ಅಂಕಣ

ಮೀಸಲಾತಿಯ ಸುತ್ತ ಮುತ್ತ

ಯಾವುದೇ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ಇರಲು, ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಲು ಆ ರಾಷ್ಟ್ರದ ಆರ್ಥಿಕತೆ, ಸಾಮಾಜಿಕ ವಿಚಾರಗಳು, ಸಾಂಸ್ಕೃತಿಕ ನಡಾವಳಿಗಳು, ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳು ಕಾರಣವಾಗಿರುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಸಾಮಾಜಿಕ ನೀತಿಗಳು ದೇಶದ ಉಳಿದೆಲ್ಲಾ ಕ್ಷೇತ್ರದ ಬೆಳವಣಿಗೆಗಳ ಮೇಲೂ ಪರಿಣಾಮ ಬೀರುತ್ತವೆ. ಹೇಗೆ ಕುಟುಂಬದಲ್ಲಿ ಕಲಹಗಳು ಕುಟುಂಬವನ್ನು ಕುಂಟಿತಗೊಳಿಸಬಲ್ಲವೋ ಹಾಗೆಯೆ ಸಮಾಜದ ಕಲಹಗಳು ದೇಶವನ್ನು ಕುಂಟಿತಗೊಳಿಸುತ್ತವೆ. ಭಾರತ ವೈವಿದ್ಯಮಯ ರಾಷ್ಟ್ರ. ನಮ್ಮ ದೇಶದಲ್ಲಿ ಹಲವಾರೂ ಧರ್ಮಗಳಿವೆ, ನೂರಾರು ಜಾತಿಗಳಿವೆ. ವಿಭಿನ್ನ ಸಂಸ್ಕೃತಿಗಳಿವೆ. ಆದರೆ ಇವೆಲ್ಲವೂ ಮೀರಿ ನಾನು ಭಾರತೀಯನೆಂಬ ಅಭಿಮಾನ ಪ್ರತೀ ವ್ಯಕ್ತಿಯಲ್ಲೂ ಹಾಸುಹೊಕ್ಕಾಗಿರುವದು ಈ ದೇಶದ ನಿಜವಾದ ಸಾಮರ್ಥ್ಯದ ಪ್ರತೀಕ.

ದೇಶ ಸ್ವಾತಂತ್ರಗೊಂಡು ನಮ್ಮದೇ ಆದ ಸಾಂವಿಧಾನಿಕ ಚೌಕಟ್ಟನ್ನು ಹೊಂದಿದೆ. ದೇಶದ ಜನರ ಭಾವನೆಗಳನ್ನು ಅರಿತು ಸಂವಿಧಾನವೆಂಬ ಮಹಾನ್ ಕೋಶದ ರಚನೆ ಮಾಡಲಾಗಿದೆ. ಸ್ವತಂತ್ರ ಪೂರ್ವದ ಭಾರತದಲ್ಲಿದ್ದ ಸಮಸ್ಯೆಗಳ ಪರಿಹಾರಕ್ಕಾಗಿ ಸಂವಿಧಾನದ ಮಾಧ್ಯಮದ ಮೂಲಕ ಕ್ರಮಕೈಗೊಳ್ಳಲಾಗಿದೆ. ಅಂತಹುದೇ ಒಂದು ಕ್ರಮಗಳಲ್ಲಿ ಮೀಸಲಾತಿ ಯು ಒಂದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರು ಮೊಟ್ಟಮೊದಲ ಬಾರಿಗೆ ದಿ. ೨೬ ನವೆಂಬರ್ ೧೯೪೯ ರಂದು ಸಂವಿಧಾನದ ೩೩೪ ನೇ ವಿಧಿಯ ಮೂಲಕ ಮೀಸಲಾತಿ ಪದ್ಧತಿಯನ್ನು ಜಾರಿತಂದರು. ಯೋಜನೆಯ ಉದ್ದೇಶ ಸಾಮಾಜಿಕ ಸಮಾನತೆಯಾಗಿತ್ತು. ಯೋಜನೆಯಂತೆ ಮೀಸಲಾತಿಯನ್ನು ಪಡೆಯಲು ಅರ್ಹರಾದ ದಲಿತ ವರ್ಗದವರು ಮೀಸಲಾತಿಯ ಮಹತ್ವವನ್ನು ಅರಿತು ಮುಂದಿನ ೨೦ ವರ್ಷಗಳಲ್ಲಿ ಅಂದರೆ ೧೯೭೦ರ ಒಳಗಾಗಿ ತಮ್ಮ ವರ್ಗದ ಬಡ ಹಾಗೂ ಶೋಷಿತರನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮೇಲೆತ್ತುವ ಹಾಗೂ ಅವರನ್ನು ಸಧೃಡರನ್ನಾಗಿಸುವುದಾಗಿತ್ತು. ದೇಶದ ಸಮಾನತೆ ಹಾಗೂ ಸಧೃಡತೆಯ ಮಹದಾಸೆಯನ್ನು ಹೊತ್ತು ಜಾರಿಗೆ ತಂದ ಯೋಜನೆ ಮುಂದೆ ರಾಜಕೀಯದ ಬಣ್ಣ ಪಡೆದದ್ದು ಮಾತ್ರ ಖೇದಕರ ಸಂಗತಿ. ತಮ್ಮ ರಾಜಕೀಯದ ಆಸೆಗಾಗಿ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡ ರಾಜಕಾರಣಿಗಳು ಯೋಜನೆಯ ಮೂಲ ಉದ್ದೇಶವನ್ನೇ ಮರೆ ಮಾಚಿದರು. ೧೯೭೦ರ ಒಳಗಾಗಿ ಸಮಾಜದ ಕಲ್ಯಾಣದ ಕನಸು, ಕನಸಾಗೇ ಉಳಿದರೂ ಇದರಿಂದ ರಾಜಕೀಯ ಲಾಭ ಪಡೆದವರು ಹಲವರಾದರೂ. ಯೋಜನೆಯ ಲಾಭ ಪಡೆದ ದಲಿತರೂ ಯೋಜನೆಯ ಮೂಲ ಉದ್ದೇಶವನ್ನೇ ಮರೆತು ಕೇವಲ ಸ್ವ ಹಿತಾಸಕ್ತಿಗಾಗಿ ಯೋಜನೆಯನ್ನು ಉಪಯೋಗಿಸಿಕೊಂಡರೇ ವಿನಃ ತಮ್ಮದೇ ಸಮಾಜದ ಅಭಿವೃದ್ದಿಗೆ ಶ್ರಮಿಸಲಿಲ್ಲ. ಇವೆಲ್ಲದರ ಕಾರಣ ೧೯೭೦ ರಂದೇ ಮುಗಿಯಬೇಕಾಗಿದ್ದ ಮೀಸಲಾತಿಯೆಂಬ ಯೋಜನೆ ಇಂದಿಗೂ ಮುಂದುವರೆಯುತ್ತಿದೆ.

ಇವೆಲ್ಲದರ ನಡುವೆ ದೇಶದ ಆರ್ಥಿಕತೆಯಲ್ಲಿ ಸಧೃಡತೆ ಸಾಧಿಸಲು ಅಂದಿನ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದವು. ಯಾವ ವರ್ಗ ಮೇಲ್ವರ್ಗವೆಂದು ಬಿಂಬಿತವಾಗಿತ್ತೋ ಅದು ದೇಶದ ಆರ್ಥಿಕತೆಯ ಪತನದ ಕಾರಣ ಪರಿತಪಿಸುವ ಮಟ್ಟ ತಲುಪಿತ್ತು. ಮೀಸಲಾತಿಯ ಪರಿಣಾಮದಿಂದ ಸರ್ಕಾರದ ಬಹುತೇಕ ಯೋಜನೆಗಳು ಕೈತಪ್ಪತೊಡಗಿದವು. ಇಂದು ಪರಿಸ್ಥಿತಿ ಹೇಗಿದೆಯೆಂದರೆ ಅಂದು ಯಾವ ಕುಟುಂಬ ಮೇಲ್ವರ್ಗವೆಂದು ಬಿಂಬಿತವಾಗುತ್ತಿತ್ತೋ, ಆರ್ಥಿಕವಾಗಿ ಸಧೃಡವೆಂಬಂತೆ ಬಿಂಬಿತವಾಗಿತ್ತೋ ಅಂತಹ ಕುಟುಂಬಗಳು ಸಮಾಜದಲ್ಲಿ ಆರ್ಥಿಕವಾಗಿ ಅತ್ಯಂತ ಕೆಳ ಮಟ್ಟ ತಲುಪಿವೆ. ಮೀಸಲಾತಿಯೆಂಬುದು ರಾಜಕೀಯದ ದುರಾಸೆಯಿಂದ ರಾಜಕಾರಣಿಗಳು ಆಡಿಸುವ ಆಟದ ಗೊಂಬೆಯಾಗಿದೆ.

ಯೋಜನೆಗಳ ಮರು ಪರಿಶೀಲನೆಯ ಅಗತ್ಯತೆ:

ಯಾವುದೇ ಯೋಜನೆಗಳು ಆಯಾ ಕಾಲ, ಸಂದರ್ಭಕ್ಕೆ ಅನುಸಾರವಾಗಿ ಮಾಡಲ್ಪಟ್ಟ ವ್ಯವಸ್ಥೆಗಳಾಗಿರುತ್ತವೆ. ಅಂತೆಯೇ ಮೀಸಲಾತಿಯೂ ಕೂಡ. ಇಂದು ಯಾವುದೇ ಕ್ಷೇತ್ರಕ್ಕೇ ಹೋದರೂ ಮೀಸಲಾತಿ ತುಂಬಲಾರಂಭಿಸಿದೆ. ಇದು ಕೇವಲ ರಾಜಕಾರಣಿಗಳ ಅಸ್ತ್ರವೇ ವಿನಃ ದಲಿತ ವರ್ಗದ ಬೇಡಿಕೆಯಲ್ಲ, ವಿಜ್ಞಾನ ತಂತ್ರಜ್ಞಾನದಲ್ಲಿ ದೇಶ ಮುನ್ನುಗ್ಗುತ್ತಿರುವಾಗ ಪ್ರತಿಭೆಯ ಆದಾರಿತ ಮೀಸಲಾತಿಯ ಅಗತ್ಯವಿದೆಯೇ ಹೊರತಾಗಿ ಜಾತಿ ಆಧಾರಿತ ಮೀಸಲಾತಿಯದಲ್ಲ. ಖಂಡಿತವಾಗಿ ಪ್ರತಿಭೆಯಿದ್ದರೆ ಜಾತಿಯ ನಿರ್ಬಂದವಿಲ್ಲದೇ ಅವಕಾಶಗಳನ್ನು ತೆರೆಯುವುದು ಸರ್ಕಾರವೆಂಬುದರ ಜವಾಬ್ದಾರಿ. ಶಿಕ್ಷಣದ ಕ್ಷೇತ್ರದಲ್ಲಿ ಮೀಸಲಾತಿ ನೀಡಿ ಪ್ರತಿಭಾನ್ವಿತ ಅವಕಾಶ ಕಸಿಯುವುದು, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿಯನ್ನು ಹೇರಿ ಯೋಗ್ಯರ ಹೊಟ್ಟೆಯ ಮೇಲೆ ಬರೆಯೆಳೆಯುವುದು ಇದು ಸರ್ಕಾರದ ಅಥವಾ ಒಬ್ಬ ಜವಾಬ್ದಾರಿಯುತ ರಾಜಕಾರಣಿಯ ಲಕ್ಷಣವಾಗಲಾರದು.

ವ್ಯವಸ್ಥೆ ಹೀಗಿರಲಿ

ಮೀಸಲಾತಿಯ ಮೂಲ ಉದ್ದೇಶ ಆರ್ಥಿಕವಾಗಿ ಶೋಷಿತರನ್ನು ರಕ್ಷಿಸುವುದು. ಅದರಂತೆ ಆರ್ಥಿಕ ಚೌಕಟ್ಟಿನಲ್ಲಿ ಮೀಸಲಾತಿ ಜಾರಿಯಾಗಲಿ. ದೇಶದ ಭವಿಷ್ಯವನ್ನು ನಿರ್ಧರಿಸುವ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಎಂದಿಗೂ ಸಲ್ಲ. ಪ್ರತಿಭೆಯ ಆಧಾರದ ಮೀಸಲಾತಿಗಳು ಬರಲಿ. ಯೋಗ್ಯರಿಗೆ ಉದ್ಯೋಗದ ಅವಕಾಶ ನೀಡುವಂತಹ ಮೀಸಲಾತಿ ಬರಲಿ. ಜಾತಿ, ಧರ್ಮದ ಮೀಸಲಾತಿಯ ಬದಲಾಗಿ ಆರ್ಥಿಕ ಸ್ಥಿತಿ ಹಾಗೂ ಪ್ರತಿಭೆಯ ಆಧಾರದ ಮೇಲಿನ ಮೀಸಲಾತಿ ಜಾರಿಗೆ ಬರಲಿ. ಇದರಿಂದ ದೇಶವು ಪ್ರಗತಿಯ ಪಥದಲ್ಲಿ ಮುನ್ನುಗ್ಗಲು ಸಾಧ್ಯ ಹಾಗೆಯೇ ಸಾಮಾಜಿಕ ಸಮಾನತೆಯು ಸಾಧ್ಯ. ಕೇವಲ ರಾಜಕೀಯದ ಉದ್ದೇಶದಿಂದ ದಲಿತ ವರ್ಗದವರಿಗೆ ಮೂಗಿಗೆ ತುಪ್ಪ ಒರೆಸುವ ಕಾರ್ಯವನ್ನು ಇಷ್ಟು ವರ್ಷ ಮುಂದುವರಿಸಿದ್ದು ಇದು ಇನ್ನೂ ಮುಂದುವರೆಯದಿರಲಿ. ಸಮಾಜದ ಪ್ರತೀ ವರ್ಗವೂ ಸಮಾನವಾಗಿ ಬೆಳವಣಿಗೇ ಆದರೆ ಮಾತ್ರ ಸಮಾಜದ ಬೆಳವಣಿಗೆ, ದೇಶದ ಬೆಳವಣಿಗೆ ಸಾಧ್ಯ.

Shriganesh Hegde Ullane

shriganeshullane@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!