ಅಂಕಣ

ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆಯಲ್ಲ

ಈ ಲೇಖನವನ್ನು ಒಂದು ಸ್ವಗತದಿಂದಲೇ ಪ್ರಾರಂಭಿಸುತ್ತಿದ್ದೇನೆ, ಏನ್ರಿ ಕಾರ್ತಿಕ್ ನೀವು ಮಂಗಳೂರಿನವ್ರ ಎಂದು ನನ್ನ ಸಹದ್ಯೋಗಿಯೊಬ್ಬರು ಕೇಳಿದರು, ಮುಗುಳುನಗೆಯೊಂದಿಗೆ ನಮ್ಮ ತಾಯಿ ದಕ್ಷಿಣಕನ್ನಡವರು ಕಣ್ರೀ ಅಂದೇ, ಆಮೇಲೆ ನಿಮ್ಮ ವಿದ್ಯಾಭ್ಯಾಸ ಎಂದರು – ಹರಿಹರದ ಎಸ ಜೆ ವಿ ಪಿ ಕಾಲೇಜ್ನಲ್ಲಿ ಪದವಿ ತದನಂತರ ಬೆಂಗಳೂರಿನ PESIT ನಲ್ಲಿ ಸ್ನಾತಕೋತ್ತರ ಪದವಿ ಹೀಗೆ ಹೇಳಿ ಮುಗಿಸುವಷ್ಟರಲ್ಲಿ ಒಹೋ ಹರಿಹರ ದಾವಣಗೆರೆ, ಅದಕ್ಕ ನೋಡ್ರಿ ಒಳ್ಳೆ ಬೆಣ್ಣೆ ದೋಸೆ ಇದ್ದಂಗ ಇದ್ದೀರಾ ಎಂದು ಹೇಳಿದರು, ಆಗ ನಾನಂದುಕೊಂಡದ್ದು ಹತ್ತು ಹಲವು ಯಶೋಗಾಥೆಗಳಿಗೆ ವೇದಿಕೆಯಾಗಬಲ್ಲ ಸಾಮರ್ಥ್ಯವಿರುವ ದಾವಣಗೆರೆ ಜನಮಾನಸದಲ್ಲಿ ಬೆಣ್ಣೆ ದೋಸೆಯಾಚೆಗೇಕೆ ಗುರುತಿಸಿಕೊಳ್ಳಲಿಲ್ಲವೇಕೆ ಎಂದು, ಅದೇನೇ ಇರಲಿ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ದಾವಣಗೆರೆ ಕಳೆದು ಹೋದ ಹಿರಿಮೆ ಗರಿಮೆಯನ್ನು ಮತ್ತೆ ಪ್ರತಿಷ್ಠಾಪಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ ಎಂದೆನಿಸಿದರೆ ಅತಿಶಯೋಕ್ತಿಯಲ್ಲ.

ಚಾಳುಕ್ಯರಾಳ್ವಿಕೆಯಲ್ಲಿ ಚಾಳುಕ್ಯರು ಆಗಾಗ ಸವಾರಿಗೆ ಬಂದಾಗ ದಣಿವಾರಿಸಿಕೊಳ್ಳಲು ದಾವಣಗೆರೆಯಲ್ಲಿ ತಂಗುತ್ತಿದ್ದರಂತೆ, ಹಾಗೆ ತಂಗುವಾಗ ದಣಿವಾರಿಸಿಕೊಳ್ಳಲು ಒಂದು ಕೆರೆಯನ್ನು ಕಟ್ಟಿಸಿದರು ಆ ಕೆರೆ ದಣಿವಿನ ಕೆರೆ ಎಂದು ಪ್ರಸಿದ್ಧಿ ಪಡೆಯಿತು. ಕಾಲಕ್ರಮೇಣ ದಣಿವಿನ ಕೆರೆ ದಾವಣಗೆರೆಯಾಗಿರಬಹುದು ಎಂಬ ನಂಬಿಕೆ, ಆದರೆ ಈ ವಾದಕ್ಕೆ ಪುಷ್ಠಿ ನೀಡುವ ಕುರುಹುಗಳಿಲ್ಲ , ಇನ್ನೊಂದು ವಾದವೆಂದರೆ “ದೇವನಗರಿ” ಎಂದು ಕರೆಯಲ್ಪಡುತ್ತಿದ್ದ ಪ್ರದೇಶ ಕಾಲಕ್ರಮೇಣ ದಾವಣಗೆರೆಯಾಯಿತು ಎಂದು, ಹಾಗೆ ನೋಡಿದರೆ ದಾವಣಗೆರೆ ಯಾರು ಊಹೆಯು ಮಾಡದಿದ್ದ ಕಾಲದಲ್ಲಿಯೇ ಅಂದರೆ ೧೮೭೦ರಲ್ಲಿಯೇ ಪುರಸಭೆಯ ಸ್ಥಾನಮಾನ ಪಡೆದುಕೊಂಡಿತ್ತು ಎಂದರೆ ನೀವು ನಂಬಲೇಬೇಕು. ಭೌಗೋಳಿಕವಾಗಿ ದಾವಣಗೆರೆ ಕರ್ನಾಟಕದ ಕೇಂದ್ರಬಿಂದು, ಅಂದರೆ ಮಧ್ಯಭಾಗದಲ್ಲಿದೆ, ಇದೇ ಕಾರಣಕ್ಕಾಗಿ ಹಿಂದೊಮ್ಮೆ ದಾವಣಗೆರೆಯನ್ನು ಕರ್ನಾಟಕದ ರಾಜಧಾನಿಯನ್ನಾಗಿಸಬೇಕು ಎಂಬ ಪ್ರಯತ್ನ ನಡೆದಿತ್ತಂತೆ ಎಂದು ಭಾರತೀಯ ಲೋಕ ಸೇವಾ ಅಧಿಕಾರಿಯೊಬ್ಬರು ಉಲ್ಲೇಖಿಸಿದ ನೆನಪು ಇನ್ನು ಹಸಿಯಾಗಿದೆ. ಆದರೆ ಆ ಭಾಗ್ಯ ದಾವಣಗೆರೆಗೆ ಒಲಿಯಲಿಲ್ಲ, ಈ ದಿನಕ್ಕೂ ದಾವಣಗೆರೆಯ ಜನತೆ ದಾವಣಗೆರೆಯನ್ನು ಮುಂದೊಂದು ದಿನ ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿಸಿಯಾರು ಎಂಬ ಪುಟ್ಟ ಭರವಸೆಯಲ್ಲಿದ್ದಾರೆ, ಹಾಗೆ ಮಾಡುವುದು ಸರಿಯೋ ತಪ್ಪೋ ಎನ್ನುವ ವಿಚಾರ ಬೇರೆ, ದಾವಣಗೆರೆ ಪ್ರಮುಖವಾಗಿ ಬಯಲು ಸೀಮೆಯಾಗಿ ಗುರುತಿಸಿಕೊಂಡರು ಅದರ ಪಕ್ಕದಲ್ಲಿ ಸಹ್ಯಾದ್ರಿಯ ತಪ್ಪಲಂಚಿನ ಮಲೆನಾಡಿನ ಶಿವಮೊಗ್ಗೆ, ಚಿಕ್ಕಮಗಳೂರು, ಇತ್ತ ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹೀಗೆ ವಿವಿಧ ಸಂಸ್ಕೃತಿಯ ಜಿಲ್ಲೆಗಳನ್ನು ತನ್ನ ಸುತ್ತ ಸುತ್ತುವರಿಸಿಕೊಂಡು ತನ್ನದೇ ಸ್ವಂತ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ, ಹೀಗೆ ವ್ಯವಿಧ್ಯತೆಯಿಂದ ಸುತ್ತುವರಿದಿರುವುದರಿಂದಲೇ ಇಲ್ಲಿ ನಿಮಗೆ ಉತ್ತರದ ಭಕ್ರಿ (ರೊಟ್ಟಿ), ಎಣಗಾಯಿ ಪಲ್ಯ ಹಾಗು ದಕ್ಷಿಣದ ರಾಗಿ ಮುದ್ದೆಯು ಸಿಗುತ್ತದೆ.

ಒಂದು ಕಾಲದಲ್ಲಿ ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದಾವಣಗೆರೆಯಲ್ಲಿ ಇಂದು ಒಂದೇ ಒಂದು ಕಾಟನ್ ಮಿಲ್ ಇಲ್ಲ. ಪ್ರಖ್ಯಾತ ದಾವಣಗೆರೆ ಕಾಟನ್ ಮಿಲ್ ಇಂದು ಕೇವಲ ಇತಿಹಾಸವಷ್ಟೇ, ೧೯೮೦ ರ ವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಬಟ್ಟೆ ಗಿರಣಿಗಳು ಹೇಳ ಹೆಸರಿಲ್ಲದಂತೆ ಹಿನ್ನಲೆಗೆ ಹೊರಟು ಹೋದವು, ಈಗ ದಾವಣಗೆರೆ ಎಂಬುದು ಕೇವಲ ಕೃಷಿ ಹಾಗು ವಾಣಿಜ್ಯ ಕೇಂದ್ರವಾಗಿ ಬೆಳೆದಿದ್ದರು ಇತರೆ ನಗರಗಳನ್ನು ಮೀರಿಸಿ ಬೆಳೆಯುವ ತಾಕತ್ತಿದ್ದರು ಹಾಗೆ ಬೆಳೆಯಾಗಲಿಲ್ಲ ಎಂಬ ಕೊರಗು ದಾವಣಗೆರೆ, ಹರಿಹರ, ಹೊನ್ನಾಳಿ, ಚೆನ್ನಗಿರಿ, ಜಗಳೂರಿನ ಜನತೆಗೆ ಒಂದಿಲ್ಲ ಇನ್ನೊಂದು ರೂಪದಲ್ಲಿ ಸದಾ ಕಾಡುತ್ತದೆ. ಕಾರ್ಖಾನೆಗಳಿಗಂತೂ ಹೇಳಿ ಮಾಡಿಸಿದ ಜಾಗ ದಾವಣಗೆರೆ, ಇತರೆ ವಾಣಿಜ್ಯ ನಗರಗಳೊಂದಿಗೆ ಸಂಪರ್ಕಕ್ಕೆ ಕೂಡ ಹೇಳಿ ಮಾಡಿಸಿದ ತಾಣ ದಾವಣಗೆರೆ, ದಾವಣಗೆರೆಯಿಂದ ಕೇವಲ ಹತ್ತು ಕಿ ಮೀ ಸಾಗಿ ಬಂದರೆ ತುಂಗಭದ್ರೆಯ ಸಮೃದ್ಧ ತಪ್ಪಲು, ಈ ತುಂಗಭದ್ರೆ ಹರಿಹರದಲ್ಲಿ ಹರಿದರೂ ಬೇಸಿಗೆಯಲ್ಲಿ ಹರಿಹರದ ಜನತೆಯ ನೀರಿನ ಹಾಹಾಕಾರ ಹೇಳಲಾತೀತ ಬರೆದರೆ ಅದೊಂದು ಪಿ ಎಚ್ ಡಿ ಗೆ ಯೋಗ್ಯದ ಪ್ರಬಂಧವಾಗಬಹುದು. ಅದಿರಲಿ ಹೀಗೆ ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂಬ ಹೆಗ್ಗಳಿಕೆಯನ್ನು ಕಳೆದುಕೊಂಡು ನಿಧಾನವಾಗಿ ದಾವಣಗೆರೆ ಮುಖ ಮಾಡಿದ್ದೂ ಕೃಷಿ ಹಾಗು ವಾಣಿಜ್ಯ ನಗರವಾಗುವತ್ತ. ಹೀಗೆ ಸಾಗುತ್ತ ಮುಂದೆ ಹೋಗಿ ಲಕ್ಷ್ಮಿ ಕಟಾಕ್ಷದೊಂದಿಗೆ ಸರಸ್ವತಿಯ ಕೃಪೆಯು ಇರಲಿ ಎಂದು ಹಲವು ಶಿಕ್ಷಣ ಸಂಸ್ಥೆಗಳು ಬೆಳೆಯಲು ಅನುಕೂಲವಾದ ವಾತಾವರಣವನ್ನು ಒದಗಿಸಿತು, ಅದರ ಫಲವಾಗಿ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬೆಳೆದು ಹೆಮ್ಮರವಾಗಿ ಹಲವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ.

ಮೊನ್ನೆ ಮೊನ್ನೆಯಷ್ಟೇ ದಾವಣಗೆರೆಗೆ ಸ್ಮಾರ್ಟ್ ಸಿಟಿಯಾಗುವ ಯೋಗ ಒದಗಿಬಂದಾಗ ಹರಿಹರ ದಾವಣಗೆರೆಯಲ್ಲಿರುವವರಷ್ಟೇ ಅಲ್ಲದೆ, ಹರಿಹರ ದಾವಣಗೆರೆಯೊಂದಿಗೆ ಅವಿನಾಭಾವ ಸಂಬಂಧವನ್ನಿಟ್ಟುಕೊಂಡವರೆಲ್ಲ ಹಿರಿಹಿರಿ ಹಿಗ್ಗಿದರು, ಅದೇ ರೀತಿ ಸ್ಮಾರ್ಟ್ ಸಿಟಿ ಯೊಂದಿಗೆ IT ಪಾರ್ಕ್ ಸ್ಥಾಪನೆಗೆ ಅವಕಾಶ ಒದಗಿ ಬಂದಿದೆ ಎಂದಾಗ ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದೆನಿಸಿತು. ಆದ್ರೆ ಈ IT ಪಾರ್ಕ್ ಹತ್ತರೊಳಗೆ ಮತ್ತೊಂದು ಎಂಬತಾಗದೆ, ಅಲ್ಲದೆ ಕೆಲವೊಂದು ಪ್ರದೇಶದಲ್ಲಿ ಉದ್ಘಾಟನೆಯಾಗಿ ಪಾಳು ಬಿದ್ದಿರುವ ಪಾರ್ಕ್’ನಂತಾಗಲು ಶತಾಯಗತಾಯ ಅವಕಾಶಕೊಡಬಾರದು. ಹೀಗೆ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ಪ್ರಭಂದಕರ ಬಳಿ “ಎಜುಕೇಟಿಂಗ್ ಆನ್ ಡಿಜಿಟಲ್ ಇನಿಟಿಯೇಷನ್” ಬಗ್ಗೆ ಮಾತನಾಡುವಾಗ ಅವರ ಕಾರ್ಯವೈಖರಿಯನ್ನು ಕಂಡು ಸರ್ಕಾರೀ ಸಂಸ್ಥೆಯೊಂದು ಹೀಗೂ ಕೆಲಸ ಮಾಡಬಹುದೇ ಎಂದು ಕೇಳಿದಾಗ ಅವರಿಂದ ಬಂದ ಉತ್ತರ “ಎಜುಕೇಟಿಂಗ್ ಆನ್ ಡಿಜಿಟಲ್ ಇನಿಟಿಯೇಷನ್” ನಮ್ಮ ಪೂರ್ಣಾವಧಿ ಕೆಲಸವಲ್ಲ ಇದು ಕೇಂದ್ರ ಸರ್ಕಾರ ವಹಿಸಿರುವ ಹೆಚ್ಚುವರಿ ಕೆಲಸ ನಮ್ಮದೇನಿದ್ದರೂ IT ಪಾರ್ಕ್ ಸ್ಥಾಪಿಸಿ ಕುಂದು ಕೊರತೆಗಳಿಲ್ಲದಂತೆ ನೋಡಿಕೊಳ್ಳುವುದು ಎಂದರು. ಅದೇ ರೀತಿ ಸಂತಸದ ಸುದ್ದಿಯೆಂದರೆ ದಾವಣಗೆರೆಯಲ್ಲಿ ಸ್ಥಾಪನೆಯಾಗಲಿರುವ I T ಪಾರ್ಕ್ ಮೇಲುಸ್ತುವಾರಿ “ಕೇಂದ್ರ ಸರ್ಕಾರದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯ”ದಡಿಯಲ್ಲಿಯೆ ಇದಕ್ಕೆ ಪೂರಕವಾಗಿ ದಾವಣಗೆರೆಯ ಉಭಯ ಪಕ್ಷದ ನಾಯಕರುಗಳು ಯಾವ ಪಕ್ಷವೇ ಅಧಿಕಾರದಲ್ಲಿರಲಿ ದಾವಣಗೆರೆಗೆ ಸಲ್ಲಬೇಕಾದ ಅಭಿವೃದ್ಧಿ ಯೋಜನೆಗಳನ್ನು ಮಾಡಿಸಿಕೊಳ್ಳುವ ಕಲೆ ಕರಗತಗೊಳಿಸಿಕೊಂಡ್ದಿದಾರೆ, ಇವರೆಲ್ಲರೂ ಪಕ್ಷಭೇದ ಮರೆತು ಸಾಥ್ ಕೊಟ್ಟರೆ ದಾವಣಗೆರೆಯ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿತೆಂದೇ ಲೆಕ್ಕ. ಆದ್ದರಿಂದಲೇ ನಾನು ಹೇಳಿದ್ದು ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆ,ಖಾರ ಮಂಡಕ್ಕಿ ಹಾಗು ಮಿರ್ಚಿ ಭಜಿ ಯೊಂದಿಗೆ ಅದರಾಚೆಗೂ ಬೆಳೆಯಬೇಕೆಂದು ನಿಮಗೂ ಹಾಗನ್ನಿಸಿರಬಹುದು ಅಲ್ಲವೇ?

ಕಾರ್ತಿಕ್ ಎಸ್ ಬಾಪಟ್
karthik.bapat@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!