ಕಳೆದ ವರುಷ, ಭಾರತದ ವಾಯುಸೇನೆಯ ಪ್ರಥಮ ಮಹಿಳಾ ಫೈಟರ್ ಸ್ಕಾಡ್ರನ್’ಗಳಾಗಿ ಆಯ್ಕೆಯಾಗಿ ಸುದ್ದಿಯಲ್ಲಿದ್ದ ಮೂವರು ಮಹಿಳೆಯರು ಮತ್ತೆ ಇನ್ನೊಂದು ಸಾಧನೆಯ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ.
ಏನಿದು ಹೊಸ ಸಾಧನೆ?
ಅವನಿ ಚತುರ್ವೇದಿ, ಮೋಹನಾ ಸಿಂಗ್, ಭಾವನಾ ಕಾಂತ್ ಈಗ ವೈಮಾನಿಕ ಯುದ್ಧ ತರಬೇತಿಯಲ್ಲಿ ತೊಡಗಿದ್ದಾರೆ; ಪಶ್ಚಿಮ ಬಂಗಾಳದ ಕಲೈಕುಂದಾ ಏರ್’ಬೇಸ್’ನಲ್ಲಿ ಇವರಿಗೆ ತರಬೇತಿ ಈಗಾಗಲೇ ಆರಂಭವಾಗಿದೆ. ಈ ಮೂಲಕ ವೈಮಾನಿಕ ಯುದ್ಧಕ್ಕೆ ತರಬೇತಿ ಪಡೆದು ಹೊರಬರಲಿರುವ ಮೊದಲ ಮಹಿಳಾ ತಂಡವೂ ಇವರೇ ಆಗಲಿದ್ದಾರೆ.
ಈ ಕುರಿತಾಗಿ “ಇಂಡಿಯನ್ ಡಿಪ್ಲೊಮೆಸಿ” ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್’ನಲ್ಲಿ ಟ್ವೀಟ್ ಮಾಡಿದೆ.
ಈ ಮೊದಲು ೨೦೧೬ರಲ್ಲಿ, ಶ್ರೀ ಮನೋಹರ್ ಪರಿಕ್ಕರ್ ರಕ್ಷಣಾ ಮಂತ್ರಿಗಳಾಗಿದ್ದಾಗ ದುಂಡಿಗಾಲ್ ಏರ್’ಬೇಸ್ ಅಕಾಡೆಮಿಯಲ್ಲಿ ನಡೆದ ಗ್ರಾಜ್ಯುಯೇಷನ್ ಪೆರೇಡ್ ಬಳಿಕ ಈ ಮೂವರನ್ನೂ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು.
ಕರ್ತವ್ಯಕ್ಕೆ ನಿಯೋಜಿಸುವ ಮೊದಲು, ಬೀದರ್’ನಲ್ಲಿರುವ ಏರ್’ಫೋರ್ಸ್ ಸ್ಟೇಷನ್ ಅಲ್ಲಿ ನಡೆದ ‘Hawk Advanced Jet Trainer’ ತರಬೇತಿಯಲ್ಲೂ ಇವರು ಭಾಗವಹಿಸಿದ್ದರು. ಇವರ ಸಧ್ಯದ ಸಾಧನೆಯ ಮೈಲುಗಲ್ಲಿನ ಬಗ್ಗೆ ಏರ್’ಫೋರ್ಸ್ ಅಧಿಕಾರಿಗಳು “ಈ ಮೂವರು ಮಹಿಳಾ ಅಧಿಕಾರಿಗಳು ಈಗ ತಮ್ಮ ವೃತ್ತಿಜೀವನದ ಎರಡನೆಯ ಮೆಟ್ಟಿಲೇರುತ್ತಿದ್ದಾರೆ. ಈಗ ವೈಮಾನಿಕ ಯುದ್ಧದ ತರಬೇತಿ ಪಡೆಯುತ್ತಿದ್ದಾರೆ. ವಿಮಾನಗಳ ನಡುವಿನ ಹೊಡೆದಾಟ ಹಾಗೂ ಭೂಮಿ-ವಾಯು ಮಾರ್ಗಗಳ ನಡುವೆ ಯುದ್ಧ ಮಾಡುವ ತರಬೇತಿಯನ್ನು ಅವರಿಗೆ ನೀಡಲಾಗುತ್ತಿದೆ” ಎನ್ನುತ್ತಾರೆ.
ಅಂದಹಾಗೆ ಇವರೆಲ್ಲಾ ಅತ್ಯುತ್ತಮ ಶಿಕ್ಷಣ ಪಡೆದವರೇ:
ಮಧ್ಯಪ್ರದೇಶದ ಅವನಿ ಚತುರ್ವೇದಿ, ಜೈಪುರದ ಬಾಣಸ್ತಾಲಿ ಯುನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ಬಿ.ಟೆಕ್ ಪದವೀಧರೆ.
ಮೋಹನಾ ಸಿಂಗ್, ಅಮೃತಸರದ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್’ಮೆಂಟ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ ಸಂಸ್ಥೆಯಿಂದ ಎಲೆಕ್ಟ್ರಾಸಿಕ್ಸ್ ಮತ್ತು ಕಮ್ಯುನಿಕೇಷನ್ ಅಲ್ಲಿ ಬಿ.ಟೆಕ್ ಪದವೀಧರೆ.
ಬಿಹಾರ ಮೂಲದ ಭಾವನಾ ಕಾಂತ್ ನಮ್ಮದೇ ಬೆಂಗಳೂರಿನ ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಡಿಕಲ್ ಇಲೆಕ್ಟ್ರಾನಿಕ್ಸ್ ಅಲ್ಲಿ ಬಿ.ಇ ಪದವಿ ಪಡೆದಿರುತ್ತಾರೆ.
ಪ್ರಸ್ತುತವಾಗಿ ನಡೆಯುತ್ತಿರುವ ವೈಮಾನಿಕ ಯುದ್ಧ ತರಬೇತಿ ನಡೆದ ಬಳಿಕ “ಆಪರೇಷನಲ್ ಫ಼್ರಂಟ್’ಲೈನ್ ಸ್ಕಾಡ್ರನ್ ಆಫ್ ಪ್ಲೇನ್” ಹುದ್ದೆಯನ್ನು ಪಡೆಯಲಿದ್ದಾರೆ.