‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರವನ್ನು, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯವಾಗುತ್ತಿದೆ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ, ಬರುವ ಮಳೆ ನೀರನ್ನು ಸಂಗ್ರಹಿಸಿ ನಿತ್ಯದ ಬಳಕೆಗೆ ಉಪಯೋಗಿಸುವ ಮತ್ತು ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ವಿಧಾನವನ್ನು ಅನುಸರಿಸುತ್ತಿರುವ ಜನರು ನಮ್ಮ ಮಧ್ಯೆ ಇದ್ದಾರೆ. ಅಂತವರಲ್ಲಿ ಎಸ್.ಡಿ.ಎಮ್ ಕಾಲೇಜು ಉಜಿರೆಯ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನ್‍ನಾರಾಯಣ ಒಬ್ಬರು.
‘ಇದ್ದ ನೀರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ, ಈಗ ನೀರಿಲ್ಲ ಎನ್ನುವುದುರಲ್ಲಿ ಅರ್ಥವಿಲ್ಲ. ಮಳೆಗಾಲದಲ್ಲಿ ಬರುವ ನೀರನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದರೆ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ, ವರ್ಷಪೂರ್ತಿ ಅಲ್ಲದೇ ಬರುವ ವರ್ಷದಲ್ಲೂ ನೀರಿನ ಅಭಾವವಿರುವುದಿಲ್ಲ’ ಎನ್ನುವುದು ಅವರ ಮಾತು.
ಸುಮಾರು 12 ವರ್ಷಗಳಿಂದ ಮಳೆಗಾಲದಲ್ಲಿ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ನೀರನ್ನೇ ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ. ತಮ್ಮ ಮನೆಯ ಮೇಲೆ ಬೀಳುವ ನೀರನ್ನು ಪೈಪ್‍ಗಳ ಮೂಲಕ ಬಾವಿಗೆ ಹರಿಸಿ ಆ ನೀರನ್ನು ಮನೆಯಲ್ಲಿ ಉಪಯೋಗಿಸುತ್ತಿದ್ದಾರೆ. ಮೇಲ್ಛಾವಣಿಗೆ 4 ಇಂಚು ದಪ್ಪದ ಪೈಪ್‍ಗಳನ್ನು ಅಳವಡಿಸಿ ಅದನ್ನು ಬೇರೆ ಬೇರೆ ಪೈಪ್‍ಗಳ ಮೂಲಕ ಮನೆಯ ಬಾವಿಗೆ ಜೋಡಿಸಿದ್ದಾರೆ. ಇದರಿಂದ ಮೇಲ್ಛಾವಣ ಯ ಮೇಲೆ ಬೀಳುವ ಪ್ರತಿ ಮಳೆಯ ನೀರು ಪೈಪ್‍ಗಳಿಗೆ ಜೋಡಿಸಿರುವ ಜಾಲಿಗಳಲ್ಲಿ ಸೋಸಿ ಒಳ್ಳೆಯ ನೀರು ಸೀದಾ ಬಾವಿಗೆ ಸೇರಿ ಕುಡಿಯಲು, ಮನೆಯ ಇನ್ನೀತರ ಕೆಲಸಗಳಿಗೆ ಉಪಯೋಗವಾಗುವುದೊಂದೆ ಅಲ್ಲದೆ ಮನೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ. ಮನೆಯ ಹತ್ತಿರದ ಜಾಗಗಳಲ್ಲಿ ಬೋರ್‍ವೆಲ್‍ಗಳಿದ್ದರೂ ಪ್ರತಿ ಮಳೆಗಾಲದಲ್ಲಿ ಮನೆಯ ಬಾವಿ ನೀರು 2-3 ಫೂಟ್ ಜಾಸ್ತಿಯಾಗುತ್ತಿದೆ. ಹೀಗಾಗಿ ಅವರ ಮನೆಯ ಮೇಲೆ ಬೀಳುವ ಮಳೆನೀರು ಸ್ವಲ್ಪವೂ ವ್ಯರ್ಥವಾಗದೇ, ಸದುಪಯೋಗಗೊಳ್ಳುತ್ತಿದೆ.
ಬಿರು ಬೇಸಿಗೆಯಲ್ಲೂ ನೀರಿನ ಅಭಾವ ಕಾಡಿಲ್ಲ:
‘3-4 ಜನ ವಾಸಿಸುವ ಸಣ್ಣ ಮನೆಗಳಿಗೆ ಪ್ರತಿನಿತ್ಯ ಸುಮಾರು 250-300 ಲೀಟರ್‍ಗಳಷ್ಟು ನೀರು ಸಾಕು, ಮನೆಯಲ್ಲಿ ನೀರಿನ ಬಳಕೆಯ ಬಗ್ಗೆ ಗೃಹಿಣ ಯರಿಗೆ ಇರಬೇಕು, ಪ್ರತಿ ಮಳೆಗಾಲದ ಮೊದಲ ಮಳೆಯ ನೀರನ್ನು ಬಿಟ್ಟು ಬಾಕಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ ಉಪಯೋಗಿಸುತ್ತೇವೆ, ಇದು ನಮಗೆ ನಿತ್ಯದ ಉಪಯೋಗಗಳಿಗೆ ಸಾಕು. 12 ವರ್ಷದ ಹಿಂದೆಯೆ ಮಳೆ ನೀರನ್ನು ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಮಾಡಿದ ಈ ಯೋಜನೆಯಿಂದ ನಮಗೆ ಎಂದಿಗೂ ನೀರಿನ ಅಭಾವ ಬಂದಿಲ್ಲ’ ಎನ್ನುತ್ತಾರೆ ಮೋಹನ್‍ನಾರಾಯಣ ಅವರ ಪತ್ನಿ ಪೂರ್ಣಿಮಾ.
ಇದೊಂದೇ ಅಲ್ಲದೇ ತಮ್ಮ 3.50 ಎಕರೆಯ ‘ಚೈತನ್ಯ ಪ್ಲಾಂಟೇಶನ್ ‘ರಬ್ಬರ್ ತೋಟದಲ್ಲಿ 20 ವರ್ಷಗಳ ಹಿಂದೆಯೆ ಮಾಡಿದ್ದ ‘ಇಂಗುಗುಂಡಿ’ ಬೆಟ್ಟದಿಂದ ಹರಿದು ಬರುವ ನೀರನ್ನು ಇಂಗಿಸು ವಿಧಾನದಿಂದ, ಪೂರ್ತಿ ತೋಟ ಈ ಬಿರು ಬಿಸಿಲಿನಲ್ಲೂ ತಂಪಾಗಿದೆ. ತೋಟದ ಇಳಿಜಾರುಗಳಲ್ಲಿ ಸಾಲಾಗಿ ಇಂಗುಗುಂಡಿ ತೆಗೆದು ಮಳೆಗಾಲದಲ್ಲಿ ಇಳಿಜಾರಿಗೆ ಹರಿದು ಬರುವ ನೀರು ಗುಂಡಿಗಳಲ್ಲಿ ಇಂಗುವಹಾಗೆ ಮಾಡಿದ್ದಾರೆ. ಈ ವಿಧಾನವನ್ನು ತೋಟದ ಸಮತಟ್ಟು ಜಾಗಗಳಲ್ಲೂ ಅಳವಡಿಸಿದ್ದು, ಕೊಚ್ಚಿಕೊಂಡು ಹೋಗುವ ನೀರು ಹರಿದು ಬಂದು ಗುಂಡಿಗಳಲ್ಲಿ ಇಂಗಿ ಆ ಜಾಗದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ. ಸುತ್ತಮುತ್ತ ಪ್ರದೇಶಗಳಲ್ಲಿ ಕೊರೆಸಿದ ಬೋರ್‍ವೆಲ್‍ಗಳಲ್ಲಿ ನೀರು ಸಿಗದೆ ವ್ಯರ್ಥವಾದರೂ, ಇವರ ಜಾಗದಲ್ಲಿ ಬೋರ್‍ವಲ್ ನಲ್ಲಿ ನೀರು ಬಂದಿರುವುದು ಹೆಚ್ಚಿದ ಅಂತರ್ಜಲ ಮಟ್ಟಕ್ಕೆ ಉದಾಹರಣೆ.
ಅಂತರ್ಜಲ ಮಟ್ಟದಲ್ಲಿ ಏರಿಕೆ
ಭೂಮಿಯಲ್ಲಿ ಅಂತರ್ಜಲ ಸರಿಯಾದ ಪ್ರಮಾಣದಲ್ಲಿ ಇದ್ದರೆ, ಬೆಳೆದ ಬೆಳೆಯು ಚೆನ್ನಾಗಿ ಬೆಳೆಯುತ್ತದೆ. ತೋಟ ತಂಪಾಗಿರುವುದರಿಂದ, ಕಾಳು ಮೆಣಸು, ರಬ್ಬರ್ ಬೆಳೆಯು ಇವರ ತೋಟದಲ್ಲಿ ಹೆಚ್ಚಾಗಿದೆ. ಅಲ್ಲದೇ, ರಬ್ಬರ್ ಮರಗಳ ಬುಡಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ಹರಿದು ಬರುವ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗದ ಹಾಗೆ ಮತ್ತು ನೀರು ಅಲ್ಲೆ ಇಂಗುವ ಹಾಗೆ ವ್ಯವಸ್ಥೆ ಮಾಡಿದ್ದಾರೆ. 3.50 ಎಕರೆ ಜಾಗದಲ್ಲಿ 100-120 ಇಂಗುಗುಂಡಿಗಳನ್ನು ತೆಗೆದು ತಮ್ಮ ತೋಟದಲ್ಲಿ ಬೀಳುವ ಮಳೆ ನೀರು ಹರಿದು ಹೋಗಿ ವ್ಯರ್ಥವಾಗದೇ, ಅಲ್ಲೆ ಇಂಗುವ ಹಾಗೆ ಮಾಡಿ, ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದ್ದಾರೆ.
ಮನಸ್ಸಿದ್ದರೆ ಮಾರ್ಗ
ಇದು ಯಾವುದೇ ಸರ್ಕಾರದ ಯೋಜನೆಯಿಂದ ಅಥವಾ ಇನ್ನೊಬ್ಬರ ಹೇಳಿಕೆ ಮೇರೆಗೆ ಮಾಡಿದ ಕೆಲಸವಲ್ಲ, ತಮ್ಮ ಜಾಗದಲ್ಲಿ ಬೀಳುವ ಮಳೆನೀರು ಸದ್ಭಳಕೆ ಆಗಬೇಕು, ಭೂಮಿಯಿಂದ ನೀರು ತೆಗೆದ ಹಾಗೆ, ಭೂಮಿಗೆ ನೀರು ಇಂಗಿಸುವ ಕೆಲಸವೂ ಆಗಬೇಲು ಎಂಬುದು ಮೋಹನ್‍ನಾರಾಯಣರ ಆಶಯ. ಈ ನಿಟ್ಟಿನಲ್ಲಿ 20 ವರ್ಷದ ಹಿಂದಿನಿಂದಲೇ ಮಾಡಿದ ಮಳೆ ನೀರು ಬಳಕೆ ಯೋಜನೆ ಈಗ ಉಪಯೋಗಕಾರಿಯಾಗಿದೆ. ಪ್ರತಿಯೊಬ್ಬರು ಮನೆ ನಿರ್ಮಿಸುವ ಸಮಯದಲ್ಲಿ ಸೋಲಾರ್ ಅಳವಡಿಸುವ ಹಾಗೆ, ಮೇಲ್ಛಾವಣಿ ಮೇಲೆ ಬೀಳುವ ನೀರನ್ನು ಸಂಗ್ರಹಿಸುವ ವಿಧಾನವನ್ನು ಅಳವಡಿಸಿಕೊಂಡರೆ, ಎಂತಹ ಸಂದರ್ಭದಲ್ಲೂ ನೀರಿನ ಕೊರತೆಯಾಗದು ಮತ್ತು ತೋಟ ಜಾಗಗಳಲ್ಲಿ ಇಂಗುಗುಂಡಿ ನಿರ್ಮಾಣ ಮಾಡಿದರೆ ತೋಟ ಜಾಗದ ಅಂತರ್ಜಲ ಹೆಚ್ಚಾಗುತ್ತದೆ.
ಮಳೆ ನೀರು ಸಂಗ್ರಹಿಸುವ ಯೋಜನೆಯಿಂದ ಸುತ್ತಲಿನ ಬೇರೆ ಜಾಗದಲ್ಲಿಯೂ ಅಂತರ್ಜಲ ಹೆಚ್ಚುತ್ತದೆ, ಆಗ ಬೋರ್ ಕೊರೆದು ನೀರೆತ್ತುವ ಸಂಭವವಿರುವುದಿಲ್ಲ. ನೀರು ಸಂಗ್ರಹಿಸುವ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ಎಂಬುದು ಡಾ.ಕೆ.ಎಸ್.ಮೋಹನ್‍ನಾರಾಯಣರ ಮಾತು.