Featured ಅಂಕಣ

ರಾಜಕಾರಣಿಗಳಿಗೆ ಮತ್ತು ಯುವ ಸಮಾಜ ಸೇವಕರಿಗಿದೋ ಇಲ್ಲಿದೆ ಒಂದು ಸುವರ್ಣಾವಕಾಶ.

ಪ್ರೀತಿಯ ರಾಜಕಾರಣಿ ಮಿತ್ರರೇ ಮತ್ತು ನಮ್ಮ ನಾಡಿನ ಸಮಸ್ತ ಯುವ ಸಮಾಜ ಸೇವಕರೇ,

ಇತ್ತೀಚಿನ ವರ್ಷಗಳಲ್ಲಿ ಫೇಸ್ ಬುಕ್,ವಾಟ್ಸಪ್,ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ದಿನ ಪತ್ರಿಕೆಗಳು,ಸುದ್ದಿ ವಾಹಿನಿಗಳು,ಮತ್ತು ಇತರೆ ಪುಸ್ತಕಗಳು ತಲುಪುವುದಕ್ಕಿಂತಾ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತಿವೆ ಎನ್ನುವುದು ತಮಗೆಲ್ಲಾ ತಿಳಿದೇ ಇದೆ. ಅದೇ ಕಾರಣಕ್ಕೆ ದೃಶ್ಯ ಮಾಧ್ಯಮದವರು,ಪತ್ರಿಕೆಗಳು,ಚಾಲ್ತಿಯಲ್ಲಿಲ್ಲದ ಸಾಹಿತಿಗಳು ಆಗಾಗ ಸಾಮಾಜಿಕ ಜಾಲತಾಣಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನೂ ಕೂಡಾ ನೋಡಿಯೇ ಇರುತ್ತೀರಿ.

ಕರ್ನಾಟಕದಲ್ಲಿ ನಮ್ಮದೊಂದು ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚಿರುವ ಜಾಲತಾಣಿಗರ ಗುಂಪಿದೆ. ನಮ್ಮ ಗುಂಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಕರುಗಳು,ಸ್ವ ಉದ್ಯೋಗಿಗಳು, ಉದ್ಯಮಿಗಳು,ವೈದ್ಯರುಗಳು,ಇಂಜಿನಿಯರ್ ಗಳು,ಸಾಹಿತಿಗಳು,ಬರಹಗಾರರು,ಅಂಕಣಕಾರರು,ಯುವ ಕವಿಗಳು,ಸಮಾಜದ ಪರ ಕಳಕಳಿ ಉಳ್ಳವರು,ರೈತರು,ರೈತರ ಮಕ್ಕಳು,ಧಾರ್ಮಿಕ ಮುಖಂಡರು,ವಿವಿಧ ಪಕ್ಷಗಳ ಕಾರ್ಯಕರ್ತರುಗಳು ಹೀಗೆ ಎಲ್ಲಾ ವರ್ಗದ ಜನರೂ ಇದ್ದೇವೆ. ನಾವೆಲ್ಲರೂ ಸೇರಿ ಹಲವಾರು ಟ್ರೆಂಡ್’ಗಳನ್ನು ಸೃಷ್ಟಿಸಿದ್ದೇವೆ.ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದ್ದೇವೆ. ಒಂದೇ ದಿನದಲ್ಲಿ ಹಲವು ಪ್ರತಿಷ್ಠಿತರ ಬಣ್ಣ ಕಳಚಿದ್ದೇವೆ.ಹಲವರ ಕಷ್ಟಗಳಿಗೆ ಹೆಗಲು ಕೊಟ್ಟಿದ್ದೇವೆ.ಸರ್ಕಾರಗಳ ಹಲವು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ.ನಮ್ಮಲ್ಲಿ ಕೆಲವರು ಬರೆಯುವ ಬರಹಗಳು ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರನ್ನು ತಲುಪುತ್ತವೆ.ಕೆಲವರ ಬರಹಗಳು ಕೆಲವೇ ನಿಮಿಷಗಳಲ್ಲಿ ಫೇಸ್ ಬುಕ್’ನ ಗೋಡೆ ಹಾರಿ ನೂರಾರು ವಾಟ್ಸಾಪ್ ಗ್ರೂಪ್’ಗಳಲ್ಲಿ ಹರಿದಾಡುತ್ತವೆ.ಇನ್ನು ಕೆಲವರ ಬರಹಗಳನ್ನು ಒಂದೇ ದಿನದಲ್ಲಿ ಸಾವಿರಾರು ಜಾಲತಾಣಿಗರು ಶೇರ್ ಮಾಡಿಕೊಳ್ಳುತ್ತಾರೆ.

ಫೇಸ್ ಬುಕ್ ಗ್ರೂಪ್ ಒಂದರಲ್ಲಿ ಬರೆದ ಬರಹವೊಂದನ್ನು ಸರಿಸುಮಾರು ಒಂದು ಸಾವಿರ ಜನರು ತಮ್ಮ ವಾಲ್’ನಲ್ಲಿ ಹಂಚಿಕೊಂಡರೆ ಒಟ್ಟು ಎಷ್ಟು ಜನರಿಗೆ ತಲುಪಬಹುದು ಎನ್ನುವುದನ್ನು ಹಾಗೇ ಸುಮ್ಮನೆ ಒಮ್ಮೆ ಯೋಚಿಸಿ ನೋಡಿ.ನಿಜಕ್ಕೂ ನೀವು ಮೂಗಿನ ಮೇಲೆ ಬೆರಳಿಡುತ್ತೀರಿ.ಒಬ್ಬೊಬ್ಬ ಜಾಲತಾಣಿಗರ ಸ್ನೇಹಿತರ ಪಟ್ಟಿಯಲ್ಲೂ ನೂರರಿಂದ ಐದು ಸಾವಿರದವರೆಗೂ ಸ್ನೇಹಿತರುಗಳಿರುತ್ತಾರೆ. ಸರಾಸರಿ ನಾನೂರು ಸ್ನೇಹಿತರಿಗೆ ಅವರು ಹಂಚಿಕೊಂಡ ಬರಹ ತಲುಪುತ್ತದೆ ಎಂದುಕೊಂಡರೂ ಹಂಚಿಕೊಂಡ ಒಂದು ಸಾವಿರ ಜಾಲತಾಣಿಗರಿಂದಾಗಿ ಆ ಬರಹ ಅನಾಯಾಸವಾಗಿ ಸುಮಾರು ನಾಲ್ಕು ಲಕ್ಷ ಜನರನ್ನು ತಲುಪುತ್ತದೆ. ಹಾಗೆ ಜನಪ್ರಿಯವಾದ ಬರಹ ನೂರಾರು ಸಾವಿರಾರು ವಾಟ್ಸಾಪ್ ಗ್ರೂಪ್’ಗಳಲ್ಲಿ ಹರಿದಾಡುತ್ತದೆ. ಆ ಮೂಲಕ ಮತ್ತೆ ನಾಲ್ಕೈದು ಲಕ್ಷ ಜನರನ್ನು ತಲುಪುತ್ತದೆ.ಅಂದರೆ,ಹೀಗೆ ಆ ಬರಹ ತಲುಪಿದ ಓದುಗರ ಒಟ್ಟು ಸಂಖ್ಯೆ ಕರ್ನಾಟಕದ ಅತೀ ಹೆಚ್ಚು ಪ್ರಸಾರವಾಗುವ ದಿನಪತ್ರಿಕೆಯ ಸಂಖ್ಯೆಗಿಂತಲೂ ಹೆಚ್ಚು!

ಇದೆಲ್ಲವನ್ನೂ ನಾನು ನಮ್ಮನ್ನು ಹೊಗಳಿಕೊಳ್ಳಲು ಹೇಳುತ್ತಿದ್ದೇನೆಂದು ದಯವಿಟ್ಟು ಭಾವಿಸಬೇಡಿ.ಇಲ್ಲಿ ಇನ್ನೊಂದು ಮಹತ್ವದ ವಿಚಾರವೂ ಇದೆ.

ಸ್ವತಃ ರಾಜಕಾರಣಿಗಳಾದ,ಸಮಾಜ ಸೇವಕರುಗಳಾದ ತಾವು ಒಂದು ಹಂತಕ್ಕೆ ಬೆಳೆಯಬೇಕಾದರೆ ಸಮಾಜದ ಮುಂದೆ ತಮ್ಮನ್ನು ಪರಿಚಯಿಸಿಕೊಳ್ಳಲು ನೀಡುವ ಜಾಹೀರಾತುಗಳಿಗಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ,ಮಾಡುತ್ತಿದ್ದೀರಿ ಮತ್ತು ಮುಂದೆಯೂ ಕೂಡಾ ಮಾಡಬೇಕು ಎನ್ನುವುದರ ಬಗ್ಗೆ ನಾನೇನೂ ಹೊಸದಾಗಿ ಹೇಳಬೇಕಿಲ್ಲ.ಸ್ಥಳೀಯ ಪತ್ರಿಕೆಯೊಂದರಲ್ಲಿ ಒಂದೇ ಒಂದು ದಿನ ಅರ್ಧ ಪುಟದ ಬಣ್ಣದ ಜಾಹೀರಾತು ಹಾಕಿಸಿದರೂ ಅರ್ಧ ಲಕ್ಷದಿಂದ ಒಂದು ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ.ಇನ್ನು ರಾಜ್ಯದಾದ್ಯಂತ ಪ್ರಸಾರವಾಗುವ ರಾಜ್ಯಮಟ್ಟದ ಪತ್ರಿಕೆಗಳ ಎಲ್ಲಾ ಎಡಿಷನ್’ಗಳಲ್ಲೂ ನಿಮ್ಮ ಪರವಾದ ಜಾಹೀರಾತು ಹಾಕಿಸಬೇಕೆಂದರೆ ಏನಿಲ್ಲವೆಂದರೂ ಹಲವು ಲಕ್ಷಗಳನ್ನು ಖರ್ಚು ಮಾಡಲೇಬೇಕು. ಅದಕ್ಕಾಗಿಯೇ ನಿಮ್ಮಂತಹಾ ಮಹತ್ವಾಕಾಂಕ್ಷೆಯ ಯುವ ರಾಜಕಾರಣಿಗಳಿಗಾಗಿ ನನ್ನದೊಂದು ಹೊಸಾ ಆಲೋಚನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.ಇದರಿಂದ ನಿಮ್ಮ ಜಾಹೀರಾತು ವೆಚ್ಚಗಳು ಸಂಪೂರ್ಣ ಉಳಿತಾಯವಾಗಲಿವೆ.ರಾಜ್ಯದಾದ್ಯಂತ ತಮ್ಮ ಕಾರ್ಯಗಳಿಗೆ ಉತ್ತಮ ಪ್ರಶಂಸೆ ಮತ್ತು ಪ್ರಚಾರ ಕೂಡಾ ಸಿಗಲಿದೆ.

ವಿಷಯವಿಷ್ಟೇ ಸ್ನೇಹಿತರೇ,

ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದಾಗಿ ಮಳೆ ಬೆಳೆ ಇಲ್ಲದೇ ತಾವು ಸಾಕಿರುವ ಗೋವುಗಳಿಗೆ ಮೇವು ನೀಡಲಾಗದೇ ಈ ನಾಡಿನ ಹೈನುಗಾರರು ಹಾಗೂ ರೈತರು ತಮ್ಮ ಜೀವನಾಧಾರವಾಗಿದ್ದ ಗೋವುಗಳನ್ನು ಬಿಡಿಗಾಸಿಗೆ ಕಟುಕರಿಗೆ ಮಾರುವ ಪರಿಸ್ಥಿತಿ ಬಂದೊದಗಿದೆ. ಗೋವುಗಳನ್ನು ದೇವರೆಂದು ಪೂಜಿಸುವ ನಮ್ಮ ರೈತರು ಹಾಗೊಂದು ವೇಳೆ ಅವುಗಳನ್ನು ಕಟುಕರಿಗೆ ಮಾರದಿದ್ದರೂ ಮೇವಿನ ಕೊರತೆಯಿಂದಾಗಿ ಈ ಬೇಸಿಗೆ ಕಳೆಯುವವರೆಗೂ ಅವುಗಳನ್ನು ಬದುಕಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಸದಾ ರೈತರ ಪರ ಚಿಂತಿಸುವ ತಮ್ಮಗಳಿಗೆ ಇದು ತಿಳಿಯದ ವಿಷಯವೇನೂ ಅಲ್ಲ.

ಇನ್ನು ಸರ್ಕಾರದಿಂದ ತೆರೆಯಲ್ಪಡುತ್ತಿರುವ ಗೋಶಾಲೆಗಳು ಕೆಲವೇ ಕೆಲವು ಊರುಗಳಿಗೆ ಸೀಮಿತವಾಗಿವೆ ಮತ್ತು ಅಲ್ಲಿಯೂ ಕೂಡಾ ಮೇವಿನ ಕೊರತೆ ಕಂಡುಬರುತ್ತಿದೆ.ಕೆಲವು ರಾಜಕಾರಣಿಗಳು ಅಲ್ಲಲ್ಲಿ ಗೋವುಗಳಿಗೆ ಮೇವು ವಿತರಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರಾದರೂ ಅವು ಕೇವಲ ಒಂದು ಹೊತ್ತಿನ ಫೋಟೋ ಸೆಷನ್’ಗಳಿಗಷ್ಟೇ ಸೀಮಿತವಾಗಿವೆ. ರಾಜ್ಯದಾದ್ಯಂತ ಇರುವ ತಮ್ಮಂತಹಾ ರಾಜಕಾರಣಿಗಳು, ಸಮಾಜಸೇವಕರು ಆಸಕ್ತಿ ವಹಿಸಿದರೆ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಬಹುದಾಗಿದೆ.

ನೀವು ಮಾಡಬೇಕಾಗಿರುವುದು ಇಷ್ಟೇ. ನಿಮಗಿರುವ ಸಂಪರ್ಕಗಳನ್ನು ಬಳಸಿಕೊಂಡು ಒಂದಷ್ಟು ಊರುಗಳ ಗೋವುಗಳ ಈ ಬೇಸಿಗೆಯ ಮೇವಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು.ಹಾಗೆಂದು ರಾಜ್ಯದ ಯಾವುದೋ ಮೂಲೆಯ ಊರಿನಲ್ಲಿರುವ ಗೋವುಗಳ ಮೇವಿನ ಜವಾಬ್ದಾರಿ ವಹಿಸಿಕೊಳ್ಳಿ ಎಂದು ನಾವೇನೂ ಹೇಳುತ್ತಿಲ್ಲ.ನಿಮ್ಮ ಕ್ಷೇತ್ರದ ಊರುಗಳಲ್ಲೇ ನೀವು ಈ ಕಾರ್ಯವನ್ನು ಮಾಡಿ.ಯಾರೋ ಒಬ್ಬರು ಜೋಳದ ದಂಟು ನೀಡಬಯಸುತ್ತಾರೆಂದರೆ ಅವರನ್ನು ಸಂಪರ್ಕಿಸಿ ವಾಹನದ ವ್ಯವಸ್ಥೆ ಮಾಡಿ ಅಲ್ಲಿಂದ ಸಾಗಿಸಿ ಅಗತ್ಯವಿರುವ ಇನ್ನೊಬ್ಬ ಹೈನುಗಾರನ ಮನೆಗೆ ತಲುಪಿಸಿರಿ.ಇನ್ಯಾರೋ ಒಬ್ಬರ ತೋಟದಲ್ಲಿ ಹುಲ್ಲು ಸಿಗುತ್ತದೆ ಎಂದರೆ ಅದನ್ನು ಪಡೆದು ಅಗತ್ಯವಿರುವ ಇನ್ನೊಬ್ಬ ರೈತನ ಮನೆಗೆ ತಲುಪಿಸಿರಿ.ಒಬ್ಬರ ಜಾಗದಲ್ಲಿ ಸೊಪ್ಪು ಸಿಗುತ್ತದೆಯೆಂದಾದರೆ ಅದನ್ನು ಪಡೆದು ಅಗತ್ಯವಿರುವ ಮೇವಿಲ್ಲದೆ ಕಂಗಾಲಾಗಿರುವ ನಿಮ್ಮದೇ ಕ್ಷೇತ್ರದ ಹಸುವಿನ ಮಾಲೀಕನೊಬ್ಬನ ಮನೆಗೆ ತಲುಪಿಸಿ.ಇದಲ್ಲದೇ ಒಂದಷ್ಟು ಹೆಚ್ಚೇ ಹಣ ಖರ್ಚು ಮಾಡಲು ಸಿದ್ಧ ಎನ್ನುವುದಾದಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಅಗತ್ಯ ಮೇವು ತರಿಸಿ ನೀಡಿದರೆ ಅದಕ್ಕಿಂತಾ ಸಂತೋಷ ಇನ್ನೊಂದಿಲ್ಲ.

ಇದೆಲ್ಲವನ್ನೂ ನೀವುಗಳು ಪುಕ್ಕಟೆಯಾಗಿ ಮಾಡಬೇಕಿಲ್ಲ.ಗೋಸಂರಕ್ಷಣೆಯ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡ ನಿಮ್ಮ ಎಲ್ಲಾ ವಿವರಗಳನ್ನೂ ಫೋಟೋ ಸಮೇತ ನಮಗೆ ಕಳಿಸಿಕೊಡಿ.ನಾವು ನಿಮ್ಮ ಸಮಾಜ ಸೇವೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಡೀ ಕರ್ನಾಟಕದ ಜನತೆಗೆ ಪರಿಚಯಿಸುತ್ತೇವೆ.ಕೆಲವೇ ದಿನಗಳಲ್ಲಿ ನಿಮ್ಮನ್ನು ಚಿರಪರಿಚಿತರನ್ನಾಗಿಸುತ್ತೇವೆ.ಮುಂದೆ ನೀವು ಸ್ಪರ್ಧಿಸಬಹುದಾದ ಚುನಾವಣೆಗಳಲ್ಲೂ ಕೂಡಾ ನಾವು ಜಾತಿ,ಧರ್ಮ,ಪಂಥ,ಪಕ್ಷ ಗಳೆಲ್ಲವನ್ನೂ ಮೀರಿ ನಿಮ್ಮ ಪರ ನಿಲ್ಲುತ್ತೇವೆ.ಈ ಬೇಸಿಗೆಯಲ್ಲಿ ನೀವು ಮಾಡಿದ ಮಹತ್ ಕಾರ್ಯವನ್ನು ಆ ಸಮಯದಲ್ಲೂ ಮತ್ತೊಮ್ಮೆ ಜನರಿಗೆ ನೆನಪು ಮಾಡುವ ಮೂಲಕ ನಿಮ್ಮ ಗೆಲುವಿಗೆ ಸಹಕರಿಸುತ್ತೇವೆ.ಅಷ್ಟೇ ಅಲ್ಲದೇ ಅಗತ್ಯ ಬಿದ್ದಾಗ ನಿಮ್ಮ ಪಕ್ಷದ ಹಿರಿಯ ನಾಯಕರುಗಳಿಗೂ ಕ್ಷೇತ್ರದಲ್ಲಿ ನಿಮ್ಮ ಜನಪ್ರಿಯತೆಯ ಬಗ್ಗೆ ಮತ್ತು ಈ ನಿಮ್ಮ ಸೇವಾ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ.

ರಾಜ್ಯದ  ಹೆಚ್ಚು ಪ್ರಸಾರವಾಗುವ ಪತ್ರಿಕೆಯಲ್ಲಿ ಎರಡು ದಿನ ಅರ್ಧ ಪುಟದ ಜಾಹೀರಾತು ಹಾಕಿಸುವುದಕ್ಕಿಂತಲೂ ಕಡಿಮೆ ಮೊತ್ತದದಲ್ಲಿ ನೀವು ಇಷ್ಟೆಲ್ಲಾ ಜನಪರ/ರೈತಪರ ಕೆಲಸ ಮಾಡಬಹುದು ಮತ್ತು ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬಹುದು ಎನ್ನುವುದನ್ನು ಈ ಮೂಲಕ ಇನ್ನೊಮ್ಮೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ.

ಧನ್ಯವಾದಗಳು.

ಪ್ರವೀಣ್ ಕುಮಾರ್ ಮಾವಿನಕಾಡು

mkpraveen79@gmail.com

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!