ಅಂಕಣ

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು, ಇವಾಗಿಲ್ಲ ! 2

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1

ವ್ರಾತ್ ಆಫ್ ಗಾಡ್  / ಆಪರೇಷನ್ ಬಯೋನೆಟ್

ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ  ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಕೃತ್ಯಕ್ಕೆ ಸಹಕರಿಸಿದ್ದರು. ಇವರುಗಳನ್ನು ಸುಮ್ಮನೆ ಬಿಟ್ಟರೆ ಇನ್ನಷ್ಟು ಇಸ್ರೇಲ್ ವಿರೋಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಸಂಭವವಿತ್ತು. ಹೀಗೆ ಬೇರೆ ದೇಶಗಳಲ್ಲಿ ಇದ್ದವರನ್ನು ಮುಗಿಸಿ ಬಿಡುವುದು ಸುಲಭದ ಮಾತಲ್ಲ. ಸ್ಥಳೀಯ ಕಾನೂನು , ಮಾನವ ಹಕ್ಕು, ರಾಜಕೀಯ  ಮೊದಲಾದವು ಅಡ್ಡ ಬರುತ್ತದೆ. ಎಲ್ಲಿಯೂ ಇಸ್ರೇಲ್ ಸರ್ಕಾರದ ಹೆಸರು ಕೇಳಿ ಬಾರದಂತೆ ಅನಧಿಕೃತ ತಂಡವೊಂದನ್ನು ,ಮೋಸ್ಸಾದ್ (ಇಸ್ರೇಲ್ ಬೇಹುಗಾರಿಕಾ ಪಡೆ ) ಕಟ್ಟಿತ್ತು. ಮೋಸ್ಸಾದ್ ನ ಏಜೆಂಟ್ ಮಿಚೆಲ್ ಹರಾರಿ ಎನ್ನುವವರ ನೇತೃತ್ವದಲ್ಲಿ ಅಂದಾಜು 15 ಮಂದಿಯ ಸ್ವತಂತ್ರ ತಂಡ ತಯಾರಾಯಿತು. ಈ ತಂಡಕ್ಕೆ ಮೋಸ್ಸಾದ್ ಪ್ರಪಂಚದಾದ್ಯಂತ  ಇರುವ ತನ್ನ ಏಜೆಂಟ್ಗಳನ್ನು ಬಳಸಿ ಸಂಚಿನ ಶಂಕಿತ ರೂವಾರಿಗಳ ಮಾಹಿತಿ ಒದಗಿಸಿತ್ತು. ಅಂದಾಜು 20 ಕ್ಕೂ ಹೆಚ್ಚು ಮಂದಿ ಶಂಕಿತರಿದ್ದರು. ಅಲಿ ಹಸನ್ ಸಲೇಮಿ ಎನ್ನುವಾತ ಇದರಲ್ಲಿ ಅತಿ ಮುಖ್ಯವಾಗಿದ್ದ.  ಇವರ ಕುರಿತು ಎಲ್ಲ ಮಾಹಿತಿಗಳು ಸಿಕ್ಕ ಮೇಲೆ ಪ್ಯಾರಿಸ್ ನ್ನು ಕೇಂದ್ರವಾಗಿಸಿ ಭೂಗತ ಕಾರ್ಯಾಚರಣೆಗೆ ಇಳಿದರು.

 
ಇಸ್ರೇಲ್ ಪ್ರಧಾನಿ ಗೋಲ್ಡಾ ಮೆಯ್ರ್

 
ಮಿಚೆಲ್ ಹರಾರಿ

ಈ ತಂಡದ ಮೊದಲ ಬಲಿ ಅಬ್ದುಲ್ ವೇಲ್ ಜುವೈಟರ್ ಎನ್ನುವ ಲಿಬಿಯಾನ್ ವಿದೇಶಾಂಗ ಇಲಾಖೆಯ ದುಬಾಷಿ.  1972ರ   ಅಕ್ಟೋಬರ್ 16 ರಂದು ರಾತ್ರಿ ರೋಮ್  ನಗರದಲ್ಲಿನ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ 11 ಸುತ್ತು  ಗುಂಡುಗಳನ್ನು (ಈ ಹನ್ನೊಂದು ಗುಂಡುಗಳು ಮ್ಯೂನಿಚ್ ನಲ್ಲಿ ಬಲಿಯಾದ 11  ಅಥ್ಲೆಟ್ಗಳಿಗಳ ನೆನಪಿಗಾಗಿ ) ಹಾರಿಸಿ ಹತ್ಯೆ ಮಾಡಿದ್ದರು.  ಈತ  P. L.O ದ ರೋಮ್  ಘಟಕದ ಮುಖ್ಯಸ್ಥ ಎಂದು ಮೊಸಾದ್ ನಂಬಿತ್ತು. ಅದೇ ವರ್ಷದ ಡಿಸೆಂಬರ್ 8 ರಂದು ಫ್ರಾನ್ಸ್ನಲ್ಲಿ ಮೊಹಮ್ಮದ್ ಹಾಂಶರಿ ಎನ್ನುವ P. L.O ಫ್ರಾನ್ಸ್ ಘಟಕದ ಪ್ರತಿನಿಧಿ  ಮೇಲೆ ಧಾಳಿ ಮಾಡಲಾಯಿತು. ತನ್ನನ್ನು ಪತ್ರಕರ್ತ ಎಂದು ಪರಿಚಯಿಸಿಕೊಂಡ ಏಜೆಂಟ್ ಒಬ್ಬನೊಂದಿಗೆ ಹಾಂಶರಿ ಟೆಲಿಫೋನ್ನಲ್ಲಿ ಮಾತಾಡುತ್ತಿದ್ದಾಗ , ಮೊದಲೇ ಟೆಲಿಫೋನ್ನಲ್ಲಿ  ಅಳವಡಿಸಿದ್ದ ಬಾಂಬ್ ಅನ್ನು ಟೆಲಿಫೋನ್ ಸಿಗ್ನಲ್ ಮೂಲಕ ಸ್ಪೋಟಿಸಲಾಯಿತು. ಧಾಳಿ ನಡೆದ  ತಿಂಗಳ ನಂತರ ಹಾಂಶರಿ ಆಸ್ಪತ್ರೆಯಲ್ಲಿ ಮೃತನಾದ. 1973 ರ ಜನವರಿ 24 ರಂದು ಸೈಪ್ರಸ್ ನಲ್ಲಿ ಬೆಡ್ ಕೆಳಗೆ ರಿಮೋಟ್ ಬಾಂಬ್ ಸ್ಪೋಟಿಸಿ ಹುಸೇನ್ ಅಲ್ ಬಷೀರ್ ಎನ್ನುವ ಬ್ಲಾಕ್ ಸೆಪ್ಟೆಂಬರ್ ಸಂಘಟನೆಯ ಸೈಪ್ರಸ್ ಪ್ರತಿನಿಧಿ ಹತ್ಯೆಯಾದ. ಬಸೀಲ್ ಅಲ್ ಕುಬೈಸಿ ಹೆಸರಿನ ಕಾನೂನು ಪ್ರೊಫೆಸರ್ ನ್ನು ಪ್ಯಾರಿಸ್ ನಲ್ಲಿ ಏಪ್ರಿಲ್ 6ರಂದು 12 ಸುತ್ತು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈತ ಬ್ಲಾಕ್ ಸೆಪ್ಟೆಂಬರ್ ಸಂಘಟನೆಗೆ ಶಸ್ತ್ರಾಸ್ತ್ರ ಒದಗಿಸಿದ ಎಂದು ಮೋಸ್ಸಾದ್  ನಂಬಿದೆ.

 
ಇಸ್ರೇಲ್ ಪ್ರಧಾನಿ

ಯಾಹೂದ್ ಬರಾಕ್

ಏಪ್ರಿಲ್ 10 ರ ರಾತ್ರಿ  ಇಸ್ರೇಲ್ ಭಾರಿ ಕಾರ್ಯಾಚರಣೆಗೆ ಇಳಿಯಿತು. ಆಪರೇಷನ್ ಸ್ಪ್ರಿಂಗ್ ಆಫ್ ಯೂಥ್ ಎನ್ನಿಸಿಕೊಂಡ ಇದರಲ್ಲಿ ಲೆಬನಾನ್ ದೇಶದ  ಬೈರುತ್ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿದ್ದ ಮೊಹಮದ್ ಯೂಸಫ್ ಅಲ್ ನಜರ್, ಕಮಲ್ ಅದ್ವಾನ್ ಮತ್ತು ಕಮಲ್ ನಾಸೀರ್ ಎನ್ನುವ ಬ್ಲಾಕ್ ಸೆಪ್ಟೆಂಬರ್’ನ ದೊಡ್ಡ ತಲೆಗಳನ್ನು ಹತ್ಯೆ ಮಾಡಿದ್ದರು. ಇಸ್ರೇಲ್ ನೌಕಾಪಡೆಯ ನೆರವು ಪಡೆದುಕೊಂಡ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ಮಹಿಳೆಯರ ವೇಷದಲ್ಲಿ ಅಪಾರ್ಟ್ಮೆಂಟ್ ಪ್ರವೇಶಿಸಿತು. ಒಸಾಮಾ ಬಿನ್ ಲಾಡೆನ್ ಹತ್ಯೆಗೆ ಇದು ಹೋಲಿಕೆಯಾಗುತ್ತದೆ.  ಗುಂಡಿನ ದಾಳಿಗೆ ಇಬ್ಬರು ಲೆಬನಾನ್ ಪೊಲೀಸರು ,  ನಜರ್ ಪತ್ನಿ ಕೂಡ ಹತ್ಯೆಯಾದರು. ಮುಂದೆ ಇಸ್ರೇಲ್ ಪ್ರಧಾನಿಯಾದ ಎಹುದ್ ಬರಾಕ್ ಟಾಸ್ಕ್ ಫೋರ್ಸ್ ಸದಸ್ಯನಾಗಿ ಇದರಲ್ಲಿ ಭಾಗವಹಿಸಿದರು. ಕಾರ್ಯಾಚರಣೆ ಪೂರ್ಣಗೊಂಡ 30 ನಿಮಿಷದಲ್ಲಿ ಟಾಸ್ಕ್ ಫೋರ್ಸ್ ತಂಡ ಲೆಬನಾನ್ ಗಡಿ ದಾಟಿದ್ದರು.

 
ರೆಡ್ ಪ್ರಿನ್ಸ್ ಯಾನೆ ಅಲಿ ಹಸನ್ ಸಲೇಮಿ

ಮೊದಲಿನಿಂದಲೂ ಮೊಸಾದ್,   ಆಲಿ ಹಸನ್ ಸಲೇಮಿ ಅಥವಾ ರೆಡ್ ಪ್ರಿನ್ಸ್ ಎಂದು ಕರೆಯಲ್ಪಡುವ ವ್ಯಕ್ತಿಯ ತಲಾಶೆಯಲ್ಲಿತ್ತು. ಈತ ಮ್ಯೂನಿಚ್ ನರಮೇಧದ ಮಾಸ್ಟರ್ ಮೈಂಡ್ ಆಗಿದ್ದ. ಅಮೇರಿಕಾ ಬೇಹುಗಾರಿಕಾ ಸಂಸ್ಥೆ C.I.A ಗು ಈತ ಆಪ್ತನಾಗಿದ್ದ. ಬ್ಲಾಕ್ ಸೆಪ್ಟೆಂಬರ್ನ ಚೀಫ್ ಆಪರೇಷನ್ ಅಧಿಕಾರಿಯಾಗಿದ್ದ ಈತ ಯುರೋಪ್ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮೊಸಾದ್  ಜುಲೈ 21 ರಂದು ನಾರ್ವೆಯಾ ಲಿಲ್ಲಿ ಹ್ಯಾಮೆರ್ನಲ್ಲಿ ರಾತ್ರಿ ಕಾರ್’ನಲ್ಲಿ ಹೋಗುತ್ತಿದ್ದಾಗ ಈತನೆಂದು ದಂಪತಿಗಳ ಮೇಲೆ ಧಾಳಿ ಮಾಡಿತು. ದುರದೃಷ್ಟವಶಾತ್ ಕಾರ್’ನಲ್ಲಿ ಗರ್ಭಿಣಿ ಪತ್ನಿಯೊಂದಿಗೆ ಹೋಗುತ್ತಿದ್ದ ಆ ವ್ಯಕ್ತಿ ಅಹ್ಮದ್ ಬೌಚಿಕೀ ಎನ್ನುವ ಅಮಾಯಕ ಬರಹಗಾರನಾಗಿದ್ದ. ಅಮಾಯಕನ ಹತ್ಯೆ ನಂತರ ನಾರ್ವೆ ಪೊಲೀಸರು ಇಬ್ಬರು ಮಹಿಳೆಯರ ಸಹಿತ 6 ಮಂದಿ ಮೊಸಾದ್ ಏಜೆಂಟರನ್ನು ಬಂಧಿಸಿದ್ದರು. ತಂಡದ ಮುಖ್ಯಸ್ಥ ಮಿಚೆಲ್ ಹರಾರಿ ಪರಾರಿಯಾದರು. ಅಲ್ಲಿಗೆ ಈ ಸರಣಿ ಹತ್ಯೆ ಬೆಳಕಿಗೆ ಬಂತು. ಆದರೆ ಅಧಿಕೃತವಾಗಿ  ಇಸ್ರೇಲ್ ಸರ್ಕಾರ ಎಂದು ಕೂಡ  ತಾನು ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆಯನ್ನು ಒಪ್ಪಿಕೊಳ್ಳಲಿಲ್ಲ. ಮೊಸಾದ್  1974ರ ಜನವರಿಯಲ್ಲಿ ಸಲೇಮಿಗಾಗಿ ಮತ್ತೊಮ್ಮೆ ವಿಫಲ ಯತ್ನವನ್ನು  ಸ್ವಿಜರ್ಲೆಂಡ್’ನ ಚಾರ್ಚ್ವೊಂದರಲ್ಲಿ ನಡೆಸಿತ್ತು. ಈ ಸಲೇಮಿ ಹತ್ಯಾ ಪ್ರಯತ್ನದ ನಂತರ ಪ್ಯಾಲೆಸ್ತೀನ್ ನಾಯಕ ಯಾಸಿರ್ ಅರಾಫತ್ನೊಂದಿಗೆ ವಿಶ್ವಸಂಸ್ಥೆಯ ಸಭೆಯಲ್ಲೊಮ್ಮೆ ಕಾಣಿಸಿಕೊಂಡಿದ್ದ ಎಂದರೆ ಇಸ್ರೇಲ್’ಗೆ ಈತನ ಬಲಿ ಏಕೆ ಇಷ್ಟು ಮುಖ್ಯವಾಗಿತ್ತು ಎಂದು ನಿಮಗೆ ಅಂದಾಜಾಗಬಹುದು. 1978 ರಲ್ಲಿ ಈತ ಲೆಬನಾನ್ ದೇಶದ  ಜಾರ್ಜಿನ ರಿಜ್ಕ್ ಎಂಬ ಮಿಸ್ ಯೂನಿವರ್ಸ್ ಒಬ್ಬಳನ್ನು ಮದುವೆಯಾಗಿ ಬೈರುತ್’ನಲ್ಲಿ ವಾಸಿಸತೊಡಗಿದ. 5 ವಿಫಲ ಹತ್ಯಾಪ್ರಯತ್ನದ ನಂತರ  ಕೊನೆಗೆ 22 ಜನವರಿ 1979 ರಂದು ಕಾರ್ ಬಾಂಬ್ ಸ್ಪೋಟದಲ್ಲಿ ಈತನನ್ನು ಹತ್ಯೆ ಮಾಡಲಾಯಿತು. ಸಮೀಪದಲ್ಲಿದ್ದ 4 ಜನ ಅಂಗರಕ್ಷಕರು ಬಲಿಯಾದರು  ಸಕಲ ಮಿಲಿಟರಿ ಗೌರವದೊಂದಿಗೆ ಬೈರುತ್ ನಲ್ಲಿ ನಡೆದ  ಅಂತ್ಯಕ್ರಿಯೆಗೆ 20,000 ಜನ ಭಾಗವಹಿಸಿದ್ದರು.

ಜರ್ಮನ್ ಜೈಲಿಂದ ಬಿಡುಗಡೆಯಾದ ಜಮಾಲ್ ಅಲ್ ಘಶಿ ,ಮೊಹಮ್ಮದ್ ಸಫಾದಿ ಮತ್ತು ಅದ್ನಾನ್ ಅಲ್ ಘಶಿಗಾಗಿ ಮೊಸಾದ್ ಕೊನೆಯವರೆಗೂ ಹುಡುಕಾಟ ನಡೆಸಿತ್ತು. ಇದರಲ್ಲಿ ಜಮಾಲ್ ಅಲ್ ಘಶಿ 1999ರಲ್ಲಿ “ಒನ್ ಡೇ ಇನ್ ಸೆಪ್ಟೆಂಬರ್” ಎನ್ನುವ ಡಾಕ್ಯುಮೆಂಟರಿಗೆ ಸಂದರ್ಶನವನ್ನು ನೀಡಿದ್ದ.  2010ರಲ್ಲಿ ಮೃತನಾದ ಅಬು ದಾವೋದ್ ಎನ್ನುವ ಮುಖ್ಯ ಸಂಚುಕೋರನಿಗೆ ಕೊನೆಯವರೆಗೆ ಮೊಸಾದ್ ಹುಡುಕಾಟ ನಡೆಸಿತ್ತು.

ಈ ಭೂಗತ ತಂಡ ಇನ್ನು ಹಲವಾರು ವ್ಯಕ್ತಿಗಳನ್ನು ರಹಸ್ಯ ಹತ್ಯೆ ಮಾಡಿದೆ ಎಂದು ನಂಬಲಾಗಿದೆ ಹಾಗು ಉಗ್ರ ಅಬು ನಿದಾಲ್’ನ ಸಂಘಟನೆಯಿಂದ ತನ್ನ ಕೆಲವು ಏಜೆಂಟರನ್ನು ಕಳೆದುಕೊಂಡಿದೆ. ಈ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ೨೦೦೫ ರಲ್ಲಿ ಮ್ಯೂನಿಚ್ ಸಿನಿಮಾ ಬಿಡುಗಡೆಯಾಯಿತು. ಇಲ್ಲಿ ಬೇಟೆ ಮತ್ತು ಹಂತಕನ ಆಟ ಮಾತ್ರ, ಇಲ್ಲಿ ಯಾವ ನಂಬಿಕೆಯು ಕೆಲಸಕ್ಕೆ ಬರುವುದಿಲ್ಲ. ತನ್ನ ಸಹಚರರು ಹತ್ಯೆಗೀಡಾದಾಗ ಮುಂದಿನ ಬಲಿ ನಾನಾಗಿರಬಹುದೆ? ಎಂದು ಭಯಗೊಂಡು ಬದುಕಬೇಕಾದ ಅನಿವಾರ್ಯತೆ ಹಲವು ಬ್ಲಾಕ್ ಸೆಪ್ಟೆಂಬರ್ ತಂಡದ ಸದಸ್ಯರಿಗಿತ್ತು. ಇಂತಹ ವಾತಾವರಣವನ್ನು ನಿರ್ಮಿಸಿದ ಕಾರಣಕ್ಕೆ ಇಸ್ರೇಲ್ ಇಂದಿಗೂ ಉಳಿದಿದೆ. ತನ್ನ ಸಾಹಸ ಕತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತ.

-Tharanatha Sona

ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!