ಪ್ರೀತಿಯ ಪರಿ,
ಆಗಾಗ್ಗೆ ಊರು, ಏರಿಯಾ, ಮನೆ ಬದಲಾಯಿಸುತ್ತಿರುತ್ತಲೇ ಇರುವ ನಮ್ಮಂಥವರ ನೆಲೆ ಎಲ್ಲೂ ಗಟ್ಟಿಯಾಗುವುದೇ ಇಲ್ಲ; ಆದರೆ ಬಗೆಬಗೆಯ ಅನುಭವಗಳು ಮಾತ್ರ ಮೂಟೆಯಷ್ಟಿರುತ್ತದೆ. ನಿನ್ನೊಡನೆ ಆದ ಸ್ನೇಹ ಮಾತ್ರ ಹಿಂದೆಂದೂ ಆಗಿರದ ವಿಶಿಷ್ಠ ಅನುಭವ, ಅನುಭೂತಿ. ಪರಿ, ನಾನು ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಮೊದಲ ದಿನ ನೀನು ಜೊತೆಗಾರನೊಡನೆ ನಮ್ಮ ಮನೆ ಕಿಟಕಿಗೆ ಮುಂಜಾನೆ ಆರಕ್ಕೆ ಬಂದು ಗುಟುರು ಹಾಕಿದಾಗ ಒಂದಷ್ಟು ಅಕ್ಕಿ ತಿನ್ನಿಸಿ ಧನ್ಯತೆಯ ಭಾವ ಅನುಭವಿಸಿದೆ. ಮುಂದೆ ಅದೇ ವೇಳೆಗೆ ಬರುವುದು ಪರಿಪಾಠವಾಯ್ತು. ಪ್ರಕೃತಿಯ ಗಡಿಯಾರದ ಮುಂದೆ ಮಾನವ ನಿರ್ಮಿತ ಕಾಲದ ಲೆಕ್ಕ ಎಷ್ಟು ಸರಿಯಾದೀತು? ನಿಮ್ಮ ಜೋಡಿ ತುಂಬ ಸುಂದರವಾಗಿತ್ತು. ನಿಮ್ಮ ನಡುವೆ ಮೂರನೆಯವರು ಬಂದರೆ ಅವು ಹೋಗುವವರೆಗೂ ನೀವಿಬ್ಬರೂ ಅವರ ಜೊತೆ ಜಗಳ ಕಾಯುವ ಪರಿ ತಮಾಷೆಯಾಗಿರುತ್ತಿತ್ತು.
‘ನಿನ್ನ ಮಕ್ಕಳಿಗಾಗಿ ಅಕ್ಕಿ, ಬೇಳೆ ಹೆಚ್ಚು ತಂದಿಡು’ ಎನ್ನುವ ಮಕ್ಕಳು ನೀನು ಬಾರದಿದ್ದಾಗ ಅವರ ಚಡಪಡಿಕೆ ಹೇಳಲಾಗದು. ನೀನು ಬಂದಾಗಲೆಲ್ಲ ಪಾಪ! ಎಂದು ಕಾಳು ಹಾಕುವ ಅವರಿಗೆ ಒಂದಷ್ಟು ಒಳ್ಳೆ ವಿಚಾರ ಕಲಿಸಿದವಳು ನೀನು. ತಿಂದು ತೇಗಿ ನೀನು ಮಾಡುವ ಗಲೀಜನ್ನು ನಾನೇ ಒರೆಸಿ ತೆಗೆಯುತ್ತಿದ್ದೆನಲ್ಲ, ಆದರೆ ನಮ್ಮ ಬೆಂಗಳೂರಿನ ಕೆಂಪುತೋಟದಲ್ಲಿ ನಿಮ್ಮ ಹೊಲಸಿನಿಂದ ಅಸ್ತಮಾ ಬರುವುದೆಂದು ಕಾಳು ಹಾಕುವುದನ್ನೇ ನಿಷೇಧಿಸಿದ್ದಾರೆ. ಮಾನವ ತನ್ನ ಭೋಗಕ್ಕೆಂದು ರೂಪಿಸಿಕೊಂಡ ವಸ್ತುಗಳಿಂದಲೇ ರೋಗ ತಂದುಕೊಂಡರೂ ಅವುಗಳಿಗೆ ಪರ್ಯಾಯ ಕಂಡುಕೊಳ್ಳುವನೇ ವಿನಾಃ ನಿಷೇಧಿಸುವುದಿಲ್ಲ. ನಿಮಗೂ ಮಾತು ಬಂದಿದ್ದರೆ ಇವೆಲ್ಲವನ್ನೂ ಪ್ರಶ್ನಿಸಬಹುದಿತ್ತು. ಪಕ್ಷಿ, ಪ್ರಾಣಿಗಳ ನಿಷ್ಕಲ್ಮಷ ನಿಷ್ಕಪಟ ಪ್ರೀತಿ, ಕಲ್ಮಷ ಕಪಟ ಮನಸ್ಸಿಗೆ ತಿಳಿಯುವದಾದರೂ ಹೇಗೆ?
ಅಂದು ಮುಸ್ಸಂಜೆ ಏಕಾಂಗಿಯಾಗಿದ್ದೆ. ದೇವರ ದೀಪದ ಹೊರತಾಗಿ ಎಲ್ಲ ದೀಪ ಆರಿಸಿ ಕತ್ತಲನ್ನು ಅನುಭವಿಸುತ್ತಾ ಕುಳಿತವಳು ಹಜಾರಕ್ಕೆ ಬಂದೆ. ನೀನು ನಿನ್ನ ಪುಟ್ಟ ಕಾಲಿನಿಂದ ಮನೆತುಂಬ ಓಡಾಡುತ್ತಿದ್ದನ್ನು ಕಂಡು ಅದೆಷ್ಟು ಸಂತಸಪಟ್ಟಿದ್ದೆನೋ. ಕತ್ತಲ¯ ಮನೆಯಲ್ಲಿ ದೇವರ ಮುಂದಿನ ಮಂದ ಬೆಳಕು, ನಿನ್ನ ಬಳುಕಿನ ನಡೆ ಒಂದಕ್ಕೊಂದು ಜೋಡಿಯಾಗಿತ್ತು. ನಿನ್ನ ಬಳುಕು ನಡೆಯನ್ನೇ ನೋಡುತ್ತಾ ಕುಳಿತ ದಿನ ಅವಿಸ್ಮರಣೀಯ. ಮುಂದೆ ನಿನಗೆ ಅದು ನಿತ್ಯರೂಢಿಯಾಯ್ತು. ಸ್ನೇಹಿತರಿಂದ ‘ಪಕ್ಷಿಜ್ವರ ಬಂದೀತು’ ಎನ್ನುವ ಎಚ್ಚರಿಕೆಯೂ ಬಂತು. ನಾವು ನಿನ್ನಿಂದ ಜ್ವರ, ಅಸ್ತಮಾ ಬದಲಾಗಿ ಒಂದಷ್ಟು ಖುಷಿ, ಪ್ರೀತಿ ಪಡೆದೆವು.
ಇದ್ದಕ್ಕಿದ್ದಂತೆ ನೀನು ಒಬ್ಬನೇ ಬರತೊಡಗಿದಾಗ ನಮಗೆ ‘ನಿನ್ನ ಜೊತೆಗಾರನಿಗೆ ಏನಾಯ್ತೋ’ ಎಂದು ಒಂದೆರಡು ದಿನ ಆತಂಕವೆನಿಸಿತ್ತು. ನಮ್ಮ ಮನೆಗೆ ಕೆಲದಿನ ಗುಬ್ಬಿಗಳೂ ಬರುತ್ತಿದ್ದವು. ನಮ್ಮ ಬಾಲ್ಯದಲ್ಲಿ ಅಜ್ಜಿಮನೆಯಲ್ಲಿ ಫೋಟೊ ಹಿಂದೆ ಹುಲ್ಲನ್ನೆಲ್ಲ ಹಾಸಿ ಮನೆ ಮಾಡಿ ನಮ್ಮೊಡನೆಯೇ ಇರುತ್ತಿದ್ದವು ಗುಬ್ಬಚ್ಚಿಗಳು. ಮಕ್ಕಳ ಹಾಗೆ ಗುಬ್ಬಕ್ಕ ಮಾಡುತ್ತಿದ್ದ ಕಸವನ್ನೆಲ್ಲ ಬಯ್ಯುತ್ತಲೇ ಅಜ್ಜಿ ಗುಡಿಸಿ ತೆಗೆಯುತ್ತಿದ್ದರೇ ವಿನಾಃ ಗುಬ್ಬಿಗಳನ್ನು ಹೊರ ಹಾಕುವ ಮಾತು ಮಾತ್ರ ಆಡುತ್ತಿರಲಿಲ್ಲ. ಆ ದಿನಗಳನ್ನು ನೆನಪಿಗೆ ತಂದ ಆ ಗುಬ್ಬಿಗಳು ಬಳಿಕ ಎಲ್ಲಿಗೆ ಹೋದವೋ!
ನಮ್ಮ ಮನೆ ಬಳಿ ದೊಡ್ಡ ಮರವೊಂದು ಹಸಿರಾಗಿ ಆ ಜಾಗಕ್ಕೆಲ್ಲ ನೆರಳು ನೀಡಿ ತಂಪಾಗಿರಿಸಿತ್ತು. ಆ ಮರದ ಮೇಲೆ ಕೆಂಪುಮೂತಿಯ ಹಸಿರು ಬಣ್ಣದ ಗಿಳಿಗಳು ಎಲೆ ಕಾಣದಷ್ಟು ಹಿಂಡಾಗಿ ಕುಳಿತಿರುತ್ತಿದ್ದವು.
ಒಂದು ದಿನ ಆ ಭಾಗದಿಂದ ಪ್ರಖರವಾದ ಬೆಳಕು ಬರುತ್ತಿತ್ತು. ನಮಗೆ ಆಶ್ಚರ್ಯ! ನೋಡಿದರೆ ಕೆಲವು ಮಂದಿ ಮರ ಕತ್ತರಿಸುವ ಯಂತ್ರ ತಂದು ಮರ ಕತ್ತರಿಸಿ ಅದರ ಕೊಂಬೆಕೊಂಬೆಯನ್ನೆಲ್ಲ ಕತ್ತರಿಸುತ್ತಿದ್ದರು. ನೆರಳೂ ಇಲ್ಲ, ಗಿಳಿಗಳೂ ಇಲ್ಲ, ಬಟಾಬಯಲು.
ಪರಿ, ಯಥಾಪ್ರಕಾರ ಆ ಮನೆ ಬಿಟ್ಟು ಬಂದೆವು; ಇನ್ನೊಂದು ಗೂಡು ಸೇರಿದೆವು. ಇಲ್ಲಿ ಎಲ್ಲವೂ ಇದೆ; ಆದರೆ ನೀನಿಲ್ಲ. ಆ ಮನೆ ಬಿಟ್ಟು ಬರುವಾಗ ನನಗೆ ಯಾರ ಯೋಚನೆಯೂ ಕಾಡಲಿಲ್ಲ; ಯಾರ
ಸ್ನೇಹವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸಲಿಲ್ಲ, ಆದರೆ ಕಾಡಿದ್ದು ಒಂದೇ! ನೀನು ನಾನಿಲ್ಲದಿರುವಾಗಲೂ ಆ ಕಿಟಕಿಗೆ ಹಾರಿ ಬರಬಹುದು; ಮುಂದೆ ಬರುವವರು ನನ್ನಂತೆ ನಿನಗೆ ಕಾಳು ಹಾಕುವರೇ? ದಿನಾ ಮುಂಜಾನೆ ಆರಕ್ಕೆ ನಿನ್ನ ನೆನಪಾಗಿ ಇಲ್ಲಿಯೂ ಕಿಟಕಿ ನೋಡುವೆ. ನೀನೂ ಇಲ್ಲ, ನಿನ್ನಂತಹ ಇನ್ನೊಂದು ‘ಪರಿ’ಯೂ ಇಲ್ಲಿಲ್ಲ. ನಿನ್ನ ಸವಿನೆನಪು ನನ್ನ ಅನುಭವದ ಮೂಟೆಯಲ್ಲಿ ವಿಸ್ತಾರವಾದ ಜಾಗ ಪಡೆದಿದೆ. ಅದಕ್ಕಾಗಿ ನಿನಗೆ ನನ್ನ ಅನಂತ ಧನ್ಯವಾದಗಳು.