Featured ಅಂಕಣ

ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಟಿವಿ !

ನಿನ್ನೆ ಸೂಪರ್ ಶನಿವಾರ, ಯಾಕೆ ಅಂದರೆ ನ್ಯೂಸ್ ಎನ್ನುವುದು ಭಾರತದಲ್ಲಿ ಪುನಃಸ್ಥಾಪನೆಯಾಯಿತು. ಅಂದರೆ, ‘ಅರ್ನಬ್ ಗೋಸಾಮಿ ಇಸ್ ಬ್ಯಾಕ್’! ನಾನಂತೂ ನ್ಯೂಸ್ ನೋಡುವುದನ್ನು ಬಿಟ್ಟು ಆರು ತಿಂಗಳಾಗಿತ್ತು. ನನ್ನೊಬ್ಬನ ವಿಷಯವಲ್ಲ , ದೇಶದ ಜನರಿಗೆ ಕಳೆದ ಆರು ತಿಂಗಳಿಂದ  ಒಂಬತ್ತು ಗಂಟೆ ಆಗುತ್ತಿದ್ದಂತೆ ‘ಏನೋ ಮಿಸ್ಸಿಂಗ್’ ಅನಿಸ್ತುತ್ತಾ ಇತ್ತು. ಇವತ್ತು ಪುನಃ ನ್ಯೂಸ್ ಚ್ಯಾನಲ್‌ ನೋಡುವ ಹಾಗೆ ಮಾಡಿದ್ದು ಅರ್ನಬ್ ಗೋಸ್ವಾಮಿ. ಮೊದಲನೆಯ ದಿನವೇ ಲಾಲು ಪ್ರಸಾದ್ ಯಾದವ್ ಹಾಗೂ ಜೈಲಿನಲ್ಲಿರುವ ಡಾನ್ ಒಬ್ಬನ ಜೊತೆ ನಡೆದ ಸಂಭಾಷಣೆಯ ಸಿಡಿಯನ್ನು ಬಿಡುಗಡೆ ಮಾಡಿ, ಎಸೆದ ಮೊದಲ ಚೆಂಡಿಗೇ ಸಿಕ್ಸರ್ ಹೊಡೆದಿದ್ದಾರೆ. ದಿನವಿಡೀ ದೇಶದಾದ್ಯಂತ ಅದೇ ವಿಷಯ ಚರ್ಚೆಯಲ್ಲಿತ್ತು.

ಹೆಂಡತಿಯೊಡನೆ ಜಗಳಮಾಡಿ ರಿಮೋಟ್ ಕಸಿದುಕೊಂಡು ಒಂಬತ್ತು ಗಂಟೆಗೆ ಸರಿಯಾಗಿ ಟೈಮ್ಸ್ ನೌ ಚಾನೆಲ್ ಹಚ್ಚಿ, ಟಿವಿಯ ಮುಂದೆ ಕೂರುವ ಗಂಡಸರಿಗೆ ಕಳೆದ ನವೆಂಬರ್ ನಿಂದ ‘ಸಾಸ್-ಬಹು’ ಧಾರವಾಹಿ ನೋಡುವ ಪರಿಸ್ಥಿತಿ ಆಗಿತ್ತು. ಅರ್ನಬ್,‌ ಟೈಮ್ಸ್ ನೌ ನಲ್ಲಿ ಆ್ಯಂಕರಿಂಗ್ ಮಾಡುತ್ತಿದ್ದಾಗ ಮುದುಕರಿಂದ ಹಿಡಿದು ಯುವಕರವರೆಗೆ ಅವರದು ‘ನ್ಯೂಸ್ ಅವರ್’ ಒಂದು ಫೇವರಿಟ್ ಪ್ರೊಗ್ರಾಮ್. ಅರ್ನಬ್ ಗೋಸ್ವಾಮಿಗೆ ಎಷ್ಟೇ ಬೈಯಲಿ, ಅವರ ಮೇಲೆ ಎಷ್ಟೇ ಸಿಟ್ಟುಬರಲಿ, ಅಲ್ಲಿ ಅವರು ಸ್ಟುಡಿಯೋದಲ್ಲಿ ಕೂತು ಎಷ್ಟೇ ಚಿರಾಡಲಿ, ಇಲ್ಲಿ ಜನ ಎಷ್ಟೇ ಭಾವುಕರಾಗಿ ರಕ್ತದೊತ್ತಡ ಹೆಚ್ಚಿಸಿಕೊಳ್ಳಲಿ ರಾತ್ರಿ ಎಲ್ಲವನ್ನೂ ಮರೆತು ಮರುದಿನ ಮತ್ತೆ ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಟಿವಿ ಮುಂದೆ ಬಂದು ನ್ಯೂಸ್ ಅವರ್ ಶೋ ನೋಡವುದನ್ನು ಯಾರೂ ನಿಲ್ಲಿಸುತ್ತಿರಲಿಲ್ಲ. ‘ನೇಷನ್ ವಾಂಟ್ಸ್ ಟು ನೊ’ ಎನ್ನುವ ಪದ ಎಲ್ಲರ ಬಾಯಿಯಲ್ಲಿ ಅಚ್ಚಾಗಿ ಕೂತುಹೋಗಿತ್ತು.  ಫೇಸ್‍ಬುಕ್ ನಲ್ಲಿ ಅವರ ಮೇಲೆ ಜೋಕ್ಸ , ಟಿವಿಯಲ್ಲಿ ಟೆಲಿಕಾಸ್ಟ್ ಮಾಡಿದ ಕ್ಲಿಪ್ಸ್ ಗಳು ವಾಟ್ಸಾಪ್ ನಲ್ಲಿ, ಟ್ವಿಟರ್ ನಲ್ಲಿ ಅವರದ್ದೇ ಟ್ರೆಂಡ್ ಹೀಗೆ ಒಂದು ನ್ಯೂಸ್ ಆ್ಯಂಕರ್ ಆಗಿ ಕ್ರಾಂತಿಯನ್ನೇ ಅರ್ನಬ್ ಗೋಸ್ವಾಮಿ ಮಾಡಿದ್ದರು. ಆರು ತಿಂಗಳದ ನಂತರ ಬಂದಿದ್ದಾರೆ ಆದರೂ ಟ್ವಿಟರ್ ಟ್ರೆಂಡಿಂಗ್ ನಲ್ಲಿ ಮೊದಲ ಮೂರು ಅರ್ನಬ್ ಹಾಗೂ ಅವರ ರಿಪಬ್ಲಿಕ್ ಟಿವಿಗೆ ಸಂಬಂಧಿಸಿದ್ದು!

 

ಅರ್ನಬ್ ಗೋಸ್ವಾಮಿಯವರ ಹಿನ್ನೆಲೆ ಏನು?

ಅವರ ಹಿನ್ನಲೆಯನ್ನು ಹುಡುಕುತ್ತಾ ಹೋದಾಗ ಗೊತ್ತಾದ ವಿಷಯ ಅಂದರೆ ಅವರು ರಾಜಕೀಯ ಮನೆತನಕ್ಕೆ ಸೇರಿದವರು. ಅಸ್ಸಾಂನಲ್ಲಿ ಹುಟ್ಟಿ, ಬೇರೆ ಬೇರೆ ರಾಜ್ಯಗಳಲ್ಲಿ ಬೆಳೆದವರಾದೂ ಅವರು ಮೂಲತಃ ಬಂಗಾಳಿ. ಅವರ ತಂದೆ ಕರ್ನಲ್ ಮನೋರಂಜ್ ಗೋಸ್ವಾಮಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಜೆಪಿಯನ್ನು ಸೇರಿದರು. ಅವರ ತಾಯಿಯ ಅಣ್ಣ ಬಿಜೆಪಿ MLA ಆಗಿದ್ದರು. ಅರ್ನಬ್ ತಂದೆಯ ಕಡೆಯ ಅಜ್ಜ ಕಾಂಗ್ರೆಸ್ ನಾಯಕರು, ಹಾಗೆಯೇ ಪ್ರಖ್ಯಾತ ವಕೀಲರು. ತಾಯಿಯ ಕಡೆಯ ಅಜ್ಜ ಕಮ್ಮ್ಯುನಿಷ್ಟ್ ಪಾರ್ಟಿಗೆ ಸೇರಿದವರು, ಹಲವಾರು ವರ್ಷಗಳ ಕಾಲ ಅಸ್ಸಾಂ ರಾಜ್ಯದ ವಿಧಾನಸಭೆಯಲ್ಲಿ ವಿರೋಧ‌ಪಕ್ಷದ ನಾಯಕರಾಗಿ ದುಡಿದವರು. ಪ್ರಖ್ಯಾತ ಲೇಖಕರು ಕೂಡ. ಇಷ್ಟೆಲ್ಲಾ ರಾಜಕೀಯ ಹಿನ್ನೆಲೆ ಇರುವಾಗ, ಅವರು ರಾಜಕೀಯ ಯಾಕೆ ಪ್ರವೇಶಿಸಿಲ್ಲ? ಒಂದು ಕಾರ್ಯಕ್ರಮದಲ್ಲಿ ಅರ್ನಬ್ ಅತಿಥಿಯಾಗಿ ಬಂದಾಗ, ಆ ಸಂದರ್ಶಕರು “ನೀವು ರಾಜಕೀಯಕ್ಕೆ ಯಾಕೆ ಬರಬಾರದು, ಮೀಡಿಯಾದಲ್ಲೇ ಮುಂದುವರಿದು ಏನು ಸಾಧನೆ ಮಾಡುತ್ತೀರಾ” ಎಂದು ಒಂದು ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಅವರು,‌”ತನ್ನ ಮನೆಯವರೆಲ್ಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದವರು, ನನಗೆ ರಾಜಕೀಯಕ್ಕೆ ಬರುವುದು ಕಷ್ಟವಲ್ಲ. ಆದರೆ ನನಗೆ ರಾಜಕೀಯಕ್ಕೆ ಬರುವ ಮನಸಿಲ್ಲ. ನಾನೇದಾರೂ ಸಾಧನೆ ಮಾಡುವುದಿದ್ದರೆ ಅದನ್ನು ಪತ್ರಕರ್ತನಾಗಿಯೇ ಮಾಡುತ್ತೇನೆ “‌ಎಂದು ಉತ್ತರಿಸಿದರು.

 

ದಿ ಟೆಲಿಗ್ರಾಫ್, NDTV, ಟೈಮ್ಸ್ ನೌ… ರಿಪಬ್ಲಿಕ್ ತನಕ!

ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಬಿ.ಎ. ಮಾಡಿ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಭಾರತಕ್ಕೆ ಬಂದು ಒಬ್ಬ ಸಾಮಾನ್ಯ ಪತ್ರಕರ್ತನಾಗಿ ಕೆಲಸ ಶುರುಮಾಡಿದರು. ಕಲ್ಕತ್ತಾದಿಂದ ಪುನಃ ದೆಹಲಿಗೆ ಬರುವ ಮುನ್ನ ಅಂದರೆ ವೃತ್ತಿ ಜೀವನದ ಪ್ರಾರಂಭದಲ್ಲಿ ಸುಮಾರು ಒಂದು ವರ್ಷ ‘ದಿ ಟೆಲಿಗ್ರಾಫ್’ ಎನ್ನುವ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದರು. ನಂತರ ದೆಹಲಿಗೆ ಬಂದು 1995ರಲ್ಲಿ NDTV ಸೇರಿಕೊಂಡರು. ಅಲ್ಲಿ ಹಲವಾರು ವರ್ಷ ಕೆಲಸ ಮಾಡಿದ ನಂತರ ಇನ್ನು ಪತ್ರಿಕೋದ್ಯಮ ಬೇಡವೇ ಬೇಡ ಎಂದು ಬೇಸತ್ತು ಮುಂಬಯಿಗೆ ಹೋಗಿದ್ದರು. ನಂತರ Bennett, Coleman & Co. Ltd ಒತ್ತಾಯದ ಮೇರೆಗೆ ಒಂದು ಸಣ್ಣ ಸ್ಟುಡಿಯೋದಲ್ಲಿ, ಸಣ್ಣ ತಂಡದೊಂದಿಗೆ ‘ಟೈಮ್ಸ್ ನೌ’ ಶುರುಮಾಡಿದರು. ಅವರು ಟೈಮ್ಸ್ ನೌ ಬಿಡುವ ಸಮಯದಲ್ಲಿ ಅದು ಸತತ ಮೂರು ವರ್ಷದಿಂದ ನಂ. ೧ ಇಂಗ್ಲೀಷ್ ಚ್ಯಾನಲ್ ಆಗಿತ್ತು.

 

NDTV ಕಾಲದಿಂದ ಹಿಡಿದು, ಟೈಮ್ಸ್‌ ನೌ ತನಕ ಒಬ್ಬ ಆ್ಯಂಕರ್ ನಿರ್ವಹಿಸುವ ಅತೀ ಧೀರ್ಘಕಾಲದ ಕಾರ್ಯಕ್ರಮ ಅಂದರೆ ಅದು ಅರ್ನಬ್ ಗೋಸ್ವಾಮಿಯ ‘ನ್ಯೂಸ್ ಅವರ್’. ನಿಜ ಹೇಳಬೇಕು ಅಂದರೆ ಅವರು ರಾಜೀನಾಮೆ ಕೊಟ್ಟಾಗಿನಿಂದ ರಾತ್ರಿ ಒಂಬತ್ತು ಗಂಟೆಯಿಂದ ಹನ್ನೊಂದು ಗಂಟೆಯ ತನಕ ಮನೆಯ ವಾತಾವರಣ ಬೀಕೋ ಅನ್ನುತ್ತಿತ್ತು.  ಕಾಶ್ಮೀರದ ವಿಷಯವಾಗಲಿ, ಬೀಫ್ ಬ್ಯಾನ್ ವಿಷಯವಾಗಲಿ, ಜಿ- ಸೀರಿಸ್ ( 2G, 3G, CoalG, CWG, etc) ಹಗರಣಗಳನ್ನು ಬೆಳಕಿಗೆ ತರುವುದಾಗಲೀ, ಸೈನಿಕರ ಪರವಾಗಿ ವಾದ ವಿವಾದಗಳಾಗಲಿ, ಜೆಎನ್ಯು ಕ್ಯಾಂಪಸ್ ದೇಶದ್ರೋಹಿಗಳ ಮುಖವಾಡ ಬಿಚ್ಚಿಹಾಕುವುದಿರಲಿ ಅರ್ನಬ್ ದೇಶದ ಎಲ್ಲ ಬುದ್ಧಿಜೀವಿಗಳನ್ನು, ‌ಕೆಲವು ರಾಜಕಾರಣಿಗಳನ್ನು ಎದುರು ಹಾಕಿಕೊಂಡರು. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಜನರ ಮನಸ್ಸನ್ನು ಗೆದ್ದರು. ತಮಿಳುನಾಡಿನಲ್ಲಿ ರಜನಿಕಾಂತ್ ಸಿನಿಮಾ ಬರುವುದಕ್ಕೆ ಜನ ಕಾಯುವ ಹಾಗೆ, ಕರ್ನಾಟಕದಲ್ಲಿ ಬೈರಪ್ಪನವರ ಕಾದಂಬರಿ ಬರುವುದನ್ನ ಓದುಗರು ಕಾಯುವ ಹಾಗೆ, ಒಂದು ಕಾಲದಲ್ಲಿ ಇಡೀ ಮಹಾರಾಷ್ಟ್ರ ಬೆಳಿಗ್ಗೆ ಆದೊಡನೆ ಠಾಕ್ರೆಯವರ ಸಾಮನಾ ದಿನಪತ್ರಿಕೆಗೆ ಕಾಯುತ್ತಿದ್ದಂತೆ, ಸಚಿನ್ ತೆಂಡೂಲ್ಕರ್ ಆಡಲು ಬರುವುದನ್ನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಂತೆ, ಅರ್ನಬ್ ಗೋಸ್ವಾಮಿಯವರ ಹೊಸ ಚಾನೆಲ್ ರಿಪಬ್ಲಿಕ್ ಬರುವುದನ್ನ ಕಾಯುತ್ತಿದ್ದ ಜನರಿಗೆ ಇಂದು ಹಬ್ಬ.

ಭಾರತದ ನ್ಯೂಸ್ ಮೀಡಿಯಾದಲ್ಲಿ ಅರ್ನಬ್ ಕೊಡುಗೆ ಏನು?

ಮಾಧ್ಯಮಗಳು ಭಾರತದಲ್ಲಿ ಚರ್ಚೆ ನಡೆಸುವ ರೀತಿಯನ್ನೇ ಬದಲಾಯಿಸಿದ್ದು ಅರ್ನಬ್ ಗೋಸ್ವಾಮಿ. ಅವರಿಗೆ ಒಬ್ಬ ಸಂದರ್ಶಕರು ಕೇಳುತ್ತಾರೆ, ” ನೀವು ಈ ತರಹದ ಕೂಗುವ, ಬೈಯ್ಯುವ ಚರ್ಚೆಯನ್ನು ಹುಟ್ಟಿ ಹಾಕಿದ್ದೀರಾ ಅದು ತಪ್ಪಲ್ಲವೇ?”. ಅದಕ್ಕೆ ಅರ್ನಬ್ ” ಮೊದಲು ನನಗೆ ಟಿವಿಯಲ್ಲಿ ಚರ್ಚೆ ಮಾಡುವುದನ್ನು ನೋಡಿ ಬೇಸರ ಬರುತ್ತಿತ್ತು. ನಾಲ್ಕು ಮಂದಿ ಕೂತು ಸಿಹಿ ಸಿಹಿ ಮಾತನಾಡಿ ಹೋದರೆ ಅದನ್ನು ಚರ್ಚೆ ಅನ್ನುತ್ತಾರೆಯೇ? ಈತರಹದ ಚರ್ಚೆಯಲ್ಲಿ ಕೊನೆಗೆ ತೀರ್ಮಾನಕ್ಕೆ ಬರುವುದಾದರೂ ಹೇಗೆ? ಚರ್ಚೆಯನ್ನು ‘ನಾಮ್ ಕೆ ವಾಸ್ತೆ’ ಮಾಡಬಾರದು, ಒಂದು ಕಾರಣಕ್ಕಾಗಿ ಮಾಡಬೇಕು, ಆ‌ ಕಾರಣದ ಹಿಂದೆ ಎಲ್ಲರೂ ಮನಸ್ಸಿನಿಂದ ಬೀಳಬೇಕು. ಭಾರತದಲ್ಲಿ ಕೂಗಿದ ಹೊರತು ಯಾವುದೇ ಕೆಲಸವೂ ಆಗುವುದಿಲ್ಲ. ಹೀಗಾಗಿ ಚರ್ಚೆಯ ರೂಪರೇಶೆಯಲ್ಲಿ ಒಂದು ಪ್ರಯೋಗ ಮಾಡಲಾಯಿತು ಇಂದು ಅದು ‘ಡಿಬೇಟ್ -ಅರ್ನಬ್ ದಿ ವೇ’ ಆಗಿದೆ, ನನಗೆ ಅದು ತಪ್ಪು ಅನಿಸಿಲ್ಲ. ತಪ್ಪಾಗಿದ್ದರೆ ಇಷ್ಟು ಜನ ವೀಕ್ಷಕರು ಇರುತ್ತಿರಲಿಲ್ಲ” ಎನ್ನುತ್ತಾರೆ. ಇಂತಹ ಮತ್ತೂ ಹತ್ತಾರು ಪ್ರಯೋಗಗಳನ್ನು ಅರ್ನಬ್ ಗೋಸ್ವಾಮಿಯವರು ತಮ್ಮ ಹೊಸ ಸಾಹಸ ‘ರಿಪಬ್ಲಿಕ್’ ನಲ್ಲಿ ಮಾಡಬಹುದು ಎಂಬ ನಿರೀಕ್ಷೆ ಇದೆ. ಅರ್ನಬ್ ಗೋಸ್ವಾಮಿಯವರ ಸಂದರ್ಶನ, ಅವರ ಭಾಷಣ, ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿರುವ ಪ್ರತಿಕ್ರಿಯೆ ನೋಡಿದರೆ ಭಾರತದ ಮಾಧ್ಯಮ ರಂಗದಲ್ಲಿ ಒಂದು ಕ್ರಾಂತಿಯ ಅಲೆಯೇ ಎದ್ದು ಬರಬಹುದೇನೋ ಅನಿಸುತ್ತಿದೆ. ಹೊಸದಾಗಿ ಏನೆ ಆಗಲಿ ಶುರುಮಾಡಿ ಯಶಸ್ಸು ಪಡೆಯುವುದು ಬಹಳ ಕಷ್ಟ. ಯಶಸ್ಸು ಬೇಕು ಅಂದರೆ ನಮ್ಮ ಜೀವವನ್ನೇ ಅದಕ್ಕೆ ಧಾರೆ ಎರೆದಿರಬೇಕು. ‘ರಿಪಬ್ಲಿಕ್’ ಘೋಷಣೆಯು ಆದಾಗಿನಿಂದ ಅರ್ನಬ್ ಗೋಸ್ವಾಮಿ ಕಾಲಿಗೆ ವಿಮಾನವನ್ನು ಕಟ್ಟಿಕೊಂಡವರಂತೆ ಇಡೀ ದೇಶವನ್ನು ಸುತ್ತುತ್ತಿದ್ದಾರೆ. ಇವತ್ತು ಅವರು ಲಾಲೂ ಪ್ರಸಾದ್ ಯಾದವ್ ಅವರ ವಿಡಿಯೋ ಬಹಿರಂಗ ಮಾಡಿದ್ದು ನೋಡಿದರೆ ರಿಪಬ್ಲಿಕ್ ಮೇಲೆ‌ ಇದ್ದ ನಿರೀಕ್ಷೆ ಇನ್ನೂ ಸಾವಿರ ಪಟ್ಟು ಹೆಚ್ಚಿದೆ.

ರಿಪಬ್ಲಿಕ್ ವರ್ಲ್ಡ್ ಈ ಸಾಹಸಲ್ಲಿ ಯಾರ ಯಾರ ಪಾತ್ರವಿದೆ?

ಕಳೆದ ಡಿಸೆಂಬರ್ ನಲ್ಲಿ ಅರ್ನಬ್ ಗೋಸ್ವಾಮಿಯವರು ತಾನು ರಿಪಬ್ಲಿಕ್ ಮೀಡಿಯಾ ಶುರು ಮಾಡುತ್ತೇವೆ ಎಂದು ಘೋಷಿಸಿದರು. ಅದು ಗೊತ್ತಾಗುತ್ತಿದ್ದಂತೆ ಬಿಜೆಪಿಯ ನಾಯಕನಾದ ಸುಬ್ರಹ್ಮಣ್ಯಂ ಸ್ವಾಮಿ ಸಂವಿಧಾನದ ಪ್ರಕಾರ ‘ರಿಪಬ್ಲಿಕ್’ ಶಬ್ಧವನ್ನು ಬಳಸುವ ಹಾಗಿಲ್ಲ ಎಂದು ಸರ್ಕಾರಕ್ಕೆ ಬರೆದರು. ಹೀಗಾಗಿ ಅರ್ನಬ್ ತಮ್ಮ ಕಂಪನಿಯ ಹೆಸರನ್ನು ‘ರಿಪಬ್ಲಿಕ್ ಟಿವಿ’ ಎಂದು ಬದಲಾಯಿಸಿದರು. ರಾಜ್ಯ ಸಭೆಯ ಸಂಸದರಾದ ರಾಜೀವ್ ಚಂದ್ರಶೇಖರ್ ಅವರು ಇದರಲ್ಲಿ ಮುಖ್ಯ ನಿವೇಶಕರು. ಅವರನ್ನು ಬಿಟ್ಟರೆ ಸ್ವತಃ ಅರ್ನಬ್ ಹಾಗೂ ಅವರ ಧರ್ಮಪತ್ನಿ ಇನ್ವೆಸ್ಟ್ ಮಾಡಿದ್ದಾರೆ. ಅನುಪಮ್‌ ಖೇರ್, ಮೇಜರ್ ಗೌರವ್ ಆರ‌್ಯ, ಚಿತ್ರಾ ಸುಬ್ರಹ್ಮಣ್ಯಂ, ಮಿನಹಾಸ್ ಮರ್ಚೆಂಟ್, ಎಸ್.ಎ. ಹರಿಹರನ್ ಹೀಗೆ ಹಲವಾರು ಜನ ದೇಶದ ಹಲವಾರು ಕಡೆಯಿಂದ ಬಂದು ಸೇರಿದ್ದಾರೆ. ಒಟ್ಟೂ 300 ಜನರ ತಂಡವಾಗಲಿದ್ದು, ಸ್ಟುಡಿಯೋ ಮುಂಬಯಿಯಿಂದ ಕೆಲಸ ಮಾಡಲಿದೆ.

ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ದೇಶಕ್ಕೆ ಏನು ಮಾಡಬಲ್ಲದು?

ರಿಪಬ್ಲಿಕ್ ಟಿವಿ ಎನ್ನುವ ಹೊಸ ಸಾಹಸಕ್ಕೆ ಅರ್ನಬ್ ಕೈ ಹಾಕಿದಾಗಿನಿಂದ ಅವರು ದೇಶದ ಹಲವೆಡೆ ಹೋಗಿ ಕಾರ್ಯಕ್ರಮ ಮಾಡಿ, ಅನೇಕ ವ್ಯಕ್ತಿಗಳನ್ನು ಭೇಟಿ ಆಗುತ್ತಲೇ ಇದ್ದಾರೆ. ಅವರು ನಡೆಸಿದ ಎಲ್ಲ‌ ಕಾರ್ಯಕ್ರಮಗಳನ್ನು ನೋಡಿದಾಗ ಒಂದು ವಿಶಿಷ್ಟವಾದ ವಿಷಯ ಕಂಡುಬರುತ್ತದೆ, ಅದೇನೆಂದರೆ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಯುವಕರು ಹಾಗೂ ವಿದ್ಯಾರ್ಥಿಗಳು. ಮೊದ ಮೊದಲು ನಡೆದ ಎಲ್ಲ ಚಟುವಟಿಕೆಗಳೂ ಕಾಲೇಜುಗಳ ಆವರಣದಲ್ಲಿ. ಸೂಕ್ಷ್ಮವಾಗಿ ಗಮನಿಸಿ. ಇದು ‘ಬೈ ಚಾನ್ಸ್’ ಆಗಿದ್ದಲ್ಲ, ನನಗಸಿಸಿದ ಹಾಗೆ ಅರ್ನಬ್ ಗೋಸ್ವಾಮಿ ಬಹಳ ಬುದ್ಧಿವಂತಿಕೆಯಿಂದ ಯುವಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದನ್ನೆಲ್ಲ ಮತ್ತೂ ಕೂಲಂಕಷವಾಗಿ‌ ನೋಡಿದರೆ  ರಿಪಬ್ಲಿಕ್ ಯುವಜನತೆಯ ಧ್ವನಿ ಆಗಲಿದೆ ಎಂದರೂ ತಪ್ಪಾಗದು. ಭಾರತದಲ್ಲಿ ಯುವಶಕ್ತಿಯ ಪ್ರಭಾವವನ್ನು ಅರ್ನಬ್ ಮನಗಂಡಿದ್ದಾರೆ. ಇಂದು ಭಾರತ ಯುವ ರಾಷ್ಟ್ರ, ಭಾರತದ ಸರಾಸರಿ ವಯಸ್ಸು ಮೂವತ್ತರಿಗಿಂತ ಕಡಿಮೆ (29). ಟ್ವಿಟರ್, ಫೇಸ್‌ಬುಕ್‌, ಓನಲೈನ್ ಪೇಪರ್ ಇವೆಲ್ಲವನ್ನೂ ಹೆಚ್ಚಾಗಿ ಬಳಸುವವರು ಯುವಕ ಹಾಗೂ ಯುವತಿಯರೆ. ಯುವಶಕ್ತಿಯ ಬಗ್ಗೆ ಮೋದಿಜಿ ಪ್ರತಿ ಭಾಷಣದಲ್ಲೂ ಹೇಳುತ್ತಾರೆ ತಾನೆ? “ಭಾರತ ಯುವ ದೇಶ, ನಮ್ಮ ದೇಶದ ಶಕ್ತಿ ಯುವಜನತೆಯಲ್ಲಿದೆ” ಅಂತ. ಅರ್ನಬ್ ಗೋಸ್ವಾಮಿ ಇದೇ ಪಾಯಿಂಟ್ ಇಟ್ಟುಕೊಂಡು ರಿಪಬ್ಲಿಕ್ ಎಂಬ ದೊಡ್ಡ ಸಾಮಾನ್ಯ ಕಟ್ಟಲು ಹೋಗುತ್ತಿದ್ದಾರೆ ಅನಿಸುತ್ತಿದೆ. ಇಂದು ಯುವಕರಾಗಲಿ, ಯುವತಿಯರಾಗಲಿ ಇತಿಹಾಸದ ಸತ್ಯಾಸತ್ಯಗಳನ್ನು ಪ್ರಶ್ನಿಸುವವರು. ಚುನಾವಣೆಯಲ್ಲಿ ಯಾರು ಗೆಲ್ಲಲಿ, ಬಿಡಲಿ ಆದರೆ ಸೋಷಿಯಲ್ ಮೀಡಿಯಾದಲ್ಲಿ ಗೆದ್ದಿರುವುದು ಯುವಕರೇ. ಅರ್ನಬ್ ಟೈಮ್ಸ್ ನೌ ನಲ್ಲಿರುವಾಗ ಅವರನ್ನು ‘ಕಿಂಗ್ ಆಫ್ ಆನಲೈನ್ ಟ್ರೆಂಡ್ ಮೇಕರ್’ ಅನ್ನುತ್ತಿದ್ದರು. ಅಂದರೆ ಟ್ವಿಟರ್ ಹಾಗೂ ಫೇಸ್ಬುಕ್ ಮುಖಾಂತರ ಟೈಮ್ಸ್ ನೌ ನಲ್ಲಿ ಚರ್ಚಿಸುವ ವಿಷಯ ವರ್ಲ್ಡ್ ವೈಡ್ ಟ್ರೆಂಡ್ ಆಗುತ್ತಿತ್ತು. ಈ ವಿಷಯವನ್ನು ಅರ್ನಬ್ ಗ್ರಹಿಸಿ ಈ ಬೂನಾದಿಯ ಮೇಲೆ ರಿಪಬ್ಲಿಕ್ ಕಟ್ಟುವ ಪ್ರಯತ್ನಪಟ್ಟಿದ್ದಾರೆ. ಇವತ್ತು ಟಿವಿಯ ಸಹಿತ, ರಿಪಬ್ಲಿಕ್ ಪ್ರಸಾರ ಆಗಿದ್ದು ಹಾಟ್ ಸ್ಟಾರ್ ಎನ್ನುವ ವೆಬ್ಸೈಟ್ ನಲ್ಲಿ. ಇದೇ ಆಧಾರದ ಮೇಲೆ ನಾನು ಹೇಳುತ್ತಿರುವುದು ರಿಪಬ್ಲಿಕ್ ಮೀಡಿಯಾದ ‘ಎಕ್ಸಿಕ್ಯೂಷನ್’ ಅಂದುಕೊಂಡಂತೆ ಆದರೆ ಮಿಡಿಯಾ ಜಗತ್ತಿನಲ್ಲಿ ಇದು ಒಂದು ಕ್ರಾಂತಿಯನ್ನೇ ಮಾಡಬಲ್ಲದು.

ಇಲ್ಲಿಯವರೆಗೆ ಮೀಡಿಯಾ ಅಂದರೆ ಅಲ್ಲಿ ಇರುವವರು ಕೇವಲ ಬುದ್ಧಿಜೀವಿಗಳು ಅಂತ ‌ಜನರು ಅಂದುಕೊಂಡಿದ್ದರು. ಬುದ್ಧಿಜೀವಿಗಳೆಲ್ಲ ಸೇರಿಕೊಂಡು ಕಟ್ಟಿದ ಮೀಡಿಯಾ ಎಂಬ ಸಾಮ್ರಾಜ್ಯವನ್ನು ರಿಪಬ್ಲಿಕ್ ಮೀಡಿಯಾ ಬುಡದಿಂದ ಅಲ್ಲಾಡಿಸಬಹುದೇ?  ಎಷ್ಟೋ ಮಂದಿ ಬುದ್ಧಿಜೀವಿಗಳು ರಿಪಬ್ಲಿಕ್ ಬರಬಾರದು ಅಂತ ಶತಾಗತ ಪ್ರಯತ್ನ ನಡೆಸಿದರು. ಅದನ್ನೆಲ್ಲ ಮೀರಿ ಅರ್ನಬ್ ಎಲ್ಲವನ್ನೂ ಎದುರಿಸಲು ನಿಂತಿದ್ದಾರೆ. “ಮೀಡಿಯಾ ಎನ್ನುವುದು ಸಮಾಜದ ಕನ್ನಡಿ ಆಗಬೇಕು” ಎನ್ನುತ್ತಾರೆ ಅರ್ನಬ್ ಗೋಸ್ವಾಮಿ. ಇಲ್ಲಿಯವರೆಗೆ ಚಿಕ್ಕ ವಿಷಯದಿಂದ ಹಿಡಿದು ದೇಶವೇ ತಲ್ಲಣಿಸುವ ವಿಷಯದ ವರೆಗೆ ಅವರು ಜನರ ಧ್ವನಿಯನ್ನು ಎತ್ತಿ ಹಿಡಿಯಲು ಸಮರ್ಥರಾಗಿದ್ದಾರೆ. ಇಂದು ರಿಪಬ್ಲಿಕ್ ವಿಷಯಕ್ಕೆ ಬಂದರೆ ಅವರು ಸ್ಟುಡಿಯೋದಿಂದ ಹೊರಗಡೆ ಬಂದು ಕಾಲೇಜುಗಳಿಗೆ ಹೋಗಿ ಜನರೆದುರು ನಿಂತು “ನೀವು ಮೀಡಿಯಾ ಧ್ವನಿ ಆಗಿ” ಅಂತ ಕೇಳುತ್ತಿದ್ದಾರೆ, ಇತರಹದ Passionate ಮೀಡಿಯಾ ಸಿಇಓ ಬಗ್ಗೆ ನಾ ಮೊದಲು ಎಲ್ಲೂ  ಕೇಳಿಲ್ಲ ಅಥವಾ ಓದಿಲ್ಲ. 2014 ರ ಲೋಕಸಭಾ ಚುನಾವಣೆಯ ಮೋದಿ ಗೆಲವು, ಚೈನಾದ ಮೇಲಿನ ಸುಳ್ಳು ಸುದ್ದಿಗಳು, ರಷ್ಯಾದ ಪ್ರಬಲತೆ, ಹಾಗೂ ಡೊನಾಲ್ಡ್ ಟ್ರಂಪ್ ಅವರ ಭರ್ಜರಿ ಗೆಲುವು ಇಂದು ಜಗತ್ತಿನಲ್ಲಿ ಮೀಡಿಯಾ ಹೇಗೆ ಕೆಲಸ ನಿರ್ವಹಿಸುತ್ತದೆಯಲ್ಲ ಅದನ್ನು ಪ್ರಶ್ನಿಸುತ್ತಿದೆ. ಇದಕ್ಕೆ ಉತ್ತರವಾಗಿ ರಿಪಬ್ಲಿಕ್ ಟಿವಿ ಹೊರಹೊಮ್ಮಲಿದೆಯೇ? ತಮ್ಮೆಲ್ಲ ಅನುಭಗಳನ್ನು ಕ್ರೋಢೀಕರಿಸಿ ಅರ್ನಬ್ ಇವತ್ತು ಮೀಡಿಯಾ ಜಗತ್ತಿಗೆ ಹೊಸ ಒಂದು ಆಯಾಮ ಕೊಡಬಲ್ಲರೇ? ಎಂಬುದು ಪ್ರಶ್ನೆ.

ರಿಪಬ್ಲಿಕ್ ವರ್ಲ್ಡ್ ಮೀಡಿಯಾವನ್ನು ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ಇಲ್ಲಿಯವರೆಗೆ ಭಾರತದದ್ದೇ ಒಂದು ಪ್ರಮುಖ ಹಾಗೂ ಪ್ರಬಲ ಇಂಗ್ಲೀಷ್ ಮೀಡಿಯಾ ಹೌಸ್ ಎನ್ನುವುದೇ ಇರಲಿಲ್ಲ. ಇದೊಂದು 3500 ಕೋಟಿ ವಹಿವಾಟಿನ ವ್ಯಾಪಾರ. ಬಿಬಿಸಿ ಹಾಗೂ ಸಿಎನ್ಎನ್ ತರಹದ ವಿದೇಶಿ ಮೀಡಿಯಾ ಹೌಸ್ ಗಳು ಭಾರತದ ಸುದ್ದಿಗಳನ್ನು ಬಣ್ಣ ಬಣ್ಣದ ಭಾಷೆಗಳಲ್ಲಿ ತಮಗೆ ಲಾಭವಾಗುವಂತೆ ಜಗತ್ತಿನೆಲ್ಲೆಡೆ ಮಾರುತ್ತಿದ್ದವು. ಭಾರತದಲ್ಲಿ ಮೀಡಿಯಾ ಒಂದು ವ್ಯಾಪಾರ ಅಂದು ತಿಳಿಸಿಕೊಟ್ಟವರೇ ಟೈಮ್ಸ್ ಆಫ್ ಇಂಡಿಯಾ ತಾಯಿ ಕಂಪನಿ Bennett, Coleman & Co. Ltd. ವಿದೇಶಿ ಮಿಡಿಯಾಗಳು ಇಲ್ಲಿಯವರೆಗೆ ಭಾರತದಿಂದ ಅದೆಷ್ಟು ಹಣ ಮಾಡಿವೆಯೋ ಅವರಿಗೇ ಗೊತ್ತು. ಮೀಡಿಯಾ ಎನ್ನುವುದು ಇಂದು ಕೇವಲ ವ್ಯಾಪಾರ ಆಗಿದೆ ಅಷ್ಟೇ. ಇವತ್ತು ದೇಶಪ್ರೇಮ ತುಂಬಿರುವ, ಜಗತ್ತಿನಾದ್ಯಂತ ಬೆಳೆಯಬಹುದಾದ ಒಂದೂ ಭಾರತೀಯ ಮಿಡಿಯಾ ಹೌಸ್ ಇಲ್ಲ . ಅಲ್ಲೊಂದು ಅವಕಾಶ ಅರ್ನಬ್ ಅವರಿಗೆ ಕಂಡಿರಬಹುದೆ? ಇಂತಹ ಸದಾವಕಾಶವನ್ನು ಉಪಯೋಗಿಸಿಕೊಳ್ಳಲು ಅರ್ನಬ್ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಗೆ ಬಂದಿದ್ದು ನಿಜವಾಗಿಯೂ ಗಮನಾರ್ಹ. ಅರ್ನಬ್, “ರಿಪಬ್ಲಿಕ್ ಕೇವಲ ಭಾರತಕ್ಕೆ ಸೀಮಿತವಾಗಿರುವುದಿಲ್ಲ, ಅದು ಭಾರತದ ಗ್ಲೊಬಲ್ ಡಿಸರಪ್ಟಿವ್ ಮೀಡಿಯಾ ಪ್ಲಾಟಫಾರ್ಮ್ ಆಗುವ ಸಾಮರ್ಥ್ಯ ಹೊಂದಿದೆ” ಎನ್ನುತ್ತಾರೆ. ಇದು ಅವರ ಕನಸು ಕೂಡ.

ಇನ್ನೊಂದು ಸಂದರ್ಶನದಲ್ಲಿ “ಭಾರತದ ಮಾಧ್ಯಮವನ್ನು ಜಗತ್ತಿನೆಲ್ಲೆಡೆ ಕೊಂಡೊಯ್ಯುವುದೇ ನನ್ನ ಬದುಕಿನ ಗುರಿ” ಎನ್ನುತ್ತಾರೆ. ಇಂದು ಬದಲಾಗುತ್ತಿರುವ ಭಾರತಕ್ಕೆ ಇಂತಹ ಒಂದು ರಾಷ್ಟ್ರ ಪ್ರೇಮದ ಮೀಡಿಯಾ ಬೇಕಿತ್ತು. ಅದೆಷ್ಟು ಯಶಸ್ವಿಯಾಗಿ ನಿರ್ವಹಿಸುತ್ತದೆಯೋ ನೋಡಬೇಕು. ಗೇಮ್ ಹ್ಯಾಸ್ ಜಸ್ಟ್ ಬಿಗನ್!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!