1859ರ ಏಪ್ರಿಲ್ 18ನೆಯ ದಿವಸ ಮಧ್ಯಹ್ನ ನಾಲ್ಕು ಗಂಟೆ ಸಮಯ, ಗ್ವಾಲಿಯರ್’ನಿಂದ ಎಪ್ಪತ್ತೈದು ಮೈಲಿ ದೂರವಿರುವ ಶಿವಪುರಿಯಲ್ಲಿ ಕೈದಿಯೊಬ್ಬನನ್ನು ಗಲ್ಲಿಗೇರಿಸಲು ಬ್ರಿಟಿಷರು ಸಿದ್ದರಾಗಿದ್ದರು. ತನ್ನ ಕೈ ಕಾಲು ಕಟ್ಟಲು ಬಂದವರಿಗೆ, ಅದೆಲ್ಲ ಬೇಡ ಎಂದು ಆತ ನಸುನಗುತ್ತ ತಿಳಿಸಿದ. ಆತನ ಮುಖದಲ್ಲಿ ಎಳ್ಳಷ್ಟೂದುಃಖವಿರಲಿಲ್ಲ. ತನ್ನ ಕೈಗಳಿಂದ ತಾನೇ ಉರುಳು ಹಗ್ಗವನ್ನು ಕೊರಳಿಗೆ ಹಾಕಿಕೊಂಡ. ನೇಣಿನ ಹಗ್ಗವನ್ನು ಎಳೆದ ನಿಮಿಷಾರ್ಧದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಹೀಗೆ ನಗುತ್ತಾ ಸಾವನ್ನೆದುರಿಸಿದ ಆ ಪುರುಷಸಿಂಹನ ಹೆಸರೇ ತಾಂತ್ಯಾಟೋಪಿ.
ತಾಂತ್ಯಾಟೋಪಿ ಹುಟ್ಟಿದ್ದು 1814ರಲ್ಲಿ. ತಂದೆಯ ಹೆಸರು ಪಾಂಡುರಂಗ ಪಂತ. ನಾಸಿಕ್ ಜಿಲ್ಲೆಯಲ್ಲಿರುವ ಯೇವಲೆ ಎಂಬ ಊರಿನವರಾದ ಪಾಂಡುರಂಗ ಪಂತರಿಗೆ ಎಂಟು ಜನ ಮಕ್ಕಳಿದ್ದರು. ಅವರಲ್ಲಿ ಎರಡನೆಯವನ ಹೆಸರು ರಘುನಾಥ. ಮನೆಮಂದಿಯೆಲ್ಲಾ ರಘುನಾಥನನ್ನು ಪ್ರೀತಿಯಿಂದ ತಾಂತ್ಯಾ ಎಂದು ಕರೆಯುತ್ತಿದ್ದರು. ರಘುನಾಥ ಪೇಶ್ವೆಯವರಿಂದ ಟೋಪಿ ಪಡೆದಿದ್ದ. ಆ ಟೋಪಿಯು ಆತನ ಜೀವನ ಸಂಗಾತಿಯಾಗಿ ಕಡೆಯವರೆಗೆ ಶಿರಭೂಷಣವಾಯಿತು. ಆದ್ದರಿಂದಲೇ ಆತನ ಹೆಸರು “ ತಾಂತ್ಯಾಟೋಪಿ“ ಎಂದಾಯಿತು.
ವ್ಯಾಪಾರ ಮಾಡಲೆಂದು ಬಂದ ಬ್ರಿಟಿಷರು ನಿಧಾನವಾಗಿ ಭಾರತವನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಭಾರತದಲ್ಲಿದ್ದ ರಾಜರ ಪರಸ್ಪರ ಕಚ್ಚಾಟವನ್ನು ಲಾಭ ಮಾಡಿಕೊಂಡು ಒಂದೊಂದೇ ರಾಜ್ಯಗಳನ್ನು ವಶಪಡಿಸಿಕೊಂಡರು. ಆನೇಕ ರಾಜರು ತಮ್ಮ ರಾಜ್ಯವನ್ನು ಕಳೆದುಕೊಂಡರು. ಆದರೆ ಮರಾಠಿಗರು ಮಾತ್ರ ಇಂಗ್ಲಿಷರಿಗೆ ಶರಣಾಗಲಿಲ್ಲ. ಇಂಗ್ಲಿಷರು ಬಿಡದೇ ತಮ್ಮ ಪ್ರಯತ್ನ ಮುಂದು ವರೆಸಿದರು. ಬಾಜಿರಾವ್ ಎಂಬ ದುರ್ಬಲ ಪೇಶ್ವೆ ಬ್ರಿಟಿಷರಿಗೆ ಸೋತು ಶರಣಾಗಿ ಅವರಿಗೆ ರಾಜ್ಯ ಬಿಟ್ಟುಕೊಟ್ಟು ಎಂಟು ಲಕ್ಷ ವಾರ್ಷಿಕ ವೇತನ ಸ್ವೀಕರಿಸಲು ಒಪ್ಪಿ ಕಾನ್ಪುರ ಬಳಿಯಿರುವ ಬ್ರಹ್ಮಾವರ್ತಕ್ಕೆ ವಲಸೆ ಹೋದನು. ಇವರ ಜೊತೆ ಪಾಂಡುರಂಗ ಪಂತರು ಸಹ ಇದ್ದರು ಮತ್ತು ಮಗ ತಾಂತ್ಯಾಟೋಪಿಯೂ ಇದ್ದ. ಬಾಜಿರಾಯನಿಗೆ ಒಬ್ಬ ದತ್ತು ಪುತ್ರನಿದ್ದ ಅವನ ಹೆಸರು ನಾನಾಸಾಹೇಬ ಪೇಶ್ವೆ. ನಾನಾಸಾಹೇಬ ಮಹಾನ್ ದೇಶಭಕ್ತನಾಗಿದ್ದ. ಸ್ವಲ್ಪ ಸಮಯದ ನಂತರ ಬಾಜಿರಾವ್ ಸತ್ತುಹೋದ. ನಾನಾಸಾಹೇಬ ಪೇಶ್ವೆ ಪಟ್ಟವನ್ನು ಆಲಂಕರಿಸಿದನು. ತಾಂತ್ಯಾ ನಾನಾಸಾಹೇಬನ ಸೇನಾಧಿಪತಿಯಾದ. ಬ್ರಿಟಿಷರನ್ನು ಸದೆಬಡಿದು ಸ್ವರಾಜ್ಯ ಸ್ಥಾಪಿಸುವುದು ಇವರಿಬ್ಬರ ಗುರಿಯಾಗಿತ್ತು.
ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದ ಲಾರ್ಡ್ ಡಾಲ್ ಹೌಸಿ ದತ್ತು ಮಕ್ಕಳಿಗೆ ಅಧಿಕಾರವಿಲ್ಲವೆಂದ. ಇದರಿಂದ ನಾನಾಸಾಹೇಬನಿಗೆ ಬರುತ್ತಿದ್ದ ವಾರ್ಷಿಕ ವೇತನ ನಿಂತುಹೋಯಿತು. ಕೋಪಿತನಾದ ನಾನಾಸಾಹೇಬ ಬ್ರಿಟಿಷರ ವಿರುದ್ದ ಸಮರ ಸಾರಲು ಸಿದ್ದನಾದನು. ತಾಂತ್ಯಾಟೋಪಿನಾನಾಸಾಹೇಬನಿಗೆ ಬೆಂಬಲವಾಗಿ ನಿಂತ. ಒಂದು ಯೋಜನೆ ಸಿದ್ದವಾಯಿತು. ಆದರೆ ಬ್ಯಾರಕ್ ಪುರದಲ್ಲಿ ಮಂಗಲಪಾಂಡೆ ಬ್ರಿಟಿಷರ ಮೇಲೆ ಗುಂಡು ಹಾರಿಸಿದ. ಇದರ ಪರಿಣಾಮ ಸ್ವಾತಂತ್ರ್ಯದ ಕಿಡಿ ಎಲ್ಲೆಡೆ ಹಬ್ಬಿತು. ಮೀರತ್ ಮತ್ತು ದಿಲ್ಲಿಯಲ್ಲಿ ಸಿಪಾಯಿಗಳು ದಂಗೆಯೆದ್ದರು. ಮೀರತ್ ಮತ್ತು ದಿಲ್ಲಿ ಕ್ರಾಂತಿಕಾರಿಗಳ ವಶವಾಯಿತು. ಇತ್ತ ನಾನಾಸಾಹೇಬ ಮತ್ತು ತಾತ್ಯಾ ಈ ಅವಕಾಶಕ್ಕಾಗಿ ಕಾಯುತ್ತಿದ್ದರು. ಯೋಜನೆ ರೂಪಿಸಿದ ನಾನಾಸಾಹೇಬ ಬ್ರಿಟಿಷರ ವಿರುದ್ದ ಯುದ್ದ ಸಾರಿದ. ತಾಂತ್ಯಾಟೋಪಿಯ ಮಾರ್ಗದರ್ಶನದಲ್ಲಿ ನಡೆದ ಯುದ್ದದಲ್ಲಿ ನಾನಾಸಾಹೇಬ ಕಾನ್ಪುರವನ್ನು ಗೆದ್ದು ಪೇಶ್ವೆಯ ಪಟ್ಟಕ್ಕೇರಿದ. ಝಾನ್ಸಿಯೂ ಸಹ ಸ್ವಾತಂತ್ರ್ಯವಾಯಿತು. ಆದರೆ ಗೆಲುವು ಹೆಚ್ಚು ಕಾಲ ಉಳಿಯಲಿಲ್ಲ. ನಾನಾಸಾಹೇಬ ಬ್ರಿಟಿಷರ ವಿರುದ್ದ ನಡೆದ ಮತ್ತೊಂದು ಯುದ್ದದಲ್ಲಿ ಸೋತು ಓಡಿಹೋಗಬೇಕಾಯಿತು. ಸೈನ್ಯ ಹರಿದು ಹಂಚಿಹೋಯಿತು. ಸೈನ್ಯವನ್ನು ಮತ್ತೆ ಸಂಘಟಿಸುವ ಜವಾಬ್ದಾರಿ ತಾಂತ್ಯಾಗೆ ವಹಿಸಲಾಯಿತು.
ತಾಂತ್ಯಾ ಮರಾಠರ ಗೆರಿಲ್ಲಾ ಯುದ್ದದಲ್ಲಿ ನಿಪುಣನಾಗಿದ್ದ. ಗೆರಿಲ್ಲಾ ಯುದ್ದದ ಮೂಲಕ ದಾಳಿ ಸಂಘಟಿಸಿದ ತಾಂತ್ಯಾ, ಕಾನ್ಪುರ, ಕಾಲ್ಪಿ ಮುಂತಾದ ಪ್ರದೇಶಗಳನ್ನು ಗೆದ್ದು ಇಂಗ್ಲಿಷರಿಗೆ ನಡುಕ ಹುಟ್ಟಿಸಿದ. ಕಾಲ್ಪಿ ಕೋಟೆಯನ್ನು ಗೆದ್ದ ತಾತ್ಯಾ ಆ ಪ್ರದೇಶವನ್ನು ಯುದ್ದ ಕೇಂದ್ರವನ್ನಾಗಿ ಮಾಡಿಕೊಂಡ. ತನ್ನ ಪರಾಕ್ರಮದಿಂದ ತಾತ್ಯಾ ಪ್ರಸಿದ್ದನಾದ. ಬ್ರಿಟಿಷರು ತಾಂತ್ಯಾನನ್ನು ಸೋಲಿಸಬೇಕೆಂದು ನಿರ್ಧರಿಸಿದರು. ಬ್ರಿಟಿಷ್ ಸೇನಾಧಿಕಾರಿ ಕಾಲಿನ್ ಮತ್ತು ತಾಂತ್ಯಾ ನಡುವೆ ಕಾನ್ಪುರದಲ್ಲಿ ಭೀಕರ ಯುದ್ದ ನಡೆಯಿತು. ಆದರೆ ಈ ಬಾರಿ ತಾಂತ್ಯಾ ಸೋತು ಹೋದ. ಆದರೂ ಆತ ಸೈನ್ಯ ಸಮೇತ ತಪ್ಪಿಸಿಕೊಂಡು ಪರಾರಿಯಾದ. ಕಾಲ್ಪಿಗೆ ಬಂದ ತಾಂತ್ಯಾ ಮತ್ತೆ ಸೈನ್ಯವನ್ನು ಸಂಘಟಿಸಿ ಇಂಗ್ಲಿಷರ ವಿರುದ್ದ ಒಂದು ವರ್ಷ ಯುದ್ದ ಮಾಡಿದ. ಝಾನ್ಸಿ ಅಪಾಯದಲ್ಲಿದೆ ಎಂಬ ಸಂದೇಶ ಬಂದಾಗ ರಾಣಿ ಲಕ್ಷ್ಮೀಬಾಯಿಗೆ ಸಹಕರಿಸಲು ಆತಮುಂದಾದ. ಆದರೆ ಝಾನ್ಸಿ ಬ್ರಿಟಿಷರ ಕೈವಶವಾಯಿತು. ಕಾಲ್ಪಿಗೆ ಬಂದ ಲಕ್ಷ್ಮೀಬಾಯಿ ಮತ್ತು ತಾಂತ್ಯಾ ಮೇಲೆ ಇಂಗ್ಲಿಷರು ಮತ್ತೆ ಯುದ್ದ ಮಾಡಿದರು. ಮತ್ತೊಂದು ಘನಘೋರ ಯುದ್ದ ನಡೆಯಿತು. ಆದರೆ ಸೋಲು ಕಾದಿತ್ತು. ಕಾಲ್ಪಿಯು ಕೈ ತಪ್ಪಿತ್ತು. ಕುಪಿತನಾಗದ ತಾಂತ್ಯಾ ಗ್ವಾಲಿಯರ್ ತಲುಪಿ ಅಲ್ಲಿನ ಸೈನಿಕರನ್ನು ಸಂಘಟಿಸಿದ. ಲಕ್ಷ್ಮೀಬಾಯಿ ಮತ್ತು ತಾತ್ಯಾ ಮತ್ತೆ ಯುದ್ದ ಮಾಡಿದರು. ಈ ಯುದ್ದದಲ್ಲಿ ರಾಣಿ ಲಕ್ಷ್ಮೀಬಾಯಿ ವೀರ ಮರಣವನ್ನು ಹೊಂದಿದಳು.
ತಾಂತ್ಯಾ ಏಕಾಂಗಿಯಾದ. ಮತ್ತೆ ಸೈನ್ಯವನ್ನು ಸಂಘಟಿಸಲು ಹಲವರ ಸಹಾಯವನ್ನು ಬೇಡಿದ. ಯಾರೂ ಆತನಿಗೆ ಸಹಾಯ ಮಾಡಲಿಲ್ಲ. ತಾಂತ್ಯಾನನ್ನು ಹಿಡಿಯಲು ಇಂಗ್ಲಿಷ್ ಸೇನಾಧಿಪತಿಗಳು ಬೆನ್ನುಹತ್ತಿದರು. ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಎಂಟು ತಿಂಗಳು ಅವರಿಗೆ ತಾಂತ್ಯಾ ಸಿಗಲಿಲ್ಲ. ತಾತ್ಯಾಟೋಪಿ ಒಬ್ಬನೇ ಇಂಗ್ಲೀಷರ ವಿರುದ್ದ 150 ಬಾರಿ ಯುದ್ದ ಮಾಡಿದ್ದ. ಕೊನೆಗೆ, ತನ್ನ ಗೆಳೆಯ ಮಾನಸಿಂಗನ ಆಶ್ರಯ ಪಡೆದು ನಿರ್ಜನ ಪ್ರದೇಶದ ಕಾಡಿನಲ್ಲಿ ತಂಗಿದ್ದ. ಇಂಗ್ಲಿಷರ ಹಣದ ಆಮಿಷಕ್ಕೆ ಬಲಿಯಾದ ಮಾನಸಿಂಗ ತಾಂತ್ಯಾನನ್ನು ಸೆರೆಹಿಡಿಯಲು ಸಹಕರಿಸಿದ. ತಾಂತ್ಯಾನನ್ನು 1859ರ ಏಪ್ರಿಲ್ 7ರಂದು ಇಂಗ್ಲಿಷರು ಸೆರೆಹಿಡಿದರು. ಇಂಗ್ಲಿಷರಿಗೆ ನಡುಕ ಹುಟ್ಟಿಸಿದ್ದ ತಾಂತ್ಯಾ ಕೊನೆಗೆ ಮಾನಸಿಂಗನ ದ್ರೋಹದಿಂದ ಬಂಧಿಯಾದ. ವಿಚಾರಣೆಯ ನಾಟಕವಾಡಿದ ಇಂಗ್ಲಿಷರು ತಾಂತ್ಯಾಟೋಪಿಯನ್ನು ಗಲ್ಲಿಗೇರಿಸಿದರು. ಶ್ರೇಷ್ಠ ಬಲಿದಾನ ಮಾಡಿದ ತಾತ್ಯಾನ ಶೌರ್ಯ ಮತ್ತು ಸಾಹಸಗಳು ಇಂದಿಗೂ ನಮಗೆ ಪ್ರೇರಣೆಯಾಗಿದೆ. ತಾಂತ್ಯಾಟೋಪಿ ಎಂಬ ಹೆಸರು ದೇಶಭಕ್ತರ ಮನಸ್ಸಿನಲ್ಲಿ ಎಂದೆಂದಿಗೂ ಹಚ್ಚಹಸಿರಾಗಿದೆ.