ಅಂಕಣ

ಕಾಲೇಜು ಮುಗಿಸಿದವರ ಲಾಸ್ಟ್ ಸೆಮಿಸ್ಟರ್

ಬಣ್ಣ ಎಂಬುದು ಬಾಲ್ಯದಿಂದಲೇ ಕೌತುಕ ಹುಟ್ಟಿಸುತ್ತದೆ. ಅಂಗನವಾಡಿಯ ಕಾಲಕ್ಕೆ ಬಳಪ, ಕ್ರೆಯಾನ್ಸ್ಗಳಿಂದ ಮೂಡುವ ಬಣ್ಣ ಪದವಿಯ ಕಾಲಕ್ಕೆ ಒಂದರೊಳಗೊಂದು ಕರಗಿ ಹೊಸ ಹೊಸ ಬಣ್ಣಗಳಾಗಿ ಮೂಡುತ್ತವೆ. ಕೊನೆಯ ಸೆಮಿಸ್ಟರಿನ ಹೊತ್ತಿಗೆ ಆ ಬಣ್ಣಗಳೆಲ್ಲಾ ಮುಗಿಲೆತ್ತರಕ್ಕೆ ಚಿಮ್ಮಿ ಕಾಮನ ಬಿಲ್ಲಾಗಿ ನಿಲ್ಲುತ್ತದೆ. ಆದರೆ ಮಳೆಬಿಲ್ಲಿನ ಹಾಗೆಯೇ ಲಾಸ್ಟ್ ಸೆಮಿಸ್ಟರ್ ಕೂಡ ಸವಿಯತ್ತಿದ್ದ ಹಾಗೇ ಮಾಯವಾಗಿಬಿಡುತ್ತದೆ. ಹೀಗೆ ಮಾಯವಾಗುವ ಬಣ್ಣಗಳ ಗುಚ್ಛವನ್ನು ಒಂದು ಹಾಡಿನ ವಿಡಿಯೋ ಮೂಲಕ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ ಅವಿನಾಶ್ ಬಲೆಕ್ಕಳ.

ಲಾಸ್ಟ್ ಸೆಮಿಸ್ಟರ್ ಎಂಬ ಮ್ಯೂಸಿಕ್ ವಿಡಿಯೋ ಬಗ್ಗೆ ಇಷ್ಟು ಹೇಳಿದರೆ ಅದು ಅಪೂರ್ಣ. ಕ್ಯಾಮೆರಾ ಹಿಂದೆ ವೃತ್ತಿಪರ ಬದುಕು ಕಟ್ಟಿಕೊಂಡ ನಾಲೈದು ಮಂದಿ ಹುಡುಗರು ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಸುಖಾಸುಮ್ಮನೆ ಏನಾದರೂ ಮಾಡೋಣ ಎಂದು ಹೊರಟಿದ್ದರ ಫಲವಾಗಿ ಬಂದುದು ಲಾಸ್ಟ್ ಸೆಮಿಸ್ಟರ್. ಈಗಿನ ಕಾಲದ ಮಂದಿಗೆ ಒಂದೈದು ನಿಮಿಷದಲ್ಲಿ ಓದಿ ಮುಗಿಸಬಹುದಾದ ಪದ್ಯ ಕೊಟ್ಟರೆ ಓದುವುದಿಲ್ಲ, ಪ್ರಬಂಧವಂತೂ ದೂರದ ಮಾತು. ಇವುಗಳ ಮಧ್ಯೆ ಲಾಸ್ಟ್ ಸೆಮಿಸ್ಟರಿನ ನೆನಪುಗಳನ್ನು ಒಂದು ಕ್ಷಣಕ್ಕೆ ಬಡಿದೆಬ್ಬಿಸುವ ಸಲುವಾಗಿ ನಮಗೆ ಆಪ್ತವಾದದ್ದು ಮ್ಯೂಸಿಕ್ ವಿಡಿಯೊದ ದಾರಿ ಎನ್ನುತ್ತಾರೆ ಲಾಸ್ಟ್ ಸೆಮಿಸ್ಟರ್  ನಿರ್ದೇಶಕ ಅವಿನಾಶ್ ಬಲೆಕ್ಕಳ.

ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಲೆಕ್ಕಳ ವೃತ್ತಿಯ ನಡುವೆ ವಿರಮಿಸಲೂ ಕ್ರಿಯಾತ್ಮಕ ದಾರಿಗಳನ್ನೇ ಹುಡುಕುತ್ತಾರೆ. ಈ ಹಿಂದೆ ಗೆಳೆಯರಾದ ಪ್ರಖ್ಯಾತ್ ನಾರಾಯಣ್ ಮತ್ತು ಹೇಮಂತ್ ಜೋಯಿಸ್ ಜೊತೆ ಮೂರೂ ಮುಕ್ಕಾಲು ನಿಮಿಷಗಳ ತುಂತುರು ಎಂಬ ಮ್ಯೂಸಿಕ್ ವಿಡಿಯೊ ನಿರ್ಮಿಸಿದ್ದರು. ಟೈಂ ಪಾಸಿಗಾಗಿ ಮಾಡಿದ ಈ ವಿಡಿಯೋ ಅವರ ಪಾಲಿಗೆ ಅನಿರೀಕ್ಷಿತ ಕಾರಣಕ್ಕೆ ವಿಶೇಷವಾಗಿತ್ತು.

ಸಾಧಾರಣವಾಗಿ ಹವ್ಯಾಸಕ್ಕಾಗಿ ಚೆಂದದ್ದೊಂದು ವಿಡಿಯೋ ಮಾಡಿದರೆ ಚಿತ್ರರಂಗದ ಮಂದಿಯ ಕಣ್ಣಿಗೆ ಬೀಳಬೇಕು ಎಂಬ ಹಂಬಲವಿರುತ್ತದೆ. ಆದರೆ ಅವಿನಾಶ್ ಅದಾಗಲೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಕಾರಣ ಅಂದಿನ ದಿನಕ್ಕೆ ವಿಡಿಯೋ ಮಾಡಿ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೂ ಅವರನ್ನು ಗುರುತಿಸಲಾಯಿತು. ಯಾರು ಎಂಬುದು ಮಾತ್ರ ತಮಾಷೆಯ ಸಂಗತಿ.

ಅವಿನಾಶ್ ಕಲಿತದ್ದು ಇಂಜಿನಿಯರಿಂಗ್ ಆದರೂ ಸೆಳೆದದ್ದು ಚಿತ್ರದಂಗದಲ್ಲಿ ತೆರೆಯ ಹಿಂದಿನ ಕೆಲಸ. ಸುದ್ದಿ ಗೊತ್ತಾದರೆ ಮನೆಯಲ್ಲಿ ತಕರಾರು ತೆಗೆಯಬಹುದು ಎಂಬ ಕಾರಣದಿಂದ ಯಾವುದೋ ಐಟಿ ಕಂಪನಿಯ ಹೆಸರು ಹೇಳಿ ನಿಭಾಯಿಸಿದ್ದರು. ಆದರೆ ತುಂತುರು ನಂತರ ಒಂದು ಫೋನ್ ಕರೆ ಬಂತು. ಫೋನ್ ಮಾಡಿದವರು ಸುಳ್ಯದಿಂದ ಎಂದು ಹೇಳಿದ್ದು ಮಾತ್ರ ಇವರು ಕೇಳಿಸಿಕೊಂಡಿದ್ದರು, ಮತ್ತು ಅದರ ಹಿಂದಿನ ಕತೆ ಹಂಚಿಕೊಂಡಿದ್ದರು. ಆದರೆ ಫೋನ್ ಮಾಡಿದವರು ತಮ್ಮ ಊರು ಸುಳ್ಯದಿಂದ ಹೊರಡುವ ಪತ್ರಿಕೆ ಸುದ್ದಿ ಬಿಡುಗಡೆಯಿಂದ ಎಂದು ತಿಳಿದದ್ದು ಇವರಿಗೆ ಮನೆಯಿಂದ ಫೋನ್ ಬಂದ ಮೇಲೆಯೇ.

ಹೀಗೊಂದು ವಿಡಿಯೋ ಮಾಡೋಣ ಎಂದದ್ದು ಹೇಮಂತ್ ಜೋಯಿಸ್. ಅವರು ಓದಿದ್ದು ಎಂಬಿಎ. ಕಾಲೇಜಿನ ಕೊನೆಯ ಸೆಮೆಸ್ಟರಿನಲ್ಲಿದ್ದಾಗ ಒಂದು ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡಿದ್ದರು. ಅದರ ಹೆಸರು ಲಾಸ್ಟ್ ಸೆಮಿಸ್ಟರ್ . ಆದರೆ ಕಾಲೇಜು ಮುಗಿಸುವ ಹೊತ್ತಿಗೆ ಶುರುವಾದ ಬ್ಯಾಂಡಿನ ಕಾರಣ ಚಿತ್ರರಂಗ ಕೂಗಿ ಕರೆಯಿತು. ಈಗಾಗಲೇ ಒಂದೆರಡು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡದ್ದಾಗಿದೆ.

ಇತ್ತ ಪ್ರಖ್ಯಾತ್ ನಾರಾಯಣ್ ಇಂಜಿನಿಯರಿಂಗ್ ಮುಗಿಸಿ ವೃತ್ತಿಗಾಗಿ ಹೋದದ್ದು ಕ್ಯಾಮೆರಾ ಹಿಂದೆ. ಅವರೂ ಮನೆಯಲ್ಲಿ ಮೊದಮೊದಲು ಅದೂ ಇದೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾಗ ಥ್ರೀ ಇಡಿಯೆಟ್ಸ್ನ ಒಬ್ಬ ಇಡಿಯೆಟ್ನಂತೆ ಭಾಸವಾಗುತ್ತಿತ್ತಂತೆ. ಆದರೆ ಕಾರ್ಪೋರೇಟ್ ಫಿಲ್ಮ್, ಆ್ಯಡ್ ಫಿಲ್ಮ್ ಜಗತ್ತಿಗೆ ಕೈ ಹಾಕಿದ್ದ ಪ್ರಖ್ಯಾತ್ ವೃತ್ತಿ ಹಿನ್ನೆಲೆಯಲ್ಲಿ ನೋಡಿದರೆ ಒಂದು ಹಂತ ತಲುಪಿದ್ದರು. ಮತ್ತೊಂದೆಡೆ ಹಾಡುಗಾರ ಚೇತನ್ ಈಗಾಗಲೇ ಕನ್ನಡ ಹಾಗೂ ತುಳು ಸೇರಿ 35-40 ಸಿನಿಮಾಗಳಲ್ಲಿ ಹಾಡಿದ್ದಾರೆ.

ವೃತ್ತಿಪರವಾಗಿ ನೋಡಿದರೆ ಇಂಥದ್ದೊಂದು ಪ್ರಾಜೆಕ್ಟ್ ಯಾರ ಪಾಲಿಗೂ ಅನಿವಾರ್ಯವಾಗಿರಲಿಲ್ಲ. ಹಾಗಾಗಿ ವಿನಾ ಕಾರಣ ಯಾಕೊಂದು ವಿಡಿಯೋವನ್ನು ಪ್ರಯಾಸಪಟ್ಟು ಮಾಡಿದಿರಿ ಎಂದು ಹೇಮಂತ್ಗೆ ಕೇಳಿದರೆ ಅವರ ಉತ್ತರ ವಿಶೇಷವಾಗಿತ್ತು.

ನನಗೆ ಲೈವ್ ಪರ್ಫಾಮೆನ್ಸ್ ಹೆಚ್ಚು ಖುಷಿ ಕೊಡುವುದು. ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಬೇಕಾದರೆ ಅಲ್ಲಿ ನನಗೆ ಅನಿಸಿದ ಹಾಗೆಲ್ಲಾ ಮಾಡಲಾಗುವುದಿಲ್ಲ. ಸಾಕಷ್ಟು ಮಿತಿಗಳ ನಡುವೆ ಕೆಲಸ ಮಾಡಬೇಕು. ಆದರೆ ಅಂಥ ಮಿತಿಗಳೇ ಇಲ್ಲದೆ ಮಾಡುವ ಅವಕಾಶ ಕೊಡುವುದು ಇಂಥ ಸ್ವತಂತ್ರ ವಿಡಿಯೋಗಳು. ಇದು ನನಗೆ ವಿನಾ ಕಾರಣ ಸಂತಸ ಕೊಡುತ್ತದೆ. ನಾನು ಎಂಬಿಎ ಕಲಿತಿದ್ದೇನೆ ಎಂಬ ಕಾರಣದಿಂದಲೋ ಏನೋ, ಇದರಿಂದ ಎಷ್ಟು ದುಡ್ಡು ಬರುತ್ತದೆ ಎಂದು ಕೇಳುವವರಿದ್ದಾರೆ. ಸತ್ಯ ಹೇಳುವುದಾದರೆ ದುಡ್ಡಿಗಾಗಿ ಇಂಥದ್ದು ಮಾಡಿ ಗುಣವಿಲ್ಲ. ಯೂಟ್ಯೂಬ್ನಲ್ಲಿ ಒಂದು ಹತ್ತು ಲಕ್ಷ ಮಂದಿ ನೋಡಿದರೆ ನಮಗೆಲ್ಲೋ ಸುಮಾರು ಒಂದು ಒಂದೂವರೆ ಸಾವಿರ ರೂಪಾಯಿಯಷ್ಟು ಜಾಹೀರಾತು ಆದಾಯ ಬರಬಹುದು.
ಆದಾಯವನ್ನೇ ಗುರಿಯಿಟ್ಟರೆ ಇದಲ್ಲ, ಯೂಟ್ಯೂಬನ್ನೇ ಬಳಸಿ ಹಲವು ದಾರಿಗಳಿವೆ ಎಂಬುದು ಲಾಸ್ಟ್ ಸೆಮಿಸ್ಟರಿನ ನಿರ್ಮಾಪಕ ಎಂದೂ ಹೇಳಬಹುದಾದ ಹೇಮಂತ್ ಜೋಯಿಸ್ ಆಡುವ ಮಾತು.

ಅವರ ಪಾಲಿಗೆ ಈ ವಿಡಿಯೋವನ್ನು ಈಗಲ್ಲ, ಹತ್ತು ವರ್ಷಗಳ ನಂತರ ನೋಡುವವರಿಗೆ ಹೇಗನ್ನಿಸಬಹುದು. ಅಷ್ಟು ಕಾಲದ ನಂತರ ನೋಡಿದಾಗ ತನಗೇ ಹೇಗನ್ನಿಸಬಹುದು ಎಂಬ ಕುತೂಹಲಗಳೇ ಜಾಸ್ತಿ. ಇಂಥ ಕುತೂಹಲಗಳ ದುಡ್ಡಿಗೆ ಬಗ್ಗುವಂಥವಲ್ಲ. ಹಾಗಂತ ನನ್ನಲ್ಲಿ ದಂಡಿಯಾಗಿ ದುಡ್ಡೇನೂ ಇಲ್ಲ. ಲಾಸ್ಟ್ ಸೆಮಿಸ್ಟರ್  ಮಾಡಲು ಜೇಬಲ್ಲಿದ್ದ ಹಣದ ಜೊತೆ ಮನೆಯಿಂದಲೂ ಕೇಳಿ ತರಬೇಕಾಯಿತು ಎಂದು ನಗುತ್ತಾರೆ ಹೇಮಂತ್.

ಹೀಗೇ ಮಾತಾಡ್ತಾ ಇದ್ದಾಗ ಜೋಯಿಸ್ ಊರಿನವರೇ ಆದ ಕೊಪ್ಪದ ಪ್ರತಾಪ್ ಸಿಆರ್ ಒಂದು ಹಾಡು ಬರೆದು ಕೊಟ್ಟರು. ಈಗಿನ ಹುಡುಗರಿಗೆ ಖುಷಿ ಆಗುಬಹುದು ಅನಿಸಿತು. ಹಾಗಾಗಿ ಹಾಡು ರೆಕಾರ್ಟ್ ಮಾಡಿಕೊಂಡು ಶೂಟ್ ಮಾಡುವ ಯೋಜನೆ ಹಾಕಿಕೊಂಡಾಗ ಕಂಡದ್ದು ಪುತ್ತೂರಿನ ಫಿಲೊಮಿನಾ ಕಾಲೇಜು. ಶಿಕ್ಷಣ ಸಂಸ್ಥೆಗಳೆಲ್ಲ ಇಂಟರ್ನ್ಯಾಶನಲ್ ಎಂಬ ಹೆಸರು ಹೊತ್ತು ಕಾಂಕ್ರೀಟು ಮತ್ತು ಗಾಜಿನ ಕಟ್ಟಡಗಳಾಗಿ ಖಾಸಗಿ ಕಂಪನಿಗಳಂತೆ ಕಾಣುತ್ತಿರುವ ಈ ದಿನಗಳಲ್ಲಿ ಫಿಲೊಮಿನಾ ಕಾಲೇಜು ಹಲವು ಕಾರಣಗಳಿಗೆ ಛಾಯಾಗ್ರಾಹಕ ಪ್ರಖ್ಯಾತ್ಗೆ ಇಷ್ಟವಾಯಿತು. ಫಿಲೊಮಿನಾದ ಹಾಸ್ಟೆಲ್, ಅದಕ್ಕೊಂದು ಹಂಚಿನ ಛಾವಣಿ, ಮರದ ಫ್ರೇಮಿನ ಕಿಟಕಿಗಳು – ಇವುಗಳ ಮೇಲೆ ಬೆಳಕು ಬಿಟ್ಟರೆ ಸಾಕು, ಅದೇ ಒಂದು ಅದ್ಭುತ್ ಫ್ರೇಮ್ ಆಗುತ್ತದೆ ಎಂದು ಪ್ರಖ್ಯಾತ್ ಅನಿಸಿಕೆ. ಹಾಗಾಗಿ ಫಿಲೊಮಿನಾ ಕಾಲೇಜಿನಲ್ಲಿ ಶೂಟ್ ಮಾಡಲು ಅನುಮತಿ ಕೇಳಿ ಪಡೆದರು.

ತೆರೆಯ ಮೇಲೆ ಹೊಸಬರಿಗಿಂತ ಈಗಾಗಲೇ ಟಿವಿ ಪರದೆಯಲ್ಲಿ ನೋಡಿ ಜನಕ್ಕೆ ಪರಿಚಯ ಇರುವ ಮುಖವಾದರೆ ಒಳ್ಳೆಯದು ಅನ್ನಿಸಿ ಧಾರಾವಾಹಿ, ಕಿರುಚಿತ್ರಗಳ ನಟ ರಾಕೇಶ್ ಮಯ್ಯರನ್ನು ಕೇಳಿದರು. ಪುತ್ತೂರಿನವರಾದ ರಾಕೇಶ್ ಮಯ್ಯ ಸೈ ಎನ್ನಲು ಕಾರಣ ಪುತ್ತೂರು ಮತ್ತು ಅಲ್ಲೇ ಹೈಸ್ಕೂಲಿನಲ್ಲಿ ಸ್ಕೂಲ್ ಮೇಟ್ ಆಗಿದ್ದ ಪ್ರಖ್ಯಾತ್. ಇವರ ಜೊತೆಗೆ ನಟಿಸಿದ ಮತ್ತೊಬ್ಬ ನಟ ಶಿವರಾಜ್ ಈಗಾಗಲೇ ಕೆಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದುಲೇಖ ಕೇಶತೈಲಕ್ಕೆ ಆ್ಯಡ್ ಫಿಲ್ಮ್ ಮಾಡುವ ಕಾಲಕ್ಕೆ ಪ್ರಖ್ಯಾತ್ಗೆ ಪರಿಚಿತ. ಇಲ್ಲಿ ಬಂದು ನಟಿಸಿ ಹೋಗಲು ಕಾರಣವಾದದ್ದು ಕನ್ನಡದಲ್ಲಿ ಹ್ಯಾಗೆ ಕೆಲಸಗಳಾಗುತ್ತವೆ ಎಂದು ತಿಳಿಯುವ ಕುತೂಹಲ ಮಾತ್ರ.

ಹಾಗಾದರೆ ಮುಂದೇನು ಮಾಡ್ತೀರಿ ಎಂದು ಕೇಳಿದರೆ ಇಡೀ ತಂಡ ಹೇಳುವುದು ಸದ್ಯವೇ ಮತ್ತೊಂದು ವಿಡಿಯೋ ಮಾಡಬೇಕು ಅಂದುಕೊಂಡಿದ್ದೇವೆ. ಆದರೆ ಎಲ್ಲರ ವೃತ್ತಿ ಬದುಕಿನ ನಡುವೆ ಸಮಯ ಮಾಡಿಕೊಳ್ಳುವುದು ಸವಾಲಾಗಿದೆ ಎಂದು.

ಈ ನಡುವೆ ಲಾಸ್ಟ್ ಸೆಮಿಸ್ಟರ್  ಭಾಗ ಎರಡನ್ನು ಕ್ರೌಡ್ ಫಂಡಿಂಗ್ ಮೂಲಕ ಮಾಡುವ ಯೋಚನೆಗಳೂ ಬರುತ್ತಿವೆಯಂತೆ. ಆದರೆ ಕಾಸು ಮಾಡುವ ಇರಾದೆ ಇಲ್ಲದೆ ಯಾರು ದುಡ್ಡು ಹಾಕ್ತಾರೆ ಎಂದು ಕೇಳಿದರೆ “ನಾವಿದೀವಲ್ಲ, ಹಾಗೇ ಯಾರಾದ್ರೂ ಇರ್ತಾರೆ ಎಂಬ ನಂಬಿಕೆ” ಎಂದು ನಗುತ್ತಾರೆ ಜೋಯಿಸರು. ಜೋಯಿಸರೇ ಹೇಳಿದ ಮೇಲೆ ಮರುಪ್ರಶ್ನೆ ಮಾಡುವುದು ಸಾಧ್ಯವೇ? ನಿಮಗೇನನ್ನಿಸುತ್ತದೆ? ಇನ್ನೂ ವಿಡಿಯೋ ನೋಡಿಲ್ಲವಾದರೆ ಒಂದೈದು ನಿಮಿಷ ಕಾಲೇಜಿಗೆ ಹೋಗಿ ಬನ್ನಿ. ಕೂತಲ್ಲೇ, ಈ ಲಿಂಕ್ ಮೂಲಕ 

 

Anitha Banari

banari.anitha@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!