ನನ್ನಂತೆ ನಡೆವರು ಎಲ್ಲ,
ನನಗಾವ ನಿಯಮವಿಲ್ಲ!
ಮುಂಜಾನೆ ಮಂಜಲ್ಲಿ
ಹಸಿರೆಲೆ ಮೇಲೆ ವಿಶ್ರಮಿಸುವ ಇಬ್ಬನಿ ನಾ,
ಸ್ವಚ್ಚಂದ ಆಕಾಶದಲ್ಲಿ
ಊರಗಲದ ರೆಕ್ಕೆ ಕಟ್ಟಿ ಹಾರುವ ಹಕ್ಕಿ ನಾ,
ಕಡಲಿನೊಡಲಿನಲ್ಲಿ
ಬೆಚ್ಚನೆ ಚಿಪ್ಪಲ್ಲಿ ಕಣ್ಮುಚ್ಚಿರುವ ಮುತ್ತು ನಾ..
ನವಿಲಂತೆ ನರ್ತಿಸಿದೆ, ಕೋಗಿಲೆಯಂತೆ ಹಾಡಿದೆ,
ಮಿಂಚಂತೆ ಮಿನುಗಿದೆ, ಮೀನಂತೆ ಈಜಿದೆ!
ಕೇದಿಗೆಯ ಕಂಪು, ಕೊಳಲಿನ ಇಂಪು,
ನೆರಳಿನ ತಂಪು ,ನಾನೇ ಎಲ್ಲ!!
ಆ ಸಂಪಿಗೆ ಮರ, ತರಗೆಲೆಯ ಚರ ಚರ,
ಎಲ್ಲೆಲ್ಲೂ ನಾನು…
ನನ್ನ ಕೊಲ್ಲಲ್ಲು ಬಂದವನು ನೀನು!
ಗಾಳಿಯಾಗಿ ಉಯ್ಯಾಲೆ ತೂಗಿದೆ,
ಅಲೆಯಾಗಿ ದೋಣಿ ತೇಲಿಸಿದೆ,
ಮಳೆಯಾಗಿ ಬೆಳೆಗೆ ನೀರುಣಿಸಿದೆ,
ಜ್ಯೋತಿಯಾಗಿ ಬೆಳಕ ನೀಡಿದೆ,
ಕಲ್ಲಾಗಿ ಮರಳಾಗಿ ಮನೆಯಾದೆ!
ಆದರೆ ನೀ ಎನ್ನ ಹಿಂಸಿಸಿದೆ…
ನಿಯಮ ಹೇರಿದೆ,
ಕತ್ತನ್ನು ಹಿಸುಕಿದೆ,
ಉಸಿರಾಡಲಾರೆ ಈಗ;
ರೆಕ್ಕೆ ಹರಡಲಾರೆ…
ನಾನೆಲ್ಲಿಯ ರಾಣಿ?
ನನ್ನೊಡತನವಿನ್ನು ಕಲ್ಪನೆಯಲ್ಲಿ !