ನಾನು ‘ಆಸ್ತಿ’. ನನ್ನಲ್ಲಿ ಹೇಳುವುದಕ್ಕೆ ಸಾಕಷ್ಟು ಕಥೆಗಳಿವೆ. ಅದರಲ್ಲಿ ಒಂದನ್ನಾದರೂ ಹೇಳಿ ಒಂದಷ್ಟು ಹಗುರಾಗುವ ಇರಾದೆ ನನ್ನದು. ‘ಆಸ್ತಿ’ ಎಂದು ಉಚ್ಚರಿಸುವ ಗಡಿಬಿಡಿಯಲ್ಲಿ ‘ಅಸ್ಥಿ’ ಎಂದು ಉಚ್ಚರಿಸಿ ನಾಲಗೆ ಕಚ್ಚಿಕೊಳ್ಳುವವರಿಗೆ ಏನೂ ಹೇಳಲಾರೆ. ಅಸ್ಥಿ ಆಸ್ತಿ ಇದರಲ್ಲಿ ವ್ಯಾಕರಣವ್ಯತ್ಯಾಸ ಗುರುತಿಸುವ ಕಾರ್ಯವನ್ನು ಕನ್ನಡವ್ಯಾಕರಣ ಪಂಡಿತರಿಗೆ ಬಿಟ್ಟುಬಿಡುತ್ತೇನೆ. ನಾನು ಹೇಳುವುದು ಬೇರೆಯೇ ಇದೆ. ಆಸ್ತಿಗೂ ಅಸ್ಥಿಗೂ ಹೃದಯಹೃದ್ಗತ ಸಂಬಂಧವಿದೆ. ಜನರು ಆಸ್ತಿಯನ್ನು ತಮ್ಮ ಮಕ್ಕಳು, ಮೊಮ್ಮಕ್ಕಳು, ಸಾಧ್ಯವಾದರೆ ಮರಿಮಕ್ಕಳು, ತಲೆಮಾರಿನವರಿಗಾಗಿ ಮಾಡುತ್ತಾರೆ. ಅಸ್ಥಿ ಗಟ್ಟಿ ಇರುವಾಗಲೇ ಆಸ್ತಿ ಮಾಡಿಕೊಂಡುಬಿಡಬೇಕು; ಇದು ಸಾಮಾನ್ಯರ ಹಂಬಲ. ಅಸ್ಥಿಯ ನಂತರ ಆಸ್ತಿ ನಮಗಂತೂ ದೊರಕುವುದಿಲ್ಲ. ಸ್ವಯಾರ್ಜಿತ ಆಸ್ತಿಯಾದರೆ ‘ತನ್ನ ನಂತರ’ ಎಂದು ವಿಲ್ ಬರೆದು, ಆಸ್ತಿ ಮಾಡಿದವನು ಎಂದು ಅಸ್ಥಿಯಾಗುವನೋ ಎಂದು ಎಲ್ಲರೂ ಕಾಯುವಂತಾಗಿ, ಅಸ್ಥಿ ಆದ ಬಳಿಕ ಆಸ್ತಿಯ ಬಗ್ಗೆ ಜಿಜ್ಞಾಸೆ ಶುರುವಾಗುತ್ತದೆ. ಪಿತ್ರಾರ್ಜಿತ ಆಸ್ತಿ ಆದರೆ ನಮ್ಮ ‘ಅಸ್ಥಿ’ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆಗ ‘ಈತ ಎಲ್ಲಿ ಹಾಸಿಗೆಗೆ ಅಂಟಿಹಿಡಿದು ನಮಗೆಲ್ಲ ತೊಂದರೆ ಕೊಡುತ್ತಾನೋ’ ಎನ್ನುವ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಾರೆ. ಇದು ಆಸ್ತಿ, ಅಸ್ಥಿಯ ನಡುವಿನ ಹೃದಯಹೃದ್ಗತ ಸಂಬಂಧ ಎನ್ನುವುದು ನನ್ನ ಅನಿಸಿಕೆ.
ನಿಮಗೆ ಪ್ರಾರಂಭದಲ್ಲೇ ಹೇಳಿದೆ: ನಾನು ನನ್ನ ಕಥಾಸಂಗ್ರಹದಿಂದ ತೆಗೆದ ಒಂದು ಕತೆ ಹೇಳುವೆ ಎಂದು.
ರಾಮಪ್ಪ ನನ್ನ ಒಡೆಯನ ಹೆಸರು. ಆತನಿಗೆ ಮದುವೆಯಾಗಿ ಇಬ್ಬರು ಗಂಡುಮಕ್ಕಳಿದ್ದರು. ಈತ ಚಿಕ್ಕ ಕೆಲಸದಲ್ಲಿದ್ದ. ಬಳಿಕ ಒಂದು ಕಾಂಟ್ರ್ಯಾಕ್ಟ್ ಕಂಪೆನಿ ಸ್ಥಾಪಿಸಿದ. ಮೊದಮೊದಲು ಸಣ್ಣಪುಟ್ಟ ಕಾಂಟ್ರ್ಯಾಕ್ಟ್’ನಿಂದ ಬಿಸಿನೆಸ್ ಶುರು ಮಾಡಿದವ ಪ್ರಾಮಾಣಿಕವಾಗಿಯೇ ಇದ್ದ. ಮನೆ ಚೆನ್ನಾಗಿ ನಡೆಯುತ್ತಿತ್ತು. ಅವನಿಗೆ ತನ್ನದೆನ್ನುವ ಚಿಕ್ಕಾಸ್ತಿಯೂ ಇರಲಿಲ್ಲ. ಹಾಗಾಗಿ ಬಂದದ್ದರಲ್ಲೆ ಒಂದು ಪುಟ್ಟ ಮನೆ, ಕಾರು ಖರೀದಿಸಿದ. ಮಕ್ಕಳಿಗೆ ಒಳ್ಳೆ ಸ್ಕೂಲು ಸೇರಿಸಿದ. ಅಲ್ಲಿಗೆ ನೆಮ್ಮದಿಯ ಬದುಕು ಉಳಿದಿತ್ತು. ದಿನಕಳೆದಂತೆ ನಾನು, ಅರ್ಥಾತ್ ‘ಆಸ್ತಿ’ ಕಣ್ಣಿಗೆ ಬಿದ್ದೆ. ದೊಡ್ಡದೊಡ್ಡ ರಸ್ತೆ, ಬಿಲ್ಡಿಂಗ್ ಕಾಂಟ್ರ್ಯಾಕ್ಟ್ ಹಿಡಿದ. ಪ್ರಾರಂಭದಲ್ಲಿ ಸ್ವಲ್ಪಸ್ವಲ್ಪ ಅಪರಾತಪರಾ ಮಾಡಿದ. ಸ್ವಲ್ಪಸ್ವಲ್ಪ ಕಳಪೆ ಸಾಮಗ್ರಿ ಬೆರೆಸಿದ. ಸ್ವಲ್ಪಸ್ವಲ್ಪ ದುಡ್ಡು ಮಾತ್ರ ನುಂಗಿದ. ಇನ್ನೊಂದು ಮನೆ ಕೊಂಡುಕೊಂಡ. ತನ್ನದೇ ಓಡಾಟಕ್ಕೆ ಇನ್ನೊವಾ ಕಾರು ಕೊಂಡ; ಪ್ರತಿಷ್ಟೆಗೆ ಅದೇ ಒಳ್ಳೆಯದು. ‘ಒಮ್ಮೆ ಸುಳ್ಳು ಹೇಳುವುದು ಅಭ್ಯಾಸವಾದರೆ ಬಳಿಕ ಅದು ಸಲೀಸಾಗಿಬಿಡುತ್ತದೆ’ ಈಗ ರಾಮಪ್ಪನಿಗೆ ಅಪರಾತಪರಾ ಅಭ್ಯಾಸವಾಯ್ತು. ನನ್ನ ಮೇಲಿನ ವ್ಯಾಮೋಹ ಅತಿಯಾಯ್ತು. ಹಿಡಿದ ಕಾಂಟ್ರ್ಯಾಕ್ಟ್’ಗಳಲ್ಲೆಲ್ಲ ಕಳಪೆ ಸಾಮಗ್ರಿ ತುಂಬಿದ. ಬೇಕಾದವರಿಗೆಲ್ಲ ಹಣ ಪೀಕಿದ; ಅವರೂ ಆಸ್ತಿವಂತರಾದರು. ಕಪ್ಪು ಹಣದ ಭಾರ ತಾಳಲಾರದೆ, ಆಸ್ತಿ ಖರೀದಿ ಮೇಲೆ ಖರೀದಿ ಮಾಡಿದ. ರಾಮಪ್ಪನ ಅಸ್ಥಿ ಗಟ್ಟಿಯಾಗೇ ಇತ್ತು; ಆತನ ಹಿಂದಿನ ಜನ್ಮ ಪುಣ್ಯ ಸಹ. ಬಿಸಿನೆಸ್ಮನ್ ಎಂದು ಹೆಸರು ಗಳಿಸಿದ. ಊರಿನ ಕಾರ್ಯಕ್ರಮಗಳಲ್ಲಿ ಇವನಿಗೆ ವಿವಿಐಪಿ ಕುರ್ಚಿ ಕಾದಿರುತ್ತಿತ್ತು. ಪೆಟ್ರೋಲ್ ಬಂಕ್, ರಿಯಲ್ ಎಸ್ಟೇಟ್, ಫ್ಯಾಕ್ಟರಿ ಏನುಂಟು, ಏನಿಲ್ಲ.
‘ಬೆಳ್ಳಿ ಇದ್ದವನಿಗೂ ಕೊಳ್ಳಿ ಭಯ ತಪ್ಪಲಿಲ್ಲವಂತೆ’ ಅಂತೂ ಒಂದು ದಿನ ರಾಮಪ್ಪನ ಅಸ್ಥಿಯೂ ಮಣ್ಣು ನೀರು ಸೇರಿತು. ಎಲ್ಲರೂ ನಿಜವೋ ಸುಳ್ಳೊ ‘ಕಣ್ಣೀರು’ ಸುರಿಸಿದರು. ಆತನ ಅಸ್ಥಿ ಮಣ್ಣು ನೀರು ಪಾಲಾಗುವದರ ಜೊತೆಗೆ ಆತ ಪೇರಿಸಿದ ಆಸ್ತಿ ಮೇಲೆ ಜಗಳವೂ ಶುರುವಾಯ್ತು. ಆಸ್ತಿ ವಿವಾದ ಕೋರ್ಟಿನ ಮೆಟ್ಟಿಲೇರಿತು. ವಿವಾದ ಮುಗಿಯುವ ಹೊತ್ತಿಗೆ ಎರಡೂ ಕಡೆಯವರ ವಕೀಲರು ತಮ್ಮ ಬಾಡಿಗೆ ಮನೆ ಬಿಟ್ಟು ದೊಡ್ಡ ಬಂಗಲೆಗೆ ಬಂದಿದ್ದರು. ಇನ್ನೆರಡು ಪ್ಲಾಟ್ ಖರೀದಿಸಿ ಬಾಡಿಗೆಗೆ ಕೊಟ್ಟಿದ್ದರು. ರಾಮಪ್ಪನ ಮಕ್ಕಳು ತಮ್ಮ ಬಂಗಲೆ ಬಿಟ್ಟು ಎರಡು ರೂಮಿನ ಪ್ಲಾಟಿಗೆ ಸಾಮಾನು ಸಾಗಿಸಿದರು. ‘ಸತ್ತೋನು ಸತ್ತ, ಇದ್ದೋರ್ ಬಾಯಿಗೆ ಮಣ್ಣು’ ಎನ್ನುವಂತಾಯ್ತು ಮಕ್ಕಳ ಕಥೆ. ಒಡೆಯನನ್ನು ಕಳೆದುಕೊಂಡು, ಬೇರೆಯವರ ಪಾಲಾದ ನನ್ನ ಕಣ್ಣೀರು ಯಾರಿಗೂ ಕಾಣಿಸಲೇ ಇಲ್ಲ.
ರಾಮಪ್ಪ ಜೀವನಪೂರ್ತಿ ನನ್ನನ್ನು ಪ್ರೀತಿಸಿದ; ವ್ಯಾಮೋಹಿಸಿದ; ನನ್ನನ್ನು ಕೂಡಿಡಲು ಹೆಣಗಿದ. ಆ ವೇಳೆಗೆ ಎಷ್ಟು ಗಳಿಸಿದನೋ ಅಷ್ಟೇ ಕಳೆದುಕೊಂಡ. ‘ಒಂದಷ್ಟು ಪಡೆಯುವುದಕ್ಕೆ, ಒಂದಷ್ಟು ಕಳೆದುಕೊಳ್ಳಬೇಕು’ ನಿಜ. ಪಡೆಯುವುದು, ಕಳೆದುಕೊಳ್ಳುವುದು ಇದರ ನಡುವೆ ಒಳಿತು-ಕೆಡುಕಿನ ಜಿಜ್ಞಾಸೆ ರಾಮಪ್ಪನಿಗೆ ಕಳೆದುಹೋಯಿತೇ? ಈ ಪ್ರಶ್ನೆ ಆಗಿನಿಂದ ನನ್ನನ್ನು ಕಾಡುತ್ತಲೇ ಇದೆ.
ಎಷ್ಟು ಕಥೆ ಹೇಳುವುದಿತ್ತು? ಒಂದು ಕಥೆ ಹೇಳಿಯೇ ಇಷ್ಟು ಹಗುರಾದೆ; ಎಲ್ಲ ಕಥೆ ಹೇಳಿದರೆ ಇನ್ನೆಷ್ಟು ಹಗುರಾಗಬಹುದು? ಎಲ್ಲ ಹೇಳಿದರೆ ‘ಆಸ್ತಿ’ ಎನ್ನುವ ನನ್ನ ಇರುವಿಕೆಯೇ ಕಳೆದುಹೋಗಬಹುದೆನ್ನುವ ಭಯ ಅಷ್ಟೆ.