ಹೇಳಿ ಕೇಳಿ ಇದು ಮಾಡರ್ನ್ ಯುಗ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರೂ ಬದಲಾಗುತ್ತಿದ್ದಾರೆ. ಬಹುತೇಕ ಜನರಲ್ಲಿ ಹಳ್ಳಿ, ಹಸಿರು, ಪ್ರಕೃತಿ ಎಂದರೇನು ಎಂದು ಕೇಳಿದರೆ ಗೂಗುಲ್ ಮೊರೆ ಹೋಗುವ ಕಾಲವಿದು. ಗುಡಿಕೈಗಾರಿಕೆಗಳ ಸೊಬಗು ಗ್ರಾಮೀಣ ಭಾರತದ ಮುಖ್ಯ ಗುರುತು. ಮಹಾತ್ಮಾ ಗಾಂಧಿ ಬೆಂಬಲಿಸಿದ ಗ್ರಾಮೀಣ ಕೈಗಾರಿಕೆಗಳಲ್ಲಿ ಈ ಕುಂಬಾರಿಕೆಯೂ ಒಂದು. ಆದರೀಗ ಕುಂಬಾರರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕಾರಣ ನೂರಾರು. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪರಿಸರ ಬರಿದಾಗುತ್ತಿದೆ. ಗ್ರಾಮೀಣ ಕುಲಕಸುಬುಗಳು ಜಾನಪದ ಪುಸ್ತಕಗಳಲ್ಲಿ ಅಚ್ಚಾಗಿ ಇತಿಹಾಸ ಸೇರುತ್ತಿವೆ.
ಮುಂಜಾನೆ ಬೇಗನೇ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ ಮಣ್ಣಿನ ಕಡೆಗೆ ದೃಷ್ಟಿ ಹಾಯಿಸಿ ಮಡಕೆಯ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾನೆ ಕುಂಬಾರ. ‘ಗುಡಿಕೈಗಾರಿಕೆ’ ಇನ್ನೂ ಜೀವಂತಗೊಂಡಿದೆ ಎಂದು ಬಿಂಬಿಸಲು ಉಳಿದಿರುವ ಕೆಲವೇ ಕೆಲವು ಗುಡಿಕೈಗಾರಿಕೆಗಳಲ್ಲಿ ಕುಂಬಾರಿಕೆಯೂ ಒಂದು. ಹೌದು! ನಾಗರೀಕತೆ ಆರಂಭವಾದಾಗಿನಿಂದ ಚಕ್ರದ ಬಳಕೆಯ ಜತೆಗೆ ಕುಂಬಾರಿಕೆ ವೃತ್ತಿ ಆರಂಭ ಪಡೆಯಿತು. ಅಂದಿನಿಂದ ತಿರುಗಲಾರಂಭಿಸಿದ ಚಕ್ರ ಇಂದೂ ಕುಂಬಾರನ ಹೊಟ್ಟೆ ಹೊರೆಯುತ್ತಿದೆ. ಆದರೆ ಈ ಕಸಬು ಇನ್ನೇನು ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಕೊನೆ ಕಾಣುತ್ತದೋ ಎಂಬ ಭಯ ಕುಂಬಾರರನ್ನು ಕಾಡುತ್ತದೆ.
ಮಡಕೆ ತಯಾರಿಕೆಯ ವಿಧಾನ ಬಲು ಸುಲಭವೇನಲ್ಲ :
ಅಬ್ಬಾ ಕುಂಬಾರರ ಕಷ್ಟ ಅಷ್ಟಿಷ್ಟಲ್ಲ. ದೂರದ ಊರಿನಿಂದ ಮಣ್ಣನ್ನು ದುಡ್ಡು ಕೊಟ್ಟು ಹೊತ್ತು ತಂದು ಅದನ್ನ ಸೂಕ್ತವಾಗಿ ಹದ ಮಾಡಬೇಕು. ಅದು ಉಂಡೆಯ ರೂಪವನ್ನು ತಾಳಿದಾಗ ‘ತಗೋರಿ’ ಅಂದರೆ ಚಕ್ರಕ್ಕೆ ಹಾಕಿ ತಿರುಗಿಸಬೇಕು. ಕುಂಬಾರ ಅದನ್ನು ತನ್ನ ಬೆರಳಿನಲ್ಲಿ ಅಂದ ಚೆಂದದ ಕುಂಭವಾಗಿ ಬದಲಿಸುತ್ತಾನೆ. ಇದೊಂದು ಚಾಕಚಕ್ಯತೆಯ ಕೆಲಸವೂ ಹೌದು. ಇದು ಕುಂಬಾರರಿಗೆ ದೈವದತ್ತವಾಗಿ ಒಲಿಯುವ ವಿದ್ಯೆ. ಬೆರಳಿನ ವೈವಿಧ್ಯಮಯ ಚಲನೆಯ ಮೂಲಕ ಬಿಸಲೆ, ಗದ್ದವು, ಕಿನ್ನಗದ್ದವು, ಬಾವಡೆ, ಬಂಡಿಸಲೆ, ತೂರಿ, ಅಡ್ಯಾರ, ಕಿನ್ನಿಬಿಸಲೆ, ಕರ, ಮುಂತಾದ ಬಹಳಷ್ಟು ನಮೂನೆಯ, ವಿಭಿನ್ನ ಗಾತ್ರಗಳ ಮಣ್ಣಿನ ಪಾತ್ರೆಗಳು ತಯಾರಾಗುತ್ತವೆ. ಬಿಳಿ ಕಲ್ಲು, ಹಾಗೂ ಮರದ ತುಂಡನ್ನು ಬಳಸಿ ಅದನ್ನು ನುಣುಪುಗೊಳಿಸಿ ಬಿಸಿಲಿಗಿಟ್ಟು ಒಣಗಿಸಲಾಗುತ್ತದೆ.
ಹದವಾಗಿ ಒಣಗಿದ ಮಡಕೆಗೆ ಆವೆ ಹಾಕುವ ಕಾರ್ಯ ಅತ್ಯಂತ ಮಹತ್ವವಾದದ್ದು. ಆವೆ ಹಾಕುವುದೆಂದರೆ ಮಡಕೆಯನ್ನು ಬೆಂಕಿಯಲ್ಲಿ ಸುಡುವುದು. ಕಟ್ಟಿಗೆ, ತೆಂಗಿನ ಗೆರಟೆ ಬಳಸಿ ಮಡಿಕೆಯನ್ನು ಸುಡಲಾಗುತ್ತದೆ. ಇದು ಬಾರಿ ಜಾಗರೂಕತೆಯಿಂದಾಗಿ ನಡೆಯಬೇಕಾದ ಕೆಲಸ. ಸ್ವಲ್ಪ ಕೈತಪ್ಪಿದರೂ ಮಡಕೆ ಬಲಿಯಾಗಬಹುದು. ಮಡಿಕೆಯನ್ನು ಒಪ್ಪವಾಗಿ ಜೋಡಿಸಿದ ನಂತರ ಅದಕ್ಕೆ ಬೈಹುಲ್ಲು ಹಾಗೂ ಮಣ್ಣಿನಿಂದ ಮುಚ್ಚಲಾಗುತ್ತದೆ. ನಂತರ ಬೆಂಕಿ ಕೊಟ್ಟು ಅದು ಉರಿಯುವಂತೆ ನೋಡಿಕೊಳ್ಳಬೇಕು. ಬೆಂಕಿ ಆರಿ ಹೊದಲ್ಲಿ ಮಡಕೆ ಅರೆಬೆಂದು, ಮಾಡಿದ ಕೆಲಸವಿಡೀ ಕೆಟ್ಟುಹೋಗಬಹುದು.
ಕಾಲ ಬದಲಾಗಿದೆ:
ಹಿಂದಿನ ಕಾಲದಲ್ಲಿ ಸಿದ್ಧ ಮಡಕೆಗಳನ್ನು ಉದ್ದವಾದ ಬಿದಿರಕೋಲಿನ ತುದಿಗಳಲ್ಲಿ ನೇತಾಡಿಸಿಕೊಂಡು ಮನೆ ಮನೆಯೆದುರು ಕೂಗುತ್ತಾ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಆಧುನಿಕತೆಯ ಗುಂಗಿನಲ್ಲಿ ಇಂತಹಾ ದೃಶ್ಯಗಳು ಮರೆಯಾಗಿವೆ. ಇಂದು ಮಡಕೆಗಳನ್ನು ದೊಡ್ಡ ಅಂಗಡಿಗಳಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ. ಆದರೂ ಕೇರಳದ ಕೆಲವು ಹಳ್ಳಿಗಳಲ್ಲಿ ಮನೆ ಮನೆಗೆ ಮಡಕೆಯನ್ನು ಮಾರಾಟ ಮಾಡಲಾಗುತ್ತದೆ. ಸಿದ್ಧಗೊಂಡ ಮಡಕೆಗಳ ನಿರ್ವಹಣೆಯೂ ಒಂದು ಬಗೆಯ ಕಲೆ. ಏಕೆಂದರೆ ಮಡಕೆ ಅತ್ಯಂತ ಸೂಕ್ಷ್ಮವಾದ ವಸ್ತು.. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯಂತೆ ಮಡಕೆಯನ್ನು ಜಾಗರೂಕತೆಯಿಂದ ರಕ್ಷಿಸುವುದೂ ಒಂದು ಕಲೆ.
“ನಮ್ಮ ಪಾರಂಪರಿಕ ಕಸುಬನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಆದರೆ ನಮ್ಮ ಮಕ್ಕಳು ಈ ಕಸುಬನ್ನು ಕಲಿಯಲು ಆಸಕ್ತಿ ತೋರುತ್ತಿಲ್ಲ. ಕಾರಣ ಬೇಡಿಕೆಯಲ್ಲಿನ ಇಳಿಕೆಯ ಜೊತೆಗೆ ಕಡಿಮೆ ಆದಾಯ. ಸರ್ಕಾರ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸಬೇಕು. ಇಲ್ಲವಾದಲ್ಲಿ ಇನ್ನು ಮೂವತ್ತು ವರ್ಷಗಳಲ್ಲಿ ಕುಂಬಾರಿಕೆ ಕಸುಬು ಇತಿಹಾಸದ ಪುಟ ಸೇರುವುದು ನಿಶ್ಚಿತ”
ಮಡಕೆ ಮಾಡುವ ಕಸುಬು ಬಹಳಷ್ಟು ಏಳು ಬೀಳು ಹೊಂದಿದ ಕಸುಬಾಗಿದ್ದರೂ ಪರಂಪರೆಯಾಗಿ ಬಂದ ಈ ಕಸುಬನ್ನು ಆಸಕ್ತಿಯಿಂದ ಮುಂದುವರೆಸಿಕೊಂಡು ಹೋಗುತ್ತಿರುವ ಸಾಕಷ್ಟು ಕುಟುಂಬಗಳಿವೆ. ಈ ಕಸುಬಿನಲ್ಲಿ ಲಾಭವಿಲ್ಲದಿದ್ದರೂ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಕಷ್ಟಪಟ್ಟು ತಯಾರಿಸಿದ ಕೆಲ ಪಾತ್ರೆಗಳು ಸುಡುವ ವೇಳೆ ಅಥವಾ ಒಣಗಿಸುವ ವೇಳೆ ಒಡೆದು ಹೋಗುತ್ತೇವೆ. ಅಂತಹವುಗಳನ್ನು ಮಾರಲೂ ಸಾಧ್ಯವಿಲ್ಲ, ಸರಿಪಡಿಸಲೂ ಸಾಧ್ಯವಿಲ್ಲ. ಅಲ್ಲದೇ ಒಂದು ಮಡಕೆ ಸುಮಾರು 200 ರಿಂದ 300ರೂಗಳ ವರೆಗೆ ಮಾರಾಟ ಮಾಡಬಹುದು.. ಅದಕ್ಕಿಂತ ಜಾಸ್ತಿ ಬೆಲೆ ಕೊಟ್ಟು ಖರೀದಿಸಲು ಯಾರೂ ಮುಂದೆ ಬರುವುದಿಲ್ಲ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಸಮೀಪದ ನೀಲಯ್ಯ ಕುಂಬಾರ.
ತಯಾರಾದ ಮಡಕೆಗಳನ್ನು ಮಾರುವುದೂ ಒಂದು ಬಗೆಯ ಕೌಶಲ್ಯದ ಕೆಲಸ. ಇಲ್ಲಿ ಮಾತಿನ ತಂತ್ರಗಾರಿಕೆ ಸಹಾಯವಾಗುತ್ತದೆ. ಮಾತೇ ಇಲ್ಲಿ ಮುಖ್ಯ ಬಂಡವಾಳ. ಮಡಕೆ ಚೆನ್ನಾಗಿದೆಯೇ ಇಲ್ಲವೇ ಎಂದು ಬಿಂಬಿಸಲು ಅದನ್ನು ಬಡಿದು ಶಬ್ಧ ಹೊರಡಿಸುವ ವಿಧಾನವೂ ಪ್ರಮುಖವಾದುದು. ಪೊಳ್ಳು ಮಡಕೆಗೆ ಬಡಿದಾಗ ಬರುವ ಶಬ್ಧವೇ ಬೇರೆ. ಎರಡು ಬೆರಳು ಸೇರಿಸಿ ಮಡಕೆಗೆ ಬಡಿದಾಗ ಠಣ್ ಠಣ್ ಎಂದು ಕಂಚಿನ ಪಾತ್ರಕ್ಕೆ ಹೊಡೆದ ಶಬ್ಧ ಬಂದರೆ ಅದು ಉತ್ತಮ ಮಡಕೆ ಎಂದರ್ಥ! ಹೀಗೆ ತಮ್ಮ ವಿಭಿನ್ನ ತಂತ್ರಗಾರಿಕೆಯ ಮೂಲಕ ಮಡಕೆಯನ್ನು ಕೊಳ್ಳುವಂತೆ ಮಾಡುವುದರಲ್ಲಿ ಇರುವ ಶ್ರಮ ಬಹಳಷ್ಟಿದೆ. ಆದರೂ ಇಂದಿನ ಜನರಿಗೆ ಮಡಕೆಯ ಬಗ್ಗೆ ಒಂದು ರೀತಿಯ ತಾತ್ಸಾರ ಭಾವವಿದೆ. ಹತ್ತಿಪ್ಪತ್ತು ರೂಪಾಯಿಗೆ ಮಡಕೆ ಕೇಳಿ ನಮ್ಮ ಉತ್ಸಾಹವನ್ನು ಕುಗ್ಗಿಸುತ್ತಾರೆ ಎನ್ನುತ್ತಾರೆ ಚಂದ್ರಯ್ಯ ಕುಂಬಾರ.
ಪರಿಸರ ಸ್ನೇಹಿ ಮಡಕೆ :
ಮಡಕೆಯಿಂದ ಸಾಕಷ್ಟು ಪ್ರಯೋಜನಗಳೂ ಇವೆ.. ಸಾಮಾನ್ಯವಾಗಿ ಮಣ್ಣಿನ ಹೂಜಿಯಲ್ಲಿ ಶೇಖರಿಸಿದ ನೀರು ಬಹಳಷ್ಟು ತಂಪಾಗಿದ್ದು ಆರೋಗ್ಯಕ್ಕೂ ಉತ್ತಮ. ಮೊಸರನ್ನು ಹುಳಿಯಾಗದಂತೆ ಶೇಖರಿಸಲೂ ಮಡಕೆಯನ್ನು ಬಳಸುತ್ತಾರೆ. ಅಲ್ಲದೇ ಮಡಕೆಯಲ್ಲಿ ಮಾಡಿದ ಅಡುಗೆಯ ರುಚಿಯೇ ಬೇರೆ! ಇನ್ನು ಮಾಂಸದ ಪದಾರ್ಥಗಳು ಮಡಕೆಯಲ್ಲಿ ಬೆಂದರೆ ಅದರ ರುಚಿಯ ವೈಶಿಷ್ಟ್ಯ ಎರಡು ಪಟ್ಟು ಜಾಸ್ತಿ ಎನ್ನುತ್ತಾರೆ ಕುಂಬಾರಿಕೆ ವೃತ್ತಿ ನೆಚ್ಚಿಕೊಂಡ ಉಜಿರೆ ವಿವೇಕಾನಂದ ನಗರದ ಕಲ್ಯಾಣಿ.
ಪರಿಸರ ಬರಿದು, ಮಣ್ಣೂ ಬರಿದು :
ಮನುಷ್ಯ ಸ್ವಾರ್ಥಿ. ಇಂದು ಉತ್ತಮ ಕಪ್ಪು ಮಣ್ಣು ದೊರೆಯುತ್ತಿಲ್ಲ. ಕುಂಬಾರರಿಗೆ ಕಾಡುವ ಹಲ ಸಮಸ್ಯೆಗಳಲ್ಲಿ ಈ ಮಣ್ಣಿನ ಸಮಸ್ಯೆಯೂ ಒಂದು. ಉತ್ತಮ ಮಣ್ಣಿಲ್ಲದೇ ಹೋದಲ್ಲಿ ಉತ್ತಮ ಮಡಕೆಗಳ ತಯಾರಿಕೆ ಕಷ್ಟಸಾಧ್ಯ. ಇಂದು ಕೆರೆಗಳ ಸಂಖ್ಯೆ ಬಹುತೇಕ ಇಳಿಕೆಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಮಣ್ಣು ಕುಂಬಾರರಿಗೆ ದೊರೆಯುತ್ತಿಲ್ಲ. ಇಂದು ಬಹುತೇಕ ಜನರಿಗೆ ನಿರು ಬೇಕು. ‘ಕೆರೆ’ ಬೇಡ. ಮಳೆ ಬೇಕು ಆದರೆ ‘ಮಳೆ ನೀರ ಕೊಯ್ಲು’ ಎಂಬುದರ ಅರಿವಿಲ್ಲ. ಇರುವ ಅಂಗೈಯ್ಯಗಲದ ಭೂಮಿಯ ಮೇಲೆ ಅಲ್ಲಲ್ಲಿ ಕೊಳವೆ ಬಾವಿಯ ತೂತುಗಳು. ಪರಿಸರವೂ ಬರಿದು. ಜತೆಗೆ ನಮಗೆ ಬೇಕಾದ ಮಣ್ಣೂ ಬರಿದು ಎಂದು ನೋವು ತೋಡಿಕೊಳ್ಳುತ್ತಾರೆ ಕುಂಬಾರರು.
ಸರ್ಕಾರ ಇದೆ ಎಂಬುದೂ ನಮಗೆ ತಿಳಿದಿಲ್ಲ ಸ್ವಾಮಿ ಕುಂಬಾರರ ಹಿತಕ್ಕಾಗಿ ಸರ್ಕಾರದಿಂದ ಏನೂ ಸೌಲಭ್ಯಗಳಿಲ್ಲ ಎಂಬುದು ಬಹುತೇಕ ಕುಂಬಾರರ ಅಳಲು. ಅದೇನೋ ಗುಡಿಕೈಗಾರಿಕೆಗಳಿಗೆ ಸಾಲ ಸೌಲಭ್ಯವಿದೆಯಂತೆ. ಆದರೆ ಬ್ಯಾಂಕ್ಗೆ ಹೋಗಿ ವಿಚಾರಿಸಿದರೆ ಶ್ಯೂರಿಟಿ ತನ್ನಿ, ಮತ್ತೊಂದು ತನ್ನಿ ಎನ್ನುತ್ತಾರೆ. ನಮ್ಮ ಕಸುಬಿಗೇ ಶ್ಯೂರಿಟಿ ಇಲ್ಲ. ಇನ್ನು ಇವರಿಗೆ ಶ್ಯೂರಿಟಿ ಎಲ್ಲಿಂದ ತರಲಿ ಎಂದು ಕಂಬನಿ ಮಿಡಿಯುತ್ತಾರೆ ಕುಂಬಾರರು. ಚುನಾವಣೆಯ ವೇಳೆ ಬಂದು ನಿಮಗೆ ಆ ಸೌಲಭ್ಯ ಕೊಡಿಸುತ್ತೇವೆ ಈ ಸೌಲಭ್ಯ ಕೊಡಿಸುತ್ತೇವೆ ಎಂದು ಮತ ಬೇಡಲು ಬರುವ ಪುಂಡ ರಾಜಕಾರಣಿಗಳಿಗೆ ಈಗ ನಮ್ಮ ಇರುವಿಕೆಯೇ ಗೊತ್ತಿಲ್ಲ ಎನ್ನುತ್ತಾರೆ ಚಂದ್ರಯ್ಯ ಕುಂಬಾರ.
ಗ್ರಾಮಗಳ ಅಭಿವೃದ್ಧಿ ಆದಲ್ಲಿ ಮಾತ್ರವೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಹಾಗೆಯೇ ಇಂತಹ ಗುಡಿಕೈಗಾರಿಕೆಗಳಿಗೆ ಸರ್ಕಾರ ಆದ್ಯತೆ ನೀಡಿ ಪ್ರೋತ್ಸಾಹ ನೀಡಿ ಪಾರಂಪರಿಕ ಕೈಗಾರಿಕೆಗಳನ್ನು ಉಳಿಸಿಬೆಳೆಸಬೇಕಾಗಿದೆ. ಮುಂದಿನ ಪೀಳಿಗೆಯೂ ಕುಂಬಾರಿಕೆ, ನೇಕಾರಿಕೆಯಂಥಾ ಗುಡಿಕೈಗಾರಿಕೆಗಳನ್ನು ಬಳಸಿ ಲಾಭ ಪಡೆಯುವಂಥಾಗಬೇಕು. ಪರಿಸರ ಸ್ನೇಹಿ ಮಡಕೆಯು ಮನೆಯನ್ನು ಅಲಂಕರಿಸುವ ದೃಷ್ಟಿಯಿಂದ ಉಪಯೋಗವಾಗುವುದರ ಜತೆಗೆ ಇನ್ನೂ ಅನೇಕ ಕಾರ್ಯಗಳಿಗೆ ಬಳಕೆಯಾಗುವಂತಾಗಬೇಕು ಎಂಬುದು ಬಹುತೇಕ ಕುಂಬಾರರ ಆಶಯ.
-ಕೃಷ್ಣ ಪ್ರಶಾಂತ್ ವಿ. ಗೇರುಕಟ್ಟೆ
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಮ್ ಕಾಲೇಜು , ಉಜಿರೆ