ಸಾವರ್ಕರ್ ಯಾರು ಎಂಬ ಪ್ರಶ್ನೆಯನ್ನು ನಮ್ಮ ಇಂದಿನ ಶಾಲೆಯ ಮಕ್ಕಳು ಅಥವಾ ಯುವಕರಿಗೆ ಕೇಳಿದರೆ ಬಹಳಷ್ಟು ಜನ ಗೊತ್ತಿಲ್ಲ ಎಂದೇ ಉತ್ತರಿಸುತ್ತಾರೆ. ತನ್ನ ಇಡೀ ಜೀವನ ಮತ್ತು ಕುಟುಂಬವನ್ನು ದೇಶಕ್ಕಾಗಿ ಸಮರ್ಪಿಸಿದ ಅಪ್ರತಿಮ ದೇಶಭಕ್ತನ ಕುರಿತು ಸಾಕಷ್ಟು ಜನರಿಗೆ ತಿಳಿಯದೇ ಇರುವುದು ನಮ್ಮ ದೌರ್ಭಾಗ್ಯವೇ ಸರಿ. ತಮ್ಮ ಜೀವನ ಪೂರ್ತಿ ತಾಯಿ ಭಾರತಿಯ ಪೂಜೆ ಮಾಡಿದ ಅರ್ಚಕ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ ಮತ್ತು ಹೋರಾಟವನ್ನು ತಿಳಿಯಪಡಿಸುವುದೇ ಈ ಲೇಖನದ ಆಶಯ.
ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಸಿಡಿದೆದ್ದು ನಿಂತು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿ 50 ವರ್ಷಗಳ ಕಾಲ ಘನಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಮಹಾನ್ ಕ್ರಾಂತಿಕಾರಿ ಸಾವರ್ಕರ್. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ನಿಶ್ಚಯಿಸಿ, ಶತ್ರುವಿನ ನೆಲವಾದ ಇಂಗ್ಲೆಂಡ್ ಗೆ ತೆರಳಿ ಅಲ್ಲಿ ಕ್ರಾಂತಿಕಾರ್ಯ ಕೈಗೊಂಡ ವೀರ ಸೇನಾನಿ ಸಾವರ್ಕರ್. ದೇಶಭಕ್ತಿಯ ಅಪರಾಧಕ್ಕಾಗಿ ತನ್ನ ಬಿ.ಎ ಪದವಿಯನ್ನೇ ಕಳೆದುಕೊಂಡ ಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊದಲ ಸ್ವದೇಶಾಭಿಮಾನಿ ಸಾವರ್ಕರ್. ‘ಸ್ವರಾಜ್ಯ’ ಎಂಬ ಪದವನ್ನು ಉಚ್ಚರಿಸಿದರೆ ಮಹಾಪರಾಧ ಎನ್ನುತ್ತಿದ ಕಾಲದಲ್ಲಿ ‘ಪೂರ್ಣ ಸ್ವರಾಜ್ಯವೇ ನನ್ನ ಗುರಿ’ ಎಂದು ಸಾರಿ ಹೇಳಿದ ರಾಜಕೀಯ ನಾಯಕ ಸಾವರ್ಕರ್. ಕ್ರಾಂತಿಕಾರಿ ಚಟುವಟಿಕೆ ನಡೆಸಿದ ಪರಿಣಾಮವಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್ ಸಾವರ್ಕರ್. ಪ್ರಕಟಣೆಗೆ ಮೊದಲೇ ಎರಡು ದೇಶಗಳಲ್ಲಿ ನಿಷೇಧವಾದ ಗ್ರಂಥದ ಲೇಖಕ ಸಾವರ್ಕರ್. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿ,ಪೋಲಿಸರಿಂದ ತಪ್ಪಿಸಿಕೊಂಡು ದಡಸೇರಿದ ಸಾಗರ ಸಾಹಸಿಗ ಸಾವರ್ಕರ್. ಜಗತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಕೈದಿ ಸಾವರ್ಕರ್. ಪೆನ್ನು , ಪೇಪರ್ ನ ಸಹಾಯವಿಲ್ಲದೆ ಜೈಲಿನ ಗೋಡೆಯ ಮೇಲೆ ಮೊಲೆಯ ಸಹಾಯದಿಂದ 10 ಸಾವಿರ ಸಾಲುಗಳ ಕಾವ್ಯವನ್ನು ರಚಿಸಿದ ಮಹಾಕವಿ ಸಾವರ್ಕರ್.
1883 ಮೇ 28 ರಂದು ಜನಿಸಿದ ಸಾವರ್ಕರ್ ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಣ್ಣ ಬಾಬಾರಾವ್ ಸಾವರ್ಕರ್ ಅವರ ಆಶ್ರಯದಲ್ಲಿ ಬೆಳೆದರು. ಆಟದಲ್ಲಿ ಮೈಮರೆಯುವ ವಯಸ್ಸಿನಲ್ಲಿ ಶಿವಾಜಿ, ವಾಸುದೇವ ಬಲವಂತ ಫಡ್ಕೆಯಿಂದ ಸ್ಫೂರ್ತಿ ಪಡೆದ ಸಾವರ್ಕರ್ ತಾರುಣ್ಯದಲ್ಲೇ ‘ಮಿತ್ರ ಮೇಳ’ ಗುಂಪು ಹುಟ್ಟುಹಾಕಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ಮುಂದೆ ಕಾಲೇಜಿನಲ್ಲಿ “ಅಭಿನವ ಭಾರತ” ಎಂಬ ಸಂಘಟನೆ ಸ್ಥಾಪಿಸಿ ವಿದೇಶೀ ವಸ್ತುಗಳನ್ನು ಸುಡುವ ಹೋಳಿ ಆಚರಿಸಿ ಪುಣೆಯ ಫಾರ್ಗುಸನ್ ಕಾಲೇಜನ್ನು ದೇಶಭಕ್ತರ ಕಾಲೇಜನ್ನಾಗಿ ಪರಿವರ್ತಿಸಿದರು. ಬಿ. ಎ ಪದವಿ ಮುಗಿಸಿ ಕಾನೂನು ಪದವಿ ಪಡೆಯಲು ಸಾವರ್ಕರ್ ಹಾರಿದ್ದು ಶತ್ರುವಿನ ನೆಲೆಯಾದ ಇಂಗ್ಲೆಂಡಿಗೆ. ಅದು ಸಿಂಹದ ಗುಹೆಗೆ ನರಸಿಂಹನ ಅಗಮನದಂತಿತ್ತು. ಶ್ಯಾಮ್ ಜಿ ಕೃಷ್ಣವರ್ಮ ಅವರ ಭಾರತ ಭವನದಲ್ಲಿ ಯುವಕರನ್ನು ಸಂಘಟಿಸಿದ ಸಾವರ್ಕರ್ ಇಂಗ್ಲೆಂಡಿನಲ್ಲೂ ಭಾರತದ ಸ್ವಾತಂತ್ರ್ಯದ ಜ್ಯೋತಿಯನ್ನು ಮೊಳಗಿಸಿದರು. ಸಿಪಾಯಿ ದಂಗೆ ಎಂದು ಕರೆಯುತ್ತಿದ್ದ 1857ರ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಉತ್ಕೃಷ್ಟವಾದ ಗ್ರಂಥ ಬರೆದು ನೈಜ ಇತಿಹಾಸವನ್ನು ಬೆಳಕಿಗೆ ತಂದರು. ಮದನಲಾಲ್ ಧಿಂಗ್ರಾ ಎಂಬ ಬಿಸಿ ರಕ್ತದ ಯುವಕರಲ್ಲಿ ಭಾರತದ ಬಗ್ಗೆ ಅಭಿಮಾನ ಮೂಡಿಸಿದರು. ಮುಂದೆ ಸಾವರ್ಕರ್ ಪ್ರೇರಣೆಯಿಂದ ಧಿಂಗ್ರಾ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ವಿಷ ಬೀಜ ಬಿತ್ತುತ್ತಿದ್ದ ಕರ್ಜನ್ ವಾಲಿಯಾನನ್ನು ಗುಂಡಿಕ್ಕಿ ಕೊಂದು ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಚರಿತ್ರೆ ಸೃಷ್ಟಿಸಿದ. ಕರ್ಜನ್ ವಾಲಿಯಾ ಹತ್ಯೆಯ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿದರು. ಪೊಲೀಸರು ಹಡಗಿನಲ್ಲಿ ಸಾವರ್ಕರ್ ಅವರನ್ನು ಭಾರತಕ್ಕೆ ಕರದೊಯ್ಯುವಾಗ ಆಶ್ಚರ್ಯಕರ ರೀತಿಯಲ್ಲಿ ಹಡಗಿನ ಕಿಟಕಿ ಹೊಡೆದು ಸಮುದ್ರಕ್ಕೆ ಹಾರಿ ಈಜಿಕೊಂಡು ಫ್ರಾನ್ಸ್ ಸೇರಿ ಸಾಹಸ ಮೆರೆದರು. ಫ್ರಾನ್ಸ್ ನಲ್ಲಿ ತನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದು ಸಾವರ್ಕರ್ ಭಾವಿಸಿದ್ದರು ಆದರೆ ಬ್ರಿಟಿಷರ ಲಂಚಕ್ಕೆ ಬಲಿಯಾದ ಫ್ರಾನ್ಸ್ ಪೊಲೀಸರು ಸಾವರ್ಕರ್ ರನ್ನು ಬ್ರಿಟಿಷ್ ಪೋಲೀಸರ ಸುಪರ್ದಿಗೆ ವಹಿಸಿದರು. ಬ್ರಿಟಿಷ್ ಸರ್ಕಾರ ಸಾವರ್ಕರ್ ಗೆ 2 ಜೀವಾವಧಿ ಶಿಕ್ಷೆ ವಿಧಿಸಿತು ಅಂದರೆ ಒಟ್ಟು 50 ವರ್ಷ ಕರಿನೀರಿನ ಶಿಕ್ಷೆ. ಕರೀ ನೀರಿನ ಶಿಕ್ಷೆ ಎಂದರೆ ಸಾವಿನ ಮನೆಯೇ ಎಂದರ್ಥ. ದೂರದ ಅಂಡಮಾನ್ ನಲ್ಲಿದ್ದ ಆ ಜೈಲು ನರಕವೇ ಸರಿ. ಎಷ್ಟೇ ಕಷ್ಟವಾದರೂ ಎದೆಗುಂದದ ಸಾವರ್ಕರ್ ಕೈದಿಗಳ ಹಕ್ಕುಗಳಿಗೆ ಹೋರಾಡಿದರು. ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದರು. 11 ವರ್ಷಗಳ ನಂತರ ಕರಿನೀರಿನ ಶಿಕ್ಷೆಯಿಂದ ಮುಕ್ತಿ ಹೊಂದಿ ಭಾರತದ ಸಾಮಾನ್ಯ ಜೈಲಿಗೆ ಸ್ಥಳಾಂತರವಾದರು. ಖಿಲಾಪತ್ ಚಳುವಳಿಯಿಂದ ನೊಂದು ಹಿಂದುತ್ವದ ಕುರಿತು ಕೃತಿ ರಚಿಸಿ ಹಿಂದೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದರು. ಜೈಲಿನಿಂದ ಬಿಡುಗಡೆಯಾಗಿ “ಹಿಂದೂ ಮಹಾಸಭಾ” ಎಂಬ ಪಕ್ಷ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತಾತ್ಯಾರಾವ್ ಎಂದು ಪ್ರಸಿದ್ದರಾದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಅಸಂಖ್ಯಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. 1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು.ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ ಮಿಡಿದರು. ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಇಂದು ಸಾವರ್ಕರ್ ಅವರ ಜನ್ಮ ದಿನ. ನಾಡ ಮುಕ್ತಿಯ ಯಜ್ಞದಲ್ಲಿ ಹವಿಸ್ಸಿನಂತೆ ತನ್ನನ್ನು ತಾನು ರಾಷ್ಟ್ರಕ್ಕೆ ಸಮರ್ಪಿಸಿದ ಮಹಾನ್ ವೀರ ಸಾವರ್ಕರ್ ಅವರ ಜೀವನದ ಪ್ರತಿ ಹಂತವೂ ನಮಗೆ ಸ್ಪೂರ್ತಿದಾಯಕ. ಅಂತಹ ಪ್ರೇರಣಾಮೂರ್ತಿ, ಸ್ಪೂರ್ತಿಯ ಸರದಾರ ಸಾವರ್ಕರ್ ನಮ್ಮ ಹೃದಯದಲ್ಲಿ ಸದಾ ನೆಲೆಸಲಿ.