ಅಂಕಣ

ನನ್ನಪ್ಪ

ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ   ಸೀಮಿತನಾ? ನಮ್ಮ- ನಮ್ಮ  ಅಪ್ಪಗಳ ವಿಶೇಷ.  ಅಷ್ಟೆ  ಹೇಳಿದರ ಸಾಕ? ಅಷ್ಟೆ  ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ ನುಗ್ಗಿ ಮೆದುಳಿಗೆ ಕೈ ಹಾಕಿ ಕಿವುಚಲಿಕ್ಕೆ ಶುರು ಮಾಡಕ ಮುಂಚೆ ಮದಲೆ ಬರದಿಟ್ಟುಕೊಂಡಿದ್ದ ” ಹ್ಯಾಪಿ  ಫಾದರ್ಸ್  ಡೇ”  ಮೆಸೆಜನ್ನ ವ್ಯಾಟ್ಸಪ ಗ್ರೂಪ್  ಒಂದಕ್ಕೆ  ಕಳುಹಿಸಿ, ಒಂದು ದೊಡ್ಡ ನಿಟ್ಟುಸಿರು ಬಿಟ್ಟು, ಹಾಗೆ  ಹಿಂದಿನ  ಗೋಡೆಗೆ  ಒರಗಿ  ಕಣ್ಣು ಮುಚ್ಚಿ ಕುಳಿತುಕೊಂಡೆ, ಅದೇನೊ ಒಂದು ತರ  ಅನುಭವ, ನನಗೆ ಗೊತ್ತಿಲ್ಲದೆ ನನ್ನ ಕೈಗಳು ನಡುಗಲಿಕ್ಕೆ ಪ್ರಾರಂಭ ಮಾಡಿದುವು, ಕೊರಳು ಕಟ್ಟಿದಾಂಗ ಅನಿಸ್ತು ಕಣ್ಣಾಗ ನೀರು, ಮೈಯಾಗಲ್ಲ  ಶಕ್ತಿನಾ ಇಲ್ಲದಾಂಗ ಆಗಿ ಕಡಿ-ಕಡೀಗೆ ಉಸಿರಾಡದ ಕಷ್ಟ ಅನಿಸ್ಲಿಕತ್ತು, ಕಷ್ಟ ಪಟ್ಟು ಉಸಿರು ತಗೊಂಡು ಉಸಿರು ಬಿಟ್ಟೆ, ಏನೋ ಒಂತರಾ  ಸಂಕಟ, ಏನು ಅಂತಾನು ತಿಳಿವಲ್ದು ನನಗೆ  ನಿಯಂತ್ರಣ  ತಪ್ಪಿ  ಜಗತ್ತಿನ  ಪರಿವೇ ಇಲ್ಲದಂತೆ  ಸಣ್ಣ  ಮಗು  ತರ  ಬಿಕ್ಕಿ-ಬಿಕ್ಕಿ  ಅಳಲಿಕತ್ತಿದ್ದೆ.

ನನಗೆ ಅಸ್ಪಷ್ಟ ನೆನಪು ಇನ್ನೂ ಹಾಗೆ ನನ್ನ ಕಣ್ಣ ಮುಂದೆ ಹರಿದಾಡತಿದೆ, ನನಗೆ  ಆಗ  ಸುಮಾರು  ಐದರಿಂದ  ಆರು  ವರುಷ  ಆಗಿರಬಹುದು  ಅಥಾವ ಸ್ವಲ್ಪ   ಕಡಿಮೆ ಅಂದರ  ನಾಲ್ಕರಿಂದ  ಐದ್  ಇರಬಹುದು ನಾವ್ ಆಗ  ಹರಿಹರ ತಾಲೂಕಿನ ಮಲೆಬೇನ್ನೂರು ಪಕ್ಕದಲ್ಲಿನ ಕುಂಬಳೂರುನಲ್ಲಿ ಇದ್ದವಿ. ಹೇಳಿ-ಕೇಳಿ  ಇಪ್ಪತ್ತ್ನಾಲ್ಕು  ಗಂಟೆ  ನೀರು  ಹರಿಯೊ  ಸೀಮೆ  ಕಣ್ಣು  ಹಾಸಿದಷ್ಟು  ಹಚ್ಚ  ಹಸಿರಿನ  ಭತ್ತದ ಗದ್ದೆಗಳು, ಅಲ್ಲಲ್ಲೆ ಗಗನ ಚುಂಬಿ ತೆಂಗಿನ ತೋಟಗಳು ಇವುಗಳನ್ನೆಲ್ಲ ಸೀಳಿಕೊಂಡು ನರನಾಡಿಗಳಂತೆ ಹಬ್ಬಿದ ನೀರಿನ ಕಾಲುವೆಗಳು, ಈ ಕಾಲುವೆಗಳಿಗೆ ಅಂಟಿಕೊಂಡೆ ಗುಂಪು-ಗುಂಪಾಗಿ ಕೆಂಪು ಹಂಚಿನ ಮನೆಗಳು, ಅಲ್ಲೊಂದು ಇಲ್ಲೊಂದು ಸಾವುಕಾರರ ಸಿಮೆಂಟಿನ  ಬಂಗಲೆಗಳಿದ್ದವು, ನಾವು  ಸಾಹುಕಾರ  ಜಂಬಣ್ಣನ  ತೆಂಗಿನ  ತೋಟದಲ್ಲಿದ್ದ  ಕೆಂಪು ಹಂಚಿನ ಒಂದು ಮನೆಯಲ್ಲಿ ಇದ್ದ್ವಿ, ಇನ್ನೊಂದು  ಹಾಳು ಬಿದ್ದಿತ್ತು. ಹಾವು, ಚೇಳು,  ಜೆಂಡಿಗ  ಹಾರಾಡಿಕೊಂಡು ಇದ್ದವು  ಅ  ಮನೆಯಲ್ಲಿ . ಅ ತೋಟ ಊರ ಹೊರಗೆ ಇದ್ದಿದ್ದರಿಂದ ತೋಟದಲ್ಲಿ ನಮಗೆ ಅವ್ರು, ಅವರಿಗೆ ನಾವೇ ಅಕ್ಕ-ಪಕ್ಕದವರಾಗಿದ್ದಿವಿ ಮತ್ತು ಅನ್ಯೋನ್ಯವಾಗಿದ್ವಿ, ಅಗಾಗ ಅವ್ರು  ಅಹಾರಕ್ಕಾಗಿ  ನಮ್ಮ  ಮನೆಗೆ  ನಾವು ಆಟ-ಆಟಿಕೆಗಳಿಗಾಗಿ ಅವರ ಮನೆಗೆ ದಾಳಿ ಮಾಡತಿದ್ದಿವಿ.

ಮನೆಯಲ್ಲಿ ಹುಡುಗರು ಅಂದರೆ ನಾನು ನನ್ನ ತಂಗಿ, ನನಗೆ ತಿಳಿದ ಹಾಗೆ ನನ್ನ ಒಬ್ಬ ಅಣ್ಣ ಸೋಗಿಯಲ್ಲಿ ನಮ್ಮಜ್ಜಾರ ಮನೆಯಲ್ಲಿ ಮತ್ತೊಬ್ಬ ಅಣ್ಣ ನಮ್ಮ ಹೆಣ್ಣ-ಅಜ್ಜಾರ ಹತ್ರ ಕಾಂತೇಬೆನ್ನೂರಲ್ಲಿ ಶಾಲಿಗೆ ಹಚ್ಹಿದ್ದರು ಅಂತ ಕೇಳಿದ್ದೆ, ನಮ್ಮಪ್ಪ ಸಾಹುಕಾರ ತೆಂಗಿನ ತೋಟದಲ್ಲಿ  ಕೆಲಸ  ಮಾಡುತ್ತಾ  ನಮ್ಮನ್ನೆಲ್ಲ ಸಾಕತಿದ್ದರು, ಸಾಲದ್ದಕ್ಕೆ ಅಲ್ಲೆ ಮಲೆಬೆನ್ನೂರಿನಲ್ಲಿ ಅಕ್ಕಿ ಮಿಲ್ಲಿಗೆ ಕೆಲಸಕ್ಕೆ ಹೋಗುತಿದ್ದರಂತೆ. ಅ ವಯಸ್ಸಿಗೆ ನಮಗೆ ಅದು ತಿಳಿಯದ ವಿಷಯವಾಗಿತ್ತು ಆದರ ಪ್ರತಿ ಶನಿವಾರ ಮಲೆಬೆನ್ನೂರು ಸಂತಿಯಿಂದ ಮಂಡಕ್ಕಿ-ದಾಣಿ, ಹಿಟ್ಟ-ಹಚ್ಹಿದ ಮೆಣಸಿನಕಾಯಿ ಮಾತ್ರ ತಪ್ಪದೆ ತರ್ತಿದ್ರು, ಅದ್ಕಾಗಿ ನಾನು ನನ್ನ ತಂಗಿ ಪ್ರತಿ ಶನಿವಾರ ಕಾಯ್ತಾ ಕೂಡತಿದ್ದಿವಿ. ಅಪ್ಪ ಬರೋದನ್ನ ದೂರದಿಂದಲೆ ನೂಡಿ ನಾ-ಮುಂದು ತಾ-ಮುಂದು  ಅಂತ  ಓಡಿ  ಹೊಗಿ ಸಂತಿ ಚೀಲ ಅವರ ಕೈಯ್ಯಿಂದ ಕಿತ್ತುಕೊಂಡು ಹೊತ್ಕೊಂಡು ಮನಿಗೆ ತರತಿದ್ದೀವಿ. ನಮ್ಮಪ್ಪ  ಬೇಡ  ಬಿಡ್ರೊ  ಭಾರ ಇದಾವು ಅಂದ್ರು ಕೇಳದೆ ಹೊತ್ತಕೊಂಡು ಮನಿಗೆ ತರತಿದ್ದೀವಿ,  ಕಾರಣ  ಇಷ್ಟೆ ಅಪ್ಪನ ಭಾರ ಕಡಿಮಿ ಮಾಡಕಲ್ಲ ಅದ್ರೊಳಗಿರೊ ಮಂಡಕ್ಕಿ-ದಾಣಿ, ಹಿಟ್ಟ-ಹಚ್ಹಿದ  ಮೆಣಸಿನಕಾಯಿ  ಗಮ್ಮತಾ ಹಾಂಗ್ ಮಾಡಿಸುತ್ತಿತ್ತು, ಚೀಲ ತೆಗಿದಿದ್ದ ತಡ ಮೊದಲು ನನಿಗೆ ನಿನಗೆ ಅಂತ ನಾಲ್ಕ ಪೇಪರ್ ಹಾಸಿ ಎಲ್ಲರಿಗು ಸಮ-ಸಮವಾಗಿ ಹಂಚಿ ಯಾಕಂದರ ನಮ್ಮದು “ಎಲ್ಲರಿಗು ಸಮ-ಪಾಲು ಎಲ್ಲರಿಗು ಸಮ-ಬಾಳು”  ತತ್ವ.  ವಯಸ್ಸಿನಲ್ಲಿ  ಚಿಕ್ಕವರು  ಅಸ್ಟೆ  ನಾವು  ತಿನ್ನೋದರಲ್ಲಿ  ಯಾರಿಗು  ಕಮ್ಮಿ ಇರಲಿಲ್ಲ, ನಮ್ಮದು  ಖಾಲಿ ಮಾಡಿ ಕೊನೆ-ಕೊನೆಗೆ ನನೆಗೆ ಬೇಡ ಯಾರಿಗೆ ಬೇಕು ಅಂತ ನಮ್ಮಪ್ಪ ಕೇಳೋದನ್ನೆ ಕಾಯಿತ್ತ ಕುಳಿತು, ಅವುಗಳನ್ನ ನಾವೆ ತಿನ್ನುತ್ತಿದ್ದಿವಿ ಆಗ ಅದು ನಿಜವಾಗಲು ಅಪ್ಪನಿಗೆ ಬೇಡವಾಗಿತ್ತು ಅಂತ ಈಗ ನನಿಗೆ ಅನ್ನಿಸುತ್ತಿಲ್ಲ, ಯಾಕೆ  ನೀನು  ಹೀಗೆ  ಅಂತ  ತಿಳಿಯೋ  ಹೊತ್ತಿಗೆ  ನಾನು  ಹಾಗೆ ಆಗಿದ್ದೆ ಬಿಡು. ಅದೆಲ್ಲ  ಹಾಗೆ  ಇರ್ಲಿ  ಬಿಡು  ಅದೆಂತ  ಕಷ್ಟ  ಇದ್ದರು,  ಬರೊ  ಪ್ರತಿಯೊಂದು  ಹಬ್ಬಕ್ಕು  ನನೆಗೆ  ಅಂಗಿ-ಚಣ್ಣ,  ತಂಗಿಗೆ  ಲಂಗ  ದಾವಣಿ ತರದನ್ನ ಮಾತ್ರ ಮರಿತಿದ್ದಿಲ್ಲ ಅಲ್ಲ , ನಾನು  ನೋಡಿದಂಗ  ನೀನು  ಒಂದು  ಒಳ್ಳೆ  ಟವಲ್ಲು  ತಗೊಂಡಿದ್ದು  ಕಾಣಲಿಲ್ಲ  ಮರಾಯ  ಬರಿ ನಮ್ಮ ಊಟ, ಬಟ್ಟೆ-ಬರಿ ನೀಟ ಮಾಡಲಿಕ್ಕೆ ಕಷ್ಟ ಪಡತಿದ್ದಿ, ನಿನ್ ಅರ್ಥ ಮಾಡಿಕೊಳ್ಳಿಕ್ಕೆ ಅವಕಾಶನ ಕೊಡಲಿಲ್ಲ ಮರಾಯ ನೀನು, ನಮಗಾದರು ಏನು ತಿಳಿಬೇಕು  ಹೇಳು  ಸಣ್ಣ ಹುಡುಗರು ನಾವು, ತಿಂದದ್ದು, ಆಡಿದ್ದಾ ಆಯ್ತು ಅಷ್ಟೆ, ಆಮೇಲೆ ನೀನು ನಮ್ಮನ್ನ ಸಣ್ಣ ಟ್ರಾಕ್ಟರ್ ಮೇಲೆ ಕೂರಿಸಿಕೊಂಡು ತೆಂಗಿನ ಕಾಯಿ ತುಂಬಿಕೊಂಡು ಮಲೆಬೆನ್ನೊರು ಸಂತಿಗೆ ಮಾರಲಿಕ್ಕೆ ಹೊಗುತಿದ್ದುದ್ದು ಇನ್ನು ಹಾಗೆ ನೆನಪು, ಬೇಡ-ಬೇಡ  ಅಂದರು  ಒಂದನೆ  ತರಗತಿಗೆ ಸಾಲಿಗೆ ಕರಕೊಂಡು  ಹೊಗಲಿಕ್ಕೆ  ಬರ್ತಿದ್ದ  ನಿಂಗರಾಜ, ಸಂಪತ್ತು, ರಾಜ, ಹನುಮಂತಗ  ಒಂದು ದಿನ ನಾನು ಕಲ್ಲುನಿಂದ ಹೊಡೆದಾಗ ದೊಡ್ಡ ಜಗಳನ ಆಗಿತ್ತು ನೋಡು,  ಅವರೆಲ್ಲ ಸೇರಿ ನನ್ನ ಬಡಿಲಿಕ್ಕೆ ಹುಡುಕುತಿದ್ದರು ನೋಡು, ಆಗ ನಾ ಬಣವಿ ಹಿಂದೆ ಹೊಕ್ಕಂಡಿದ್ದೆ, ನಿನಗ  ನಾ ಇರೋ  ಜಾಗ  ಗೊತ್ತಿದ್ದರು  ಅವರಿಗೆ  ಯಾಕ  ಹೇಳಲಿಲ್ಲ?  ಮತ್ತೆ  ಸಾಯಿಂಕಾಲ ಮನಿಗೆ ಬಂದ ನಂತರ ನನ್ನ ಹಿಡ್ಕೊಂಡು ಬಾಸುಂಡಿ ಬರೊ ತನಕ ಬಡಿದಿದ್ದಿ, ನೀ  ಅವತ್ತು  ಹೇಳಿದ  ಮಾತು ” ತಮ್ಮ  ಸಾಲಿಗೆ  ಹೋಗದಿದ್ದರ ಮುಂದ ನೀನು ಯಾರದಾದರು ತೋಟದಾಗ ನನ್ನತರ ಕೆಲಸ ಮಾಡಕಾಗತದ ನೋಡು” ಅಂತ, ನನಗ  ಏನು  ತಿಳಿದಿದ್ದಿಲ್ಲ ನೋಡು, ಮೈ ಕೈ ಎಲ್ಲ ಚುರು ಚುರು ಅಂತ ಉರಿತಿತ್ತು ಅಸ್ಟೆ, ಆಗಲೆ ಹೊಟ್ಟಿನು ಗುರು-ಗುರು ಅನ್ನಿಲಿಕತ್ತಿತ್ತು. ಯವ್ವ  ತಿನ್ನಕಾ  ಏನಾದರು  ಕೊಡಬೆ  ಅಂತ ಅಡುಗೆ ಮನೆ ಕಡೆಗೆ ಹೋಗಿದ್ದೆ, ಅವ್ವ  ಕೈ  ಕಾಲು  ಒಮ್ಮೆ  ನೋಡಿ  ಜೋರಾಗಿ  ಹೊಡದರ   ಅಪ್ಪಾ  ಇರಲಿ  ಬಾ, ಅ  ನಿಂಗರಾಜ  ಸಿಕ್ಕರ ನಾನು  ಬಡೀತೀನಿ  ಸರಿನ  ಅಳಬೇಡ  ಅಂತ ಆಕಿ ಸೆರಗಿನಿಂದ ಮೂಗು ವರಿಸಿ ಕೈಯಾಗ ನಾಕಾಣೆ ಕೊಟ್ಟು ಏನಾರ ತಗೊಂಡು ತಿನ್ನೋಗು ಅಂದಾಗ,  ನೀ  ಒಳ್ಳವ  ಅಲ್ಲ ಅನಿಸಿದ್ದು  ಸುಳ್ಳಲ್ಲಾಪ್ಪ, ಈಗಿನ ತರ  ಆಗ  ಏನು  ತಿಳಿತಿದ್ದಿಲ್ಲಪ್ಪ  ಅದಕ್ಕೆ  ಹಾಗೆ  ಅಸ್ಟೆ.

ನನಗ ಅನ್ಸುತ್ತೆ ಅದೆ  ಕೊನೆ  ಮತ್ತೆಂದು  ನೀನು  ನನ್ನ  ಹೊಡಿಲಿಲ್ಲ  ಅಲ್ವ. ಟಿ ಬಿ ಡ್ಯಾಂ  ನೀರು  ಯಾವಗ್ಲು  ಕಾಲುವೆಗಳು  ತುಂಬಿ  ಹರಿತಿದ್ದವು  ಸಣ್ಣ  ಹುಡುಗರು ನಾವು ಸಾಲಿ ಬಿಟ್ಟ ತಕ್ಷಣ, ಇಲ್ಲ ಸಾಲಿ ಬಿಡಾಕು  ಮುಂಚೆನೆ  ಹುಡುಗರು ಗುಂಪು  ಕಟ್ಟಿಕೊಂಡು   ದಿನಾಲು ಕೆನಾಲ್ ದಂಡಿಗೆ ಹೋಗಿ ಅಲ್ಲೆ ಅಂಗಿ -ಚಣ್ಣ ಕಳದು, ಪಾಟಿ-ಚೀಲ ಸೈಡಗೆ ಇಟ್ಟು , ಸಾಕಾಗತನಕ ನೀರಾಗ ಹಾರಾಡಿ, ಕುಣಿದಾಡಿ, ಕೇಕಿ ಹೊಡದು, ನೀರಾಗ ಮುಟ್ಟೊದು-ಮುಳೊಗೋ ಆಟ ಆಡಿ, ಅಲ್ಲೆ ಬಂದಿರೊ  ಎಮ್ಮೆಗಳ  ಮೈ  ತೊಳದು ಅವಗಳ ಬಾಲ ಹಿಡಕೊಂಡು ಈಜ ಅಡತಿದ್ದಿವಿ. ಇನ್ನೇನು ಸಾಯಿಂಕಾಲ ಆಯ್ತು ಅಂದ ತಕ್ಷಣ ಅವ ಅಂಗಿ-ಚಣ್ಣ ತೊಟಕೊಂಡು ಪಾಟಿ-ಚೀಲ ಹೆಗಲಿಗೆ ಹೇರಿಸಿಕೊಂಡು ಮನಿಗೆ ಬರತಿದ್ದಿವಿ, ಬಟ್ಟಿ ವಣಗಿದ್ದರು ನಿಮಗ ಅದು ಹ್ಯಾಂಗ ತಿಳಿತಿತ್ತು ಏನೊ ನಾವು ನೀರಲ್ಲಿ ಆಡಿ ಬಂದೀವಿ ಅಂತ, ನನಿಗೆ ಅನ್ಸುತ್ತೆ ನಮ್ಮ ಕಣ್ಣುಗಳು ಕೆಂಪಾಗಿರುತಿದ್ದವು ಅಲ್ವಾ. ಆದರು  ಒಂದೊಂದು ಸಲ ನಾವು ಕೆನಾಲ್  ಕಡಿಗೆ  ಹೋಗತಿದ್ದಿಲ್ಲ , ಯಾಕಂದರ  ಆಗಾಗ  ಅದರಲ್ಲಿ  ಸತ್ತ  ಹೆಣಗಳು ತೇಲಿ ಬರತಿದ್ದವು, ಆಗ ನಮಗೆ ಬಾರಿ ಹೆದರಿಕೆ ಆಗತಿತ್ತು, ಎಲ್ಲರು  ದಡದ  ಮೇಲೆ  ನಿಂತು ನೊಡತಿದ್ದಿವಿ, ಪೋಲಿಸರು  ಜೀಪು ಬಂದು ಅ ಹೆಣ ಮೇಲೆ ತಗುದು ಅಯ್ಯೊ ಬೇಡಪ್ಪ, ಅ ದಿವಸ ನಮೆಗೆಲ್ಲ ಜ್ವರ ಬರತಿದ್ದವು, ನೀನು ಅವ್ವ ನಮೆಗೆಲ್ಲ ಆ ಕಡೆ ಹೋಗಬ್ಯಾಡರಿ ಅಂತ ಗದರಿಸಿ  ಅವ್ವ ಕಸಬರಿಗಿ ತಗೊಂಡು ಇಳೆ ತಗಿದು ಥೂ.. ಥೂ..  ಅಂತ  ಮಕಕ್ಕೆ  ಉಗುದು  ಮನಿ  ಹೊರಗ ಕಸಬರಿಗಿ ಎಸಿತಿದ್ದಳು.  ಆದರ  ದೊಡ್ಡವರು  ಮಾತ್ರ  ಅಂತ  ಹೆಣ  ಕಂಡರ  ಹೆದರತಿದ್ದಿಲ್ಲ, ಮೇಲಾಗಿ ಅಂತ ಹೆಣ ಬಂದಾಗ ಅದನ್ನ ನೋಡಲಿಕ್ಕೆ ಹೋಗತಿದ್ದರು, ಜೊತಿಗೆ ಅಂತ ಹೆಣದ ಮೈ ಮ್ಯಾಗ ಇರೊ ಒಡವೆಗಳನ್ನ ಕದಿಲಿಕ್ಕೆ ಹೊಗತಿದ್ದರು ಅಂತ ನೀನೆ ಹೇಳಿತಿದ್ದಿ, ಅಯ್ಯಪ್ಪ  ಅದು  ಹ್ಯಾಂಗ  ಅ  ಸತ್ತ ಬಿದ್ದಿರೊ, ಗಬ್ಬು ನಾರತಿರೊ, ಉಬ್ಬಿಕೊಂಡಿರೊ ಹೆಣದ ಹತ್ತಿರ ಹ್ಯಾಂಗಾರ ಹೊಗ್ತಾರೊ ಏನೊ , ಏನ್ ಹಾಳಾದ ಜನ ಇವರು. “ಹಣಕ್ಕಾಗಿ ಹೆಣಾನು ಬಾಯಿ ಬಿಡುತ್ತೆ ಅಂತ ಕೇಳಿದ್ದೆ, ಇಲ್ಲಿ ಸತ್ತು ಬಾಯಿ ಬಿಟ್ಟಕೊಂಡಿ ಬಿದ್ದಿರೊ ಹೆಣದ ಹಣ, ಒಡವೆಗಾಗಿ ಬದಿಕಿರೊ ಜನ ಬಾಯಿ ತಕ್ಕೊಂಡು ಕುಂತಗಂಡಾರ”   ನೋಡು, ಇದೆ ಅಲ್ಲವ  ಜಗತ್ತು.

ಇರ್ಲಿ ಬಿಡು  ನಮ್ಮ  ಜಗತ್ತು  ನೋಡೊದಾದರ.  ಒಮ್ಮೆ  ನನ್ನ  ಪುಸ್ತಕದ  ಪ್ರಯೋಗ ಬುದ್ದಿ  ಚುರುಕಾಗಿ  ನಾನು  ತಂಗಿ  ಸೇರಿ ಬತ್ತದ ಬಣವಿ ಹಿಂದೆ ಹೋಗಿ, ಒಂದು ಸಣ್ಣ  ಪ್ರಯೋಗ ಮಾಡಿದ್ವಿ, ನಿಮಗ ನೆನಪು ಇರಬೇಕಲ್ಲಾ ಅದೆ ” ರಕ್ತ ಪರೀಕ್ಷೆ ಮಾಡುವ ವಿಧಾನ ”  ನಮಗೆ ತಿಳಿದಾಂಗ ಒಂದು ಚಿಕ್ಕ ಗಾಜಿನ ಲೋಟ, ಮತ್ತೊಂದು ಚಿಕ್ಕ ಸ್ಟೀಲಿನ ಲೋಟ, ಚಿಕ್ಕದೊಂದು ಕಲ್ಲು ಇವು ನಮ್ಮ ಪ್ರಯೋಗಕ್ಕೆ ಬೇಕಾದ ವಸ್ತುಗಳು, ಇನ್ನು ನಾವಿಬ್ಬರು ಸ್ವತಂತ್ರ, ಸ್ವಯಂ ಪ್ರೇರಿತ, ಮೊಳಕೆ ವಿಜ್ಞಾನಿಗಳು ಯಾಕಂದರ  “ಬೆಳೆಯುವ ಸಿರಿ ಮೊಳಕಿಯಲ್ಲಿ” ಅಂತಾರಲ್ಲ ಹಾಗೆ ಯಾರಿಗು ತಿಳಿಯದ ಹಾಗೆ  ದಿನವೊಂದನ್ನ ಗುರುತಿಸಿ ವಿದ್ಯುಕ್ತವಾಗಿ ಬಣವಿ ಹಿಂದೆ ನಮ್ಮ ಪ್ರಯೋಗವನ್ನ  ಪ್ರಾರಂಭ  ಮಾಡಿದಿವಿ, ವಯಸ್ಸಿನಲ್ಲಿ, ವಿದ್ಯಾಭ್ಯಾಸದಲ್ಲಿ, ಅನುಭವದಲ್ಲಿ ನನಗೆ ತಿಳಿದಂತೆ ನನ್ನ ಮಟ್ಟಿಗೆ ಹೇಳುವುದಾದರೆ ನಮ್ಮಬ್ಬಿರಲ್ಲಿ  ಸ್ವಲ್ಪ  ಬುದ್ದಿವಂತ ಅಂದರೆ ನಾನೇ!!! ಅದು ಮೇಲ್ನೋಟಕ್ಕೆ  ಗೊತ್ತಾದರು  ಪ್ರಾಸಂಗಿಕವಾಗಿ  ಇಲ್ಲಿ  ಹೇಳಬೇಕಾದ   ಅನಿವಾರ್ಯ  ಅಸ್ಟೆ,  ಯೋಜನೆಯಂತೆ ನಮ್ಮ ಪ್ರಯೋಗ ಪ್ರಾರಂಭವಾಯಿತು ಮೊದಲೆ ಹೇಳಿದಂತೆ ಹಿರಿಯರಾದ ನಾವೆ ಪ್ರಯೋಗಕ್ಕೆಂದು ನಮ್ಮ ಕೈಯನ್ನ ಕೊಯ್ದಿಕೊಳ್ಳಲು ನಿರ್ಧರಿಸಿದವು, ಕೈಯಲ್ಲಿದ್ದ ಗಾಜಿನ ಬಾಟಲಿಯನ್ನ ಕಲ್ಲಿಗೆ ಪಳ್ಳೆಂದು ಒಂದೆ ಹೊಡತಕ್ಕೆ ಒಡೆದು, ಅದರಿಂದ ಒಂದು ಹೊಳೆಯುವ, ಚೂಪಾದ ಗಾಜಿನ ಚೂರೊಂದನ್ನ ಕೈಗೆತ್ತಿಕೊಂಡು, ನಡುಗುತಿದ್ದ ಇನ್ನೊಂದು ಕೈಯಲ್ಲಿ  ಕಲ್ಲನ್ನು ಹಿಡಿದು, ಮನಸ್ಸಿನಲ್ಲಿ ದೇವರನ್ನ ನೆನೆದು, ವಿಜ್ಞಾನಿಗಳಾದ ಮಾತ್ರಕ್ಕೆ ದೇವರನ್ನ ನೆನೆಯಬಾರದು ಎಂದೇನಿಲ್ಲವಲ್ಲಾ!!! ದೀರ್ಘ ಉಸಿರನ್ನ ತೆಗಿದುಕೊಂಡು ಇನ್ನೇನು ಕೈ ಕತ್ತರಿಸಿಕೊಳ್ಳಬೇಕು ಎನ್ನುವಾಗ, ಮನೆಯವರೆಲ್ಲ ಒಂದು ಬಾರಿ ಕಣ್ಣು ಮುಂದೆ ಬಂದಂತಾಗಿ ನನ್ನ ತಂಗಿ ಮುಖವನ್ನ ಒಮ್ಮೆ ನೋಡಿದೆ, ಅವಳು ನಾನು ಕೊಟ್ಟ ಕೆಲಸದಲ್ಲಿ ತಲ್ಲೀನಳಾಗಿ ಕೈಯಲ್ಲಿದ್ದ ಲೋಟವನ್ನ ಒಂಚೂರು ಅಲುಗಾಡಿಸದೆ ಹಿಡಿದು ನಿಂತಿದ್ದಳು. ಅವ್ಳ ಕಣ್ಣುಗಳು ಯಾವಾಗ ನಾನು ಕೈ ಕೊಯ್ಕೋತೀನಿ ನಾ ಯಾವಾಗ ರಕ್ತ ನೋಡತೀನಿ ಅಂತಿದ್ದವು, “ಮನ್ಸು ಸಾಯಿತಿ ಮಗನ ನೀ ಸತ್ತೇ ಹೋಗತಿ ಅಂತಿತ್ತು” ಒಂದು ಸಲ ಮೈಯಲ್ಲ ಬೆವತು ಗಂಟಲು ಒಣಗಿ ಯಾಕರ ನಾ ಈ ಪ್ರಯೋಗ ಹಮ್ಮಿಕೊಂಡೆ ಅನ್ಸಿತ್ತು, ಆದರು ಕೊಟ್ಟ ಮಾತು ನನಗಿಂತ ಕಿರಿಯ ವಿಜ್ಞಾನಿ ಮುಂದೆ ಹೇಗೆ ಹೇಳಿಕೊಳ್ಳೊದು, ಏನ್ ಮಾಡೋದು ಈಗಾಗಲೆ ಎಷ್ಟು ಸಾದ್ಯನೋ ಅಷ್ಟು ನಮ್ಮನ್ನ ನಾವೆ ಕೊಚ್ಚಿಕೊಂಡು ಆಗಿತ್ತು. ಧೈರ್ಯ ಮಾಡಿ ಹರಹರ ಗುರು ಕೊಟ್ಟೋರೇಶ್ವರ ಅಂತ ಕೈ ಕೊಯ್ಕಂಡೆ! ಅದು ತಪ್ಪಿ ಮದ್ದೆದ ಬೆರಳಿನ ತುದಿಯನ್ನ ತಾಕಿ ರಕ್ತ ಜಲ್ಲ್ ಅಂತ ಚಿಮ್ಮಿತು, ಹಾಗೆ ತಪ-ತಪ ಅಂತ ಸುರಿಲಿಕ್ಕೆ ಚಲುವಾಯ್ತು, ಆ  ಸನ್ನಿವೇಶದಲ್ಲೊ ಏಕಾಗ್ರತೆಯಿಂದ ನನ್ನ ರಕ್ತ ಚಿಮ್ಮುವ ಕೈಯ್ಯನ್ನೆ ದಿಟ್ಟಿಸುತ್ತ ಕುಳಿತಿರುವ ನನ್ನ ತಂಗಿಯನ್ನ ನೋಡಿದಾಗ, “ಅವಳ ವೃತ್ತಿಪರತೆಯನ್ನ ಕಂಡು ಒಮ್ಮೆ ಸಂತಸವಾದರೆ ಮತ್ತೊಮ್ಮೆ ನನ್ನ ರಕ್ತ ಕುಡಿಲಿಕ್ಕೆ ಅಂತಾನೆ ಕಾದು ಕುಳಿತಿರೊ ಮಾರಮ್ಮನ ತರ ಕಂಡುದ್ದು ಸುಳ್ಳಲ್ಲ ಕಣ್ರೀ”  ಆ ಸನ್ನಿವೇಶವನ್ನ ಒಮ್ಮೆ ನೋಡಿ ಎದಿ ಧಸಕ್ ಅಂತು, ಕೈ ನಡಗಲಿಕ್ಕೆ ಪ್ರಾರಂಭವಾಯು, ಮೈಯಲ್ಲ ಬೆವತು ಉಸರ ನಿಂತಾಗ ಆಯು, ಹೊಟ್ಯಾಗ ಒಂತರಾ ಸಂಕಟ ಸುರುವಾಗಿ ಇನ್ನೇನು ಸತ್ತೆ ಹೊಗತೀನಿ ಅನಿಸಿ, ತಂಗಿ ಕಡಿಗೆ ನೋಡಿದರೆ!!! ನಮ್ಮವ್ವ ಒಂದು ಹನಿ ರಕ್ತನೂ ಹಾಳಾಗಬಾರದು ಅಂತ ಅಲ್ಲಲ್ಲೆ ಲೋಟ ಹಿಡಿಯಾಕತ್ತಿದ್ದಳು. ಮೊದಲ ಮಟ-ಮಟ ಮಧ್ಯಾಹ್ನ ನಮ್ಮ ಪ್ರಯೋಗ ನಡದಿತ್ತ, ಕಣ್ಣಿಗೆ ಕತ್ತಲ ಆದಂಗ ಆಗಿ ಬಾಯಿ ವಣಗಿ ನೀರಡಕಿ ಆಯ್ತು, ಓಡಬೆ ಓಡಿ ಹೋಗಿ ಕುಡಿಯಾಕ ನೀರು ತಗಂಡು ಬಾ ಅಂದ ತಕ್ಷಣ, ನಮ್ಮವ್ವ ನನ್ನ ತಾಯಿ ಕೈಯಾಗಿನ ರಕ್ತದ ಲೋಟ ತಗಂಡ ಮನೀಗೆ ಹೋಗಿ ನಮ್ಮವ್ವ ಏನದು? ಅಂತ ಕೇಳಿದ್ದಕ್ಕ ಹೆದರಿ ಅಣ್ಣ ಕೈ ಕೊಯ್ಕೊಂಡಾನ!!! ಅಂತ ಇದ್ದದ್ದ ಇದ್ದಂಗ ಹೇಳಿ ನಮ್ಮ ಸೀಕ್ರೇಟನ ಹಾಳಮಾಡಿದ್ದಲ್ಲದ ಆ ವಿಷಯ ರಾತ್ರಿ ನಮ್ಮಪ್ಪನ ತನಕ ಮುಟ್ಟಿ ಮೈಮೇಲೆ ಕಡಿಬಿನ ತರ ಗೊಬ್ಬಿ ಬರೊಹಾಂಗ ಬಡ್ತಾ ತಿಂದದ್ದು, ಇನ್ನು ಹಚ್ಚ-ಹಸಿರಾಗಿ ಬೆನ್ನಮೇಲೆ ಹಾಗೆ ಇದೆ, ಅಲ್ಲೆಗೆ ನಮ್ಮ ಪ್ರಯೋಗದ ಪರಿಣಾಮ ಏನಾಗಿರಬಹುದು ಅಂತ ನೀವೆ ಉಹಿಸಬಹುದು, ಆಗತಾವೆ ಕೆಲವು ಸಲ ಪ್ರಯೋಗದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗತವೆ!!!. ಅಂದುಕೊಂಡು ಸುಮ್ಮನಾದೆ. ಮರುದಿನ ನೀನು ನನ್ನನ್ನ ಆಸ್ಪತ್ರಿಗೆ ಕರಕೊಂಡು ಹೋಗಿ ಕೈಯಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಬಂದಿದು, ಬರುವಾಗ ಮಲೆಬೆನ್ನೋರಲ್ಲಿ ಪಳಾರ ಕೊಡಿಸಿದ್ದು, ಇನ್ಮುಂದೆ ಹೀಗಲ್ಲ ಮಾಡಬೇಡಪ್ಪ ಅಂದಿದ್ದು, ನನ್ನನ್ನ ನಿನ್ನ ಹೆಗಲ ಮ್ಯಾಲೆ ಕೊಡಿಸಿಕೊಂಡು ದಾರಿಯಲ್ಲಿ ಬರುವಾಗ, ಸಾಹುಕಾರ ನಾಗಣ್ಣ ಕೆಳಗಿಳಿಸೊ ಮಾರಾಯ ಅವನೇನು ಎಳೆ ಕೂಸಲ್ಲ ಅಂದಿದ್ದಕ್ಕ “ಮಕ್ಕಳು ಎಷ್ಟು ದೊಡ್ಡಾದ್ರು ಆದರು ಮಕ್ಕಳಲ್ಲವೇ ಅಂದಾಗ” ಅಪ್ಪ ನಿಜ ಹೇಳಬೇಕಂದರೆ ನನಿಗೆ ಕರೆ ಅವತ್ತು ನೀನೆ ನಿಜವಾದ ವಿಷ್ಣುವರ್ಧನ ಅನಿಸಿತ್ತು ನೋಡು. ಮುಂದೆ ನಮ್ಮ ಪ್ರಯಾಣ ನಮ್ಮ ಊರಾದ ಸೋಗಿ ಹತ್ತಿರ ಇರುವಂತಹ ಹುಗಲೂರು ಅಲ್ಲೆ ನನ್ನ ಪ್ರಾಥಮಿಕ ಶಿಕ್ಷಣ ಒಂದನೇ ತರಗತಿಗೆ ಹಚ್ಹಿದ್ದು, ದೂರದಲ್ಲಿ ಸುಂದರ ಬೆಟ್ಟದ ಮಲ್ಲೇಶ್ವರ ಗುಡ್ಡ, ಸಣ್ಣ-ಸಣ್ಣ  ಹಳ್ಳಿಗಳು, ಹಳೆ ಮಣ್ಣಿನ ಮನೆಗಳು, ನಮ್ಮ ಮನೆಯಿಂದ ಸ್ವಲ್ಪವೆ ದೂರದಲ್ಲಿ ನಮ್ಮ ಹೊಲ,ಬೇಸಿಗೆ ಬಂದರೆ ಸಾಕು ನಮಗೆಲ್ಲ ಸಾಲಿ ರಜೆ ಕೊಡತಿತ್ತು, ನಾವೆಲ್ಲ ಆಕಳ ಹಿಡಕೊಂಡು ಮೇಯಿಸಲಿಕ್ಕೆ ಅಂತ ಹೊಲದ ಕಡೆಗೆ ಬುತ್ತಿ ಕಟ್ಕೊಂಡು ಹೋಗೋದು, ಅಲ್ಲೆ ನಮ್ಮ ಹೊಲದ ಮದ್ಯ ಹರಿಯುತ್ತಿದ್ದ ಹಳ್ಳದಲ್ಲಿ ಸ್ನಾನ ಮಾಡಿ, ಬೇವಿನ ಮರದ ಕೆಳಗೆ ಕೂತ್ಕೊಂಡು ಊಟ ಮಾಡಿ ಮನಿಗೆ ಬರೊ ಹೊತ್ತಿಗೆ ರಾತ್ರಿ ಆಗತಿತ್ತು ಅಲ್ವ, ಅದೆಲ್ಲ ಈಗ ನೆನಪು ಮಾತ್ರ ಬಿಡು.

ಮುಂದೆ ನಾ ಐದನೆ ತರಗತಿ ಇರಬೇಕು, ಅಂದು ನಡದ ಅ ಸ್ವಾರಸ್ಯಕರ ಘಟನೆ ನೆನಸಿಕೊಂಡರೆ ಈಗಲು ನಗಿ ಬರತದೆ ನನಿಗೆ. ಅದೊಂದು ದಿನ ನಾ ಎಂದಿನಂತೆ ಸಾಯಿಂಕಾಲ ಆಟ ಆಡತ ಬಹಳ ತಡ ಆಗಿ ಮನಿಗೆ ಬಂದ ನೋಡಿದರ! ನೀ ನನಿಗಿಂತ ಮೊದಲೆ ಮನಿವಳಗ ಸಿಟ್ಟಾಗಿ ಬರಲಿ ಅವನು ಈವತ್ತು ಅದೆಸ್ಟು ಹೊತ್ತಿಗೆ ಬರತಾನೊ ಬರಲಿ ಅಂತಿದ್ದು, ನನ್ನ ಕಿವಿಗೆ ಬಿದ್ದ ತಕ್ಷಣ ನನ್ನ ಮನಸ್ಸಿಗೆ ಈವತ್ತು ಬಡ್ತ ಬೀಳೋದು ಗ್ಯಾರಂಟಿ ಅನಿಸಿ, ಹ್ಯಾಗಪ್ಪ ಈ ಪರಸ್ಠಿತಿಯಿಂದ ತಪ್ಪಿಸಿಕೊಳ್ಳೋದೊ ಅಂತ ಯೋಚನೆ ಶುರುವಾಗಿ ಒಂದು ನಿಮಿಷ ಸ್ತಬ್ದ ಆಗಿ ಹೋಗಿದ್ದೆ. ಆಗಲೇ ನಮ್ಮ ಮಾಸ್ಟರ್ ಮೈಂಡಗೆ ಒಂದು ಐಡಿಯಾ ಬಂತು!!! ಅದೇನಪ್ಪ ಅಂದರೆ ಹೊರಗಡೆ ಕಟ್ಟಿಯ ಮೇಲೆ ಕತ್ತಲದಲ್ಲಿ ಹಾಗೆ ಗೋಡೆಯ ಕಡೆಗೆ ಸರಿದು ಮಲಿಗಿಬಿಟ್ಟು, ಬಹಳ ಹೊತ್ತಿನಿಂದ ನಾ ಇಲ್ಲೇ ಮಲಿಗಿದ್ದೇನೆ ಅಂತ ತೋರಿಸಿವ ಹುನ್ನಾರ ಮಾಡಿ ಹಾಗೆ ಮಲಗಿ ಬಿಟ್ಟೆ, ಸಮಯ ಕಳಿಯುತಿತ್ತು ಒಳಗಡೆ ನೀವು ಮಾತನಾಡುವುದು ಕೇಳುತಿತ್ತು, ಆದರೆ ಏನು ಮಾಡಲಿ, ನನ್ನ ಕಡೆಗೆ ನಿಮ್ಮ ಯಾರ ಗಮನವು ಸುಳಿಯುತ್ತಿಲ್ಲ, ಸಮಯ ಕಳಿಯುತ್ತಿದ್ದೆ ಹೊಟ್ಟೆ ಬೇರೆ ಗುರ್ ಗುರ್ ಅಂತಿತ್ತು, ಏನಪ್ಪ ಮಾಡಲಿ? ನಾನೆ ಎದ್ದು ಹೋದರೆ ಕಡುಬು ಗ್ಯಾರಂಟಿ, ಹಾಗೆ ಮಲಗಿದರೆ ಹೊಟ್ಟೆ ಹಸಿವು, ದೇವರೆ ನನಗೆಂತ ಕಸ್ಟ ಕೊಟ್ಟಿದ್ದಿಯಪ್ಪ ಅಂದ್ಕೊಂತಾನೆ ಸುಮ್ಮ-ಸುಮ್ಮನೆ ಸೊಳ್ಳೆ ಕಡಿದ ಹಾಗೆ ಕೈ-ಕಾಲುಗಳನ್ನ ಹೊಡೆದುಕೊಳ್ಳುವುದು, ಕೆರ್ದುಕೊಳ್ಳುವುದು ಮಾಡಲಿಕ್ಕೆ ಶುರು ಮಾಡಿದೆ, ಹಾಗ ನನ್ನ ಪುಣ್ಯಕ್ಕೆ “ನಮ್ಮವ್ವ ದೇವರ ತರ ಅಲ್ಲಲ್ಲಾ ದೇವರೆ ನಮ್ಮವ್ವನ ರೂಪದಾಗ” ಹಾಸಿಗೆ ತಗೊಳ್ಳಾಕ ಅಂತ ಹೊರಗ ಬರೋದು ಗೊತ್ತಾಯ್ತು ನೋಡು, ನನ್ನ ಕೈಗಳಿಗೆ, ಕಾಲುಗಳಿಗೆ ಬುದ್ದಿ ಹೇಳಿ ಇಂತಹ ಸುಸಮಯ ಮತ್ತೆ ಸಿಗಲ್ಲ ಅಂದಕೊಂಡವನೆ, ಸ್ವಲ್ಪ ಜೋರಗಿ ಸೊಳ್ಳಿನ  ಹೊಡಕೊಳ್ಳಾಕ ಶುರು ಮಾಡಿದೆ, ಸುಮ್ಮನೆ ಅ-ಕಡೆ- ಇ-ಕಡೆ  ಹೋರಳಾಡಿದೆ, ದೇವರ ದಯೆ, ಹಿರಿಯರ ಆರ್ಶಿವಾದ, ನಮ್ಮವ್ವ ಯಾರ್ ಯಾರ್-ಅದು ಅಂತ ನನ್ನ ಹತ್ತರ ಬಂದು, ತಮ್ಮ, ಕುಮಾರ ಇಲ್ಲಿ ಮಲಿಗಿಯಪ್ಪ ನೀ, ಇಡಿ ಊರೆಲ್ಲ ಹುಡಿಕಿದಿವೆಲ್ಲ ನಿನ್ನ, ಅಂದು ನನ್ನ ಎಬ್ಬಿಸಿದಳು, ನಾನು ಸುಮ್ಮನೆ ಬಾಳ ಡೀಪ್ ನಿದ್ದಿವಳಗ ಅದಿನಿ ಅನ್ನೊ ತರ ಹಾಂ… ಹೋಮ್….., ವಲ್ಲೆ ವಲ್ಲೆ ಅಂತ ಸುಮ್ಮನೆ ನಾಟಕ ಮಾಡಿದೆ, ಪಾಪ ನಮ್ಮವ್ವ!! ಅದನ್ನ ನಂಬಿ, ನಮ್ಮಪ್ಪಗ ಏನಾ, ಓಯ್ ಕುಮಾರ ಇಲ್ಲೆ ಅದಾನ, ಪಾಪ ಎಷ್ಟೋತ್ತಾಯ್ತೊ ಏನೋ ಸ್ವಳ್ಳಿ ಕಡಿಸಿಗಂತ ಇಲ್ಲೆ ಮಲಿಗ್ಯಾನ, ನಾ ಹೇಳಿಲ್ಲ ನಿಮಗ ಅಂವ ಇಲ್ಲೆ ಎಲ್ಲೊ ಇರತಾನ ಅಂತ, ಸುಮ್ಮನ ಊರೆಲ್ಲ ಹುಡಿಕಿದಿರಿ, ಏಳ ತಮ್ಮ ಏಳು ಉಣ್ಣು ಅಂದಲು, ಸಿಕ್ಕಿದ್ದೆ ಚಾನ್ಸು ಅಂತ ನಾನು ಸುಮ್ಮನೆ ಹಾಂ..ಊಂ……ಅಂದಕೊಂತ ಕಣ್ಣು ತಿಕ್ಕಿಕೊಳ್ಳತ, ಜೋಲ್ಲು  ಒರೆಸಿಕೊಳ್ಳತ ನಮ್ಮವ್ವನ  ಹಿಂದ ಹೋದೆ, ನಮ್ಮಪ್ಪನ ಕೋಪ ಸ್ವಲ್ಪ  ಕಡಿಮಿ ಅನಿಸಿತ್ತು, ಆದರು ನಮ್ಮಪ್ಪನಿಗೆ ನನ್ನ ಮೇಲೆ ಡೌಟ್ ಅದು ನನಗೆ ಸ್ಪಷ್ಟವಾಗಿ ಕಾಣ್ತಿತ್ತು ಅದಕ್ಕ ನನ್ನ ನಾಟಕನು ಜೋರಾಗಿತ್ತು, ತಮ್ಮ ಉಂಡು ಮಕ ನಡಿ ಅಂದ್ರು ನಮ್ಮವ್ವ, ಊಂ..ನ ಒಲ್ಲೆ ಅಂದೆ, ಅಷ್ಟಕ್ಕ ನಮ್ಮಪ್ಪ ಬ್ಯಾಡಂತ ಬಿಡು ಅವ್ಗ ಅಂದ, ನನಿಗಂತು ಹೊಟ್ಯಾಗ ಕೈ ಹಾಕಿ ಯಾರೋ ಕಿವಿಚಿದಂಗ ಆಯ್ತಿ ನೋಡು, ಮೊದಲ ಹೊಟ್ಟಿ ಹಸ್ದು ಕರ- ಕರ ಅಂತಿತ್ತು ಏನ್ ಮಾಡಲಪ್ಪಾ ಅಂದಕೊಂಡು, ರೊಟ್ಟೀ ಚಿಬ್ಬಲಿ ಕಡಿಗೆ ಒಮ್ಮೆ ನೋಡಿದರ! ಚಿಬ್ಬಲಾಗಿನ ರೊಟ್ಟಿ ತಕ-ತೈ ತಕ-ತೈ ಅಂತ ಕುಣಿದಂಗ ಆಯ್ತು, “ಎಷ್ಟಾ ಆಗಲಿ ಹಡದ-ಹೊಟ್ಟಿ ಕರುಳಿನ-ಸಂಬಂದ ನೋಡು, ನಮ್ಮವ್ವನಿಗೆ ಅದೇನ್ ತಿಳಿತ ಗೊತ್ತಿಲ್ಲ”  ಇಲ್ಲ ಬಿಡು ಸ್ವಲ್ಪ ಉಣ್ಣು ಅಂದ್ಲು, ಸಿಕ್ಕದ್ದ ಚಾನ್ಸು ಅಂತ ನಾನು ಸೀದ ತಾಟಿಗೆ ಕೈ ಹಾಕಿದವನೆ ಮೂರು ರೊಟ್ಟಿ ತಗೊಂಡು ಕಪ-ಕಪ ತಿನ್ದು, ಮನಿಸಿನ್ಯಾಗ ಉಳುಕೊಂಡಿ ಮಗನ ಉಳಕೊಂಡಿ ಅಂದಕೋತ ನಿಚ್ಛಳ ಆಗಿ, ಕೈ ಒರಿಸಿಕೊಂಡು, ಏನು ಗೊತ್ತಿಲ್ಲದವರ ತರ ನಮ್ಮಪ್ಪನ ಕಡಿಗೆ ನೋಡಿದರ!!! ತಮ್ಮ ನನಿಗೆಲ್ಲ ಗೊತ್ತೈತಿ, ಬಡ್ತ ತಪ್ಪಿಸಿಕೊಳ್ಳಾಕ ಏನ್ ನಾಟಕ ಮಾಡಕತ್ತಿ ನೀ ಅಂದು ಎಲ್ರು ಗೊಳ್ಳ್ ಅಂತ ನಕ್ಕರು!!!!!  ನನಿಗಂತು  ನಾಚಿಕಿ  ಆಗಿ-ಹೊಗಿತ್ತು.

ಅಂತು ಇಂತು ನಾ ಎಸ್’ಎಸ್’ಎಲ್’ಸಿ’ನಲ್ಲಿ ನಮ್ಮ ಊರಿಗೆ ಅತಿ ಹೆಚ್ಹು ಮಾರ್ಕ ತಗೋಂಡಿದ್ದನ್ನ ಕೇಳಿ, ನನಿಗಿಂತ ಹೆಚ್ಚು ಕುಣಿದ್ದಿ ಅಲ್ಲ, ಬಿಳಿ-ಜುಬ್ಬ, ಬಿಳಿ-ಲುಂಗಿ, ಹೆಗಲ ಮ್ಯಾಲೆ ತೆರಿಕಾಟ ಟವಲ್ಲು ಹಾಕ್ಕೊಂಡು, ನನ್ನ ಕಾಲೇಜಿಗೆ ಸೇರಸಿಲ್ಲಿಕ್ಕೆ, ನಾವಿಬ್ಬರು ಕೋಟ್ಟೊರಿಗೆ ಹೋಗಿದ್ದು, ಹೋಟಲ್ಲನ್ನಾಗ ಮಸಾಲಿ ದ್ವಾಸಿ ತಿಂದಿದ್ದು, ನನಗಿನ್ನು ಹಚ್ಚ ಹಸಿರಪ್ಪ. ಆದರು ಒಂದು ಬೇಜಾರು ಮರಾಯ, ನೀನು ನನಿಗೆ ಮನೆಯ ಸಮಸ್ಯೆ ಗೊತ್ತಾಗ ಬಾರದು ಆಂತ, ನನಿಗೆ ಫೀಜು ಕಟ್ಟಲ್ಲಿಕ್ಕೆ ಅಂತ ಮನೆಯಲ್ಲಿದ್ದ ಅವ್ವನ ಹಳೆ ಹಂಡೇನಾ ವತ್ತಿ ಇಟ್ಟು, ಸಾಲದಕ್ಕ ಅವ್ವನ ಕಿವಿಯಾಗಿನ ಬೇಂಡೊಲಿನ ಸಹ ಮಾರೀದ್ದ ವಿಶ್ಯ್ ಕೇಳಿ ಬಾಳ ಬೇಜಾರ್ ಆಗಿತ್ತು ನೋಡು.

ಅಂತು ಇಂತು ನನ್ನ ಪಿ.ಯು.ಸಿ ಓದು ಮುಗುದು ನಾನು ಶಿಕ್ಷಕ ತರಬೇತಿ ಮಾಡಬೇಕು ಅಂತ ನಿಮ್ಮ ಮುಂದೆ ಹೇಳಿದಾಗ ನಿನಗೆ ಬಾಳ ಖುಶಿ ಆತು, ಆದರ ಅಷ್ಟೋಂದು ದುಡ್ಡು ಜೋಡಿಸೋದೆ ಕಷ್ಟ ಆಗಿತ್ತಲ್ಲ, ನಾನು ತಿಳಿದೆ ನಿನಿಗೆ ಬೇಜಾರ ಆಗೊ ತರಹ ಮಾತಾಡಿ ಬಿಟ್ಟೆ ಕಣಪ್ಪ “ನೀನು ಮನಿ ಬಿಟ್ಟು ಬರೋದಲ್ಲದೆ ನಮ್ಮ ಜೀವ್ನಾನು ಹಾಳ್ ಮಾಡಿಬಿಟ್ಟಿ ಅಂತ” ನನೆಗೆ ಮುಂದೆ ಓದಸಿಲಿಕ್ಕೆ ನೀನು ರೋಕ್ಕ ಜೋಡಿಸಿಲಿಲ್ಲ ಅನ್ನೋದು ಮಾತ್ರ ಆಗ ನನಿಗೆ ದೊಡ್ಡದಾಗಿ ಕಾಣಿತು, ಆದರ ನೀ ನಮಗೋಸ್ಕರ ಪಡತಿದ್ದ ಕಷ್ಟ ಕಣ್ಣಿಗೊ ಕಾಣಿಸಿಲಿಲ್ಲ-ಕರುಳಿಗೊ ಕೇಳಿಸಿಲಿಲ್ಲಪ್ಪ, ಅದೊಂದು ತಿಳಿದೋ-ತಿಳಿಯದೋ ತಪ್ಪಾಡಿಬಿಟ್ಟೆ ಕಣಪ್ಪ, ಈಗ ನೆನೆಸಿಕೊಂಡ್ರೆ ಪಾಪ-ಪ್ರಜ್ಞೆ ಕಾಡತದಪ್ಪ, ಏನ್ ಮಾಡಲಿ ತಿಳಿಲಿಲ್ಲ, ಹೇಗೊ ಹಣ  ಹೊಂದಿಸಿಕೊಂಡು,  ಕುಮಟಕ್ಕೆ ಬಂದು ನನ್ನ ಕಾಲೇಜಿಗೆ ಸೇರಸಿ ನೀನು ವಾಪಸ್ ಊರಿಗೆ ಹೋಗೊವಾಗ ನಿನ್ನ ಸಂಕಟ ನೋಡಲಿಕ್ಕೆ ಆಗಲಿಲ್ಲಪ್ಪ, ಯಾಕಂದ್ರ “ಯಾ ಕಡೆ ಬಯಲುಸೀಮೆ, ಯಾಕಡೆ ಕರಾವಳಿ” ಮುನ್ನೂರ ಐವತ್ತರಿಂದ ನಾನೂರು ಮೈಲು ದೂರ ಘಟ್ಟ ಹತ್ತಿ-ಘಟ್ಟ ಇಳಿದು ಬಂದಿದ್ವಿ ಅಲ್ಲ,  ಮುಂದೆ  ಪ್ರತಿ ತಿಂಗಳು ನೀ ಬರಿತಿದ್ದ ಇನ್ಲ್ಯಾಂಡ ಪತ್ರಕ್ಕ ಕಾಯಿತಿದ್ದೆ, ನೀನು ನಾ ಬರೆಯೋ ಪತ್ರಕ್ಕ ಕಾಯಿತಿದ್ದಿರಬೇಕಲ್ಲ, ಅ ಇನ್ಲ್ಯಾಂಡ ಪತ್ರದಾಗ ನೀ ಕಳಿಸಿತಿದ್ದ, ಅ  ಹಳೆ ಐದುನೂರು ರೂಪಾಯಿ ನೋಟು ನನಿಗೆ ತಲುಪೋ ತನಕ ನೀ ನಿದ್ದಿ ಮಾಡತಿದ್ದಿಲ್ಲ ಅಂತ ಅವ್ವ ಹೇಳತಿದ್ದಲ್ಲಪ್ಪ. ಇನ್ನೇನು ಎರಡನೆಯ ವರ್ಷದ  ಡಿ’ಎಡ್ ಪರೀಕ್ಷೆ ಇನ್ನೂ ಇಪ್ಪತ್ತ ದಿನ ಬಾಕಿ ಇತ್ತು, ಸರಿ ಸುಮಾರು ಮಧ್ಯಾಹ್ನ ಹನ್ನೆರೆಡು ಗಂಟೆ ಆಗಿರಬೇಕು, ಸ್ನೇಹಿತ  ಆನವಟ್ಟಿ ವಿಜಿ ಬಂದು  ಹೇಳಿದ, ಊರಿಂದ ಪೋನ್! ನೀನು ತಕ್ಷಣ ಹೊಗಬೇಕು!!!  ವಿಷಯ ಗೊತ್ತಿದ್ದ ಅವನು ಹ್ಯಾಂಗ ಹೇಳತಾನ, ಧೈರ್ಯ ತಗೊ ಬೇಗ ಹೊರಡು ಅಂದ, ಎಂದು ಕಾಣದ ದುಗಡ, ನನ್ನ ಹೊಟ್ಟ್ಯಾಗ ಸಂಕಟ ಆತು, ಕಣ್ಣಾಗ ನೀರು ದಳ-ದಳ ಎಷ್ಟು ಕಂಟ್ರೊಲ್ ಮಾಡಿದರು, ದುಃಖ ತಡಿವಲ್ದು ಕುಮಟ ಬಸ್ ಸ್ಟ್ಯಾಂಡನಾಗ  ಬಿಕ್ಕಳಿಸಿ-ಬಿಕ್ಕಳಿಸಿ ಅಳಾಕತ್ತಿದ್ದೆ, ಉಡಿಪಿ-ಬಳ್ಳಾರಿ ಬಸ್ಸು ಹತ್ತಿ ಕಟ್ಟ-ಕಡೆ ಸೀಟಿನಲ್ಲಿ ಅಳುತ ಕೂತ ನಾನು ಅಪ್ಪನೊಂದಿಗೆ ಬಂದಿದ್ದ ನೆನಪನ್ನ ಮೆಲುಕು ಹಾಕುತ್ತ, ಬಿಕ್ಕಳಿಸುತ್ತ, ತುಂಬ ಅತ್ತಿದ್ದರಿಂದ ಗಂಟಲು ಒಣಗಿ, ದ್ವನಿಯೆ ಇಲ್ಲದಂಗಾ ಆಗಿ ಹಾಗೆ ನಿದ್ದೆಗೆ ಜಾರಿದೆ, “ಬಸ್ಸು ಘಟ್ಟ್ -ಹತ್ತಿ ಘಟ್ಟ-ಇಳಿದಿದ್ದು ನನ್ನ ಜೀವನದ ಮುಖ್ಯ ಘಟ್ಟವೊಂದು ಮುಗಿದಿದ್ದನ್ನ ತೋರಿಸಿ ಅಣಕಿಸಿದಂತೆ ಭಾಸವಾಯಿತು”. ಹೇಳಿಕೊಳ್ಳಲು ಏನು ಇಲ್ಲ ಅನಿಸಿದಂತಾಯಿತು, ಸ್ಮಶಾನ ಮೌನ, ಈಡಿ ಬಸ್ಸಿನ್ನಲ್ಲಿ ನಾನು ಒಬ್ಬನೆ ಅನಿಸಿದಂತೆ ದಿನ ಅದು!!!  ಇನ್ಮೇಲೆ ಯಾವತ್ತು ಇಲ್ಲ! ಅನ್ನೊ ವಿಷಯನೆ ನನ್ನಲ್ಲಿ ಒಂತರಾ ಭಯ ತರಿಸಿತ್ತು, ಮುಂದೆ ಜೀವನ ಹೇಗೊ ನೆಡಸಬಹುದು, ಆದರೆ ನೀ ಇಲ್ಲದೆ……? ನಾನು ಒಂದು ಜಾಬ್ ಹಿಡಿಬಹುದು, ಕೈತುಂಬ ಕಾಸು ಬರಬಹುದು, ಆದರೆ ಅಪ್ಪಾ…….? ಛೇ ಎಂತ ಪರಿಸ್ಥಿತಿ ತಂದಬಿಟ್ಟಿ ದೇವರೆ, ಅಲ್ಲ ಜೀವನ ಪೂರ್ತಿ- ಜೀವ ಸವಿಸಿದ ಜೀವಕ್ಕ ಕಡೆ ಗಳಿಗೆಯಲ್ಲಾದರು ನೆಮ್ಮದಿ ನನ್ನ ರೂಪದಲ್ಲಿ ಕಾಣೋ ಸಮಯಕ್ಕೆ? ಕೊನೆಯದಾಗಿ  ಮಗನಾಗಿ ಅವರಿಗೆ ನನ್ನ ಕೈಲಾದ ಸೇವೆ ಮಾಡೋ ಆವಕಾಶನಾದರು? ಎಂತ ಕಲ್ಲು  ಹೃದಯ ನಿಂದು ಅಲ್ಲ “ಕೋಡೊಕಾಗದಿದ್ದವನು ಕಿತ್ತಕೋಳೊದು ಯಾವ ನ್ಯಾಯ ನೀನೆ ಹೇಳು” ನನ್ನಪ್ಪನಿಗೆ ಒಂದು ಬನಿಯಾನ್, ಕೊನೆ ಪಕ್ಷ ಒಂದು ಟವಲ್ಲು, ಅಯ್ಯೋ ವಿಧಿಯೆ, ಎಂತ ನಿರ್ಭಾಗ್ಯರನ್ನಾಗಿಸಿದೆ ದೇವರೆ, ನನ್ನ ತಪ್ಪಿನ ಅರಿವಾಗಿ, “ಅಪ್ಪ ನಾ ಅವತ್ತು ಹಾಗೆ ಹೇಳಬಾರದಿತ್ತು” ಅಂದಿದ್ದರೆ ಆ ಜೀವಕ್ಕೆ ಅದೆಷ್ಟು ಸಮಾಧಾನ ಆಗತಿತ್ತೊ ಏನೋ. ಒಂದು ಕ್ಷಣ ಮೈ ಜುಮ್ ಅಂದ್, ಕೈಯಾಗೆಲ್ಲ ಹಾವು ಹರಿದಾಂಗ ಆಗಿ, ಧಡಾಕ್ಕನ ಎದ್ದೆ, ಕೈಯಾಗಿನ ಮೋಬೈಲ್ ವೈಬ್ರೇಟ್ ಆಗತಿತ್ತು, ನೋಡಿದರ ಆ ಕಡೆಯಿಂದ “ಸೇಮ್ ಟು ಯು” ಅಂತ ಮೆಸೇಜು ಬಂದಿತ್ತು!!! ಒಂದು ನಿಟ್ಟುಸಿರು! ನಿರಾಸೆ ಭಾವ! ಅಷ್ಟೆ.!!

-Shivakumar

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!