Featured ಅಂಕಣ

ಕನ್ನಡ ಭಾಷೆ ಮತ್ತು ಬೆಂಗಳೂರು

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಾಗ ನನ್ನಲ್ಲೊಂದು ತಪ್ಪು ತಿಳಿವಳಿಕೆಯಿತ್ತು. ಇಲ್ಲಿ ಎಲ್ಲೆಲ್ಲೂ ಇಂಗ್ಲೀಷ್ ಭಾಷೆಯ ಬಳಕೆಯೇ ಹೆಚ್ಚು, ಕನ್ನಡ ಅತಿ ವಿರಳವೆಂದು ನಂಬಿದ್ದೆ. ಇಂಗ್ಲೀಷ್ ಭಾಷೆಯನ್ನೇ ಮೆಚ್ಚಿಕೊಂಡವರು  ಹೆಚ್ಚಿನವರಾಗಿದ್ದರೂ, ಕನ್ನಡವೇನೂ ಸಂಪೂರ್ಣವಾಗಿ ಕಳೆದು ಹೋಗಿರಲಿಲ್ಲ. ಅಪರೂಪಕ್ಕೊಮ್ಮೆ ಕನ್ನಡದ ಉಳಿವಿಗೆ ಬೀದಿಗಿಳಿದು ಹೋರಾಟಗಳನ್ನು ಮಾಡುವವರೂ ಇದ್ದಾರೆ, ಮೌನವಾಗೇ ಕನ್ನಡಕ್ಕಾಗಿ ಬೆಂಬಲಿಸುವವರೂ ಇದ್ದಾರೆ, ಹೊಸ ತಲೆಮಾರಿನ ಸೋಶಿಯಲ್ ಮೀಡಿಯಾ ಮೂಲಕ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಾ ಬದಲಾವಣೆಯನ್ನು ತರುತ್ತಾ ಇರುವವರೂ ಇದ್ದಾರೆ. ಎಲ್ಲರ ಧ್ಯೇಯ ಒಂದೇ, ಕನ್ನಡದ ಉಳಿವು! ಆದರೆ ಇವರೆಲ್ಲರ ದಾರಿ ಹಲವು.

ಹಿಂದೊಮ್ಮೆ ಉದ್ಯಾನ ನಗರಿಯಾಗಿ ಮಿಂಚಿದ್ದ ಈ ನಗರ, ನಿವೃತ್ತಿಯ ನಂತರ ಜೀವನ ಕಳೆಯಲು ಅತಿ ಯೋಗ್ಯ ಪಟ್ಟಣವೆಂದು ಕರೆಸಿಕೊಂಡಿತ್ತು. ಆದರೆ ಕಳೆದೊಂದು ದಶಕದಲ್ಲಿ ಆದಂಥ ಅತ್ಯಪೂರ್ಣ ಬದಲಾವಣೆಗಳು, ಇಲ್ಲಿನ  ಚಿತ್ರಣವನ್ನೇ  ಬದಲಾಯಿಸಿವೆ. ಕರ್ನಾಟಕವಷ್ಟೆ ಅಲ್ಲದೆ ಭಾರತದ ಮೂಲೆ ಮೂಲೆಗಳಿಂದ ತಮ್ಮ ಬದುಕು ಕಟ್ಟಿಕೊಳ್ಳಲು , ಕನಸುಗಳಿಗೆ ನೆಲೆ ಕಂಡುಕೊಳ್ಳಲು ಜನ ಇಲ್ಲಿಗೆ ಬಂದಿಳಿದರು. ಆ ನಂತರ ನಡೆದದ್ದೆಲ್ಲವೂ ಇತಿಹಾಸ.  ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬನನ್ನು ಕನ್ನಡಿಗನೆಂದೇ ಕರೆಯುವುದು, ಎಲ್ಲರ ಆಶಯವಾಗಿದ್ದರೂ, ಆ ಕಾಲ ಬಹಳಷ್ಟು ದೂರದಲ್ಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ, ಒಂದು ಕೋಟಿಗೂ ಅಧಿಕವಿರುವ ಜನಸಂಖ್ಯೆಯಲ್ಲಿ ಕಾಣಸಿಗುವ ವಿವಿಧ ರೀತಿಯ ಕನ್ನಡಿಗರನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದೇನೆ. ಇದು ಯಾವುದೇ ಕಾರಣಕ್ಕೂ, ಕನ್ನಡಿಗರನ್ನು ಒಡೆಯುವ ಪ್ರಯತ್ನವಲ್ಲ. ಒಂದೇ ಕಡೆಯಿಂದ ಬಂದು, ಹೇಗೆ ತಮ್ಮ ಆಲೋಚನೆಗಳಲ್ಲಿ ವಿಭಿನ್ನರಾಗಿರುತ್ತಾರೆ ಎಂಬುದಷ್ಟೇ ಇದರ  ತಾತ್ಪರ್ಯ.

ಪ್ರವರ್ಗ 1

ಇವರು ಮೂಲ ಬೆಂಗಳೂರಿಗರು. ಕೆಲವರು ಕರ್ನಾಟಕದ ಯಾವುದೋ ಮೂಲೆಯಿಂದ ಶತಮಾನದ ಹಿಂದೆಯೇ ಬಂದು, ಬೆಂಗಳೂರಲ್ಲಿ ಸ್ವಂತ ಊರನ್ನು ಕಂಡುಕೊಂಡವರು. ಬೆಂಗಳೂರಿನ ಬೆಳವಣಿಗೆಯ ಪ್ರತಿ ಹೆಜ್ಜೆಯನ್ನೂ ಕಂಡವರು. ಕನ್ನಡ ಇವರ ಮಾತಿನಲ್ಲಷ್ಟೆ ಅಲ್ಲ, ದೇಹದ ಪ್ರತಿ ಕಣದಲ್ಲೂ ತುಂಬಿದೆಯೇನೋ ಅನ್ನುವಷ್ಟು ಭಾಷಾ ಪ್ರೇಮ. ಬದಲಾಗಿರುವ ಬೆಂಗಳೂರಿನ ಬಗ್ಗೆ ಬೇಸರವಿದ್ದರೂ ಅದನ್ನು ಮೌನದಿಂದಲೇ ಸ್ವೀಕರಿಸಿ, ತಮ್ಮ ಜೀವನದಿಂದ ಕನ್ನಡವನ್ನು ದೂರ ಮಾಡದೆಯೇ ಬದುಕಿದ್ದಾರೆ, ದೂರ ಮಾಡುವುದೂ ಅಸಾಧ್ಯದ ಮಾತು. ಇಲ್ಲಿನ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಎತ್ತರೆತ್ತರಕ್ಕೆ ಬೆಳೆದರೂ, ಎಲ್ಲರೊಂದಿಗೂ ಕನ್ನಡದಲ್ಲೇ ಸಂವಹಿಸುವ ಪರಿಪಾಠದವರು. ಇವತ್ತಿಗೂ , ಭಾಷೆಯ ಉಳಿವಿಗೆ ಹೋರಾಡುವ ಹುಮ್ಮಸ್ಸು ಇವರದ್ದು.

ಇನ್ನು ಈ ಪ್ರವರ್ಗದವರು ಕೆಲವರು ಬದಲಾದ ಕಾಲದ ಜೊತೆಗೆ, ದೇಶ-ವಿದೇಶಗಳಲ್ಲಿ ಓದಿ, ಅಲ್ಲಿಯ ಭಾಷೆ, ಸಂಸ್ಕೃತಿಯೇ ಉತ್ತಮವೆಂದು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಕನ್ನಡ ಬಳಕೆ ಬಹಳ ಕೀಳು ಎನ್ನುವ ಅಭಿಪ್ರಾಯದಲ್ಲಿ ಬದುಕುತ್ತಿದ್ದಾರೆ. ತಮ್ಮ ಶೋಕಿ ಜೀವನದಲ್ಲಿ, ಇಂಗ್ಲೀಷ್ ಮಾತ್ರ ತಮ್ಮನ್ನು ಉಳಿಸಲಿದೆ, ಕನ್ನಡದಿಂದ ಆಗುವ ಲಾಭ ಏನೂ ಇಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಾರೆ.

ಪ್ರವರ್ಗ 2

ಇವರು ಇಲ್ಲಿನ ಅನುಕೂಲತೆಗಳು, ಅವಕಾಶಗಳನ್ನು ನಂಬಿ ಬೇರೆ ರಾಜ್ಯಗಳಿಂದ ಬಹಳ ವರ್ಷಗಳ ಹಿಂದೆಯೇ ಬಂದವರು. ಅರ್ಧ ಶತಮಾನದಷ್ಟು ಕಾಲವೇ ಕಳೆದಿರಬಹುದು. ತಮ್ಮ ಭಾಷೆ ಬೇರೆಯದೇ ಆಗಿದ್ದರೂ, ಕನ್ನಡವೇ ತಮ್ಮ ಭಾಷೆಯೆಂಬಂತೆ ಬದುಕುವ ಸ್ನೇಹಜೀವಿಗಳು. ತಮ್ಮನ್ನು ತಾವು ಕನ್ನಡಿಗರೆಂದೇ ಕರೆದುಕೊಳ್ಳುತ್ತಾರೆ. ಎಲ್ಲೂ ನಮ್ಮ ಭಾಷೆಯನ್ನು ನಿಂದಿಸಿದವರಲ್ಲ, ಪ್ರೀತಿಯಿಂದ ಪೋಷಿಸಿದವರು. ಹಲವಾರು ಬಡಾವಣೆಗಳು ಇಂದು ಈ ಪ್ರವರ್ಗದ ಕನ್ನಡಿಗರಿಂದಲೇ ಗುರುತಿಸಿಕೊಂಡಿದೆ. ತಮ್ಮ ಮಾತೃಭಾಷೆಯನ್ನೂ ವಿವಿಧ ಸಂಘಟನೆಗಳ ಮೂಲಕ ಉಳಿಸುತ್ತಾ, ಕನ್ನಡವನ್ನು ಬೆಳೆಸುತ್ತಾ ಇದ್ದಾರೆ.

ಇನ್ನು ತೀರಾ ಇತ್ತೀಚೆಗೆ ಬಂದ ಕೆಲವರಿದ್ದಾರೆ. ಅವರ ಮೇಲೆ ಕನ್ನಡವನ್ನು ಹೇರದೆ ಇದ್ದರೂ, ಆ ಭಾಷೆಯ ಮೇಲೆ ತಾತ್ಸಾರ ಉಳ್ಳವರು. ಕ್ಯಾಬ್ ಗಳಲ್ಲಿ, ಮಾಲ್ ಗಳಲ್ಲಿ ಕನ್ನಡ ಮಾತನಾಡಿದರು ಎಂಬ ಕಾರಣಕ್ಕೆ ಜಗಳ ಮಾಡಿದವರೂ ಇದ್ದಾರೆ. ನಮ್ಮ ಭಾಷೆಯನ್ನು ,ನಮ್ಮ ಊರಲ್ಲೇ ಪ್ರಶ್ನಿಸುವ ಮನೋಭಾವ ಇವರದ್ದು. ಕೆಲವೊಂದು ಬಾರಿ ಇಂಥ ನಡವಳಿಕೆಯಿಂದ, ನಮ್ಮವರ ವರ್ತನೆಯೂ ಕೆಟ್ಟದಾಗಿ ಪರಿವರ್ತಿತವಾಗುತ್ತದೆ.  ಹಾಗಂತ ಹೊಸಬರಲ್ಲಿ, ಕನ್ನಡವನ್ನು ಗೌರವಿಸುವವರೇ ಇಲ್ಲವೆಂದಲ್ಲ, ಉಳಿದವರ ಆರ್ಭಟದ ನಡುವೆ ಇವರು ಕಾಣದಾಗಿದ್ದಾರೆ.

ಪ್ರವರ್ಗ 3

ಕರ್ನಾಟಕದ ಬೇರೆ ಜಿಲ್ಲೆಗಳಿಂದ ಬಂದು ನೆಲೆಸಿದವರು. ತವರಿನ ಮೋಹ ಹೆಚ್ಚು, ಆದರೆ ಬೆಂಗಳೂರಿನ ಸೆಳೆತ ಇವರನ್ನೂ ಬಿಟ್ಟಿಲ್ಲ. ಹಲವರಿಗೆ ಭಾಷೆ ಒಂದೇ ಆದರೂ, ಕೆಲವು ಪದಗಳ ಬಳಕೆಯಲ್ಲಿ ವ್ಯತ್ಯಾಸವಿರುತ್ತದೆ. ಕೊಡಗಿನಿಂದ ಬಂದವರಿಗೆ ಕೊಡವ ಭಾಷೆಯ ಪ್ರಭಾವವಾದರೆ ದಕ್ಷಿಣ ಕನ್ನಡ , ಉಡುಪಿಯಿಂದ ಬಂದವರಿಗೆ ತುಳುವಿನ ಪ್ರಭಾವ. ಉತ್ತರ ಕರ್ನಾಟಕ ಮಂದಿಗೆ ಬಿರುಸಾಗಿ ಮಾತನಾಡುವುದೇ ರೂಢಿ. ಆ ಸುಂದರ ಭಾಷೆಯಿಂದ ಬೆಂಗಳೂರು ಕನ್ನಡಕ್ಕೆ ಒಗ್ಗಿಕೊಳ್ಳುವುದೇ ಕಷ್ಟವಾಗುತ್ತದೆ. ಆದರೂ ಈ ಅದ್ಭುತವಾದ ಪಟ್ಟಣದ ಮೇಲೆ ಪ್ರೇಮಾಂಕುರವಾಗದೆ ಉಳಿದವರಲ್ಲ. ಕನ್ನಡಿಗರೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಬದುಕುತ್ತಾರೆ ಇಲ್ಲಿ.

ಹಾಗೆಯೇ ಈ ಪ್ರವರ್ಗದ ಕೆಲವರಲ್ಲಿ, ಒಂದು ಬಗೆಯ ಕೀಳರಿಮೆಯಿರುತ್ತದೆ. ಸುತ್ತಲೂ ತುಂಬಿಕೊಂಡಿರೋ ಇಂಗ್ಲೀಷ್ ಭಾಷೆಯ ಹಾವಳಿಯಲ್ಲಿ, ತಮ್ಮ ಕನ್ನಡಾಭಿಮಾನದಿಂದ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಾವೂ ಆಂಗ್ಲ ಭಾಷೆಯ ದಾಸರಾಗುತ್ತಾರೆ. ಇವರಲ್ಲೂ ಕೆಲವರು ಜಗತ್ತಿನೆಲ್ಲೆಡೆ ಅವಕಾಶಗಳನ್ನು ಅರಸುತ್ತಾ ಹೋಗಿ , ತಮ್ಮಲ್ಲಿ ಬೆರೆತಿರುವ ಕಿಂಚಿತ್ ಭಾಷಾ ಪ್ರೇಮವನ್ನು ಕಳೆದುಕೊಳ್ಳುತ್ತಾರೆ.

ಮುಂದೆ?

ಹೊರಗಿನಿಂದ ಬಂದವರನ್ನು, ಕನ್ನಡ ಕಲೀರಿ ಎಂದು ಹೇಳುವ ಮೊದಲು, ಇಲ್ಲಿರುವ ಕನ್ನಡಿಗರು ಎಷ್ಟರ ಮಟ್ಟಿಗೆ ಈ ಭಾಷೆಯನ್ನು ಅರಿತಿದ್ದಾರೆ, ಎಷ್ಟರ ಮಟ್ಟಿಗೆ ಗೌರವಿಸುತ್ತಾರೆ ಎಂದು ಪ್ರಶ್ನಿಸಿಕೊಳ್ಳಬೇಕು. ಮುಖವಾಡಗಳನ್ನು ಹಾಕಿಕೊಂಡು ಓಡಾಡುವ ಇಂಥ ಜನರ ತಿರುಬೋಕಿ ಜೀವನಕ್ಕೆ ಏನು ಹೇಳಬೇಕು ತಿಳಿಯದು. ನಮ್ಮಲ್ಲೇ ಸಮಸ್ಯೆಗಳು ಹಲವಿರುವಾಗ, ಕೇವಲ ಸಿನಿಮಾಗಳ ವಿಷಯದಲ್ಲಿ ಭಾಷಾ ಪ್ರೇಮವನ್ನು ಪ್ರದರ್ಶಿಸುವ ಗೀಳು ಶುರುವಾಗಿದೆ. ಕನ್ನಡಪರ ಹೋರಾಟವೆಂದರೆ, ಡಬ್ಬಿಂಗ್ ವಿರೋಧಿ ಹೋರಾಟ, ಅನ್ಯಭಾಷೆಯ ಸಿನಿಮಾವನ್ನು ಬ್ಯಾನ್ ಮಾಡುವುದು ಎಂಬಂತಾಗಿದೆ. ಹಗೆತನದ ಬೆಂಕಿಗೆ ತುಪ್ಪ ಸುರಿಯೋ ಕಾರ್ಯವನ್ನು ನಮ್ಮ ಸೋಶಿಯಲ್ ಮೀಡಿಯದ ಹಲವು ಪೇಜ್ ಗಳು, ಟಿಆರ್ ಪಿ ಗಾಗಿ ಟಿವಿ ಮಾಧ್ಯಮಗಳು ನಡೆಸುತ್ತಿವೆ. ಹಿಂದೆ ಅದೆಷ್ಟೋ ಹೋರಾಟಗಳನ್ನು ಅರ್ಥಪೂರ್ಣವಾಗೆ ನಿರ್ವಹಿಸಿ, ಕನ್ನಡದ ಗೆಲುವಿಗೆ ಕಾರಣೀಭೂತರಾದ ನಮ್ಮ ಸಂಘಟನೆಗಳು ಇಂದು ಕೆಲವೊಂದು ವಿಚಾರಗಳಲ್ಲಿ ದಾರಿ ತಪ್ಪುತ್ತಿದ್ದಾರೇನೋ ಎಂದು ಭಾಸವಾಗುತ್ತಿದೆ. ಇದಕ್ಕೆ ಮೂಲಭೂತವಾಗಿ ವಾಟ್ಸಾಪ್, ಫೇಸ್ಬುಕ್ ಮುಂತಾದ ಕಡೆ ಹರಿದಾಡುವ ಉದ್ರೇಕಕಾರಿ ಲೇಖನಗಳು, ಸಂದೇಶಗಳು ಕಾರಣವಾಗಿರಬಹುದು.  ಸಿಗಬೇಕಾದ ಸವಲತ್ತುಗಳು ಸಿಗದೆ, ಶಿಕ್ಷಣದ ಕೊರತೆಯಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದು ನಿಜ. ಆದರೆ ಈ ರೀತಿಯಾಗಿ ಮಾತ್ರ ಹೋರಾಡುತ್ತ ಸಾಗಿದರೆ ನಗೆಪಾಟಲಿಗೀಡಾಗುವ ಸಾಧ್ಯತೆಗಳೇ ಹೆಚ್ಚು.

ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು, ಕನ್ನಡೇತರರಿಗೆ ಕನ್ನಡ ಹೇಳಿಕೊಟ್ಟು ಪ್ರೋತ್ಸಾಹಿಸುತ್ತಿರುವ ಕೆಲವು ಹೆಮ್ಮೆಯ ಕನ್ನಡಿಗರಿದ್ದಾರೆ, ಇಂಥ ಅನೇಕ ತಂಡಗಳು ಈಗ ತಲೆಯೆತ್ತಿವೆ. ಹಾಗೆಯೇ ಕನ್ನಡ ಬಳಕೆಯ ಮೂಲಕವೇ ಬಾಳು ಕಂಡುಕೊಂಡು ಅದನ್ನು ಪಸರಿಸುವವರೂ ಇದ್ದಾರೆ! ಇವರಿಗೂ ಇರುವುದು ಕನ್ನಡಪರ ಕಾಳಜಿಯೇ. ಈ ರೀತಿಯ ಹಲವು ಗುಂಪುಗಳೊಂದಿಗೆ ಕೈಜೋಡಿಸಿ ನಮ್ಮ ಸಂಘಟನೆಗಳು ಅರ್ಥವತ್ತಾದ ಹೋರಾಟದಲ್ಲಿ ಭಾಗಿಯಾಗಿ ನಮ್ಮ ಭಾಷೆಯನ್ನು  ಎತ್ತಿಹಿಡಿಯುವ ಕಾರ್ಯವನ್ನು ಮಾಡಬಹುದು.  ಇಲ್ಲಿ ಕನ್ನಡವು ಉಳಿಯಬೇಕಾದದ್ದು ಸಾಮಾನ್ಯ ಜನರಿಂದ. ಪ್ರತಿ ವಿಷಯಕ್ಕೂ ಬಂದ್ ಮಾಡುವುದು, ಅತಿರೇಕದ ಹೇಳಿಕೆಗಳನ್ನು ಕೊಡುವುದು ಖಂಡಿತವಾಗಿಯೂ ಪರಿಹಾರವಲ್ಲ. ಸ್ವಹಿತಾಸಕ್ತಿಯ ದೃಷ್ಟಿಯಿಂದ ಹಲವರು ಭಾಷೆಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ. ಆದರೆ ಹಳಿತಪ್ಪಿ ಹೋಗಿರುವ ಕನ್ನಡದ ಹೋರಾಟ ಮತ್ತೆ ಸರಿಯಾದ ದಿಕ್ಕಿನಲ್ಲಿ ನಡೆಯಬೇಕು. ಇಂದು ದಾರಿ ತಪ್ಪುತ್ತಿರುವ ಸಂಘಟನೆಗಳು ಶಕ್ತಿ, ಹುರುಪಿನಿಂದ ನಿಜವಾದ ಹೋರಾಟದಲ್ಲಿ ತೊಡಗಬೇಕು. ಸಣ್ಣ ಮಕ್ಕಳಿಂದ ಹಿಡಿದು ಯುವಕರು, ಹಿರಿಯರೂ ಎಲ್ಲರಲ್ಲೂ ಮತ್ತೆ ಕನ್ನಡಾಭಿಮಾನವನ್ನು ಬೆಳೆಸಬೇಕು.  ಬೆಂಗಳೂರು ತನ್ನತ್ತ ಬಂದವರನ್ನು, ಸಂತೋಷದಿಂದ ಸ್ವೀಕರಿಸಿ, ಅವರ ಉನ್ನತಿಗೆ ಕಾರಣವಾಗುತ್ತಲೇ ಇದೆ. ಕರುನಾಡ ರಾಜಧಾನಿಯಲ್ಲಿ ಮತ್ತೆ ಕನ್ನಡ ಕಂಪನ್ನು ತುಂಬುವ ಸ್ಥಿತ ಪ್ರಜ್ಞೆಯ ಹೋರಾಟದ ಅಗತ್ಯವಿದೆ.

– ಶಶಾಂಕ್  ತಂತ್ರಿ

kemminjeshashank@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!