ನೋ……! ನೋ ಎಂದರೆ ಕೇವಲ ಒಂದು ಶಬ್ದವಲ್ಲ, ಅದು ಒಂದು ವಾಕ್ಯವೂ ಆಗುತ್ತದೆ. ನೋ ಎಂದರೆ, ನನಗೆ ಬೇಡ, ಇಷ್ಟವಿಲ್ಲ ಎಂಬ ಅರ್ಥ ನೀಡುತ್ತದೆ. ಅವಳು ಒಂದು ಹುಡುಗಿಯಾಗಿರಬಹುದು, ಲೈಂಗಿಕ ಕಾರ್ಯಕರ್ತೆಯಾಗಿರಬಹುದು, ನಿಮ್ಮ ಗರ್ಲ್’ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಹೆಂಡತಿಯೇ ಆಗಿರಬಹುದು, ನೋ ಎಂದರೆ ಬೇಡ, ನನಗೆ ಇಷ್ಟವಿಲ್ಲ ಎಂದರ್ಥ. ಮೇಲಿನ ಈ ವಾಕ್ಯ, ಅಮಿತಾಬಚ್ಚನ್ ನಟಿಸಿರುವ, ಪಿಂಕ್ ಎನ್ನುವ ಹಿಂದಿ ಸಿನಿಮಾದ ಕ್ಲೈಮ್ಯಾಕ್ಸನಲ್ಲಿ ಬರುವ ಡೈಲಾಗ್. ಪ್ರತಿಯೊಬ್ಬರೂ ಅದರಲ್ಲೂ ಪುರುಷರು ಈ ಸಿನಿಮಾವನ್ನು ಒಮ್ಮೆಯಾದರೂ ನೋಡಬೇಕು. ಆ ಸಿನಿಮಾವನ್ನು ನೋಡಿದಾಕ್ಷಣ ಒಮ್ಮೆ ನನಗೆ, ಪುರುಷನಾಗಿ ಹುಟ್ಟಿದ್ದಕ್ಕೆ ಅಷ್ಟೊಂದು ಹೆಮ್ಮೆಪಡಬೇಕಾಗಿಲ್ಲ ಎಂದೆನಿಸಿತು.
ಇಂದಿಗೂ ನಮ್ಮ ಪುರುಷ ಸಮಾಜ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ, ಮಹಿಳೆಯೆಂದರೆ ಹೀಗೇ ಇರಬೇಕು ಎಂಬಂತಹ ಕಟ್ಟುನಿಟ್ಟುಗಳನ್ನು ನಾವು ಸಮಾಜದಲ್ಲಿ ಕಾಣಬಹುದು. ಒಂದು ಹುಡುಗಿ, ಒಂದು ಹುಡುಗನ ಜೊತೆ ಸಲುಗೆಯಿಂದ ಮಾತನಾಡಿದರೆ, ಅವನ ಜೊತೆ ಉತ್ತಮ ಗೆಳೆತವಿಟ್ಟುಕೊಂಡರೆ, ಸ್ವಲ್ಪ ಆಧುನಿಕ ಶೈಲಿಯಲ್ಲಿ ಉಡುಪು ಧರಿಸಿದರೆ, ಪಾರ್ಟಿಗಳಿಗೆ ಹೋದರೆ, ಮದ್ಯ ಸೇವಿಸಿದರೆ ಅವಳ ನಡತೆ ಸರಿಯಿಲ್ಲವೆಂದು ನಿರ್ಧರಿಸಿಬಿಡುತ್ತಾರೆ. ಅವಳ ಸಲಿಗೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಒಬ್ಬ ಪುರುಷ ಅದೆಷ್ಟೋ ಹುಡುಗಿಯರೊಂದಿಗೆ ಸಂಬಂಧವಿಟ್ಟುಕೊಂಡರೂ ಅವನೊಬ್ಬ ‘ರಸಿಕ ಶಿಕಾಮಣಿ’ ‘ಪ್ಲೇ ಬಾಯ್’ ಎಂದು ಹೇಳುವ ನಮ್ಮ ಪುರುಷ ಸಮಾಜ, ಅದೇ ಒಂದು ಹುಡುಗಿ ಕೆಲವು ಹುಡುಗರ ಜೊತೆ ಗೆಳೆತನ ಹೊಂದಿದ್ದರೆ ಅವಳ ನಡತೆ ಸರಿಯಿಲ್ಲವೆಂದು ನಿರ್ಧರಿಸಿಬಿಡುತ್ತಾರೆ. ಇತಿಹಾಸ ಕಾಲದಿಂದಲೂ ನಮ್ಮ ಸಮಾಜದಲ್ಲಿ ಇಂತಹ ಸಾಕಷ್ಟು ಉದಾಹರಣೆಗಳನ್ನು ನೋಡಬಹುದು.. ಮಹಿಳೆಗೆ ಇಷ್ಟವಿಲ್ಲವೆಂದರೂ ಪ್ರೀತಿಸು ಎಂದು ಮಾನಸಿಕವಾಗಿ ಹಿಂಸಿಸುವುದು, ಇವ್ ಟೀಸಿಂಗ್, ಮೊಲೆಸ್ಟಿಂಗ್, ಅತ್ಯಾಚಾರ, ಎಸಿಡ್ ಎರಚುವುದು, ಇಂತಹ ಕೃತ್ಯಗಳನ್ನು ಮಾಡುವುದಲ್ಲದೇ,ಕೆಲವು ಹುಡುಗರು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಗಮನಿಸಿದಾಗ ನಮ್ಮ ವೈಚಾರಿಕತೆ ಎಂತಹ ಕೆಳಮಟ್ಟದಲ್ಲಿದೆ ಎಂಬುದನ್ನು ಯೋಚಿಸಿ. ನಮ್ಮ ದೇಶದಲ್ಲಿ ಇಂದು ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಲ್ಯಾಂಡ್ ಫೋನ್ ಹೋಗಿ ಮೊಬೈಲ್ ಬಂದಿದೆ, ಪತ್ರ ಕಳಿಸುವುದು ಹೋಗಿ ಮೇಲ್ ಬಂದಿದೆ, ಸಾಕಷ್ಟು ವಿಷವನ್ನು ಕುಳಿತಲ್ಲೇ ತಿಳಿದುಕೊಳ್ಳಲು ಅಂತರ್ಜಾಲದ ವ್ಯವಸ್ಥೆ ಬಂದಿದೆ. ಇದಲ್ಲೆದಕ್ಕೂ ಸಲೀಸಾಗಿ ಹೊಂದಿಕೊಂಡು ಅದರಂತೆ ಜೀವನ ರೀತಿಯನ್ನು ಬದಲಾಯಿಸಿಕೊಳ್ಳುವ ನಮ್ಮ ಜನರ ದೃಷ್ಟಿಕೋನ ಮಾತ್ರ ಮಹಿಳೆಯ ವಿಚಾರದಲ್ಲಿ ಮಾತ್ರ ಕಳಪೆ ಮಟ್ಟದಲ್ಲೇ ಇದೆ.
ಇಂದು ಬಸ್ಸಿನಲ್ಲಿ, ರೈಲಿನಲ್ಲಿ ಎಲ್ಲ ಕಡೆಯೂ ಮಹಿಳೆಯರ ಮೇಲೆ ವಿವಿಧ ರೀತಿಯಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಲೇ ಇದೆ. ಇದನ್ನು ತಡೆಯಲು ಇಂದು ಸರ್ಕಾರ ಮಹಿಳೆಯರ ಪರವಾಗಿ ಹಲವಾರು ರೀತಿಯ ಕಾನೂನುಗಳನ್ನು ಮಾಡಿದೆ ಅದು ಬೇರೆಯ ವಿಚಾರ. ಆದರೆ ಇದರಿಂದ ಲೈಂಗಿಕ ಕಿರುಕುಳದಂತಹ ಕೃತ್ಯ ಕಡಿಮೆಯಾದಂತೆಯೇನೂ ಅನಿಸುತ್ತಿಲ್ಲ. ಇವಿಷ್ಟೇ ಅಲ್ಲ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲೂ ಈ ಕಿರುಕುಳದ ಛಾಯೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಮಹಿಳೆಯರೇ, ಅವರು ಧರಿಸುವ ಬಟ್ಟೆ, ಅವರು ಎಲ್ಲರ ಜೊತೆ ಸಲಿಗೆಯಿಂದಿರುವುದು, ಪಾರ್ಟಿಗಳಿಗೆ ಹೋಗುವುದನ್ನು ಮಾಡುತ್ತಾರೆ, ಅದಕ್ಕಾಗಿ ಈ ರೀತಿಯೆಲ್ಲಾ ಆಗುತ್ತದೆ ಎಂದು ಸಲೀಸಾಗಿ ಮಹಿಳೆಯರ ಮೇಲೆ ತಪ್ಪನ್ನು ಹೋರಿಸಿಬಿಡುತ್ತಾರೆ. ಹುಡುಗಿಯ ಮನೆಯಲ್ಲಿ ಸರಿಯಾದ ಸಂಸ್ಕಾರ ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳುವ ಜನ, ಅದೇ ಹುಡುಗನ ಮನೆಯಲ್ಲಿ ಸರಿಯಾದ ಸಂಸ್ಕಾರ ಕೊಟ್ಟಿದ್ದರೆ, ಹುಡುಗ ಆ ರೀತಿ ಮಾಡಲು ಸಾಧ್ಯವಿತ್ತೇ ಎಂಬುದನ್ನು ವಿಚಾರ ಮಾಡುವುದಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ, 2 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಹುಡುಗನೊಬ್ಬ, ಭಾರತೀಯ ಹುಡುಗಿಗೆ, ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಅವಳು ಎಷ್ಟು ಬಾರಿ ಇಷ್ಟವಿಲ್ಲವೆಂದರೂ ಬಿಡದೆ ಅವಳನ್ನು ಕಾಡುತ್ತಿದ್ದ. ಅವಳು ಎಲ್ಲೇ ಹೋದರೂ ಅಲ್ಲಿ ಹೋಗುವುದು, ಗುಲಾಬಿ ಹೂ ತೆಗೆದುಕೊಂಡು ಹೋಗಿ ತನ್ನನ್ನು ಪ್ರೀತಿಸುವಂತೆ ದುಂಬಾಲು ಬೀಳುವುದು, ನಾನು ಪ್ರೀತಿಸುವುದು ನಿನ್ನನ್ನೇ, ನೀನು ನನ್ನನ್ನು ಪ್ರೀತಿಸಲೇಬೇಕು ಎಂದು ಪದೇ ಪದೇ ಅವಳಿಗೆ ಕಿರಿ-ಕಿರಿ ಉಂಟು ಮಾಡುತ್ತಿದ್ದ. ಅವಳು ಎಷ್ಟೇ ಬೇಡವೆಂದರೂ, ಇಷ್ಟವಿಲ್ಲವೆಂದರೂ ಅವನು ಅವಳನ್ನು ಬಿಡಲಿಲ್ಲ. ಕೊನೆಗೆ ಅವಳು ಬೇಸತ್ತು ಆಸ್ಟ್ರೇಲಿಯಾ ಕೋರ್ಟನಲ್ಲಿ ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ದಾಖಲಿಸಿದಳು. ಆ ಕೋರ್ಟಿನಲ್ಲಿ ನೀಡಿದ ತೀರ್ಪು ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಅವರೇನು ತೀರ್ಪು ನೀಡಿದರೆಂಬುದನ್ನು ನಂತರ ನೋಡೋಣ. ನಮ್ಮ ದೇಶದಲ್ಲಿ ಬಿಡುಗಡೆಯಾಗುವ ಸ್ಯಾಂಡಲ್’ವುಡ್, ಬಾಲಿವುಡ್ ಸಿನಿಮಾಗಳನ್ನು ನೀವು ನೋಡೇ ಇರುತ್ತೀರಿ. ಸಿನಿಮಾದ ನಾಯಕ, ನಾಯಕಿಯನ್ನು ಪಟಾಯಿಸುವ ಸಂದರ್ಭ, ನಾಯಕನಾದವನು ನಾಯಕಿಗೆ ಮನಸೋತು ಹೂವನ್ನು ಕೊಟ್ಟೋ ಅಥವಾ ಅವಳು ಬರುವ ದಾರಿಯಲ್ಲಿ ಕಾದು ನಿಂತು ಅವಳನ್ನು ಅಡ್ಡಗಟ್ಟಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅವಳು ಸಾಮಾನ್ಯವಾಗಿ ಬೇಡ ಎಂದು ಹೇಳುತ್ತಾಳೆ. ಆಗ ಒಂದು ಹಾಡು ಬರುತ್ತದೆ, ಅದರಲ್ಲಿ ನಾಯಕನು ನಾಯಕಿಯನ್ನು ಮನವೊಲಿಸಲು, ತನ್ನನ್ನು ಪ್ರೀತಿಸುವಂತೆ ಮಾಡಲು, ಹೂವನ್ನು ಕೊಡುವುದು, ಅವಳನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಾಡುವುದು, ಅವಳು ಎಲ್ಲಿ ಹೋದರೂ ಹಿಂಬಾಲಿಸುವುದು, ಹೀಗೆ ಏನೆಲ್ಲಾ ಸಾಹಸ ಮಾಡುತ್ತಾನೆ. ಅವನ ಈ ಪ್ರಯತ್ನಕ್ಕೆ ಅವನ ಸ್ನೇಹಿತರೂ ಕೈ ಜೋಡಿಸುತ್ತಾರೆ. ನಾಯಕನಾದವನು ಇಷ್ಟೆಲ್ಲಾ ಮಾಡುತ್ತಿದ್ದರೂ, ನಾಯಕಿಯಾದವಳು, ಅವನ ಪ್ರತಿ ಪ್ರಯತ್ನಕ್ಕೂ ನೋ ಎಂದೇ ಹೇಳುತ್ತಾ ತಿರಸ್ಕರಿಸುತ್ತಿರುತ್ತಾಳೆ. ಕೊನೆಗೆ ನಾಯಕನಾದವನು ಗೆಳೆಯರೊಂದಿಗೆ ಬಂದು ಗ್ರೂಪ್ ಸೊಂಗ್ ಹಾಡುವುದು ಇವೆಲ್ಲವೂಗಳು ಮನರಂಜನೆಯಾಗಿ ಕಂಡರೂ ನಿಜವಾಗಿ sexual harassment ಆಗಿರುತ್ತದೆ. ಇನ್ನೂ ಮಿತಿ ಮೀರಿ ಕೈ ಕೊಯ್ದುಕೊಳ್ಳುವುದೋ ಅಥವಾ ಬಿಲ್ಡಿಂಗ್ನ ಮೇಲೆ ನಿಂತು ಬಿದ್ದು ಸಾಯುತ್ತೀನಿ ನೀನು ನನ್ನನ್ನು ಪ್ರೀತಿಸದಿದ್ದರೆ ಎಂದು ಬಲವಂತ ಮಾಡುವುದು, ಎಸಿಡ್ ಎರಚುವೆನೆಂದು ಬೆದರಿಕೆ ಒಡ್ಡುವುದು ಇಷ್ಟೆಲ್ಲಾ ಆಗಿ ಹಾಡು ಅಥವಾ ಸಿನಿಮಾ ಮುಗಿಯುವಷ್ಟರಲ್ಲಿ, ನಾಯಕನ ಪ್ರಯತ್ನಕ್ಕೆ ನಾಯಕಿ ಸೋತು ಅವನನ್ನು ಪ್ರೀತಿಸಲು ಪ್ರಾರಂಭಿಸಿಬಿಡುತ್ತಾಳೆ. 1960 ರದಶಕದಿಂದಲೂ ಇಂತಹ ಸಿನಿಮಾಗಳನ್ನೇ ನಮ್ಮ ದೇಶದಲ್ಲಿ ತೋರಿಸುತ್ತಿರುವುದು. ಈಗಿನ ಸಮಾಜದಲ್ಲಿ ಇಂತಹ ಅನುಚಿತ ವರ್ತನೆಗಳು ಹೆಚ್ಚುತ್ತಿರುವುದಕ್ಕೆ, ಸಿನಿಮಾಗಳ ಪ್ರಭಾವ ಕೂಡ ಅತಿ ಮುಖ್ಯವಾದದ್ದು. ಸಿನಿಮಾಗಳಲ್ಲಿ ಸೂಪರ್ ಸ್ಟಾರ್ಗಳನ್ನು, ಒಳ್ಳೆಯ ಸಂಗೀತಗಾರರನ್ನು ಹಾಕಿಕೊಂಡು ಕೋಟ್ಯಾಂತರ ಖರ್ಚು ಮಾಡಿ ವಿದೇಶಗಳಲ್ಲಿ ಶೂಟಿಂಗ್ ಮಾಡಿ ತೋರಿಸುವ ವಿಚಾರ ಮಾತ್ರ ಮೇಲೆ ಹೇಳಿದಂತೆ ಅಸಂಬದ್ದ, ಕೆಳಮಟ್ಟದವುಗಳೇ ಆಗಿದೆ.
ಇಂತಹ ಸಿನಿಮಾಗಳನ್ನೇ ಆಧಾರವಾಗಿಟ್ಟುಕೊಂಡು, ಭಾರತದಲ್ಲಿ ತೋರಿಸುವ ಇಂತಹ ಸಿನಿಮಾಗಳಿಂದ ಪ್ರಭಾವಿತವಾಗಿ ಆ ಯುವಕ, ಯುವತಿಗೆ ತೊಂದರೆ ನೀಡಿದ್ದಾನೆ. ಇದರಲ್ಲಿ ಆತನ ತಪ್ಪೇನೂ ಇಲ್ಲ, ಆತ ನಿರಪರಾಧಿ ಎಂದು ಮಹತ್ವದ ತೀರ್ಪನ್ನು ಆಸ್ಟ್ರೇಲಿಯಾ ನ್ಯಾಯಾಲಯ ನೀಡಿ, ಆತನಿಗೆ ವಾರ್ನಿಂಗ್ ಮಾಡಿ ಲೈಂಗಿಕ ಕಿರುಕುಳದ ಕೇಸಿನಿಂದ ಬಿಡುಗಡೆ ಮಾಡಿತು.
ಸಿನಿಮಾದಲ್ಲಿ ತೋರಿಸುವಂತೆ ನಿಜ ಜೀವನದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಅಂತಹ ಸಿನಿಮಾಗಳನ್ನು ನೋಡಿ, ನೋಡಿ ಅದರ ಪ್ರಭಾವಕ್ಕೆ ಒಳಗಾಗಿ ಅದೇ ನಿಜವೆಂದು ನಂಬಿ ಅದರಂತೆ ಯುವ ಜನತೆ ಪ್ರಯತ್ನಿಸಲು ಪ್ರಾರಂಭಿಸುತ್ತಾರೆ. ಆದರೆ ಸಿನಿಮಾದಲ್ಲಿ ತೋರಿಸುವಂತೆ ಒಂದು ಹಾಡು ಮುಗಿಯುವಷ್ಟರಲ್ಲಿ ಪ್ರೀತಿಯನ್ನು ಒಪ್ಪಿಕೊಂಡಂತೆ, ನಿಜ ಜೀವನದಲ್ಲಿ ಆಗುವುದಿಲ್ಲ. ಆಗ ಹತಾಶೆಗೊಂಡ ಯುವಕರು ತಾವು ಪ್ರೀತಿಸಿದ ಹುಡುಗಿ ಬೇಡ ಎಂದು ಹೇಳುತ್ತಿದ್ದರೂ, ಲೈಂಗಿಕ ಕಿರುಕುಳ ಕೊಡಲು ಪ್ರಾರಂಭಿಸುತ್ತಾರೆ. ಅವಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹುಡುಗರು ಇಷ್ಟೆಲ್ಲಾ ಮಾಡುವಾಗ, ಆ ಹುಡುಗಿಗೆ ಇಷ್ಟವಿಲ್ಲದಿದ್ದರೂ ಬಲವಂತಪಡಿಸುವಾಗ, ಅವಳು ಅನುಭವಿಸುವ ಮಾನಸಿಕ ಯಾತನೆ ಎಷ್ಟಿರಬಹುದೆಂಬುದು ಪುರುಷರಾದ ನಮಗಾರಿಗೂ ತಿಳಿಯುವುದಿಲ್ಲ.,ಪುರುಷರಂತೆ ಸಾಮಾಜಿಕವಾಗಿ ಜೀವಿಸಬೇಕೆಂಬ ಬಯಕೆ ಮತ್ತು ಹಕ್ಕು ಎರಡೂ ಮಹಿಳೆಗಿರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಮಹಿಳೆಯ ನಡತೆ ಸರಿಯಿಲ್ಲವೆಂದು ಸುಲಭದಲ್ಲಿ ನಿರ್ಧರಿಸುವುದು ಎಷ್ಟರಮಟ್ಟಿಗೆ ಸರಿ..?
ಒಂದು ಸಮಾಜದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಸ್ಥಾನಮಾನವಿದೆ ಎಂದ ಮೇಲೆ, ಸ್ತ್ರೀಯರನ್ನೂ ತಮ್ಮಂತೆ ಸಮಾನವಾಗಿ ಕಾಣಬೇಕಾದದ್ದು ಪುರುಷರಾದ ನಮ್ಮ ಕರ್ತವ್ಯವಲ್ಲವೇ? ಇಂತಹ ಆದರ್ಶಗಳು ಕೇವಲ ಬಾಯಿ ಮಾತಿನಲ್ಲಿದೆಯೇ ಹೊರತು, ಆಚರಣೆಯಲ್ಲಿ ಮಾತ್ರ ಬಂದಿಲ್ಲ. ಮಹಿಳೆಯರನ್ನು ನಿಮ್ಮಲ್ಲೇ ಒಬ್ಬರಂತೆ, ಒಬ್ಬ ಒಳ್ಳೆಯ ಗೆಳತಿಯಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರಂತೆ, ಸಮಾನವಾಗಿ ನೋಡಿ. ಇದು ಪುರುಷ ಪ್ರಧಾನ ಸಮಾಜ, ಪುರುಷರು ಮಾಡಿದ್ದೆಲ್ಲಾ ಸರಿ, ಅದೇ ಕೆಲಸ ಸ್ತ್ರೀಯರು ಮಾಡಿದರೆ ತಪ್ಪು ಎಂಬ ಧೋರಣೆಯನ್ನು ಮೊದಲು ನಾವು ಬಿಡಬೇಕು. ಅಂದಾಗ ನಿಜವಾದ ಸಮಾನತೆ ಬರಲು ಸಾಧ್ಯ್ಲ. ಒಬ್ಬ ಹುಡುಗ ಒಂದು ಹುಡುಗಿಗೆ ಲೈಂಗಿಗ ಕಿರುಕುಳ ನೀಡಿದರೆ, ಅಲ್ಲಿ ಹುಡುಗನ ಮರ್ಯಾದೆಗಿಂತ ಹುಡುಗಿಯ ಮರ್ಯಾದೆಯೇ ಹೋಗುವುದು ಹೆಚ್ಚು ನಮ್ಮ ದೇಶದಲ್ಲಿ. ಆ ಹುಡುಗ ಆರಾಮವಾಗಿ ಮತ್ಯಾವ ಹುಡುಗಿಯನ್ನು ಚುಡಾಯಿಸಲಿ ಎಂದು ಓಡಾಡಿಕೊಂಡಿದ್ದರೆ, ಅವನಿಂದ ದೌರ್ಜನ್ಯಕ್ಕೊಳಗಾದ ಹುಡುಗಿ ಮಾತ್ರ ಸಮಾಜದ ನಿಂದನೆ ಮತ್ತು ಚುಚ್ಚು ಮಾತುಗಳನ್ನು ಕೇಳುತ್ತಾ ಸಹಿಸಿಕೊಂಡಿರಬೇಕು. ಇವಳೇನೂ ಮಾಡದೇ ಇದ್ದರೂ, ಎಲ್ಲರೂ ಇವಳದೇ ತಪ್ಪೆಂದು ಮಾತನಾಡುವವರೇ! ಆ ಹುಡುಗನ ತಪ್ಪಿನ ಬಗ್ಗೆ ಯಾವೊಬ್ಬನೂ ಮಾತನಾಡುವುದಿಲ್ಲ. ಯಾಕೆಂದರೆ ಆ ಹುಡುಗಿ ಎಲ್ಲರೊಂದಿಗೆ ಸಾಮಾಜಿಕವಾಗಿ ಬೆರೆತಿರುತ್ತಾಳೆ. ಅಂದ ಮೇಲೆ ಇವಳೇ ಸರಿಯಿಲ್ಲ ಎಂದು ನಮ್ಮ ಸಮಾಜ ನಿರ್ಧರಿಸಿಬಿಡುತ್ತದೆ. ಯಾರೊಂದಿಗೂ ಸ್ನೇಹ ಮಾಡದೇ ಮನೆಯಲ್ಲೇ ತೆಪ್ಪಗೆ ಕುಳಿತಿದ್ದರೆ ಹೀಗಾಗುತ್ತಿತ್ತಾ ಎಂದು ಮನೆಯಲ್ಲೂ ಅವಳನ್ನು ದೂಷಿಸಲಾಗುತ್ತದೆ.
ನಮ್ಮ ದೇಶದಲ್ಲಿ ಇಂದು ಮಹಿಳೆಯರ ಪರವಾಗಿ ಹಲವಾರು ಕಾನೂನುಗಳು ಬಂದಿವೆ. ಕೆಲವೊಮ್ಮೆ ಪುರುಷರು ಮಾಡಿದ ತಪ್ಪಿಗೆ ಕಾನೂನಿನ ಪ್ರಕಾರ ಶಿಕ್ಷೆಯಾದರೂ, ಪುರುಷನ ದೌರ್ಜನ್ಯಕ್ಕೆ ಒಳಗಾದ ಆ ಹೆಣ್ಣು ಸಮಾಜದ ದೃಷ್ಟಿಯಲ್ಲಿ ಕೆಟ್ಟವಳಾಗಿ, ಜೀವಮಾನ ಪರ್ಯಂತ ಶಿಕ್ಷೆ ಅನುಭವಿಸುತ್ತಿರುತ್ತಾಳೆ. ಅವಳ ಮಾನಸಿಕ ವೇದನೆ ಏನೆಂಬುದು, ಶಿಕ್ಷೆಗೊಳಗಾಗಿ ಜೈಲಿಗೆ ಹೋಗಿ ಬಂದ ಆ ಪುರುಷನಿಗೂ ತಿಳಿಯುವುದಿಲ್ಲ. ಅದು ತಿಳಿದಿದ್ದರೆ ಅವನು ಅಂತಹ ಕೆಲಸವನ್ನು ಮಾಡುತ್ತಲೇ ಇರಲಿಲ್ಲ. ಇದರಲ್ಲೇ ತಿಳಿಯುತ್ತದೆ ನಾವು ತಂತ್ರಜ್ಞಾನಕ್ಕೆ ಒಗ್ಗಿಕೊಂಡಂತೆ, ಮಹಿಳೆಯರನ್ನು ನೋಡುವ ದೃಷ್ಟಿಕೋನದಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕು.
ಒಂದು ಹುಡುಗಿಯನ್ನು ಅವಳ ಪಾಡಿಗೆ ಅವಳಿಷ್ಟದಂತೆ ಇರಲು ಬಿಡಿ, ಅವಳಿಗೆ ಇಷ್ಟವಿದ್ದರೆ, ತಾನಾಗೇ ನಿಮ್ಮನ್ನು ಒಪ್ಪಿಕೊಳ್ಳುತ್ತಾಳೆ. ನೀವು ಬಲವಂತ ಮಾಡಿದಾಗ ಅವಳು ನೋ… ಎಂದಾಗ ಆ ನೋ ಎಂಬುದರ ಹಿಂದಿರುವ ನೋವನ್ನು ಅರಿತುಕೊಳ್ಳಿ. ಮನೆಯಲ್ಲಿ ಒಬ್ಬ ಮಹಿಳೆಗೆ ನೀನು ಹಾಗಿರಬೇಕು, ಹೀಗಿರಬೇಕು, ಇಂತಹ ಉಡುಪನ್ನೇ ಧರಿಸಬೇಕು, ಇಂತಹವರ ಸ್ನೇಹವನ್ನೇ ಮಾಡಬೇಕು, ಇಂತಹ ಸಮಯಕ್ಕೇ ಮನೆಗೆ ಬರಬೇಕು ಎಂದು ಹೇಳಿದಂತೆ, ಒಬ್ಬ ಪುರುಷನಿಗೂ ನೀನು ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಬಾರದು, ಅವಳನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಮಾನಸಿಕ ಮತ್ತು ದೈಹಿಕ ತೊಂದರೆ ನೀಡಬಾರದು, ಅವರನ್ನು ಗೌರವಿಸಬೇಕೆಂದು ಮನೆಯಲ್ಲಿ ಸರಿಯಾದ ತಿಳುವಳಿಕೆಯನ್ನು ಮೊದಲಿಂದಲೂ ನೀಡಿದರೆ, ಮಹಿಳೆಯರ ಮೇಲಿರುವ ಪುರುಷರ ದೃಷ್ಠಿಕೋನದಲ್ಲಿ ಸ್ವಲ್ಪವಾದರೂ ಬದಲಾವಣೆ ಬರಲು ಸಾಧ್ಯ.