ಅಂಕಣ

ಪ್ರತಿಯೊಬ್ಬನ ಸ್ವಾಭಿಮಾನವೇ  ದೇಶದ  ಉತ್ತಮ ದಿನ

“ನಾವೆಲ್ಲಾ ಜನರಿಗೆ ಉಚಿತವಾಗಿ ನೀಡಿದ್ರು, ಜನರಿಗಿನ್ನೂ  ಬುದ್ಧಿ  ಬಂದಿಲ್ಲಾ. ಮೋದಿ ಮೋದಿ ಹೇಳ್ತಾರ್ರೀ ..!!!” ಎಂದು ಒಬ್ಬ  ನಾಯಕರು ತಮ್ಮ ಆಪ್ತರಲ್ಲಿ ಹೇಳುತ್ತಾ ಇದ್ದರೆಂದು  ಗಾಳಿಯ ಮಾತು ತೇಲಿ ಬಂತು. ಎಲ್ಲಾ ಭಾಗ್ಯಗಳು ಮನೆಯ ಮುಂದೆ ತಂದು ನಿಲ್ಲಿಸುವವರನ್ನ ಬಿಟ್ಟು, ಜನರ ಸಮಸ್ಯೆಯನ್ನು ಸಾಮಾನ್ಯ ಪತ್ರದಲ್ಲಿಯೇ ಆಲಿಸಿ  ತಿಂಗಳಿಗೊಮ್ಮೆ ರೇಡಿಯೋದಲ್ಲಿ ನಮ್ಮ ಜೊತೆ ಮಾತನಾಡುವ, ಬ್ಯಾಂಕಿನ  ಮುಂದೆ  ಕ್ಯೂ ನಿಲ್ಲಿಸುವ ಪರಿಸ್ಥಿತಿ ತಪ್ಪಿಸಿ ಮೊಬೈಲಿನಲ್ಲಿಯೇ ಅರೆ ಕ್ಷಣದಲ್ಲಿ ಎಲ್ಲ ವ್ಯವಹಾರ ಮಾಡಲು ಪ್ರೇರೇಪಿಸಿದ, ಹೊಸ ಉದ್ಯೋಗಗಳನ್ನ ಸೃಷ್ಟಿ ಮಾಡುವ  ಮೋದಿಯ  ಮೋಡಿಗೆ ಒಳಗಾದವರನ್ನ ನೋಡಿ ಆಶ್ಚರ್ಯ ಆಗುವುದು ಸಹಜ. ಜಾತಿಯ ಹೆಸರಿನ ರಾಜಕಾರಣಕ್ಕೆ ಪೂರ್ಣವಿರಾಮ ನೀಡಿ ಅಭಿವೃದ್ಧಿಯ ರುಚಿ ತೋರಿಸಿದವರು ಮೋದಿ. ಯಾರೋ ಒಬ್ಬ ಬಡವ ಗಂಜಿಯಲ್ಲಿ  ಅಗುಳು ಬರುತ್ತದೆಂಬ ಆಸೆಯಲ್ಲಿ  ತಿಳಿ ಕುಡಿದನಂತೆ ..!!! ಆದರೆ ಅಗಳು  ಮಾತ್ರ ಬರಲೇ ಇಲ್ಲ. ಇಷ್ಟು  ವರ್ಷ ಗಂಜಿ ಕುಡಿದ ಬಡವರಿಗೆ ಅರಿವಾಗಿದೆ. ಖಂಡಿತವಾಗಿಯೂ  ಇದು ಮೋಡಿ ಅಲ್ಲ ವಾಸ್ತವ ಎಂದು. ಇಂದು ಜನರಿಗೆ ತಾತ್ಕಾಲಿಕವಾಗಿ ಒಂದು ರುಪಾಯಿಯ ಅಕ್ಕಿಯ ಅವಶ್ಯಕತೆ ಇಲ್ಲ. ಶಾಶ್ವತವಾಗಿ ಅನ್ನ ನೀಡುವ ಉದ್ಯೋಗ ಬೇಕಿದೆ. ಒಂದು ದಿನದ ಮದುವೆಗೋಸ್ಕರ ಯಾವುದೇ ಭಾಗ್ಯ ಬೇಕಾಗಿಲ್ಲ. ಬದಲಾಗಿ  ಮದುವೆಯಾಗುವ ಅರ್ಹತೆಯನ್ನು ನೀಡುವ, ಸಮಾಜದಲ್ಲಿ ಅವನದೇ ಆದ ಗುರುತಿನ ಛಾಪು ಮೂಡಿಸುವ ಅವಕಾಶ ಬೇಕಿದೆ. ಯಾವದೇ  ರೈತನಿಗೆ ಸಾಲ ಮನ್ನಾ ಭಾಗ್ಯ ಬೇಕಿಲ್ಲ. ಬದಲಾಗಿ ಬೆಳೆದ ಬೆಳೆಗೆ  ಉತ್ತಮ ಮಾರುಕಟ್ಟೆ ಬೇಕಿದೆ. ಪ್ರಕೃತಿಯ ವಿಕೋಪಕ್ಕೆ ತಕ್ಷಣದಲ್ಲಿ ಮಂಜೂರಾಗುವ ಬೆಳೆ ವಿಮೆ ಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಮೂರು ದಿನದಲ್ಲಿ ಕಿತ್ತು ಹೋಗುವ ಶೂ ಬೇಕಾಗಿಲ್ಲ, ಬದಲಾಗಿ ಯಾವುದೇ ಪೂರ್ವಾಗ್ರಹಿತರಾಗಿ ಬರೆಯದ ವಾಸ್ತವ ವಿಷಯ ತಿಳಿಸುವ ಗುಣಮಟ್ಟದ ಶಿಕ್ಷಣ ಬೇಕಿದೆ.

ಮಾನ್ಯ ಪ್ರಧಾನ ಮಂತ್ರಿಗಳು ಸ್ವಾಭಾವಿಕವಾಗಿ ಜನರ ಮುಂದೆ ದೇಶದ ಪರಿಸ್ಥಿತಿ  ಮಂಡಿಸುತ್ತಾ LPGಯ ವಸ್ತುಸ್ಥಿತಿಗಳನ್ನು  ಮುಂದಿಟ್ಟರು. ಸಾಧ್ಯವಾದವರು ಸಬ್ಸಿಡಿ ವಾಪಾಸ್ ನೀಡುವುದರಿಂದ  ಸಾಮಾನ್ಯನಿಗಾಗುವ ಅನುಕೂಲಗಳನ್ನು ತಿಳಿಸಿದರು. ಅದು ಇವತ್ತು ಇತಿಹಾಸ ಆಗಿದೆ. ಒಂದು ಕೋಟಿಗೂ ಅಧಿಕ ಜನರು  ತಮ್ಮ ಸಬ್ಸಿಡಿಯನ್ನ ತ್ಯಜಿಸಿದ್ದಾರೆ. ಉರುವಲ ಮುಂದೆ ಬೇಯುತ್ತಿದ್ದ ಎಷ್ಟೋ ತಾಯಂದಿರು ನಿರಾಯಾಸವಾಗಿ ಅಡುಗೆ ಮಾಡುತ್ತಿದ್ದಾರೆ. ಇದು ದೇಶ ಕಂಡ ಒಂದು ಉತ್ತಮ ದಿನ. ಆಹಾರ ಪೋಲಾಗದಂತೆ ಸರ್ಕಾರ ಹೊಸ ನಿಯಮಗಳನ್ನು ರೂಪಿಸುತ್ತಿದೆ. ಪ್ರಧಾನಿಗಳಿಗೆ ಜನರು ಆಹಾರ ಪೋಲಾಗುವುದನ್ನು ತಡೆಯುವ  ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿರುವುದಲ್ಲದೆ  ಸಾರ್ವಜನಿಕರೇ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯರೂಪಗೊಳಿಸಿದ್ದಾರೆ .ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆಯಿಂದ ಬೇನಾಮಿ ಕಾರ್ಡ್ ಗಳು  ಮೂಲೆಗುಂಪು ಸೇರಿವೆ. ಇದರಿಂದ ದೇಶದ ಆಹಾರ ಭದ್ರತೆ ಕಾಯ್ದುಕೊಳ್ಳುವಲ್ಲಿ ಮಹತ್ತರ ಘಟ್ಟ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಪಡಿತರ ಸಬ್ಸಿಡಿಯನ್ನು ಅಕೌಂಟಿಗೆ ಜಮಾ ಮಾಡುವ ಮುನ್ಸೂಚನೆಯನ್ನ ಕೇಂದ್ರ ಸರಕಾರ ನೀಡಿದೆ . ಇದು ಪ್ರತಿಯೊಬ್ಬ ಭಾರತೀಯನು ದೇಶದ ಹಸಿವನ್ನು  ನೀಗಿಸಲು ಪ್ರಧಾನಿ ನಮಗೆ ನೀಡುತ್ತಿರುವ ಸುವರ್ಣಾವಕಾಶ ಎಂದು ಭಾವಿಸಬೇಕು. ಯಾರೂ ಅರ್ಪಣೆ,ದಾನ ಮಾಡಬೇಕಾದ ಅವಶ್ಯಕತೆ ಇಲ್ಲ. ಸಶಕ್ತನಾದವನು ಸ್ವಯಂಪ್ರೇರಿತನಾಗಿ ತನ್ನ ಸಬ್ಸಿಡಿಯನ್ನು  ತ್ಯಜಿಸುವುದರ ಮೂಲಕ ಬಡವನ ಹೊಟ್ಟೆ ತುಂಬಿಸಬಹುದಾಗಿದೆ.

ಮೀಸಲಾತಿ ಎನ್ನುವುದು  ಸಂವಿಧಾನ ರಚಿಸಿದ ಮೇಧಾವಿಗಳು ದೇಶದ ಸುಸ್ಥಿರ ಅಭಿವೃದ್ಧಿಗೆ ತೋರಿಸಿದ ಸನ್ಮಾರ್ಗ. ತುಳಿತಕ್ಕೆ ಒಳಗಾದಂತಹ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸಂವಿಧಾನದ ಕಲಂ 16 (4 ),15 (4)  ಮೀಸಲಾತಿಯನ್ನು ನಿಡುವ ಅಧಿಕಾರ ನೀಡಿದೆ. ಪ್ರಾರಂಭದಲ್ಲಿ ಕೇವಲ ಹತ್ತು ವರ್ಷಕ್ಕೆ ಎಂದು ಪ್ರಾರಂಭವಾದ ಮೀಸಲಾತಿ ಅವಧಿಯನ್ನು ವಿಸ್ತರಿಸುತ್ತಾ ರಾಜಕೀಯ ದಾಳವಾಗಿ ಬಳಸಿಕೊಂಡಿರುವುದು ನಮ್ಮ ಮುಂದಿರುವ ಅಪ್ರಕಟಿತ ಸತ್ಯ. ಹಲವಾರು ಉತ್ತಮ ಹುದ್ದೆ ತಲುಪಿರುವ ಅಧಿಕಾರಿಗಳು ಮತ್ತೆ ಮತ್ತೆ ಈ  ಅವಕಾಶವನ್ನು ಬಳಸಿಕೊಳ್ಳುತ್ತಿರುವುದು ನಮ್ಮ ಕಣ್ಣ ಮುಂದೆಯೇ ಇದೆ . ಅಧಿಕಾರ ಪಡೆಯಲು ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮೊದಲ ಬಾಣವಾಗಿ ಇದನ್ನು  ಪ್ರಯೋಗಿಸುತ್ತವೆ. ಅಧಿಕಾರ ಹಿಡಿದ ನಂತರ ತಮ್ಮ ಜಾತಿಗಳನ್ನು  ತಮ್ಮ ನೆಚ್ಚಿನ ಮತದಾರರನ್ನು  ಹಿಂದುಳಿದವರನ್ನಾಗಿ  ಮಾಡಿದ್ದು  70 ವರ್ಷದ ಸಾಧನೆ. ಪ್ರಕೃತಿಯಲ್ಲಿ ಎಲ್ಲಕ್ಕಿಂತ ಭಿನ್ನವಾಗಿರುವ ಮನುಷ್ಯ ಸದಾ ಚಿಂತನ ಶೀಲನಾಗುತ್ತಾ  ಮುಂದೆ ಬರಬೇಕು ಎಂದು ಬಯಸುತ್ತಾನೆ. ಆದರೆ ಇಂದಿನ ಕಾಲದ ವಿಪರ್ಯಾಸ ಅಂದರೆ ನಾನು ಹಿಂದುಳಿದವನು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಚಾರವಾಗಿದೆ.  ಒಬ್ಬ ಶ್ರೇಷ್ಠ ದಾರ್ಶನಿಕ ಹೇಳುತ್ತಾರೆ  “ ಬಡವನಾಗಿ ಹುಟ್ಟುವುದು ಅವನ ತಪ್ಪಲ್ಲ , ಆದರೆ ಬಡವನಾಗಿ ಸಾಯುವುದು ಅವನ ತಪ್ಪು “. ಇಂತಹ ತತ್ವಗಳಿಗೆ ನಿದರ್ಶನವಾಗಿ ಬಿ .ಅರ್  ಅಂಬೇಡ್ಕರ್, ಎ.ಪಿ.ಜೆ ಅಬ್ದುಲ್ ಕಲಾಂ ನಮ್ಮ ಕಣ್ಣ ಮುಂದೆ  ನಿಲ್ಲುತ್ತಾರೆ. ಇಂದು ಜಾತೀಯ ಸಂಘರ್ಷಗಳು ಅಂದಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಅಂತಹ ಘಟನೆ ನಡೆದರೆ  ಮಾಧ್ಯಮಗಳೇ ಅದಕ್ಕೆ ಅರೆ ಕ್ಷಣದಲ್ಲಿ ಪಾಠ ಕಲಿಸುವ ಘಟ್ಟದಲ್ಲಿ ನಾವಿದ್ದೇವೆ. ಪ್ರತಿಯೊಬ್ಬನು ಶಿಕ್ಷಣ ಪಡೆಯುವ ವ್ಯವಸ್ಥೆ  ಮತ್ತು ಅವರನ್ನು ಶಾಲೆಗೆ ಕರೆತರುವ ಕ್ರಮಗಳು  ಈ ೭೦ ವರ್ಷದಲ್ಲಿ ನಡೆದಿದೆ. ಸ್ವಾತಂತ್ಯ್ರ ಪಡೆಯುವಲ್ಲಿ ನಮ್ಮ ಸಮಕಾಲೀನರೇ  ಆದ ಸಿಂಗಾಪುರದೊಂದಿಗೆ ಭಾರತವನ್ನು ಹೋಲಿಸಿಕೊಳ್ಳಲು ಅಜಗಜಾಂತರ ವ್ಯತ್ಯಾಸ ಇದೆ.

ಸುಮಾರು ೭೦ ವರ್ಷದಲ್ಲಿ ಎರಡು ತಲೆಮಾರನ್ನು ಇದೇ  ವ್ಯವಸ್ಥೆಯಲ್ಲಿ ಕಳೆದ ಇಂತಹ ಸಂದರ್ಭದಲ್ಲಿ  ಸರ್ವೋಚ್ಛ ನ್ಯಾಯಾಲಯ  ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದೆ. ಸಂವಿಧಾನ ಕೊಟ್ಟ ಸೌಕರ್ಯ ಬಳಸಿಕೊಂಡು ನೌಕರಿ ಗಿಟ್ಟಿಸಿಕೊಂಡು ಮುಂಬಡ್ತಿಗಾಗಿ ಮತ್ತೆ  ಅದೇ  ಸೌಕರ್ಯ ಕೇಳುವ ಜನರು ತಮ್ಮ ಸ್ವಸಾಮರ್ಥ್ಯವನ್ನು ಮತ್ತು ಸ್ವಾಭಿಮಾನವನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಸರಕಾರೀ ನೌಕರಿಗಳಲ್ಲಿ ವಿಶೇಷವಾದ ಭಡ್ತಿಯಲ್ಲಿ ತುದಿ ಮುಟ್ಟುವ ಜನರಿಂದ ನಾವು ಉತ್ತಮವಾದ ಆಡಳಿತವನ್ನು, ಅಭಿವೃಧ್ಧಿಯನ್ನು  ಬಯಸಲು ಸಾಧ್ಯವೇ ಇಲ್ಲ. ಮರ ಹತ್ತುವ  ಮಗನನ್ನು  ಅಪ್ಪ  ತನ್ನ ಕೈಗೆ ಸಿಗುವವರೆಗೂ  ನೂಕಬಹುದು. ಹಣ್ಣು ಕೀಳುವವರೆಗೂ ನೂಕುತ್ತಲೇ ಇರಬೇಕು  ಎನ್ನುವುದಾದರೆ  ಮಗನ ಸಾಮರ್ಥ್ಯ ಎಲ್ಲಿ ಪ್ರಕಟವಾಯಿತು? ಮಗ ಮರ ಹತ್ತಿರುವ ಪ್ರಯೋಜನವಾದರೂ ಏನು?

ದೇಶ ಒಂದು ಮಹತ್ತರ ಘಟ್ಟಕ್ಕೆ ಬಂದು ತಲುಪಿದೆ. ದೇಶದ ಪ್ರತಿಯೊಬ್ಬನೂ  ಯಾರು ಎನ್ನುವದನ್ನು  ಆಧಾರ್ ಗುರುತಿಸಿದೆ. ಪ್ರತಿಯೊಂದು ಪಡಿತರ ಚೀಟಿಯೂ ಆಧಾರಿನೊಂದಿಗೆ ಜೋಡಣೆ ಆಗಿದೆ. ದೇಶದಲ್ಲಿ ಹರಿದಾಡುವ ಪ್ರತಿ ಕಾಸಿನ ಕಿಸೆಯ ಮೂಲ ಗೊತ್ತಾಗಿದೆ. ಕೇಂದ್ರ ಸರಕಾರ ಇನ್ನು ಕೆಲವೇ ವರ್ಷದಲ್ಲಾದರೂ ಪ್ರತಿಯೊಬ್ಬರೂ ತುರ್ತು ಸಂದರ್ಭ ಹೊರತುಪಡಿಸಿ 2000 ಕ್ಕಿಂತ ಹೆಚ್ಚು ನಗದನ್ನು  ಹೊಂದಿರದಂತೆ ಕ್ರಮಗಳನ್ನು  ಕೈಗೊಳ್ಳಬೇಕು. ಪಡಿತರ ಚೀಟಿಯ  ಮುಖಾಂತರ  ಕುಟುಂಬದ ಸಂಪೂರ್ಣ ಆಯವ್ಯಯದ ಆಧಾರದ ಮೇಲೆ ಆದಾಯ ಪ್ರಮಾಣ ಪತ್ರ ನೀಡಬೇಕು. ಇದರಿಂದ ನಿಜವಾಗಿ ಹಿಂದುಳಿದ ಕುಟುಂಬಗಳನ್ನು  ಮುಟ್ಟಲು ಸಾಧ್ಯ. 70 ವರ್ಷದಲ್ಲಿ ಸಾಕಷ್ಟು ಯೋಜನೆಗಳನ್ನು ಸರಕಾರ ಹಾಕಿಕೊಂಡರೂ  ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಾ, ಕಷ್ಟ ಕಾರ್ಪಣ್ಯದಿಂದ ಜೀವನ ಸವೆಸುತ್ತಾ ಸೂರಿಲ್ಲದೆ ಬದುಕುತ್ತಿರುವವರ  ಸ್ಥಿತಿ  ಕಾಶ್ಮೀರದ ಪಂಡಿತರಿಗೂ ಇದೆ. ಬುದ್ಧಿ  ಮತ್ತು ಬಡತನ ಜಾತಿಯ ಆಧಾರದ ಮೇಲೆ ಬರುತ್ತದೆ ಎಂದು ಬಾಲಿಶವಾಗಿ ಯೋಚಿಸುವ  ಕಾಲ ಹೋಗಿದೆ. ಆರ್ಥಿಕತೆಯ ಆಧಾರದ ಮೇಲೆ ವ್ಯಕ್ತಿಗತವಾದ ಶಿಕ್ಷಣಕ್ಕೆ ಪ್ರೋತ್ಸಾಹ, ಉದ್ಯೋಗ ನೀಡಬೇಕಾಗಿದೆ.

ಕೊನೆಯದಾಗಿ ಹೇಳುವುದಿದ್ದರೆ ಪ್ರಧಾನಿಗಳು ಮನ್ ಕೀ ಬಾತಿನಲ್ಲಿ  ಮಾತನಾಡುತ್ತಾ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಯುವಕರ ನಾಡಿಮಿಡಿತ ಏನೆಂದು ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆಯೇ ಹೊರತು ಯಾವುದೇ ಜನಾಂಗಕ್ಕೆ ವಿಶೇಷ ಸೌಲಭ್ಯ ನಿರೀಕ್ಷಿಸಿ ಕೇಳಿದ ಪ್ರಸ್ತಾಪ ಮಾಡಿಲ್ಲ.  ಎಲ್ಲಾ ಯುವಕರು ಸಮಾಜದ ಉದ್ಧಾರದ ಜೊತೆಗೆ ಸ್ವಾವಲಂಬೀ  ಜೀವನದ ಕನಸನ್ನೇ ಹೊಂದಿದ್ದಾರೆ. ಗರಿಷ್ಟ 50 % ಮೀಸಲಾತಿ  ಕೊಡಬಹುದೇ ಹೊರತು ಅದಕ್ಕಿಂತ ಹೆಚ್ಚು ಅಥವಾ  72 % ಮೀಸಲಾತಿ  ನೀಡಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ,  ಕಾನೂನನ್ನು  ಓದಿ ತಿಳಿದಿರುವ ಮುಖ್ಯಮಂತ್ರಿಗಳು ನೀಡುತ್ತಿರುವ ಹುಸಿ ಭರವಸೆಗಳಿಗೆ ಬೀಗ ಬೀಳಬೇಕಿದೆ. ಮೀಸಲಾತಿ ರಾಜಕೀಯ ಅಸ್ತ್ರವಾಗದೆ ಇದರಿಂದ ಜನರ ಉದ್ಧಾರವಾಗಬೇಕಿದೆ. ಜನರ ಜೀವನ ಮಟ್ಟ ಅಳೆಯಲು ಆರ್ಥಿಕತೆ ಪ್ರಮಾಣವೇ ಹೊರತು ಜಾತಿಯಲ್ಲ. ಸಮಾಜದ ಏಳ್ಗೆಗೆ ಆರ್ಥಿಕ ಮೀಸಲಾತಿ ಉತ್ತಮ ಮಾರ್ಗ. ಈ ಕ್ರಮಕ್ಕೆ ಕೈಗೊಳ್ಳಲು ಪ್ರತಿಯೊಬ್ಬರು ತಮ್ಮೊಳಗಿರುವ ಒಳಗಿರುವ ಸ್ವಾಭಿಮಾನವನ್ನು  ಹೊರ ಹಾಕಬೇಕಿದೆ. ಪ್ರತಿಯೊಬ್ಬನು ಸ್ವಾಭಿಮಾನಿಯದಲ್ಲಿ ದೇಶಕ್ಕೆ ಅಚ್ಚೆ ದೀನ್ ಕಟ್ಟಿಟ್ಟ ಬುತ್ತಿ.

-ಕೃಷ್ಣಮೂರ್ತಿ ಭಟ್

krishnamoortib8@gmail.com 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!