ಅಂಕಣ

ನಮ್ಮಿಂದಾಗಿಯೇ ಪ್ರಕೃತಿ ಮಾತೆಯ ಮಮಕಾರ ಮರೆಯಾಗದಿರಲಿ

ಜೂನ್ ತಿಂಗಳು ಪ್ರಾರಂಭವಾದರೆ ಸಾಕು, ನಮ್ಮಲ್ಲಿ ರಾಷ್ಟ್ರದ ಪರಿಸರ ಮತ್ತು ಅದರ ಬಗೆಗಿನ ಕಾಳಜಿಯ ಭಾವ ಜಾಗೃತಗೊಂಡುಬಿಡುತ್ತದೆ. ಜೂನ್ ತಿಂಗಳಲ್ಲಿ ವನಮಹೋತ್ಸವ, ಪರಿಸರ ದಿನಾಚರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಎಂಬ ಹೆಸರಿನಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿ ಸುಮ್ಮನಾಗಿಬಿಡುತ್ತೇವೆ. ಮತ್ತೆ ಈ ಭಾಷಣ ಮಾಡುವುದು, ಜನರಲ್ಲಿ ಪರಿಸರದ ಬಗೆಗಿನ ಭಾವನೆಯನ್ನು ಜಾಗೃತಿಗೊಳಿಸುವ ನಮ್ಮ ಮನ ಜಾಗೃತಗೊಳ್ಳುವುದು ಕೇವಲ ಬರುವ ವರ್ಷದ ಜೂನ್ ತಿಂಗಳಿನಲ್ಲಿಯೇ ಎಂದರೆ ಅತಿಶಯೋಕ್ತಿಯೇನಲ್ಲ ಬಿಡಿ. ನಾವು ವರ್ಷಕ್ಕೊಮ್ಮೆ ನೋಡುವ ಈ ಪರಿಸರ ಎಷ್ಟು ಸುಂದರ ಎಂದುಕೊಳ್ಳುತ್ತೇವಲ್ಲಾ? ಅದೇ ಪರಿಸರದ ಸಂರಕ್ಷಣೆಯ ಹೊಣೆಯನ್ನು ವರ್ಷಪೂರ್ತಿ ನಿಭಾಯಿಸಿದರೆ ನಾವು ನೋಡುವ ಪರಿಸರ ನಮಗೆ ಇನ್ನಷ್ಟು ಸುಂದರವಾಗಿ ಕಾಣಬಹುದಲ್ಲಾ ಎಂಬ ಯೋಚನೆಯನ್ನೇ ನಾವೀಗ ಮರೆತಿರುವಂತಿದೆ.

ಆಧುನಿಕತೆಯ ಗಾಲಿಯಲ್ಲಿ ಸಿಲುಕಿರುವ ನಾವು ಇಂದಿನ ದಿನದಲ್ಲಿ ಪರಿಸರ ಎಂಬ ಯೋಚನೆಯನ್ನು ಮಾಡುವುದು ಕೇವಲ ಜೂನ್ ತಿಂಗಳ ವನಮಹೋತ್ಸವದಲ್ಲಿ ಮಾತ್ರ. ಪ್ರಕೃತಿ ಮತ್ತು ಮಾನವನ ನಡುವೆ ಎಂತಹ ಉತ್ತಮ ಬಾಂಧವ್ಯ ಇದೆಯಲ್ಲವೇ? ಪ್ರಕೃತಿಯ ಮಾತೆಯ ಪ್ರೀತಿ ವಾತ್ಸಲ್ಯಗಳನ್ನು ಮಾನವನು ಎಂದಾದರೂ ಮರೆಯಲು ಸಾಧ್ಯವೇ? ನಾವು ಆಧುನಿಕತೆಯ ಕೈಗೊಂಬೆಯಾಗಿ ಕೇವಲ ಪ್ರತ್ಯಕ್ಷವಾಗಿ ನಮ್ಮನ್ನು ಸಲುಹುತ್ತಿರುವ ವಿಷಯದ ಕುರಿತಾಗಿ ಮಾತ್ರ ಇಂದು ಯೋಚಿಸುತ್ತಿದ್ದೇವೆ. ಆದರೆ ನಮಗೆ ಶುದ್ಧ ಗಾಳಿ ಹಾಗೂ ನೀರನ್ನು ನೀಡಿ ಪರೋಕ್ಷವಾಗಿ ಸಲಹುತ್ತಿರುವ ಭೂಮಾತೆ ಮತ್ತು ಪ್ರಕೃತಿ ಮಾತೆಯ ಮಮಕಾರವನ್ನೇ ಇಂದು ಮರೆತಂತಿದೆ.

ಇಂದಿನ ದಿನದಲ್ಲಿ ಏನಾಗಿದೆಯೆಂದರೆ ಯುವಕರು ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಕೇವಲ ಪರಿಸರ ವಿಜ್ಞಾನ ಓದುವಂತಹ ವಿದ್ಯಾರ್ಥಿಗಳು ಮಾತ್ರವೇ ತಿಳಿದುಕೊಳ್ಳಬೇಕು ಎಂಬಂತಾಗಿದೆ. ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಪ್ರಕೃತಿ ಮಾತೆಯ ಮಡಿಲಲ್ಲಿ ನಿಶ್ಚಿಂತೆಯಿಂದ ಮಲಗಿಲ್ಲವೇ? ಎಂದು ಉಳಿದವರನ್ನು ಇಂದು ಪ್ರಶ್ನಿಸುವಂತಹ ಸಂದರ್ಭ ಬಂದೊದಗಿದೆ.

ನಮ್ಮನ್ನು ನಾವು ಅರಿತುಕೊಂಡು ಜೀವನದಲ್ಲಿ ಕೆಲ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರೆ ನಾವು ಪರಿಸರದ ಬಗೆಗೆ ನಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಪರಿಸರದಲ್ಲಿ ವಾಸಿಸುವ ಪುಟ್ಟ ಗೀಜಗ ತನ್ನ ಕಲಾಸಿರಿಯನ್ನು ಮೆರೆದು ಬಹಳ ಸುಂದರವಾಗಿ ತನ್ನ ಗೂಡನ್ನು ಕಟ್ಟಿರುವುದನ್ನು ನೋಡಲು ಇಂದು ನಮಗೆ ಸಮಯವೇ ಸಿಗುತ್ತಿಲ್ಲ. ಬದಲಾಗಿ ಶಾಪಿಂಗ್ ಮಾಲ್, ಫಿಲ್ಮ್’ಗಳನ್ನು ನೋಡುವುದರಲ್ಲಿಯೇ ನಮ್ಮ ಸಮಯವನ್ನೆಲ್ಲಾ ವ್ಯರ್ಥವಾಗಿಸುತ್ತಿದ್ದೇವೆ. ಪ್ರವಾಸಿ ತಾಣವನ್ನು ವೀಕ್ಷಿಸಲೆಂದು ಹೋಗಿ ಅಲ್ಲಿನ ಪರಿಸರವನ್ನು ಶುಚಿಯಾಗಿಡುವಂತೆ ನೀತಿಯನ್ನು ಹೇಳುವಂತಹ ಪ್ರಜ್ಞಾವಂತ ಜನರೇ ಇಂದು ತಾವು ತೆಗೆದುಕೊಂಡು ಹೋಗಿರುವಂತಹ ನೀರಿನ ಬಾಟಲಿಗಳೆರಡನ್ನು ಅಲ್ಲೇ ಎಸೆದು ಬರುವ ಮಟ್ಟಕ್ಕೆ  ತಲುಪಿದ್ದಾರೆ ಎಂದರೆ ಯೋಚಿಸಲೇ ಬೇಕಾದ ಸಂಗತಿ. ಬಾಟಲಿಗಳನ್ನು ಎಸೆಯುವುದರ ಜೊತೆಗೆ ‘ಎಷ್ಟು ಗಲೀಜಾಗಿದೆ’ ಎಂದು ಹೇಳುವ ಜನರಿಗೇನೂ ಇಂದಿನ ದಿನದಲ್ಲಿ ಕೊರತೆಯಿಲ್ಲ.

ಇಂದು ಕೇವಲ ಪಟ್ಟಣಗಳಲ್ಲಿ ಮಾತ್ರ ಜನರಿಗೆ ಪರಿಸರದ ಮೇಲಿನ ಕಾಳಜಿ ಮಾಸುತ್ತಿಲ್ಲ. ಬದಲಾಗಿ ಹಳ್ಳಿಯ ಜನರಿಗೂ ಕೂಡ ಪರಿಸರದ ಬಗೆಗಿನ ಪ್ರೀತಿ ವಿಶ್ವಾಸ ಕಡಿಮೆಗೊಳ್ಳುತ್ತಿದೆ. ಇಂತಹ ನಮ್ಮ ಸಣ್ಣ ಸಣ್ಣ ತಪ್ಪುಗಳನ್ನೆಲ್ಲಾ ಕ್ಷಮಿಸಿ ಭೂಮಿತಾಯಿ ಬೇಸತ್ತು ಹೋಗಿ ತನ್ನ ಉಗ್ರ ರೂಪವನ್ನು ತೋರ್ಪಡಿಸುವ ಮುಂಚಿತವಾಗಿ ನಾವು ಎಚ್ಚೆತ್ತುಕೊಂಡು ಪರಿಸರವನ್ನು ಸಂರಕ್ಷಿಸುವ ಪಣ ತೊಡೋಣ. ಆಗ ಮಾತ್ರ ಪರಿಸರದ ಶ್ರೇಯೋಭಿವೃದ್ಧಿ ಸಾಧ್ಯವಾಗಿ ನಾವು ನಿಶ್ಚಿಂಚಿತೆಯಿಂದಿರಲು ಸಾಧ್ಯವಾಗಬಲ್ಲದು.

-ಭರತ್ ಭಾರದ್ವಾಜ್ ಹೆಚ್, ಎಸ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!