ಅಂಕಣ

ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮುನ್ನ ಸ್ವಲ್ಪ ಯೋಚಿಸಿ

 ಅದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ವೃದ್ಧಾಶ್ರಮ. ಆತನಿಗೆ ವಯಸ್ಸು ಸುಮಾರು 80 ರ ಮೇಲಾಗಿರಬಹುದು. ಆತನ ಮಗ ಅವನನ್ನು ಅಲ್ಲಿ ತಂದು ಬಿಟ್ಟು ಸುಮಾರು 5 ರಿಂದ 6 ವರ್ಷಗಳೇ ಕಳೆದಿತ್ತು. ಈ 6 ವರ್ಷಗಳಲ್ಲಿ ಆತನ ಮಗ ಅವನನ್ನು ನೋಡಲು ಬಂದಿದ್ದು, ಕೇವಲ ಬೆರಳೆಣಿಕೆಯಷ್ಟು ಸಲ ಮಾತ್ರ. ಆತನ ಮಗನಿಗೆ ಹಣಕ್ಕೇನೂ ಕೊರತೆಯಿರಲಿಲ್ಲ, ತಿಂಗಳಿಗೆ ಲಕ್ಷಾಂತರ ರೂ ಸಂಪಾದಿಸುವ ಇಂಜಿನಿಯರ್ ಆತ. ತನ್ನ ವೃದ್ಧ ತಂದೆಯನ್ನು ನೋಡಿಕೊಳ್ಳುವುದು ಆತನಿಗೆ ಬೇಕಿರಲಿಲ್ಲ, ಪಾಪ ಆ ವೃದ್ಧ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲಾರದಷ್ಟು ಅಶಕ್ತನಾಗಿದ್ದ. ಮಗ ತನ್ನನ್ನು ಇಂತಹ ಸ್ಥಿತಿಯಲ್ಲಿ ಇಲ್ಲಿ ತಂದು ಬಿಟ್ಟು ಬಿಟ್ಟನಲ್ಲ ಎಂಬ ಕೊರಗಿನಲ್ಲಿ, ವೃದ್ದಾಶ್ರಮಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಆತ ಹಾಸಿಗೆ ಬಿಟ್ಟೇಳಲಾರದಷ್ಷು ಅಶಕ್ತನಾಗಿ ಹೋದ. ಎಲ್ಲವೂ ಹಾಸಿಗೆಯಲ್ಲೇ ಆಗತೊಡಗಿತ್ತು. ಉಳಿದವರಿಗೆ ಅಸಹ್ಯವಾಗುತ್ತದೆಂದು, ಆತನನ್ನು ಆ ಆಶ್ರಮದ ಮೂಲೆಯೊಂದರಲ್ಲಿ ಮಲಗಿಸಲಾಗಿತ್ತು, ಇಷ್ಟಾದ ಮೇಲೆ ಕೇವಲ ಒಂದು ಬಾರಿ ಬಂದು ಹೋದ ಆ ಮಗ ಎನಿಸಿಕೊಂಡ ಭೂಪ ತಿರುಗಿ ಬರಲೇ ಇಲ್ಲ, ಆತನ ಸ್ಥಿತಿ ತೀರ ಬಿಗಡಾಯಿಸಲು, ಆಶ್ರಮದವರು ಮಗನಿಗೆ ಫೋನ್ ಮಾಡಲು ಸ್ವಿಚ್ ಆಫ್ ಬರುತ್ತಿತ್ತು. ಕೊನೆ, ಕೊನೆಗೆ ಆತ ಹಾಗೆಯೇ ನರಳಾಡಿ ಪ್ರಾಣ ಬಿಟ್ಟ. ಅಂತ್ಯ ಸಂಸ್ಕಾರಕ್ಕೂ ಮಗ ಬರಲೇ ಇಲ್ಲ. ಇದೆಂತಹ ದಾರುಣ ಸ್ಥಿತಿ, ಎಂತಹ ದಾರುಣ ಸಾವು.

ಈ ಕಥೆ ಕೇವಲ ಒಂದು ವೃದ್ಧಾಶ್ರಮದ್ದು ಮಾತ್ರವಲ್ಲ, ನಮ್ಮ ದೇಶದಲ್ಲಿ ಅದೆಷ್ಟೋ ವೃದ್ಧಾಶ್ರಮಗಳಿವೆ. ಇಂತಹ ಅದೆಷ್ಟೋ ಸಾವುಗಳು ಅಲ್ಲಿ ಸಂಭವಿಸುತ್ತಿರಬಹುದು. ಮಕ್ಕಳಿಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ತಂದೆ-ತಾಯಿಯರಿಗೆ, ಕೊನೆಗೆ ಸಿಗುವ ಉಡುಗೊರೆ ವೃದ್ಧಾಶ್ರಮದ ಜೀವನ. ಯಾವ ಮಕ್ಕಳಿಗಾಗಿ ಇಷ್ಟು ಕಷ್ಟಪಟ್ಟರೋ ಅದೇ ಮಕ್ಕಳು ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳಲಾಗದೇ, ವೃದ್ಧಾಶ್ರಮಕ್ಕೆ ಸೇರಿಸುವುದು ಎಂತಹ ಶೋಚನೀಯವಲ್ಲವೇ? ಹೀಗೆ ವೃದ್ಧಾಶ್ರಮಕ್ಕೆ ತಮ್ಮ ತಂದೆ ತಾಯಿಯರನ್ನು ತಂದು ಸೇರಿಸುವ ಮಕ್ಕಳು, ಒಂದಂತೂ ಗಮನದಲ್ಲಿಡಬೇಕು, ನಾವು ಚಿಕ್ಕವರಾಗಿದ್ದಾಗ, ನಮ್ಮನ್ನು ನೋಡಿಕೊಳ್ಳುವುದು ಕಷ್ಟ ಎಂದು ಯಾವುದೋ ಅನಾಥಾಲಯಕ್ಕೆ ಸೇರಿಸಿದ್ದರೆ, ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಒಮ್ಮೆ ಯೋಚಿಸಿದರೆ ಸಾಕು, ವೃದ್ಧಾಶ್ರಮಕ್ಕೆ ಸೇರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ತಾನೇ ಹೊಳೆಯುತ್ತದೆ.

ಇಂದು ಆಧುನೀಕರಣ ಹೆಚ್ಚಿದಂತೆ, ವೃದ್ಧಾಶ್ರಮದ ಸಂಖ್ಯೆಯೂ ಹೆಚ್ಚುತ್ತಿದೆ. ವೃದ್ಧಾಶ್ರಮದಲ್ಲಿ ಬಹುತೇಕರು, ದೊಡ್ಡ-ದೊಡ್ಡ ಉದ್ಯೋಗದಲ್ಲಿರುವ ಮಕ್ಕಳ ಪಾಲಕರೇ ಆಗಿದ್ದಾರೆ, ಅಂದ ಮೇಲೆ ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಆರ್ಥಿಕ ಸಂಕಷ್ಟವಂತೂ ಅಲ್ಲವೇ ಅಲ್ಲ, ಬದಲಾಗಿ ಮಕ್ಕಳಿಗೆ ಪಾಲಕರ ಮೇಲಿರುವ ನಿರ್ಲಕ್ಷತನ ಹಾಗೂ ಅಸಡ್ಡೆಯೇ ಪ್ರಮುಖ ಕಾರಣ ಎಂದು ಹೇಳಬಹುದು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿಯರಿಗೆ ದೇವರ ಸ್ಥಾನವನ್ನು ನೀಡಿದ್ದಾರೆ. ಮಕ್ಕಳು ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಅದರ ಹಿಂದಿನ ಶ್ರಮ ತಮ್ಮ ಪಾಲಕರದ್ದೇ ಎಂಬುದನ್ನು ಯಾವತ್ತೂ ಮರೆಯಬಾರದು. ಮಕ್ಕಳಿದ್ದೂ ಅನಾಥರಂತೆ ವೃದ್ಧಾಶ್ರಮದಲ್ಲಿ ಬದುಕುವ ಪರಿ ಅತ್ಯಂತ ಶೋಚನೀಯ. ಇದರಲ್ಲಿ ವೃದ್ಧಾಶ್ರಮದವರ ತಪ್ಪೇನೂ ಇಲ್ಲ. ಇಂತಹ ವೃದ್ಧಾಶ್ರಮದಿಂದ ತಂದೆ ತಾಯಿಯರು ಬೀದಿ ಪಾಲಾಗುವದಂತೂ ತಪ್ಪಿದಂತಾಗುತ್ತದೆ. ಆಧುನೀಕರಣದ ಬಿರುಗಾಳಿಯಲ್ಲಿ ಮಾನವೀಯತೆ, ಸಂಸ್ಕಾರ ಎನ್ನುವುದು ತರಗೆಲೆಗಳಂತೆ ಹಾರಿಹೋಗುತ್ತಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಹೇಳಬಹುದು. ಯಾಕೆಂದರೆ ಪುರಾತನ ಕಾಲದಲ್ಲಿ ಈ ವೃದ್ಧಾಶ್ರಮ ಇರಲಿಲ್ಲ, ಆಗ ಯಾರೂ ತಮ್ಮ ಹೆತ್ತವರನ್ನು ಈ ರೀತಿ ಕೊನೆ ಘಳಿಗೆಯಲ್ಲಿ ಕೈ ಬಿಡುವದಾಗಲೀ, ಎಲ್ಲಿಯೋ ಬಿಟ್ಟು ಬರುವುದಾಗಲೀ ಇರಲಿಲ್ಲ. ಮಕ್ಕಳು ಈ ರೀತಿ ಬೆಳೆಯಲು ಪಾಲಕರೂ ಒಂದು ರೀತಿಯಲ್ಲಿ ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಿಲ್ಲ. ಯಾಕೆಂದರೆ, ಇಂದು ಸಾಮಾನ್ಯವಾಗಿ ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ನಮ್ಮ ದೇಶದ ಸಂಸ್ಕೃತಿ ಹೊಂದಿರುವ ಶಾಲೆಗೆ ಕಳುಹಿಸದೇ ಪ್ರಾರಂಭದಲ್ಲೇ ಅವರಿಗೆ ವಿದೇಶಿ ಸಂಸ್ಕೃತಿಯನ್ನು ಹೊಂದಿರುವ ಕಾನ್ವೆಂಟ್‍ಗಳಿಗೆ ಕಳುಹಿಸುತ್ತಾರೆ, ಅಷ್ಟೇ ಅಲ್ಲದೇ ದಿನನಿತ್ಯದ ಜೀವನದಲ್ಲೂ ವಿದೇಶಿ ಸಂಸ್ಕೃತಿಯನ್ನೇ ರೂಢಿ ಮಾಡಿಸುತ್ತಿದ್ದಾರೆ. ಇದರ ಪರಿಣಾಮವೇ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಎಂದು ಹೇಳಬಹುದು. ಯಾಕೆಂದರೆ ಪ್ರಾರಂಭದಿಂದಲೇ ವಿದೇಶಿ ಸಂಸ್ಸøತಿಯನ್ನು ಅಳವಡಿಸಿಕೊಂಡು ಅದರ ದಾಸರಾಗಿರುವ ಮಕ್ಕಳಿಗೆ, ನಮ್ಮ ದೇಶದಲ್ಲಿನ ತಂದೆ ತಾಯಿಯ ಪವಿತ್ರ ಸ್ಥಾನದ ಬೆಲೆ ತಿಳಿಯದೇ ಕೇವಲ ತಮ್ಮ ಸ್ವಾರ್ಥವೇ ಮುಖ್ಯವಾಗಿ, ಹಣವೇ ಪ್ರಮುಖವಾಗಿ ಮಾನವೀಯತೆ ಮೂಲೆಗುಂಪಾಗಿ ಬಿಡುತ್ತದೆ.

 

ಅದೊಂದು ಕಾಲವಿತ್ತು, ಅವಿಭಕ್ತ ಕುಟುಂಬಗಳೇ ಹೆಚ್ಚಿರುವ, ವೃದ್ಧಾಶ್ರಮಗಳ ಗೋಳೇ ಇಲ್ಲದ ಕಾಲವದು. ಅಂದಿನ ಮಕ್ಕಳಿಗೂ ಒಳ್ಳೇ ಸಂಸ್ಕಾರ ದೊರೆಯುತ್ತಿತ್ತು, ತಂದೆ ತಾಯಿಯರ ಬೆಲೆಯನ್ನು ಸರಿಯಾಗಿ ತಿಳಿದುಕೊಂಡು, ಅವರ ಮುಪ್ಪಿನ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ವಯಸ್ಸಾದ ತಂದೆ ತಾಯಿಯರ ಗೋಳನ್ನು ಕೇಳಬೇಕಾದ ಮಕ್ಕಳೇ ಅವರನ್ನು ಜೀವನದ ಕಡೆಯ ದಿನಗಳನ್ನು ದುಃಖದಲ್ಲಿ ಕೈ ತೊಳೆಯುವಂತೆ ಮಾಡುತ್ತಿದ್ದಾರೆ. ಹೀಗೆ ತಮ್ಮ ತಂದೆ ತಾಯಿಯರನ್ನು ಅವರ ಮುಪ್ಪಿನ ಕಾಲದಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಒಂದು ಮಾತು ನೆನಪಿಡಿ, ಮುಂದೆ ನಿಮಗೂ ವಯಸ್ಸಾಗುತ್ತದೆ, ನಿಮ್ಮ ಮಕ್ಕಳೂ ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ. ನೀವೇನೋ ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ, ತಿಂಗಳು-ತಿಂಗಳು ಅವರಿಗೆ ಹಣ ಕೊಟ್ಟರೆ ತಮ್ಮ ಜವಾಬ್ಧಾರಿ ಮುಗಿಯಿತು ಎಂದು ತಿಳಿದುಕೊಳ್ಳುತ್ತೀರಿ. ಆದರೆ ನಿಮ್ಮಿಂದ ದೂರಾದ ತಂದೆ ತಾಯಿ ಅಲ್ಲಿ ಎಷ್ಟು ಮಾನಸಿಕವಾಗಿ ನೊಂದಿರುತ್ತಾರೆ ಎಂಬುದು ನಿಮಗೆ ತಿಳಿದಿದೆಯಾ ? ಅವರು ಅಲ್ಲಿ ಪ್ರತೀ ಕ್ಷಣವೂ, ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾರೆ. ಇಷ್ಟಾದರೂ ತಮ್ಮ ಮಕ್ಕಳನ್ನು ಕನಸಿನಲ್ಲಿಯೂ ಶಪಿಸುವುದಿಲ್ಲ, ಅವರಿಗೆ ಇನ್ನೂ ಒಳ್ಳೆಯದಾಗಲೀ ಎಂದೇ ಹರಸುತ್ತಿರುತ್ತಾರೆ.

 

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ‘ತನ್ನ ತಾಯಿಯನ್ನು ಪೂಜಿಸದವನೆಂದೂ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ’ ಎಂದು. ಅವರ ಮಾತು ಅಕ್ಷರಶಃ ನಿಜ. ಹೀಗೆ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಯಾವತ್ತೂ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಇಂದಿನ ಪಾಲಕರೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಮ್ಮ ಮಕ್ಕಳಿಗೆ ಮೊದಲು ನಮ್ಮ ಸಂಸ್ಕೃತಿ, ನಮ್ಮ ಭಾರತೀಯ ಸಂಸ್ಕಾರವನ್ನು ಕೊಡಬೇಕೇ ಹೊರತು, ಪ್ರಾರಂಭದಲ್ಲೇ ಅವರಿಗೆ ವಿದೇಶೀ ಶಿಕ್ಷಣ, ವಿದೇಶೀ ರೀತಿರಿವಾಜು ಕಲಿಸಿ, ಅವರು ದಾರಿ ತಪ್ಪಲು ನೀವೇ ಕಾರಣರಾಗಬೇಡಿ. ಮಕ್ಕಳಾದರೂ ಅಷ್ಟೆ, ತಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮುನ್ನ ಸ್ವಲ್ಪ ಯೋಚಿಸಿ, ನಿಮಗೂ ನಾಳೆ ಅದೇ ಪರಿಸ್ಥಿತಿ ಬರುತ್ತದೆಂಬ ಯೋಚನೆ ಸದಾ ಇರಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Manu Vaidya

Hails from Sirsi and presently working at Snehakunja Trust, Ksarakod, Honnavar.

Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!