ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಾಗಿದೆ. ಬಿ.ಜೆ.ಪಿ ಗೆಲುವು ಈಗ ಇತಿಹಾಸವಾದರೂ, ಸಾಮಾಜಿಕ ಜಾಲತಾಣಗಳಲ್ಲಿ, ಮೋದಿಯ ಹವಾ, ಮೋದಿ ಅಲೆ, ಮೋದಿ ಮೇನಿಯಾ ಇಂತಹ ಸಂದೇಶಗಳು ಹರಿದಾಡುತ್ತಲೇ ಇವೆ. ಕಾಂಗ್ರೇಸ್ ಪಕ್ಷ ಕಟು ಟೀಕೆಗೆ ಒಳಗಾಗುತ್ತಿದೆ. ಇದೆಲ್ಲವೂ ಸರಿ, ಒಂದು ಪಕ್ಷ ಗೆದ್ದ ಮೇಲೆ, ವಿಜಯೋತ್ಸಾಹದ ಆಚರಣೆ ಇದೇ ರೀತಿ ಇರುವುದು ಸಹಜ. ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲಿ ಹಲವು ದಿನಗಳವರೆಗೆ ಈ ಸುದ್ದಿಯ ಬಿಸಿ ಇದ್ದೇ ಇರುತ್ತದೆ. ಸೋತ ಪಕ್ಷದ ಸಚಿವರುಗಳು, ಗೆದ್ದ ಪಕ್ಷದ ಸಚಿವರುಗಳ ಟೀಕೆ ಮಾಡುವುದು, ಗೆದ್ದ ಪಕ್ಷದವರು ಸೋತ ಪಕ್ಷದ ಟೀಕೆಗೆ ಮತ್ತೇನೋ ವ್ಯಂಗ್ಯ ಮಾಡುವುದು. ಇವೆಲ್ಲವೂ ಶೀತಲ ಸಮರದಂತೆ ನಡೆಯುತ್ತಲೇ ಇರುತ್ತದೆ. ಆದರೆ ಇದರ ನಡುವೆ ಸಾಮಾನ್ಯ ಜನರು, ಯಾವೊಂದು ಪಕ್ಷ ಗೆದ್ದಾಗ ತಾವೇ ಗೆದ್ದಂತೆ ಸಂಭ್ರಮಿಸುತ್ತಾರೆ. ವಿಪರೀತ ಪಟಾಕಿಗಳನ್ನು ಸುಟ್ಟು ವಿಜಯೋತ್ಸಾಹದ ಆಚರಣೆ ಮಾಡುತ್ತಾರೆ.
ಇಲ್ಲಿ ಒಂದು ವಿಷಯವನ್ನು ಯಾರೂ ವಿಚಾರ ಮಾಡುವುದಿಲ್ಲ. ತಮಗೆ ಬೇಕಾದ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ, ಮತದಾರರಿಗೆ ಖುಷಿಯಾಗುವುದೇನೋ ಸರಿ. ಆದರೆ ಇದು ಮತದಾರರ ಅಥವಾ ಜನಸಾಮಾನ್ಯರ ನಿಜವಾದ ಗೆಲುವಲ್ಲ, ತಾತ್ಕಾಲಿಕ ಖುಷಿಯಷ್ಟೆ. ಪಕ್ಷವು ಈಗಷ್ಟೆ ಅಧಿಕಾರಕ್ಕೆ ಬರುತ್ತಿದೆ. ಜನರ ನಿರೀಕ್ಷೆಯ ಮಟ್ಟಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಆ ಪಕ್ಷವು ಇನ್ನೂ ಮಾಡಲು ಪ್ರಾರಂಭಿಸಿರುವುದಿಲ್ಲ, ಅಥವಾ ಮಾಡುತ್ತದೋ ಇಲ್ಲವೋ ಗೊತ್ತಿಲ್ಲ. ದೇಶವು ಆ ಜನಪ್ರತಿನಿಧಿಯಿಂದಾಗಿ ಎಷ್ಟರ ಮಟ್ಟಿಗೆ ಆರ್ಥಿಕ ಪ್ರಗತಿ ಸಾಧಿಸುತ್ತದೋ ಗೊತ್ತಿಲ್ಲ. ಇದೆಲ್ಲವನ್ನೂ ಅಧಿಕಾರಕ್ಕೆ ಬಂದ ಪಕ್ಷ ಮಾಡಿದಾಗಲೇ ಅದು ಜನಸಾಮಾನ್ಯರ ನಿಜವಾದ ಗೆಲುವು. ಕೇವಲ ಒಂದು ಪಕ್ಷ ಗೆದ್ದು ಅಧಿಕಾರಕ್ಕೆ ಬಂದಾಕ್ಷಣ ಅದು ಆ ಜನಪ್ರತಿನಿಧಿಯ ಗೆಲುವೇ ಹೊರತು ಜನಸಾಮಾನ್ಯನ ಗೆಲುವಲ್ಲ. ಆ ಜನಪ್ರತಿನಿಧಿಯಿಂದ ದೇಶಕ್ಕೆ ಒಳಿತಾದಾಗ ಜನಸಾಮಾನ್ಯರು ನಿಜವಾಗಿ ಸಂಭ್ರಮಾಚರಣೆ ಮಾಡುವುದರಲ್ಲಿ ಒಂದು ಅರ್ಥವಿದೆ. ಅದು ಬಿಟ್ಟು ಪಕ್ಷ ಗೆದ್ದಾಗ ತಾವೇ ಗೆದ್ದಂತೆ ಮಾಡುವ ವಿಜಯೋತ್ಸಾಹದ ಆಚರಣೆಗೆ ಯಾವುದೇ ಆರ್ಥವಿಲ್ಲ. ಪ್ರಯೋಜನವಂತೂ ಮೊದಲೇ ಇಲ್ಲ.
ಕಾಂಗ್ರೇಸ್ ಪಕ್ಷ ನಮ್ಮ ದೇಶವನ್ನು ಸರಾಸರಿ 60 ವರ್ಷ ಆಳ್ವಿಕೆ ಮಾಡಿದೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಇವರೆಲ್ಲಾ 2 ಅಥವಾ 2ಕ್ಕಿಂತ ಹೆಚ್ಚು ಬಾರಿ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದಾರೆ. ಆಗಲೂ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗೆದ್ದಾಗ, ಇದೇ ಜನಸಾಮಾನ್ಯರು ತಾವೇ ಗೆದ್ದಂತೆ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿದ್ದಾಗ, ಕಾಂಗ್ರೇಸ್ ನ ಭೃಷ್ಟಾಚಾರ ಬಯಲಾಗಿ, ಹಗರಣಗಳೆಲ್ಲಾ ಜಾಹೀರಾಗಿ, ಜನರಿಗೆ ತಾವು ಇಷ್ಟು ವರ್ಷದಿಂದ ಕಾಂಗ್ರೇಸ್ ಪಕ್ಷವನ್ನು ಆರಿಸಿ ತಂದು ತಪ್ಪು ಮಾಡುತ್ತಿದ್ದೇವೆಂದೆನಿಸಿ, 2014ರ ಚುನಾವಣೆಯಲ್ಲಿ ಜನಸಾಮಾನ್ಯರ ದೃಷ್ಠಿ ಬಿ.ಜೆ.ಪಿಯತ್ತ ತಿರುಗಿ, ಮೋದಿಯನ್ನು ಪ್ರಧಾನಿಯನ್ನಾಗಿ ಆರಿಸಿದರು. ಅದೂ ಕಾಂಗ್ರೆಸ್ ವೈಟ್‍ವಾಶ್ ಆಗುವಷ್ಟರ ಮಟ್ಟಿಗಿನ ಗೆಲುವು ಬಿ.ಜೆ.ಪಿಯದ್ದಾಯಿತು. ಅಂದರೆ 60ವರ್ಷ ಆಳಿದ ಕಾಂಗ್ರೇಸ್ ಮೇಲೆ ಜನರಿಗೆ ಜಿಗುಪ್ಸೆ ಮೂಡಲು ಸ್ವಲ್ಪ ಸಮಯ ಸಾಕಾಯಿತು.
ಜನಸಾಮಾನ್ಯರಾದ ನಾವುಗಳು ತಿಳಿದುಕೊಳ್ಳಬೇಕಾದ ನೀತಿಯೆಂದರೆ, ಪಕ್ಷ ಗೆದ್ದಾದ ತಕ್ಷಣ ಅದು ನಮ್ಮ ನಿಜವಾದ ಗೆಲುವಲ್ಲ, ಆ ಪಕ್ಷದಿಂದ ದೇಶ ಅಭಿವೃದ್ಧಿಯಾದರೆ, ಜನಕಲ್ಯಾಣವಾದರೆ ಮಾತ್ರ ಅದು ನಮ್ಮ ನಿಜವಾದ ಗೆಲುವು. ಹಿಂದೆ ಕಾಂಗ್ರೇಸ್ ಪಕ್ಷ ಗೆದ್ದಾಗ, ತಾವೇ ಗೆದ್ದಂತೆ ಜನಸಾಮಾನ್ಯರು ಮಾಡಿದ ವಿಜಯೋತ್ಸಾಹಕ್ಕೆ, ಈಗ ಯಾವ ಅರ್ಥ ಉಳಿದಿದೆ? ಅಂದ ಮೇಲೆ ಈಗ ಬಿ.ಜೆ.ಪಿ ಗೆದ್ದಾಗಲೂ ನಾವು ಈಗಲೇ ಗೆದ್ದೇ ಬಿಟ್ಟಿದ್ದೇವೆಂದು ಅತಿಯಾದ ಸಂಭ್ರಮಾಚರಣೆ ಮಾಡುವುದು ಬೇಡ. ಜನಪರ ಕಾರ್ಯವನ್ನು ಮಾಡಲಿ, ದೇಶ ಅಭಿವೃದ್ಧಿಯಾಗಿ ಜನರ ನಿರೀಕ್ಷೆಯ ಮಟ್ಟವನ್ನು ತಲುಪಲಿ, ಆಗ ನಾವು ವಿಜಯೋತ್ಸಾಹ ನಿಜವಾದ ಕಹಳೆಯನ್ನು ಊದೋಣ. ಆಗ ಅದಕ್ಕೊಂದು ಅರ್ಥವಿರುತ್ತದೆ. ಅದು ಬಿಟ್ಟು, ಯಾವ ಕೆಲಸಗಳು ಪೂರ್ಣವಾಗುವ ಮುಂಚೆಯೇ, ಪೂರ್ತಿಯಾಯಿತೆಂಬಂತೆ ವಾಟ್ಸಾಪ್ ಮತ್ತು ಫೇಸ್‍ಬುಕ್’ಗಳಲ್ಲಿ ಸಂದೇಶಗಳನ್ನು ಶೇರ್ ಮಾಡುವುದು, ತಪ್ಪು ಮಾಹಿತಿಗಳನ್ನು ನೀಡುತ್ತಾ, ಅತಿಯಾದ ಅಭಿಮಾನ ತೋರುತ್ತಾ, ಒಬ್ಬ ರಾಜಕೀಯ ನಾಯಕನನ್ನು ಹೀರೋ ಮಾಡಿ ಮೆರೆಸುವುದು ಎಷ್ಟರ ಮಟ್ಟಿಗೆ ಸರಿ? ನಾವುಗಳು ಬಹಳಷ್ಟು ಜನ ಮಾಡುವ ತಪ್ಪು ಇದೆ. ಪೂರ್ತಿ ಗೆಲ್ಲುವುದಕ್ಕೆ ಮುಂಚೆಯೇ ಗೆದ್ದೆವೆಂದುಕೊಳ್ಳುವುದು, ಒಂದು ವೇಳೆ ಸೋತರೆ ಅದಕ್ಕೆ ಮತ್ತಾವುದೋ ರೀತಿಯಲ್ಲಿ ಸಮಜಾಯಿಷಿ ನೀಡಿ, ನಾವು ಮಾಡಿದ್ದೇ ಸರಿ ಎಂದು ಸಾಧಿಸುವುದು. ನಮ್ಮ ದೇಶದ ಜನರ ಇಂತಹ ಮನೋ ಧೋರಣೆಯೇ, ರಾಜಕೀಯ ನಾಯಕರುಗಳಿಗೆ ಮನ ಬಂದಂತೆ ಆಟವಾಡಲು ಬಲವಾದ ಅಸ್ತ್ರವೆಂದೇ ಹೇಳಬಹುದು. ಬಿ.ಜೆ.ಪಿಗೆ ತಮ್ಮ ಪಕ್ಷದ ಪ್ರಚಾರ, ಎಲ್ಲೆಡೆಯೂ ತಮ್ಮ ಪಕ್ಷವೇ ಗೆಲ್ಲಬೇಕೆಂಬ ಹಂಬಲ, ಅದೇ ಕಾಂಗ್ರೇಸ್’ಗೆ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬ ಗುರಿ. ಇಲ್ಲಿ ಯಾವ ಪಕ್ಷಕ್ಕೂ ಜನರ ಹಾಗೂ ದೇಶದ ಅಭಿವೃದ್ಧಿ ಬೇಕಾಗಿಲ್ಲ. ತಮ್ಮ ಸ್ವಾರ್ಥವಷ್ಟೆ ಮುಖ್ಯ.
ನೀವೇ ನೋಡಿ, ಕಳೆದ 60 ವರ್ಷಗಳ ಕಾಲ ಕಾಂಗ್ರೇಸ್‍ಗೆ ಆಡಳಿತ ಚುಕ್ಕಾಣಿಯನ್ನು ಕೊಟ್ಟಿದ್ದು ಇದೇ ಜನ, ಕಾಂಗ್ರೇಸ್ ಆಡಳಿತದಲ್ಲಿದ್ದಾಗ, ಅದು ಅಭಿವೃದ್ಧಿಯನ್ನು ಮಾಡುತ್ತಿದೆ, ಅದು ಮಾಡಿದ್ದೆಲ್ಲಾ ಸರಿಯಿದೆ ಎಂದು ಮೆರೆಸುತ್ತಿದ್ದವರು ಇದೇ ಜನ. ಈಗ ಕಾಂಗ್ರೇಸ್ ಸರಿಯಿಲ್ಲವೆಂದು ಬಿ.ಜೆ.ಪಿಗೆ ಆಡಳಿತ ಚುಕ್ಕಾಣಿ ನೀಡಿದ್ದು ಇದೇ ಜನರು. ಈಗ ಬಿ.ಜೆ.ಪಿ ಅಧಿಕಾರದಲ್ಲಿದ್ದಾಗ, ಕಳೆದ 60 ವರ್ಷಗಳಲ್ಲಿ ನಮ್ಮ ದೇಶ ಯಾವ ಅಭಿವೃದ್ಧಿಯನ್ನೂ ಸಾಧಿಸಿಲ್ಲ, ಕಾಂಗ್ರೇಸ್ ಪಕ್ಷ ಮಾಡಿದ್ದು ಬರೇ ಭೃಷ್ಟಾಚಾರ, ಕಳೆದ 3 ವರ್ಷಗಳಿಂದ ಮಾತ್ರ ನಮ್ಮ ದೇಶ ಅಭಿವೃದ್ಧಿಯನ್ನು ಸಾಧಿಸುತ್ತಾ ಬಂದಿದೆ ಎಂದು ಹೇಳುತ್ತಿರುವವರು, ಇದೇ ಜನಸಾಮಾನ್ಯರು. ಎಂತಹ ವಿಚಿತ್ರವಲ್ಲವೇ ನಮ್ಮ ಜನಸಾಮಾನ್ಯರ ಮನೋಧೋರಣೆ? ಕಳೆದ 60ವರ್ಷಗಳಲ್ಲಿ ಕಾಂಗ್ರೇಸ್ ಪಕ್ಷ ಯಾವುದೇ ಹಗರಣ ಮತ್ತು ಭೃಷ್ಟಾಚಾರ ಮಾಡಿಲ್ಲವೆಂದು ನಾನು ಹೇಳುತ್ತಿಲ್ಲ, ಅದು ನಿಜವೇ. ಆದರೆ ಕಳೆದ 60 ವರ್ಷಗಳಲ್ಲಿ ನಮ್ಮ ದೇಶ ಅಭಿವೃದ್ಧಿಯನ್ನೂ ಸಾಧಿಸಿದೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ನಮ್ಮ ದೇಶ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿತ್ತು, ಬಿ.ಜೆ.ಪಿ ಅಧಿಕಾರಕ್ಕೆ ಬರುವ ಮುಂಚೆಯೇ ಎಂದು ನಾನು ಹೇಳುತ್ತಿರುವುದು. ಯಾವ ಪಕ್ಷದ ಪರವಾಗಿಯಾಗಲೀ, ವಿರುದ್ಧವಾಗಿಯಾಗಲೀ ನಿಲ್ಲದೇ, ಒಂದೇ ಮನಸ್ಸಿಂದ ನಿಷ್ಪಕ್ಷಪಾತವಾಗಿ ವಿಚಾರ ಮಾಡಿ ನೋಡಿ, ನಿಮಗೇ ಅರ್ಥವಾಗುತ್ತದೆ.
ಒಂದು ಮಾತಂತೂ ಸತ್ಯ. ಇಲ್ಲಿ ನಾನು ಯಾವ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಮಾತನಾಡುತ್ತಿಲ್ಲ. ನಾನು ಹೇಳುವುದಿಷ್ಟೆ, ಯಾವ ಪಕ್ಷ ಗೆದ್ದಿದೆ ಅನ್ನುವುದಕ್ಕಿಂತ, ಗೆದ್ದ ಪಕ್ಷದಿಂದ ನಡೆಯುವ ಅಭಿವೃದ್ಧಿಯ ಮೇಲೆ ಜನಸಾಮಾನ್ಯರ ನಿಜವಾದ ಗೆಲುವಿದೆ ಎಂದು. ಒಮ್ಮೆ ಶಾಂತ ಚಿತ್ತದಿಂದ ವಿಚಾರ ಮಾಡಿ, ನಿಮಗೇ ತಿಳಿಯುತ್ತದೆ ಯಾವುದು ಸರಿ ಎಂಬುದು…