ಒಂದು ಕಡೆ ಮೋದಿಜಿಯವರು ಸ್ವಚ್ಛ ಭಾರತ್ ಎಂದರೆ ಇನ್ನೊಂದೆಡೆ ನಾವು ಪಿಜ್ಜಾವನ್ನು ತಿಂದು, ಕೋಕ್ ಕುಡಿದು ಕಸವನ್ನು ರಸ್ತೆಯ ಪಕ್ಕ ಎಸೆದು ಹೋಗುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಯಾವಾಗ ಒಂದು ಸ್ವಚ್ಛ ಭಾರತವಾಗಿ ಮೂಡಬಹುದು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿರುತ್ತದೆ. ಇವತ್ತು ಎಲ್ಲ ಕಡೆಯೂ ಪ್ಲಾಸ್ಟಿಕ್! ನನಗೆ ಅಣು ಬಾಂಬ್ ಅಂದರೆ ಹೆದರಿಕೆ ಆಗುವುದಿಲ್ಲ, ಆದರೆ ಪ್ಲಾಸ್ಟಿಕ್ ಎಂದರೆ ಹೆದರಿಕೆ. ಇವತ್ತು ನಮ್ಮ ಪರಿಸರ ಹೀಗಾಗಲು ಕಾರಣ ನಾವು ಹಾಗೂ ನಮ್ಮ ಹಿಂದಿನ ಪೀಳಿಗೆಯವರು. ಯಾಕೆಂದರೆ ನಮ್ಮ ಹಿಂದಿನ, ಹಾಗೂ ಅದಕ್ಕೂ ಹಿಂದಿನ ಪೀಳಿಗೆಯವರಾಗಲಿ ಅಷ್ಟಾಗಿ ಪ್ಲಾಸ್ಟಿಕ್ ಬಳಸುತ್ತಿರಲಿಲ್ಲ, ಅಥವಾ ಹೊರಗಡೆ ಪಾರ್ಸಲ್ ತಂದು ತಿಂದು ಎಸೆಯುವ ಅಭ್ಯಾಸ ಇರಲಿಲ್ಲ. ಕಸವಿದ್ದರೂ ಏನಿದ್ದರೂ ಜೈವಿಕವಾಗಿರುತ್ತಿತ್ತು. ಅದನ್ನು ಮರ ಅಥವಾ ಗಿಡದ ಬುಡಕ್ಕೆ ಎಸೆಯುತ್ತಿದ್ದರು. ನಾವು ಇವತ್ತೂ ಅದನ್ನೇ ಮಾಡುತ್ತಿದ್ದೇವೆ – ಗಿಡ ಮರಗಳಿಲ್ಲ ಅದಕ್ಕೆ ರಸ್ತೆ, ಬಸ್ಸು, ಕಟ್ಟಡದಲ್ಲಿ ಎಸೆಯುತ್ತೇವೆ. ಇಂದು ನಮ್ಮ ಬಹಳಷ್ಟು ತಾಜ್ಯ ಅಜೈವಿಕ ಮೂಲದಿಂದ ಬರುತ್ತಿದೆ. ನಮಗಾಗಲಿ, ನಮ್ಮ ಹಿಂದಿನ ಪೀಳಿಗೆಯವರಿಗಾಗಲಿ ಅಜೈವಿಕ ತ್ಯಾಜ್ಯ ನಿರ್ವಹಣೆ ರೂಡಿಗತವಾಗಿಲ್ಲ. ಬಾಲ್ಯದಲ್ಲಿ ನಮಗೆ ಯಾರೂ ಇದರ ಬಗ್ಗೆ ಹೇಳಿಕೊಟ್ಟಿಲ್ಲ. ಇದರಿಂದಾಗಿ ನಮಗೆ ಅಜೈವಿಕ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಆ ಸಂಸ್ಕಾರ ಮನಗೊಂಡಿಲ್ಲ. ಇದು ನಮ್ಮ ತಪ್ಪಲ್ಲ, ಆದರೆ ಮುಂದಿನ ಪೀಳಿಗೆಗೆ ನಾವು ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಹೇಳಿ ಕೊಡದೇ ಹೋದರೆ ಅದು ತಪ್ಪಾಗುತ್ತದೆ. ಇಂದು ಮಾಡುತ್ತಿರುವುದನ್ನು ಮುಂದೆ ಹಾಗೆ ಮಾಡುತ್ತಾ ಹೋದರೆ ಯಾರಿಗೂ ಉಳಿಗಾಲವಿಲ್ಲ, ಹೀಗಾಗಿ ನಾವು ನಮ್ಮ ಮಕ್ಕಳಿಗೆ ತಾಜ್ಯ ನಿರ್ವಹಣೆ ಎಂಬ ಒಳ್ಳೆಯ ಸಂಸ್ಕಾರ ಕಲಿಸಲೇ ಬೇಕು!
ಇನ್ನು ರಸ್ತೆಯಲ್ಲಿ ಗಾಡಿಗಳನ್ನು ಜನ ಹೇಗೆ ಓಡಿಸುತ್ತಾರೆ ಒಮ್ಮೆ ನೋಡಿ. ನಾನು, ನೀವು ಎಲ್ಲರೂ ಹಾಗೆಯೇ. ಆದರೆ ಅದೇ ಅಮೇರಿಕಾ, ಚೀನಾ, ಜಪಾನ್, ಜರ್ಮನಿ, ಚಿಕ್ಕ ಪುಟ್ಟ ದೇಶಗಳಾದ ಥೈಲ್ಯಾಂಡ್, ಮಲೇಶಿಯಾ, ಇತ್ಯಾದಿ ದೇಶಗಳಲ್ಲಿ ಹೇಗೆ ಚಲಾಯಿಸುತ್ತಾರೆ ನೋಡಿ. ಜಗತ್ತಿಗೆ ಹೋಲಿಸಿದರೆ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಅತೀ ಹೆಚ್ಚು ಸಾವು ಉಂಟಾಗುವುದು ಭಾರತದಲ್ಲಿ. ಎರಡು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರೆ. ಈ ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಮನೆಮನೆಗೊಂದು ಕಾರು, ಬೈಕು ಇರುತ್ತಿರಲಿಲ್ಲ. ಖಾಲಿಯಾದ ರಸ್ತೆಯ ಮೇಲೆ ನೀವೇ ರಾಜರು, ಮಾಡಿದ್ದೆಲ್ಲ ನಡೆಯುತ್ತಿತ್ತು. ಹೀಗಾಗಿ ನಮಗೆ ಯಾರೂ, ರಸ್ತೆಯ ಶಿಸ್ತನ್ನು ಕಲಿಸಲು ಹೋಗಲಿಲ್ಲ, ಅದರ ಅವಶ್ಯಕತೆ ಕೂಡಾ ಇರಲಿಲ್ಲ. ಆದರೆ ಇಂದು ನಾವು ಮಕ್ಕಳಿಗೆ ಅದನ್ನು ಹೇಳಿ ಕೊಡದೇ ಹೋದರೆ ನಮ್ಮ ತಪ್ಪಾಗುತ್ತದೆ. ಶೇಕಡಾ ತೊಂಬತ್ತಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಬೇಕು, ಫಸ್ಟ್ ರ‌್ಯಾಂಕ್ ಬರಬೇಕು ಎಂದು ಹೇಳಿ ಕೊಡುವ ಹಾಗೆ ರಸ್ತೆಯ ಮೇಲೆ ನಿಯಮಗಳನ್ನು ಪಾಲಿಸಿ ಹೇಗೆ ಕಾರನ್ನು, ಬೈಕನ್ನು ಓಡಿಸಬೇಕು ಎಂಬುದನ್ನು ಕೂಡ ಹೇಳಿ ಕೊಡಬೇಕು. ಎಷ್ಟೊಂದು ಕಷ್ಟಪಟ್ಟು ಓದಿ, ರಸ್ತೆಯ ಅಪಘಾತದಲ್ಲಿ ಮಡಿದವರ ದೊಡ್ಡ ಪಟ್ಟಿಯನ್ನೇ ಮಾಡಬಹುದು. ರಸ್ತೆಯಲ್ಲಿ ಹೇಗೆ ನಾವು ವರ್ತಿಸುತ್ತೇವೆ ಎನ್ನುವುದು ಕೂಡಾ ಸಂಸ್ಕಾರ ಅದು ಅವರ ಬದುಕಿನ ಭಾಗವಾಗಬೇಕು.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ಇಂದು ನಮ್ಮ ಹತ್ತಿರ ಎಲ್ಲವೂ ಇದೆ ಆದರೆ ಏನೋ ಮಿಸ್ಸಿಂಗ್ ಅನಿಸುತ್ತಾ ಇದೆ. ಪ್ರತಿ ಬಜೆಟ್ ಬಂದಾಗ ಸವಲತ್ತುಗಳ ಮಳೆಯನ್ನೇ ಸುರಿಸುತ್ತದೆ ಸರ್ಕಾರ ಆದರೆ ಸಂಸ್ಕಾರಕ್ಕೆ ಆದ್ಯತೆಯೇ ಇಲ್ಲ! ಇವೆಲ್ಲ ಚಿಕ್ಕ ಪುಟ್ಟ ವಿಷಯಗಳು ಎನಿಸಬಹುದು, ಆದರೆ ಶಾಲೆಗಳಲ್ಲಿ, ಮನೆಯಲ್ಲಿ ಇವನ್ನು ಕಲಿಸುವುದು ಬಹಳವೇ ಮುಖ್ಯ. ಸವಲತ್ತುಗಳಿಗೆ ಯಾರೂ ಮತ ಹಾಕುವುದಿಲ್ಲ ನೆನಪಿರಲಿ ಜನರಿಗೆ ಇಂದು ಸಂಸ್ಕಾರ ಬೇಕು. ಯಾರು ತಾನೆ ಸ್ವಚ್ಛ ಭಾರತವನ್ನು ನೋಡ ಬಯಸುವುದಿಲ್ಲ? ಯಾರಿಗೆ ಟ್ರಾಫಿಕ್ ನಲ್ಲಿ ವ್ಯವಸ್ಥಿತವಾಗಿ ಚಲಿಸುವುದು ಬೇಕಿಲ್ಲ? ಯಾರು ಇಂದು ಒಳ್ಳೆಯ ಸಂಸ್ಕಾರಯುತವಾಗಿ ಬದುಕಲು ಬಯಸುವುದಿಲ್ಲ? ಸರ್ಕಾರ ಇಂದು ಪ್ರೋತ್ಸಾಹಿಸಬೇಕಾಗಿದ್ದು ಒಳ್ಳೆಯ ಶಿಕ್ಷಣವನ್ನು, ಒಳ್ಳೆಯ ಸಂಸ್ಕಾರವನ್ನು. ನಮಗೆ ಬೇಕಾಗಿರುವುದು ಸವಲತ್ತು ಅಲ್ಲ, ಸಂಸ್ಕಾರ. ಶಿಸ್ತುಬದ್ಧ ಜೀವನವನ್ನು ನಡೆಸುವ ಸಂಸ್ಕಾರವನ್ನು. ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕು. ನಮ್ಮ ದೇಶ ಬೆಳವಣಿಗೆ ಆಗಿ ಮುಂದುವರಿದ ದೇಶ ಆಗಬೇಕು ಅಂದರೆ ಮೊದಲಿಗೆ ನಾವೆಲ್ಲ ಪ್ರಜ್ಞಾವಂತರಾಗಬೇಕು. ನಮಗರಿಯದೇ ಮಾಡುತ್ತಿರಬಹುದು ಆದರೆ ಅದು ತಪ್ಪು ಎಂಬ ಪ್ರಜ್ಞೆ ಮೂಡಬೇಕು. ಪ್ರಜ್ಞೆ ಮೂಡುವುದು ಸಂಸ್ಕಾರದಿಂದ, ಸಂಸ್ಕಾರ ಬರುವುದು ಶಿಕ್ಷಣದಿಂದ. ಮನೆ, ಶಾಲೆ, ದೇವಸ್ಥಾನ, ಚರ್ಚು, ಮಸೀದಿ, ಗುರುದ್ವಾರ ಎಲ್ಲವೂ ಈ ಶಿಕ್ಷಣವನ್ನು ಒದಗಿಸಬೇಕು. ಎಷ್ಟೇ ಸವಲತ್ತು ಕೊಡಿ, ಎಷ್ಟೇ ಮೀಸಲಾತಿ ಕೊಡಿ, ಎಷ್ಟೇ ಆಧುನಿಕ ತಂತ್ರಜ್ಞಾನ ತನ್ನಿ, ಎಷ್ಟೇ ದೊಡ್ಡ ವಿಕಾಸದ ನೀಲ ನಕ್ಷೆ ಬಿಡಿಸಿ, ಸಂಸ್ಕಾರ ಬರದ ಹೊರತು ಏನೂ ಆಗುವುದಿಲ್ಲ! ಇವತ್ತು ನಮಗೆ ಬೇಕಾಗಿರುವುದು ಶಿಕ್ಷಣ, ಆ ಶಿಕ್ಷಣ ಕೊಡುವ ಸಂಸ್ಕಾರ. ನಾಳೆ ಒಂದು ವೇಳೆ ನಾವು ಟ್ರಾಫಿಕ್ ಸಿಗ್ನಲ್ ನಿಯಮ ಪಾಲಿಸದೆ ಮುಂದೆ ಹೋದರೆ ನಮ್ಮ ಮಕ್ಕಳು ನಮ್ಮನ್ನು ಪ್ರಶ್ನಿಸುವ ಹಾಗೆ ಅವರನ್ನು ತಯಾರು ಮಾಡಬೇಕು. ದೇಶ, ಪರಿಸರ, ಸಮಾಜ, ಸ್ವಚ್ಛತೆ, ಶಿಸ್ತು ಇವುಗಳ ಮಹತ್ವದ ಬಗ್ಗೆ ಅರಿವು ಮೂಡಿಸದ ಹೊರತು ನೀವು ಎಷ್ಟೇ ಸವಲತ್ತು ಕೊಡಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದ ಹಾಗೆ!