“ಅಬ್ಬಾ.. ಎಂಥಾ ಸೆಖೆ. ಒಮ್ಮೆ ಮಳೆರಾಯನ ಆಗಮನವಾದ್ರೆ ಸಾಕಾಗಿದೆ. ಹಗಲು ರಾತ್ರಿ ಹಾಸ್ಟೆಲ್ ಒಳಗೆ ಕುಳಿತ್ಕೊಳ್ಳೋಕೂ ಆಗಲ್ಲ, ಹೊರಗೆ ಹೋದ್ರೂ ಬಿರು ಬಿಸಿಲು. ಹೇಗಪ್ಪಾ ಈ ಬೇಸಗೆಯನ್ನು ಕಳೆಯೋದು? ಮೈ ಮೇಲಿನ ಬಟ್ಟೆಗಳನ್ನೂ ಬಿಚ್ಚಿ ಬಿಡೋಣವೆನಿಸುತ್ತೆ.” ಇವು ನಮ್ ಹಾಸ್ಟೆಲ್ ಹುಡ್ಗೀರ ಬಾಯಿಂದ ಸುಲಲಿತವಾಗಿ ಉರುಳೋ ಮಂತ್ರಗಳು. ಇದನ್ನೆಲ್ಲಾ ನೋಡ್ತಿದ್ರೆ ಹೇಗಪ್ಪಾ ಮುಂದೆ ಅನ್ಸೋದಂತೂ ಸತ್ಯ.
ಹೌದು. ಮಳೆಗಾಲದಲ್ಲಾದ್ರೂ ಛತ್ರಿ ಬಿಟ್ಟು ಕಾಲೇಜಿಗೆ ಹೋಗ್ಬಹುದು, ಆದ್ರೆ ಬೇಸಗೆಯಲ್ಲಲ್ಲ ಅನ್ನೋ ಸ್ಥಿತಿ ಈಗ ನಿರ್ಮಾಣವಾಗಿದೆ. ಎಲ್ಲೋ ಒಂದೆರಡು ಹನಿ ಉರುಳೋ ಮಳೆಗಾಲ, ಬೆಂಕಿಯಂತೆ ಸುಡೋ ಬಿಸಿಲಿನೊಂದಿಗೆ ಸೆಖೆಗಾಲ. ಸಾಲದೆಂಬಂತೆ ಬಿಸಿಲ ಬೇಗೆಯೊಂದಿಗೆ ಸೋರಿಯಾಸಿಸ್ನಂತಹ ರೋಗಗಳ ಲಗ್ಗೆ ಜನರನ್ನು ಇನ್ನಷ್ಟು ಕಂಗೆಡಿಸಿರೋದೂ ಹೌದು. ಇನ್ನು ಮೈಗ್ರೇನ್ ಇರೋರ ಕಥೆ ಕೇಳ್ಲೇ ಬೇಡಿ. ದಿನಂಪ್ರತಿ ಅಲ್ಲಿ ನೀರಿಲ್ಲ. ಈ ಹೊಳೆಯಲ್ಲೂ ನೀರು ಬತ್ತಿದೆ, ಬೆಳೆ ನಾಶದಿಂದ ರೈತರ ಆತ್ಮಹತ್ಯೆ, ಕೊಳಚೆ ನೀರು ಕುಡಿದು ಜೀವಿಸುತ್ತಿರುವ ಜನಸಾಮಾನ್ಯರು ಎಂಬಿತ್ಯಾದಿ ವಾರ್ತೆಗಳು ಕಿವಿಗಪ್ಪಳಿಸ್ತಿದ್ರೆ ಸಂಕಟವಾಗುತ್ತೆ. ಇನ್ನು ಹಗಲು ರಾತ್ರಿಯೆನ್ನದೆ ಇರುವ ನಿರನ್ನೇ ಕಷ್ಟಪಟ್ಟು ತೋಟದ ಮೂಲೆ ಮೂಲೆಗೂ ಸಿಂಪಡಿಸೋ ರೈತರ ಪಾಡು ಆ ದೇವರಿಗೇ ಪ್ರೀತಿ.
ಅಷ್ಟಕ್ಕೂ ಹಿಂದೆ ಬೇಸಗೆಯ ಅನುಭವವೇ ಆಗದಿದ್ದ ಜನರಿಗೆ ಈಗೇಕೆ ಇದು ಮಹಾಮಾರಿಯಾಗಿ ಪರಿಣಮಿಸಿದೆ? ಇದಕ್ಕೆಲ್ಲಾ ಕಾರಣನಾರು? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡದೇ ಬಿಟ್ಟಿಲ್ಲ. ಕಾರಣ ‘ತಾನೇ’ ಎಂದು ಮನುಷ್ಯ ಅರಿತಿದ್ದು ತನ್ನ ತಪ್ಪನ್ನು ತಿದ್ದೊಕೊಳ್ಳೋ ಗೋಜಿಗಂತೂ ಹೋಗದಿರೋದು ವಿಪರ್ಯಾಸವೇ ಸರಿ.
ಹೌದು. ನಾಶವಾಗ್ತಿರೋ ಕಾಡು, ತಲೆಯೆತ್ತಿರೋ ಕಟ್ಟಡಗಳು, ಹೆಚ್ಚಾದ ಪ್ಲಾಸ್ಟಿಕ್ ಮುಂತಾದ ಮಾಲಿನ್ಯಕಾರಕ ವಸ್ತುಗಳ ಬಳಕೆ… ಇವೆಲ್ಲಾ ನಿಸರ್ಗದ ಸ್ವಾಸ್ಥ್ಯಕ್ಕೆ ಸವಾಲೊಡ್ಡುತ್ತಿವೆ. ಎಲ್ಲಕ್ಕೂ ಕಾರಣ ಮಾನವನಲ್ಲದಿರಬಹುದು. ಆದರೆ ಈ ಪ್ರಾಕೃತಿಕ ಬದಲಾವಣೆಗಳಲ್ಲಿ, ಕಂಡು ಕೇಳರಿಯದ ರೋಗಗಳ ಹೆಚ್ಚಳದಲ್ಲಿ, ಅಷ್ಟೇ ಯಾಕೆ ಭೂಮಿಯ ರಕ್ಷಾ ಕವಚವಾದ ಓಝೋನ್ ಪದರದ ತೆಳುವಾಗುವಿಕೆಯಲ್ಲೂ ಮಾನವನ ಕೊಡುಗೆಯೇ ಹೆಚ್ಚು.
ದೈಹಿಕ ಶ್ರಮವಿಲ್ಲದ ಯಾಂತ್ರಿಕ ಬದುಕು, ಇದಕ್ಕಾಗಿ ಆತ ಆವಿಷ್ಕರಿಸ್ತಿರೋ ರೆಫ್ರೀಜರೇಟರ್ ಇನ್ನೂ ಹಲವು ಯಂತ್ರಗಳು, ಇವೆಲ್ಲವುಗಳಿಂದ ನಾಶವಾಗ್ತಿರೋದು ಮಾನವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮಾತ್ರವಲ್ಲ, ಪರಿಸರವೂ ಅನ್ನೋದನ್ನು ಮಾನವ ಅರಿಯಬೇಕಿದೆ. ಇಷ್ಟೆಲ್ಲಾ ವಿಧಗಳಲ್ಲಿ ಧರೆಯ ಮೇಲೆ ಅತ್ಯಾಚಾರಗಳಾಗ್ತಿದ್ರೂ ಈ ಧಾತ್ರಿ ಹೇಗೆ ತಾನೇ ಸಹಿಸಿಯಾಳು? ಬಹುಶಃ ಆಕೆಯ ನಿಟ್ಟುಸಿರೇ ಇಂದು ಬಿಸಿಲ ಬೇಗೆಯಾಗಿ ನಮ್ಮನ್ನ ಸುಡ್ತಿದೆ. ಹಾಗಾದ್ರೂ ಆ ತಾಯಿಯ ನೋವನ್ನು ಮಕ್ಕಳು (ಜನ) ಅರ್ಥೈಸಿಕೊಳ್ತಾರೆಂಬ ಹುಚ್ಚು ಭರವಸೆ/ ಭ್ರಮೆ ಆಕೆಯದು. ಆದ್ರೆ ಮಾನವ ಮಾತ್ರ ತನಗೇನೂ ಸಂಬಂಧವಿಲ್ಲವೆನ್ನುವಂತೆ ತನ್ನ ಚಾಳಿಯನ್ನು ಮುಂದುವರೆಸಿಕೊಂಡು ಹೋಗ್ತಿರೋದು ಆತಂಕಕರ ವಿಚಾರ. ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ಮಾತು ಈ ಕಾಲಕ್ಕೆ ಸರಿಯಾಗಿ ಅನ್ವಯಿಸುತ್ತೆ.
ಮಾಲಿನ್ಯ ನಿವಾರಣೆಗೆ ಸಮ ಬೆಸ ಸಂಖ್ಯೆ ವಾಹನಗಳ ಚಾಲನೆ, ಸ್ವಚ್ಛ್ ಭಾರತ್, ನಮಾಮಿ ಗಂಗೇ.. ಅಬ್ಬಾ! ಅದೆಷ್ಟು ನೀತಿ ನಿಯಮಗಳನ್ನು ನಮ್ಮ ಸರ್ಕಾರ ತಂದಾಯ್ತು. ಆದ್ರೆ ‘ನಾಯಿ ಬಾಲ ಡೊಂಕೇ’ ಎಂಬಂತೆ ಕಸ ಹೆಕ್ಕಲು ಪ್ರಾರಂಭಿಸಿ ಕೊನೆ ತಲುಪಲು ಪರಸೊತ್ತಿಲ್ಲ, ಮತ್ತೆ ಕಸಗಳ ರಾಶಿ ಬೀಳೋಕೆ ಪ್ರಾರಂಭವಾಗಿರತ್ತೆ. ಹೀಗಿರೋವಾಗ ಪರಿಸರ ಸಂರಕ್ಷಣೆಯ ಹೊಣೆ ಹೊತ್ತಿರೋ ಉತ್ಸಾಹಿಗಳಿಗೂ ‘ವ್ಯರ್ಥಶ್ರಮ’ವೆಂಬ ಅನಿಸಿಕೆ ಪ್ರಾರಂಭವಾಗಿ ತಮ್ಮ ಕೆಲಸವನ್ನಲ್ಲೇ ಕೈ ಬಿಡ್ತಿರೋದೂ ಹೌದು.
ಪ್ರತೀ ವರ್ಷ ವಿಶ್ವ ಪರಿಸರದಿನವೆಂಬ ಕಾರಣಕ್ಕೆ ಎಲ್ಲೆಲ್ಲೂ ಗಿಡ ನೆಡೋ ಕಾರ್ಯಕ್ರಮಗಳನ್ನ ಹಮ್ಮಿಕೊಳ್ತಿದ್ರೂ, ನೆಟ್ಟ ಸಸಿಯನ್ನೂ ಕಿತ್ತೆಸೆಯುತ್ತಿರೋರು ಆ ಜನಗಳೇ ಅನ್ನೋದು ವಿಪರ್ಯಾಸದ ವಿಷಯ. ಇವನ್ನೆಲ್ಲಾ ನೋಡ್ತಿದ್ರೆ ‘ಪರಿಸರ ರಕ್ಷಣೆ ನಮ್ಮ ಹೊಣೆ’ ಅನ್ನೋ ಕೂಗು ಜೂನ್ 5ಕ್ಕೆ ಮಾತ್ರ ಸೀಮಿತವೇ? ಎನ್ನೋ ಸಂಶಯ ಮೂಡತ್ತೆ. ವನಸಿರಿಯೆಂಬ ದೇವರ ಕೊಡುಗೆಯನ್ನು ತಿರಸ್ಕರಿಸಿ ಸಾಗ್ತಿರೋ ಮಾನವನಿಗೇಕೆ ತನ್ನ ಆವಿಷ್ಕಾತಗಳೇ ನಿಸರ್ಗವನ್ನು ನಾಶ ಮಾಡ್ತಿದೆ ಎಂದು ಅರ್ಥವಾಗ್ತಿಲ್ಲ? ಇಷ್ಟಿದ್ರೂ ಆತನಿಗೆ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲೇಕೆ ಹಿಂಜರಿಕೆ?
ಹಚ್ಚ ಹಸಿರು ನಿಸರ್ಗ, ಹಕ್ಕಿಗಳ ಚಿಲಿಪಿಲಿ, ಅಳಿಲು-ಮೊಲ ಮುಂತಾದ ಪುಟಾಣಿ ಸುಂದರ ಪ್ರಾಣಿಗಳ ಆಟ, ಓಡಾಟ, ಜುಳು ಜುಳು ಹರಿವ ನದಿ, ಧುಮ್ಮಿಕ್ಕೋ ಝರಿ ಇವೆಲ್ಲದರ ಸೌಂದರ್ಯವನ್ನು ಆಸ್ವಾದಿಸೋ ಮಾನವನೇ ಇವೆಲ್ಲದರ ವಿನಾಶಕ್ಕೆ ತಾನೇ ಕಾರಣನೆಂದು ತಿಳಿದಿದ್ರೂ ಏಕೆ ತನ್ನ ತಪ್ಪನ್ನು ತಿದ್ದಿಕೊಳ್ಳೋ ಆಲೋಚನೆ ಮಾಡ್ತಿಲ್ಲ ಅನ್ನೋದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಹಾಗಾದ್ರೆ ಸುಂದರ್ ಲಾಲ್ ಬಹುಗುಣರಂತವರ ಹೋರಾಟ, ಸಾಲು ಮರದ ತಿಮ್ಮಕ್ಕನ ಶ್ರಮ ವ್ಯರ್ಥವೇ?
ಆಧುನೀಕರಣದ ಗೋಜಿಗೆ ಸಿಲುಕಿ, ವೇಗದ ಜೀವನಕ್ಕೆ ಒಗ್ಗಿ ಓಡ್ತಾ ಇರೋ ಮಾನವಗೆ ಒಂದಿಷ್ಟೂ ಮನಃಶಾಂತಿಯಿಲ್ಲದೇ ಸ್ವಚ್ಛ ವಾಯು ಸೇವನೆಗೆ ಪಾರ್ಕ್ಗಳ ಮೊರೆ ಹೋಗ್ತಿದ್ರೂ ಅಳಿದುಳಿದ ಒಂದೆರಡು ಮರಗಳನ್ನೂ ಕಡಿಯುತ್ತಿರೋ ಆತನಿಗೇಕೆ ತಾನು ಸಾಗ್ತಿರೋದು ವಿನಾಶದ ಅಂಚಿನತ್ತ ಎಂದು ಅರ್ಥವಾಗ್ತಿಲ್ಲ? ಇನ್ನಾದರೂ ಸುಖಕರ ಜೀವನ, ಸುಂದರ ನಿಸರ್ಗದ ರಕ್ಷಣೆಯೆಡೆಗೆ ಆತನ ಚಿತ್ತ ಹರಿಯಲಿ ಎಂಬುದೇ ನನ್ನ, ನಮ್ಮೆಲ್ಲರ ಆಸೆ.
ಶುಭಶ್ರೀ ಕುಂಟಾರು
shubhashreekj@gmail.com