ನಿಶೆಯೆಲ್ಲಿ
ಜಗ ಮಲಗಿದೆ
ಮೌನದ ಭುಗಿಲೆದ್ದಿದೆ
ಶಬ್ಧ ಕೇಳಿಸದು
ಯಾಕೆ? ಅದು ಮೌನ
***
ಮೌನದ ಬಾಗಿಲಲ್ಲಿ
ಶಬ್ಧಗಳ ತೋರಣ
ಇಲ್ಲವಾದಲ್ಲಿ
ಮೌನಕೆ ಬಾಗಿಲಿಲ್ಲ.
***
ಮೌನ ಪುಟದಲಿ
ಮೊದಲ ಪದ ಮೌನ,
ಇಲ್ಲಿ ಭಾವನೆ ಮೌನ,
ಇಲ್ಲಿ ಕಲ್ಪನೆ ಮೌನ
ಕನಸುಗಳು ಮೌನ
ನೆನಪುಗಳೂ ಮೌನ
***
ಆಶುಭಾಷಣಕಾರನಿಗೆ
ವಿಷಯ ‘ಮೌನ’ವಾಗಿತ್ತು
ಭಾಷಣ ದೀರ್ಘವಾಗಿ ಸಾಗಿತ್ತು
ಮೌನ ಮರೆಯಾಗುವಂತೆ
***
ಮಾತು, ಪದಗಳ ನಡುವಿನ ಮೌನ
ಭಾವನೆಗಳ ಒಳಪುಟ
ಮಾತುಬಾರದವನಿಗೆ
ಮೌನವೇ ಭಾಷೆ
***
ಖಾಲಿ ಪುಟದಲಿ
ಮೌನವಿದೆ
ಅಮಿತ ಪದಗಳಿವೆ
ಶಬ್ಧವಿಲ್ಲ
***
ಮೌನದಲಿ
ಸೂರ್ಯ-ಚಂದ್ರರುದಯಾಸ್ತವಾಗಿದೆ
ಗಿಡ-ಮರಗಳಲಿ ಹೂ-ಹಣ್ಣುಗಳಾಗಿವೆ
ದೀಪ ಉರಿದಿದೆ
ಮಂಜು ಕರಗಿದೆ
ಭೂಮಿ ತನ್ನೊಡನೆ ಸೂರ್ಯನ ಸುತ್ತಿದೆ
***
ಉಷಾ ಧರೆಗಿಳಿದಿದ್ದಾಳೆ
ಈಗ ಮೌನ ಮಲಗಿದೆ
ಶಬ್ಧಗಳ ಭುಗಿಲೆದ್ದಿದೆ
ಇಲ್ಲಿ ಯಾವುದೋ ಮೂಲೆಯೆಲ್ಲಿ
ಮೌನದ ಸೆಲೆಯಿದೆ.