ಅಂಕಣ

ನಾರಿಮಣಿಯ ಸೆರಗಿಗೆ ನಾರುಮಡಿಯ ಗಂಟು

ಕನ್ಯಾಕುಬ್ಜವೆಂಬ ದೇಶದ ಪ್ರಸಿದ್ಧ ರಾಜ ಗಾದಿ. ಗಾದಿಯ ಮಗನೇ ಕುಶಿಕ. ಕುಶಿಕನ ಮಗ ವಿಶ್ವಾಮಿತ್ರ.. ವಿಶ್ವಾಮಿತ್ರ ವೀರ್ಯವಂತನೂ, ಶಕ್ತಿವಂತನೂ ಆಗಿದ್ದು, ರಾಜನೆಂದರೆ ವಿಶ್ವಾಮಿತ್ರನಂತಿರಬೇಕು ಎನ್ನುವಷ್ಟರ ಮಟ್ಟಿಗೆ ಉತ್ತಮ ಪ್ರಜಾಪಾಲಕನಾಗಿದ್ದ.

ಒಮ್ಮೆ ಬೇಟೆಗಾಗಿ ತನ್ನ ಸೈನ್ಯದೊಡನೆ ಕಾಡನ್ನು ಪ್ರವೇಶಿಸಿದ ವಿಶ್ವಾಮಿತ್ರ ತುಂಬಾ ದಣಿದು  ವಿಶ್ರಾಂತಿಗೆಂದು ವಸಿಷ್ಠರ ಆಶ್ರಮಕ್ಕೆ ಬಂದ. ಅವರನ್ನು ಸತ್ಕರಿಸಲು ವಸಿಷ್ಠರು ಮುಂದಾದರು. ಅವರ ಬಳಿ ಕಾಮಧೇನುವಿನ ಮಗಳು, ಹೋಮಧೇನುವಾದ ನಂದಿನಿ ಇದ್ದಳು. ಅವಳನ್ನು ಪೂಜಿಸಿ ವಸಿಷ್ಠರು ಆಹಾರಕ್ಕಾಗಿ ಪ್ರಾರ್ಥಿಸಿದರು. ಅದು ಅವರು ಕೇಳಿದ್ದನ್ನೆಲ್ಲ ನೀಡಿತು. ವಸಿಷ್ಠರು ರಾಜನ ಪರಿವಾರವನ್ನು ಸತ್ಕರಿಸಿ ಧನ್ಯರಾದರು. ಆದರೆ ಇದು ವಿಶ್ವಾಮಿತ್ರನಿಗೆ ಆಶ್ಚರ್ಯವನ್ನುಂಟು ಮಾಡಿತು. ಅರಣ್ಯದಲ್ಲಿರುವ ಮುನಿ ಒಂದು ಧೇನುವಿನ ನೆರವಿನಿಂದ ತಮ್ಮನ್ನು ಸತ್ಕರಿಸಿದನಲ್ಲಾ; ಇಂತಹ ಧೇನು ಇಲ್ಲಿರಬಾರದು, ತಮ್ಮಂತಹ ರಾಜನ ಬಳಿ ಇರಬೇಕು ಎಂದು ವಸಿಷ್ಠರಿಗೆ ಅದನ್ನು ತನಗೆ ನೀಡಲು ಕೇಳಿದನು. “ಇದು ದೇವತೆಗಳು ತಮ್ಮ ಬಳಿ ನ್ಯಾಸವಾಗಿ ಇಟ್ಟ ಹೋಮಧೇನುವಾಗಿದ್ದು ತಾನು ಕೊಡಲಾರೆ” ಎಂದನು. ತಾನು ಬಾಹುಬಲದಿಂದ ಅದನ್ನು ತೆಗೆದುಕೊಳ್ಳುವೆನೆಂದಾಗ, ‘ನಿನ್ನಿಚ್ಛೆ’ ಎಂದರು. ವಿಶ್ವಾಮಿತ್ರ ನಂದಿನಿಯನ್ನು ಬಲವಂತವಾಗಿ ಎಳೆಯತೊಡಗಿದಾಗ ಅದು ವಸಿಷ್ಠನ ಬಳಿ ರಕ್ಷಣೆ ಬೇಡಿತು. “ಕ್ಷತ್ರಿಯ ಬಲದ ಮುಂದೆ ನಾನೇನೂ ಮಾಡಲಾರೆ. ನಿನ್ನನ್ನು ನೀನೇ ರಕ್ಷಿಸಿಕೋ”ಎಂದು ವಸಿಷ್ಠರು ಹೇಳಿದರು. ನಂದಿನಿ ಕ್ರೋಧಗೊಂಡು ತನ್ನ ಶರೀರದಿಂದ ಹಲವಾರು ಸೈನ್ಯಗಳನ್ನು ಹುಟ್ಟಿಸಿ ವಿಶ್ವಾಮಿತ್ರನ ಸೈನ್ಯವನ್ನು  ದೂರ ಓಡಿಸಿತು. ವಿಶ್ವಾಮಿತ್ರ ಕ್ರೋಧಗೊಂಡು ವಸಿಷ್ಠರ ಮೇಲೆ ಬಾಣಗಳ ಮಳೆಯನ್ನೇ ಕರೆದರು. ವಸಿಷ್ಠರು ಅದನ್ನು ತನ್ನ ಬ್ರಹ್ಮದಂಡವೊಂದರಿಂದಲೇ ನಿವಾರಿಸಿಕೊಂಡರು. ಕ್ಷಾತ್ರಬಲಕ್ಕಿಂತಲೂ ಬ್ರಹ್ಮಬಲವೇ ಮೇಲು ಎಂದು ಅರಿವುಂಟಾದ ವಿಶ್ವಾಮಿತ್ರ, ಬ್ರಹ್ಮಬಲಕ್ಕಾಗಿ ರಾಜ್ಯವೆಲ್ಲವನ್ನೂ ಬಿಟ್ಟು ತಪಸ್ಸಿಗೆ ಹೊರಡುತ್ತಾನೆ. ದೇವತೆಗಳು ಆತನ ತಪೋಭಂಗಕ್ಕಾಗಿ ಮೇನಕೆಯನ್ನು ಕಳಿಸುತ್ತಾರೆ. ಮೇನಕೆ ವಿಶ್ವಾಮಿತ್ರರ ತಪೋಭಂಗ ಮಾಡಿದ ಫಲವೇ ಶಕುಂತಲೆ. ಅವಳನ್ನು ಅಡವಿಯಲ್ಲೇ ಬಿಟ್ಟು ಇಬ್ಬರೂ ಪುನಃ ತಮ್ಮ ಕಾರ್ಯಕ್ಕೆ ತೆರಳುತ್ತಾರೆ. ಶಕುಂತ ಪಕ್ಷಿಗಳು ಮಗುವನ್ನು ನೋಡಿಕೊಳ್ಳುತ್ತವೆ. ಕಣ್ವರು ನಂತರ ಅದನ್ನು ಸಾಕುತ್ತಾರೆ.

 

ನಾರಿಮಣಿಯ ಸೆರಗಿಗೆ ನಾರುಮಡಿ ಸಿಕ್ಕಿಸುವ ಪುರಾಣದ ಕತೆ ಇದು. ಇಂತವು ಬಗೆದಷ್ಟೂ ಪುರಾಣಗಳಲ್ಲಿ ದೊರಕುತ್ತವೆ. ತಿಲೋತ್ತಮೆ, ಮೋಹಿನಿ ಇವರೆಲ್ಲ ರಾಕ್ಷಸರ ವದೆಗಾಗಿಯೇ ಹುಟ್ಟಿಕೊಂಡ ಸ್ತ್ರೀಯರು.

 

‘ಸ್ತ್ರೀ ಹಾಗೂ ಸನ್ಯಾಸಿ’ ಈ ವಿಚಾರವಾಗಿ ವರದಪುರದ ಶ್ರೀ ಭಗವಾನ್ ಶ್ರೀಧರರು ಅನುಸರಣೀಯ ಮಾರ್ಗದರ್ಶನವನ್ನು ನೀಡುತ್ತಾರೆ. ಶ್ರೀಧರರ ಕುಟುಂಬದವರೆಲ್ಲ ಮರಣ ಹೊಂದಿ ಕೊನೆಯಲ್ಲಿ ಅವರ ತಾಯಿ ಮಾತ್ರ ಉಳಿದುಕೊಳ್ಳುತ್ತಾಳೆ. ಕೊನೆಯಲ್ಲಿ ತಾಯಿ ಕಮಲಾಬಾಯಿಯೂ ಮರಣಶಯ್ಯೆ ತಲುಪುವದು ಶ್ರೀಧರರ ದುರದೃಷ್ಟ. ಅದಕ್ಕೆ ಅವರು ದೃತಿಗೆಡುವುದಿಲ್ಲ. ತಾಯಿಯ ಬಳಿ ನಿಮ್ಮ ಕೋರಿಕೆ ಏನಿದೆ ಎಂದು ಕೇಳುತ್ತಾರೆ. ಆಗ ತಾಯಿ ಕಮಲಾಬಾಯಿ ಈ ರೀತಿ ನುಡಿಯುತ್ತಾರೆ “ನೀನು ನಮ್ಮ ಕುಲ ಹಾಗೂ ಜಗತ್ತಿನ ಕಲ್ಯಾಣವನ್ನು ಎಷ್ಟು ಮಾಡುವಿ ಎಂದು ನನಗೆ ಪೂರ್ಣ ಅರಿವಿದೆ. ನಿನ್ನಿಂದ ಕೇಳಿದ ಆತ್ಮ ವಿಚಾರ ನನ್ನಲ್ಲಿ ದೃಢವಾಗಿದ್ದು ಮರೆತಿಲ್ಲ. ನೀನು ಎಲ್ಲ ಸ್ತ್ರೀ ಸಮಾಜವನ್ನೂ ನನ್ನ ರೂಪವೆಂದು ತಿಳಿದು ಉದ್ಧಾರ ಮಾಡಲು ಪ್ರಯತ್ನಿಸು. ನೀನು ಮಾಡುವ ಸ್ತ್ರೀ ಸಮಾಜದ ಉದ್ಧಾರವೇ ನೀನು ನನಗೆ ಮಾಡುವ ಸೇವೆ ಎಂದೇ ತಿಳಿ. ‘ಸ್ತ್ರೀ’ ಎಂಬ ಭಾವನೆಯಿಂದ ಕಣ್ಣೆತ್ತಿ ನೋಡದಿರುವದಕ್ಕಿಂತಲೂ ‘ತಾಯಿ’ ಎಂಬ ಭಾವನೆಯಿಂದ ಅವರೊಡನೆ ಮಾತನ್ನಾಡುವದರಿಂದ, ಸ್ತ್ರೀಯರ ಬಗ್ಗೆ ದುಷ್ಟ ಭಾವನೆ ಮೂಡದೇ ನಿನ್ನ ಉದ್ಧಾರವೂ ಆಗುವದು. ಜ್ಞಾನಿ ಸರ್ವಸಮನಾದ ಆತ್ಮದೃಷ್ಟಿ ಬೇಧ ಕಲ್ಪನೆ ಇಟ್ಟರೆ ಅದೇ ಅವನಿಗೆ ಮೃತ್ಯುವಾಗಿ ಪರಿಣಮಿಸುವದು. ಮುಂದೆ ನಿನಗೆ ಒಬ್ಬಳೇ ತಾಯಿಯಲ್ಲ. ಸಕಲ ಸ್ತ್ರೀ ಸಮಾಜವೂ ತಾಯಂದಿರಾಗಿ ಅವರನ್ನೆಲ್ಲ ಉದ್ಧರಿಸಲಿಕ್ಕೆ ನಾನು ನನ್ನ ಮುದ್ದು ಮಗನನ್ನು ಇಲ್ಲಿ ಬಿಟ್ಟು ಹೋಗುವೆ. ವಚನ ಕೊಟ್ಟ ಬಳಿಕ ಈ ಪಾರ್ಥಿವ ಶರೀರವನ್ನು ಬಿಡುವೆ” ಎಂದು ವಚನ ಸ್ವೀಕರಿಸುತ್ತಾರೆ.

 

ಮುಂದೆ ಶ್ರೀಧರರಿಗೆ ಸ್ತ್ರೀಯ ವಿಚಾರವಾಗಿ ಕೆಲವು ಪರೀಕ್ಷೆಗಳು ಬಂದೊದಗುತ್ತದೆ. ಆದರೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಉಪಯೋಗಿಸಿ, ಅವುಗಳನ್ನು  ದೂರ ಮಾಡಿಕೊಳ್ಳುತ್ತಾರೆ. ಉಳಿದಂತೆ ಅವರು ಸ್ತ್ರೀಯರನ್ನು ತಾಯಿಯರಂತೆ ಕಂಡರೂ ಅವರ ಬಳಿ ಹೆಚ್ಚು ಮಾತನಾಡುತ್ತಿರಲಿಲ್ಲ. ಅದನ್ನು ಗಮನಿಸಿದ ಬೆಳೆಮನೆ ಪಾರ್ವತಮ್ಮ, ಹಾಗೂ ಇನ್ನು ಕೆಲವು ಸ್ತ್ರೀಯರು ಆಕ್ಷೇಪಣೆ ಮಾಡುತ್ತಾ “ಆತ್ಮಜ್ಞಾನಿಗಳಿಗೆ ಸ್ತ್ರೀಯರ ಬಗ್ಗೆ ಭೀತಿ ಇರುವದೇ?ನಿಮ್ಮ ತತ್ತ್ವಜ್ಞಾನ ಕೇಳಿ ನಾವು ಇವರಿಗೆ ಸ್ತ್ರೀ-ಪುರುಷ ಭೇದವಳಿದಿದೆ ಎಂದು ಭಾವಿಸಿದರೆ ನಿಮ್ಮಲ್ಲಿಯೇ ಇನ್ನೂ ಈ ತಾರತಮ್ಯ ಅಳಿದಿರದಿದ್ದರೆ ನಮಗೂ ನಿಮಗೂ ಏನೂ ಪ್ರಯೋಜನವಿಲ್ಲ” ಎಂದು ಪ್ರಶ್ನಿಸಿದಾಗ ಅವರು ಪ್ರತ್ಯುತ್ತರವಾಗಿ ಕೆಲವು ನುಡಿಗಳನ್ನು ಆಡುತ್ತಾರೆ.

 

“ಆತ್ಮ ಸಾಕ್ಷಾತ್ಕಾರವಾಗಿ ಒಂದೇ ಒಂದು ಸ್ಥಿತಿ ನಿಲುಗಡೆಯಾಗುವವರೆಗೆ ಮನುಷ್ಯ ಜೀವನದಲ್ಲಿ ವ್ಯಾವಹಾರಿಕ ಹಾಗೂ ಪಾರಮಾರ್ಥದ ಬೆಸುಗೆ ಆಗಿರುತ್ತದೆ. ನಾವೆಲ್ಲರೂ ಅಸತ್‍ನಿಂದ ಸತ್ಯವಸ್ತುವಿನೆಡೆಗೆ, ದ್ವೈತದಿಂದ ಅದ್ವೈತದ ಕಡೆಗೆ, ಅನೇಕತ್ವದಿಂದ ಏಕತ್ವದೆಡೆಗೆ  ಹೋಗಬೇಕಾಗಿದೆ.  ದೃಢಕಾಯನಾದ ಒಬ್ಬಾತನು ಜಾಗ್ರತೆ ಹೋಗಬಹುದಾಗಿದ್ದರೂ, ಮಿಕ್ಕ ಮಕ್ಕಳ ವೃದ್ಧರ ಜೊತೆಯಲ್ಲಿ ಯಾತ್ರೆಗೆ ಹೊರಟಾಗ ಅವರ ಶಕ್ತಿ, ವೇಗ, ಪ್ರಕೃತಿ ಇತ್ಯಾದಿಗಳನ್ನು ನೋಡಿ ನಡೆಯಬೇಕಲ್ಲವೇ? ಮಕ್ಕಳಿಗಾಗಿ ಮನೆಯಲ್ಲಿ ಎಲ್ಲರೂ ಪಥ್ಯ ಮಾಡುವಂತೆ,  ಜನಸಾಮಾನ್ಯಕ್ಕೆ ತಮ್ಮ ಆಚರಣವು ತಾರಕವಾಗುವಂತೆ ಸಮಾಜದಲ್ಲಿನ ಮಹಾತ್ಮರು ಇರಬೇಕಾಗುವದು. “ಪ್ಲಭವದಾಚರಣಂ” ಭವಸಾಗರದಲ್ಲಿ ಜ್ಞಾನಿಗಳು ಅಂಬಿಗನಂತೆ ಆಗಿದ್ದು ತಮ್ಮ ಸಚ್ಛಾರಿತ್ರ್ಯದ ದೋಣಿಯಲ್ಲಿ ಜನರನ್ನು ದಾಟಿಸಬೇಕೆಂದು ವೇದಶಾಸ್ತ್ರಗಳ ಉಪದೇಶವಿದೆ.

 

ನಾನು ಸಮದೃಷ್ಟಿಯಿಂದಲೇ ಜ್ಞಾನಬೋಧೆ ನಡೆಸುವಾಗಲೂ ನನ್ನ ನಡೆ ನುಡಿ ನೋಟ ಗಮನಿಸದ ಕೆಲವರು ನಾನು ವಿಕಾರಿ ಎಂದು ಭಾವಿಸಿದಾಗ ಅದರ ಸುಳಿವು ದೊರೆತು ನಾನು ಕೆಲವರ ಗೃಹ ಬಿಟ್ಟೆ. ಕೆಲವರ ಸಂಗಡ ಮಾತು ತೊರೆದೆ. ಆ ಲಾಗಾಯ್ತು ಆಯಾ ದೇಹೋಪಾದಿಯ ಸ್ವಭಾವವೆಂದು ತಿಳಿದು ಹೆಚ್ಚು ಪರಿಚಯಕ್ಕೆ ಹೋಗುವುದಿಲ್ಲ. ನಾನು ತಾಯಿ, ಸೋದರಿ ಎಂಬ ಭಾವನೆಯಿಂದಲೋ, ಉದಾರ ದೃಷ್ಟಿಯ ಜ್ಞಾನ-ವೈರಾಗ್ಯದ ನಾಲ್ಕು ಮಾತು ಹೇಳ ಹೊರಟಾಗ ಅವರಲ್ಲಿ ಸರಿ-ವಿರುದ್ಧದ ಭಾವನೆ ಉಂಟಾಗುತ್ತಾ ಹೋದರೆ ಅವರ ಉದ್ಧಾರವಾಗುವುದಿಲ್ಲ. ನಮ್ಮಂಥವರ ಬಗ್ಗೆ ಅಲ್ಲದ ಸಲ್ಲದ ಭಾವನೆ ಮಾಡುವ ಪಾತಕವೊಂದು ಒದಗಿಬಂದು ಅವರ ಅವನತಿಗೂ ಕಾರಣವಾದರೆ ನಾನೇನು ಮಾಡಿದಂತಾಯಿತು ಎಂಬ ಭಾವನೆ ನನಗೆ ಬಂತು. ಕೆಲವರಿಗೆ ನಮ್ಮಲ್ಲಿ ಒಳ್ಳೆ ಭಾವನೆ ಇದ್ದರೂ ಬೇರೆಯವರಿಂದ ಅಪವಾದ ಬರುವದುಂಟು. ನಮಗೆ ನಿಂದೆ ಸ್ತುತಿ ಪ್ರಶ್ನೆಯೇ ಇಲ್ಲ. ನಿಂದೆ ಬಂದಾಗ ನಾವು ಬೇರೆಡೆ ಹೋಗಬಹುದು, ಸತ್ಯ ಹೊರಬರುವದೆಂದು ಅಲ್ಲೇ ಉಳಿಯಬಹುದು, ನಿಂದೆ ಕೇಳಿ ಕೇಳಿ ನಮ್ಮ ಮನಸ್ಸು ಒರಟಾಗಿರಬಹುದು. ಆದರೆ ಅವರದ್ದು ಎಳೆಯ ಮನಸ್ಸಾಗಿರುತ್ತದೆ. ಕ್ಷುಲ್ಲಕ ಸಂಶಯದಿಂದ ಪತಿ ಅವರನ್ನು ಬಿಡಬಹುದು, ಜೀವನ ನಿರ್ವಹಣೆ ಕಷ್ಟವಾಗಬಹುದು, ನಿಂದೆ ಕೇಳಲಾಗದೇ ಪ್ರಾಣ ಕಳೆದುಕೊಳ್ಳಲು ಅವರು ಮನಸ್ಸು ಮಾಡಬಹುದು. ಇಂತಹ ಸಂದರ್ಭದಲ್ಲಿ ಅವರಿಗೆ ಆಶ್ವಾಸನೆ ಇತ್ತು ಅವರ ಜೀವನದ ಹೊಣೆಯಾಗಲು ನಮ್ಮಿಂದ ಸಾಧ್ಯವಾಗಲಾರದು. ನಮ್ಮ ಜೀವನ ಜನರ ಮೇಲೆ ಅವಲಂಬಿಸಿದೆ, ಹೀಗಾದರೆ ನಮ್ಮ ಸದುದ್ದೇಶದ ಫಲವೇನು? ಒಬ್ಬಾಕೆಯ ಉದ್ಧಾರ ಮಾಡಲು ಹೊರಟು ಅನೇಕರ ನಿಂದೆಗೆ ಪಾತ್ರರಾದರೆ ನಮ್ಮ ನಿಂದೆಗೆ ಒಂದು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಬಹುಜನರ ಉದ್ಧಾರವಾಗುವದಾದರೆ ಕೆಲವರನ್ನು ಬಿಟ್ಟರೂ ಅಡ್ಡಿಯಿಲ್ಲ ಎಂದು ನಾನು ಸ್ತ್ರೀಯರ ಸಂಗಡ ಹೆಚ್ಚು ಬಳಕೆಗೆ ಹೋಗುವುದಿಲ್ಲ” ಎಂದು ಉತ್ತರಿಸುತ್ತಾರೆ.

 

       -ಸರೋಜಾ ಪ್ರಭಾಕರ್

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!