆಕ್ಕ ಹಾಕುವ ಅಪ್ಪ….
ನಾ ನೋಡಲು ಕಾದಿರುವ, ಹಳೆ ಏಮ್ಮೆ, ದನದ
ಹೊಸ ಕರುಗಳು ತುಕ್ಕಿನ ಕಳೆ ಬಂದ ಸೈಕಲ್ಲು
ಹಸಿರಿನಿಂದ ನಕ್ಕು ಸನಿಹ ಕರೆವ ತೋಟ ಗದ್ದೆಗಳು
ನಿದ್ದೆ ಬಾರದ ಕಣ್ಗಳಲಿ ಹೀಗೆ ಕಾಡುವ ನೆನಪುಗಳಿಗೆ
ಬರವೆಲ್ಲಿದೆ..?
ಊರಿಗೆ ಹೋಗುವುದೆಂದರೆ ಹೀಗೆ….
ವಾಪಾಸ್ಸು ಬರುವಾಗ…!?
ಹೊರಡ್ಳಾ ಎಂದಾಗ ಒಲ್ಲದ ಮನಸ್ಸಿಂದ ಹಾ….
ಎನ್ನುವರಷ್ಟೆ,,,
ಸೆರಗಿನಿಂದ ಒರೆಸುತ್ತ ಅದುಮಿಟ್ಟು ಕೊಳ್ಳಲಾಗದ ಕಣ್ಣಿರನು
ಊರಿನರ್ಧ ದಾರಿಗೆ ಬರುವ ನನ್ನಮ್ಮ
ಹಿಂದೆ ತಿರುಗಿ ತಿರುಗಿ “ಬರ್ಲಾ” ಅಂತೇಳುವಾಗ
ಮನಸ್ಸೆಂಬ ಮರದ ಎಲೆಗಳು ಮುರುಟಿ
ಮರುಗುತ್ತವೆ…
ಆದರ್ಶ ಜಯಣ್ಣ, ಬಿಲಗುಂಜ
ಇ ಮೇಲ್: jadarsh03@gmail.com