ಅಂಕಣ

ದೇಶಕ್ಕೆ ಆದರ್ಶ ಈ ಗ್ರಾಮ

ಗ್ರಾಮಗಳು ಸುಸಮೃದ್ಧವಾದರೆ ದೇಶವು ರಾಮರಾಜ್ಯವಾಗುವುದು ಎಂಬುದು ರಾಷ್ಟ್ರಪಿತ ಗಾಂಧೀಜಿಯವರ ಕನಸಾಗಿತ್ತು. ಭಾರತದಂತಹ ಕೃಷಿ ಪ್ರಧಾನ ಆರ್ಥಿಕತೆಗೆ ಗ್ರಾಮಗಳೇ ಮೂಲ ಆಧಾರ. ಇಂದು ಜನ ಗ್ರಾಮಗಳನ್ನು ಬಿಟ್ಟು ನಗರವನ್ನು ಸೇರಲಾರಂಭಿಸಿದ್ದಾರೆ. ಗ್ರಾಮೀಣ ಪ್ರದೇಶ ಕೇವಲ ವೃದ್ಧಾಶ್ರಮಗಳಾಗತೊಡಗಿವೆ. ಅಭಿವೃದ್ಧಿಯ ಬೆಳಕು ಕಾಣದೇ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗತೊಡಗಿವೆ. ಈ ಸಮಸ್ಯೆಗಳನ್ನು ನಿವಾರಿಸಲೆಂದೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು “ಸಂಸದ ಆದರ್ಶ ಗ್ರಾಮ” ಯೋಜನೆಯನ್ನು ಜಾರಿಗೆ ತಂದರು. ಪ್ರಧಾನಿಗಳ ಈ ಯೋಜನೆಯ ಹಿಂದೆ ಗ್ರಾಮಗಳ ಶ್ರೇಯೋಭಿವೃದ್ಧಿಯ ಆಶಯವಿದ್ದರೂ ಈ ಯೋಜನೆಯ ಬಗ್ಗೆ ಸಂಸದರು ಎಷ್ಟು ಜಾಗರೂಕರಾಗಿದ್ದಾರೆಂದು ಮಾಪಿಸುವುದು ನಿಮಗೆ ಬಿಟ್ಟ ವಿಷಯ. ಪ್ರಧಾನಿಯವರ ಈ ಯೋಜನೆಗೆ ಸ್ಫೂರ್ತಿ ಗುಜರಾತ್’ನ ಒಂದು ಪುಟ್ಟ ಗ್ರಾಮ “ಪುನ್ಸಾರಿ” ಎಂದರೂ ತಪ್ಪಾಗಲಾರದು.

ಗುಜರಾತ್ ನ ರಾಜಧಾನಿ ಗಾಂಧಿನಗರದಿಂದ ಸುಮಾರು 80 ಕಿ.ಮಿ ದೂರದಲ್ಲಿರುವ ಪುನ್ಸಾರಿ ಗ್ರಾಮ ಇಂದು ದೇಶದಲ್ಲೇ ಆದರ್ಶ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಗ್ರಾಮವಾಗಿದೆ. ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಗ್ರಾಮ ಕೇವಲ ಇತರೆ ಗ್ರಾಮಗಳಿಗೇ ಅಲ್ಲ ಹಲವು ಪಟ್ಟಣಗಳಿಗೂ ಕಾಂಪಿಟೇಶನ್ ಕೊಡುವಂತಿದೆ. ಗ್ರಾಮದ ಸರ್ಪಂಚ್ (ಅಧ್ಯಕ್ಷ) ಹಿಮಾಂಶು ಪಟೇಲ್ ಅವರು ಹೇಳುವಂತೆ “ಪುನ್ಸಾರಿ ಗ್ರಾಮೀಣ ಸೊಗಡಿನಿಂದ ಕೂಡಿದ ಹಾಗೂ ನಗರದ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಗ್ರಾಮ”

ಸಕಲ ಮೂಲಭೂತ ಸೌಕರ್ಯಗಳು:

ಸುಮಾರು 2 ಕಿ.ಮಿ ಭೂಭಾಗದಲ್ಲಿ ವ್ಯಾಪಿಸಿರುವ ಪುನ್ಸಾರಿ ಗ್ರಾಮ ಸುಮಾರು 6000 ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಪ್ರತೀ ಕುಟುಂಬಗಳು ತಮ್ಮದೇ ಆದ ಪಕ್ಕಾ(ಸುಸಜ್ಜಿತ) ಮನೆಗಳನ್ನು ಹೊಂದಿವೆ. ಗ್ರಾಮದ ಎಲ್ಲಾ ಮನೆಯಲ್ಲೂ ಶೌಚಾಲದ ಸೌಲಭ್ಯಗಳಿವೆ. ಗ್ರಾಮದಲ್ಲಿ ಸುಮಾರು 300 ಕ್ಕೂ ಅಧಿಕ ವಾಟರ್ ಪ್ರೂಫ್ ಮೈಕೋಗಳನ್ನು ಅಳವಡಿಸಿದ್ದು ಸೂರ್ಯ ಉದಯಿಸುವುದರೊಂದಿಗೆ “ವೈಷ್ಣವ ಜನತೋ” ಭಜನೆಯ ನಾದ ಗ್ರಾಮವನ್ನು ಆವರಿಸುತ್ತದೆ. ಗ್ರಾಮದಲ್ಲಿ ಎಲ್ಲವೂ ಪಕ್ಕಾ ರಸ್ತೆಗಳಿವೆ. ಅತ್ಯಾದುನಿಕ ಅಂಡರ್ ಗ್ರೌಂಡ್ ಡ್ರೇನೇಜ್ ವ್ಯವಸ್ಥೆಗಳನ್ನು ಗ್ರಾಮದಲ್ಲಿ ಮಾಡಲಾಗಿದೆ. ಪಂಚಾಯತಿ ವತಿಯಿಂದ, ಪ್ರತಿ ನಿತ್ಯವು ಎರೆಡುಬಾರಿ ಅಡುಗೆ ಮನೆಯ ಹಸಿ ತ್ಯಾಜ್ಯಗಳನ್ನು ಹಾಗೂ ಇತರೆ ಒಣ ತ್ಯಾಜ್ಯಗಳನ್ನು ಒಯ್ಯಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯತವು ಅತ್ಯಾಧುನಿಕ ವೇಸ್ಟ್ ಮ್ಯಾನೇಜ್ಮೆಂಟ್ ಮೂಲಕ ಈ ತ್ಯಾಜ್ಯಗಳನ್ನು ಸಂಸ್ಕರಿಸಿ ಇದರಿಂದ ಗೊಬ್ಬರಗಳನ್ನು ತಯಾರಿಸುತ್ತದೆ, ಹಾಗೂ ದನ-ಕರುಗಳ ಸಗಣಿ ಹಾಗೂ ಇತರೇ ತ್ಯಾಜ್ಯಗಳನ್ನು ಬಳಸಿ ಬಯೋ-ಇಲೆಕ್ಟ್ರಿಸಿಟಿ ಪ್ಲಾಂಟ್ ಅಳವಡಿಕೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದು ಗ್ರಾಮದ ಎಲ್ಲಾ ಬೀದಿ ದೀಪಗಳು ಈ ವಿದ್ಯುತ್ ನಿಂದಲೇ ಉರಿಯುತ್ತವೆ. ಗ್ರಾಮದ ಜನರಿಗೆ ಶುದ್ದ ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾಮದ ಯುವಕರ ಸಹಕಾರದಿಂದ (ಪಬ್ಲಿಕ್ ಪಾರ್ಟ್ನರ್ ಶಿಪ್) ನೀರಿನ ಶುದ್ಧೀಕರಣ ಘಟಕ ಪ್ರಾರಂಭಿಸಲಾಗಿದೆ. ಸರ್ಕಾರದ ಸಬ್ಸೀಡಿಯ ಸಹಾಯದಿಂದಲೇ ಸ್ಥಾಪಿಸಿದ ಈ ಯೋಜನೆ ಇಂದು ಅತೀ ಕಡಿಮೆ ದರದಲ್ಲಿ (6-7ರೂ. ಪ್ರತಿ ಬ್ಯಾರಲ್) ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಒದಗಿಸುವುದರೊಂದಿಗೆ, ಯುವಕರಿಗೆ ಉದ್ಯೋಗ ಹಾಗೂ ಪಂಚಾಯತಿಗೆ ಆದಾಯದ ಮೂಲವಾಗಿದೆ.

ನಗರಗಳೂ ನಾಚುವ ಅತ್ಯಾಧುನಿಕತೆ:

ಗ್ರಾಮದಲ್ಲಿ ಸುಮಾರು 16 ಕ್ಕೂ ಅಧಿಕ ಸಿಸಿಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 2006 ರ ಸಂದರ್ಭದಲ್ಲಿ ಪ್ರತಿ ನಿತ್ಯವೂ ಒಂದಾದರೂ ಬೀದಿ ಜಗಳಗಳು, ಹೊಡೆದಾಟಗಳು ನಡೆಯುತ್ತಿದ್ದ ಗ್ರಾಮ ಈಗ ಇಂತಹ ಪ್ರಕರಣಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಅಲ್ಲದೇ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜನರು ತಮ್ಮ ಮೊಬೈಲ್ ನಲ್ಲಿ ಆಪ್ ಮೂಲಕ ಈ ಸಿಸಿಟೀವಿಗಳಿಂದ ಗ್ರಾಮದ ನೇರಪ್ರಸಾರ ನೋಡಬಹುದಾದ ವ್ಯವಸ್ಥೆ ಮಾಡಲಾಗಿದ್ದು ಕಳ್ಳತನದಂತಹ ಪ್ರಕರಣಗಳೂ ಸಂಪೂರ್ಣವಾಗಿ ಮಾಯವಾಗಿವೆ.

ಸಂಪೂರ್ಣ ಗ್ರಾಮ 2011ರಿಂದಲೇ ವೈಪೈ ಗ್ರಾಮವಾಗಿದ್ದು ಕೇವಲ ಮಾಸಿಕ 50 ರೂ ದರದಲ್ಲಿ ಅನಿಯಮಿತ ಇಂಟರನೆಟ್ ನೀಡಲಾಗುತ್ತಿದೆ. (4 MBPS ದರದಲ್ಲಿ)

ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಿದ್ದು, ಸೋಲಾರ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

ಗ್ರಾಮದಲ್ಲಿ ಓಡಾಟಕ್ಕಾಗಿ ಗ್ರಾಮ ಪಂಚಾಯತಿಯ ಬಸ್ ವ್ಯವಸ್ಥೆಯಿದ್ದು ಕೇವಲ 2 ರೂ. ಪಾವತಿಸಿ ವೃದ್ದರು, ಅನಾರೋಗ್ಯದಿಂದ ಬಳತ್ತಿವುವರು ಹಾಗೂ ಇತರ ಗ್ರಾಮಸ್ಥರೂ ಕೂಡಾ ಈ ಸೌಲಭ್ಯ ಪಡೆಯಬಹುದಾಗಿದೆ.

ಗ್ರಾಮದಲ್ಲಿ ಸುಸಚ್ಚಿತ ಆರೋಗ್ಯ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ, 2006-07 ರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದ ಶಿಶು ಹಾಗೂ ಮಾತೃ ಮೃತ್ಯು ದರ (MMR and IMR) ಈಗ ಶೂನ್ಯದರಕ್ಕೆ ತಲುಪಿದೆ.

ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದ್ದು, ಅಂಗನವಾಡಿಯಿಂದಲೇ ಪ್ರತೀ ತರಗತಿಯಲ್ಲೂ ಪ್ರಾಜೆಕ್ಟರ್ ಹಾಗೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಮತ್ತೊಂದು ವಿಶೇಷ ಸಂಗತಿಯೆಂದರೆ ಈ ಸಿಸಿಟಿವಿಗಳ ಮೂಲಕ ಪಾಲಕರು ತಮ್ಮ ಪೋನ್ ನಲ್ಲಿ ತಮ್ಮ ಮಕ್ಕಳ ಚಟುವಟಿಕೆಗಳನ್ನು ಗಮನಿಸಬಹುದಾದ ವ್ಯವಸ್ಥೆ ಮಾಡಲಾಗಿದೆ! ಈ ಎಲ್ಲಾ ಯೂಜನೆಗಳಿಂದ ಗ್ರಾಮದಲ್ಲಿ ಶಾಲೆಯಿಂದ ಡ್ರಾಪ್ ಔಟ್ ಗಳ ಸಂಖ್ಯೆ ಶೂನ್ಯವಾಗಿದೆ.

ಗ್ರಾಮದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರಗಳೂ, ಪ್ಯಾಶನ್ ಡಿಸೈನ್ ಹಾಗೂ ಇತರೆ ಕೌಶಲ್ಯ ತರಬೇತಿ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.

ಗ್ರಾಮದಲ್ಲಿ ಎರಡು ಬ್ಯಾಂಕ್ ಗಳು ಹಾಗೂ ಹಲವು ಸ್ತ್ರೀ ಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು ಈ ಮೂಲಕ ಸ್ವ ಉದ್ಯೋಗಕ್ಕಾಗಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಗ್ರಾಮದಲ್ಲಿ ಪೋಸ್ಟ್ ಆಫೀಸ್, ಪೋಲಿಸ್ ಸ್ಟೇಶನ್ ಹೀಗೆ ಎಲ್ಲಾ ಸರ್ಕಾರಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಇದಷ್ಟೇ ಅಲ್ಲದೇ ಗ್ರಾಮ ಪಂಚಾಯತಿ ಕಛೇರಿಯನ್ನೂ ಸಂಪೂರ್ಣ ಆಧುನೀಕರಣಗೊಳಿಸಿದ್ದು, ಹೊಸ ಯೋಜನೆಗಳ ಮಾಹಿತಿಯನ್ನು ಪಂಚಾಯತಿಯ ಮುಖ್ಯಸ್ಥರು ಪಂಚಾಯತಿಯಿಂದಲೇ ಗ್ರಾಮದಲ್ಲಿ ಅಳವಡಿಸಲಾದ ಮೈಕೋಗಳ ಮೂಲಕ ಜನರಿಗೆ ತಲುಪಿಸುತ್ತಾರೆ. ಗ್ರಾಮ ಪಂಚಾಯತಿಯಲ್ಲಿ ಸಿಸಿಟೀವಿಗಳ ಮೊನಿಟರಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಮನೆಕರ ಹಾಗೂ ಇತರೆ ಕರಗಳನ್ನೂ ಆನ್ ಲೈನ್ ಪಾವತಿ ವ್ಯವಸ್ಥೆ ಮಾಡಲಾಗಿದ್ದು, ಜನರ ಭೂಮಿಯ ಪಹಣಿಗಳು ಆನ್ ಲೈನ್ ಮೂಲಕವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಈ ಎಲ್ಲ ಸೌಲಭ್ಯಗಳ ಕಾರಣ ಉದ್ಯೋಗಕ್ಕಾಗಿ ಪಟ್ಟಣ ಸೇರಿದ್ದ ಹಲವು ಯುವಕರು ಈಗ ಪುನಃ ಗ್ರಾಮಕ್ಕೆ ಮರಳಿ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಇತರರಿಗೂ ಉದ್ಯೋಗ ನೀಡುತ್ತಿದ್ದಾರೆ.

ಸ್ವಪ್ನ ಸದೃಶವಾದ ಈ ಗ್ರಾಮದ ಸಾಧನೆಗಳ ಹಿಂದಿರುವ ವ್ಯಕ್ತಿ ಹಿಮಾಂಶು ಪಟೇಲ್. ಹಿಮಾಂಶು ಅವರು ಇದೇ ಗ್ರಾಮದಲ್ಲಿ 10ನೇ ತರಗತಿಯವರೆಗಿನ ವಿದ್ಯಾಭ್ಯಾಸ ಮುಗಿಸಿ ನಂತರದ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ತೆರಳಿದ್ದರು. ಆದರೆ ಗ್ರಾಮದ ಮೇಲಿನ ಪ್ರೀತಿ, ಜನ ಹಾಗೂ ಸಮಾಜ ಸೇವೆಯ ಒಲವು ಅವರನ್ನು ಗ್ರಾಮದೆಡೆ ಬರುವಂತೆ ಮಾಡಿತು. 2006 ರಲ್ಲಿ ಹಿಮಾಂಶು ಪಂಚಾಯತಿಯ ಅಧ್ಯಕ್ಷರಾಗುವ ಹೊಸ್ತಿಲಲ್ಲಿ ಇದ್ದ ರೂ. 120,000 ಸಾಲದ ಬದಲಾಗಿ ಈಗ ಪಂಚಾಯತಿಯ ಖಾತೆಯಲ್ಲಿ ಸುಮಾರು ಕೋಟಿ ರೂಗಳ ಠೇವಣಿ ಕೂಡಿಡಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಲ್ಲಿ ಧನ ಸಹಾಯಕ್ಕೆ ಕೈಚಾಚದೇ ಕೇವಲ ಸರಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಹಿಮಾಂಶು ಅವರು ಗ್ರಾಮವನ್ನು ಇಂದು ದೇಶದಲ್ಲೇ ಆದರ್ಶ ಗ್ರಾಮವನ್ನಾಗಿಸಿದ್ದಾರೆ. ಇಚ್ಛಾ ಶಕ್ತಿ, ಜನಕ್ಕೋಸ್ಕರ ಸೇವೆ ಮಾಡುವ ತುಡಿತವಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವೆಂಬುದನ್ನು ಹಿಮಾಂಶು ಅವರು ಮಾಡಿತೋರಿಸಿದ್ದು ನಮಗೆಲ್ಲರಿಗೂ ಮಾದರಿ.

– Shriganesh Hegde Ullane

shriganeshullane@gmail.com

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!