೨೦೧೬ರಲ್ಲಿ ನೈಋತ್ಯ ಮುಂಗಾರಿನ ಜೊತೆ, ವಾಯುವ್ಯ ಮುಂಗಾರು ಕೂಡ ಭಾರತದ ರೈತರ ಬದುಕಿನ ಜೊತೆ ಆಟವಾಡಿದೆ. ನೈಋತ್ಯ ಮುಂಗಾರು ಕೈಕೊಟ್ಟರೆ ವಾಯುವ್ಯ ಮುಂಗಾರು ಕೈ ಹಿಡಿಯುತ್ತದೆ ಅಂತ ಆಶಾವಾದ ಹೊಂದಿದ್ದ ತಮಿಳುನಾಡು ರೈತ ಕಂಗಾಲಾಗಿದ್ದಾನೆ. ಅಂಕಿ-ಅಂಶಗಳ ಪ್ರಕಾರ ೨೦೧೬ರಲ್ಲಿ ತಮಿಳುನಾಡಿನ ವಾಯುವ್ಯ ಮುಂಗಾರಿನಲ್ಲಿ ೬೦% ಕೊರತೆಯಿದೆ. ಪ್ರತಿಬಾರಿ ಬರ ಬಂದಾಗಲೂ ತಮಿಳುನಾಡು ರೈತರು ಕಾವೇರಿಗಾಗಿ ಹೋರಾಡುವುದು ಸಾಮಾನ್ಯ. ಈ ಬಾರಿ ಕರ್ನಾಟಕದಲ್ಲಿಯೂ ನೀರಿಲ್ಲ ಎಂಬುದು ತಿಳಿದ ತಮಿಳುನಾಡಿನ ರೈತರಿಗೆ ಕೊನೆಗೆ ಉಳಿದದ್ದು ಬರ ಪರಿಹಾರ ಮತ್ತು ಸಾಲಮನ್ನಾ ಮಾಡಲು ಸರ್ಕಾರವನ್ನು ಕೇಳುವ ದಾರಿಯೊಂದೇ. ದಿಲ್ಲಿಯ ಜಂತರ್-ಮಂತರಿನಲ್ಲಿ ೪೧ ದಿನಗಳಿಂದ ತಮಿಳುನಾಡಿನ ರೈತರು ನಡೆಸುತ್ತಿದ್ದ ಪ್ರತಿಭಟನೆ ದೇಶಾದ್ಯಂತ ಸುದ್ದಿ ಮಾಡಿದೆ. ರೈತರು ಕಳೆದ ೪೧ ದಿನಗಳಲ್ಲಿ ತಲೆಬುರುಡೆಗಳ ಮಾಲೆ ಹಾಕಿಕೊಂಡು, ಅಣಕು ತಿಥಿಗಳನ್ನ ಮಾಡಿ, ಹಾವು-ಇಲಿಗಳನ್ನ ಬಾಯಲ್ಲಿ ಹಿಡಿದು, ತಲೆ ಬೋಳಿಸಿಕೊಂಡು, ತಮ್ಮ ಮೂತ್ರವನ್ನೇ ಕುಡಿಯಲು ಹೋಗಿ ಸುದ್ದಿಯಲ್ಲಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತ ಆಳುವವರ ಗಮನ ಸೆಳೆಯುವುದಕ್ಕೆ ಹೀಗೆಲ್ಲ ಚಿತ್ರ-ವಿಚಿತ್ರ ಪ್ರತಿಭಟನೆ ಮಾಡುವ ಸ್ಥಿತಿ ತಲುಪಿರುವುದು ದೇಶದ ದೌರ್ಭಾಗ್ಯ. ಆದರೆ, ತಮಿಳುನಾಡಿನ ರೈತರ ಕೋಪ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟದೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನ ಮುಟ್ಟಿದೆ. ರೈತರ ಕಂಗೆಟ್ಟ ಕೆಂಗಣ್ಣುಗಳು ತಮಿಳುನಾಡು ಸರ್ಕಾರವನ್ನ ಸುಡುವುದು ಬಿಟ್ಟು ಮೋದಿಯವರನ್ನ ಸುಡುವ ಪ್ರಯತ್ನದಲ್ಲಿವೆ. ದೇಶದಲ್ಲಿನ ಪ್ರತಿಯೊಂದು ಸಮಸ್ಯೆಗೂ ಮೋದಿಯವರ ಹೆಸರು ಥಳುಕು ಹಾಕುವ, ಅವರ ಮೌನವನ್ನ ಪ್ರಶ್ನಿಸುವ ಚಾಳಿ ನಮ್ಮಲ್ಲಿ ಬೆಳೆದು ಬಿಟ್ಟಿದೆ, ಈಗ ತಮಿಳುನಾಡು ರೈತರ ಸರದಿ. ಪ್ರಧಾನಿಯ ಮೌನವನ್ನು ಪ್ರಶ್ನಿಸುವ ಮೊದಲು ೪೦೦೦೦ ಸಾವಿರ ಕೋಟಿ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿರುವ, ತಮಿಳುನಾಡನ್ನು ಆಳುತ್ತಿರುವ ಸರ್ಕಾರದ ಖರ್ಚು-ವೆಚ್ಚಗಳ ಕಡೆ ಒಮ್ಮೆ ಅವಗಾಹಿಸುವುದು ಅವಶ್ಯಕ.
ಮೇ ೨೦೧೬ರ ತಮಿಳುನಾಡಿನ AIADMK ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಕೆಲವು ಮುಖ್ಯ ಅಂಶಗಳು: ೪೦,೦೦೦ ಕೋಟಿ ರೈತರ ಸಾಲಮನ್ನಾ, ೧೦ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಪ್ರತಿ ಎರಡು ತಿಂಗಳಿಗೆ ೧೦೦ ಯುನಿಟ್ ಉಚಿತ ವಿದ್ಯುತ್, ಸಹಕಾರ ಬ್ಯಾಂಕುಗಳು ರೈತರಿಗೆ ಕೊಟ್ಟ ಸಾಲ ಮನ್ನಾ, ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನ ಖರೀದಿಗೆ ೫೦% ಸಹಾಯಧನ, ಬಡವರಿಗಾಗಿ ಅಮ್ಮ ಬ್ಯಾಂಕಿಂಗ್ ಕಾರ್ಡ್ ಸೌಲಭ್ಯ, ಅಡಚಣೆ ರಹಿತ ವಿದ್ಯುತ್ ಸರಬರಾಜು, ಪೊಂಗಲ್ ಹಬ್ಬಕ್ಕೆ ೫೦೦ ರೂಪಾಯಿಗಳ ಕೂಪನ್, ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತ ಮೊಬೈಲ್ ಫೋನ್, ಇವೆಲ್ಲದರ ಜೊತೆಗೆ ಇನ್ನು ಹತ್ತು ಹಲವು ಜನಪ್ರಿಯ ಯೋಜನೆಗಳು. ತಮಿಳುನಾಡಿನ ರಾಜಕೀಯದಲ್ಲಿ ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ಬಿಟ್ಟಿ ವಸ್ತುಗಳನ್ನ ಹಂಚುವ ಒಂದು ಕೆಟ್ಟ ಪರಂಪರೆ ಉಳಿದು ಬಿಟ್ಟಿದೆ. ನಿಯಂತ್ರಕ ಹಾಗು ಮಹಾಲೆಕ್ಕ ಪರಿಶೋಧಕರ ವರದಿಯ ಪ್ರಕಾರ ತಮಿಳುನಾಡು ಸರ್ಕಾರ ಉಚಿತ ಲ್ಯಾಪ್ಟಾಪ್ಗಳಿಗಾಗಿ ೩೨೩೧ ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದೆ , ಕಲರ್ ಟಿವಿಗಳಿಗಾಗಿ ೩೯೦೭.೩೮ ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದೆ. ಕಳೆದ ಐದು ವರ್ಷಗಳಲ್ಲಿ ತಮಿಳುನಾಡು ಸರಕಾರ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ ಯೋಜನೆಗಾಗಿ ಮಾಡಿದ ಖರ್ಚು ೧೯೨೦೪ ಕೋಟಿ , ಹೇಳುತ್ತಾ ಹೋದರೆ ತಮಿಳುನಾಡು ಸರ್ಕಾರ ಜನಪ್ರಿಯ ಯೋಜನೆಗಳಿಗಾಗಿ ಮೀಸಲಿಟ್ಟ ಹಣ ಸಾವಿರಾರು ಕೋಟಿಗಳನ್ನೂ ಮೀರುತ್ತದೆ. ತಮಿಳುನಾಡು ಮತದಾರ ಕೂಡ ಬಲು ಬುದ್ಧಿವಂತ, ಆಳುವವರು ಮತ ಕೇಳುವುದಕ್ಕೆ ಬಂದಾಗ ಮಾತ್ರ ನಮಗೆ ಕ್ಯಾರೇ ಅನ್ನುವುದು ಅಂತ ತಿಳಿದಿರೋ ಅವನು ಅಲ್ಲಿನ ರಾಜಕಾರಣಿಗಳ ಬಳಿ ಮಿಕ್ಸಿ, ಗ್ರೈಂಡರ್, ಮತ್ತೊಂದು ಮಗದೊಂದನ್ನ ಬಿಟ್ಟಿಯಾಗಿ ಪಡೆದು ಪಡೆದು ಒಂದು ವಿಷಮ ವೃತ್ತದೊಳಕ್ಕೆ ಇಳಿದು ಬಿಟ್ಟಿದ್ದಾನೆ. ತಮಿಳುನಾಡು ಸರ್ಕಾರದ ಈ ದೂರದೃಷ್ಟಿ ಇಲ್ಲದ ಜನಪ್ರಿಯ ಯೋಜನೆಗಳಿಂದ ರಾಜ್ಯದ ವಿತ್ತೀಯ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ತಮಿಳುನಾಡಿನ ಮತದಾರ ಈ ಬಿಟ್ಟಿ ವಸ್ತುಗಳನ್ನ ತೆಗೆದುಕೊಳ್ಳುವ ಪರಂಪರೆಗೆ ತಿಲಾಂಜಲಿ ಬಿಟ್ಟರೆ ರಾಜ್ಯದ ರೈತರ ಕಷ್ಟಕ್ಕೂ ಒಂದು ಪರಿಹಾರ ಸಿಕ್ಕಂತಾಗುತ್ತದೆ. ರಾಜ್ಯದ ಕೋಶದಲ್ಲಿ ದುಡ್ಡಿಲ್ಲದೆ ಇದ್ದರೂ AIADMK ೪೦೦೦೦ ಕೋಟಿ ಸಾಲ ಮನ್ನಾ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿ ರೈತರ ಆಶಾಭಾವನೆಯನ್ನ ಹೆಚ್ಚಿಸಿತ್ತು. ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ವಿತ್ತ ಪರಿಸ್ಥಿತಿಯನ್ನ ನೋಡಿ ಸಾಲ ಮನ್ನಾ ಅಸಾಧ್ಯ ಅನ್ನಿಸಿದ ತಕ್ಷಣ ಕೇಂದ್ರ ಸರ್ಕಾರಕ್ಕೆ ಮೊರೆಯಿಟ್ಟಿತು. ಅಲ್ಲಿಂದ ಶುರುವಾಗಿದ್ದೇ ಮೋದಿ ದೂಷಣ ಮಹಾ ಪ್ರಸಂಗ. ಭಾರತದ ೨೯ ರಾಜ್ಯಗಳಲ್ಲಿ ಬಹುತೇಕ ರಾಜ್ಯಗಳು ಮುಂಗಾರಿನ ಕೊರತೆಯಿಂದ ಬರಗೆಟ್ಟಿವೆ. ಒಂದು ರಾಜ್ಯದ ಹೋರಾಟಕ್ಕೆ ಓಗೊಟ್ಟು ಕೇಂದ್ರ ಸರ್ಕಾರ ಅವರು ಕೇಳಿದಷ್ಟು ಹಣ ಕೊಟ್ಟರೆ, ಪ್ರತಿಯೊಂದು ರಾಜ್ಯವೂ ಕೇಂದ್ರದಿಂದ ಸಾಲಮನ್ನಾಗೆ ಆಗ್ರಹಿಸುವ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಹಾಗಾಗುತ್ತದೆ. ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ರಾಜ್ಯದ ನಿಧಿಯಿಂದ ಸಾಲ ಮನ್ನಾ ಮಾಡಿ, ನಾವು ನಿಮಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಅಂತ ಹೇಳಿದ ಮೇಲೂ ತಮಿಳುನಾಡು ಸರ್ಕಾರ ಮತ್ತು ಜನತೆ ಮೋದಿ ದೂಷಣೆಯನ್ನ ನಿಲ್ಲಿಸಿಲ್ಲ. ಕೇಂದ್ರ ಸರ್ಕಾರದ ಸಹಾಯವಿಲ್ಲದೆಯೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ರೈತರ ೩೬೩೫೯ ಕೋಟಿ ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನ ಅನುಸರಿಸುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದ ಹೊರತಾಗಿಯೂ, ರಾಷ್ಟ್ರಪತಿಗಳು, ಕೇಂದ್ರದ ಹಲವು ಮಂತ್ರಿಗಳು ತಮಿಳುನಾಡು ರೈತರನ್ನ, ಸರ್ಕಾರವನ್ನ ಭೇಟಿ ಮಾಡಿ ಪರಿಸ್ಥಿತಿಯನ್ನ ವಿವರಿಸಿದರೂ ಕೂಡ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಮೋದಿಯ ಮೌನವನ್ನು ದೂಷಿಸುವುದು ನಿಂತಿಲ್ಲ. ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅನ್ನುವ ರೀತಿ ಪ್ರತಿಯೊಂದು ಸಮಸ್ಯೆಗೂ ಮೋದಿಯವರನ್ನ ದೂಷಿಸುವ ಪೂರ್ವಾಗ್ರಹ ಪೀಡಿತರಿಗೆ, ಮೋದಿಯವರನ್ನ ತೆಗಳುವುದೇ ದೈನಂದಿನ ಕಾಯಕ ಮಾಡಿಕೊಂಡಿರುವವರಿಗೆ ತಮಿಳುನಾಡು ರೈತರ ಈ ಹೋರಾಟವೂ ಒಂದು ವೇದಿಕೆಯಾಗಿ ಮಾರ್ಪಟ್ಟಿದೆ.
ಭಾರತದ ಸಮಸ್ಯೆಗಳು ಬಹಳ ಸಂಕೀರ್ಣವಾದವು, ಸುಲಭ ಪರಿಹಾರಗಳನ್ನ ಹುಡುಕುವುದು ಕಷ್ಟ. ಪ್ರಧಾನ ಮಂತ್ರಿಗಳು ಒಮ್ಮೆ ರೈತರನ್ನು ಮಾತನಾಡಿಸುವ ಸೌಜನ್ಯ ತೋರಿಸಬಹುದಿತ್ತೇನೋ, ಆದರೆ ನಂತರ ಉಳಿದ ರಾಜ್ಯಗಳ ರೈತರೂ ತಮ್ಮ ರಾಜ್ಯ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ತಮಿಳುನಾಡು ರೈತರ ಹಾದಿ ತುಳಿದು ಎಲ್ಲಕ್ಕೂ ತನ್ನನ್ನೇ ಕೇಳುವುದಕ್ಕೆ ಶುರು ಮಾಡಿಬಿಟ್ಟರೆ ಅನ್ನೋ ಅಳುಕು ಅವರನ್ನ ಕಾಡಿದ್ದರೂ ಕಾಡಿರಬಹುದು. ಎಲ್ಲರೂ ಒಂದು ವಿಷಯವನ್ನ ಗಮನದಲ್ಲಿಟ್ಟುಕೊಳ್ಳೋದು ಮುಖ್ಯ, ನರೇಂದ್ರ ಮೋದಿ ಎಲ್ಲ ಸಮಸ್ಯೆಗಳ ಪರಿಹರಿಸೋ ಶಕ್ತಿ ಇರೋ ಅವತಾರ ಪುರುಷನಲ್ಲ, ಅವರೂ ಮಾನವ ಸಹಜ ಇತಿಮಿತಿಗಳಿರೋ ಮನುಷ್ಯ. ನಮ್ಮ ಕೈಲಾದ ಕೆಲಸವನ್ನ ನಾವು ಮಾಡದೆ ಎಲ್ಲದಕ್ಕೂ ಮೋದಿ ಅದು ಮಾಡಲಿಲ್ಲ, ಮೋದಿ ಇದು ಮಾಡಲಿಲ್ಲ ಅನ್ನೋದು ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಅನ್ನೋ ಮನಸ್ಥಿತಿಯನ್ನ ತೋರಿಸುತ್ತದೆ. ಮಾಜಿ ಪ್ರಧಾನಿ ಮನಮೋಹನರ ಮೌನ ಕಣ್ಮುಂದೆ ಭ್ರಷ್ಟಾಚಾರ ನಡೆದರೂ ಸುಮ್ಮನ್ನಿದ್ದದ್ದಕ್ಕೆ ಸುದ್ದಿಯಾಗಿತ್ತು, ಹಾಲಿ ಪ್ರಧಾನಿಗಳ ಮೌನ ಬೇರೆಯದೇ ಕಾರಣಕ್ಕೆ ಸದ್ದು ಮಾಡ್ತಾ ಇದೆ. ಒಟ್ಟಿನಲ್ಲಿ ಭಾರತದ ಪ್ರಧಾನ ಮಂತ್ರಿಗಳಿಗೆ ಮೌನ ಬಂಗಾರವಾಗಲಿಲ್ಲ!
ಇವೆಲ್ಲದರ ಕೊನೆಗೆ ಮನಸ್ಸಲ್ಲಿ ಕಾಡುವ ಪ್ರಶ್ನೆ, ಅಲ್ಲಿದ್ದವರಲ್ಲಿ ನಿಜವಾಗಿಯೂ ರೈತರೆಷ್ಟು ಮಂದಿ, ರೈತನೆಂಬ ಮುಖವಾಡ ಧರಿಸಿ ರಾಜಕೀಯ ಮಾಡಬಂದವರೆಷ್ಟು ಮಂದಿ?