ಅಂಕಣ

ನನಗೂ ಒಂದು ಮನಸ್ಸಿದೆ…

“ನಾನು ಹೆಣ್ಣಾದರೆ ಏನಂತೆ, ಮನುಷ್ಯಳಲ್ಲವೇ? ಈ ಜಗದಲ್ಲಿರೋ ಪಾಪವನ್ನೆಲ್ಲ ನನ್ನ ಮೇಲೆ ಹೊರಿಸಿದ ಜನರಿಗೆ, ನನಗೂ ಒಂದು ಮನಸ್ಸಿದೆ ಎಂದು ಯಾವಾಗ ತಿಳಿಯುವುದು? ಎಂದಿನಿಂದಲೂ ಈ ಅನ್ಯಾಯ ನನ್ನ ಮೇಲೇ ಏಕೆ? ಆ ದಿನ ನಾನು ನನ್ನವನನ್ನು ಮೊದಲ ಬಾರಿ ಕಂಡಾಗ, ನನ್ನ ಅದೃಷ್ಟವೇ ಅದೃಷ್ಟವೆಂದು ಹಿಗ್ಗಿದ್ದೆ. ನನ್ನ ಸಖಿಯರಿಗೆಲ್ಲಾ ಅವನನ್ನು ತೋರಿಸಿ ನನ್ನ ಅದೃಷ್ಟವ ಕೊಂಡಾಡಿದ್ದೆ. ಅವನ ಮಾತು, ನಡೆ-ನುಡಿ, ಅವನ ಬಗ್ಗೆ ಜನರಿಗಿದ್ದ ಅಭಿಪ್ರಾಯ ಎಲ್ಲಕ್ಕೂ ಮನಸೋತ್ತಿದ್ದೆ. ಅವನ ರೂಪವೆಲ್ಲ ಕಣ್ಣಲ್ಲೇ  ಕುಳಿತು ನನ್ನ ಮನವೆಲ್ಲ ನವಿಲಿನಂತೆ ಕುಣಿದಿತ್ತು. ಆದರೆ…ಇಂದು, ಆ ದಿನವನ್ನು ನೆನೆದರೆ ಮೈಯೆಲ್ಲ ಕೋಪ ಏರುತ್ತಿದೆ. ಅವನು ಚೆಂದವಿದ್ದ ನಿಜ, ಎಲ್ಲರೂ ಹೊಗಳಿದರು ನಿಜ.. ಆದರೆ..ಜನರಿಗಾಗಿ ಆತ ನನ್ನ ತೊರೆದದ್ದು ಸರಿಯೇ?? ನೀನೆಂದರೆ ಪ್ರಾಣವೆಂದಿದ್ದ ಆಗ…ಈಗ ಈ ಕಾಡಿನಲ್ಲಿ ಅಲೆಯುತ್ತಿರುವ ನಾನು ಅವನ ಪ್ರಾಣವಲ್ಲವೇ? ಈ ಬಿಸಿಲಿನಲ್ಲಿ ಹನಿ ನೀರಿಗಾಗಿ ಪಾಡು ಪಡುತ್ತಿರುವ ನನ್ನ ಅದೃಷ್ಟವೇ ಅದೃಷ್ಟ ನಿಜ.. ಹ್ಹ ಹ್ಹ …
  
ರಾಣಿಯಾಗಿ ಮೆರೆದಿದ್ದ ನಾನು, ಇಂದು ಕಾಡಿನಲ್ಲಿ ಅಲೆಯುತ್ತಿರುವೆ. ಕಾಡಿನಲ್ಲಿ ತಿರುಗುತ್ತಿರುವುದು ಇದೇನು ಮೊದಲ ಬಾರಿ ಅಲ್ಲ. ಹಿಂದೆ ನನ್ನ ಜೊತೆ ಅವನಿದ್ದ. ಎಲ್ಲಿದ್ದರೂ ನಾನು ಅವನೊಂದಿಗೇ ಇರುವೆ ಎಂಬ ಭದ್ರತೆಯ ಭಾವ ನನ್ನಲ್ಲಿತ್ತು. ಇಂದು… ಅವನೇ ನನ್ನನ್ನು ಕಾಡಿಗೆ ಅಟ್ಟಿರುವನು…. ನನ್ನ ಮೇಲಿನ ಪ್ರೀತಿ ಏನಾಯಿತೋ?

ಕಳೆದ ಸಲ ಕಾಡಿಗೆ ಬಂದಾಗ ಪ್ರೀತಿಯ ಪಕ್ಷಿಗಳಂತೆ ಹಾರುವ ಕನಸ್ಸಿನ ಲೋಕಕ್ಕೆ ಬಂದೆ ಎಂಬ ಉತ್ಸಾಹ ನನ್ನಲ್ಲಿ ತುಂಬಿತ್ತು. ಹಕ್ಕಿಯಂತೆ ಹಾರುತ್ತಿದ್ದ ನನ್ನ ರೆಕ್ಕೆಗಳನ್ನು ಕಡಿದು ಆ ದುಷ್ಟ ನನ್ನನ್ನು ನನ್ನವನಿಂದ ದೂರ ಮಾಡಿ ಅಪಹರಿಸಿದ್ದೇ ನನ್ನ ಬದುಕಿಗಾದ ಮೊದಲ ಭರಿಸಲಾಗದ ಪೆಟ್ಟು. ನನ್ನವ ಬಂದೇ ಬರುತ್ತಾನೆ ಎಂಬ ನಂಬಿಕೆಯಲ್ಲಿ ನಾನು ಧೈರ್ಯದಿಂದ ಆ ದುಷ್ಟನ ಎದುರಿಸಿ ನನ್ನ ಮನದ ಹತ್ತಿರವೂ ಅವನು ಸುಳಿಯದಂತೆ, ಆ ವನದಲ್ಲಿ ಒಂಟಿಯಾಗಿ ಆ ರಾಕ್ಷಸಿಯರ ನಡುವೆ ಇದ್ದು.. ಎಲ್ಲ ಕಷ್ಟವನ್ನು ಸಹಿಸಿ , ನನ್ನವನಿಗಾಗಿ ಕಾದಿದ್ದೆ. ಆ ನೀಚ ನೀಡುತ್ತಿದ್ದ ಸಕಲ ಮಾನಸಿಕ ಹಿಂಸೆಯನ್ನು ಸಹಿಸಿ ನನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದ್ದೆ. ಕಡೆಗೂ ನನ್ನವ ಬಂದ…

ಸೈನ್ಯದೊಂದಿಗೆ ಬಂದು ನನ್ನ ಕಾಪಾಡಿ ಕರೆದೊಯ್ಯುವ ಎಂದು ಬಗೆದಿದ್ದೆ. ಆದರೆ… ಯುದ್ಧದ ನಂತರ ಅವನು ನನ್ನ ಅಗ್ನಿ ಪರೀಕ್ಷೆಯಾಗಬೇಕೆಂದ. ಆಗ ನನಗಾದ ದುಃಖಕ್ಕೆ ಕೊನೆ-ಮೊದಲಿಲ್ಲ. ತನ್ನ ಪ್ರಾಣವೆಂದಿದ್ದ ಅವನಿಗೆ ನನ್ನ ಮೇಲೆ ಸಂಶಯವೆಂದು ತಿಳಿದ ಮೇಲೂ ನಾನು ಬದುಕಿರಬಾರದೆಂದು ನಿಶ್ಚಯಿಸಿದೆ. ಅಂದೇ ಇಹಲೋಕ ತ್ಯಜಿಸಿದ್ದರೆ ಒಳ್ಳೆಯದಿತ್ತು… ಆದರೆ ಆಗ ನನ್ನ ಸತ್ಯವನ್ನು ಜಗಕ್ಕೆ ಸಾರುವ ಅವಕಾಶ ನನಗಿರುತ್ತಿರಲಿಲ್ಲ. ಅದೊಂದೇ ಕಾರಣಕ್ಕೆ … ನನ್ನವನಿಗೆ ಸತ್ಯದ ಅರಿವಾಗಲೆಂದು ಅಗ್ನಿಪರೀಕ್ಷೆಗೆ ಒಪ್ಪಿದೆ… ಗೆದ್ದು ಪವಿತ್ರಳೆಂದು ಹೊರ ಬಂದೆ.

ಇಷ್ಟೆಲ್ಲಾ ಆದ ಮೇಲೆ ನನ್ನ ಕಷ್ಟ ತೀರಬೇಕಿತ್ತಲ್ಲವೇ? ಹಾಗೇಕೆ ಆಗಲಿಲ್ಲ?? ಹಾಗಾಗಿದ್ದರೆ ಕಾಡಿನಲ್ಲಿ, ಈ ಬಿಸಿಲಿನಲ್ಲಿ, ಕಲ್ಲು ಮುಳ್ಳಿನ ದಾರಿಯಲ್ಲಿ.. ಹ್ಹ ಹ್ಹ ದಾರಿಯೆಲ್ಲಿ??!! ಈ ರೀತಿ ಅಲೆಯಬೇಕಿತ್ತೇ? ನಾ ಕೊಟ್ಟ ಪರೀಕ್ಷೆಯ ಪ್ರತಿಫಲ ಇದೇ ಏನು?? ಚಿಕ್ಕಂದಿನಿಂದಲೂ ನನ್ನ ಅಪ್ಪ ನನ್ನ ಬಲು ಮುದ್ದಿನಿಂದ ಸಾಕಿದ್ದರು. ಕಷ್ಟವೇನೆಂದೇ ತಿಳಿಯದ ನನಗೆ, ಇಂಥ ಯಾತನೆಯನ್ನು ಅನುಭವಿಸಬೇಕೆಂದು ಅದೇಕೆ ಆ ದೇವನು ಬರೆದನೋ??

ಆ ನೀಚ ರಾಕ್ಷಸನನ್ನು ಸಂಹರಿಸಿದ ನನ್ನವನನ್ನು ಲೋಕ ಹೊಗಳಿ ಕೊಂಡಾಡಿತು. ಅವನ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ ಜನರೇ, ನಿಮಗೆ ನನ್ನ ಕಷ್ಟ ಕಾಣಲಿಲ್ಲವೇ? ಅವನಿಲ್ಲದ ಅದೆಷ್ಟೋ ಹಗಲಿರುಳುಗಳಲ್ಲಿ ಆ ದುಷ್ಟನ ಹಿಂಸೆಯನ್ನು ಸಹಿಸಿದ ನನ್ನನ್ನು, ನೀವ್ಯಾರೂ ಏಕೆ ಒಂದು ಮಾತೂ ಕೇಳದೆ ನನ್ನ ಚಾರಿತ್ರ್ಯ ನಿರ್ಧರಿಸಿದಿರಿ? ಈ ದಿನಕ್ಕಾಗಿಯೇ ನಾನಂದು ಆ ರಾಕ್ಷಸನ ಮಾತು ಕೇಳಲಿಲ್ಲವೇ? ಅವನ ಮಾತನ್ನು ನಾನು ಅಂದು ಕೇಳಿದ್ದರೆ ನಾನು ಅವನ ರಾಣಿಯಾಗಿರಬಹುದಿತ್ತಲ್ಲವೇ? ಆದರೆ ನಾನು… ಆ ರೀತಿಯಾದ ಯಾವ ಯೋಚನೆಯೂ ಇಲ್ಲದೇ, ಕಾಯ ವಾಚ ಮನಸಾ ನನ್ನವನನ್ನೇ ನೆನೆದು, ಅವನ ಮೇಲೆಯೇ ಪ್ರೀತಿಯಿರಿಸಿ, ಅವನು ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದಿದ್ದೆ. ನನ್ನ ನಿಷ್ಠೆಗೆ ಬೆಲೆಯೇ ಇಲ್ಲದಂತಾಯಿತು…

ಯಾರೋ ಏನೆಂದುಕೊಳ್ಳುತ್ತಾರೋ ಎಂದು ಹೆದರಿ ಅಗ್ನಿಪರೀಕ್ಷೆ ಕೊಡು ಎಂದ. ಇನ್ಯಾರೋ ಏನೋ ಎಂದರು ಎಂದು ನನ್ನ ಕಾಡಿಗೆ ಅಟ್ಟಿದ. ಹಾಗಾದರೆ ಅವನಿಗೆ ಸ್ವಂತ ಆಲೋಚನೆಯೇ ಇಲ್ಲವೇ…? ತನ್ನ ಪ್ರೀತಿಯಾದ ನನ್ನ ಮೇಲೆ ಅನುಮಾನ ಪಡಲು ಅವನಿಗೆ ಮನಸ್ಸಾದರೂ ಹೇಗೆ ಬಂತು? ಲೋಕದ ಮುಂದೆ ನಿಂತು ನನ್ನವಳು ಪವಿತ್ರಳೆಂದು ಸಾರಿ ಹೇಳುವ ಧೈರ್ಯವೂ ಅವನಿಗಲ್ಲವೇ? ಅಥವಾ ಆ ನಂಬಿಕೆಯೇ ಇಲ್ಲವೆ?

ಓ! ನನ್ನ ತಲೆ ಸಿಡಿಯುತ್ತಿದೆ.. ನೀನೇಕೆ ಹೇಗೆ ಮಾಡಿದೆ? ಈ ಸುಡುಬಿಸಿಲಿನಲ್ಲಿ ಎಲ್ಲಿಗೆ ಹೋಗುವುದೆಂದು ತಿಳಿಯದೆ, ದಾಹ ತಾಳಲಾರದೆ ನಾ ಬೆಂದಿರುವೆ.. ತಲೆಯಲ್ಲಿ ಸಾವಿರಾರು ಯೋಚನೆ, ಮನದಲ್ಲಿ ಮಾಸದ ಗಾಯ… ನನ್ನ ತಪ್ಪಾದರೂ ಏನೆಂದು ತಿಳಿಯದೆ ನಾನೀ ನರಕ ಯಾತನೆಯನ್ನು ಅನುಭವಿಸಲಾರೆ… ದಯವಿಟ್ಟು ಯಾರಾದರೂ ನನ್ನ ರಕ್ಷಿಸಿ… ರಕ್ಷಿಸಿ… “

“ಎದ್ದೇಳೇ … ಎದ್ದೇಳು..ಟೈಮ್ ಆಯಿತು … ಆಫೀಸ್ಗೆ ಹೋಗಲ್ವಾ?”
” ಆ..ಆ ..ಓ..ಇದೆಲ್ಲ ನನ್ನ ಕನಸ್ಸಾ …”
“ಏನು ಕನಸೇ? ಏನಾಗಿದೆ ನಿಂಗೆ…”
“ಏನಿಲ್ಲ ನಾನೀಗ ಹೊರಟೆ ಸ್ನಾನಕ್ಕೆ…”

ಅಮ್ಮ ಕರೆದ ಸದ್ದಿಗೆ ಎಚ್ಚರವಾಗಿ, ಕನಸಿನಿಂದ ವಾಸ್ತವಕ್ಕೆ ಬಂದೆ. ಕನಸೋ ನನಸೋ.. ಅಂದಿನ ಅವಳ ನೋವಂತೂ ನಿಜ.

ಯುಗ-ಯುಗಗಳಿಂದಲೂ ಕಾರಣವಿಲ್ಲದೆ ಶಿಕ್ಷೆ ಅನುಭವಿಸುತ್ತಿರುವವಳು ಅವಳು…

  • ರಮ್ಯ ವರ್ಣ

varna.kadalinedege@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!