ಅಂಕಣ

ನಾವಲ್ಲ – ಪುಸ್ತಕ ಪರಿಚಯ

ಸೇತುರಾಮ್ ಗೊತ್ತಾ ನಿಮಗೆ? ಸೀತಾರಾಮ್ ಧಾರಾವಾಹಿಗಳಲ್ಲಿ ಮೊದಲು ನಟಿಸುತ್ತಿದ್ದರು. ಅವರ ಸಂಭಾಷಣೆಯ ಧಾಟಿ ತುಂಬಾ ವಿಶಿಷ್ಟ ಮರೆಯಲು ಸಾಧ್ಯವೇ ಇಲ್ಲ. ಆಮೇಲೆ ‘ಮಂಥನ’ ಮುಂತಾದ ಧಾರವಾಹಿಗಳನ್ನು ನಿರ್ದೇಶಿಸಿದರು ಕೂಡ. ಇವರ ಒಂದು ಪುಸ್ತಕ  ‘ನಾವಲ್ಲ’. ಅವರ ಸಂಭಾಷಣೆಯಂತೆ ಇದೂ ಇರುತ್ತದೆ ಅಂದುಕೊಂಡು ಮೊದಲು ಓದಿರಲಿಲ್ಲ. ಆದರೆ ಯಾವಾಗ ಫೇಸ್ ಬುಕ್ಕಿನಲ್ಲಿ ಅದರ  ಕಲರವ ಜಾಸ್ತಿಯಾಯಿತೋ ಆಗ ಕುತೂಹಲದಿಂದ ಓದಿದೆ.

ಇದು ಆರು ಕಥೆಗಳ ಒಂದು ಕಥಾ ಸಂಕಲನ. ಮೊದಲ ಕಥೆಯೇ ಮೋಕ್ಷ. ಮಠದಲ್ಲಿ ಬಚ್ಚಿಟ್ಟ ರಾಜಕೀಯದ ಕಥೆಯಿದು. ಇಲ್ಲಿ ತಳಮಳಗೊಳ್ಳುವ ಪ್ರಾಮಾಣಿಕ ಮನಸ್ಸನ್ನು ನಿಷ್ಠೂರವಾಗಿ ಚಿತ್ರಿಸಿದ್ದಾರೆ. ಇಲ್ಲಿನ ಸಂಭಾಷಣೆಯೊಂದು ಹೀಗಿದೆ. “ಕಾಲು , ಕಣ್ಣು ಸರಿ ಇದ್ದು ಸ್ವಾಭಾವಿಕವಾಗಿದ್ರೆ ಅವುಗಳ ಇರವೇ ಮನಸ್ಸಿಗೆ ಬರಲ್ಲ, ಊನ ಆಗ್ಲಿ, ಮನಸ್ಸಿನ ತುಂಬೆಲ್ಲಾ ಅವೆ”.

ಮುಂದಿನ ಕಥೆ ಮೌನಿ. ಇದೊಂದು ಕಥೆ ಅದೆಷ್ಟು ಕಾಡುತ್ತದೆ ಅಂದರೆ ಮುಂದೆ ಓದಲಾಗುವುದೇ ಇಲ್ಲ. ಇದನ್ನು ಜೀರ್ಣಿಸಿಕೊಂಡು ಮುಂದಿನ ಕಥೆಗೆ ಹೋಗಬೇಕಾದರೆ ಸ್ವಲ್ಪ ವಿರಾಮ ಬೇಕಾಗಬಹುದು. ಅಷ್ಟೊಂದು ಭಾರವಾಗಿರುವ ಆರ್ದತೆಯ ಮೋಡವಿದು.ಇಲ್ಲಿನ ಮಂದಾಕಿನಿಯ ತೊಳಲಾಟಕ್ಕೆ ಒಂದು ಪ್ರಾಕ್ಟಿಕಲ್ ಅಂತ್ಯವನ್ನು ನೀಡಿದ್ದಾರೆ. ಇದೊಂದು ಕಥೆಗಾದರೂ ಪುಸ್ತಕವನ್ನು ಖರೀದಿಸಿ ಓದಿಕೊಳ್ಳಿ.

ನಂತರದ್ದು ಸ್ಮಾರಕ, ಕೆಲವೊಮ್ಮೆ ತೀರ ಹತ್ತಿರದವರ ತ್ಯಾಗ ನಮ್ಮ ಅರಿವಿಗೆ ಬರುವುದಿಲ್ಲ. ಮೇಲೆ ಕಾಣುವುದಕ್ಕಿಂತ ವಾಸ್ತವ ಬೇರೊಂದು ಇರಬಹುದು. ಅಂಥದೊಂದು ಗುಟ್ಟಿನ ಕಥೆ ಸ್ಮಾರಕ. ಅದರ ಒಂದು ಸಾಲು ಹೀಗಿತ್ತು , “ವಯಸ್ಸಾದ ಮೇಲೆ ಸುಖ- ದುಃಖ ಒಂದು ಭ್ರಮೆ, ಆದ್ರೆ ವಯಸ್ಸಲ್ಲಿ ಅದು ಗೊತ್ತಾಗಲ್ಲ ಆಗ ಸುಖಕ್ಕೆ ಒಂದು ಭ್ರಮೆ ಬೇಕು ಅದನ್ನ ಕೊಟ್ಟಿದೀನಿ” .

ಸಂಭವಾಮಿ ನಾಲ್ಕನೇ ಕಥೆ. ಇದೊಂದು ಸಂಪೂರ್ಣ ಕಥೆ ಅಂದರೆ ಜನನದಿಂದ ಮರಣದ ತನಕ ಈ ಮರ್ತ್ಯಲೋಕದಲ್ಲಿ ಸಂಸಾರ ಸಾಗರವನ್ನು ದಾಟುವ ಕಥೆ, ಅದರ ನಂತರದ ಕಥೆ. ತುಂಬಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಕರ್ಮವೆಂದರೆ ಬದುಕಿದ್ದಾಗ ಮಾಡುವ ಕರ್ಮ , ಸತ್ತ ಮೇಲೆ ಮಾಡುವ ಅಪರಕರ್ಮವಲ್ಲ ಎಂದು ಹೇಳುವ ಕಥೆಯಿದು.

ಸೇತುರಾಮರ ಪುಸ್ತಕಗಳಲ್ಲಿ, ನಾಟಕಗಳಲ್ಲಿ ಹೆಚ್ಚಾಗಿ ಸ್ತ್ರೀ ಪಾತ್ರಕ್ಕೆ ಮಹತ್ವ ಮತ್ತು ವಿಶ್ಲೇಷಣೆ. ಇಂತ ಒಂದು ಪಾತ್ರ ಹೊಂದಿರುವ ಕಥೆ ಕಾತ್ಯಾಯನಿ. ದುಃಖ ಮುಚ್ಚಿಟ್ಟುಕೊಂಡಷ್ಟೂ ಶಕ್ತಿ ಜಾಸ್ತಿ, ಬದುಕಲು ಆ ಶಕ್ತಿ ಬೇಕು ಎನ್ನುತ್ತಾ ದುಃಖ ಮುಚ್ಚಿಟ್ಟು ಹೋರಾಡಿದ ಕಥೆ ಕಾತ್ಯಾಯನಿ. ಇದೊಂತರ ನದಿಯ ಕಥೆ. ಅದೆಷ್ಟೋ ಗುಡ್ಡ, ಬೆಟ್ಟ,ಕಲ್ಲು, ಮುಳ್ಳು ಹಾದಿ ತುಳಿದು ಸಾಗರ ಸೇರುವ ನದಿಯಂತ ಹುಡುಗಿಯ ಕಥೆ. ಇಲ್ಲೊಂದು ಕೊನೆಯ ಮಾತಿದೆ. “ಪ್ರಪಂಚದ ಸುಖ ತ್ಯಜಿಸಿ ವಿರಕ್ತಿಯಲಿ ನಿಂತವಳನ್ನು ಅಕ್ಕ ಅಂದ್ವಿ , ಇವಳು ಬದುಕಿಗಂಟಿಕೊಂಡು ತನ್ನನ್ನು ತಾನು ತ್ಯಜಿಸಿ ನಿಂತಿದ್ದಾಳೆ , ಅಕ್ಕನ ಅಕ್ಕ”.

ಕೊನೆಯ ಕಥೆ ‘ನಾವಲ್ಲ’ . ಇದೊಂದು ಪುಟ್ಟ ಕಥೆಯಾದರೂ ಸ್ವಾರ್ಥವನ್ನು ತೋರಿಸುವ ಬಲಿಷ್ಠ ಚಿತ್ರಣ ಇದರಲ್ಲಿದೆ. ಒಟ್ಟಿನಲ್ಲಿ ಈ ಪುಸ್ತಕವೇ ಒಂದು ಚಿಕ್ಕ ಪಾತಾಳ! ಇಷ್ಟು ಆಳದಲ್ಲಿ ಮುಳುಗಿ ಎದ್ದು ಬಂದಾಗ ಸಮುದ್ರದಾಳದ ಅಪರಿಚಿತ ಮುತ್ತುಗಳನ್ನು ನೋಡಿದ ಅನುಭವವೇ ಆಗುತ್ತದೆ. ಒಳ್ಳೆಯ ಪುಸ್ತಕ, ಇನ್ನೂ ಹೆಚ್ಚಿನ ಪುಸ್ತಕಗಳು ಸೇತುರಾಮರ ಹರಿತ ಲೇಖನಿಯಿಂದ ಬರಲಿ. ಎಚ್,ಎಸ್,ವಿ ಮತ್ತು ಸಿ.ಎನ್.ಆರ್ ರ ಮುನ್ನುಡಿ ಬೆನ್ನುಡಿಗಳನ್ನು ಲೇಖಕರ ನುಡಿಯೊಂದಿಗೆ ಓದಲು ಮರೆಯದಿರಿ. ಎಲ್ಲಾ ಓದಿದ ಮೇಲೆ ಇಲ್ಲಿ ಅದನ್ನು ನೆನಪಿನ ಬುತ್ತಿಯಾಗಿ ಪಾರ್ಸೆಲ್ ಕೊಡುತ್ತಾರೆ.

ಈ ಪುಸ್ತಕ mybookadda.in ಲಿ ಆನ್ ಲೈನ್ ತರಿಸಿ ಕೊಳ್ಳಲು ಲಭ್ಯವಿದೆ , ಬೆಲೆ 100/-.

 

Manushree jois

manushreeksjois@gmail.com

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!