ಅಂಕಣ

ತಡೆಯಿಲ್ಲದ ಅತ್ಯಾಚಾರ ಪ್ರಕರಣಗಳು, ಬೇಕಿದೆ ಕಠಿಣ ಕಾನೂನು ನಿಯಮಗಳು :

ಅದು 2012 ರ ಡಿಸೆಂಬರ್ ತಿಂಗಳ ಒಂದು ರಾತ್ರಿ, ಆಗ ನಮ್ಮ ಇಡೀ ದೇಶವೇ ಬೆಚ್ಚಿ ಬೀಳುವಂತಹ ಒಂದು ಘಟನೆ ನಡೆಯುತ್ತದೆಂದು, ಬಹುಶಃ ಯಾರೂ ಊಹಿಸಿರಲೂ ಸಾಧ್ಯವಿಲ್ಲ. ಬೇರೆ ಯಾರೋ ಏಕೆ, ಆ ಕೃತ್ಯಕ್ಕೆ ಬಲಿಯಾದ ಹುಡುಗಿಯೇ ಊಹಿಸಿರಲು ಸಾಧ್ಯವಿಲ್ಲ. ದೆಹಲಿಯಲ್ಲಿ, ತನ್ನ ಬಾಯ್ಫ್ರೆಂಡ್ ಜೊತೆಗೆ ಮನೆಗೆ ವಾಪಸ್ಸಾಗುತ್ತಿದ್ದ 23 ವರ್ಷದ ಆ ಹುಡುಗಿಯ ಮೇಲೆ ಬಸ್ಸಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅತ್ಯಂತ   ಭೀಭತ್ಸವಾಗಿತ್ತು. ಈ ಪ್ರಕರಣ ಇಡೀ ದೇಶವನ್ನೇ ಒಮ್ಮೆ ನಡುಗಿಸಿತು. ಅದು ನಿರ್ಭಯಾ ಪ್ರಕರಣವೆಂದೇ ದಾಖಲಾಯ್ತು. ಈ ಪ್ರಕರಣ ಇಂದು ಇತಿಹಾಸ ಸೇರಿದರೂ, ಜನರ ಮನಸ್ಸಿನ ಮೂಲೆಯೊಂದರಲ್ಲಿ ಹಚ್ಚ-ಹಸಿರಾಗಿ ಹಾಗೆಯೇ ಇದೆ. ಇದೊಂದು ಅತ್ಯಂತ ವಿಕೃತ ಹಾಗೂ ಪೈಶಾಚಿಕ ಕೃತ್ಯವೆಂದೇ ಹೇಳಬಹುದು. ಈ ಪ್ರಕರಣ ಇನ್ನೂ ತೀವ್ರ ತರದಲ್ಲಿ ಸುದ್ದಿಯಲ್ಲಿರುವಾಗಲೇ, ಅಂದರೆ ಜೂನ್ 7, 2013 ರಂದು, ಕಲ್ಕತ್ತಾದಲ್ಲಿ, 20 ವರ್ಷದ ಕಾಲೇಜು ಹುಡುಗಿಯ ಮೇಲೆ 9 ಜನ ವಿಕೃತ ಕಾಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಅತ್ಯಂತ ಭೀಕರವಾಗಿ ಕೊಲೆ ಮಾಡಿದರು. ನಿರ್ಭಯಾಳನ್ನು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂಬ ಹೋರಾಟ ತೀನ್ರವಾಗಿರುವಾಗಲೇ, ಕಲ್ಕತ್ತಾದಲ್ಲಿ ಮತ್ತೆ ಅಂಥದ್ದೇ ಪ್ರಕರಣ ಕಂಡು ಬಂದದ್ದು ಅತ್ಯಂತ ವಿಷಾದನೀಯವಲ್ಲವೇ? ಈ ಎಲ್ಲಾ ದುಷ್ಕರ್ಮಿಗಳಿಗೆ ಇನ್ನೂ ಸರಿಯಾದ ಶಿಕ್ಷೆ ಆಗಿದೆಯೋ, ಇಲ್ಲವೋ ಗೊತ್ತಿಲ್ಲ, ಮತ್ತೆ ಕಳೆದ ವರ್ಷ, 23 ಫೆಬ್ರುವರಿಯಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ, ಮತ್ತೋರ್ವ ಭಾರತೀಯ ಮಹಿಳೆಯ ಮೇಲೆ ಬಲಾತ್ಕಾರ ನಡೆಸಿ ಕೊಲೆ ಮಾಡಿದರು. ಈ ಪ್ರಕರಣ ಉಸಿರು ಕಳೆದುಕೊಳ್ಳುವ ಮುನ್ನವೇ ಇದರ ಬೆನ್ನ ಹಿಂದೆಯೇ, ಮಾರ್ಚ 8, 2016 ರಂದು, ಅದೇ ದೆಹಲಿಯಲ್ಲಿ 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ, ಅವಳನ್ನು ಸುಟ್ಟು ಹಾಕಿದರು. ಹೀಗೆ ಹೇಳುತ್ತಾ ಹೋದರೆ, ಇಂತಹ ಪ್ರಕರಣಗಳಿಗೇ ಇಂದು ನಮ್ಮ ದೇಶದಲ್ಲಿ ಕೊನೆಯೇ ಇಲ್ಲ. ಒಂದರ ಹಿಂದೊಂದು ಪ್ರಕರಣಗಳು ಉಸಿರಾಡಲೂ ಅವಕಾಶ ಕೊಡದೇ ನಡೆಯುತ್ತಲೇ ಇವೆ. ಇಂದು ಇಂತಹ ಪ್ರಕರಣಗಳಲ್ಲಿ ನಮ್ಮ ದೇಶ 7ನೇಯ ಸ್ಥಾನದಲ್ಲಿದೆ, ಚೀನಾ ಮೊದಲ ಸ್ಥಾನದಲ್ಲಿದೆ. ಹೀಗೆ ಪ್ರಕರಣಗಳು ನಡೆಯುತ್ತಾ ಸಾಗಿದರೆ ನಮ್ಮ ದೇಶ ಮೊದಲ ಸ್ಥಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ. ನಮ್ಮ ದೇಶದ ಕಾನೂನು ವ್ಯವಸ್ಥೆ, ನಿಯಮಗಳು ಬಿಗಿಯಾಗಿಲ್ಲದಿರುವುದೇ ಇದಕ್ಕೆಲ್ಲಾ ಮೂಲ ಕಾರಣ. ಇದರ ಜೊತೆಗೆ ಪುರುಷರ ಮನಸ್ಥಿತಿಯೂ ಬದಲಾಗಬೇಕಿದೆ. ನಮ್ಮ ದೇಶದಲ್ಲಿ, ಈ ಬಲಾತ್ಕಾರ ಪ್ರಕರಣಗಳ ಅಂಕಿ ಅಂಶಗಳನ್ನು ನೋಡುತ್ತಾ ಸಾಗಿದರೆ, ಒಮ್ಮೆ ಬೆಚ್ಚಿ ಬೀಳಲೇಬೇಕು. ಅಷ್ಟೊಂದು ತೀವ್ರತರವಾಗಿದೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಬಲಾತ್ಕಾರಗಳು. ಇಷ್ಟೊಂದು ಬಲಾತ್ಕಾರಗಳು ನಡೆಯುತ್ತಿದ್ದರೂ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ನೀಡಲು ನಮ್ಮ ಸರ್ಕಾರ ವಿಫಲವಾಗುತ್ತಿದೆ. ಥೂ ! ನಾಚಿಕೆಯಾಗಬೇಕು ನಮ್ಮ ಕಾನೂನು ಸುವ್ಯವಸ್ಥೆಗೆ.. ಇದರಿಂದಾಗಿಯೇ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ, ಅತ್ಯಾಚಾರದಂತಹ ಪ್ರಕರಣಗಳು ಜಾಸ್ತಿಯಾಗುತ್ತಿರುವುದು. ಮಾನವ ಹಕ್ಕು ಆಯೋಗದ ಒಂದು ಸರ್ವೇಯ ಪ್ರಕಾರ ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಸುಮಾರು 7200 ಅಪ್ರಾಪ್ತೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದು ಕೇವಲ ದಾಖಲಾದ ಪ್ರಕರಣಗಳ ಸಂಖ್ಯೆ, ದಾಖಲಾಗದೇ ಮೂಲೆ ಸೇರಿದ ಪ್ರಕರಣಗಳು ಇನ್ನೆಷ್ಟೋ? ಆ ಅಂಕಿ ಅಂಶಗಳು ಇದರ ದುಪ್ಪಟ್ಟು ಇರಬಹುದೇನೋ?

ನಾನು ಈ ಮೇಲೆ ಹೇಳಿದ ಅಂಕಿ ಅಂಶ ಕೇವಲ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಕುರಿತಾಗಿ ಆಗಿದ್ದು. ಇನ್ನು 18 ವರ್ಷ ಮೇಲ್ಪಟ್ಟ ಮಹಿಳೆಯರನ್ನೂ ತೆಗೆದುಕೊಂಡರೆ ಇದರ ಪ್ರಮಾಣ ಇನ್ನೂ ಹೆಚ್ಚು. ಅದರಲ್ಲೂ ಆ ಅಂಕಿ ಅಂಶಗಳು ವರ್ಷದಿಂದ ವರ್ಷಕ್ಕೆ ನಮ್ಮ ದೇಶದಲ್ಲಿ ಬಲತ್ಕಾರದ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಅದನ್ನು ನೋಡಿದ ಮೇಲೆ ನೀವೇ ನಿರ್ಧರಿಸಿ, ನಮ್ಮ ದೇಶದ ಕಾನೂನು ಎಷ್ಟೊಂದು ದುರ್ಬಲ ಮತ್ತು ಕೆಲಸಕ್ಕೆ ಬಾರದ ನಿಯಮಗಳೇ ಅದರಲ್ಲಿ ತುಂಬಿದೆ ಎಂಬುದನ್ನು. ಇಂಡಿಯನ್ ಎಕ್ಸಪ್ರೆಸ್ ಮತ್ತು ನ್ಯಾಷನಲ್ ಕ್ರೈಮ್ ರೆಕಾರ್ಡ ಬ್ಯೂರೋ ಇದರ ವರದಿಯ ಪ್ರಕಾರ, ಕೇವಲ ದೆಹಲಿಯಲ್ಲಿ ಪ್ರತಿ ದಿನ ಕನಿಷ್ಠ 6 ಬಲಾತ್ಕಾರ ಪ್ರಕರಣಗಳು ದಾಖಲಾಗುತ್ತಿವೆ. ಇವರ ಅಂಕಿ ಅಂಶದ ಪ್ರಕಾರ ನಮ್ಮ ದೇಶದಲ್ಲೇ ಅತಿ ಹೆಚ್ಚು ಬಲಾತ್ಕಾರ ಪ್ರಕರಣಗಳು ನಡೆಯುವುದು ದೆಹಲಿಯಲ್ಲಿ. ಇವರು 2012 ರಿಂದ 2015 ರವರೆಗಿನ ದೆಹಲಿಯಲ್ಲಿ ನಡೆದ ಬಲಾತ್ಕಾರ ಪ್ರಕರಣಗಳ ವರದಿಯನ್ನೂ ಸಹ ಕೊಡುತ್ತಾರೆ. 2012ರಲ್ಲಿ 706 ಪ್ರಕರಣಗಳು ದಾಖಲಾಗಿದ್ದರೆ, 2013ರಲ್ಲಿ 1636 ಪ್ರಕರಣಗಳು ದಾಖಲಾಯಿತು, 2014 ರ ವೇಳೆಗೆ ಇದರ ಪ್ರಮಾಣ 2085 ಕ್ಕೇರಿದರೆ 2015 ರ ಹೊತ್ತಿಗೆ 2095 ಕ್ಕೇರಿತು. ಈ ಅಂಕಿ ಅಂಶಗಳು, ಹೀಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಲಾತ್ಕಾರ ಪ್ರಕರಣಗಳನ್ನು ನೋಡುತ್ತಿದ್ದರೆ, ನಮ್ಮ ಕಾನೂನು ವ್ಯವಸ್ಥೆ, ಅದರ ನಿಯಮಗಳು ಹೇಡಿತನದ ಪರಮಾವಧಿಯೇ ಹೊರತು, ಆ ನಿಯಮಗಳು ಅಪರಾಧಿಯನ್ನು ಶಿಕ್ಷಿಸಲು ವಿಫಲ ಎಂಬುದು ಸ್ಪಷ್ಟ. ಏಕೆಂದರೆ ಇಷ್ಟೊಂದು ಪ್ರಕರಣಗಳು ನಡೆಯುತ್ತಿದ್ದರೂ, ಇಂತಹ ಕೃತ್ಯವನ್ನು ಮಾಡಿದ ಅಪರಾಧಿಗಳಿಗೆ ಯಾವ ಕಠಿಣ ಶಿಕ್ಷೆಯೂ ಆಗುತ್ತಿಲ್ಲ. ಅದಕ್ಕೆ ಜನರಿಗೆ ಕಾನೂನಿನ ಮೇಲೆ ಯಾವ ಭಯವೂ ಇಲ್ಲದಂತಾಗಿದೆ. ಈಗ ನಾನು ಹೇಳಿದ ಅಂಕಿ ಅಂಶಗಳು ಕೇವಲ ದಾಖಲಾದ, ಪ್ರಕರಣಗಳು. ದಾಖಲಾಗದೇ ಉಳಿದಿರುವ ಅಂದರೆ, ಹೆದರಿಕೆಯಿಂದಲೋ ಅಥವಾ ಇನ್ಯಾವುದೋ ಒತ್ತಡದಿಂದಲೋ ಕೆಲವು ಪ್ರಕರಣಗಳು ದಾಖಲಾಗದೇ ಮೂಲೆ ಸೇರುತ್ತವೆ. ಅಂತಹ ಪ್ರಕರಣಗಳು ಇನ್ನೆಷ್ಟಿವೆಯೋ ಯಾರು ಬಲ್ಲರು? ಕೇವಲ ದೆಹಲಿಯಲ್ಲೇ ಇಷ್ಟೊಂದು ಪ್ರಕರಣಗಳು ದಾಖಲಾದರೆ, ಇನ್ನು ನಮ್ಮ ಇಡೀ ದೇಶದ ಅಂಕಿ ಅಂಶಗಳು ಎಷ್ಟಿರಬಹುದು ಅಲ್ಲವೇ ? ಅದು ನಮ್ಮ ಊಹೆಗೂ ನಿಲುಕಲು ಸಾಧ್ಯವಿಲ್ಲ ಬಿಡಿ. ಆದರೂ ಇದನ್ನೂ ಸಹ ಸರ್ವೇ ಮಾಡಲಾಗಿದೆ. ದಹಲಿಯ ಅಂಕಿ-ಅಂಶಗಳನ್ನು ಸರ್ವೇ ಮಾಡಿದ ಸಂಸ್ಥೆಯೇ, ಇದನ್ನೂ ಸರ್ವೇ ಮಾಡಿದಾಗ, ಆಘಾತಕಾರಿ ಅಂಶವೊಂದು ಬೆಳಕಿ ಬಂದಿದೆ, ನಮ್ಮ ದೇಶದಲ್ಲಿ ಪ್ರತೀ 15 ನಿಮಿಷಕ್ಕೊಂದು ಅತ್ಯಾಚರ ನಡೆಯುತ್ತದೆ ಎಂದರೆ ಅತ್ಯಂತ ವಿಷಾದವಲ್ಲದೇ ಮತ್ತೆನು? ನಮ್ಮ ದೇಶದಲ್ಲಿ 2011ರ ವೇಳೆಗೆ 24,206 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2014 ರ ವೇಳೆಗೆ ಇದರ ಪ್ರಮಾಣ 37000ಕ್ಕೇರಿದೆ ಎಂದರೆ, ನಮ್ಮ ಕಾನೂನು ಕೈಗೊಳ್ಳುತ್ತಿರುವ ಕ್ರಮ, ಅಪರಾಧಿಗಳಿಗೆ ನೀಡುತ್ತಿರುವ ಶಿಕ್ಷೆ, ಇವು ಯಾವುದೂ ಸಮರ್ಪಕವಾಗಿಲ್ಲ ಹಾಗೂ ಕಠಿಣವಾಗಿಯೂ ಇಲ್ಲ ಎಂಬುದು ಮೇಲ್ನೋಟಕ್ಕೇ ತಿಳಿದುಬಿಡುತ್ತದೆ.

ಇತಂಹ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ, ನಮ್ಮ ಕಾನೂನಿನ ಅವ್ಯವಸ್ಥೆ ಇಂದು ಕಾರಣವಾದರೆ, ಇಂದು ನಮ್ಮ ದೇಶದ ಹಲವಾರು ಪುರುಷಲ್ಲಿ ಹೆಚ್ಚುತ್ತಿರುವ ವಿಕೃತ ಮನೋಭಾವನೆಯೂ ಇದಕ್ಕೆ ಕಾರಣವೆಂದು ಹೇಳಬಹುದು. ಇದರ ಜೊತೆಗೆ ಇಂದು ಹೇರಳವಾಗಿ ಲಭ್ಯವಾಗುತ್ತಿರುವ ಡ್ರಗ್ಸ್, ಗಾಂಜಾ, ಮದ್ಯ, ಇಂತಹುದರ ಸೇವನೆಯಿಂದ, ವ್ಯಕ್ತಿ ಮತ್ತಷ್ಟು ಕ್ರೂರವಾಗಿ, ವಿಕೃತ ಮನಸ್ಕನಾಗಿ ಬದಲಾಗಿ ಇಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾನೆ. ಕೆಲವರು ಹೇಳುವಂತೆ ಹುಡುಗಿಯರು ತುಂಡು ಬಟ್ಟೆ ಧರಿಸುತ್ತಿರುವುದರಿಂದ, ಅತ್ಯಾಚಾರಗಳು ಹೆಚ್ಚುತ್ತಿವೆ ಎಂಬುದು ತಪ್ಪು. ಏಕೆಂದರೆ, ಇಂದು 5-6 ವರ್ಷದ ಮಕ್ಕಳ ಮೇಲೂ ಅತ್ಯಾಚಾರ ನಡೆಯುತ್ತಿದೆ ಅಂದರೆ, ಇದಕ್ಕೆ ತುಂಡು ಬಟ್ಟೆಯಲ್ಲ, ಪುರುಷರ ವಿಕೃತ ಮನಸ್ಥಿತಿಯೇ ಕಾರಣ ಎಂದು ಹೇಳಬಹುದು. ಕಾರಣವೇನೇ ಇರಲಿ, ಇಂತಹ ಪ್ರಕರಣಗಳು ಕಡಿಮೆಯಾಗಬೇಕೆಂದರೆ, ಮೊದಲು ನಮ್ಮ ಕಾನೂನು, ನಿಯಮ ಬಿಗಿಯಾಗಬೇಕು, ಇಂತಹ ಅಪರಾಧಿಗಳಿಗೆ ಯಾವುದೇ ಕಾರಣಕ್ಕೂ, ಕ್ಷಮಾದಾನ ನೀಡದೇ, ಜೀವಮಾನದಲ್ಲಿ ಯಾವತ್ತೂ ನೆನಪಿಡಬೇಕು ಅಂತಹ ಉಗ್ರ ಶಿಕ್ಕೆಯನ್ನು ನೀಡಬೇಕು, ಇದನ್ನು ನೋಡಿಯಾದರೂ ಮತ್ತೊಬ್ಬ ಅಪರಾಧ ಮಾಡಲು ಭಯ ಬೀಳಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಹಾಕಲು ಸಾಧ್ಯ.. ನೀವೇನು ಹೇಳುತ್ತೀರಿ..?

Facebook ಕಾಮೆಂಟ್ಸ್

ಲೇಖಕರ ಕುರಿತು

Manu Vaidya

Hails from Sirsi and presently working at Snehakunja Trust, Ksarakod, Honnavar.

Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!