ಕಾಲೇಜ್ ಲೈಪ್ ಅಂದ್ರೆನೆ ಕಲರಪುಲ್ ವರ್ಲ್ಡ್ ಅನ್ನೊ ಹುಡುಗಿಯರ ಲಿಸ್ಟಗೆ ಸೇರಿದ್ದವಳು ನಾನು. ಡಿಗ್ರಿಗೆ ಬಂದ ಮೇಲೆ ಓದುವ ಖಯಾಲಿ ಕಮ್ಮಿಯಾಗಿ ಕನಸಿನ ಜೋಕಾಲಿ ತೂಗುವ ಹಂತ ಅಂದುಕೊಂಡಿದ್ದ ನನಗೆ ಮೊದಲನೆ ದಿನವೇ ಕನಸಿನ ಕೋಟೆಯ ರಾಜಕುಮಾರನ ದರ್ಶನವಾಯಿತು. ಕಾರಿಡಾರ್’ನಲ್ಲಿ ಕೆಂಪು ಕಲರ್ ಶರ್ಟ್ ಹಾಕಿ ಜೂನಿಯರ್ಸಗಳಿಗೆ ಕಡಕ್ ರೀತಿಯಲ್ಲಿ ಚುರುಕು ಮೂಡಿಸುತ್ತಿದ್ದವನನ್ನು ಕಣ್ಣು ಅರಿವೆ ಇಲ್ಲದೆ ಸ್ಕ್ಯಾನ್ ಮಾಡಿದ್ದಂತು ಸುಳ್ಳಲ್ಲ. ಸೇರಿದ್ದ ಅಷ್ಟು ಹುಡುಗರ ಮಧ್ಯ ಕಣ್ಣು ಅವನ ಫೋಟೊ ತೆಗೆದು ಅದಾಗಲೇ ಹಾರ್ಟ್ ಎಂಬ ಖಾಯಂ ಗ್ಯಾಲರಿಗೆ ತಂದು ಹಾಕಿತ್ತು.
‘ಲವ್ ಅಟ್ ಫಸ್ಟ ಸೈಟ್’ ಅಂದ್ರೆ ಹಿಂಗೆನಾ ಅನ್ನಿಸಿದ್ದು ಆವಾಗ್ಲೆ. ಜೊತೆಗಿದ್ದ ಗೆಳತಿ ಅವನು ಕಾಲೇಜಿನಲ್ಲೆ ‘ಮಿಸ್ಟರ್ ಫರಪೆಕ್ಟ್’, ‘ಸ್ಟೂಡೆಂಟ್ ಪ್ರಸಿಡೆಂಟ್ ಆಪ್ ದಿ ಕಾಲೇಜ್’, ‘ಹ್ಯಾಂಡ್ಸಮ್’ ಅಂತಹ ಅದೆಷ್ಟೋ ಬಿರುದುಗಳನ್ನ ಹೇಳುವಾಗ ಮನಸ್ಸು ಇನ್ನಷ್ಟೂ ಜೋರಾಗಿ ಇವನೇ ನಿನ್ನ ಲೈಫ್ ಪಾರ್ಟನರ್ ಎಂದು ಘೋಷಣೆ ಮಾಡಿತು. ಅದುವರೆಗೂ ಯಾವ ಹುಡುಗನ ಕುರಿತು ಹೇಳದ ಮನಸ್ಸು ಇವನ ಬಗ್ಗೆ ಹೇಳಿದ್ದೆ ಕೊನೆಯದೆನಿಸಿ ನನ್ನ ಹೆಸರಿನ ಮುಂದೆ ಅವನ ಹೆಸರು ಜೋಡಿಸಿದೆ. ಪಕ್ಕದಲ್ಲಿ ನಡೆದು ಹೋಗುವಾಗ ಹೃದಯ ಸಿಡಿದುಹೋಗುವ ಪರಿಗೆ ಎದೆಬಡಿತದ ಹೊಡೆತ ಜೋರಾಗಿತ್ತು. ಆಗ ಕಣ್ಣು ಜೂಮ್ ಮಾಡಿ ಮತ್ತೊಂದು ಫೋಟೊ ತೆಗೆಯಿತು. ಸ್ವಲ್ಪ ದೂರ ಬಂದ ತಿರುಗಿ ನೋಡಿದಾಗ ಆ ಜಾಗ ಖಾಲಿಯಾಗಿದ್ದು ಬೇಸರಕ್ಕಿಂತ ನೋವಿನ ಸಣ್ಣ ಜಲಕ್ ತುಟಿಯ ಮೇಲೆ ಬಂದು ಹೋಗಾಗಿತ್ತು.
ಅದೇ ಗುಂಗಿನಲ್ಲಿ ರಾತ್ರಿಯೆಲ್ಲ ಮನೆಯ ಮಾಳಿಗೆಯನ್ನು ಹತ್ತು ಬಾರಿ ಸುತ್ತು ಹಾಕಿದ್ದು ಅಮ್ಮ ಹೇಳಿದ ಮೇಲೆಯೆ ತಿಳಿಯಿತು. ಮಾರನೆ ದಿನ ಮತ್ತೆ ಆ ಜಾಗದಲ್ಲಿ ಅವನ ಇರುವಿಕೆಯಿರಲಿ ಎಂದು ಮನಸ್ಸು ಸಾರಿಸಾರಿ ಹೇಳುತ್ತಿತ್ತು. ಮಲಗುವ ಮುನ್ನ ಅವನ ಮುಖವನ್ನು ಒಂದು ಸಲ ನೆನಪಿಸಿಕೊಳ್ಳಬೇಕು ಅಂದುಕೊಂಡು ಕಣ್ಣುಮುಚ್ಚಿದಾಗ ಫೋನ್ ರಿಂಗಾಗಿ, ಯಾರಂತ ಕೇಳುವ ಮೊದಲೆ ಆ ಕಡೆಯಿಂದ ನನ್ನ ಬೆಸ್ಟಫ್ರೆಂಡ್ ಹೊಸ ನಂಬರ್ ಪರ್ಚೇಸ್ ಮಾಡಿ ಕಾಲ್ ಮಾಡಿದ್ದಳು. ನನ್ನ ಅವಳ ಮಧ್ಯ ಇರುವುದು ಬರಿ ಫ್ರೆಂಡ್’ಶಿಪ್ ಸಂಬಂಧ ಅಲ್ಲ ಅದನ್ನು ಮೀರಿದ ಬಂಧ ಅಂತ ಮನೆಯವರಿಗೂ ನನ್ನ ಫ್ರೆಂಡ್ಸ್ ಸರ್ಕಲ್’ಗೂ ಗೊತ್ತಿದ್ದ ಸಂಗತಿ.
‘ಹಾ ಹೇಳು ಈ ಟೈಮ್ನಲ್ಲಿ ಏನು ಕಾಲ್ ಮಾಡಿದ್ದು’ ಅಂತ ಕೇಳಿದ್ದ ನನಗೆ ಆಕೆಯ ಉತ್ತರ ಹಾರುತ್ತಿದ್ದ ಹಕ್ಕಿಯ ರೆಕ್ಕೆ ಕತ್ತರಿಸಿದಂಗಾಯಿತು. ನನ್ನ ಕನಸಿನ ಕೋಟೆಯ ಸರದಾರ ಅದಾಗಲೆ ಅವಳಿಗೆ ಪ್ರೇಮನಿವೇದನೆ ನೀಡಿದ್ದನು. ‘ಯಸ್ ಹೇಳಲಾ? ಅಥವಾ ನೋ ಅನ್ನಲಾ?’ ಎಂಬ ನಿರ್ಧಾರಕ್ಕೆ ಅವಳು ನನಗೆ ಕಾಲ್ ಮಾಡಿದ್ದು ಕೇಳಿ ಕಣ್ಣಿನಂಚಿನಿಂದ ಕಣ್ಣೀರು ನನ್ನ ಅನುಮತಿ ಕೇಳದೆ ತನ್ನ ಕೆಲಸ ಶೂರುಮಾಡಿತು. ಅವಳ ಬೇಗಹೇಳು ಬೇಗಹೇಳು ಅವಸರದ ನುಡಿಗಳಿಂದ ಒಂದು ಕ್ಷಣ ಫೋನ್ನನ್ನು ಶಕ್ತಿಕುಂದಿದವರ ಹಾಗೆ ಕೆಳಗಿಟ್ಟು. ಜೋರಾಗಿ ಅತ್ತೆನು. ಅದಾಗಲೇ ನನ್ನ ಮನದಲ್ಲಿ ಮುಂದಿನ ಜೀವನದ ಎಲ್ಲ ಸುಖದು:ಖಗಳಲ್ಲಿ ಅವನ ನೆನಪುಗಳನ್ನು ಹಂಚಿಕೊಂಡಿದ್ದ ಭವಿಷ್ಯದ ದಾರಿ ಕತ್ತಲೆಯ ರೂಪ ತಾಳಿತು. ಬಿಕ್ಕಿಬಿಕ್ಕಿ ಸುಮಾರು ಒಂದು ಗಂಟೆಗಳ ಕಾಲ ಅತ್ತು ಕೊನೆಗೆ ಕಣ್ಣೊರೆಸಿಕೊಳ್ಳುತ್ತಾ ಫೋನ್ ನೋಡಿದೆನು. ಅವಳ ಕಾಲ್ ಕಟ್ ಆಗಿ 1 ಗಂಟೆಯಾಗಿತ್ತು ಕಂಡು ಮತ್ತೆ ಕಾಲ್ ಮಾಡಿದೆನು.
‘ಏನೇ ಸಡನ್ ಆಗಿ ಕಾಲ್ ಕಟ್ ಮಾಡದೆ? ಆ ಟೈಮ್ನಲ್ಲಿ ಕಾಲ್ ಮಾಡಿದಕ್ಕೆ ಸಿಟ್ಟು ಬಂತಾ?’ ಎಂದು ಅವಳು ಪ್ರಶ್ನೆಯನ್ನು ಮುಗಿಸುವ ಮೊದಲೆ ನಾನು
ಹುಡುಗ ತುಂಬ ಒಳ್ಳೆಯವನು, ಕಾಲೇಜಿನಲ್ಲಿ ಅವನ ಮೇಲೆ ಎಲ್ಲ ಲೆಕ್ಟರರ್ಸಗೂ ಒಳ್ಳೆ ಅಭಿಪ್ರಾಯ ಇದೆ. ಅದು ಅಲ್ಲದೆ ಇಲ್ಲಿವರೆಗೂ ಯಾವ ಹುಡುಗಿಯನ್ನು ಕಣ್ಣೆತ್ತಿ ನೋಡದವನು ನಿನ್ನನ್ನು ನೋಡಿದಾನೆ. ಯು ಆರ್ ಅ ಲಕ್ಕಿ ಗರ್ಲ್. ಸೋ ಯಸ್ ಅಂತ ಹೇಳೊದ್ರಲ್ಲಿ ತಪ್ಪಿಲ್ಲ ಅನ್ಸುತ್ತೆ ಅಂತ ಹೃದಯದಿಂದ ಹೇಳಿಲ್ಲ ಅಂದ್ರು ಒಬ್ಬ ಒಳ್ಳೆ ಫ್ರೆಂಡ್ ಆಗಿ ನನ್ನ ಮಾತು ಹೇಳಿದೆ. ‘ಓಕೆ ಸದ್ಯ ಹೇಳೊಲ್ಲ, ಸ್ವಲ್ಪ ಟೈಮ್ ಬೇಕು ಅಂತ ಹೇಳ್ತಿನಿ’ ಅನ್ನೊ ಮಾತಿಂದ ಅವಳು ಫೋನ್ ಇಟ್ಟಳು.
ಒಂದೆ ದಿನದಲ್ಲಿ ಕಟ್ಟಿದ್ದ ಕನಸಿನ ಕೋಟೆ ಅದೇ ದಿನ ಕುಸಿದು ನೆಲಸಮವಾಗಿದ್ದು ನಂಬಲಾಗಲಿಲ್ಲವೆಂದರು ನಿಜಸಂಗತಿಯಾಗಿತ್ತು. ನಾಳೆ ಅವನನ್ನು ಕಂಡರೂ ಏನೂ ತಕರಾರು ತೆಗೆಯಬೇಡ ಏಕೆಂದರೆ ಇದರಲ್ಲಿ ಯಾರ ತಪ್ಪುಸೇರಿಲ್ಲ ಎಂದು ಹುಚ್ಚು ಮನಸ್ಸಿಗೆ ಸಮಧಾನ ಮಾಡಿದೆ. ಅದಾಗಲೆ ಕಂಡ ಕನಸು ಕಣ್ಣಿನಲ್ಲೆ ಕರಗಿ ನಿದ್ರೆಯ ಗೂಡು ಸೇರಿತ್ತು.
Basavva V